ತಪ್ಪಾದ ನಿರ್ಣಯ

“ನನ್ನ ಮರಣಾನಂತರ ನನ್ನ ಜೀವಮಾನದ ಎಲ್ಲ ಸಂಪತ್ತನ್ನು ಮೂಲಧನವಾಗಿಟ್ಟು ಅದರ ಬಡ್ಡಿಯಿಂದ ಭೌತ ವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ – ಈ ಐದು ಪ್ರಕಾರಗಳಲ್ಲಿ ಮಾನವ ಕಲ್ಯಾಣಕ್ಕೆ ಶ್ರಮಿಸಿದ ಶ್ರೇಷ್ಠ ಸಾಧಕರನ್ನು ಆರಿಸಿ ಅವರಿಗೆ ಪ್ರಶಸ್ತಿ ನೀಡಬೇಕು” ಇದು ಆಲ್ಫ್ರೆಡ್‌ನೊಬೆಲ್ ಬರೆದ ಉಯಿಲಿನ ಸಾರಾಂಶ. (೧೮೯೫,ನವೆಂಬರ್ ೨೭).

೧೮೯೬, ಡಿಸೆಂಬರ್ ೧೦ರಂದು ಇಟೆಲಿಯ ಸಾನ್‌ರೆಮೋ ಎಂಬಲ್ಲಿರುವ “ನೊಬೆಲ್ ವಿಲ್ಲಾ” ಎಂಬ ಭವ್ಯ ಬಂಗಲೆಯಲ್ಲಿ ನೊಬೆಲ್ ನಿಧನ ಹೊಂದಿದ. ಆದರೆ ಉಯಿಲು ಕಾರ್ಯರೂಪಕ್ಕೆ ಬರಲು ಮತ್ತೆ ನಾಲ್ಕು ವರ್ಷಗಳು ಬೇಕಾದುವು. ಸ್ವೀಡನ್ ಮತ್ತು ನಾರ್ವೇ ದೇಶದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕೇ? ಪ್ರಶಸ್ತಿಗೆ ಆರಿಸಲು ಅನುಸರಿಸಬೇಕಾದ ಮಾನದಂಡಗಳಾವುವು? ಪ್ರಶಸ್ತಿಯನ್ನು ಯಾವಾಗ ಮತ್ತು ಎಲ್ಲಿ ನೀಡಬೇಕು? ಇವೆಲ್ಲ ಚರ್ಚೆಗೆ ಬಂದ ವಿಷಯಗಳು. ಈ ನಡುವೆ ನೊಬೆಲ್ ಕುಟುಂಬದ ಕೆಲವರು ಈ ಉಯಿಲಿನ ವಿರುದ್ಧ ಕೋರ್ಟು ಮೆಟ್ಟಲೇರಿದರು. ಇಂಥ ಹಲವು ಅಡೆ ತಡೆಗಳನ್ನು ಹಿಂದಿಕ್ಕಿ ನೊಬೆಲ್ ಪ್ರಶಸ್ತಿ ನೀಡುವ ಪಧ್ಧತಿ ಇಪ್ಪತ್ತನೇ ಶತಮಾನದ ಅರುಣೋದಯದಂದು – ಅಂದರೆ ೧೯೦೧ರಿಂದ ಪ್ರಾರಂಭವಾಯಿತು.

ರಾಸಾಯನಿಕ ಕ್ರಿಯೆಗಳು ಯಾವ ಬಗೆಯಲ್ಲಿ ನಡೆಯುತ್ತವೆಂದು ವಿವರಿಸುವ ಸಿಧ್ಧಾಂತಕ್ಕೆ ಹಾಲೆಂಡಿನ ಜೆಕೋಬಸ್ ಹೆಂಡ್ರಿಕ್ಯೂಸ್ ವಾಂಟ್ ಹಾಫ್ (೧೮೫೨-೧೯೧೧) ರಸಾಯನ ವಿಜ್ಞಾನದಲ್ಲಿ, ಡಿಪ್ತಿರಿಯಾ ವ್ಯಾಧಿಗೆ ಔಷಧವನ್ನು ಆವಿಷ್ಕರಿಸಿದ್ದಕ್ಕೆ ಜರ್ಮನಿಯ ಎಮಿಲ್ ಅಡಾಲ್ಫ್‌ವೋನ್ ಬೆಹ್ರಿಂಗ್(೧೮೫೪-೧೯೧೭) ವೈದ್ಯಕೀಯ ವಿಭಾಗದಲ್ಲಿ, ಭಾವಪೂರ್ಣ ಕವನಗಳಿಗಾಗಿ ಫ್ರೆಂಚ್ ಕವಿ ಸುಲ್ಲಿಪ್ರುದ್ಧೊಮ್ (೧೮೩೯-೧೯೦೭) ಸಾಹಿತ್ಯ ಪ್ರಕಾರದಲ್ಲಿ ೧೯೦೧ರ ನೊಬೆಲ್ ಪ್ರಶಸ್ತಿ ಸ್ವೀಕರಿಸಿದರು. ಸುಪ್ರಸಿದ್ಧ ಸೇವಾಸಂಸ್ಥೆ ರೆಡ್‌ಕ್ರಾಸ್ ಸ್ಥಾಪಕರಾದ ಸ್ವೀಡನ್ನಿನ ಜೀನ್ ಹೆನ್ರಿ ಡ್ಯುನಾಂಟ್ (೧೮೨೮-೧೯೧೦) ಮತ್ತು ಫ್ರಾನ್ಸಿನ ಶಾಂತಿ ಸಂಸ್ಥೆಯ ಸಂಸ್ಥಾಪಕ ಫ್ರೆಡ್ರಿಕ್ ಪ್ಯಾಸೀ (೧೮೨೨-೧೯೧೨) ನೊಬೆಲ್ ಶಾಂತಿ ಪ್ರಶಸ್ತಿ ಪಡೆದರು. (ಅರ್ಥಶಾಸ್ತ್ಕಕ್ಕೆ ಸಂಬಂಧಿಸಿದ ಪ್ರಶಸ್ತಿಯನ್ನು ಆಲ್ಫ್ರೆಡ್‌ನೊಬೆಲ್ ಸ್ಮರಣೆಗೆ ೧೯೬೮ರಲ್ಲಿ ಸ್ವೀಡನ್ ಬ್ಯಾಂಕ್ ಪ್ರಾರಂಭಿಸಿತು ಮತ್ತು ಇಂದು ಅದನ್ನೂ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ).

ಇನ್ನುಳಿದಿರುವುದು ಭೌತವಿಜ್ಞಾನ. ಜರ್ಮನಿಯ ವಿಲ್‌ಹೆಲ್ಮ್ ಕೊನ್ರಾಡ್ ರಂಟ್ಜನ್ (೧೮೪೫-೧೯೨೩) ಎಕ್ಸ್-ಕಿರಣಗಳ (X-Rays) ಆವಿಷ್ಕಾರಕ್ಕಾಗಿ ಭೌತವಿಜ್ಞಾನದ ಪ್ರಪ್ರಥಮ ನೊಬೆಲ್ ಪ್ರಶಸ್ತಿ ಪಡೆದರು. ಭೌತ ಪ್ರಪಂಚದ ಸೂಕ್ಷ್ಮಾತಿಸೂಕ್ಷ್ಮ ರಚನೆಗಳ ಬಗ್ಗೆ ಒಳನೋಟ ಒದಗಿಸುವ, ವೈದ್ಯಕೀಯ ಚಿಕಿತ್ಸಾ ರಂಗದಲ್ಲಿ ಹೊಸ ಆಯಾಮವನ್ನೇ ತಂದ ಆವಿಷ್ಕಾರ ಅದಾಗಿತ್ತು. ಆದರೆ ಯಾರು ತಿಳಿದಿದ್ದರು ಇಂಥದೊಂದು ಆವಿಷ್ಕಾರವಾಗುತ್ತದೆಂದು?

೧೯ನೆಯ ಶತಮಾನದ ಕೊನೆಯ ಪಾದಕ್ಕಾಗುವಾಗ ಬೌತ ವಿಜ್ಞಾನದಲ್ಲಿ ಸಂಶೋಧಿಸಲು ಹೆಚ್ಚೇನೂ ಉಳಿದಿಲ್ಲ, ಎಲ್ಲ ಮುಗಿದಿದೆ ಎಂಬ ಆಭಿಪ್ರಾಯ ಪ್ರಚಲಿತವಾಗಿತ್ತು. ಭವಿಷ್ಯತ್ತಿನ ಉಜ್ವಲ ವಿಜ್ಞಾನಿಯಾಗತಕ್ಕ ಮ್ಯಾಕ್ಸ್ ಪ್ಲಾಂಕ್ (೧೮೫೮ – ೧೯೪೭) ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯ ಸೇರಲು ಹೋದಾಗ (೧೮೭೫) ಅಲ್ಲಿದ್ದ ಪ್ರೊಫೆಸರ್ ಹೇಳಿದರಂತೆ “ಹುಡುಗ, ಭೌತವಿಜ್ಞಾನ ತನ್ನ ಕೊನೆಯ ಹಂತದಲ್ಲಿದೆ. ಹಾಗಾಗಿ ಇದರಲ್ಲಿ ಭವಿಷ್ಯವಿಲ್ಲ. ಬೇರೆ ಯಾವುದಾದರೂ ವಿಷಯವನ್ನು ಆಯ್ದುಕೊಳ್ಳುವುದು ಭವಿಷ್ಯದ ದೃಷ್ಟಿಯಲ್ಲಿ ಉತ್ತಮ” ೧೯೦೭ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಶ್ರೇಷ್ಠ ಪ್ರಾಯೋಗಿಕ ಭೌತ ವಿಜ್ಞಾನಿ ಅಮೇರಿಕದ ಮೈಕೆಲ್ಸ್‌ನ್ (೧೮೫೨ -೧೯೩೧) ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಮಾಡುತ್ತ (೧೮೮೫) ನುಡಿದರು “ಇಂದು ಪ್ರಾಯಶ: ಭೌತವಿಜ್ಞಾನದಲ್ಲಿ ಹೆಚ್ಚಿನ ತತ್ತ್ವಗಳು ನಿಖರವಾಗಿ ಸ್ಥಿರೀಕರಿಸಲ್ಪಟ್ಟಿವೆ. ಈ ತತ್ತ್ವಗಳನ್ನು ಉಪಯೋಗಿಸಿ ಇನ್ನು ನಮಗೆ ಗೊಚರಿಸುವ ವಿದ್ಯಮಾನಗಳನ್ನು ವಿವರಿಸಲು ಸಾಧ್ಯ ಮತ್ತು ಅವಷ್ಟೇ ಬಾಕಿ ಉಳಿದಿವೆ. ಭವಿಷ್ಯದ ಭೌತವಿಜ್ಞಾನದಲ್ಲಿ ಫಲಿತಾಂಶವನ್ನು ಆರನೆಯ ದಶಮಾಂಶ ಸ್ಥಾನಕ್ಕೆ ಸರಿಯಾಗುವಷ್ಟರ ಮಟ್ಟಿಗೆ ನಿಖರವಾಗಿ ಅಳೆಯುವುದಷ್ಟೇ ಆಗಿರುತ್ತದೆ”

ಹೀಗೆ ಗ್ರಹಿಸುವುದಕ್ಕೆ ಬಲವಾದ ಕಾರಣವೂ ಇತ್ತು. ನ್ಯೂಟನ್ ಬಲವಿಜ್ಞಾನ (Newtonian Mechanics), ಮತ್ತು ಮ್ಯಾಕ್ಸ್‌ವೆಲ್ ರೂಪಿತ ವಿದ್ಯುತ್ಕಾಂತ ಸಿಧ್ಧಾಂತಗಳನ್ನು (Electromagnetic Theory) ಬಳಸಿಕೊಂಡು ಭೌತ ಪ್ರಪಂಚದ ಹೆಚ್ಚಿನ ವಿದ್ಯಮಾನವನ್ನು ವಿವರಿಸಲು ಸಾಧ್ಯವಾಗಿತ್ತು. ಎಂದೇ ಭೌತವಿಜ್ಞಾನದಲ್ಲಿ ಸಂಶೋಧನೆಗೆ ಹೆಚ್ಚೇನೂ ಆಸ್ಪದವಿಲ್ಲ ಎಂಬ ನಿರ್ಣಯಕ್ಕೆ ಬಂದದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆದರೆ ಅಚ್ಚರಿ ಎಂದರೆ ಇವೆಲ್ಲವೂ ಎರಡೇ ಎರಡು ವರ್ಷಗಳಲ್ಲಿ ತಲೆಕೆಳಗಾದದ್ದು. ನಮಗೆ ತಿಳಿದದ್ದಕ್ಕಿಂತ ಹೆಚ್ಚಿಗೆ ತಿಳಿಯದೇ ಇದ್ದದ್ದು ಇದೆ ಎಂದು ತಿಳಿದದ್ದು ಎಕ್ಸ್-ಕಿರಣದ ಆವಿಷ್ಕಾರದಿಂದ. ಈ ಆವಿಷ್ಕಾರ ನೂತನ ಭೌತ ವಿಜ್ಞಾನಕ್ಕೆ ನಾಂದಿ ಹಾಡಿತು. ಆ ಆವಿಷ್ಕಾರದ ಕಥೆ ಮತ್ತು ಏತಕ್ಕೆ ರಂಟ್ಜನ್ ಪ್ರಪ್ರಥಮ ನೊಬೆಲ್ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರೆಂದು ನಿಮಗೆ ಮುಂದೆ ವಿವರಿಸುತ್ತೇನೆ.

  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮ್ಮ ಟಿಪ್ಪಣಿ ಬರೆಯಿರಿ