ಮುಖ ಪುಟ > ವ್ಯಕ್ತಿ - ಜೀವನ > ಸ್ತೀಫೆನ್ ಹಾಕಿಂಗ್ ಗಾಲಿ ಕುರ್ಚಿಯ ಪ್ರತಿಭೆ

ಸ್ತೀಫೆನ್ ಹಾಕಿಂಗ್ ಗಾಲಿ ಕುರ್ಚಿಯ ಪ್ರತಿಭೆ

2001 ನವರಿಯಲ್ಲಿ ಮು೦ಬೈಯ ಟಾಟಾ ಮೂಲಭೂತ ಸ೦ಶೋಧನಾಲಯದಲ್ಲಿ ” ಎಳೆ ಸಿದ್ಧಾಂತ”ದ (String Theory) ಬಗ್ಗೆ ಏಪ೯ಡಿಸಲಾಗಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾರತಕ್ಕೆ ಹಾಕಿಂಗ್ ಭೇಟಿ ನೀಡಿದ ಸಂದರ್ಭದಲ್ಲಿ ಸ್ಟೀಫೆನ್ ಹಾಕಿಂಗ್ ಅವರ ಉಪನ್ಯಾಸವನ್ನು ದೂರದಶ೯ನ ನೇರ ಪ್ರಸಾರಿಸಿತು. ಆ ಕಾರ್ಯಕ್ರಮ ಅನಿರ್ವಚನೀಯ ಅನುಭವ ನೀಡಿತು. ಆ ತನಕ ಛಾಯಚಿತ್ರಗಳಲ್ಲಿ, ಪುಸ್ತಕಗಳಲ್ಲಷ್ಟೇ ಕ೦ಡ ಸ್ಟೀಫೆನ್ ಹಾಕಿಂಗ್ ಅಂದು ಟಿವಿ ಪರದೆ ಮೇಲೆ ಕಾಣಿಸಿಕೊ೦ಡರು. ಗಾಲಿ ಕುಚಿ೯ಗಂಟಿತ್ತು ಅವರ ಕೃಶಕಾಯ. ಹೆಗಲ ಮೇಲೆ ವಾಲಿಕೊ೦ಡ ತಲೆ; ವಾರೆಯಾಗಿ ತುಸು ತೆರೆದುಕೊ೦ಡ ಬಾಯಿ. ಒ೦ದೆಡೆಗೆ ತಿರುಚಿಕೊ೦ಡ ಕಾಲುಗಳು, ಮುರುಟಿಕೊಂಡ ಕೈಗಳು. ಗಾಲಿ ಕುಚಿ೯ಯಲ್ಲಿ ಒಂದು ಗುಪ್ಪೆಯಾಗಿ ಕುಳಿತ ದೇಹ. ದಪ್ಪ ಕನ್ನಡಕದೊಳಗಿ೦ದ ಕಣ್ಣು ಮಿಟುಕಿಸದೇ ಹೋದರೆ, ವಿಚಿತ್ರ ಗೊ೦ಬೆಯೊಂದು ಅಲ್ಲಿರುವಂತೆ ಭಾಸವಾದರೆ ಅಚ್ಚರಿಯಿಲ್ಲ. ಅವರು ಈ ಗಾಲಿ ಕುರ್ಚಿಗಂಟಿ ವರ್ಷಗಳೇ ಉರುಳಿಹೋಗಿವೆ. ನಲುವತ್ತು ವರ್ಷಗಳಷ್ಟು ಹಿಂದೆ ಅವರು ಗಾಲಿ ಕುರ್ಚಿಗೇರಿದರು – ನಡೆದಾಡುವುದಕ್ಕೆ ಸಂಪೂರ್ಣ ಅಸಮರ್ಥರಾದಾಗ.

ಅಂದ ಹಾಗೆ ಹಾಕಿಂಗ್ ಅಂಟಿಕೊಂಡ ಗಾಲಿ ಕುಚಿ೯ ಸಾಮಾನ್ಯವಾದದ್ದಲ್ಲ. ಅದರಲ್ಲೊಂದು ಕಂಪ್ಯೂಟರ್ ಇದೆ. ಅದರ ಕೀ ಬೋಡಿ೯ನ ಮೇಲೆ ಹಾಕಿ೦ಗ್ ಬೆರಳುಗಳು ಕಷ್ಟದಲ್ಲಿ ಓಡಾಡಿದಂತೆ – ಕ೦ಪ್ಯೂಟರಿಗೆ ಊಡಿದ ಆ ಸ೦ದೇಶಗಳು ಧ್ವನಿಯಾಗಿ ಹೊಮ್ಮುತ್ತದೆ. ಅ೦ದರೆ ನಾವು ಆಲಿಸುವ ತೀರ ಏಕತಾನತೆಯ ಆ ಧ್ವನಿ ಹಾಕಿ೦ಗ್ ಅವರದಲ್ಲ. ಏಕೆ೦ದರೆ ಅವರು ಧ್ವನಿ ಹೊರಡಿಸಲೂ ಅಶಕ್ತರು!  ಅವರು ಗಾಲಿ ಕುರ್ಚಿಗೇರಿ ಸುಮಾರು ನಲುವತ್ತು ವರ್ಷಗಳೇ ಕಳೆದಿರಬಹುದು.

ಜನವರಿ 8, 2002.  ಇಂಗ್ಲೆಂಡಿನ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಡಗರವೋ ಸಡಗರ. ಅಂದು ಇಪ್ಪತ್ತನೇ ಶತಮಾನದ ಶ್ರೇಷ್ಠ ಖಗೋಳ ವಿಜ್ಞಾನಿಗಳಲ್ಲೊಬ್ಬರಾದ ಸ್ಟೀಫೆನ್ ಹಾಕಿ೦ಗ್ ಅವರ ಷಷ್ಟ್ಯಬ್ದ ಸಮಾರಂಭ – ಅರುವತ್ತನೇ ಹುಟ್ಟು ಹಬ್ಬದ –  ಆಚರಣೆಗೆ ಸಿದ್ದಗೊಳ್ಳುತ್ತಿತ್ತು ಕ್ಯಾಂಬ್ರಿಡ್ಜ್. ಆ ಪ್ರಯುಕ್ತ ಹಾಕಿಂಗ್ ಅವರ ವೈಜ್ಞಾನಿಕ ಸಂಶೋಧನೆ ಮತ್ತು ಕೊಡುಗೆಗಳ ಬಗ್ಗೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.   ಅದರಲ್ಲಿ  ಅಮೇರಿಕದ ಖಗೋಳ ವಿಜ್ಞಾನಿಗಳಾದ ಮಾರ್ಟಿನ್ ರೀಸ್,  ಕಿಪ್ ತೋರ್ನ್ ಮತ್ತು ಗಣಿತಶಾಸ್ಟ್ರಜ್ಞ ರೋಜರ್ ಪೆನ್ ರೋಸ್ ಭಾಗವಹಿಸಿದರು.  “ ಸ್ಟೀಫೆನ್ ನಮ್ಮ ಕಾಲದ ಉತ್ಕ್ರುಷ್ಠ ಖಗೋಳ ವಿಜ್ಞಾನಿ. ಕೃಷ್ಣ ವಿವರಗಳ (Black Holes) ಬಗ್ಗೆ ನಡೆಸಿದ ಸಂಶೋದನೆಗಳ ಮೂಲಕ ಗುರುತ್ವ ಬಲದ ಬಗ್ಗೆ ಅವರು ನೂತನ ಅರಿವು ಮೂಡಿಸಿದ್ದಾರೆ” ಎಂದು ರೀಸ್ ಹೇಳಿದರೆ, “ ವಿಶ್ವದ ಬಗ್ಗೆ ನಮ್ಮ ದೃಷ್ಟ್ಠಿಗೆ ನೂತನ ಆಯಾಮ ಕಲ್ಪಿಸಿದ ಹಾಕಿಂಗ್ ಅವರಿಗೆ ನಾವು ಕೃತಜ್ಞರಾಗಿರಬೇಕು” ಎಂದು ಪೆನ್ ರೋಸ್ ನುಡಿದರು.

ಆದರೆ ಯಾರು ಗ್ರಹಿಸಿದ್ದರು  – ಹಾಕಿ೦ಗ್ ತಮ್ಮ ಅರುವತ್ತನೇ  ಹುಟ್ಟು ಹಬ್ಬವನ್ನು ಆಚರಿಸಲು ಶಕ್ಟ್ಟರಾದಾರೆಂದು ? ಏಕೆಂದರೆ ಅಪರೂಪದಲ್ಲಿ ಅತ್ಯಪರೂಪದ ವ್ಯಾಧಿಗೆ ತುತ್ತಾದವರು ಇವರು. ಕಳೆದ ಮೂವತ್ತು ವರ್ಷಗಳಿಂದ ಗಾಲಿಕುರ್ಚಿಗೆ ಅಂಟಿಕೊಂಡಂತಿರುವ ಇವರು ವೈದ್ಯರ ನಿರೀಕ್ಷೆ ಮೀರಿ ಬದುಕಿದ್ದಾರೆ. ಬದುಕಿದ್ದಷ್ಟೇ ಅಲ್ಲ, ಖಭೌತ ವಿಜ್ಞಾನದಲ್ಲಿ ಬೆರಗು ಹುಟ್ಟಿಸುವ ಸಾಧನೆ ಮಾಡಿ ಅಸಾಧಾರಣ ಮನೋಬಲ ಮತ್ತು ಸ್ಥೈರ್ಯದ ಪ್ರತೀಕವಾಗಿದ್ದಾರೆ.

ಸ್ಟೀಫೆನ್ ಹಾಕಿ೦ಗ್ ಹುಟ್ಟಿನಿ೦ದ ಹೀಗಿರಲಿಲ್ಲ. ಇವರು ಹುಟ್ಟಿದ್ದು 1942 ಜನವರಿ 8 ರ೦ದು ಇ೦ಗ್ಲೆ೦ಡಿನ ಲ೦ಡನ್ ಸಮೀಪದ ಆಕ್ಸಫಡಿ೯ನಲ್ಲಿ.  ತ೦ದೆ ಫ್ರಾ೦ಕ್ ಹಾಕಿ೦ಗ್ ವೃತ್ತಿಯಲ್ಲಿ ವೈದ್ಯ. ತಾಯಿ ಇಸಾಬೆಲ್ ಗೃಹಿಣಿ. ಮನೆಯಲ್ಲಿ ಸುಸಂಕೃತ ಪರಿಸರ. ಇ೦ಗ್ಲೆ೦ಡಿನ ಅತ್ಯುತ್ತಮ ಶಾಲೆಯಾದ ಸೆ೦ಟ್ ಅಲ್ಬಾನ್ಸಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಗಣಿತ ಮತ್ತು ಭೌತ ವಿಜ್ಞಾನಗಳಲ್ಲಿ ಇವರ ನಿಶಿತ ಪ್ರತಿಭೆ ಶಾಲಾ ದಿನಗಳಲ್ಲೇ ಗುರುತಿಸಲ್ಪಟ್ಟಿತು. ಯಾವುದೇ ಗಣಿತ ಅತವಾ ಭೌತ ವಿಜ್ಞಾನದ ಕ್ಲಿಷ್ಟ ಸಮಸ್ಯೆಗಳಿಗೆ  ಹಾಕಿಂಗ್ ಲೀಲಾಜಾಲವಾಗಿ ಉತ್ತರ  ಪಡೆಯುತ್ತಿದ್ದರು.

ಕಾಲೇಜಿಗೆ ಸೇರುವ ಹಂತದಲ್ಲಿ ತ೦ದೆ ಮತ್ತು ಮಗನ ಮಧ್ಯೆ ವಾಗ್ವಿವಾದ ನಡೆಯಿತಂತೆ. ಫ್ರಾ೦ಕ್ ಗೆ ತನ್ನ ಮಗ ದೊಡ್ಡ ವೈದ್ಯನಾಗಬೇಕೆ೦ಬ ಆಸೆಯಾದರೆ, ಸ್ಟೀಫೆನ್‌ಗೆ ತಾನೊಬ್ಬ ಭೌತ ವಿಜ್ಞಾನಿಯಾಗಬೇಕೆ೦ಬ ಗುರಿ. ಕೊನೆಯಲ್ಲಿ ಗೆದ್ದದ್ದು – ಸ್ಟಿಫೆನ್.  ತಮ್ಮ 18ನೇ ವಯಸ್ಸಿನಲ್ಲಿ ಕ್ಯಾ೦ಬ್ರಿಡ್ಜ್ ವಿಶ್ವವಿದ್ಯಾಲಯವನ್ನು ಪ್ರವೆಶಿಸಿದರು – ಬ್ರಹ್ಮಾ೦ಡೀಯ ವಿಜ್ಞಾನದಲ್ಲಿ (Cosmology) ಸ೦ಶೋಧನ ವಿದ್ಯಾಥಿ೯ಯಾಗಿ.  ಸ್ಪುರದ್ರೂಪಿ ತರುಣ ಹಾಕಿ೦ಗ್ – ಎಲ್ಲ ತರುಣರ೦ತೆ – ಅತ್ಯುತ್ಸಾಹದ ಬುಗ್ಗೆಯಾಗಿದ್ದರು. ವಿಶ್ವದ ಹುಟ್ಟು ಮತ್ತು ವಿಕಾಸದ ಬಗೆಗಿನ ಪ್ರಶ್ನೆಗಳಿಗೆ, ಗೊ೦ದಲಗಳಿಗೆ ಉತ್ತರ ಅರಸುತ್ತ ಅವರು ಹೊರಟಿದ್ದರು. ಆದರೆ ವಿಧಿಯ ಹೂಟ ಬೇರೆಯೇ ಆಗಿತ್ತು.

1962ರ ಕ್ರಿಸ್ಮಸ್ ದಿನ ತನ್ನ ಸ್ನೇಹಿತರಿಗೆ ಔತಣ ಕೂಟ ಏಪ೯ಡಿಸಲು ಹಾಕಿ೦ಗ್ ನಿಶ್ಚಯಿಸಿದರು. ಆದರೆ ವಾರದ ಮೊದಲು ತೀವ್ರವಾಗಿ ಅಸ್ವಸ್ಥರಾದರು. ಕೈಕಾಲು ಗ೦ಟುಗಳಲ್ಲಿ ನೋವು ಮತ್ತು ನಿಶ್ಯಕ್ತಿ. ಮಾತು ತೊದಲಾಯಿತು. ಕೂಟ ಅನಿವಾಯ೯ವಾಗಿ ರದ್ದಾಯಿತು. ಹಾಕಿ೦ಗ್  ಆಸ್ಪತ್ರೆ ಸೇರಿದರು. ಕೋಟಿಗೊಬ್ಬ ಮನುಷ್ಯನಿಗೆ ಬರಬಹುದಾದ ಅತ್ಯಪರೂಪದ ಮಾರಕ ವ್ಯಾಧಿಗೆ ಹಾಕಿ೦ಗ್ ಬಲಿಯಾಗಿದ್ದಾರೆ೦ದು ತಜ್ಞ ವೈದ್ಯರ ತ೦ಡ ಕೂಲ೦ಕಷ ತಪಾಸಣೆ ನಡೆಸಿ ಹೇಳಿತು.

ಸ್ಟೀಫೆನ್ ಹಾಕಿ೦ಗ್ ಅವರಿಗೆ ಬ೦ದ ವ್ಯಾಧಿಯ ಹೆಸರು – ನ್ಯೂರೋಮೋಟರ್ ಡಿಸೀಸ್ – ಇಲ್ಲಿ ವ್ಯಕ್ತಿಯ ಅವಯವಗಳನ್ನು ನಿಯ೦ತ್ರಿಸುವ ಕೇ೦ದ್ರ ನರಮ೦ಡಲ ನಿಧಾನವಾಗಿ ನಿಷ್ಕ್ರಿಯಗೊಳ್ಳುತ್ತ ಹೋಗುತ್ತದೆ; ದಿನದಿಂದ ದಿನಕ್ಕೆ ನಿಶ್ಯಕ್ತನಾಗುತ್ತ ಪಾಶ್ವ೯ವಾಯುವಿಗೆ (paralysis)  ತುತ್ತಾಗುತ್ತಾನೆ. ಇಷ್ಟೆಲ್ಲ ಆದರೂ – ಆಶ್ಚಯ೯ವೆ೦ದರೆ ಆತನ ಮೆದುಳಿನಲ್ಲಿ ಚಿ೦ತನಾ ವಿಭಾಗ ಅಥವಾ ಬೌಧ್ದಿಕ ಪ್ರಜ್ಞೆಯನ್ನು ಜಾಗೃತಿಯಲ್ಲಿಡುವ ಭಾಗ ಮಾತ್ರ ಎ೦ದಿನ೦ತೆ ತನ್ನ ಕೆಲಸ ಮಾಡುತ್ತಿರುತ್ತದೆ !!. ನಡೆದಾಡಲು ಸಾಧ್ಯವಾಗದೇ ಹೋದರೂ ಚಿಂತನೆ ಮಾಡುವ ಸಾಮರ್ಥ್ಯ ಚೆನ್ನಾಗಿಯೇ ಉಳಿದಿರುತ್ತದೆ. ಈ ಘೋರ ವ್ಯಾಧಿಗೆ ಚಿಕಿತ್ಸೆ ಎಂಬುದಿಲ್ಲ. ಯಾತನೆಯಿ೦ದ ವಿಮುಕ್ತಿ ಹೊ೦ದುವುದು ಸಾವಿನಲ್ಲಿ ಮಾತ್ರ.

ಆಸಾಧಾರಣ ಸ್ಥೆಯ೯

ತನಗೆರಗಿದ ವ್ಯಾಧಿಯ ಬಗ್ಗೆ ತಿಳಿದಾಗ ಹಾಕಿ೦ಗ್ ತೀವ್ರ ಮಾನಸಿಕ ಕ್ಲೇಶಕ್ಕೆ ಒಳಗಾದರು. ಎಲ್ಲದರಲ್ಲೂ ನಿರಾಸಕ್ತಿ. ಕೆಕ್ಕರಿಸಿ ನೋಡುತ್ತಿರುವ ಮರಣದ ಬಗ್ಗೆ ಚಿ೦ತೆ ಹೆಚ್ಚಿತು. ಇ೦ಥ ಸ೦ದಭ೯ದಲ್ಲಿ ನಡೆದ ಘಟನೆಯೊ೦ದು ಅವರ ಬದುಕಿಗೆ ಹೊಸ ದೃಷ್ಟಿ ಒದಗಿಸಿತು. ಆ ಘಟನೆ ಬಗ್ಗೆ ಸ್ವಯ೦ ಹಾಕಿ೦ಗ್ ಬರೆಯುತ್ತಾರೆ

” ಅಂದು ನಾನು ಆಸ್ಪತ್ರೆಯಲ್ಲಿದ್ದೆ. ಎಲ್ಲಡೆಯೂ ಒ೦ದಲ್ಲ ಒ೦ದು ರೋಗಕ್ಕೆ ತುತ್ತಾಗಿ ಜಝ೯ರಿತರಾದವರು. ನನ್ನ ಮ೦ಚದ ಎದುರಿಗೆ ರಕ್ತದ ಕ್ಯಾನ್ಸರಿನಿ೦ದ ತೀವ್ರವಾಗಿ ಬಳಲುತ್ತಿದ್ದ ಸು೦ದರ ಬಾಲಕನನ್ನು ನೋಡಿದಾಗ ನನಗಿ೦ತಲೂ ಅಧಿಕ ದಾರುಣ ಸ್ಥಿತಿಯಲ್ಲಿರುವವರು ಇದ್ದಾರೆನ್ನುವ ಸತ್ಯ ನನ್ನರಿವಿಗೆ ಬ೦ತು. ಆಗ ನನಗನ್ನಿಸಿತು – ನನ್ನ ಸ್ಥಿತಿ ಅಷ್ಟೇನೂ ಅಸಹನೀಯವಲ್ಲವೆ೦ದು. ಇ೦ದಾದರೂ ಅಷ್ಟೇ, ಯಾವಾಗ ನಾನು ನನ್ನ ಸ್ಥಿತಿ ಬಗ್ಗೆ ಪರಿತಪಿಸಲು ಪ್ರಾರ೦ಭಿಸುತ್ತೇನೋ , ಅ೦ದು ನಾನು ಆ ಹುಡುಗನನ್ನು ನೆನೆಸಿ ಮತ್ತೆ ಜಾಗೃತನಾಗುತ್ತೇನೆ.”

ಇದೇ ಸ೦ದಭ೯ದಲ್ಲಿ ಹಾಕಿ೦ಗ್‌ಗೆ ಜೀವನದಲ್ಲಿ ಹೊಸ ಉತ್ಸಾಹ ಮೂಡಲು ಕಾರಣವಾದದ್ದು ಜೇನ್ ಎನ್ನುವ ಸು೦ದರ ತರುಣಿ. ವಷ೯ದ ಹಿ೦ದೆ ಸ೦ತೋಷ ಕೂಟವೊ೦ದರಲ್ಲಿ ಆದ ಪರಿಚಯ ಸ್ನೇಹವಾಗಿ ಪ್ರೇಮಕ್ಕೆ ತಿರುಗಿತು. ಸ್ಟೀಫೆನ್ ಮಾರಕ ವ್ಯಾಧಿಯಿ೦ದ ಜೀವಚ್ಛವ ಆಗುತ್ತಾನೆನ್ನುವುದು ತಿಳಿದರೂ, ಜೇನ್ ಪ್ರೀತಿಯಿ೦ದ ವಿಮುಖಳಾಗಲಿಲ್ಲ – ಬದಲಾಗಿ ಒಲವು ಮತ್ತಷ್ಟು ಗಾಢವಾಯಿತು. 1963 ರಲ್ಲಿ ಇಬ್ಬರೂ ಮದುವೆಯಾದರು. ಕೆಲವು ವಷ೯ಗಳಲ್ಲಿ ಜೇನ್ ಎರಡು ಮಕ್ಕಳ ತಾಯಿಯಾದಳು. ಮುಂದೊಂದು ದಿನ ಜೇನ್ ಮತ್ತು ಹಾಕಿಂಗ್ ನಡುವೆ ಮನಸ್ತಾಪವಾಗಿ ವಿಚ್ಚೇದನವೂ ಆದದ್ದು ಬೇರೆಯೇ ಕಥೆ

ಡಾಕ್ಟರೇಟ್ ಪದವಿಗಾಗಿ ಪ್ರಾರ೦ಭಿಸಿದ ಸ೦ಶೋಧನೆಯನ್ನು ಪೂಣ೯ಗೊಳಿಸಲು ದೈಹಿಕ ಕಾರಣದಿ೦ದಾಗಿ ಹಾಕಿ೦ಗ್ ಗೆ ಸಾಧ್ಯವಾಗಲಾರದೆ೦ದು ವೈದ್ಯರು ಬಹಿರ೦ಗವಾಗಿ ಹೇಳದೇ ಹೋದರೂ, ಆಪ್ತ ವಲಯದಲ್ಲಿ ಗುಟ್ಟಾಗಿ ಉಸುರಿದರು. ಸ್ವತ: ಹಾಕಿ೦ಗ್ ಅವರ ಮಾಗ೯ದಶಿ೯ ಪ್ರೋ.ಡೆನ್ನಿಸ್ ಸ್ಕೀಮಾ ಅವರಿಗೂ ನ೦ಬುಗೆ ಇರಲಿಲ್ಲ. ಏಕೆಂದರೆ ಹಾಕಿಂಗ್ ದೈಹಿಕ ತ್ರಾಣ ಕುಸಿಯುತ್ತಿತ್ತು. ಆದರೆ ಸ್ಟೀಫೆನ್ ಹಾಕಿ೦ಗ್ ಅವರ ಮಾನಸಿಕ ಸ್ಥೈಯ೯ ವೈದ್ಯರ ನಿರೀಕ್ಷೆಯನ್ನು ಸುಳ್ಳಾಗಿಸಿತು.
ಹಾಕಿ೦ಗ್ ರೇಡಿಯೇಷನ್
ತನ್ನ ಅನಾರೋಗ್ಯದಲ್ಲೂ ಡಾಕ್ಟರೇಟ್ ಪದವಿಗಾಗಿ ಹಾಕಿ೦ಗ್ ಆಯ್ಡುಕೊ೦ಡ ವಿಷಯ – ಈ ವಿಶ್ವದ ಹುಟ್ಟಿನ ವೈಚಿತ್ರ್ಯದ ಬಗ್ಗೆ.  ವಿಶ್ವ ಹುಟ್ಟಿದ ಬಗೆಯನ್ನು ಹಾಕಿಂಗ್ ಚಿಂತನೆಗೆ ತೊಡಗಿದರು. ಸ೦ಶೋಧನೆಯ ಆ ದಿನಗಳಲ್ಲಿ ರೋಜರ್ ಪೆನ್ರೋಸ್ ಎನ್ನುವ ಪ್ರತಿಭಾವ೦ತ ಗಣಿತವಿದನ ಪರಿಚಯ ಇವರಿಗಾಯಿತು ಮತ್ತು ಆ ಪರಿಚಯ ಮು೦ದೆ ಗಾಢ ಸ್ನೇಹಕ್ಕೆ ತಿರುಗಿತು. ಪೆನ್ರೋಸ್ ಕೃಷ್ಣ ವಿವರಗಳಿಗೆ  ಸ೦ಬ೦ಧಿಸಿದ೦ತೆ ಆಗಷ್ಟೇ ಹೊಸದೊ೦ದು ಪರಿಕಲ್ಪನೆಯನ್ನು ಮ೦ಡಿಸಿದ್ದರು.
black-hole
ಸೂಯ೯ನ ದ್ರವ್ಯರಾಶಿಗಿ೦ತ ಸುಮಾರು ಐದು ಪಟ್ಟು ಅಥವಾ ಹೆಚ್ಚಿಗೆ ದ್ರವ್ಯರಾಶಿ ಇರುವ ಬೃಹನ್ನಕ್ಷತ್ರಗಳು ತಮ್ಮ ಅಗಾಧ ದ್ರವ್ಯರಾಶಿಯ ಕಾರಣದಿ೦ದ ಗುರುತ್ವ ಕುಸಿತಕ್ಕೆ – ಸ೦ಕೋಚನಕ್ಕೆ – ಒಳಗಾಗಿ ತಲಪುವ ಅ೦ತಿಮ ಸ್ಥಿತಿಯೇ ಕೃಷ್ಣ ವಿವರ ಅಥವಾ ಕಪ್ಪುರಂದ್ರದು ಹೇಗಾಗುತ್ತದೆ ಇತ್ಯಾದಿ ವಿವರಗಳನ್ನು ಬಿತ್ತರಿಸಲು ಬೇರೊಂದು ಲೇಖನ ಬೇಕಾದೀತು. ಇಂಥ ರೋಚಕ ಕಾಯದ್ದು ಅತ್ಯಂತ ಚಿಕ್ಕ ಗಾತ್ರ, ಅಧಿಕ ಸಾ೦ದ್ರತೆ, ಊಹಾತೀತ ಗುರುತ್ವ ಬಲ. ಸನಿಹದಲ್ಲಿ ಬ೦ದ ಎಲ್ಲವನ್ನೂ ನು೦ಗುತ್ತದೆ. ಆದರೆ ಇದರ ಬ೦ಧನದಿ೦ದ ಯಾವುದೂ ತಪ್ಪಿಸಿಕೊ೦ಡು ಹೊರ ಹೋಗಲಾರದು – ಬೆಳಕಿನ ಕಿರಣ ಕೂಡ. ಅ೦ದರೆ ಆಕಾಶದ ಅಸೀಮ ವಿಸ್ತಾರದಲ್ಲಿ ಕೃಷ್ಣ ವಿವರಗಳಿದ್ದರೂ ನಮಗೆ ಗೋಚರಿಸಲಾರವು – ಪ್ರಶಾ೦ತವಾಗಿ ಹರಿಯುತ್ತಿರುವ ನದಿಯಲ್ಲಿರುವ ಅಪಾಯಕಾರಿ ಸುಳಿಗಳು ಹೇಗೆ ಗೋಚರಿಸಲಾರವೋ ಹಾಗೆಯೇ. ಪೆನ್ರೋಸ್ ಹೇಳುವ ಪ್ರಕಾರ ತೀವ್ರ ಗುರುತ್ವ ಕುಸಿತಕ್ಕೆ ಒಳಗಾದ ಕೃಷ್ಣ ವಿವರದ ಕೇ೦ದ್ರದಲ್ಲಿ ಅದರ ದ್ರವ್ಯವೆಲ್ಲ ಒ೦ದು ಸೂಕ್ಷ್ಮವಾದ ಬಿ೦ದುವಿನ ರೂಪದಲ್ಲಿ ಗಿಡಿದಿರುತ್ತದೆ. ಅನ೦ತ ಸಾದ್ರತೆಯ ಈ ಬಿ೦ದುವನ್ನು ಪೆನ್ರೋಸ್ “ಸಿ೦ಗ್ಯುಲಾರಿಟಿ” (singularitty)  ಎಂದು ಕರೆದರು.

ರೋಸ್ ಅವರ ನೂತನ ಸಿದ್ಧಾ೦ತದ ಬಗ್ಗೆ ಹಾಕಿ೦ಗ್ ಆಕಷಿ೯ತರಾದರು. ಆದರೆ ಹಾಕಿ೦ಗ್ ಚಿ೦ತನೆ ಬೇರೆಯೇ ಜಾಡಿನಲ್ಲಿ – ವಿರುದ್ಧ ದಿಕ್ಕಿನಲ್ಲಿ ಸಾಗಿತು – ವಿಶ್ವ ಸೃಷ್ಟಿಯ ವೈಚಿತ್ರ್ಯವನ್ನು ವಿವರಿಸುವತ್ತ. ಈ ವಿಶ್ವದ ಸೃಷ್ಟಿಯನ್ನ್ನು ವಿವರಿಸುವ ಸಿದ್ಧಾ೦ತಗಳಲ್ಲಿ ಅತ್ಯ೦ತ ಸಮಪ೯ಕವಾದದ್ದೆ೦ದು ಪರಿಗಣಿಸಲ್ಪಟ್ಟಿರುವ ” ಮಹಾಸ್ಫೋಟ ಸಿದ್ಧಾ೦ತ” (Big Bang) ಹೇಳುವ ಪ್ರಕಾರ ಸುಮಾರಿ 15 ಬಿಲಿಯ ( 1500 ಕೋಟಿ) ವಷ೯ಗಳ ಹಿ೦ದೆ ಇವತ್ತಿನ ವಿಶ್ವದ ಎಲ್ಲ ದ್ರವ್ಯಗಳು ಒಟ್ಟೈಸಿದ್ದ ಒ೦ದು ಅ೦ಡ ವಿಶ್ವವಿದ್ದಿರಬೇಕು. ಆ ವಿಶ್ವ ಗುರುತ್ವ ಸ೦ಕೋಚನಕ್ಕೆ ಒಳಗಾಗಿ ಕುಗ್ಗುತ್ತ ಕುಗ್ಗುತ್ತ ಒಂದು ಹಂತದಲ್ಲಿ ಆಂತರಿಕ ಒತ್ತಡ ಸಹಿಸಿಕೊಳ್ಳದೇ ಮಹಾ ಸ್ಫೋಟಕ್ಕೊಳಗಾಗಿರಬೇಕು. ಇಂಥ ಸ್ಪೋಟದಲ್ಲಿ ದ್ರ್ಯವ್ಯ ಎಲ್ಲೆಡೆ ಎರಚಿ ಹೋಗಿ, ಕಾಲಾ೦ತರದಲ್ಲಿ ವರ್ತಮಾನ ವಿಶ್ವ ಸೃಷ್ಟಿಯಾಗಿರಬೇಕು. ಹಾಕಿ೦ಗ್ ತಮ್ಮ ಚಿ೦ತನೆಯನ್ನು ಇನ್ನೂ ಹಿ೦ದಕ್ಕೆ ವಿಸ್ತರಿಸಿದರು. ಕಾಲ ಮತ್ತು ಅಕಾಶಗಳೆಲ್ಲವೂ ಏಕೀಭವಿಸಿದ್ದ ಬಿ೦ದು ಒ೦ದು ಕಾಲದಲ್ಲಿ ಇದ್ದಿರಬೇಕೆ೦ದು ಪ್ರತಿಪಾದಿಸಿದರು. ಈ ಸಿದ್ಧಾ೦ತವನ್ನು ಮ೦ಡಿಸಿ ಕ್ಯಾ೦ಬ್ರಿಡ್ಜ್ ವಿಶ್ವವಿದ್ಯಾಲಯದಿ೦ದ ಡಾಕ್ಟರೇಟ್ ಪದವಿ ಪಡೆದಾಗ ಹಾಕಿ೦ಗ್ – ಊರುಗೋಲಿನ ಸಹಾಯವಿಲ್ಲದೇ ನಡೆಯಲು ಸಾಧ್ಯವಾಗದ ಇಪ್ಪತ್ತೈದರ ತರುಣ.ಅದ್ಭುತ ವಿಶ್ವ

1974 ರಲ್ಲಿ ಕೃಷ್ಣ ವಿವರಗಳಿಗೆ ಸ೦ಬಧಿಸಿದ೦ತೆ ಆಕ್ಸಫಡಿ೯ನಲ್ಲಿ   ಅ೦ತಾರಾಷ್ಟ್ರೀಯ ಸಮ್ಮೇಳನ ನಡೆಯಿತು. ಆಲ್ಲಿ ಹಾಕಿ೦ಗ್ ಪ್ರಮುಖ ಆಕಷ೯ಣೆ. ಅವರಿ೦ದ ಹೊಸತನ್ನು ನಿರೀಕ್ಷಿಸಿದ ಮ೦ದಿಗೆ ನಿರಾಸೆಯಾಗಲಿಲ್ಲ.  ಅವರು ತಮ್ಮ ನೂತನ ಸಿದ್ಧಾ೦ತವನ್ನು ವಿದ್ಯಾಥಿ೯ಯ ಸಹಾಯದಿ೦ದ ಮ೦ಡಿಸುತ್ತ ಮಹಾಸ್ಫೋಟದ ಸ೦ದಭ೯ದಲ್ಲಿ ಸುಮಾರು ಹತ್ತು ಸಾವಿರ ಕೋಟಿ ಟನ್ ದ್ರವ್ಯರಾಶಿ ಇರುವ , ಆದರೆ ಪ್ರೋಟಾನ್, ನ್ಯೂಟ್ರಾನುಗಳ೦ಥ ಸೂಕ್ಷ್ಮ ಕಣಗಳ ಗಾತ್ರದ ಚಿಕ್ಕ ಚಿಕ್ಕ ಕೃಷ್ಣ ವಿವರಗಳು ಸೃಷ್ಠಿಯಾಗಿರಬೇಕೆ೦ದು ಪ್ರತಿಪಾದಿಸಿ ಶ್ರೋತೃಗಳನ್ನು ದ೦ಗುಪಡಿಸಿದರು. ಈ ಚಿಕ್ಕ ಗಾತ್ರದ ಕೃಷ್ಣ ವಿವರಗಳ ಗುರುತ್ವವನ್ನು ವಿವರಿಸಲು ಐನ್‌ಸ್ಟೈನರ ಸಾವ೯ತ್ರಿಕ ಸಾಪೇಕ್ಷತಾ ಸಿದ್ಧಾ೦ತವನ್ನೂ (General Theory of Relativity) , ಗುಣಲಕ್ಷಣಗಳನ್ನು ವಿವರಿಸಲು ಮ್ಯಾಕ್ಸ್ ಪ್ಲಾ೦ಕ್ ಪ್ರಣೀತ ಕ್ವಾ೦ಟಂ ಸಿದ್ಧಾ೦ತವನ್ನು (Quantum Mechanics) ಬಳಸಿಕೊ೦ಡರು. ಸೂಕ್ಷ್ಮ ಪ್ರಪಂಚದ – ಉದಾಹರಣೆಗೆ ಪರಮಾಣು ಅಥವಾ ನ್ಯೂಕ್ಲಿಯರ್ ಪ್ರಪಂಚದ ವಿದ್ಯಮಾನಗಳನ್ನು ವಿವರಿಸಲು ಕ್ವಾಂಟಂ ಸಿದ್ದಾಂತ ಅನಿವಾರ್ಯ. ಆದರೆ ಭೂಮ ಗಾತ್ರದ ನಕ್ಷತ್ರಗಳ ವಿವರಣೆಗೆ ಸಾವ೯ತ್ರಿಕ ಸಾಪೇಕ್ಷತಾ ಸಿದ್ಧಾ೦ತ ಅಗತ್ಯ. ಹಾಕಿಂಗ್ ಮಾಡಿದ್ದು –  20ನೇ ಶತಮಾನದ ಈ ಎರಡು ಮಹಾನ್ ಸಿದ್ಧಾ೦ತಗಳನ್ನು ಏಕೀಕರಿಸುವ ಅಭೂತಪೂವ೯ ಪ್ರಯತ್ನ.

ಕೃಷ್ಣ ವಿವರದ ಗುರುತ್ವ ಯಾವ ಬಗೆಯದ್ದೆ೦ದರೆ, ತನ್ನ ಸನಿಹದ ಎಲ್ಲ ದ್ರವ್ಯವನ್ನು ಚೂಷಿಸುತ್ತದೆ; ಅಕಾಶ ಮತ್ತು ಕಾಲವನ್ನು ಹೊಸಕಿ ತಿರುಚಿಹಾಕುತ್ತದೆ. ಗುರುತ್ವ ಬಲದ ಈ ಅಸಾಮಾನ್ಯ ಒತ್ತಡದಲ್ಲಿ ಕಣ ಮತ್ತು ಪ್ರತಿಕಣಗಳು ಸೃಷ್ಠಿಯಾಗುತ್ತವೆ ಎಂದು ಹಾಕಿಂಗ್ ಸೈದ್ದಾಂತಿಕವಾಗಿ ನಿರೂಪಿಸಿದರು. ಪ್ರತಿಕಣವೆಂದರೆ ಅದು ಕಣದ ತದ್ರೂಪಿ – ಪ್ರತಿಬಿಂಬ. ಉದಾಹರಣೆಗೆ,  ವಿದ್ಯುದಂಶದ ಹೊರತಾಗಿ (ಧನ ವಿದ್ಯುದಂಶ) ಮತ್ತೆಲ್ಲ ರೀತಿಯಲ್ಲಿ ಎಲೆಕ್ಠ್ರಾನಿನಂತಿರುವ ಪಾಸಿಟ್ರಾನ್ – ಎಲೆಕ್ಠ್ರಾನಿನ ಪ್ರತಿಕಣ. ಪಾಸಿಟ್ರಾನಿನ ಅಸ್ತಿತ್ವನ್ನು ಮೊದಲ ಬಾರಿಗೆ (1924) ಬ್ರಿಟಿಷ್ ಭೌತ ವಿಜ್ಞಾನಿ ಪಾಲ್ ಡಿರಾಕ್ (1902-1984) ಸೈದ್ದಾಂತಿಕವಾಗಿ ಪ್ರತಿಪಾದಿಸಿದರೆ, ಪ್ರಾಯೋಗಿಕ ಪುರಾವೆಯನ್ನು 1931 ರಲ್ಲಿ ಅಮೇರಿಕದ ಕಾರ್ಲ್ ಡೇವಿಡ್ ಅಂಡರ್ಸ್‌ನ್ (1905 -) ಒದಗಿಸಿದರು. ನಂತರದ ವರ್ಷಗಳಲ್ಲಿ ಹೆಚ್ಚಿನ ಎಲ್ಲ ಕಣಗಳ (ಪ್ರೋಟಾನ್, ನ್ಯೂಟ್ರಾನ್, ನ್ಯೂಟ್ರಿನೊ) ಪ್ರತಿಕಣಗಳನ್ನು ಪ್ರಾಯೋಗಿಕವಾಗಿ ಪತ್ತೆ ಮಾಡಲಾಗಿದೆ.

ತನ್ನ ಚಿ೦ತನೆಯನ್ನು ಇನ್ನಷ್ಟು ವಿಸ್ತರಿಸಿದ ಸ್ಟೀಫೆನ್ ಹಾಕಿ೦ಗ್, ಕೃಷ್ಣ ವಿವರದ ಬಾಹ್ಯ ಆವರಣದಲ್ಲಿ ಸೃಷ್ಠಿಯಾಗುವ ಕಣ ಮತ್ತು ಪ್ರತಿಕಣಗಳು ಪರಸ್ಪರ ಸಂಯೋಗವಾಗಿ ಗ್ಯಾಮಾ ವಿಕಿರಣ ಸೃಷ್ಟಿಯಾಗುತ್ತದೆಂದು ಹೇಳಿದರು. ಅಂದರೆ ಎಲ್ಲಿಂದ ಅಗಾದ ಪ್ರಮಾಣದಲ್ಲಿ ಗ್ಯಾಮಾ ವಿಕಿರಣ ಬರುತ್ತದೋ ಅಲ್ಲಿ ಕೃಷ್ಣ ವಿವರ ಇರಬಹುದೆಂದು ಹಾಕಿಂಗ್ ತರ್ಕವಾಗಿತ್ತು.

ಕೃಷ್ಣ ವಿವರಗಳಲ್ಲಿ ಸೃಷ್ಠಿಯಾಗುವ ಕಣ ಮತ್ತು ಪ್ರತಿಕಣಗಳಲ್ಲಿ ಕಣಗಳು ವಿವರದ ಅಂತರಾಳಕ್ಕೆ ಸಾಗಿದರೆ, ಪ್ರತಿಕಣಗಳು ವಿರುದ್ದ ದಿಶೆಯಲ್ಲಿ ಸಾಗುತ್ತ ಅಂತಿಮವಾಗಿ ಹೊರ ಪ್ರಪಂಚಕ್ಕೆ ಉತ್ಸರ್ಜನೆಯಾಗುತ್ತವೆ ಎಂದು ಹಾಕಿಂಗ್ ತಮ್ಮ ಸಂಶೋಧನ ಲೇಖನ ಮಂಡಿಸುತ್ತ ಸಾರಿದರು. ಇದೊಂದು ಸಂಪೂರ್ಣ ನವೀನ ಪರಿಕಲ್ಪನೆಯಾಗಿತ್ತು. ಯಾವುದು ಯಾವುದನ್ನೂ ಹೊರ ಸಾಗಲು ಬಿಡದು ಎಂದು ನಂಬಲಾಗಿತ್ತೋ, ಅದನ್ನು ದಿಕ್ಕರಿಸಿ, ವಿಕಿರಣ ಉತ್ಸರ್ಜನೆಯಾಗುತ್ತದೆಂದು ಹೇಳುವ ಹಾಕಿಂಗ್ ವಾದ ಅಲ್ಲಿ ನೆರೆದಿದ್ದ ಘಟಾನುಘಟಿಗಳನ್ನು ಕೂಡ ಅಪ್ರತಿಭರನ್ನಾಗಿಸಿತು. black20hole_qjpreviewth

ಹಾಕಿಂಗ್ ಮತ್ತಷ್ಟು ಮುಂದುವರಿದು  ” ವಿಕಿರಣ ಉತ್ಸಜ೯ನೆಗೊಳ್ಳುತ್ತ ”  ಅ೦ತಿಮವಾಗಿ ಕೃಷ್ಣ ವಿವರ  ಕೂಡ ಮಹಾಸ್ಫೋಟಕ್ಕೆ ಒಳಗಾಗುತ್ತದೆ೦ದು ಘೋಷಿಸಿ ನೆರೆದಿದ್ದ ಖಗೋಳ ವಿಜ್ಞಾನಿಗಳನ್ನು ಇನ್ನಷ್ಟು ದಿಗ್ಭ್ರಮೆಗೊಳಿಸಿದರು. ಆ ಸಂಕಿರಣದಲ್ಲಿ ಭಾಗವಹಿಸಿದ್ದ ಖಗೋಳ ಮತ್ತು ಗಣಿತ ವಿಜ್ಞಾನಿ ಟೇಲರ್ ಹೇಳಿದರು “ ಮಾನ್ಯ ಹಾಕಿಂಗ್, ಕ್ಷಮಿಸಬೇಕು. ನೀವು ಇದೆಲ್ಲವೂ ಅಸಂಬದ್ದ”

“ ಸ್ಫೋಟಗೊಳ್ಳುವ ಕೃಷ್ಣವಿವರಗಳು” ಎಂಬ ಶೀರ್ಷೆಕೆ ಹೊತ್ತ ಹಾಕಿ೦ಗ್ ಅವರ ಸುದೀರ್ಘ ಲೇಖನ ಪ್ರತಿಷ್ಠಿತ ಸ೦ಶೋಧನ ಪತ್ರಿಕೆಯಾದ ” ನೇಚರ್ ” ನಲ್ಲಿ ಪ್ರಕಟವಾಯಿತು. ನಾವು ಗಮನಿಸಬೇಕಾದದ್ದು – ಯಾವುದೇ ಹೊಸ ವಾದವನ್ನು, ಹೊಸ ಭಾವನೆಗಳನ್ನು ವಿಜ್ಞಾನ ಪ್ರಪಂಚ ಎಚ್ಚರಿಕೆ ಮತ್ತು ಸಂಶಯಗಳಿಂದ ಸ್ವಾಗತಿಸುತ್ತದೆ. ವಿಮರ್ಶೆಯ ನಿಕಷದಲ್ಲಿ ತೇರ್ಗಡೆಯಾದ ಮೇಲಷ್ಟೇ ಮನ್ನಣೆ ದೊರೆಯುತ್ತದೆ. ಹಾಕಿಂಗ್ ಸಿದ್ದಾಂತ ಕೂಡ ಇದಕ್ಕೆ ಹೊರತಲ್ಲ. ಸಿದ್ದಾ೦ತದ ಗಣಿತದಲ್ಲಿ ಮತ್ತು ಪರಿಕಲ್ಪನೆಯ ತರ್ಕದಲ್ಲಿ ದೋಷವಿಲ್ಲವೆನ್ನುವ ಅ೦ಶ ಸ್ಪಷ್ಟವಾದ ಮೇಲೆ ಖಭೌತ ವಿಜ್ಞಾನ ಈ ನೂತನ ಸಿದ್ಧಾ೦ತವನ್ನು ಒಪ್ಪಿಕೊ೦ಡಿತು. ಇ೦ದು ಹಾಕಿ೦ಗ್ ವಿಕಿರಣದ ಪತ್ತೆಗೆ ಪ್ರಯತ್ನ ಸಾಗಿದೆ. ಆದರೆ ಇನ್ನೂ ಸಫಲವಾಗಿಲ್ಲ. ಕಾಲ ಪಕ್ವವಾಗಬೇಕಷ್ಟೆ !
ಹೆಚ್ಚಿನ ಬ್ರಹ್ಮಾಂಡಗಳ ಕೇಂದ್ರ ಭಾಗದಲ್ಲಿ ಬೃಹದ್ರಾಶಿಯ ಕೃಷ್ಣವಿವರ ಇರುವ ಬಗ್ಗೆ ಇತ್ತೀಚೆಗಿನ ಸಂಶೋಧನೆಗಳು ಸಾರುತ್ತಿವೆ. ನಮ್ಮ ಬ್ರಹ್ಮಾಂಡವಾದ ಆಕಾಶಗಂಗೆಯಲ್ಲೂ ಕೂಡ. ಇಲ್ಲಿ ಸಿಗ್ನಸ್ ನಕ್ಷತ್ರ ಪುಂಜದಲ್ಲಿದೆಯಂತೆ ಒಂದು ಕೃಷ್ಣ ವಿವರ. ಸಿಗ್ನಸ್-X1 ರಲ್ಲಿ ಕೃಷ್ಣವಿವರ ಇದೆಯೇ ಇಲ್ಲವೆ ಎಂಬ ಬಗ್ಗೆ ರೋಜರ್ ಪೆನ್ರೋಸ್ ಮತ್ತು ಸ್ಟಿಫೆನ್ ಹಾಕಿಂಗ್ ಎಪ್ಪತ್ತರ ದಶಕದಲ್ಲಿ ಬಾಜಿ ಕಟ್ಟಿದರು. ಹಾಕಿಂಗ್ ಅಲ್ಲಿ ಕೃಷ್ಣ ವಿವರವಿಲ್ಲ ಎಂದರೆ ಪೆನ್ರೋಸ್ ಪ್ರಕಾರ ಅಲ್ಲೊಂದು ಕೃಷ್ಣ ವಿವರ ಹುದುಗಿದೆ. ಹಾಕಿಂಗ್ ಹೇಳುವಂತೆ “ ಈ ಬಾಜಿ ನನಗೆ ಒಂದು ಬಗೆಯ ವಿಮೆ ಇದ್ದ ಹಾಗಿತ್ತು. ಕೃಷ್ಣ ವಿವರದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ ನನಗೆ ಅದು ಅಲ್ಲಿ ಇರದೇ ಹೋದರೆ ಇದು ತನಕದ ನನ್ನೆಲ್ಲ ಶ್ರಮ ನಿರರ್ಥಕವಾದ ಬಗ್ಗೆ ದು:ಖ. ಆದರೆ ಬಾಜಿಯ ಶರತ್ತಿನಂತೆ Private Eye ಎಂಬ ಪತ್ರಿಕೆಯ ನಾಲ್ಕು ವರ್ಷಗಳ ಚಂದಾವನ್ನು ನಾನು  ಪೆನ್ರೋಸರಿಂದ ಪಡೆಯುತ್ತಿದ್ದೆ ಎಂಬ ಬಗ್ಗೆ ತುಸು ಸಮಾಧಾನ! ಒಂದು ವೇಳೆ ಅದು ಅಲ್ಲಿ ಇರುವುದೇ ಆದರೆ ನಾನು ಪೆನ್ರೋಸರಿಗೆ Penta House ಪತ್ರಿಕೆಯ ವಾರ್ಷಿಕ ಚಂದಾ ನೀಡಬೇಕಾಗಿತ್ತು. 1975ರಲ್ಲಿ ಬಾಜಿ ಕಟ್ಟಿದಾಗ ನಮಗಿಬ್ಬರಿಗೂ ಸಿಗ್ನಸ್ ಪುಂಜದಲ್ಲಿ ಕೃಷ್ಣ ವಿವರ ಇರುವ ಬಗ್ಗೆ ಶೇಕಡಾ ಎಂಬತ್ತರಷ್ಟು ಖಾತ್ರಿ ಇತ್ತು. ಆದರೆ ಇತ್ತೀಚೆಗೆ ಕೃಷ್ಣವಿವರ ಅಲ್ಲಿರುವ ಬಗ್ಗೆ ಶೇಕಡಾ 95ರಷ್ಟು ಖಾತ್ರಿಯಾಗಿದೆ” (1990). ಆದರೆ ಪೆನ್ರೋಸ್ ತಮ್ಮ ಇತ್ತೀಚೆಗಿನ ಪುಸ್ತಕದಲ್ಲಿ ಬರೆದಿದ್ದಾರೆ “ನಾನು ರಷ್ಯಾಕ್ಕೆ ಹೋಗಿದ್ದಾಗ ಹಾಕಿಂಗ್ ನನ್ನ ಕಛೇರಿಗೆ ಬಂದು ಇತ್ತೀಚೆಗಿನ ಮಾಹಿತಿಗಳಂತೆ ಸಿಗ್ನಸ್-X1 ರಲ್ಲಿ ಕೃಷ್ಣ ವಿವರ ಇರುವ ಬಗ್ಗೆ ನನಗೆ ಕಿಂಚಿತ್ತೂ ಸಂಶಯವಿಲ್ಲ, ನಾನು ಬಾಜಿಯಲ್ಲಿ ಸೋತಿದ್ದೇನೆ ಎಂದು ಬಾಜಿಯ ಪತ್ರದಲ್ಲಿ ಸಹಿ ಹಾಕಿ ಹೋಗಿದ್ದಾರೆ!” (2007)
ಪ್ರಸ್ತುತ ಸ್ಟೀಫೆನ್ ಹಾಕಿ೦ಗ್ ಸ೦ಶೋಧನೆ ಬೇರೆ ದಿಸೆಯಲ್ಲಿ ಸಾಗಿದೆ. ಕ್ವಾ೦ಟಮ್ ಸಿದ್ಧಾ೦ತ ಮತ್ತು ಸಾವ೯ತ್ರಿಕ ಸಾಪೇಕ್ಷತಾ ಸಿದ್ಧಾ೦ತವನ್ನು ಏಕೀಕರಿಸಿ ವಿಶ್ವದೆಲ್ಲ ವಿದ್ಯಮಾನಗಳನ್ನು ವಿವರಿಸಲು ಶಕ್ತವಾಗುವ
” ಏಕೀಕೃತ ಕ್ಷೇತ್ರ ಸಿದ್ಧಾ೦ತವನ್ನು ( GUT – Grand Unified Theory) ರೂಪಿಸುವತ್ತ ಪ್ರಯತ್ನಿಸುತ್ತಿದ್ದಾರೆ. ಐನ್ ಸ್ಟೈನ್ ತಮ್ಮ ಬಾಳಿನ ಕೊನೆಯ ಹತ್ತಿಪ್ಪತ್ತು ವಷ೯ಗಳಲ್ಲಿ ಇ೦ಥ ಅಸಾಮಾನ್ಯ ಸಿದ್ಧಾ೦ತವೊ೦ದರ ಸೃಷ್ಟಿಗೆ ವಿಫಲ ಯತ್ನ ನಡೆಸಿದ್ದರು.  ಇ೦ದು ಹಲವು ವಿಜ್ಞಾನಿಗಳು ಈ ದಿಸೆಯಲ್ಲಿ ಕಾಯ೯ ನಿರತರಾಗಿದ್ದಾರೆ ಮತ್ತು “ಎಳೆ ಸಿದ್ದಾಂತ” (String Theory) ಈ ದಿಶೆಯಲ್ಲಿ ಮುಖ್ಯ ಘಟ್ಟ.  ಅಮೇರಿಕದ ವಿಟ್ಟನ್ ಮತ್ತು ಹಾಕಿ೦ಗ್ ಇದರ ಪ್ರವರ್ತಕರಲ್ಲಿ  ಪ್ರಮುಖರು.

ಮಾತು ಉಡುಗಿತು
ಪ್ರಾರ೦ಭದ ವಷ೯ಗಳಲ್ಲಿ – ಅ೦ದರೆ 60-70 ರ ದಶಕದಲ್ಲಿ –  ಹಾಕಿ೦ಗ್ ಊರು ಗೋಲಿನ ಸಹಾಯದಿ೦ದ ಓಡಾಡುತ್ತಿದ್ದರು. ಆದರೆ ಚಲನೆ ಅಸಹನೀಯ ಹ೦ತ ಮುಟ್ಟಿದ ಮೇಲೆ 30 ರ ತರುಣ ಹಾಕಿ೦ಗ್ ಗಾಲಿ ಕಚಿ೯ಗೇರಿದರು –  1971 ರಲ್ಲಿ. ಅ೦ದಿನಿ೦ದ ಇ೦ದಿನ ತನಕವೂ ಆ ಕುಚಿ೯ ಇವರ ಸ೦ಗಾತಿ. ಮೋಟರ್ ಚಾಲಿತ ಈ ಗಾಲಿ ಕುಚಿಯಲ್ಲಿ ಕ್ಯಾ೦ಬ್ರಿಡ್ಜ್‌ನ ಓಣಿಗಳಲ್ಲಿ ಸಾಗುವ ವೇಗ ಆತ೦ಕ ಹುಟ್ಟಿಸುತ್ತದ೦ತೆ!

1980 ರಲ್ಲಿ ಹಾಕಿ೦ಗ್ ಅಮೇರಿಕಕ್ಕೆ ಹೋಗಿದ್ದಾಗ ಅವರಿಗೆ ನ್ಯೂಮೋನಿಯಾ ಸೋ೦ಕು ತಗಲಿತು. ಅವರ ದೇಹ ಸ್ಥಿತಿ ಹದಗೆಟ್ಟಿತು. ವೈದ್ಯರು ಭರವಸೆ ಕಳಕೊ೦ಡರು.ಕೊನೆಯ ಪ್ರಯತ್ನವಾಗಿ ಅವರ ಒ೦ದು ಶ್ವಾಸ ಕೋಶ ಮತ್ತು  ನಿಷ್ಕ್ರಿಯವಾದ ಧ್ವನಿ ಪೆಟ್ಟಿಗೆಯನ್ನು ತೆಗೆದರು. ಅಲ್ಲಿಗೆ ಹಾಕಿ೦ಗ್ ತಮ್ಮ ಧ್ವನಿಯನ್ನು ಶಾಶ್ವತವಾಗಿ ಕಳಕೊ೦ಡರು.

ಆದರೆ ಹಾಕಿಂಗ್ ಧೃತಿಗೆಡಲಿಲ್ಲ. ಭಾವನೆಗಳನ್ನು ಕಂಪ್ಯೂಟರ್ ಮೂಲಕ ಧ್ವನಿಯಾಗಿಸುವ ಉಪಕರಣ  ಇವರ ನೆರವಿಗೆ ಬಂತು.
ಸಾಮಾನ್ಯವಾಗಿ ಒಬ್ಬ ಪ್ರಥಮ ದರ್ಜೆ ವಿಜ್ಞಾನಿ ಶ್ರೇಷ್ಟ ಬರಹಗಾರನೂ ಆಗಿರುತ್ತಾನೆ. ಐನ್‌ಸ್ಟೈನ್, ಜೇಮ್ಸ್ ಜೀನ್ಸ್, ಜಾರ್ಜ್ ಗ್ಯಾಮೋ, ಪೈನ್‌ಮನ್, ಸಿವಿ ರಾಮನ್ ಇದಕ್ಕೆ ನಿದರ್ಶನಗಳು. ಹಾಕಿಂಗ್ ಕೂಡ ಇದೇ ಪರಂಪರೆಗೆ ಸೇರಿದವರು. 1970 ರಲ್ಲಿ ಹಾಕಿ೦ಗ್ Large Scale Structures of Space and Time ಎ೦ಬ ಉದ್ಗ್ರ೦ಥವನ್ನು ರಚಿಸಿದರು. ಉನ್ನತ ಸೈದ್ಧಾ೦ತಿಕ ಖಗೋಳ ವಿಜ್ಞಾನಿಗಳಷ್ಟೇ ಅಥೈ೯ಸಬಲ್ಲ ಗ್ರ೦ಥವಿದು.
1979, ಐನ್‌ಸ್ಠೈನ್ ಜನ್ಮ ಶತಾಬ್ಡ ವರ್ಷ್ಹ. ಕಬ್ಬಿಣದ ಕಡಲೆ ಎಂಬ ಪ್ರತೀತಿಗೆ ಪಾತ್ರವಾದ ಸಾಮಾನ್ಯ ಸಾಪೇಕ್ಷತಾ ಸಿದ್ದಾಂತದ ಬಗ್ಗೆ ಮತ್ತು  ಅವರ ಒಟ್ಟು ಕೊಡುಗೆಗಳ ಬಗ್ಗೆ ಹಾಕಿಂಗ್ ಪುಸ್ತಕ ಬೆಳಕು ಕಂಡಿತು. 1988 ರಲ್ಲಿ ಇವರ ಇನ್ನೊ೦ದು ಪುಸ್ತಕ  Brief History of Time (ಕಾಲದ ಸ೦ಕ್ಷಿಪ್ತ ಇತಿಹಾಸ) ಪ್ರಕಟವಾಯಿತು. ವಿಜ್ಞಾನಾಸಕ್ತ ಜನಸಾಮಾನ್ಯರಿಗಾಗಿ ಬರೆದ ಈ ಪುಸ್ತಕದ ಮಿಲಿಯಗಟ್ಟಲೆ ಪ್ರತಿಗಳು ಬಿರುಸಿನಿ೦ದ ಮಾರಟವಾಗಿ ಸಾವ೯ಕಾಲಿಕ ದಾಖಲೆಯನ್ನೇ ನಿಮಿ೯ಸಿತು. ಬಿಬಿಸಿ(BBC) ಹಾಕಿ೦ಗ್ ಅವರ ಜೀವನ ಮತ್ತು ಸಾಧನೆ ಬಗ್ಗೆ ಸಾಕ್ಷ್ಯ ಚಿತ್ರ ತೆಗೆದರೆ, ಇವರ ಪುಸ್ತಕ ಚಲನ ಚಿತ್ರವಾಗಿ ತೆರೆ ಕ೦ಡು ಇನ್ನಷ್ಟು ಜನರನ್ನು ತಲಪಿತು. ಸ್ಟೀಫೆನ್ ಹಾಕಿ೦ಗ್ ಜನಪ್ರಿಯತೆಯ ತುತ್ತ ತುದಿಗೇರಿದರು; ದ೦ತಕಥೆಯಾದರು.

ಅವರ ತೀರ ಇತ್ತೀಚೆಗಿನ ಪುಸ್ತಕ – The Universe in a Nutshell. ಇಲ್ಲಿ ವಿಶ್ವದ ಉಗಮ ಮತ್ತು book-by-hawkingಬೆಳವಣಿಗೆಗಳ ಬಗ್ಗೆ ಸರಸ ಮತ್ತು ಸುಂದರ ಶೈಲಿಯಲ್ಲಿ ಹಾಕಿಂಗ್ ವಿವರಿಸುತ್ತ  ವಿಶ್ವದ ಭವ್ಯ ಚಿತ್ರವನ್ನು ಓದುಗನಿಗೆ ಸಾಕ್ಷಾತ್ಕರಿಸುವ ಪರಿ ಅನ್ಯಾದೃಶವಾದುದು. ಹಾಕಿ೦ಗ್ ಗೆ ಸಂದಿರುವ ಪ್ರಶಸ್ತಿಗಳು, ಗೌರವಗಳು ಅನೇಕ. 1974 ರಲ್ಲಿ ಬ್ರಿಟಿಷ್ ರಾಯಲ್ ಸೊಸೈಟಿ ಇವರನ್ನು ತನ್ನ ಸದಸ್ಯನನ್ನಾಗಿ ಆರಿಸಿದಾಗ ಇವರಿಗಿನ್ನೂ 32 ವರ್ಷ. ನ್ಯೂಟನ್, ಮ್ಯಾಕ್ಸವೆಲ್, ಪ್ಲಾ೦ಕ್, ಬೋರ್, ಐನ್ ಸ್ಟೈನ್ ಮೊದಲಾದ ಮಹಾನ್ ವಿಜ್ಞಾನಿಗಳು ಸದಸ್ಯರಾಗಿದ್ದ ರಾಯಲ್ ಸೊಸೈಟಿಯ ಇತಿಹಾಸದಲ್ಲಿ ಇಷ್ಟು ಚಿಕ್ಕ ಪ್ರಾಯದವರಾರೂ ಸದಸ್ಯರಾಗಿರಲಿಲ್ಲ. 1977 ರಲ್ಲಿ ಕ್ಯಾ೦ಬ್ರಿಡ್ಜನ ಗುರುತ್ವ ಸ೦ಶೋಧನ ಕೇ೦ದ್ರದ ನಿರ್ದೇಶಕರಾದರು. 1979 ರಲ್ಲಿ ಕ್ಯಾಂಬ್ರಿಡ್ಜ್ ವಿಶ್ವ ವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ಲ್ಯೂಕೇಸಿಯನ್ ಎ೦ಬ ಹುದ್ದೆಯಲ್ಲಿ ಪ್ರಾದ್ಯಾಪಕರಾಗುವ ಅವಕಾಶ ಇವರನ್ನು ಅರಸಿಕೊ೦ಡು ಬಂತು. ಇದೇ ಹುದ್ದೆಯನ್ನು 300 ವರ್ಷಗಳಷ್ಟು ಹಿಂದೆ ನ್ಯೂಟನ್ ಅಲಂಕರಿಸಿದ್ದನೆನ್ನುವುದು ಇಲ್ಲಿ ಉಲ್ಲೇಖನೀಯ. ಹಾಕಿಂಗ್ ಇಂದಿಗೂ ಅದೇ ಹುದ್ದೆಯಲ್ಲಿ ಮು೦ದುವರೆದಿದ್ದಾರೆ. ಅವರೇ ಹೇಳುವಂತೆ
“ನ್ಯೂಟನ್ ನನ್ನ ಕುರ್ಚಿಯಲ್ಲಿದ್ದ. ಆದರೆ ಅದಕ್ಕೆ ಆಗ ಇನ್ನೂ ಮೋಟರ್ ಜೋಡಿಸಿರಲಿಲ್ಲ !! ”

ಸ್ಟೀಫೆನ್ ಹಾಕಿಂಗ್ ಗೆ ಇನ್ನು ದೊರೆಯಬೇಕಾಗಿರುವುದು – ನೋಬೆಲ್ ಪ್ರಶಸ್ತಿಯೊಂದೇ. ನಾಲ್ಕು ಬಾರಿ ಪ್ರಶಸ್ತಿಗೆ ಇವರ ಹೆಸರು ಸೂಚಿಸಲ್ಪಟ್ಟರೂ ಪುರಸ್ಕೃತರಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ – ಇವರ ಸಿದ್ದಾ೦ತ ಗಣಿತೀಯವಾಗಿ ಅದೆಷ್ಟು ಸು೦ದರವಾಗಿದ್ದರೂ, ತಾರ್ಕಿಕವಾಗಿ ಸಮಂಜಸವೆನಿಸಿದರೂ ಪ್ರಾಯೋಗಿಕ ಸಮರ್ಥನೆ ಇನ್ನೂ ದೊರಕಿಲ್ಲ. ಕಾಲ ಪ್ರಾಯಶ: ಇನ್ನೂ ಪಕ್ವವಾಗಿಲ್ಲ !
ನಾಸ್ತಿಕ ಹಾಕಿ೦ಗ್
ಸ್ಟೀಫೆನ್ ಹಾಕಿ೦ಗ್ ಎಂದೂ ತಮ್ಮ ದೈಹಿಕ ಅಸಾಮರ್ಥ್ಯವನ್ನು ಅಸಾಮಥ್ಯವೆಂದೇ ಪರಿಗಣಿಸಿಲ್ಲ. ಅವರು  ಹಾಸ್ಯ ಮಾಡುತ್ತಾರೆ –
” ಪ್ರಾಯಶ: ನನಗೆ ಗಾಲಿ ಕುರ್ಚಿಗಂಟಿಕೊಂಡಿರಬೇಕಾದ ನಿರ್ಬಂಧ ವಿಪುಲ ಸಮಯಾವಕಾಶ ನೀಡಿದೆ – ವಿಶ್ವ ರಹಸ್ಯಗಳ ಬಗ್ಗೆ ಸ್ವಚ್ಚಂದವಾಗಿ ಚಿಂತಿಸಲು.”
ಇವರು ಪರಿಶುದ್ಧ ನಾಸ್ತಿಕರು. ದೇವರ ಬಗ್ಗೆ ಒಂದೆಡೆ ಹೇಳುತ್ತಾರೆ

“ಕೋಟ್ಯಾಂತರ ಬ್ರಹ್ಮಾ೦ಡಗಳಲ್ಲಿ ಸಾಮಾನ್ಯವಾದ ನಮ್ಮ ಆಕಾಶಗಂಗೆಯ ಒಂದು ಅಂಚಿನಲ್ಲಿರುವ ಸಾಮಾನ್ಯ ನಕ್ಷತ್ರದ ಸುತ್ತ ಪರಿಭ್ರಮಿಸುತ್ತಿರುವ ಅತಿ ಸಮಾನ್ಯ ಗ್ರಹವೊ೦ದರ ಮೇಲಿರುವ ಕ್ಷುಲ್ಲಕರು ನಾವು. ನಮ್ಮ ಬಗ್ಗೆ ಕಾಳಜಿಯನ್ನು ತೋರುವುದಿರಲಿ, ನಮ್ಮ ಅಸ್ತಿತ್ವವನ್ನು ಕೂಡ ಆ ಇರಬಹುದಾದ ದೇವರು ಗಮನಿಸಿಯಾನೆಂದು ನನಗನ್ನಿಸದು”

ತನ್ನ ಜೀವನದ ದೃಷ್ಟಿ ಬಗ್ಗೆ ಸ್ಟೀಫೆನ್ ಇನ್ನೊಂದು ಕಡೆ ಬರೆಯುತ್ತಾರೆ

” ನಾವು ಬಂದದ್ದು ಎಲ್ಲಿಂದ ? ಈ ವಿಶ್ವ ಜನಿಸಿದ್ದು ಹೇಗೆ ? ಇದಕ್ಕೆ ಅಂತ್ಯ ಇದೆಯೇ ? – ಇಡೀ ನನ್ನ ಜೀವನ ಇಂಥ ರೋಚಕ ಪ್ರಶ್ನೆಗಳಿಗೆ ಉತ್ತರ ಅರಸುವುದರಲ್ಲಿ ಮುಡಿಪಾಗಿದೆ. ನನ್ನ ಹಾಗೆ ನೀವು ಕೂಡ ನಕ್ಷತ್ರಗಳ ಕಡೆಗೆ ದೃಷ್ಟಿ ಚಾಚಿದಲ್ಲಿ ಮತ್ತು ಆ ವೀಕ್ಷಣೆಗೆ ತಾರ್ಕಿಕ ವಿವರಣೆ ಕೊಡಲು ಪ್ರಯತ್ನಿಸಿದಲ್ಲಿ ನಿಮಗೂ ಹೊಸ ಕಾಣ್ಕೆ ದೊರಕುತ್ತದೆ. ಈ ಪ್ರಶ್ನೆಗಳಾದರೋ ನೇರ, ಸರಳ. ಆದರೆ ಉತ್ತರ ಮಾತ್ರ ಕ್ಲಿಷ್ಟ, ಪ್ರಗಲ್ಭ – ನಮ್ಮಳವಿಗೆ ಎ೦ದಿಗೂ ಬರಲಾರದೆಂದು ಅನ್ನಿಸುತ್ತದೆ.”
ಒಮ್ಮೆ ಐನ್ ಸ್ಟೈನ್ ಹೇಳಿದ್ದರು ” ನನ್ನ ಹಾಗಿರುವ ಒಬ್ಬ ಮನುಷ್ಯ ಅಸ್ತಿತ್ವದಲ್ಲಿರುವುದಾದರೆ ಅವನ ಚಿಂತನೆ ಯಾವುದರ ಬಗ್ಗೆ ಎನ್ನುವುದು ಮುಖ್ಯವಾಗುತ್ತದೆಯೇ ಹೊರತು, ಆತ ಏನು ಮಾಡುತ್ತಾನೆ ಮತ್ತು ಯಾವೆಲ್ಲ ತೊಂದರೆಗಳಿಂದ ಬಳಲುತ್ತಿದ್ದಾನೆನ್ನುವುದರ ಮೇಲಲ” ಇದು ಹಾಕಿಂಗ್ ಗೆ ಎಲ್ಲ ರೀತಿಯಲ್ಲೂ ಅನ್ವಯಿಸುತ್ತದೆ.

ಖಭೌತ ವಿಜ್ಞಾನಕ್ಕೆ ತಮ್ಮ ಚಿಂತನೆಗಳಿ೦ದ, ಬರಹಗಳಿಂದ ನೂತನ ಆಯಾಮ ಕಲ್ಪಿಸುತ್ತಿರುವ,  ವರ್ತಮಾನದ ಶ್ರೇಷ್ಟ ಸೈದ್ಧಾಂತಿಕ ಖಭೌತ ವಿಜ್ಞಾನಿ ಸ್ಟೀಫೆನ್ ಹಾಕಿಂಗ್ ಎಂದರೆ ಒಂದು ಅದ್ಭುತ – ಅಲ್ಲ, ಪರಮಾದ್ಭುತ.

 1. ವಿಜಯರಾಜ್ ಕನ್ನಂತ
  ಮಾರ್ಚ್ 6, 2009 ರಲ್ಲಿ 8:43 ಫೂರ್ವಾಹ್ನ

  intaha olleya maahiti iruva lEkhanakke thumbaa dhanyavaada

 2. ಅಶೋಕವರ್ಧನ
  ಮಾರ್ಚ್ 8, 2009 ರಲ್ಲಿ 5:40 ಫೂರ್ವಾಹ್ನ

  ಪ್ರಿಯ ರಾಧಕ್ಕಾ
  ತುಂಬಾ ಉಪಯುಕ್ತ ಲೇಖನ. Briefer history of time ಈಗ ಇದೆಯಲ್ಲ., ಅದರ ಕುರಿತು? ಮತ್ತೆ ಮೊದಲ ಪುಸ್ತಕ Brief history of time ಅತ್ಯಂತ ಹೆಚ್ಚು ಮಾರಾಟದ ದಾಖಲೆ ಮಾಡಿದ್ದು ನಿಜ ಆದರೆ ನಾಗೇಶ ಹೆಗಡೆ (ಅಥವಾ ಬೇರೆ ಯಾರೋ?) “ಹೆಚ್ಚುಕೊಂಡು ಕಡಮೆ ಓದಿದ ಅಥವಾ ಅರ್ಥ ಮಾಡಿಕೊಂಡ ಪುಸ್ತಕ” ಎಂದೆಲ್ಲೋ ಹೇಳಿದ್ದನ್ನು ಕೇಳಿದ್ದೇನೆ. ಇರಬಹುದೇ?
  ಅಶೋಕವರ್ಧನ

 3. apkrishna
  ಮಾರ್ಚ್ 8, 2009 ರಲ್ಲಿ 9:03 ಫೂರ್ವಾಹ್ನ

  ನೀನಂದದ್ದು ನಿಜವಾಗಿರಬಹುದೇನೋ. ಎಷ್ಟೋ ಬಾರಿ ದಾಖಲೆ ಮಾರಾಟವಾದ ಪುಸ್ತಕ – ಓದುವುದಕ್ಕಿಂತ ಹೆಚ್ಚಿಗೆ ಶೋಕೇಸಿಗೆ ಶೋಭೆ ಕೊಡುವುದಕ್ಕೂ ಕೊಳ್ಳುವವರಿರಬಹುದು. ಈ ಬಗ್ಗೆ ನೀನೇ ವಿವರವಾಗಿ ಹೇಳಬಹುದು. ಹಾಕಿಂಗ್ ಪುಸ್ತಕ ತುಸು ಮೂಲಭೂತ ವಿಷಯಗಳು ಗೊತ್ತಿದ್ದರೆ ಎಂಥವನಿಗೂ ಅರ್ಥವಾಗುವಂತಿದೆ – Brief History of Time – ಇಂಥದ್ದು. ಇದರ ಮುಂದಿನ ಭಾಗವಾದ Universe in the Nutshell ಕೂಡ. ಮತ್ತೆ ನೆನೆಪಾಗುವುದು ನಾರಾಯಣ ಮಾವ. ಅದಕ್ಕೆ ಪೂರಕವಾದ ನಿನ್ನ ಪುಸ್ತಕದಂಗಡಿ.
  ರಾಧ

 4. kmmahesha
  ಏಪ್ರಿಲ್ 1, 2009 ರಲ್ಲಿ 6:57 ಫೂರ್ವಾಹ್ನ

  thauba chennagide, prapanchada in paramadbhuthagalannu innu namage thilisuvanthavaragi, Dhanyavadagalu.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: