Home > ವ್ಯಕ್ತಿ - ಜೀವನ > ಕಾರಂತರ ವಿಜ್ಞಾನ ಪ್ರೀತಿ

ಕಾರಂತರ ವಿಜ್ಞಾನ ಪ್ರೀತಿ

ಕನ್ನಡದ ಧೀಮಂತ ಶಿವರಾಮ ಕಾರಂತಶಿವರಾಮಕಾರಂತರು ಕನ್ನಡದ ಶ್ರೇಷ್ಟ ಕಾದಂಬರಿಕಾರರಾಗಿ ಸುಪ್ರಸಿದ್ದರು. ಚೋಮನ ದುಡಿಯಿಂದ ತೊಡಗಿ ಮೂಕಜ್ಜಿಯ ಕನಸುಗಳ ತನಕ ಅವರು ಬರೆದ ಕಾದಂಬರಿಗಳು ಕನ್ನಡ ಮನಸ್ಸನ್ನು ತಟ್ಟಿದ ಬಗೆ ಅನನ್ಯವಾದದ್ದು. ಆದರೆ ಆಶ್ಚರ್ಯವಾಗಬಹುದು ಅವರ ಪ್ರಥಮ ಆಸಕ್ತಿ ಇದ್ದುದು ವೈಚಾರಿಕ ಬರಹಗಳಲ್ಲಿ ಅದರಲ್ಲೂ ವಿಜ್ಞಾನ ಸಾಹಿತ್ಯದಲ್ಲಿ.

ಕಾಲೇಜು ಮೆಟ್ಟಲೇರಿ, ವಿಶ್ವವಿದ್ಯಾಲಯದ ಅಂಗಣದಲ್ಲಿ ವಿಜ್ಞಾನದ ಕ್ರಮಬದ್ಧ ಶಿಕ್ಷಣಪಡೆಯದೇ ಹೋದರೂ ಬೆರಗಾಗುವಷ್ಟು ವಿಪುಲವಾಗಿ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕಾರಂತರು ರಚಿಸಿದರು. ಮೂರು ಸಂಪುಟಗಳ ಬಾಲಪ್ರಪಂಚ” (೧೯೩೬) ಮತ್ತು ನಾಲ್ಕು ಸಂಪುಟಗಳ ವಿಜ್ಞಾನ ಪ್ರಪಂಚ” (೧೯೫೯) ವಿಜ್ಞಾನದ ಬಗ್ಗೆ ಕಾರಂತರ ತೀವ್ರ ವಿಜ್ಞಾನ ಆಸ್ಥೆಗೆ ಸಾಕ್ಷಿಯಾಗಿವೆ. ಸುಮಾರು ಮೂರು ಸಾವಿರ ಪುಟಗಳಿಗೆ ವಿಸ್ತರಿಸಿಕೊಂಡಿರುವ ಈ ಸಂಪುಟಗಳು ಒಂದು ವಿಶ್ವವಿದ್ಯಾಲಯದ ಹಲವು ಪ್ರಾದ್ಯಾಪಕ ಮಹೋದಯರು ಸೇರಿ ಮಾಡಬಹುದಾದ ಮಹೋನ್ನತ ಕಾರ್ಯ. ಆದರೆ ನಾವು ಗಮನಿಸಬೇಕಾದದ್ದು ಶಿವರಾಮ ಕಾರಂತರು ಇವೆಲ್ಲವನ್ನು ಏಕಾಂಗಿಯಾಗಿ ಮಾಡಿದರು. ಇವಷ್ಟೇ ಅಲ್ಲ, ಮತ್ತೂ ಹಲವು ವಿಜ್ಞಾನ ಪುಸ್ತಕ ಮತ್ತು ಲೇಖನಗಳನ್ನು ಬರೆದರು.

ನಾವು ಯಾತಕ್ಕೆ ಒಂದು ಲೇಖನ ಅಥವಾ ಪುಸ್ತಕ ಬರೆಯುತ್ತೇವೆ ? ತನಗೆ ಅರಿವಾದ ಕಾಣ್ಕೆಯನ್ನು ಇತರರಿಗೆ ತಿಳಿಸಬೇಕೆಂಬ ಮನದಾಳದ ತುಡಿತ ಬರೆವಣಿಗೆಗೆ ಪ್ರೇರಣೆ ನೀಡುತ್ತದೆ. ” ಮನದಾಳದ ಹೊಯ್ದಾಟವೇ ಲೇಖನಿಗೆ ಶಾಯಿ“. ಇಂಥ ತುಡಿತ ಇದ್ದಾಗ ಮಾತ್ರ ಅಲ್ಲಿ ನಿಜವಾದ ಸಾಹಿತ್ಯ ಅರಳುತ್ತದೆ. ಶಿವರಾಮ ಕಾರಂತರಿಗೆ ಅವರ ಬಾಳ ಸಂಜೆಯ ತನಕವೂ ಇಂಥ ತುಡಿತವಿತ್ತು. ಹೊಸದನ್ನು ಅರಿಯಬೇಕೆಂಬ ಹಂಬಲವಿತ್ತು. ಹಾಗಾಗಿಯೇ ಅವರು ಬರೆಯುತ್ತ ಹೋದರು. ಬರೆಯುತ್ತ ಬೆಳೆದರು.

ಬದುಕು ಮತ್ತು ನಾನುಎಂಬ ಲೇಖನದಲ್ಲಿ ಕಾರಂತರು ಬರೆಯುತ್ತಾರೆ

ವ್ಯಕ್ತಿ ತಾನು ಹುಟ್ಟಿದ ಬಳಿಕ ಜೀವಿಸುತ್ತಿರುವ ಪರಿಸರದಲ್ಲಿ ಬೆಳೆಯುತ್ತಿರುತ್ತಾನೆ. ಹಾಗೆಂದರೆ, ಅವನ ದೇಹ ಬಲಿಯುವುದಿಲ್ಲ, ಬುದ್ದಿಯೂ ಬಲಿಯುತ್ತದೆ. ಅದು ಯಾವ ರೀತಿಯಿಂದ ಬಲಿಯುತ್ತದೆ? ಆ ಬಲಿಯುವಿಕೆಗೆ ಏನೆಲ್ಲ ಪೋಷಕವಾಗುತ್ತದೆ ಎಂಬುದನ್ನು ನಾವು ಯೋಚಿಸಿದೆವಾದರೆ, ನಮ್ಮ ಬದುಕೇ ಒಂದು ಅತ್ಯದ್ಭುತ ವಿದ್ಯಮಾನವಾಗಿ, ನಮ್ಮ ಕಣ್ಣಿಗೆ ಗೋಚರಿಸೀತು. ಅದರ ಅದ್ಭುತ ರಮಣೀಯತೆ ಇಲ್ಲವೇ, ಅದ್ಭುತ ಗಂಭೀರ ರೂಪವನ್ನು ಕುರಿತು ತಿಳಿಯಬೇಕಾದರೆ ನಾವು ಅದನ್ನು ಕುರಿತು ಈಗಾಗಲೇ ಕಟ್ಟಿಕೊಂಡು ಬಂದ, ಎಂದರೆ ಕಣ್ಮುಚ್ಚಿ ನಂಬಿಕೊಂಡು ಬಂದ ತೀರ್ಮಾನಗಳನ್ನು ಮರೆತು ನೋಡಬೇಕು ಆಗ ಮಾತ್ರ, ಅದರ ರಹಸ್ಯ ಹೊಳೆದೀತು. ಹೀಗೇಕೆ ಅನ್ನುತ್ತೇನೆ ಎಂದರೆ ಬದುಕನ್ನು ಕುರಿತು ನಮ್ಮ ಸಮಾಜದಲ್ಲಿ ಪರಂಪರೆಯಿಂದ ನಾವು ನಂಬಿ ಬಂದ ಕೆಲವೊಂದು ಭಾವನೆಗಳಿಂದಾಗಿ ಬದುಕಿನ ನಿರ್ದಿಷ್ಟ ವಿಮರ್ಶೆಗೆ ತೊಡಕು ಬರುತ್ತದೆ ಎಂಬುದರಿಂದ. ” ಮನುಷ್ಯ ಹುಟ್ಟಿದ್ದೇ ಇದಕ್ಕೆ , ಇಂಥದೇ ತಾವಿನಲ್ಲಿ; ಇಂಥ ಯುಗದಲ್ಲಿ, ಅದು ಹುಟ್ಟಿದ ಉದ್ದೇಶ ಇಂಥದೇಅನ್ನುವ ತೀರ್ಮಾನಗಳನ್ನು ನಾವು ಒಪ್ಪಿ ಬಂದೆವೆಂದಾದರೆ ಅಂಥ ಬದುಕಿನಲ್ಲಿ ನಾವು ಹುಡುಕಬೇಕಾದ ಯಾವ ರಹಸ್ಯ ಉಳಿದಿರುವುದಿಲ್ಲ. ನಮ್ಮ ಸಮಾಜವೋ, ಹಿರಿಯರೋ, ಒಪ್ಪಿ ಬಂದ ನಿಶ್ಚಿತ ರೂಪದ ತೀರ್ಮಾನಗಳಿಗೆ ನಮ್ಮ ಋಜು ಹಾಕಿದರಾಯಿತು. ಅಷ್ಟನ್ನು ಮಾಡಿ ನಮ್ಮ ಕಾಲ ಮುಗಿದೊಡನೆ ಇಲ್ಲಿಂದೆದ್ದು ಹೊರಟರಾಯಿತು. ಅದರ ಬದಲು ನಮ್ಮ ಬದುಕನ್ನು ಕುತೂಹಲದಿಂದ ಇಣುಕಿ ನೋಡಬಲ್ಲ ದೃಷ್ಟ್ಟಿಯನ್ನೋ, ಬದುಕಿನ ಘಟನೆಗಳಿಗೆ ಸ್ಪಂದಿಸಬಲ್ಲ ಸಂವೇದನೆಗಳನ್ನೋ ಪ್ರಕಟಿಸಿ, ಅವು ಹೇಗಾದುವು ಎಂದು ಚಿಂತಿಸಬಲ್ಲೆವಾದರೆ ಬುದ್ಧಿ ಜೀವಿಗಳಾದ ನಮಗೆ ಬದುಕಿನಲ್ಲಿ ಹೆಜ್ಜೆ ಹೆಜ್ಜೆಗೂ ಆಶ್ಚರ್ಯಕರ ಪ್ರಶ್ನೆಗಳು ಹೊಳೆದಾವು

ಇದು ಕಾರಂತರ ವೈಜ್ಞಾನಿಕ ಪ್ರಜ್ಞೆ ಮತ್ತು ಜೀವನ ದೃಷ್ಟಿ. ಯಾವುದೇ ಘಟನೆ ಅಥವಾ ವಿದ್ಯಮಾನವನ್ನು ಅವರು ಗಮನಿಸುತ್ತಿದ್ದುದು ಸಂಶೋಧಕನ ಚಿಕಿತ್ಸಕ ದೃಷ್ಟಿಯಿಂದ. ಆ ಕಾರಣದಿಂದಲೇ ಅವರು ಸದಾ ಪ್ರವಾಸದಲ್ಲಿರುತ್ತಿದ್ದರು; ಉಪನ್ಯಾಸ ಮತ್ತು ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಬಗೆಯ ಜೀವನೋತ್ಸಾಹ ಅವರ ಸಾಹಿತ್ಯಕ್ಕೆ ಪ್ರೇರಣೆಯಾಗಿತ್ತು

ಇತಿಹಾಸಕ್ಕೆ ಜಿಗಿದ ಮನೆಯ ಬಾವಿ

ತಿಳುವಳಿಕೆಗೂ ನಮಗೂ ಇರುವ ದೂರ ಎನ್ನುವ ಲೇಖನದಲ್ಲಿ ದಕ್ಷಿಣ ಕನ್ನಡದ ತಾನಿರುವ ನೆಲದ ಪ್ರಾಗೈತಿಕ ಇತಿಹಾಸವನ್ನು ವಿವರಿಸುವ ಪ್ರಯತ್ನ ಮಾಡುವ ಕಾರಂತರು ತಮ್ಮ ಲೇಖನಕ್ಕೆ ಹೇಗೆ ಸ್ಫೂರ್ತಿ ಒದಗಿತೆಂದು ವಿವರಿಸುತ್ತಾರೆ ( ಶಿವರಾಮಕಾರಂತರ ಲೇಖನಗಳು , ಸಂಪುಟ ೫, ವೈಚಾರಿಕ ಬಿಡಿ ಬರಹಗಳು, ಸಂಪಾದಕಿ : ಬಿ.ಮಾಲಿನಿ ಮಲ್ಯ, ೪೩೭೪೫೩). ಅದೊಂದು ದಿನ. ಕಾರಂತರು ಅವರ ಮನೆಯ ಬಾವಿಯೊಂದರ ಕೆಸರು ತೆಗೆಸುತ್ತಿದ್ದರು. ಆ ಕೆಸರಿನಲ್ಲಿ ಕಾಂಡಲು ಮರ, ಮತ್ತಿತರ ಗಿಡಗಳು ಸುಟ್ಟು ಉಂಟಾದ ಮಸಿಯ ಕರಿಕಲು ತುಂಡುಗಳು ಸಿಕ್ಕಿದುವಂತೆ.

ಆ ಸಿಕ್ಕ ತುಂಡುಗಳನ್ನು ಎಲ್ಲರೂ ಮಾಡುವಂತೆ ಕಸದ ತೊಟ್ಟಿಗೆ ಕಾರಂತರು ಎಸೆಯಲಿಲ್ಲ. ಬದಲಾಗಿ ಟಾಟಾ ಸಂಶೋಧನಾಲಯಕ್ಕೆ ಕಳುಹಿಸುತ್ತಾರೆ ಆ ತುಂಡುಗಳು ಎಷ್ಟು ವರ್ಷಗಳ ಹಿಂದಿನವು ಎಂಬ ಬಗ್ಗೆ ಇವರಿಗೆ ಕುತೂಹಲ!. ರೇಡಿಯೋ ಐಸೊಟೋಪ್ ಪರೀಕ್ಷೆಯಿಂದ ಆ ಮಸಿಗೆಂಡಗಳು ಹೆಚ್ಚುಕಡಿಮೆ ೪೫,೦೦೦ ವರ್ಷಗಳ ಹಿಂದಿನವು ಎಂದು ತಿಳಿದು ಬಂತು. ಅಂದರೆ ಕಾರಂತರ ಬಾವಿ ಪ್ರಾಚೀನ ಕಾಲಕ್ಕೆ ಸಂದು ಹೋಯಿತು. ಅಷ್ಟು ವರ್ಷಗಳ ಹಿಂದೆ ಅಲ್ಲೇನು ಇದ್ದಿರಬಹುದು ಮತ್ತು ಕಾಲಾಂತರದಲ್ಲಿ ಅವೆಲ್ಲ ಹೇಗೆ ಬದಲಾವಣೆ ಹೊಂದುತ್ತ ಸಾಗಿದುವು ಎಂಬ ಕಲ್ಪನೆಯನ್ನು ಕಾರಂತರು ಮಾಡುತ್ತಾರೆ ಬೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ. ಪ್ರಾಚೀನ ಕಾಲದಲ್ಲಿ ಅಲ್ಲಿ ನದಿ ಹರಿಯುತ್ತಿದ್ದಿರಬಹುದೆಂದು ಊಹಿಸುತ್ತಾರೆ. ಲೇಖನದ ಕೊನೆಯಲ್ಲಿ ಕಾರಂತರು ಬರೆಯುತ್ತಾರೆ

ನಾನು ಜಗತ್ತಿನ ಜೀವ ಕೋಟಿಯ ಒಂದು ಅಂಶ, ಕಾಲಪ್ರವಾಹದ ಒಂದು ಬಿಂದುಎಂದು ತಿಳಿದುಕೊಂಡಾಗ ನಮ್ಮ ಬದುಕಿಗೆ ಎಟಕುವ ಸ್ವಾರಸ್ಯ ಅಪಾರ. ಲೋಕವೆಲ್ಲ ನನಗಾಗ್ಯೇ ಇದೆ ಎಂದು ತಿಳಿದುಕೊಂಡಾಗ ಮಾತ್ರ ನಮ್ಮೆಲ್ಲ ಪ್ರಶ್ನೆಗಳು ಸರಳವೆನಿಸಿ ಕೇವಲ ಸ್ವಾರ್ಥದ ನೋಟವೊಂದೇ ಪ್ರಾಧಾನ್ಯ ಗಳಿಸುತ್ತದೆ. ಉಳಿದ ಯಾವತ್ತು ಜೀವಿಗಳ ಬದುಕು ಕ್ಷುದ್ರವೋ, ನಗಣ್ಯವೋ ಅನಿಸುತ್ತದೆ

ವಿಜ್ಞಾನದ ಬಗ್ಗೆ ಕಾರಂತರಿಗೆ ಖಚಿತ ನಿಲುವಿತ್ತು; ಸ್ಪಷ್ಟ ಕಲ್ಪನೆಯಿತ್ತು. “ವಿಜ್ಞಾನ ಮತ್ತು ಅಂಧಶೃದ್ದೆಎಂಬ ಪುಸ್ತಕದಲ್ಲಿ ಕಾರಂತರು ಬರೆಯುತ್ತಾರೆ

ವಿಜ್ಞಾನ ಯಾವುದಾದರೊಂದು ಸಂಗತಿಯನ್ನು ಕಣ್ಮುಚ್ಚಿ ನಂಬುವುದಿಲ್ಲ. ಅದು ತನಗೆ ತಿಳಿಯದ್ದನ್ನು ತಿಳಿಯದು ಎಂದು ಹೇಳುತ್ತದೆ. ತಿಳಿದುದಕ್ಕೆ ಕಾರಣಗಳನ್ನು ಒದಗಿಸುತ್ತದೆ. ಪ್ರಯೋಗಗಳ ಮೂಲಕ ಆ ಕಾರಣಗಳ ಸ್ವರೂಪವನ್ನು ನಿಷ್ಕರ್ಷಿಸುತ್ತದೆ. ಆ ಮೂಲಕ ಅದು ಬಾಳ್ವೆಗೆ ಬೇಕಾದ ತಿಳಿವನ್ನೂ, ಧೈರ್ಯವನ್ನೂ, ಸೂಕ್ಷ್ಮ ದೃಷ್ಟಿಯನ್ನೂ ಒದಗಿಸಿ ಮಾರ್ಗದರ್ಶನ ಮಾಡುತ್ತದೆ. ನಮ್ಮ ಮುಂದಿರುವ ಸಮಸ್ಯೆ ಎಂದರೆ ನಾವು ಬಾಳಬೇಕಾದ ರೀತಿ ಯಾವುದು ಎಂದು ಯೋಚಿಸಿ, ಅದಕ್ಕೆ ಏನು ದಾರಿ ಅಥವಾ ಪರಿಹಾರ ಎಂದು ಕಂಡು ಹಿಡಿಯುವುದು. ಆ ಕೆಲಸದಲ್ಲಿ ನಮ್ಮ ಪೂರ್ವೀಕರು ಸಂಗ್ರಹಿಸಿಟ್ಟ ಜ್ಞಾನದ, ವಿಜ್ಞಾನದ ಪ್ರಯೋಜನ ವನ್ನು ಪಡೆಯುವುದು; ಪ್ರಯೋಗ ಮಾಡಿ ನೋಡುವುದು. ಈ ಬಗೆಯಿಂದ ನಮ್ಮ ಕೈಗೆ ಬಂದಿರುವ ತಿಳಿವನ್ನು ಮೂದಲಿಸಿ, ಕೇವಲ ಅಂತೆಕಂತೆಗಳ ಮೇಲೆ ಬೆಳೆಯಿಸಿದ ನಂಬಿಕೆಯ ಕಂತೆಗಳನ್ನು ನೆಚ್ಚಿ ದಾರಿ ಸಾಗುವ ರೀತಿ ಅದಲ್ಲವೇ ಅಲ್ಲ. ನಮಗೆ ನಿಜಕ್ಕೂ ತಿಳಿಯದ್ದನ್ನು ತಿಳಿಯದುಎಂದು ಹೇಳಲು ಕಲಿಯೋಣ; ಬರಿಯ ಅಂತೆ ಕಂತೆಗಳನ್ನು ನಂಬಿ ನಾವು ಬುದ್ಧಿವಂತರೆಂದು ತೋರಿಸಿಕೊಳ್ಳುವ ಸೋಗನ್ನು ಬಿಟ್ಟುಬಿಡೋಣ

ಪ್ರಥಮ ಆಸಕ್ತಿಯ ವಿಜ್ಞಾನ

ಶಿವರಾಮ ಕಾರಂತರಿಗೆ ಕನ್ನದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣದ ಆಸಕ್ತಿ ಮೊಳೆತದ್ದಾದರೂ ಹೇಗೆ ? “ಓದಿ ಏನಾಯಿತು?” ( ಗ್ರಂಥಲೋಕದ ನೂರು ಮುಖಗಳು ವಿಷೇಷಾಂಕ, ಎಪ್ರಿಲ್, ೧೯೮೫) ಎಂಬ ಲೇಖನದಲ್ಲಿ ಕಾರಂತರು ಹೀಗೆ ಬರೆದಿದ್ದಾರೆ

ಮುಂದೆ ಕೆಲವು ವರ್ಷಗಳ ತರುವಾಯ ನನಗೆ ಹಲವಾರು ಉಪಾಧ್ಯಾಯರ ಸಂಪರ್ಕವಾಯಿತು. ಅವರ ಜ್ಞಾನ ಕೇವಲ ಕನ್ನಡ ಪಠ್ಯ ಪುಸ್ತಕಗಳಿಗೆ ಸೀಮಿತವಾದುದನ್ನು ಕಂಡೆ. ಇಂಗ್ಲೆಂಡಿನಿಂದ ಮಕ್ಕಳಿಗಾಗಿ ರಚಿತವಾಗಿ ಬರುತ್ತಿದ್ದ Book of Knowledge, Wonders of animal life, Outlines of Sciences ಇತ್ಯಾದಿ ಬ್ಱಹತ್ ಗ್ರಂಥಗಳನ್ನು ನೋದಿದಾಗ, ಅನ್ಯರಲ್ಲಿರುವ ಮಾನಸಿಕ ಸಂಪತ್ತು ನಮಗಿಲ್ಲದೇ ಹೋಯಿತೆಂದು ಅನಿಸಿತು. ಅದನ್ನು ನೀಗಿಸಲು ಹಲವಾರು ವಿಷಯಗಳನ್ನು ಕುರಿತು ಬರೆದ ಗ್ರಂಥಗಳನ್ನು ತರಿಸಿಕೊಂಡು ಓದಿ ಕನ್ನಡದಲ್ಲಿ ಬರೆಯತೊಡಗಿದೆ. ಅದರ ಫಲವೇ ಬಾಲಪ್ರಪಂಚ. ಯಾರೂ ಅದನ್ನು ಓದದೇ ಹೋದರೂ ಅದರ ನಿರ್ಮಾಣದ ಕೆಲಸಕ್ಕಾಗಿ ನಾನು ವಿವಿಧ ವಿಷಯಗಳಲ್ಲಿ ಪಡೆದ ತಿಳಿವು, ಸಂತೋಷ ಎಂದೂ ಅಳಿಯಲಾರದು.ಅಲ್ಲಿಂದ ಮುಂದೆ ಈ ಐವತ್ತು ವರ್ಷಗಳ ಅವಧಿಯಲ್ಲಿ ನನ್ನ ಪಾಲಿಗೆ ಅನ್ಯರ ಕ್ರಮ, ಅಧ್ಯಯನಗಳಿಂದ ಸುಲಭದಲ್ಲಿ ದೊರೆಯುವ ಜ್ಞಾನ ಸಂಪತ್ತು ನಾನು ಕುಳಿತಲ್ಲಿಯೇ ಗಳಿಸಬಹುದಾದ ಚಿನ್ನದ ಗಣಿ ಅನಿಸಿದೆ. ಅದು ಕೊಡುತ್ತಿರುವ ಸಂತೋಷ ಅಪಾರ; ಅದು ಪ್ರೇರಿಸುವ ಕಾರ್ಯಪ್ರವೃತ್ತಿ ಅನಿರೀಕ್ಷಿತ; ಉದ್ದಾಮ. ತೆರೆದರೆ ಮಾತ್ರ ಮಾತನಾಡುವ ಮೂಕ ಪುಸ್ತಕಗಳು ನನ್ನನ್ನು ಎಲ್ಲಿಗೆಲ್ಲ ಒಯ್ದಿವೆ, ಏನೆಲ್ಲ ಕೊಟ್ಟಿವೆ ಎಂದು ಹೇಳುವ ಕೆಲಸ ಸುಲಭವಲ್ಲ.ಈಚೆಗಿನ ಕೆಲವು ಶತಮಾನಗಳಲ್ಲಿ ಕೆಲವು ಪಾಶ್ಚಾತ್ಯ ರಾಷ್ಟ್ರಗಳು ವಿಜ್ಞಾನದ ಕ್ಷೇತ್ರಗಳಲ್ಲಿ ನಡೆಯಿಸುತ್ತಿರುವ ಸಂಶೋಧನೆ ಮತ್ತು ಸಾಧನೆಗಳನ್ನು ಕುರಿತು ವಿಜ್ಞಾನಿಗಳು ಇನ್ನೆಷ್ಟು ಕಾಲ ಇದೇ ರೀತಿ ಅನ್ವೇಷಣೆ ನಡೆಯಿಸಿದರೂ ಮುಗಿಯಿತು ಎಂದಾಗದು ಎನಿಸುತ್ತದೆ.

ಈ ತನಕ ಯಾವುದೇ ವಿಷಯದಲ್ಲಿ ಕತ್ತಲಾಗಿ ಕಾಣಿಸಿದ ತಾವು, ವಿಜ್ಞಾನ ಕೆಡವಿದ ಬೆಳಕಿನಿಂದ ಒಂದು ಜೀವಂತ ಜಗತ್ತೇ ಎಂಬಷ್ಟು ಹಿರಿದಾಗಿ, ಆಕರ್ಷಕವಾಗಿ ಕಾಣಿಸಿದಾಗ, ನನ್ನ ಮನಸ್ಸನ್ನು ಹಿಗ್ಗಿಸಿದ ಯಾವುದೇ ನಾಟಕ, ಗೀತ, ಶಿಲ್ಪಗಳು ಕೂದ ಅಷ್ಟು ಮನೋಹರವಾಗಿರಲಾರವು ಎನಿಸುತ್ತದೆ.”

ಕಾರಂತರಿಗೆ ಅಂದಿನ ದಿನಗಳಲ್ಲಿ ಆಂಗ್ಲ ಭಾಷೆಯಲ್ಲಿ ಬರುತ್ತಿದ್ದ Popular Science, Science Digest, National Geography ಮೊದಲಾದ ಜನಪ್ರಿಯ ವಿಜ್ಞಾನ ಗ್ರಂಥಗಳ ಪರಿಚಯವಿತ್ತು, ಮಾತ್ರವಲ್ಲ ಅವುಗಳನ್ನು ಎಷ್ಟೇ ದುಬಾರಿಯಾದರೂ ತರಿಸಿ ಓದುತ್ತಿದ್ದರು. ಬಾಲವನದ ಗ್ರಂಥ ಬಂಢಾರದಲ್ಲಿ ನೂರಾರು ವಿಷಯ ವಿಶ್ವಕೋಶಗಳು, ವಿಜ್ಞಾನಕ್ಕೆ ಸಂಬಂಧಿಸಿದ ಆಕರ ಗ್ರಂಥಗಳು, ಜನಪ್ರಿಯ ವಿಜ್ಞಾನ ಪುಸ್ತಕಗಳು ಇದ್ದುವಂತೆ. ಈ ಎಲ್ಲ ಪುಸ್ತಕಗಳನ್ನು ಇಂಗ್ಲೀಷ್ ಬಲ್ಲ ಕಾರಂತರು ಓದುತ್ತ ಹೋದಂತೆ ಕನ್ನಡ ಜನರಿಗೆ ಇವು ತಲುಪುತ್ತಿಲ್ಲವಲ್ಲ ಎಂಬ ನೋವು ಅವರನ್ನು ಕಾಡತೊಡಗಿತು. ಈ ನೋವು ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಗೆ ಕಾರಂತರನ್ನು ತೊಡಗಿಸಿತು.
೧೯೭೧ ರಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ವಿಜ್ಞಾನ ಪಠ್ಯ ಪುಸ್ತಕ ಬರಹಗಾರರ ಶಿಬಿರವನ್ನು ಏರ್ಪಡಿಸಿತು. ಆ ಶಿಬಿರದಲ್ಲಿ ಕಾರಂತರು ಆದರ್ಶ ಪಠ್ಯ ಪುಸ್ತಕಗಳುಎಂಬ ವಿಷಯದ ಬಗ್ಗೆ ಭಾಷಣ ಮಾಡುತ್ತ ಹೇಳಿದರು

ನಮ್ಮ ಉಪಾಧ್ಯಾಯರುಗಳಿಗೆ ಏನೂ ಪುಸ್ತಕಗಳಿಲ್ಲ ಎಂಬ ಕಾಲಕ್ಕೆ ಎರಡು ಪ್ರಯತ್ನಗಳನ್ನು ಮಾಡಬೇಕಾಯಿತು. ಒಂದು ಕಷ್ಟ ಶಬ್ದ ಬಂದರೆ ಅದರ ಅರ್ಥ ತಿಳಿಯಲು ಒಂದು ಅರ್ಥ ಕೋಶ ಬೇಕೆಂದು ಅನ್ನಿಸಿತು. ಇದು ನಾನು ಬರೆಯಬಲ್ಲೆ ಎಂದಲ್ಲ, ನನಗೆ ಅದರ ಅಭ್ಯಾಸವಾಗುತ್ತದೆಂದು. ಎರಡನೇಯದಾಗಿ ಬಾಲ ಪ್ರಪಂಚ. ಇದನ್ನು ಬರೆಯಲು ಕಾರಣ ಮಕ್ಕಳಿಗೆ ತಿಳಿಯಬಹುದಾದದ್ದನ್ನು ಹೇಳಬೇಕು ಎಂಬುದೇ. ಒಂದು ಘನ ಉದ್ದೇಶ ಇಟ್ಟುಕೊಂಡಿದ್ದೆ ನಾನು ಪರರಿಗೆ ಹೇಳಬೇಕಾದರೆ ನನಗೇ ಗೊತ್ತಿರಬೇಕಲ್ಲ; ಆದ್ದರಿಂದ ನನಗೆ ಗೊತ್ತಾಗಲೆಂದು ನಾನು ಮೊದಲು ಓದಲು ಹೊರಟೆ. ಇವತ್ತು ನಾನು ಸಾಹಿತಿ ಅಂತ ಅನ್ನಿಸಿಕೊಂಡಿದ್ದರೂ ಸಾಹಿತ್ಯ ಗ್ರಂಥಗಳನ್ನು ನಾನು ಅಭ್ಯಾಸ ಮಾಡುತ್ತ ಇಲ್ಲ. ಅಪೂರ್ವಕ್ಕೊಂದು ಓದುತ್ತ ಇದ್ದೇನೋ ಇಲ್ಲವೋ ಅದೂ ನನಗೆ ಸಂಶಯ. ಹೆಚ್ಚಿಗೆ ಇವತ್ತಿನವರೆಗೂ, ಇವತ್ತೂ ನಾನು ಓದುತ್ತ ಇರುವುದು ವಿಜ್ಞಾನದ ಪುಸ್ತಕಗಳೇ. ಇಲ್ಲಿ ವಿವಿಧ ರೀತಿಯ ಪುಸ್ತಕಗಳನ್ನು ಕಾದಂಬರಿಗಳಿಗಿಂತ ಚೆನ್ನಾಗಿ ಮೇಲಿನ ಮಟ್ಟದ ವಿಜ್ಞಾನದಲ್ಲಿಯೂ ಬರೆದಿರುವುದನ್ನು ನಾನು ನೋಡಿದ್ದೇನೆ. ನಮ್ಮಲ್ಲಿಗೆ ಬರುವಾಗ ಇದು ಎಲ್ಲ ಸತ್ತ್ವವನ್ನೂ ಕಳೆದುಕೊಂಡು ನಿರ್ಜೀವ ವಾಸ್ತವಾಂಶಗಳ ನಿರೂಪಣೆ ಆಗುವುದೇಕೆ ?ಇದನ್ನು ನಾವು ಯೋಚಿಸಬೇಕಾಗುತ್ತದೆ

ಎಲ್ಲ ಸಾಹಿತಿಗಳು ಪ್ರಾರಂಭದಲ್ಲಿ ಕಿರು ಬರಹಗಳಿಂದ ಸಾಹಿತ್ಯ ಪ್ರಪಂಚಕ್ಕೆ ಕಾಲಿರಿಸುತ್ತಾರೆ. ಕಾರಂತರು ಕೂಡ ಅಪವಾದವಲ್ಲ. ಮೊದಲಿಗೆ ವಿಜ್ಞಾನಕ್ಕೆ ಸಂಬಂದಿಸಿದ ಕಿರು ಲೇಖನಗಳೊಂದಿಗೆ ವಿಜ್ಞಾನ ಸಾಹಿತ್ಯ ಪ್ರಪಂಚಕ್ಕೆ ಅಡಿ ಇಟ್ಟವರು. ೧೯೨೮ರ ಸುಮಾರಿಗೆ ೨೮ ರ ಹರೆಯದ ಯುವಕ ಕಾರಂತರು ವಸಂತಎಂಬ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು. ಕಾರಂತರೇ ಹೇಳುವಂತೆ ಅವರ ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಪತ್ರಿಕೋದ್ಯಮವೂ ಒಂದು.

ವಸಂತ ಕಾರಂತರ ಪ್ರಪ್ರಥಮ ಪತ್ರಿಕೋದ್ಯಮ ಸಾಹಸ. ಅದರ ಸಂಪಾದಕರು ಮತ್ತು ಹೆಚ್ಚಿನ ಲೇಖನಗಳ ಲೇಖಕರು ಕಾರಂತರೇ ಆಗಿದ್ದರು. ಪತ್ರಿಕೆ ಕುಂದಾಪುರದಿಂದ ಪ್ರಕಟವಾಗುತ್ತಿತ್ತು. ಅದರಲ್ಲಿ ಕಾರಂತರ ಮೊದಲ ಕಾದಂಬರಿಗಳಾದ ನಿರ್ಭಾಗ್ಯ ಜನ್ಮ, ದೇವದೂತರು ಮತ್ತು ಸೂಳೆಯ ಸಂಸಾರಪ್ರಕಟವಾಯಿತು. ಅಂದಿನ ಸಾಹಿತ್ಯಾಸಕ್ತರನ್ನು ಗಮನ ಸೆಳೆದ ಈ ಪತ್ರಿಕೆಯಲ್ಲಿ ಕಾರಂತರು ಹಲವಾರು ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದರು.

ಆದರೆ ವಸಂತ ಪತ್ರಿಕೆ ಬಹುಕಾಲ ನಡೆಯಲಿಲ್ಲ. ಕಾರಂತರೇ ಹೇಳುತ್ತಾರೆ ವಸಂತವೆಂಬ ಮಾಸ ಪತ್ರಿಕೆ ನನ್ನ ಗತ ವೈಭವಗಳಲ್ಲೊಂದು ಸ್ಮರಣೆಯಾಯಿತು“. ಸುಮಾರು ಎರಡು ದಶಕಗಳ ಬಳಿಕ, ಅಂದರೆ ಐವತ್ತರ ದಶಕದಲ್ಲಿ ಕಾರಂತರು ವಿಚಾರವಾಣಿಎಂಬ ಹೊಸ ಪತ್ರಿಕೆ ಪ್ರಾರಂಭಿಸಿದರು. ಆ ಪತ್ರಿಕೆಯಲ್ಲಿ ವಿಜ್ಞಾನಯುಗಎಂಬ ಅಂಕಣವಿತ್ತು. ಅದರಲ್ಲಿ ಹಲವು ವಿಜ್ಞಾನ ಲೇಖನಗಳನ್ನು ಬರೆದರು

ಈ ನಡುವೆ ೧೯೩೬ ರಲ್ಲಿ ಮೂರು ಸಂಪುಟಗಳ ಬಾಲಪ್ರಪಂಚ ಬೆಳಕು ಕಂಡಿತು. ಅಲ್ಲಿ ದೊಡ್ಡವರಿಗಾಗಿ ಹೇಳದೇ ಉಳಿದ ಹಲವು ವಿಷಯಗಳು ಇದ್ದುವು. ಪರಿಣಾಮವಾಗಿ ನಂತರ ಬಂತು ಮೂರು ಸಂಪುಟಗಳ ವಿಜ್ಞಾನ ಪ್ರಪಂಚ ಬಂತು. ಈ ಸಂಪುಟಗಳು ಕನ್ನಡ ವಿಜ್ಞಾನ ವಾಂಗ್ಮಯದಲ್ಲಿ ಮೈಲಿಗಲ್ಲುಗಳು. ಇವಲ್ಲದೇ ಶಿವರಾಮಕಾರಂತರು ಹಲವು ವಿಜ್ಞಾನ ಪುಸ್ತಕಗಳನ್ನು ಬರೆದರು. ವಿಚಿತ್ರ ಖಗೋಲ (೧೯೬೫), ನಮ್ಮ ಭೂ ಖಂಡಗಳು (೧೯೬೫), ಹಿರಿಯ ಕಿರಿಯ ಹಕ್ಕಿಗಳು (೧೯೭೧), ವಿಜ್ಞಾನ ಮತ್ತು ಅಂಧ ಶೃದ್ದೆ (೧೯೮೨), ಉಷ್ನವಲಯದ ಆಗ್ನೇಸ್ಯ (೧೯೮೩), ಪ್ರಾಣಿಪ್ರಪಂಚದ ವಿಸ್ಮಯಗಳು (೧೯೮೪), ಮಂಗನ ಕಾಯಿಲೆ (೧೯೮೪), ವಿಶಾಲ ಸಾಗರಗಳು (೧೯೮೪), ಪ್ರಾಣಿ ಪ್ರಪಂಚ (೧೯೯, ಇತ್ಯಾದಿ

ಮನಸ್ಸಿಗೆ ಮುದ ನೀಡಿದ ಇಂಗ್ಲೀಷಿನ ವಿಜ್ಞಾನ ಪುಸ್ತಕ ದೊರೆತರೆ ಕನ್ನಡದ ಜನರಿಗಾಗಿ ಅನುವಾದಿಸಲು ಕಾರಂತರು ಮುಂದಾಗುತ್ತಿದ್ದರು. ಇಂಗ್ಲೀಷಿನಲ್ಲಿ ರಾಶೆಲ್ ಕಾರ್ಸನ್ ಸುಪ್ರಸಿದ್ದ ಜನಪ್ರಿಯ ವಿಜ್ಞಾನ ಲೇಖಕರು. ಅವರ “The Sea Around Us “ಪುಸ್ತಕವನ್ನು ಓದಿದ ಕಾರಂತರಿಗೆ ಕನ್ನಡಕ್ಕೆ ಅನುವಾದಿಸುವ ಉತ್ಸಾಹ ಹುಟ್ಟಿತು. ಅದರ ಫಲವೇ ನಮ್ಮ ಸುತ್ತಲಿನ ಕಡಲು” (೧೯೫೮). ಇವಲ್ಲದೇ ಅವರ ಇತರ ಅನುವಾದಿತ ಹೊತ್ತಗೆಗಳು ಹೀಗಿವೆ
 • ಮೋಸೋಮುಗಳು (ಮನ್ಸೂನ್) (೧೯೭೯)
 • ಕೀಟನಾಶಕಗಳ ಪಿಡುಗುಗಳು (೧೯೮೩)
 • ಜನತೆಯೂ ಅರಣ್ಯಗಳೂ (೧೯೮೩)
 • ಭಾರತದ ಪರಿಸರ ಪರಿಸ್ಠಿತಿ ಪ್ರಜೆಯ ದೃಷ್ಟಿಯಲ್ಲಿ (೧೯೮೩)
 • ನಮ್ಮ ಪರಮಾಣು ಚೈತನ್ಯ ಉತ್ಪಾದನಾ ಸಾಧನಗಳು (೧೯೮೬)
 • ಭಾರತದ ಪರಿಸರ ಸ್ಠಿತಿ ದ್ವಿತೀಯ ಸಮೀಕ್ಷೆ (೧೯೮೬)
 • ಪರಮಾಣು ಇಂದು, ನಾಳೆ(೧೯೮೩)
 • ನಮ್ಮೆಲ್ಲರಿಗೂ ಒಂದೇ ಭವಿಷ್ಯ (೧೯೮೯)

ಸಾಕಾಗದೇ ಪುಸ್ತಕಗಳ ಪಟ್ಟಿ ಕಾರಂತರಿಗೆ ಅದೆಂಥ ವಿಜ್ಞಾನ ಪ್ರೀತಿ ಇತ್ತೆನ್ನುವುದನ್ನು ಸ್ಪಷ್ಟ ಪಡಿಸಲು ಕಾರಂತರ ಕೃತಿಗಳಲ್ಲಿ ಹೆಚ್ಚಿನವು ಜೀವ ವಿಜ್ಞಾನ ಮತ್ತು ಪರಿಸರಕ್ಕೆ ಸಂಬಂಧಿಸಿದ್ದು. ಇದಕ್ಕೆ ನಿಸರ್ಗದ ಬಗ್ಗೆ ಕಾರಂತರಿಗಿದ್ದ ಒಲವು ಕಾರಣ.

ಅವರು ಒಂದೆಡೆ ಬರೆದಿದ್ದಾರೆ “ಪ್ರಯತ್ನ ಶೀಲರಿಗೆ, ಸಾಹಸಿಗಳಿಗೆ, ಕುತೂಹಲವುಳ್ಳವರಿಗೆ ನೆಲ, ನೀರು, ಬಾನು ಎಲ್ಲವೂ ಅದ್ಭುತ ಮನೋಹರ ಪ್ರದೇಶಗಳೇ ! ಹಾಗೆ ನೋದಹೋದರೆ ನಮ್ಮ ಮನಸ್ಸಿಗೆ ಸಂತೋಷವನ್ನು ಕೊಡಲಾರದ ಪ್ರದೇಶವೇ ಇಲ್ಲವೋ ಏನೋ ! ಅದನ್ನೆಲ್ಲ ಕಂಡು ತಿಳಿಯುವ ಕುತೂಹಲವಿರುವರ ಪಾಲಿಗೆ ನಿಸರ್ಗ ಯಾವ ರಹಸ್ಯವನ್ನೂ ಬಹಳ ಕಾಲ ಬಚ್ಚಿಟ್ಟುಕೊಳ್ಳಲಾರದು” (ವಿಶಾಲ ಸಾಗರಗಳು)

ಕಡಲಂತೆ ಕಾರಂತ ಎಂಬ ಪುಸ್ತಕದಲ್ಲಿ ಶ್ರೀ. ಬಿದರಹಳ್ಳಿ ನರಸಿಂಹಮೂರ್ತಿಯವರು ಹೇಳುವಂತೆ ನಿಸರ್ಗ ಪ್ರೇಮ ಕಾರಂತರ ವ್ಯಕ್ತಿತ್ತ್ವದ ಸ್ಥಾಯಿ ಲಕ್ಷಣ. ದೇವರನ್ನು ಅಷ್ಟಾಗಿ ಒಲ್ಲದ ಕಾರಂತರು ದೇವರ ಜಾಗೆಯಲ್ಲಿ ನಿಸರ್ಗವನ್ನು ಕೂರಿಸಿ ಪೂಜಿಸುತ್ತ ಬಂದಿದ್ದಾರೆ. ಅವರಿಗೆ ಬೆಟ್ಟ ಗುಡ್ದಗಳು, ಮರಗಿಡ ಕಾಡುಗಳು, ನದಿ ಸಮುದ್ರಗಳು ಹೆಂಡತಿ ಮಕ್ಕಳಷ್ಟೇ ಆಪ್ತ ಸ್ನೇಹಿತರಷ್ಟೇ ಆತ್ಮೀಯ ಜೀವಗಳು

ಕಾರಂತರಿಗೆ ನಿಸರ್ಗ ಎಲ್ಲವೂ ಆಗಿತ್ತು. ಚೋಮನ ದುಡಿ, ಕುಡಿಯರ ಕೂಸು, ಚಿಗುರಿದ ಕನಸು, ಬೆಟ್ಟದ ಜೀವ ಮೊದಲಾದ ಕಾದಂಬರಿಗಳಲ್ಲಿ ನಾವು ಕಾರಂತರ ನಿಸರ್ಗ ಪ್ರೇಮವನ್ನು ಕಾಣಬಹುದು. ಇದೇ ಬಗೆಯ ನಿಸರ್ಗ ಪ್ರೇಮ ಅವರ ವಿಜ್ಞಾನ ಕೃತಿಗಳನ್ನೂ ಪ್ರಭಾವಿಸಿದೆ.

೧೯೯೧ ರಲ್ಲಿ ಪ್ರಕಟವಾದ ಪ್ರಾಣಿ ಪ್ರಪಂಚಕಾರಂತರ ಜನಪ್ರಿಯ ಪುಸ್ತಕಗಳಲ್ಲೊಂದು. ಏಳಕ್ಕೂ ಹೆಚ್ಚು ಬಾರಿ ಪುನರ್ ಮುದ್ರಣವನ್ನು ಕಂಡಿರುವುದೇ ಇದರ ಜನಪ್ರಿಯತೆಯ ಸೂಚಕ. ಇಂಗ್ಲೀಷಿನ Wonders of animal life ಎಂಬ ನಾಲ್ಕು ಸಂಪುಟಗಳು ಪ್ರಾಣಿ ಪ್ರಪಂಚದ ಸೃಷ್ಟಿಗೆ ಪ್ರೇರಣೆಯಾದುವೆಂದು ಮುನ್ನುಡಿಯಲ್ಲೇ ಕಾರಂತರು ಬರೆದಿದ್ದಾರೆ. ಅಕಾರಾದಿಯಾಗಿ ಬೇರೆ ಬೇರೆ ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ವಿವರಣೆ ಒದಗಿಸಿರುವ ಪುಸ್ತಕದ ತುಂಬ ರೇಖಾ ಚಿತ್ರಗಳಿವೆ ಅವೆಲ್ಲವನ್ನು ಸ್ವತ: ಕಾರಂತರೇ ಬರೆದಿದ್ದಾರೆಂದರೆ ಸೋಜಿಗವಾಗುತ್ತದೆ. ಕಾರಂತರು ಮುನ್ನಡಿಯಲ್ಲಿ ಹೇಳುತ್ತಾರೆ

ಇದಕ್ಕಾಗಿ ಎರಡು ವರ್ಷಗಳ ದೀರ್ಘಕಾಲದ ಬಿಡುವಿನ ಸಮಯವನ್ನು ಬಳಸಿಕೊಂಡು ಸುಮಾರು ೭೦೦ ಪಶುಪಕ್ಷಿಗಳನ್ನು ಈ ಪ್ರಾಣಿ ಪ್ರಪಂಚಕ್ಕೆ ಸೇರಿಸಿಕೊಂಡೆ. ಅವನ್ನು ಸಚಿತ್ರವಾಗಿ ಕೊಡುವ ಪ್ರಯತ್ನದಲ್ಲಿ ಫೊಟೊ ಸಂಗ್ರಹಕ್ಕೆ ಹೋಗದೇ ಅದರ ಖರ್ಚು ವೆಚ್ಚಕ್ಕೆ ಬೆದರಿ, ಈ ಮೊದಲು ಪ್ರಯತ್ನಿಸಿದಂತೆ ನಾನೇ ಬರೆಯತೊಡಗಿದೆ. ಅವೆಲ್ಲವೂ ಅನ್ಯ ಚಿತ್ರಗಳನ್ನೋ, ಫೊಟೋಗಳನ್ನೋ ನೋಡಿ ಬರೆದ ರೇಖಾ ಚಿತ್ರಗಳು. ಅಂಥ ಕೆಲವನ್ನು ಕೈ ತಿದ್ದದ ನಾನು ತಿರು ತಿರುಗಿ ಬರೆಯಲೂ ಬೇಕಾಯಿತು. ಆ ರೀತಿಯಲ್ಲಿ ಸುಮಾರು ನಾಲ್ಕು ನೂರು ಚಿತ್ರಗಳನ್ನು ಬರೆದು, ಹರಿದು, ಬರೆದು, ಹರಿದು ತಿರುಗಿ ಬರೆಯಲು ಹೊರಟೆ. ಪ್ರಕಟಣೆಯ ವೆಚ್ಚದ ದೃಷ್ಟಿಯಿಂದ ಅದು ಅನಿವಾರ್ಯವಾಗಿತ್ತ.”

ಬಾಳ ಸಂಜೆಯಲ್ಲಿ ಕಾರಂತರುನಾವು ನೆನಪಿಡಬೇಕು ಇಷ್ಟೆಲ್ಲ ಮಾಡುವಾಗ ಕಾರಂತರು ಇನ್ನೂ ೮೭ರ ತರುಣ! ಜ್ಞಾನಪೀಠ ಪುರಸ್ಕೃತ ಈ ಹಿರಿಯರು ಪತ್ರಿಕೆಗಳ ಜನತಾವಾಣಿಯಲ್ಲಿ ಬರೆದ ಪತ್ರಗಳು ಅಸಂಖ್ಯ. ತನಗೆ ಅನಿಸಿದ್ದನ್ನು ಯಾವ ಮುಲಾಜೂ ಇಲ್ಲದೇ ಕಾರಂತರು ಹೇಳುತ್ತಿದ್ದರು. ದಕ್ಷಿಣ ಮತ್ತು ಉತ್ತರ ಕನ್ನಡದ ಜನಸಮುದಾಯದಲ್ಲಿ ಪರಿಸರ ಪರ ವಾದ ಪ್ರಬಲ ದನಿಯಾಗುವಲ್ಲಿ ಕಾರಂತರು ಕಾರಣರಾದರು. ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು, ಚುನಾವಣಾ ಪ್ರಚಾರ ಮಾಡದೇ ಹೋದರೂ ೭೦ ಸಾವಿರ ಮತಗಳನ್ನು ಪಡೆದದ್ದು ಕಾರಂತರ ವರ್ಚಸ್ಸು ಜನರನ್ನು ತಟ್ಟಿದುದಕ್ಕೆ ಸಾಕ್ಷಿ

ಪರಿಸರದ ಬಗ್ಗೆ ಕಾರಂತರಿಗಿತ್ತು ಅನನ್ಯ ಕಾಳಜಿ. ಆಧುನಿಕ ಜೀವನ ವಿಧಾನಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ದನಿ ಎತ್ತಿದರು. ಕೈಗಾ ಪರಮಾಣು ಸ್ಥಾವರ ಸ್ಥಾಪನೆ ಅಥವಾ ಬೇಡ್ತಿ ಹಾಗೂ ಕಾಳೀ ನದೀ ಯೋಜನೆಯ ಸಂದರ್ಭದಲ್ಲಿ, ಕರಾವಳಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆ ಬಂದಾಗ, ಕುದುರೇಮುಖ ಅದಿರು ಯೋಜನೆಯ ಕಾಲದಲ್ಲಿ ಶಿವರಾಮ ಕಾರಂತರು ಸುಮ್ಮನುಳಿಯಲಿಲ್ಲ. ಇವೆಲ್ಲವೂ ಹೇಗೆ ಪರಿಸರದ ಮೇಲೆ ಅಳಿಸಲಾಗದ ಘಾಸಿ ಮಾಡಲಿವೆ ಎಂಬ ಬಗ್ಗೆ ಲೇಖನ, ಉಪನ್ಯಾಸ, ಮತ್ತು ಪುಸ್ತಕಗಳ ಮೂಲಕ ಜನ ಜಾಗೃತಿಗೆ ಯತ್ನಿಸಿದರು. ಹಿಂದೆ ಕಂಡ ಮತ್ತು ಈಗ ಕಾಣುತ್ತಿರುವ ಕರ್ನಾಟಕ (ಕರ್ನಾಟಕ ಪರಿಸರ ಪರಿಸ್ಠಿತಿ ವರದಿ, ೧೯೮೩ ೮೪) ಎಂಬ ಸುದೀರ್ಘ ಲೇಖನವೊಂದರಲ್ಲಿ ಬದಲಾಗುತ್ತಿರುವ ಕರ್ನಾಟಕದ ಪರಿಸರ ಮತ್ತು ಸಾಮಾಜಿಕ ರೀತಿ ನೀತಿಗಳ ಬಗ್ಗೆ ಗಾಡ ವಿಷಾದ ವ್ಯಕ್ತ ಪಡಿಸುತ್ತಾರೆ. ಇಲ್ಲಿ ಎಷ್ಟೆಲ್ಲ ಮರಗಿಡಗಳಿದ್ದುವು, ಜಾನಪದ ಸಂಸ್ಕೃತಿಗಳಿದ್ದುವು, ಪಾರಂಪರಿಕ ಜ್ಞಾನವಿದ್ದುವು, ವನ್ಯ ಜೀವಿಗಳು ಹರಡಿಕೊಡಿದ್ದುವು. ಆದರೆ ಅವೆಲ್ಲವೂ ಮರೆಯಾಗುತ್ತಿವೆಯಲ್ಲ ಎಂದು ಕಾರಂತರು ವಿಷಾದಿಸುತ್ತಾರೆ. ಆ ಲೇಖನದಲ್ಲಿ ಅವರು ನಮ್ಮ ಪರಿಸರ ಪ್ರೀತಿ ಬಗ್ಗೆ ಕಟಕಿಯಾಡುತ್ತಾರೆ

ಭಾರತದಲ್ಲಿ ವಾಸಿಸುವ ನಮಗೆ ಪರಿಸರವನ್ನು ಕುರಿತ ಜ್ಞಾನ ತೀರ ಕಡಿಮೆ. ಪಶು ಪಕ್ಷಿಗಳಿಗೂ, ಮಾನವ ಬಳಗಕ್ಕೂ ಏನು ಸಂಬಂಧವಿದೆಯೆಂದು ನಮಗಿನ್ನೂ ತಿಳಿದಿಲ್ಲ. ಆದರೂ ನಾವು ಬುದ್ಧನಿಂದ ಅಹಿಂಸಾ ಧರ್ಮದ ಬೋಧನೆ ಪಡೆದವರು ! ನಮ್ಮ ಪುರಾತನ ಋಷಿಗಳು ಅತಿ ಸೂಕ್ಷ್ಮವಾದ ಜೀವಾಣುವಿನಲ್ಲಿಯೂ ಬ್ರಹ್ಮನಿದ್ದಾನೆ ಎಂದವರು. ಹೀಗೆ ಮತ ಧರ್ಮಗಳ ಪ್ರಭಾವ ನಮ್ಮ ಮೇಲೆ ವಿಪರೀತ ಬಿದ್ದುದರಿಂದಲೋ ಏನೋ. ಆ ಬ್ರಹ್ಮನನ್ನು ನಾವು ನಿಸರ್ಗದಲ್ಲಿ ಕಾಣಲು ಬಯಸುವುದಿಲ್ಲ ! ಕಲಿಯುಗದಲ್ಲಿ ಬ್ರಹ್ಮನ ಬದಲು ದುಡ್ಡೇ ಸರ್ವಸ್ವ ಎಂಬ ಆರಾಧನೆಗೆ ತೊಡಗಿದ್ದೇವೆ. ಪ್ರಕೃತಿ ಸಂಪತ್ತನ್ನು ನಾವು ಇಂದು ದೈನಂದಿನ ನಮ್ಮ ಲಾಭಕ್ಕಾಗಿ ಸುಲಿಯುತ್ತಿದ್ದೇವೆಯೇ ಹೊರತು, ನಾಳಿನ ಯೋಚನೆ ನಮಗಿಲ್ಲ ಎಂಬಂತೆ ವರ್ತಿಸುತ್ತಿದ್ದೇವೆ.”

ವರ್ತಾಮಾನದ ಸಮಸ್ಯೆಗಳಿಗೆ ಕಾರಂತರಂತೆ ಸ್ಪಂದಿಸಿದ ಸಾಹಿತಿ ಬೇರೊಬ್ಬನಿಲ್ಲವೆಂದರೆ ಅತಿಶಯೋಕ್ತಿಯಾಗದು. ಅವರೆಂದೂ ದಂತ ಗೋಪುರಗಳಲ್ಲಿದ್ದವರಲ್ಲ. “ಭಾರತದ ಪರಿಸರ ಸ್ಥಿತಿ ೧೯೮೨ಕಾರಂತರ ಬಲು ಮುಖ್ಯ ಅನುವಾದಿತ ಕೃತಿಗಳಲ್ಲೊಂದು. ಅನಿಲ್ ಅಗರ್ವಾಲ್, ಕ್ಲಾಡ್ ಸಿಲ್ವಾರಿಸ್, ಮಾಧವ ಗಾಡ್ಗಿಲ್ ಮೊದಲಾದ ಮೂವತ್ತಕ್ಕೂ ಹೆಚ್ಚು ಪರಿಸರ ತಜ್ಞರು ಭಾರತದ ನೆಲ, ಜಲ, ವಾಯು ಒಟ್ಟಾರೆ ಪರಿಸರದ ಪರಿಸ್ಥಿತಿ ಬಗ್ಗೆ ಇಂಗ್ಲೀಷಿನಲ್ಲಿ ತಯಾರಿಸಿದ ವರದಿಯ ಕನ್ನಡ ರೂಪಾಂತರವಿದು. ಕಾರಂತರಿಲ್ಲದಿದ್ದರೆ ಪ್ರಾಯಶ: ಕನ್ನಡಿಗರಿಗೆ ಇಂಥ ಅಮೂಲ್ಯ ಪುಸ್ತಕ ಲಭ್ಯವಾಗುತ್ತಿರಲಿಲ್ಲವೇನೋ

ಪರಿಷ್ಕರಣೆಗೆ ಅವಕಾಶ

ಕಾರಂತರ ವಿಜ್ಞಾನ ಬರಹಗಳ ಬಗ್ಗೆ ಹಲವು ಆಕ್ಷೇಪಗಳನ್ನು ತಜ್ಞರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಅವರ ಭಾಷೆ ಒರಟು, ಅಲ್ಲಲ್ಲಿ ಸಂದಿಗ್ದತೆ, ಪರಿಕಲ್ಪನೆಯಲ್ಲಿ ಅಸ್ಪಷ್ಟತೆ, ಪಾರಿಭಾಷಿಕ ಶಬ್ದಗಳ ತಪ್ಪು ಬಳಕೆ ಇತ್ಯಾದಿ. ಇಂಥ ಆಕ್ಷೇಪಗಳನ್ನು ಅಲ್ಲಗಳೆಯಲಾಗದು. ಇವೆಲ್ಲವುಗಳ ಹೊರತಾಗಿಯೂ ಕಾರಂತರ ವಿಜ್ಞಾನ ಕೃತಿಗಳು ಯಾವ ಕಾಲದಲ್ಲಿ ರಚಿತವಾದುವು ಎಂಬುದನ್ನು ನಾವು ಗಮನಿಸಬೇಕು. ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ವಾಙ್ಮಯಕ್ಕೆ ಇವು ಉತ್ಸಾಹವನ್ನು ಊಡಿದುವು; ಜನಮಾನಸದ ಮೇಲೆ ಗಾಢ ಪ್ರಭಾವ ಬೀರಿದುವು ಎನ್ನುವುದನ್ನು ಒಪ್ಪಿಕೊಳ್ಳಬೇಕು.

ವಿಜ್ಞಾನ ಒಬ್ಬ ವ್ಯಕ್ತಿಯ ಸೊತ್ತಲ್ಲ. ವಿಜ್ಞಾನ ಬರಹಗಳಲ್ಲಿ ಪರಿಕಲನಾತ್ಮಕ ಸ್ಪಷ್ಟತೆ ಅತೀ ಅಗತ್ಯ. ವಿಜ್ಞಾನ ನಿಂತ ನೀರಲ್ಲ. ಹರಿವ ಪ್ರವಾಹ. ಜ್ಞಾನ ಸೀಮೆಯ ಎಲ್ಲೆ ಸದಾ ವಿಸ್ತಾರವಾದಂತೆ ಹೊಸ ಹೊಸ ವಿವರಣೆಗಳು ಹುಟ್ಟಿಕೊಳ್ಳುತ್ತವೆ.  ನ್ಯೂಟನ್ನನ ನಿಯಮಗಳಿಗೆ  ಐನ್ ಸ್ಟೈನ್ ತಿದ್ದುಪಡಿ ತಂದಂತೆ. ಹಾಗಾಗಿಯೇ ಅಂತಿಮವಾಗಿ ವಿಜ್ಞಾನ ವ್ಯಕ್ತಿ ನಿಷ್ಠವಲ್ಲ. ಇದು ವಿಜ್ಞಾನ ಬರವಣಿಗೆಗೂ ಅನ್ವಯಿಸುತ್ತದೆ. ಕೃತಿಗಾರನ ಕಾಲ ಮತ್ತು ಪರಿಸ್ಠಿತಿಗಿಂತ,  ಅಲ್ಲಿ ಮಂಡಿಸಿದ ವಿಷಯ ಮುಖ್ಯವಾಗುತ್ತದೆ. ತಪ್ಪು ಹೇಳಿಕೆಗಳು, ಪರಿಷ್ಕರಣೆಗೆ ಯೋಗ್ಯ ವಿಚಾರಗಳು ಪರಿಷ್ಕರಿಸಲ್ಪಡಲೇ ಬೇಕು. ಈ ದೃಷ್ಟಿಯಲ್ಲಿ ಶಿವರಾಮಕಾರಂತರ ವಿಜ್ಞಾನ ಕೃತಿಗಳನ್ನು ಪುನರ್ ಮುದ್ರಣ ಮಾಡುವ ಸಂದರ್ಭದಲ್ಲಿ ಅವುಗಳ ಪರಿಷ್ಕರಣೆ ಅತೀ ಅಗತ್ಯ. ಇಲ್ಲಿ ಕಾರಂತ ಶೈಲಿಯನ್ನು ಮುಟ್ಟದೇ ಪರಿಷ್ಕರಿಸಬಹುದು. ಹೀಗೆ ಮಾಡುವುದರಿಂದ ಕಾರಂತರಿಗೆ ನ್ಯಾಯ ಸಲ್ಲುತ್ತದೆ; ವಿಜ್ಞಾನಕ್ಕೆ ಅನ್ಯಾಯವಾಗದು

ಹಲವು ದಶಕಗಳ ಹಿಂದೆ ಕಾರಂತರು ವಿಶ್ವಕೋಶದ ಪ್ರಕಟಣೆಯ ಸಾಹಸ ಮಾಡಿದರು. ಇಂದು ನಾವಿದ್ದೇವೆ ಮಾಹಿತಿ ಯುಗದಲ್ಲಿ. ಪ್ರಕಟಣೆಗೆ ಹೊಸ ತಂತ್ರಜ್ಞಾನ ಬಂದಿದೆ. ಆದರೇನು ? – ಕಾರಂತರಿಲ್ಲ, ಕಾರಂತರಂಥವರಿಲ್ಲ ! ಕನ್ನಡ ವಿಶ್ವಕೋಶ ಯೋಜನೆ ಅಪೂರ್ಣವಾಗಿ ಚಿರ ನಿದ್ರೆಗೆ ಸಂದಿದೆ. ವ್ಯಕ್ತಿಯಾಗಲಿ, ನಮ್ಮ ವಿಶ್ವವಿದ್ಯಾಲಯಗಳಾಗಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿಶ್ವಕೋಶಗಳ ಪ್ರಕಟಣೆಗೆ ಮುಂದಾಗುತ್ತಿಲ್ಲ. ಕಾರಣಕ್ಕೆ ಹಲವು ನೆಪಗಳಿವೆ. ನಮ್ಮ ಬೌದ್ಧಿಕ ದಿವಾಳಿತನಕ್ಕೆ ಇದು ಸಾಕ್ಷಿ ಎಂದೆನಿಸದೇ ? ಕನ್ನಡದ ಪ್ರಮುಖ ವಿಜ್ಞಾನ ಬರಹಗಾರರಾದ ಜೆ.ಅರ್ ಲಕ್ಶ್ಮಣ ರಾಯರು ಕಾರಂತರ ವಿಜ್ಞಾನ ಸಾಹಿತ್ಯದ ಬಗ್ಗೆ ಕಾರಂತರ ಅಭಿನಂದನ ಗ್ರಂಥವಾದ ಕಾರಂತ ಪ್ರಪಂಚದಲ್ಲಿ ತಮ್ಮ ಅಭಿಪ್ರಾಯವನ್ನು ಹೀಗೆ ಹೇಳಿದ್ದಾರೆ

ತಾವು ಓದಿ ತಿಳಿದುಕೊಂಡು ಆನಂದಿಸಿದ ವಿಷಯಗಳನ್ನು ಇತರರಿಗೆ ತಿಳಿಸುವ ಪ್ರಯತ್ನ ಅವರದು. ಆ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು. ವರದಿ ಮಾಡುವುದರಲ್ಲಿಯೂ ಒಂದು ಕಲೆ ಇದೆ. ಆ ಕಲೆ ಕಾರಂತರಿಗೆ ಒಲಿದಿದೆ. ಆದುದರಿಂದಲೇ ವರ್ಣನೆಗೆ ಪ್ರಾಶಸ್ತ್ಯವಿರುವ ವಿಜ್ಞಾನ ಶಾಖೆಗಳಾದ ಜೀವ ವಿಜ್ಞಾನ, ಭೂವಿಜ್ಞಾನಗಳನ್ನು ಕುರಿತ ಅವರ ಬರಹ ಹೆಚ್ಚು ಶೋಭಿಸುತ್ತದೆ. ಪ್ರಾಣಿ ಮತ್ತು ಸಸ್ಯ ಜೀವನ, ಭೂ ಇತಿಹಾಸಗಳ ವಿಷಯದಲ್ಲಿ ಕಾರಂತರು ಓದುಗರ ಕುತೂಹಲ, ಆಸಕ್ತಿಗಳನ್ನು ಕೆರಳಿಸುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕಾರಂತರ ಬರಹಗಳ ಇನ್ನೊಂದು ಮಹತ್ಸಾಧನೆ ಎಂದರೆ, ಪ್ರೌಢ ವಿಷಯಗಳನ್ನು ಕುರಿತು ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲವೆಂಬ ಅರ್ಥವಿಲ್ಲದ ಕೂಗನ್ನು ಅಡಗಿಸಲು ಅದು ಸಹಕಾರಿಯಾಗಿದೆ. ವಿಷಯದ ಮೇಲೆ ಪ್ರಭುತ್ವ, ತಿಳಿಸಬೇಕೆಂಬ ಅಭಿಲಾಷೆ, ಈ ಎರಡೂ ಇದ್ದುದೇ ಆದರೆ, ಭಾಷೆ ಅಡ್ದಿ ಮಾಡದೆಂಬುದನ್ನು ಅವರ ಬರಹ ತೋರಿಸಿಕೊಟ್ಟಿದೆ.ಇದಕ್ಕಾಗಿ ಕನ್ನಡಿಗರು ಅವರಿಗೆ ಋಣಿಯಾಗಿದ್ದಾರೆ.”

ನಿಜ, ಶಿವರಾಮ ಕಾರಂತರು ಕಾದಂಬರಿಕಾರರಾಗದೇ ಹೋಗಿದ್ದರೂ ವಿಜ್ಞಾನ ಬರಹಗಾರರಾಗಿ ಕನ್ನದ ಸಾಹಿತ್ಯ ಪ್ರಪಂಚದಲ್ಲಿ ಅವರಿಗೊಂದು ಸ್ಥಾನವಿರುತ್ತಿತ್ತು. ಅವರು ಕಾದಂಬರಿಕಾರ, ನಾಟಕಗಾರ, ನಿರ್ದೇಶಕ, ನೃತ್ಯ ಪಟು, ಚಿತ್ರಗಾರ, ವಿಜ್ಞಾನ ಸಾಹಿತ್ಯ ನಿರ್ಮಾಪಕ, ಚಲನ ಚಿತ್ರ ನಿರ್ದೇಶಕ, ಪರಿಸರ ಸಂರಕ್ಷಕ, ರಾಜಕಾರಣಿ, ಪತ್ರಿಕೋದ್ಯಮಿ, ಶಿಕ್ಷಣ ತಜ್ಞಇನ್ನೇನು !?. ವಿಜ್ಞಾನವನ್ನು ಕಾಲೇಜಿಗೆ ಹೋಗಿ ಶಾಸ್ತ್ರೀಯವಾಗಿ ಕಲಿಯದ ಕಾರಂತರೇ ಇಷ್ಟೊಂದು ಸಮೃದ್ಧವಾಗಿ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನೃಷ್ಟಿಸಿ ನಮ್ಮ ಮುಂದೆ ಬಲು ದೊಡ್ಡ ಆದರ್ಶವನ್ನು ಬಿಟ್ಟು ಹೋಗಿದ್ದಾರೆ. ಇದು ನಮಗೆ ಸ್ಫೂರ್ತಿಯ ಸೆಲೆಯಾಗಬೇಕಾಗಿದೆ.

Advertisements
 1. ಜಿ.ಎನ್.ಅಶೋಕವರ್ಧನ
  April 20, 2009 at 4:04 pm

  ಪ್ರಿಯ ರಾಧಾ
  ಕಾಲದ ಅಂತರ, ತಲೆಮಾರಿನ ಅಂತರಗಳಲ್ಲಿ ಗಟ್ಟಿ ಎಂದು ತೋರುವ ಎಲ್ಲರ, ಎಲ್ಲದರ ಮೌಲ್ಯಮಾಪನ ನಡೆಯಬೇಕು, ನೀನು ಚೆನ್ನಾಗಿ ನಡೆಸಿದ್ದೀಯಾ. ಕಾರಂತರ ಮಹತ್ವವನ್ನು ಹೇಳುವುದರೊಡನೆ ಸೂಕ್ಷ್ಮವಾಗಿ ಅನುಯಾಯಿಗಳೆನ್ನುವವರ ಅಂಧಾನುಕರಣೆಯನ್ನು ನಿರಾಕರಿಸಿರುವುದು ನಿನ್ನ ವೈಚಾರಿಕ ಜಾಗೃತಿಗೆ ತಕ್ಕುದಾಗಿದೆ. ಅಭಿನಂದನೆಗಳು.
  ಅಶೋಕವರ್ಧನ

 2. April 20, 2009 at 4:26 pm

  ಆದರೂ ಕಾರಂತಜ್ಜ ಚುನಾವಣೆಯಲ್ಲಿ ಗೆಲ್ಲಲಿಲ್ಲ ಎಂಬುದೇ ನನಗೆ ಬೇಜಾರು. ಸದಾ ಸಿಟ್ಟಿನ ಮುಖವನ್ನು ಹೊಂದಿದ್ದವರು, ಮಾತನಾಡಿದರೆ ಪೆದಂಬು ಉತ್ತರ ಕೊಡುವವರು ಎಂಬಂತೆ ಕಾರಂತರು ಜನಸಾಮಾನ್ಯರಿಗೆ ಕಂಡರೋ ಏನೋ. ಅವರು ಕಾದಂಬರಿಕಾರ, ನಾಟಕಗಾರ, ನಿರ್ದೇಶಕ, ನೃತ್ಯ ಪಟು, ಚಿತ್ರಗಾರ, ವಿಜ್ಞಾನ ಸಾಹಿತ್ಯ ನಿರ್ಮಾಪಕ, ಚಲನ ಚಿತ್ರ ನಿರ್ದೇಶಕ, ಪರಿಸರ ಸಂರಕ್ಷಕ, ಪತ್ರಿಕೋದ್ಯಮಿ, ಶಿಕ್ಷಣ ತಜ್ಞ ಆಗಿದ್ದಿರಬಹುದು. ಆದರೆ ಕಾಮನ್ ಮ್ಯಾನ್ ಗೆ ಅದೆಲ್ಲಾ ಗೊತ್ತಿತ್ತೋ, ಅಥವಾ ಕಾರಂತರು ಮತ್ತು ಸಾಮಾನ್ಯ ಜನತೆಯ ಮಧ್ಯೆ ‘ಗ್ಯಾಪ್’ ಇತ್ತೋ. ಒಟ್ತಿನಲ್ಲಿ ಅವರಿಗೆ ೭೦ ಸಾವಿರ ಮತಗಳು ಸಿಕ್ಕಿದ್ದೇ ವಿಶೇಷ. ಆದರೂ ಅವರು ಲೋಕಸಭೆ ಸದಸ್ಯರಾಗಿದ್ದಿದ್ದರೆ ಉ.ಕ.ದ ಕತೆಯೇ ಬೇರೆಯಾಗುತ್ತಿತ್ತು.

 3. B Ramesh Adiga, Manipal
  April 20, 2009 at 4:50 pm

  Dear Dr Radhakrishna,

  Your column has provided ample insights into hitherto little known facets of great Dr Karnath. Your observation that he is an ‘ardent science writer’ first and a celebrated litterateur next is quite thought-provoking. Please keep blogging and informing us too. Regards,

  B. Ramesh Adiga

 4. April 20, 2009 at 7:57 pm

  thank you Sir for this write-up on Karantajja.

  I have been privileged to listen and interact with him during so many occasions (during my school-college days).
  I am still awestruck by his personality and body of work.
  He was a genius of our times.

 5. April 21, 2009 at 10:36 am

  ಉತ್ತಮ ಲೇಖನ

  -ಶೆಟ್ಟರು

 6. April 22, 2009 at 8:46 am

  ರಾಧಾಕೃಷ್ಣರೆ,
  ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆಗೆ ಜೀವಂತ ನಿದರ್ಶನವಾಗಿದ್ದ ಕಾರಂತಜ್ಜರ ವಿಜ್ಞಾನ ಪ್ರೀತಿ ದೊಡ್ಡದು. ಮನುಷ್ಯ ಕ್ರಿಯಾಶೀಲನಾಗಿದ್ದಲ್ಲಿ ಸೃಜನಶೀಲತೆಯ ಯಾವ ಎಲ್ಲೆಯನ್ನೂ ಸಹ ತಲುಪಬಹುದು ಹಾಗು ಯಾವ ಕ್ಷೇತ್ರದಲ್ಲಾದರೂ ಪರಿಣಿತಿ ಹೊಂದಬಹುದು ಎಂಬುದಕ್ಕೆ ಕಾರಂತರು ಒಂದು ಉದಾಹರಣೆಯಾಗಿದ್ದಾರೆ. ಇವರ ವಿಜ್ಞಾನದೆಡೆಗಿನ ಆಸಕ್ತಿ ಹಾಗು ವಿಚಾರಗಳನ್ನು ಕ್ರೋಢೀಕರಿಸಿದಂತಿರುವ ಈ ಲೇಖನ ನಿಜಕ್ಕೂ ಉತ್ತಮವಾಗಿದೆ!

 7. April 24, 2009 at 6:48 am

  ರಾಧಾಕೃಷ್ಣ,

  ಕಾರಂತರನ್ನು ಮತ್ತೆ ನೆನಪಿಸಿದ್ದಕ್ಕಾಗಿ ವಂದನೆಗಳು. ವಿಜ್ಞಾನ ಬರಹದಲ್ಲಿ ಇನ್ನೂ ಎಳೆಯನಾದ ನನ್ನಂಥವನಿಗೆ ಕಾರಂತರ ಬರಹಗಳು ಸದಾ ಸ್ಫೂರ್ತಿದಾಯಕ.

  ನಿಮ್ಮ ಬರಹ ಶೈಲಿ ಚೆನ್ನಾಗಿದೆ, ಜತೆಗೆ ಅಚ್ಚುಕಟ್ಟಾಗಿದೆ. ಕಾರಂತರ ವಿಜ್ಞಾನ ಪ್ರೀತಿಯನ್ನು ಸೊಗಸಾಗಿ ಸೆರೆಹಿಡಿದಿದ್ದೀರಿ. ನಿಮ್ಮಿಂದ ಮತ್ತಷ್ಟು ಬರಹಗಳನ್ನು ನಿರೀಕ್ಷಿಸುವೆ.

  ವಿಶ್ವಾಸದಿಂದ
  ಹಾಲ್ದೊಡ್ಡೇರಿ ಸುಧೀಂದ್ರ

 8. April 26, 2009 at 2:33 pm

  ಪ್ರೀತಿಯ ರಾಧಾಕೃಷ್ಣರವರೆ,

  ನನ್ನ Blog ಬಗ್ಗೆ ತಮ್ಮ ಪ್ರತಿಕ್ರಿಯೆ ಓದಿ ಬಹಳ ಸಂತೋಷವಾಯಿತು. ತಮ್ಮ ಸ್ಪಂದನೆಗೆ ನನ್ನ ಧನ್ಯವಾದಗಳು. ನಿಮ್ಮಂತಹ ಹಿರಿಯರ ಅಶೀರ್ವಾದಗಳಿಂದ ವಿಜ್ಞಾನದ ಅ,ಆ,ಇ,ಈ ಕಲಿಯಲು ನನಗೆ ಸಾಧ್ಯವಾಯಿತು. ಅದನ್ನು ನನ್ನೊಳಗೆ ಇದಬರದೆಂಬ ತುಡಿತದಿಂದ Blog ಮಾಧ್ಯಮವನ್ನು ಆರಿಸಿಕೊಂಡೆ. ಇನ್ನೂ ನಾನು ಈ ಕ್ಷೇತ್ರದಲ್ಲಿ ಅಂಬೆಗಾಲು ಇಡುತ್ತಿದ್ದೇನೆ. ತಮ್ಮ ಬರಹಗಳನ್ನು ನಾನು ಹಿಂದಿನಿಂದಲೂ ಓದುತ್ತಿದ್ದೇನೆ ಮತ್ತು ಮೆಚ್ಚುತ್ತಾ ಬಂದಿದ್ದೇನೆ. ಅಂತರ್ಜಾಲದಲ್ಲಿ ತಮ್ಮ ಬ್ಲಾಗ್!! ನನಗೆ ಬಹಳ ಹಿಡಿಸಿತು. ಖಂಡಿತವಾಗಿಯೂ ನಾನು ಆದಷ್ಟು ಕನ್ನಡ ಖಗೋಳ ಲೇಖನಗಳನ್ನು ಬರೆಯುವ ಪ್ರಯತ್ನ ಮಾಡುತ್ತೇನೆ. ತಮ್ಮ ಅಮೂಲ್ಯವಾದ ಸಮಯದಲ್ಲಿ ಕೆಲ ನಿಮಿಷಗಳನ್ನು ನನ್ನ http://ekhagola.blogspot.com ನ್ನು ಓದಲು ಉಪಯೋಗಿಸಬೇಕಾಗಿ ಕೇಳಿ ಕೊಳ್ಳುತ್ತೇನೆ. ತಮ್ಮಲ್ಲಿ ಉತ್ಸಾಹಿ ವಿದ್ಯಾರ್ಥಿಗಳು ಯಾರಾದರೂ Blog ಕ್ಷೇತ್ರದಲ್ಲಿ (ವಿಜ್ಞಾನ,ಖಗೋಳ) kannada or English ಬರಬೇಕೆನ್ದಿದ್ದರೆ ದಯವಿಟ್ಟು ಅವರ ಲೇಖನಗಳನ್ನು ನನ್ನ email hari.prasad4@wipro.com ಗೆ ಅದೇಭಾಷೆಯಲ್ಲಿ WORD ನಲ್ಲಿ ಬರೆದು ಕಳಿಸಿದರೆ ಅದನ್ನು ಅವರ ಹೆಸರು ಮತ್ತು ವಿವರ ಗಳೊಂದಿಗೆ ನನ್ನ ಬ್ಲಾಗ್ನಲ್ಲಿ ಹಾಕುವ ಯೋಚನೆ ಇದೆ. ತಮಗೆ ಈ ಯೋಜನೆ ಹಿಡಿಸಿದರೆ ಆದಷ್ಟು ಬೇಗ ಇದನ್ನು ಕಾರ್ಯಗತ ಗೊಳಿಸೋಣ. ದಯವಿಟ್ಟು ತಮ್ಮ ಅಭಿಪ್ರಾಯಗಳನ್ನು ತಪ್ಪದೆ hari.prasad4@wipro.com ಗೆ ಕಳಿಸಿ. ಮುಂದೆ ಖಂಡಿತವಾಗಿಯೂ ಭೇಟಿಯಾಗೋಣ.
  ತಮ್ಮ ವಿಶ್ವಾಸಿ,
  ಹರಿ ಪ್ರಸಾದ್
  9972671789

 9. April 28, 2009 at 4:16 am

  ಹೌದು ರಾಧಾಕೃಷ್ಣ ಅವರೇ, ಕಾರಂತರ ಪ್ರತಿಭೆ ಸಹಸ್ರಮುಖಿ. ಅವರ ಕಾದಂಬರಿಗಳನ್ನು ಓದುವಷ್ಟೇ ಸಂತೋಷದಿಂದ ಅವರ ವೈಚಾರಿಕ ಲೇಖನಗಳನ್ನು ಓದಿದ್ದೇನೆ. ವಿಜ್ನಾನ ಸಂಪುಟಗಳನ್ನು ಪರಾಮರ್ಶಿಸಿದ್ದೇನೆ. ಕಾರಂತರಿಗೆ ಕಾರಂತರೇ ಸಾಟಿ. ಸ್ವತಃ ತೇಜಸ್ವಿಯವರೇ ‘ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ……… ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯಶಕ್ತಿಯಾಗಬಲ್ಲಂಥವು ಈ ಮೂರೇ ‘ ಎಂದು ಬರೆದಿದ್ದಾರೆ. ಕಾರಂತರ ‘ನಮ್ಮ ಅಳತೆಯನ್ನು ಮೀರಲಾರದ ದೇವರು’ ಎಂಬ ವೈಚಾರಿಕ ಲೇಖನವೇ ನನ್ನನ್ನು ಅತ್ಯಂತ ಪ್ರಭಾವಿಸಿದ್ದು. ಅವರ ಜೀವದೃಷ್ಟಿಕೋನ ಅದ್ಭುತವಾದದ್ದು.

 10. k.s. nataraj
  May 4, 2009 at 2:57 pm

  It is a beautiful article. Can I make use of this article in our popular science writers work shop to be held at Mandya from 6th of may 2009?
  ksn

 11. anonymous
  June 26, 2009 at 9:20 am

  olle baraha. bahala research madi baredantide. khushi kottitu.

  karantara shaili bagge tippani mattu adakke ashokavardhanara mecchuge eradannu ottige odi nagu bantu.

 12. June 29, 2010 at 1:45 pm

  ರಾಧಾಕೃಷ್ಣ ಅವರೇ,
  ನಿಮ್ಮ ಬ್ಲಾಗ್ ನೋಡಿ ತು೦ಬಾ ಖುಷಿಯಾಯಿತು. ಕಾರ೦ತರ ಬಗ್ಗೆ ಬರೆದ ವಿಶ್ಲೇಷಣಾತ್ಮಕ ಲೇಖನವನ್ನು ಓದಿಯ೦ತೂ ಬಹಳ ಸ೦ತಸ ಪಟ್ಟೆ. ನಮಗೆಲ್ಲಾ ಕಾರ೦ತರೇ ಆದಶ೯. ಅವರದ್ದೇ ಮಾತುಗಳನ್ನು ಅಲ್ಲಲ್ಲಿ ಹಾಕಿದ್ದು ಈ ಲೇಖನದ ಅ೦ದವನ್ನು ಹೆಚ್ಚಿಸಿದೆ. ನಿಮ್ಮ ಬ್ಲಾಗಿನ ಲೇಖನಗಳನ್ನು ಓದಿಯ೦ತೂ ತಾಯಿಗೆ ತಕ್ಕ ಮಗ ಎ೦ದು ಅನಿಸಿತು. ನಿಮ್ಮ ಭಾಷೆ, ಅಭಿವ್ಯಕ್ತಿ ಎಲ್ಲವೂ ಚೆನ್ನಾಗಿದೆ. ನಮ್ಮ ತಲೆಮಾರಿನ ನ೦ತರದವರು ನೀವು. ಬುದ್ಧಿವ೦ತರು. ಖುಷಿಯಾಯಿತು.

 1. No trackbacks yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: