ಬಾನಿಗೊಂದು ಎಲ್ಲೆ ಎಲ್ಲಿದೆ … ಬಾನೇರುವ ಕನಸಿಗೂ ಇಲ್ಲ !

November 12, 2013 1 comment

” ಗದ್ದಲದ ನಡುವೆಯೂ ಸಂಗೀತವನ್ನು ಆಲಿಸುವಾತ ಮಹತ್ತಾದದ್ದನ್ನು ಸಾಧಿಸಬಲ್ಲ

-ವಿಕ್ರಂ ಸಾರಾಭಾಯಿ, ಭಾರತದ ವ್ಯೋಮ ವಿಜ್ಞಾನದ ಪಿತಾಮಹ

Image

ಅದರ ಹೆಸರು ಮೊಮ್ (MOM) – ಮಾರ್ಸ್ ಆರ್ಬಿಟರ್ ಮಿಶನ್ – ಕನ್ನಡದಲ್ಲಿ ಮಂಗಳ ಪರಿಭ್ರಮಣ ನೌಕೆ. ನವೆಂಬರ್ ೪, ದೇಶದೆಲ್ಲೆಡೆ ದೀಪಾವಳಿ ಸಂಭ್ರಮ. ಇತ್ತ ಆಂದ್ರ ಸಮುದ್ರ ತೀರದ ಶ್ರೀಹರಿಕೋಟಾದ ಸತೀಶ್‌ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಲ್ಲಿ ಮಂಗಳನೌಕೆಯನ್ನು ತನ್ನ ಮೂತಿಯಲ್ಲಿ ಹೊತ್ತ ಬೃಹದಾಕಾರದ ಪಿಎಸೆಲ್‌ವಿ ನೌಕೆ ರಾಕೆಟ್ ಆಕಾಶಕ್ಕೆ ಮುಖ ಚಾಚಿ ನಿಂತಿದೆ. ಮಂಗಳನೆಡೆಗೆ ಸಾಗಲಿರುವ ಪುಟ್ಟ ನೌಕೆಗೆ ಇಸ್ರೋ ವಿಜ್ಞಾನಿಗಳು ಅಂದು ಸಿದ್ಧಮಾಡಿದ ಭಾವಪೂರ್ಣ ವಿದಾಯ ಹೀಗಿದೆ :

ಪ್ರಾಯಶ: ಇದು ಕೊನೆಯ ದೀಪಾವಳಿಯ ಇರುಳು – ನಾವು ಭಾರತೀಯರು ಭೂಮಾತೆಗೆ ಅಂಟಿಕೊಂಡು ಆಗಸದಲ್ಲಿ ಕಾಣುತ್ತಿರುವ ಕೆಂಬಣ್ಣದ ಚಿಕ್ಕೆಯನ್ನು ನೋಡುತ್ತಿದ್ದೇವೆ. ಇರುಳು ಕಳೆದು ಬೆಳಗು ಮೂಡುತ್ತಿರುವಂತೆ ಹೊಸ ಭವಿಷ್ಯದ ನಿರೀಕ್ಷೆಗಳನ್ನು ಹೊತ್ತು ಪಿಎಸೆಲ್‌ವಿ ಸಿ೨೫ ನಭಕ್ಕೆ ಏರಲಿದೆ – ಈ ಭುವಿಯಲ್ಲಿ ಭಾರತೀಯರೆಂದು ಕರೆಯಲ್ಪಡುವ ನೂರಿಪ್ಪತ್ತು ಕೋಟಿ ಜನರ ಅಗಾಧ ನಿರೀಕ್ಷೆ ಮತ್ತು ಪ್ರಾರ್ಥನೆ ಹೊತ್ತು. ನಾವು ಕೆಂಬಣ್ಣದ ಮಂಗಳನನ್ನು ಕೇವಲ ಭುವಿಯಿಂದಲೇ ವೀಕ್ಷಿಸುವುದಕ್ಕೆ ಸೀಮಿತರಾಗೆವು. ನಮ್ಮ ಮಗು (ಅಲ್ಲ, ಮೊಮ್ !) ಸುದೀರ್ಘ ಯಾನಕ್ಕೆ ಅಡಿ ಇಡಲಿದೆ – ಇದರೊಂದಿಗೆ ನಮ್ಮ ಕನಸುಗಳನ್ನು ಆಕಾಶದಂತರಾಳಕ್ಕೆ ಒಯ್ಯುತ್ತ – ವಿಶ್ವ ಮತ್ತು ಜೀವ ವಿಸ್ಮಯವನ್ನು ಅನಾವರಣಗೊಳಿಸುತ್ತ. ಇದು ಸೌರವ್ಯೂಹದ ನಮ್ಮ ಅಧ್ಯಯನದಲ್ಲಿ ನವ ಅಧ್ಯಾಯದ ಆರಂಭ

ನವೆಂಬರ್ ೫. ಮಧ್ಯಾಹ್ನ ೨.೩೮ಕ್ಕೆ ಸರಿಯಾಗಿ ಬಣ್ಣದ ಬೆಂಕಿ ಮತ್ತು ಶುಭ್ರ ಬಿಳಿಯ ದಟ್ಟ ಹೊಗೆ ಉಗುಳುತ್ತ ರಾಕೆಟ್ ನಭಕ್ಕೇರಿತು. ಪಠ್ಯ ಪುಸ್ತಕಗಳಲ್ಲಿ ವಿವರಿಸಿದಂಥ ಸರಾಗವಾದ ಉಡಾವಣೆ. ಭಾರತದ ವ್ಯೋಮ ನಡೆಗೆ ಅಂದು ಇನ್ನೊಂದು ಮುನ್ನಡೆ; ಇಸ್ರೋ ವಿಜ್ಞಾನಿಗಳ ಯಶಸ್ಸಿಗೆ ಸೇರಿತು ಮತ್ತೊಂದು ಗರಿ. 2013-11-06T054814Z_01_DEL02_RTRIDSP_3_INDIA-MARS-06-11-2013-07-11-09-539ಬಾನ ಕನಸಿನ ಹಾದಿ

ಬೆಟ್ಟದಷ್ಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳು ಸುತ್ತಿರುವಾಗ ಸುರು ಸುರು ಬತ್ತಿಯ ರಾಕೇಟ್-ಪಟಾಕಿ ಹೊಟ್ಟಿಸುತ್ತಿರುವ ಟೀಕಾಕಾರ ಖಂಡಾತರದಾಚೆಗಿನ ತನ್ನ ಗೆಳೆಯನಿಗೆ ಕೈಯಗಲಗದ ಮೊಬೈಲಿನಿಂದ ಹೇಳುವುದು ಕೇಳಿಸುತ್ತಿದೆ – “ನಮಗೆ ಬೇಕಿರಲಿಲ್ಲ ಈ ವ್ಯೋಮಕ್ಕೇರುವ ಹುಚ್ಚು. ನಾಲ್ನೂರೈವತ್ತು ಕೋಟಿ ರೂಪಾಯಿ ನೀರ ಮೇಲಿನ ಗುಳ್ಳೆ .. ಈ ಯೋಜನೆಯನ್ನು ಜನರ ಅಭ್ಯುದಯಕ್ಕೆ ಬಳಸಬಹುದಿತ್ತು, ನೋಡು, ಇದು ಬಿಳಿಯಾನೆ”.
ಈ ದನಿ ಎಲ್ಲೋ ಕೇಳಿದಂತಿದೆಯಲ್ಲ!  ನಾಲ್ಕು ದಶಕಗಳ ಹಿಂದೆ ಭಾರತದ ವ್ಯೋಮ ಯೋಜನೆಗಳು ಆರಂಭವಾದ ದಿನಗಳಲ್ಲಿಯೂ ಈ ದನಿ ಇತ್ತು – ಇನ್ನಷ್ಟು ಪ್ರಬಲವಾಗಿ, ಗದ್ದಲ ಎಬ್ಬಿಸುತ್ತ. ನಿಜ, ಭಾರತವೆನ್ನುವುದು ಅಗಾಧ ವೈರುದ್ಧ್ಯಗಳ ನಾಡು. ಬಡವ – ಶ್ರೀಮಂತರ ನಡುವೆ ಅಗಾಧ ಕಂದರ. ಭ್ರಷ್ಠ ರಾಜಕಾರಣ, ಮತೀಯ ಮತ್ತು ಮೂಢ ಆಚಾರಗಳ ಅಂಧತೆ, ಉಗ್ರಗಾಮಿಗಳಿಂದ ಹಿಂಸೆ, ನಡುವೆ ಐಪಿಎಲ್ ಸಂಭ್ರಮ, ರಂಗು ರಂಗಿನಾಟ. ಕಾಡುತ್ತಿರುವ ಸಮಸ್ಯೆಗಳು ನೂರಾರು. ಇವೆಲ್ಲವುಗಳ ನಡುವೆ ವೈಜ್ಞಾನಿಕವಾಗಿ ಮುನ್ನಡೆಯುವ ಸವಾಲು.

ಶತ ಶತಮಾನಗಳ ಪರಕೀಯ ಆಳ್ವಿಕೆಯ ದಾಸ್ಯದಿಂದ ಬಿಡಿಸಿಕೊಂಡು ಸ್ವಾತಂತ್ರ್ಯದ ಸವಿಯೊಂದಿಗೆ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಂಬೆಗಾಲಿಕ್ಕತೊಡಗಿದ ಆ ದಿನಗಳಲ್ಲಿ ಹೋಮಿಭಾಭಾ, ವಿಕ್ರಂ ಸಾರಾಭಾಯಿ ಮತ್ತು ಇತರರು ಪರಮಾಣು ಹಾಗೂ ವ್ಯೋಮ ಸಂಶೋಧನೆಗೆ ಸಂಸ್ಥೆಗಳನ್ನು ಕಟ್ಟಿದರು; ಮುಂಚೂಣಿ ರಾಷ್ಟ್ರಗಳೊಂದಿಗೆ ಹೆಜ್ಜೆ ಇಕ್ಕುವ ಕನಸು ಕಂಡರು. ಬಾಹ್ಯಾಕಾಶ ಸಂಶೋಧನೆಗೆ ಮೀಸಲಾದ ಪ್ರತ್ಯೇಕ ಸ್ವಾಯತ್ತ ಸಂಸ್ಥೆ ಇಸ್ರೋ ಅಸ್ತಿತ್ವಕ್ಕೆ ಬಂದಾಗ (೧೯೬೨) ವ್ಯೋಮ ಯೋಜನೆಗಳಿಗೆ ದೊರೆಯಿತು ಇನ್ನಷ್ಟು ನೂಕುಬಲ.

ಸೈಕಲ್ ಹಿಂದೆ ರಾಕೆಟ್ ಹೊತ್ತು ಉಡಾವಣಾ ಕೇಂದ್ರಕ್ಕೆ ಒಯ್ಯುತ್ತಿದ್ದ ಕಠಿಣ ಸವಾಲಿನ ದಿನಗಳನ್ನೆಲ್ಲ ದಾಟಿದ ಇಸ್ರೋ, ತನ್ನ  ಪುಟ್ಟ ಉಪಗ್ರಹ ಆರ್ಯಭಟನನ್ನು ರಷ್ಯಾದ ಬಾಹ್ಯಾಕಾಶ ಕೇಂದ್ರದಿಂದ ಭೂಕಕ್ಷೆಗೇರಿಸಿ ವ್ಯೋಮಕ್ಕೆ ಅಡಿ ಇಟ್ಟದ್ದು ಇಂದು ಇತಿಹಾಸ (೧೯೭೫, ಎಪ್ರಿಲ್೧೯). ನಂತರದ ದಿನಗಳಲ್ಲಿ ಭಾಸ್ಕರ,

ರೋಹಿಣಿImage , ಇನ್ಸಾಟ್ ಮೊದಲಾದ ಉಪಗ್ರಹಗಳೆಲ್ಲ ನಮ್ಮ ನೆಲದಿಂದಲೇ ಯಶಸ್ವಿಯಾಗಿ ಗಗನಕ್ಕೇರಿದುವು ಬೇರೆ ಬೇರೆ ಉದ್ಧೇಶಗಳಿಗಾಗಿ. ಅಂದು ನಾವು ವ್ಯೋಮ ಸಾಹಸಕ್ಕೆ ತೊಡಗದೇ ಹೋಗಿದ್ದರೆ ಇಂದಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಬೆರಗಿನ ಸಾಧನೆಯ ಮೆರುಗು ಇರುತ್ತಿರಲಿಲ್ಲ. ಸಾವಿರಾರು ಕೋಟಿ ರೂಪಾಯಿ ವಾರ್ಷಿಕ ಆದಾಯ ತರುವ ತರುವ ಮಾಹಿತಿ ತಂತ್ರಜ್ಞಾನದ ಹಿಂದೆ ಇಸ್ರೋ ನಿರ್ಮಿತ ಸ್ವದೇಶೀ ಉಪಗ್ರಹಗಳ ಜಾಲವೇ ಇದೆ ಎನ್ನುವುದನ್ನು ಮರೆಯಲಾಗದು. ಇತ್ತೀಚೆಗೆ ಪೂರ್ವ ಕರಾವಳಿಗೆ ಬಡಿದ ಫೈಲಿನ್ ಚಂಡಮಾರುತದ ಚಿಕ್ಕ ನಿದರ್ಶನ ಸಾಕು – ನಮಗೇಕೆ ಬೇಕು ವ್ಯೋಮ ಸಂಶೋಧನೆ ಎನ್ನುವುದಕ್ಕೆ. ದಶಕಗಳ ಹಿಂದೆ ಇಂಥ ಚಂಡ ಮಾರುತಕ್ಕೆ ಲಕ್ಷಕ್ಕೂ ಮಿಕ್ಕಿ ಜನರು ನಲುಗಿ ಹೋದ ಘಟನೆಗಳಾಗಿತ್ತು. ಆದರೆ, ಇಸ್ರೋ ಹಾರಿಸಿ ಬಿಟ್ಟಿದ್ದ ಹವಾಮಾನ ಉಪಗ್ರಹಗಳು ಫೈಲಿನ್ ಚಂಡಮಾರುತದ ಹಾದಿಯನ್ನು ಅದರ ವೇಗ, ಶಕ್ತಿ ಮತ್ತಿತರ ಎಲ್ಲ ಮಾಹಿತಿಗಳನ್ನು ಪ್ರತಿ ಕ್ಷಣವೂ ಹವಾಮಾನ ಕೇಂದ್ರಗಳಿಗೆ ರವಾನಿಸಿದುವು. ಅನುಸರಿಸಿದ ಎಚ್ಚರಿಕೆಯ ಕ್ರಮಗಳಿಂದಾಗಿ ಸಂಭವಿಸಿದ ಸಾವು ಅತ್ಯಂತ ಕನಿಷ್ಠ.

ಮಂಗಳ ಯಾನದಿಂದ ಹಲವು ಪರೋಕ್ಷ ಉಪಯೋಗಗಳಿವೆ ಎನ್ನುವುದನ್ನು ಗಮನಿಸಬೇಕು. ನೌಕೆಯಲ್ಲಿರುವ ನಾಜೂಕು ಉಪಕರಣಗಳ ನಿರ್ಮಾಣಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಕೈಗಾರ್ಕೆಗಳ ಅಭಿವೃದ್ದಿಯಾಗುತ್ತದೆ. ಯುವ ತಂತ್ರವಿದರಿಗೆ, ವಿಜ್ಞಾನಿಗಳಿಗೆ ಹೊಸ ಅವಕಾಶ, ಹೊಸ ಸವಾಲು. ಪರ್ವತವನ್ನು ಏರುವ ಸಾಹಸಿಯನ್ನು ನೋಡಿ ಬೆರಗಾಗುವುದಕ್ಕಿಂತ, ಪರ್ವತವನ್ನೇರಿ ಅಲ್ಲಿಂದ ಸುತ್ತಲಿನ ಬೆರಗನ್ನು ವೀಕ್ಷಿಸುವುದು ಹೆಚ್ಚು ಆಪ್ಯಾಯಮಾನವಾದದ್ದು.

ತಿಂಗಳಿನಿಂದ ಮಂಗಳನೆಡೆಗೆ ….

Image
ದೂರಾನುಸಾರ ಸೂರ್ಯನಿಂದ ಚತುರ್ಥ ಸ್ಥಾನದಲ್ಲಿರುವ ಮಂಗಳ ಗ್ರಹದ ಬಣ್ಣ ಕೆಂಪು. ಹಾಗಾಗಿ ಇದಕ್ಕೆ ಅಂಗಾರಕ ಎಂಬ ಹೆಸರನ್ನಿಟ್ಟರು ನಮ್ಮ ಪ್ರಾಚೀನರು. ಯುದ್ಧದೇವತೆ ಅಂದರು ಪಾಶ್ಚಿಮಾತ್ಯರು. ನಾವು ಸೂರ್ಯನಿಂದ ಸುಮಾರು ೧೫೦೦ ಲಕ್ಷಕಿಮೀ ದೂರದಲ್ಲಿದ್ದರೆ, ಇಲ್ಲಿಂದ ಮತ್ತೆ ೭೫೦ ಲಕ್ಷ ಕಿಮೀ ಕ್ರಮಿಸಿದರೆ ಸಾಕು ಮಂಗಳನನ್ನು ತಲುಪಬಹುದು. ಬಹುಪಾಲು ಭೂಮಿಯ ಹಾಗೆಯೇ ಇಲ್ಲಿದೆ ಪರಿಸ್ಥಿತಿ – ದಟ್ಟ ವಾಯುಮಂಡಲ ಮತ್ತು ಗಿಜಿಗುಟ್ಟುತ್ತಿರುವ ಜೀವರಾಶಿಯ ಹೊರತಾಗಿ!
ತನ್ನ ಅಕ್ಷದ ಸುತ್ತ ತುಸು ವಾಲಿಕೊಂಡು ಪ್ರತಿ ೨೪ ಗಂಟೆ ೩೭ ನಿಮಿಷಗಳಲ್ಲಿ ಒಂದು ಸುತ್ತು ಮುಗಿಸುವ ಮಂಗಳನಲ್ಲಿ ಹಗಲು ರಾತ್ರೆಯ ಅವಧಿಗಳು, ಋತುಗಳ ಬದಲಾವಣೆ ಭೂಮಿಯಂತೆಯೇ ಇದೆ. ಉಷ್ಣತೆಯ ಏರಿಳಿತ ಕೂಡ. ಜೀವ ಲೋಕದ ಉಗಮಕ್ಕೆ ಸಹ್ಯ ವಾತಾವರಣ. ಆದರೆ ಮಂಗಳನಲ್ಲಿಲ್ಲ ದಟ್ಟ ವಾಯುಮಂಡಲ. ಶೇಕಡಾ ೯೫ಭಾಗ ಕಾರ್ಬನ್ ಡೈಆಕ್ಸೈಡ್, ಒಂದಿಷ್ಟು ಆಮ್ಲಜನಕ ಅಥವಾಅಕ್ಸಿಜನ್ ಮತ್ತು ನೈಟ್ರೋಜನ್. ಜೀವಿಗಳ ಉಗಮಕ್ಕೆ ಅತ್ಯಂತ ಅಗತ್ಯವಾದ ಮಿಥೇನ್ ಇರಬಹುದೆನ್ನುವ ಗುಮಾನಿ. ಮಿಥೇನ್ ಅನಿಲದ ಪ್ರಮಾಣವನ್ನು ಅಳೆಯುವುದು ನಮ್ಮ ಮಂಗಳಯಾನದ ಬಹು ಮುಖ್ಯ ಉದ್ದೇಶ.
೧೮೭೭ರಷ್ಟು ಹಿಂದೆ ಇಟೆಲಿಯ ಖಗೋಳವಿದ ಗಿವಾನಿ ಶ್ಚಿಪಾರೆಲಿ (೧೮೩೫-೧೯೧೦) ಮಂಗಳನಲ್ಲಿ ಕಂಡ ಕಪ್ಪು ಗೆರೆಗಳನ್ನು ಜೀವಿಗಳು ನಿರ್ಮಿಸಿದ ಕಾಲುವೆ (canals)ಎಂದು ಕಲ್ಪಿಸಿದ. ಅಮೇರಿಕದ ಖಗೋಲವಿದ ಪೆರ್ಸೀವಿಯಲ್ ಲೊವೆಲ್ (೧೮೫೫-೧೯೧೬) ವರ್ಷಗಳ ಕಾಲ ಮಂಗಳನನ್ನು ಅಧ್ಯಯನಿಸಿ ಈ ಕಾಲುವೆಗಳ ಕುರಿತು ನಕ್ಷೆ ರಚಿಸಿದ; ನೀರ ಕಾಲುವೆಯ ಮೂಲಕ ವಿಕಸಿಸಿರುವ ನಾಗರೀಕತೆಯ ಬಗ್ಗೆ ಕಥೆಗಳನ್ನು ಬರೆದ. ಮಂಗಳನಲ್ಲಿ ಜೀವಿಗಳಿರುವ ಕಲ್ಪನೆಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡಿತು. ಆದರೆ ವಿಜ್ಞಾನ, ತಂತ್ರಜ್ಞಾನ ಮತ್ತು ನಾಗರೀಕತೆ ಪ್ರವರ್ಧಿಸುವುದು ಕೇವಲ ಕಥೆ, ಕಲ್ಪನೆಯಿಂದಲ್ಲ ತಾನೇ. ಮಂಗಳನ ಬಳಿ ಸಾರಿ, ಮಾನವ ರಹಿತ ನೌಕೆ ಇಳಿಸಿ ಅಲ್ಲಿನ ಕಲ್ಲು ಮಣ್ಣುಗಳ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸುವ ಪ್ರಯತ್ನಗಳು ಆರಂಭವಾಯಿತು.
ಐತಿಹಾಸಿಕ ಕಾರಣಗಳಿಂದಾಗಿ ಅಮೇರಿಕ, ಸೊವಿಯಟ್ ರಷ್ಯಾ ವ್ಯೋಮ ವಿಜ್ಞಾನಕ್ಕೆ ಮೊದಲು ತೊಡಗಿದ ರಾಷ್ಟ್ರಗಳು. ೧೯೬೪-೧೯೭೪ರ ನಡುವೆ ನಾಸಾ ಕಳುಹಿಸಿತು ಹತ್ತು ಮ್ಯಾರಿನರ್ ನೌಕೆಗಳಲ್ಲಿ ಅರ್ಧಾಂಶ ನೌಕೆಗಳು ದಯನೀಯ ವೈಫಲ್ಯ ಅನುಭವಿಸಿದುವು. ನಂತರ ಬಂದ ವೈಕಿಂಗ್ (೧೯೭೬) ಮಂಗಳನ ಅಂಗಳದಲ್ಲಿ ಕಾಲಿಟ್ಟು ಇತಿಹಾಸ ನಿರ್ಮಿಸಿದರೆ, ಇತ್ತೀಚೆಗಿನ ಪಾಥ್ ಫೈಂಡರ್, ಒಪಾರ್ಚ್ಯುನಿಟಿ, ಕ್ಯೂರಿಯಾಸಿಟಿಗಳು ಮಂಗಳ ಗ್ರಹದ ಮೇಲೆ ಓಡಾಡುತ್ತ ಅಲ್ಲಿ ಬೀಸುವ ಬಿರುಗಾಳಿ, ಏರಿಳಿತದ ತಾಪಮಾನದ, ವಿರಳ ಕಾಂತತ್ವ .. ಹೀಗೆ ನೀಡಿರುವ ಮಾಹಿತಿ ಅಗಾಧ.

ಇವ್ಯಾವುವೂ ಮಂಗಳನ ಅಂಗಳದಲ್ಲಿ ಯಾವುದೇ ಸೂಕ್ಷ್ಮ ಜೀವಿಗಳನ್ನು ಗುರುತಿಸಿಲ್ಲ. ಆದರೆ ನಿಸರ್ಗ ಅಷ್ಟು ಬೇಗ ಗುಟ್ಟು ಬಿಟ್ಟು ಕೊಡುವುದಿಲ್ಲ ಅನ್ನುವುದು ವಿಜ್ಞಾನದ ಗತಿ ಹೇಳುತ್ತದೆ. ಎಷ್ಟು ಪ್ರಯೋಗಗಳು, ಅಧ್ಯಯನಗಳು ಮಾಡಿದರೂ ಸಾಲದು – ಇದು ಎಂದೂ ಮುಗಿಯದ ಪಯಣ. ಅದಕ್ಕೆಂದೇ ನಾವೂ ಹೊರಟಿದ್ದೇವೆ ನಮ್ಮ ಮಿತಿಯೊಳಗೆ ಮಂಗಳನ ಕಡೆಗೆ, ಇನ್ನಷ್ಟು ಅಧ್ಯಯನಕ್ಕೆ.NASA_Mars_Rover
ಹಾಗೆ ನೋಡಿದರೆ ಇಡೀ ಯೋಜನೆಗೆ ತಗಲಿದ ವೆಚ್ಚ ೪೯೦ಕೋಟಿ. ಇದು ಅಷ್ಟೇನೂ ದುಬಾರಿಯಲ್ಲ. ಒಂದು ಅಂತಾರಾಷ್ತ್ರೀಯ ಕ್ರೀಡಾಕೂಟಕ್ಕೆ ತಗಲುವ ವೆಚ್ಚಕ್ಕೆ ಸರಿ ಸಮವಾದದ್ದು. ಅಮೇರಿಕದ ಇತ್ತೀಚೆಗಿನ ಮಂಗಳ ಯೋಜನೆ ಮೆವಿನ್ ಗೆ ನಮ್ಮ ಯೋಜನೆಗಿಂತ ಹತ್ತು ಪಟ್ತು ಜಾಸ್ತಿ ವೆಚ್ಚವಾಗಿದೆ. ಎಂದೇ ಸ್ವಯಂ ನಾಸಾ ನಮ್ಮ ಮಂಗಳ ಯಾನವನ್ನು ಕಡಿಮೆ ದುಬಾರಿಯದ್ದೆಂದು ಶ್ಲಾಘಿಸಿದೆ.
ಇಷ್ಟು ಅವಸರದಲ್ಲಿ ಮಂಗಳಯಾನ ಬೇಕಿರಲಿಲ್ಲ, ದೊಡ್ಡ ಗಾತ್ರದ ಉಪಗ್ರಹಗಳನ್ನು ಕಕ್ಷೆಗೇರಿಸುವ ಜಿಎಸ್‌ಎಲ್‌ವಿ ನೌಕೆಗಳನ್ನು ನಿರ್ಮಾಣಕ್ಕೆ ಅಥವಾ ಚಂದ್ರಯಾನ -೨ ಯೋಜನೆಗೆ ಮೊದಲ ಆದ್ಯತೆ ನೀಡಬಹುದಾಗಿತ್ತು ಎಂಬ ಟೀಕೆಗಳು ವಿಜ್ಞಾನಿಗಳ ವಲಯದಲ್ಲಿ ಹರಿದಾಡುತ್ತಿ ರುವುದು ಗಮನಿಸಬೇಕಾದ ಅಂಶವೇ.
ಮಂಗಳಯಾನಕ್ಕೆ ಸಂಪೂರ್ಣ ಯಶಸ್ಸು ಇನ್ನೂ ಸಿಕ್ಕಿಲ್ಲ. ಶೇಕಡಾ ಮೂವತ್ತು ಅಂಶವಷ್ಟೇ ಮುಗಿದಿದೆ. ಭೂಮಿ ಸುತ್ತ ಪರಿಭ್ರಮಿಸುತ್ತ ಇನ್ನಷ್ಟು ಎತ್ತರ ಏರುತ್ತ ಡಿಸೆಂಬರ್ ಒಂದರಂದು ನೌಕೆಯ ರಾಕೇಟುಗಳು ಉರಿದು ಮಂಗಳನಕಡೆಗೆ ಆರಂಭವಾಗಲಿದೆ ಪಯಣ. ಎಲ್ಲವೂ ಲೆಕ್ಕಾಚಾರದಂತೆ ಸುಸೂತ್ರವಾದರೆ ಹತ್ತು ತಿಂಗಳ ಸುದೀರ್ಘ ಹಾದಿ ಕ್ರಮಿಸಿದ ನೌಕೆ ೨೦೧೪ ಸಪ್ಟೆಂಬರ್ ೨೪ರಂದು ಮಂಗಳನ ಕಕ್ಷೆ ಪ್ರವೇಶಿಸುತ್ತದೆ; ಅಲ್ಲಿಂದ ನೌಕೆಯ ಬೇರೆ ಬೇರೆ ಉಪಕರಣಗಳು ಮಂಗಳನ ಮೇಲ್ಮೈ, ರಚನೆ, ವಾಯುಮಂಡಲ, ಖನಿಜಾಂಶಗಳು, ಮಿಥೇನ್ ಅನಿಲದ ಪ್ರಮಾಣ ಇತ್ಯಾದಿ ಮಾಹಿತಿಗಳನ್ನು ಭೂಮಿಗೆ ರವಾನಿಸುತ್ತವೆ.ಮಂಗಳ ಯಾನ ಯೋಜನೆ
ನಿಜಕ್ಕೂ ಇದು ಅತ್ಯಂತ ಸಂಕೀರ್ಣ ಸವಾಲು. ಅಮೇರಿಕ ಸೇರಿದಂತೆ ಯಾವ ರಾಷ್ಟ್ರವೂ ತನ್ನ ಮೊದಲ ಪ್ರಯತ್ನದಲ್ಲೆ ಮಂಗಳಾವತರಣದಲ್ಲಿ ಯಶಸ್ವಿಯಾಗಿಲ್ಲ. ಎರಡು ವರ್ಷಗಳ ಹಿಂದೆ ನೆರೆಯ ಚೀನಾ ರಷ್ಯದ ರಾಕೆಟ್ ಬಳಸಿಕೊಂಡು ಕಳುಹಿಸಿದ ನೌಕೆ ಭೂ ಸಂಪರ್ಕ ಕಳೆದುಕೊಂಡು ವೈಫಲ್ಯ ಅನುಭವಿಸಿದ್ದು ಹಸಿರಾಗಿಯೇ ಇದೆ. ಜಪಾನ್ ಕೂಡ ಕಹಿಗುಳಿಗೆ ಅನುಭವಿಸಿದೆ.
ನಮ್ಮ ಮಂಗಳನೌಕೆಗೆ ಮಂಗಳವಾಗಬಹುದೇ? ಕಾದು ನೋಡೋಣ. ಅಮೇರಿಕದ ಅಧ್ಯಕ್ಷ ರೂಸ್‌ವೆಲ್ಟ್ ಹೇಳಿದ ಹಾಗೆ ಸೋಲುತ್ತೇನೆಂದು ಹಿಂಜರಿದು ನಿಲ್ಲುವವನಿಗಿಂತ ಮುಂದಡಿ ಇಟ್ಟು ಗೆಲ್ಲುವ ಧೀರ ಮೇಲು ಮಂಗಳಯಾನದ ಯೋಜನೆಯ ಯಶಸ್ಸಿಗೆ ಪ್ರತಿ ಕ್ಷಣ ಮೀಸಲಿಟ್ಟಿರುವ ನಮ್ಮವರೇ ಆದ ವಿಜ್ಞಾನಿ ತಂತ್ರವಿದರನ್ನು ಅಭಿನಂದಿಸಲು ನಿಮ್ಮ ಒಂದಷ್ಟು ಕ್ಷಣ ಮೀಸಲಿರಲಿ.

Categories: Uncategorized

ಬೆಳಕಿನ ವೇಗವ ಮೀರಲು ಹೊರಟ ಪೌಲಿಯ ದೆವ್ವ!

December 1, 2011 3 comments

ವಿಜ್ಞಾನ ಸಂತತವಾಗಿ ಬದಲಾಗುತ್ತಲೇ ಇರುತ್ತದೆ. ಏಕೆಂದರೆ ಇದು ಜ್ಞಾನ ಪ್ರವಾಹ. ಇಂದಿನ ಪರಿಕಲ್ಪನೆ ನಾಳೆಯ ದಿನ ತಪ್ಪು ಎಂದು ಸಾಬೀತಾಗಬಹುದು ಅಥವಾ ಅದಕ್ಕೆ ಇನ್ನಷ್ಟು ಪರಿಷ್ಕರಣೆಯ ಅವಶ್ಯಕತೆ ಬರಬಹುದು. ವಿಜ್ಞಾನ ಅದನ್ನು ಒಪ್ಪುತ್ತದೆ. ವಾಸ್ತವವಾಗಿ ಸವಾಲುಗಳು ಬಂದಾಗಲೆಲ್ಲ ವಿಜ್ಞಾನದ ಪ್ರವರ್ಧನೆಗೆ ಇನ್ನಷ್ಟು ಚಾಲನೆ ಬರುತ್ತದೆ. ಅಂಥದೊಂದು ಸವಾಲು ಬಂದಿದೆ ಎನ್ನುತ್ತಿದ್ದಾರೆ ಕೆಲವು ವಿಜ್ಞಾನಿಗಳು. ೨೦೧೧, ಸಪ್ಟೆಂಬರ್ ೧೯ರಂದು ಸೆರ್ನ್ ಸಂಶೋಧನಾಲಯದ ವಿಜ್ಞಾನಿಗಳು ನ್ಯೂಟ್ರಿನೊ ಎಂಬ ಕಣಗಳು ಬೆಳಕಿನ ವೇಗವನ್ನು ಮೀರಿ ಧಾವಿಸುತ್ತಿವೆ ಎಂದು ಘೋಷಿಸಿ ಅಚ್ಚರಿಯನ್ನು ತಂದರು. ಇದು ಸಾಧ್ಯವೇ? ಈ ನ್ಯೂಟ್ರಿನೋಗಳು ಅಂದರೆ ಏನು? ಅವುಗಳ ವೈಚಿತ್ರ್ಯ ಏನು? ಸೆರ್ನ್ ಪ್ರಯೋಗ ಏನು? ಪ್ರಯೋಗ ಫಲಿತಾಂಶ ಸರಿ ಎಂದಾದರೆ ಅದು ತರಬಹುದಾದ ಪರಿಣಾಮವೇನು? .. ಹೀಗೆ ಒಂದು ರೋಚಕ ಸುದ್ದಿಯ ಬೆಂಬತ್ತಿದಾಗ ರೂಪುಗೊಂಡಿತೊಂದು ಬರಹ. ಅದರ ಸಂಕ್ಷಿಪ್ತ ರೂಪ ಸುಧಾ ಪತ್ರಿಕೆಯಲ್ಲಿ  (೨೪ ನವೆಂಬರ್ ೨೦೧೧), ನಂತರ ವಿಸ್ಟ್ರುತ ವಾಗಿ ಕೆಂಡ ಸಂಪಿಗೆಯಲ್ಲಿ  (http://www.kendasampige.com/article.php?id=4918) ಬೆಳಕು ಕಂಡಿತು. ದಾಖಲೆಗಾಗಿ ಇಲ್ಲಿದೆ ನನ್ನ ಮನೆಯಲ್ಲಿ.  ನೀವು ಓದಿ ಪ್ರತಿಕ್ರಿಯಿಸಿ.  Read more…

Categories: Uncategorized

ಬಂದಿದೆ ಸೂಪರ್ನೋವಾ

November 15, 2011 Leave a comment

 

 

ನಾವಿರುವ ವಿಶ್ವ ಅದ್ಭುತ. ಈ ಅದ್ಭುತ ವಿಶ್ವವನ್ನು ಇನ್ನಷ್ಟು ಅದ್ಭುತವಾಗಿ ಡಿವಿ ಗುಂಡಪ್ಪನವರು ವರ್ಣಿಸಿದ್ದಾರೆ

ಏನು ಭೈರವ ಲೀಲೆ ಈ ವಿಶ್ವವಿಭ್ರಮಣೆ

ಏನು ಭೂತಗ್ರಾಮ ನರ್ತನೋನ್ಮಾದ

ಏನಗ್ನಿಗೋಳಗಳು ಏನಂತರಾಳಗಳು

ಏನು ವಿಸ್ಮಯ ಸೃಷ್ಟಿ – ಮಂಕುತಿಮ್ಮ

ಇಂಥ ಅದ್ಭುತ ವಿಶ್ವದ ವಿಸ್ಮಯ ಸೂಪರ್ನೋವಾ. ಈ ಕುರಿತು ಬರೆದ ಬರಹ ಕೆಂಡ ಸಂಪಿಗೆಯಲ್ಲಿ  ಪ್ರಕಟವಾಗಿದೆ. ದಾಖಲೆಗಾಗಿ ಇಲ್ಲಿ ಇದೀಗ ನನ್ನ ತಾಣದಲ್ಲಿ ಏರಿಸಿದ್ದೇನೆ. ಕೆಂಡ ಸಂಪಿಗೆಯಲ್ಲಿ ಆ ಲೇಖನದ ಕುರಿತು ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ. ಸೂಪರ್ನೋವಾ ಕುರಿತು ಲೇಖನ ಅಗತ್ಯವಿರಲ್ಲ – ಅದಕ್ಕಿಂತ ಮುಖ್ಯ – ಬೇರೆ ದೈನಂದಿನ ಸಮಸ್ಯೆಗಳಿವೆ. ಆ ಕುರಿತು ಹೇಳಬಹುದಾಗಿತ್ತು, ವಿಜ್ಞಾನದ ಕರಾಳ ಮುಖದ ಚರ್ಚೆ ಇಂದಿನ ತುರ್ತು – ಇತ್ಯಾದಿ. ನೀವು ಒಮ್ಮೆ ಅಲ್ಲಿಗೆ ಹೋಗಿ ನಿಮ್ಮ ಪ್ರತಿಕ್ರಿಯೆ ಸೇರಿಸಬಹುದು. ಅಥವಾ ಇಲ್ಲಿಯೇ ದಾಖಲಿಸಬಹುದು. ಬನ್ನಿ ಸೂಪರ್ನೋವಾದ ಕುರಿತು ಒಂದಷ್ಟು ವಿಷಯ – ವಿವರ ಹಂಚಿಕೊಳ್ಳೋಣ

Read more…

Categories: Uncategorized

ಹಾರಾಟ ನಿಲ್ಲಿಸಿದ ಸ್ಪೇಸ್‌ಶಟಲ್

August 2, 2011 4 comments

ಮನುಷ್ಯನಿಗೆ ಭೂಮಿ ಒಂದು ತೊಟ್ಟಿಲು. ಆದರೆ ಆತ ಅಲ್ಲೇ ಉಳಿಯಲಾರ 
–    ಕಾನ್‌ಸ್ಟಂಟಿನ್ ಟ್ಸಿಯೊಲೊವಿಸ್ಕಿ, ರಷ್ಯನ್ ಖಗೋಳವಿದ.

ಕಳೆದ ಗುರುವಾರ – ಜುಲೈ ೨೧, ಬೆಳಗ್ಗಿನ ಜಾವ ಅಮೇರಿಕದ ಫ್ಲಾರಿಡಾದಲ್ಲಿರುವ ಕೆನ್ನೆಡಿ  ಅಂತರಿಕ್ಷ ಉಡ್ಡಯನ ಕೇಂದ್ರದ ಇಳಿದಾಣದಲ್ಲಿ ಇನ್ನೂರು ಅಡಿಯಷ್ಟು ಉದ್ದದ  – ನೋಡುವುದಕ್ಕೆ  ವಿಮಾನದಂತಿದ್ದ ಬಿಳಿಯ ಹಕ್ಕಿ – ಅಟ್ಲಾಂಟಿಸ್ ಎಂಬ ಸ್ಪೇಸ್‌ಶಟಲ್ – ಕಿವಿಗಿಡಿಚುವ ಸದ್ದಿನೊಂದಿಗೆ  ಬಂದಿಳಿದ ಹೊತ್ತು. ನೆರೆದಿದ್ದ ನೂರಾರು ಖಗೋಳಪ್ರಿಯರಿಗೆ ಭಾವುಕ ಕ್ಷಣ. ಈ ವ್ಯೋಮ ಯೋಜನೆಯ ಅವಿಭಾಜ್ಯ ಭಾಗವಾಗಿ ಬೆಳೆದ ಮಂದಿಯಲ್ಲಿ ಎಲ್ಲ ಕಳೆದುಕೊಂಡ ನಿರಾಸೆ ಕಣ್ಣಂಚಿನ ನೀರಾಗಿ ಪ್ರಕಟವಾಗುತ್ತಿತ್ತು.

Read more…

Categories: Uncategorized

ರುದರ್ಫರ್ಡ್ ಕಂಡ ಪರಮಾಣು ಅಂತರಂಗ

July 5, 2011 7 comments

ನ್ಯೂಕ್ಲಿಯಸ್ ಎನ್ನುವುದು ಪರಮಾಣುವಿನ ಕೇಂದ್ರ. ಇದರ ಆವಿಷ್ಕಾರಕ್ಕೆ ಇದೀಗ ಶತಮಾನೋತ್ಸವದ ಸಂಭ್ರಮ. ಆವಿಷ್ಕಾರವಾದದ್ದು ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಭೌತವಿಜ್ಞಾನ ಪ್ರಯೋಗಾಲಯದಲ್ಲಿ ನೂರು ವರ್ಷಗಳ ಹಿಂದೆ – ಅರ್ನೆಸ್ಟ್‌ರುದರ್ಫರ್ಡ್ ಮತ್ತು ಅವರ ಸಹವರ್ತಿಗಳು ನಡೆಸಿದ ಐತಿಹಾಸಿಕ ಪ್ರಯೋಗಗಳಿಂದ.

Read more…

Categories: Uncategorized

ಗೋ ಸಾಕಣೆಯ ತಲ್ಲಣಗಳು

April 18, 2011 8 comments

ಚಿಕ್ಕವನಾಗಿದ್ದಾಗಿನಿಂದ ಇಂದಿನ ತನಕ – ಅಂದರೆ ಸುಮಾರು ನಾಲ್ಕು ದಶಕಗಳಿಂದ ಜಾನುವಾರು ಅಥವಾ ಗೋಸಾಕಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಬೆಳೆದವನು. ಗೋ ಸಾಕಣೆಯಲ್ಲಿ ಆಸಕ್ತಿ  ಹುಟ್ಟಲು ಕಾರಣ ನನ್ನಮ್ಮ. ಬಾಲ್ಯವನ್ನು ಮುಂಬಯಿಯಂಥ ದೊಡ್ದ ಪೇಟೆಗಳಲ್ಲಿ ಕಳೆದ ಅವಳು ಮದುವೆಯಾಗಿ ಬಂದದ್ದು ಪುತ್ತೂರಿನ ಹಳ್ಳಿ ಮನೆಗೆ. ಪೇಟೆಯ ಬೆಡಗಿ ಹಳ್ಳಿಗೆ ಎಷ್ಟು ಹೊಂದಿಕೊಂಡಳೆಂದರೆ, ಬೆಳಗ್ಗೆ – ಸಂಜೆ ಹಾಲು ಕರೆಯುವುದರಿಂದ ಹಿಡಿದು ಹಸುಗಳನ್ನು ಪ್ರೀತಿಯಿಂದ ಸಾಕುವುದು ಸಾಹಿತ್ಯ ಬರವಣಿಗೆಯಷ್ಟೇ ಅವಳಿಗೆ ಪ್ರಿಯ ಹವ್ಯಾಸವಾಗಿ ಹೋಯಿತು. ಇಂಥ ಪ್ರೀತಿಯೇ ಪ್ರಾಯಶ: ನನ್ನಲ್ಲೂ  ಗೋವುಗಳ ಬಗ್ಗೆ ಒಂದಿಷ್ಟು ಆಸಕ್ತಿ ಹುಟ್ಟಿಸಲು ಕಾರಣವಾಯಿತೇನೋ. Read more…

Categories: Uncategorized

ರಂಗು ರಂಗಿನ ಕ್ರಿಕೆಟ್

April 14, 2011 8 comments

ಭಾರತಕ್ಕೆ ವಿಶ್ವಕಪ್ ಒಲಿದಿದೆ. ಕ್ರಿಕೆಟಿನ ದೇವರಿಗೆ ದೇವರು ಕಣ್ಣು ಬಿಟ್ಟಿದ್ದಾನೆ. ಈ ಹೊತ್ತು ಅಯಾಚಿತವಾಗಿ ನೆನಪಿನ ಅಲೆಗಳು ಏಳುತ್ತಿವೆ.

ಹೇಳಿ ಕೇಳಿ ನಾನೂ ಕ್ರಿಕೆಟ್ ಪ್ರಿಯ.  ಬಾಲ್ಯದಿಂದಲೇ ಕ್ರಿಕೆಟ್ ಹುಚ್ಚು ಅಂಟಿಕೊಂಡಿತು. ನಡೆಯುತ್ತಿದ್ದಾಗಲೆಲ್ಲ ಬಲದ ಕೈಯ ಮಣಿಗಂಟನ್ನು  ತಿರುಗಿಸುತ್ತ ಹೋಗುತ್ತಿದ್ದ ನನ್ನನ್ನು ತಮಾಷೆ ಮಾಡುತ್ತಿದ್ದುದುಂಟು ಮನೆ ಮಂದಿ – “ಅಗೋ ಅಲ್ಲಿ ಚಂದ್ರಶೇಖರ್ ಬಂದ”. ಆ  ಕಾಲದಲ್ಲಿ ಚಂದ್ರಶೇಖರ್ ಬಲು ದೊಡ್ಡ ಲೆಗ್ ಸ್ಪಿನ್ನರ್, ಚಾಣಕ್ಷ್ಯ ಗೂಗ್ಲೀ ಬೌಲರ್.

Read more…

Categories: Uncategorized
Follow

Get every new post delivered to your Inbox.

Join 176 other followers

%d bloggers like this: