Archive

Archive for ಮಾರ್ಚ್, 2011

ಬೆಳ್ಳುಳ್ಳಿ ಮಾಹಾತ್ಮೆ !

ಮಾರ್ಚ್ 27, 2011 6 comments

ಈ ದಿನ ಉದಯವಾಣಿಯಲ್ಲಿ ನೇಮಿಚಂದ್ರ ತಮ್ಮ ಅಂಕಣದಲ್ಲಿ  ಬರೆದಿದ್ದಾರೆ “ಬೆಳ್ಳುಳ್ಳಿ ಔಷಧಿಗಳ ಸಹಜ ಸಾಗರ”   ಓದಿ ಮೆಚ್ಚಿ ಅವರಿಗೆ ಅವರಿಗೆ ಪತ್ರ ಬರೆಯುತ್ತ ನನ್ನ ಅನುಭವವನ್ನು ತಿಳಿಸಿದೆ. ಮೆಚ್ಚುವುದಕ್ಕೆ ಕಾರಣವನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಆನುವಂಶಿಕವಾಗಿ ಬಂದ ಬಳುವಳಿ ಇರಬೇಕು. ಹೊಟ್ಟೆ ಉರಿ ಅಥವಾ ಎಸಿಡಿಟಿ ನನಗಿರುವ ತೊಂದರೆ.  ಸುಮಾರು ದಶಕಗಳಿಂದ ಎಸಿಡಿಟಿಯಲ್ಲಿ ನರಳತ್ತಿದ್ದೆ. ಖಾರ ಉಂಡರೆ , ಎಣ್ಣೆಯಲ್ಲಿ ಕರಿದ ಗರಿ ಗರಿ ತಿನಿಸು ತಿಂದರೆ ಸಾಕು – ಒಂದೆರಡು ದಿನಗಳಲ್ಲಿ ಶುರು – ಉರಿ- ನೋವು ಇತ್ಯಾದಿ.

ಐದಾರು ವರ್ಷಗಳ ಹಿಂದೆ ಗಂಟಲಿನ ಮೂಲಕ ಉದರದರ್ಶಕ ನಳಿಗೆ ಇಳಿಸಿ ಅಲ್ಲೇನಾದರೂ ಹೊಸ ಒಕ್ಕಲು ಆರಂಭವಾಗಿದೆಯೇ ಎಂದು ನೋಡಬೇಕೆಂದು ಹೇಳಿದಾಗ ಹೌಹಾರಿದೆ.  ಸಹಜವಾಗಿಯೇ ಹೆದರಿಕೆ – ಅಗೋಚರ  ಹೊಟ್ಟೆಯೊಳಗೆ ಮತ್ತೇನಾದರೂ ಗಡ್ಡೆ ಇರಬಹದೆನ್ನುವ ಗುಮಾನಿ. ಈ ನಡುವೆ ಪ್ರಾಯಕ್ಕೆ ಸಹಜವಾಗಿ ಕೊಲೆಸ್ಟೆರಾಲ್ ಇತ್ಯಾದಿ ಪರೀಕ್ಷೆ ಮಾಡಿಸಬೇಕೆಂದು ಹಲವರ ಸಲಹೆ. ಸರಿ ಬೆಳಗ್ಗೆದ್ದು “ಹಾಸಿಗೆ ಚಾ” ಏರಿಸದೇ ನಿರಾಹಾರಿಯಾಗಿ ಪುತ್ತೂರಿಗೆ ಧಾವಿಸಿ ರಕ್ತ ಪರೀಕ್ಷೆ  ಮಾಡಿಸಿದಾಗ ಎಲ್ಲವೂ ಒಂದಷ್ಟು ಏರಿದ್ದನ್ನು ಸಾರಿದುವು.

ಕೊಲೆಸ್ಟೆರಾಲ್ ಅನ್ನುವುದು ನಮ್ಮ ದೇಹದಲ್ಲಿರಬೇಕಂತೆ.  ಇರಬೇಕಾದಷ್ಟೇ ಇದ್ದರೆ ಚಂದ ಮಾರಾಯ್ರೇ. ಹೆಚ್ಚಾದರೆ ಗಡಿಬಿಡಿ ಶುರುವಾಗುತ್ತದಂತೆ.  ಪರೀಕ್ಷೆಯಲ್ಲಿ ನಾನು ಗಳಿಸಿದ ಅಂಕಗಳು ಹೀಗಿದ್ದುವು :

  • ಒಟ್ಟು ಕೊಲೆಸ್ಟೆರಾಲ್ ಅಂಕಗಳು : ೨೬೫ (ಸಜವಾಗಿ ಇರಬೇಕಾದದ್ದು ೧೫೦ – ೨೫೦ ಮಿಲಿಗ್ರಾಂ/ಡೆಸಿಲೀಟರ್)
  • ಟ್ರೈಗ್ಗ್ಲಿಸರೈಡ್ : ೨೩೦ (೧೯೦ರ ತನಕ ಹೋಗಬಹುದು – ವಾಹನಕ್ಕೆ ವೇಗ ಮಿತಿ ಇದ್ದ ಹಾಗೆ)
  • ಹೆಚ್ ಡಿ ಎಲ್ ಕೊಲೆಸ್ಟೆರಾಲ್ : ೫೧.೫  (ಇದು ಹಿರೋ ಅಂತೆ, ಗಂಡಸರಲ್ಲಿ ಇದರ ಸಹಜ ಪ್ರಮಾಣ ೩೫-೫೫, ಹೆಂಗಸರಲ್ಲಿ ೪೫ -೬೫)
  • ಎಲ್ ಡಿ ಎಲ್ ಕೊಲೆಸ್ಟೆರಾಲ್ : ೧೪೦.೫ ( ೧೦೦ಕ್ಕಿಂತ ಕಡಿಮೆ ಇದ್ದರೆ ಉತ್ತಮ)

ಪಡೆದ ಅಂಕಗಳೊಂದಿಗೆ ನಮ್ಮ ವೈದ್ಯರ ಬಳಿಗೆ ಹೋದೆ. ಅವರು ಅಂಕ ಪಟ್ಟಿಯನ್ನು ಗಮನಿಸುತ್ತ ಹೋದಂತೆ ಇಲ್ಲಿ ನನ್ನ ರಕ್ತದೊತ್ತಡ ಏರುತ್ತಿತ್ತು – ಅಧ್ಯಾಪಕ ಮಹಾಶಯ ವಿದ್ಯಾರ್ಥಿಯ ಉತ್ತರ ಪತ್ರವನ್ನು ಗಮನಿಸಿದರೆ ಹೇಗೋ ಹಾಗೆ.

ಕೊನೆಯಲ್ಲಿ ಅವರು ಹೇಳಿದರು” ನೋಡಿ ಇಡೀ ಕೊಲೆಸ್ಟೆರಾಲುಗಳಲ್ಲಿ ಟ್ರೈಗ್ಲಿಸರೈಡ್ ಇದ್ದಾನಲ್ಲ ಇವ  ವಿಲನ್. ನಮ್ಮ ರಕ್ತವನ್ನು ಕೊಂಡೊಯ್ಯುವ ಪೈಪುಗಳಲ್ಲಿ ತುಂಬಿಕೊಳ್ಳುತ್ತ ತೊಂದರೆ ಕೊಡುವ ಇವನ ಬಗ್ಗೆ ಎಚ್ಚರ ಬೇಕು ಅಂತ ನೀವು ಪಡೆದಿರುವ ಕೊಲೆಸ್ಟೆರಾಲ್ ಮಾರ್ಕುಗಳು ಹೇಳುತ್ತವೆ.  ಈ ಮಾತ್ರೆ ತೆಗೆದುಕೊಳ್ಳಿ. ಯಾವುದೇ ದುಷ್ಪರಿಣಾಮ ಇಲ್ಲ”.

ನಾನು ಅಪ್ಪಟ ಸಸ್ಯಹಾರಿ. ಆಹಾರದಲ್ಲಿ ಕಟ್ಟು ನಿಟ್ಟು – ತಿಂದದ್ದು ಜೀರ್ಣ ಆಗದಿದ್ದರೆ ಕಟ್ಟುನಿಟ್ಟು ಆಗದೇ ಬೇರೇನು ಮಾಡಬೇಕು? ಹೇಳಿ ಕೇಳಿ ಕೃಷ್ಣ – ತುಸು ಬೆಣ್ಣೆ ಮತ್ತು ಮೊಸರು ಪ್ರಿಯ. ಅವೆರಡನ್ನು ಪೂರ್ಣ ಬಿಟ್ಟೆ.

ಸರಿ ಮಾತ್ರೆ ತೆಗೆದುಕೊಳ್ಳುವುದಕ್ಕೆ ಆರಂಭಿಸಿದೆ ದಿನದೊಳಗೆ ಅದು ತನ್ನ ಕೆಲಸ ಆರಂಭಿಸಿತೋ ತಿಳಿಯದು – ತಲೆ ಸುತ್ತತೊಡಗಿತು. ಮೈಕೈ ನೋವು. ಮತ್ತೆ ಓಡಿದೆ ವೈದ್ಯರ ಬಳಿಗೆ. ಆ ಮಾತ್ರೆಯನ್ನು ಮತ್ತರ್ಧ ಮಾಡಿ ತೆಗೆದುಕೊಳ್ಳುವುದಕ್ಕೆ ಸೂಚಿಸಿದರು. ಧೈರ್ಯ ಬರಲಿಲ್ಲ. ಪೂರ್ಣ ಬಿಟ್ಟೆ.

ಇದು ಮಾಹಿತಿ ಯುಗ. ಜಾಲಾಡತೊಡಗಿದೆ – ಮಾಹಿತಿ ಸಾಗರದಲ್ಲಿ – ಸಹಜ ಪರಿಹಾರಕ್ಕೆ. ಆಗ ನನಗೆ ಸಿಕ್ಕಿದ್ದು ಬೆಳ್ಳುಳ್ಳಿ.  ಬಹು ಸಂಖ್ಯಾತರು ಸೂಚಿಸಿದ್ದು ಬೆಳ್ಳುಳ್ಳಿಯನ್ನು. ಎಸಿಡಿಟಿ ಮತ್ತು ಕೊಲೆಸ್ಟೆರಾಲ್ ಶೇಖರಣೆಯ ತಡೆಗೆ ಬೆಳ್ಳುಳ್ಳಿ ರಾಮ ಬಾಣವೆನ್ನುವ ಸಂಶೋಧನ ಲೇಖನಗಳು ಕೂಡ ಸಿಕ್ಕಿತು. ಇದರೊಂದಿಗೆ ಮೀನಿನೆಣ್ಣೆಯ ಮಾತ್ರೆ – cod lever tablet – ಅತ್ಯುತ್ತಮ.

ಪ್ರಯೋಗ ಆರಂಭಿಸಿದೆ. ಪ್ರತಿ ದಿನ ಬೆಳಗ್ಗೆಎದ್ದೊಡನೆ ಮೂರು ಎಸಳು ಹಸಿ ಹಸಿ ಬೆಳ್ಳುಳ್ಳಿ ಜಗಿದು ನುಂಗಿ ನೀರು ಕುಡಿದೆ!. ರಾತ್ರೆ ಒಂದು cod lever ಮಾತ್ರೆ. ಅಪ್ಪಟ ಸಸ್ಯಹಾರಿ ಮಾಂಸಹಾರಿಯಾದೆ! ಇದರೊಂದಿಗೆ ಹಸಿರು ತರಕಾರೀ ಸೇವನೆ ಹೆಚ್ಚಿಸಿದೆ.

ಬೆಳ್ಳುಳ್ಳಿ ಅದೆಂಥ ಖಾರ ಘಾಟು ಮಾರಾಯ್ರೇ. ಆದರೂ ಆ ಮಾತ್ರೆಗಿಂತ ಇದು ವಾಸಿ. ಹತ್ತಿರ ಬಿಡಿ – ಸುದೂರ ಇದ್ದವರಿಗೂ ತೊಂದರೆ. ವಾಸನೆ ಕಡಿಮೆ ಮಾಡಲು ಲವಂಗ ಸೇವನೆ. ಲವಂಗ ಕೂಡ ಎಸಿಡಿಟಿ ಹರ ತಾನೇ! ವಾರ ಕಳೆಯುವುದರೊಳಗೆ ಎಸಿಡಿಟಿಯ ತೊಂದರೆಗಳು ಕಡಿಮೆಯಾಗುತ್ತ ಬಂದ ಅನುಭವ. ತಿಂಗಳೊಳಗೆ ಮಂಗ ಮಾಯ. ದಶಕಗಳಿದ ಕಾಡುತ್ತಿದ್ದ ಹೊಟ್ಟೆ ಉರಿ-ನೋವು ಈಗ ಲವಲೇಶವೂ ಇಲ್ಲ.

ಎರಡೆರಡು ಬಾರಿ ರಕ್ತ ಪರೀಕ್ಷೆ ಮಾಡಿಸಿದೆ. ಈ ಬಾರಿ ದೊರೆತ ಅಂಕಗಳು ಹೀಗಿವೆ

  • ಒಟ್ಟು ಕೊಲೆಸ್ಟೆರಾಲ್ ಅಂಕಗಳು : ೧೫೫,  ಟ್ರೈಗ್ಗ್ಲಿಸರೈಡ್ : ೧೪೫,  ಹೆಚ್ ಡಿ ಎಲ್ ಕೊಲೆಸ್ಟೆರಾಲ್ : ೪೫,  ಎಲ್ ಡಿ ಎಲ್ ಕೊಲೆಸ್ಟೆರಾಲ್ : ೯೬

ಸ್ಪಷ್ಟವಾಗಿ ಕಡಿಮೆಯಾಗಿ ಎಲ್ಲವೂ ಇಂದು ಮಾಮೂಲಿಗೆ ಬಂದು  ಸದ್ಯಕ್ಕೆ ಡಿಸ್ಟಿಂಕ್ಷನ್ನಿನಲ್ಲಿ ಉತ್ತೀರ್ಣನಾಗಿ ಜಗವ ಗೆದ್ದ ಖುಷಿಯಲ್ಲಿದ್ದೇನೆ.

ಈಗ ಬೆಳ್ಳುಳ್ಳಿ ಸೇವಿಸುವುದನ್ನು ಬಿಟ್ಟಿದ್ದೇನೆ – ತಪ್ಪೋ ಸರಿಯೋ ತಿಳಿಯದು. ಹೊಟ್ಟೆಯ ತಳಮಳವಾದಾಗ ಮತ್ತೆ ಸೇವಿಸಿದೊಡನೆ ಎಲ್ಲ ನಿರಾಳವಾದ ಅನುಭವ.  ಎಂದೇ ಇದೆಲ್ಲವೂ ಬೆಳ್ಳುಳ್ಳಿಯ ಮಹಿಮೆ ಎಂಬ ನಂಬಿಕೆ ನನಗೆ. ಸರಿಯೇ? – ತಿಳಿಯದು.

ನಿಮ್ಮ ಅನುಭವ ಏನು?

ರಾಧಾಕೃಷ್ಣ

Advertisements
Categories: ಅವಿಭಾಗೀಕೃತ

ಭೂಕಂಪಕ್ಕೆ ತತ್ತರ ಪರಮಾಣು ಸ್ಥಾವರ

ಮಾರ್ಚ್ 22, 2011 10 comments

ಎಂಬತ್ತರ ದಶಕ. ನಾವೆಲ್ಲ ಕಾಲೇಜು ವಿದ್ಯಾರ್ಥಿಗಳು. ಉತ್ತರ ಕನ್ನಡದ ಕಾರವಾರ ಸಮೀಪ ಕಾಳೀ ನದಿಯ ತಟದ ಕಾನನ ಪ್ರದೇಶವಾದ ಕೈಗಾದಲ್ಲಿ ಉದ್ಧೇಶಿತ ಪರಮಾಣು ಸ್ಥಾವರದ ವಿರುದ್ಧ ಪರಿಸರವಾದಿಗಳು ನಡೆಸುತ್ತಿದ್ದ ಶಾಂತಿಯುತ ಹೋರಾಟವನ್ನು ಕುತೂಹಲದಿಂದ ಗಮನಿಸುತ್ತಿದ್ದ ಕಾಲ. ಹೋರಾಟದ ಮುಂಚೂಣಿಯಲ್ಲಿದ್ದ ಶಿವರಾಮ ಕಾರಂತರು ಅಂದು ಅಕ್ಷರಶ: ಭಾರ್ಗವನೇ ಆಗಿದ್ದರು. ನಾಗೇಶ್ ಹೆಗ್ಡೆ, ಕಲ್ಕುಳಿ ವಿಠಲ ಹೆಗ್ಡೆ, ಕ್ಲಾಡ್ ಆಲ್ವಾರಿಸ್, ಶಂಪಾ ದೈತೋಟ ಹೀಗೇ ಹಲವು ಮಂದಿ ಪರಿಸರ ಪ್ರಿಯರು ಅಂದು ಕೈಗಾ ವಿರುದ್ಧ ದನಿ ಎತ್ತಿದ್ದರು. ಪರಮಾಣು ಸ್ಥಾವರ ಅಥವಾ ರಿಯಾಕ್ಟರ್ ಬಗ್ಗೆ ಅಂದು ಪರ ವಿರೋಧದ ಚರ್ಚೆಗಳು ಬಿರುಸಿನಿಂದ ನಡೆಯುತ್ತಿದ್ದುವು. ರಿಯಾಕ್ಟರಿನಿಂದ ಉತ್ಪಾಟನೆಗೊಳ್ಳುವ ಹೊರಸೂಸುವ ವಿಕಿರಣಗಳು, ಅದರ ತ್ಯಾಜ್ಯದ ವಿಲೇವಾರಿಯ ಸಮಸ್ಯೆ, ವಿಕಿರಣಶೀಲ ರಾಸಾಯನಿಕಗಳು ವರ್ಷಗಟ್ಟಲೆ ಉಳಿದು ಜೈವಿಕ ಪರಿಣಾಮವನ್ನು ಬೀರುವ ಅಪಾಯಗಳ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದುವು ಸಭೆಗಳಲ್ಲಿ, ಪತ್ರಿಕೆಗಳಲ್ಲಿ. ಭೂಕಂಪ ಸಂಭವಿಸಿ ಪರಮಾಣು ಸ್ಥಾವರ ತೀವ್ರ ಅವಘಡಕ್ಕೆ ಒಳಗಾಗುವ ಅಪಾಯದ ಕುರಿತು ಹೆಚ್ಚಿನ ಚರ್ಚೆಗಳಲ್ಲಿ ಪ್ರಸ್ತಾವವಾಗುತ್ತಿತ್ತು. ಪರಮಾಣು ಸ್ಥಾವರದ ಪರವಾಗಿ ವಾದಿಸುತ್ತಿದ್ದ ತಜ್ಞರು “ಅಂಥ ಅಪಾಯವೇನೂ ಬರದು ಮತ್ತು ಅದಕ್ಕಾಗಿ ಎಲ್ಲ ಎಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗುತ್ತದೆ’ ಎನ್ನುತ್ತ ಜಪಾನನ್ನು ಉದಾಹರಿಸುತ್ತಿದ್ದರು.

Read more…

Categories: ಅವಿಭಾಗೀಕೃತ
%d bloggers like this: