ಪಾಕಿಸ್ತಾನದಲ್ಲಿ ಮತ್ತೊಂದು ಬರ್ಬರ ತಾಲೀಬಾನೀ ಕಾನೂನು ಜಾರಿಗೆ ಬಂದ ಕಳವಳಕಾರೀ ವರದಿ ವಾರಗಳ ಹಿಂದೆ ಆಂಗ್ಲ ದೈನಿಕ ದಿ.ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಹುಡುಗಿಯೊಬ್ಬಳಿಗೆ ಅನೈತಿಕ ಸಂಬಂಧವಿದೆ ಎಂಬ ಗುಮಾನಿ. ಎಂಥ ಘೋರ ಅಪರಾಧವಿದು!. ಉಗ್ರ ತಾಲೀಬಾನೀಗಳ ಮುಖಂಡರು ಶಿಕ್ಷೆ ಘೋಷಿಸಿದರು - ಸಾರ್ವಜನಿಕವಾಗಿ ಮರಣ ದಂಡನೆ. ಬೇರಾರೂ ಇನ್ನು ಮುಂದೆ ಅಂಥ ತಪ್ಪು ಮಾಡಬಾರದಲ್ಲ ಅದಕ್ಕೆ. ಅವರಿಬ್ಬರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಹುಡುಗಿ ಗೋಗರೆಯುತ್ತಿದ್ದಳಂತೆ - “ದಯವಿಟ್ಟು ಕ್ಷಮಿಸಿ, ನಾನು ಯಾವ ತಪ್ಪೂ ಮಾಡಿಲ್ಲ.“ ಆದರೆ ಧರ್ಮದ ಹೆಸರಿನಲ್ಲಿ ಅಂಧರಾದ ಕ್ರೂರಿಗಳು ಬಿಡಲಿಲ್ಲ. ಒಂದರ ಮೇಲೊಂದರಂತೆ ಎದೆಗೆ ಗುಂಡಿಕ್ಕಿದರು. ಧರೆಗೆ ಒರಗಿದ ಅವಳಲ್ಲಿನ್ನೂ ಕುಟುಕು ಜೀವ ತುಡಿಯುತ್ತಿತ್ತಂತೆ. ಅಲ್ಲಿದ್ದ ನ್ಯಾಯಪರುರು ಹೇಳಿದರಂತೆ “ಜೀವ ಉಂಟು, ಗುಂಡಿಕ್ಕಿ” ಮತ್ತೆ ಕೆಲವು ನುಗ್ಗಿದುವು ದೇಹಕ್ಕೆ. ಆಮೇಲೆ ಹುಡುಗನನ್ನು ಬಿಡಲಿಲ್ಲ, ನಿರ್ದಯಿಗಳು ಹತ್ಯೆ ಮಾಡಿದರು. ಸಾರ್ವಜನಿಕವಾಗಿ ಹುಡುಗಿಗೆ ಛಡಿ ಏಟು ಕೊಟ್ಟ ಶಿಕ್ಷೆಯ ಸುದ್ದಿ ತಣ್ಣಗಾಗುವುದರೊಳಗೆ ಬಂದ ಈ ವರದಿ ಮುಂಬರುವ ದಿನಗಳಲ್ಲಿ ಪಾಕಿಸ್ಥಾನ ಯಾವ ಹಾದಿ ಹಿಡಿಯಲಿದೆ ಎನ್ನುವುದರ ಸ್ಪಷ್ಟ ಸೂಚೆನೆಯಾಗಿದೆ. ಈಗಾಗಲೇ ಹಲವು ಉಗ್ರಗಾಮಿ ಸಂಘಟನೆಗಳ ತಾಣವಾದ ಪಾಕಿಸ್ಥಾನದ ಎಲ್ಲ ಉಗ್ರರನ್ನು ಒಟ್ಟು ಮಾಡಿದ ಪ್ರತೀಕವೋ ಎನ್ನುವಂಥ ತಾಲಿಬಾನಿಗಳ ಕೈ ಮೇಲಾಗುತ್ತಿರುವದನ್ನು ಕಂಡ ಅಮೇರಿಕ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳು ತಮ್ಮ ಕಳವಳ ವ್ಯಕ್ತಪಡಿಸತೊಡಗಿವೆ.
Keep reading →
Categories: ಸ್ವಗತಗಳು
ಶಿವರಾಮಕಾರಂತರು ಕನ್ನಡದ ಶ್ರೇಷ್ಟ ಕಾದಂಬರಿಕಾರರಾಗಿ ಸುಪ್ರಸಿದ್ದರು. ಚೋಮನ ದುಡಿಯಿಂದ ತೊಡಗಿ ಮೂಕಜ್ಜಿಯ ಕನಸುಗಳ ತನಕ ಅವರು ಬರೆದ ಕಾದಂಬರಿಗಳು ಕನ್ನಡ ಮನಸ್ಸನ್ನು ತಟ್ಟಿದ ಬಗೆ ಅನನ್ಯವಾದದ್ದು. ಆದರೆ ಆಶ್ಚರ್ಯವಾಗಬಹುದು - ಅವರ ಪ್ರಥಮ ಆಸಕ್ತಿ ಇದ್ದುದು - ವೈಚಾರಿಕ ಬರಹಗಳಲ್ಲಿ - ಅದರಲ್ಲೂ ವಿಜ್ಞಾನ ಸಾಹಿತ್ಯದಲ್ಲಿ.
ಕಾಲೇಜು ಮೆಟ್ಟಲೇರಿ, ವಿಶ್ವವಿದ್ಯಾಲಯದ ಅಂಗಣದಲ್ಲಿ ವಿಜ್ಞಾನದ “ಕ್ರಮಬದ್ಧ ಶಿಕ್ಷಣ” ಪಡೆಯದೇ ಹೋದರೂ ಬೆರಗಾಗುವಷ್ಟು ವಿಪುಲವಾಗಿ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕಾರಂತರು ರಚಿಸಿದರು. ಮೂರು ಸಂಪುಟಗಳ “ಬಾಲಪ್ರಪಂಚ” (೧೯೩೬) ಮತ್ತು ನಾಲ್ಕು ಸಂಪುಟಗಳ “ವಿಜ್ಞಾನ ಪ್ರಪಂಚ” (೧೯೫೯) ವಿಜ್ಞಾನದ ಬಗ್ಗೆ ಕಾರಂತರ ತೀವ್ರ ವಿಜ್ಞಾನ ಆಸ್ಥೆಗೆ ಸಾಕ್ಷಿಯಾಗಿವೆ. ಸುಮಾರು ಮೂರು ಸಾವಿರ ಪುಟಗಳಿಗೆ ವಿಸ್ತರಿಸಿಕೊಂಡಿರುವ ಈ ಸಂಪುಟಗಳು ಒಂದು ವಿಶ್ವವಿದ್ಯಾಲಯದ ಹಲವು ಪ್ರಾದ್ಯಾಪಕ ಮಹೋದಯರು ಸೇರಿ ಮಾಡಬಹುದಾದ ಮಹೋನ್ನತ ಕಾರ್ಯ. ಆದರೆ ನಾವು ಗಮನಿಸಬೇಕಾದದ್ದು ಶಿವರಾಮ ಕಾರಂತರು ಇವೆಲ್ಲವನ್ನು ಏಕಾಂಗಿಯಾಗಿ ಮಾಡಿದರು. ಇವಷ್ಟೇ ಅಲ್ಲ, ಮತ್ತೂ ಹಲವು ವಿಜ್ಞಾನ ಪುಸ್ತಕ ಮತ್ತು ಲೇಖನಗಳನ್ನು ಬರೆದರು.
Keep reading →
Categories: ವ್ಯಕ್ತಿ - ಜೀವನ
ಮೊನ್ನೆ ಮೊನ್ನೆ ಕಳೆಯಿತು ಫೆಬ್ರವರಿ 28, ವಿಜ್ಞಾನ ದಿನವೆಂದು ತಣ್ಣಗೆ ಆಚರಿಸಿದೆವು. ಸಿವಿ ರಾಮನ್ ಕುರಿತು ಉದಯವಾಣಿಯಲ್ಲಿ ನನ್ನ ಕಿರು ಬರಹ ಪ್ರಕಟವಾಯಿತು (ನೋಡಿ ಉದಯವಾಣಿ 27.2.2009). ಅದರ ವಿಸ್ತ್ರುತ ರೂಪ ಕೆಂಡ ಸಂಪಿಗೆಯಲ್ಲಿ ಮತ್ತು ಇನ್ನಷ್ಟು ಪರಿಷ್ಕರಿಸಿದ ಬರಹ ಇಲ್ಲಿದೆ. ರಾಮನ್ ಪರಿಣಾಮದ ಬಗ್ಗೆ ಬರೆದ ಈ ಲೇಖನ ನಿಮ್ಮ ಮೇಲೂ ಪರಿಣಾಮ ಬೀರಿತಾದರೆ ನನ್ನ ಪ್ರಯತ್ನ ಸಾರ್ಥಕ. ಓದಿ ಬರೆಯಿರಿ ನಿಮ್ಮ ಪ್ರತಿಕ್ರಿಯೆಯನ್ನು. ಕಾಯುತ್ತಿದ್ದೇನೆ ಅದಕ್ಕಾಗಿ …
1928, ಫೆಬ್ರವರಿ 28. ಕಲ್ಕತ್ತಾದ ಬೌಬಝಾರ್ ಓಣಿಯಲ್ಲಿದ್ದ “ದಿಇಂಡಿಯನ್ ಎಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್” ಸಂಸ್ಥೆಯ ಕಛೇರಿಯಲ್ಲಿ ಮುಸ್ಸಂಜೆ ಮುಸುಕುತ್ತಿತ್ತು. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ವಿ.ರಾಮನ್ (ಚಂದ್ರಶೇಖರ ವೆಂಕಟರಾಮನ್, (1888-1970) ಕರೆದಿದ್ದ ಪತ್ರಿಕಾ ಗೋಷ್ಠಿಗಾಗಿ ವರದಿಗಾರರು ಅಲ್ಲಿ ಸೇರಿದ್ದಾರೆ. ರಾಮನ್ ಕರೆದ ಗೊಷ್ಠಿ ಅಂದ ಮೇಲೆ ಅಲ್ಲೇನೋ ವಿಶೇಷವಾದದ್ದು ಇರಲೇಬೇಕೆಂದು ಅವರಿಗೆ ಗೊತ್ತಿತ್ತು. ಆವರ ನಿರೀಕ್ಷೆ ಹುಸಿಯಾಗಲಿಲ್ಲ.
Keep reading →
Categories: ವಿಜ್ಞಾನ ಲೇಖನಗಳು

“ನನ್ನ ಮರಣಾನಂತರ ನನ್ನ ಜೀವಮಾನದ ಎಲ್ಲ ಸಂಪತ್ತನ್ನು ಮೂಲಧನವಾಗಿಟ್ಟು ಅದರ ಬಡ್ಡಿಯಿಂದ ಭೌತ ವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ – ಈ ಐದು ಪ್ರಕಾರಗಳಲ್ಲಿ ಮಾನವ ಕಲ್ಯಾಣಕ್ಕೆ ಶ್ರಮಿಸಿದ ಶ್ರೇಷ್ಠ ಸಾಧಕರನ್ನು ಆರಿಸಿ ಅವರಿಗೆ ಪ್ರಶಸ್ತಿ ನೀಡಬೇಕು” ಇದು ಆಲ್ಫ್ರೆಡ್‌ನೊಬೆಲ್ ಬರೆದ ಉಯಿಲಿನ ಸಾರಾಂಶ. (೧೮೯೫,ನವೆಂಬರ್ ೨೭).
೧೮೯೬, ಡಿಸೆಂಬರ್ ೧೦ರಂದು ಇಟೆಲಿಯ ಸಾನ್‌ರೆಮೋ ಎಂಬಲ್ಲಿರುವ “ನೊಬೆಲ್ ವಿಲ್ಲಾ” ಎಂಬ ಭವ್ಯ ಬಂಗಲೆಯಲ್ಲಿ ನೊಬೆಲ್ ನಿಧನ ಹೊಂದಿದ. ಆದರೆ ಉಯಿಲು ಕಾರ್ಯರೂಪಕ್ಕೆ ಬರಲು ಮತ್ತೆ ನಾಲ್ಕು ವರ್ಷಗಳು ಬೇಕಾದುವು. ಸ್ವೀಡನ್ ಮತ್ತು ನಾರ್ವೇ ದೇಶದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕೇ? ಪ್ರಶಸ್ತಿಗೆ ಆರಿಸಲು ಅನುಸರಿಸಬೇಕಾದ ಮಾನದಂಡಗಳಾವುವು? ಪ್ರಶಸ್ತಿಯನ್ನು ಯಾವಾಗ ಮತ್ತು ಎಲ್ಲಿ ನೀಡಬೇಕು? ಇವೆಲ್ಲ ಚರ್ಚೆಗೆ ಬಂದ ವಿಷಯಗಳು. ಈ ನಡುವೆ ನೊಬೆಲ್ ಕುಟುಂಬದ ಕೆಲವರು ಈ ಉಯಿಲಿನ ವಿರುದ್ಧ ಕೋರ್ಟು ಮೆಟ್ಟಲೇರಿದರು. ಇಂಥ ಹಲವು ಅಡೆ ತಡೆಗಳನ್ನು ಹಿಂದಿಕ್ಕಿ ನೊಬೆಲ್ ಪ್ರಶಸ್ತಿ ನೀಡುವ ಪಧ್ಧತಿ ಇಪ್ಪತ್ತನೇ ಶತಮಾನದ ಅರುಣೋದಯದಂದು – ಅಂದರೆ ೧೯೦೧ರಿಂದ ಪ್ರಾರಂಭವಾಯಿತು.
Keep reading →
Categories: ವಿಜ್ಞಾನ ಲೇಖನಗಳು · ವ್ಯಕ್ತಿ - ಜೀವನ
ಮಾರ್ಚ್ ೧೪ ಕಳೆದಿದೆ. ಕಾಲ ಯಾರಿಗೂ ಕಾಯುವುದಿಲ್ಲ. ಮಾರ್ಚ್ ೧೪ರ ವಿಶೇಷತೆಯ ಬಗ್ಗೆ ಉದಯವಾಣಿಯಲ್ಲಿ ನನ್ನ ಬರಹ ಪ್ರಕಟವಾಯಿತು. ಅದರ ವಿಸ್ತ್ರುತ ರೂಪ kendasampige.com ನಲ್ಲಿದೆ. ಎರಡನ್ನೂ ಸೇರಿಸಿದ ಬರಹ ಇದೀಗ ನನ್ನದೇ ತಾಣದಲ್ಲಿದೆ. ಆ ವಿಶೇಷ ಏನು ? ಗೊತ್ತುಂಟ ಮಾರಾಯ್ರೆ – ಅದು ನಮ್ಮ ಪೈಗಳ ದಿನ!
ನನಗೊಬ್ಬರು ಮಿಂಚಂಚೆಯ – ಅಂದರೆ ಇ-ಮೈಲ್ ಸ್ನೇಹಿತರು. ಅವರು ಉಡುಪಿಯ ರಮೇಶ ಅಡಿಗರು. ಇತ್ತೀಚೆಗೆ ಅಡಿಗರು ಎಚ್ಚರಿಸಿದರು “ಮಾರ್ಚ ೧೪ ಬರುತ್ತಿದೆ. ಪ್ರಪಂಚದ ಹಲವೆಡೆ ಪೈ ಡೇ (ದಿನ) ಆಚರಣೆ ಮಾಡುತ್ತಿದ್ದಾರೆ.” ನಿಜ, ಈ ಆಚರಣೆ ನಮ್ಮಲ್ಲಿ ಇಲ್ಲ. ಆದರೆ ಅಮೇರಿಕ, ಆಸ್ಟ್ರೇಲಿಯಾ ಮೊದಲಾದೆಡೆ ಈ “ಪೈ ಡೇ” ಅಂದರೆ “ಪೈ ದಿನ” ವನ್ನು ವಿಜೃಂಭಣೆಯಿಂದ ಆಚರಿಸುತ್ತಾರಂತೆ. ನಾವು ಯಾವ್ಯಾವುದೋ ದಿನವನ್ನು ಎರವಲು ಪಡೆದು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವಾಗ ಇದನ್ನೂ ಆಚರಿಸಿದರೆ ನಷ್ಟವೇನೂ ಆಗದು. ಅಷ್ಟಕ್ಕೂ ಈ ಪೈ ಅಂದರೆ ಯಾರು?
ಅಪರಿಮೇಯ ಸಂಖ್ಯೆ
ಈ ಪೈ ಅಸಾಮಾನ್ಯ. ಗಣಿತ ಮತ್ತು ಭೌತ ವಿಜ್ಞಾನದಲ್ಲಿ ಎಲ್ಲೆಲ್ಲಿ ವೃತ್ತ ಬರುತ್ತದೋ ಅಲ್ಲೆಲ್ಲ ಪೈ ಪ್ರತ್ಯಕ್ಷ. ಬೈಬಲ್‌ನಲ್ಲಿ ಇದರ ಕುರಿತು ಪ್ರಸ್ತಾಪವಿದೆಯಂತೆ. ಕ್ರಿಸ್ತ ಪೂರ್ವದ ದಿನಗಳ ಬೆಬಿಲೊನಿಯಾ, ಈಜಿಪ್ಟ ಗಣಿತವಿದರಿಗೆ ಪೈಯ ಬೆಲೆ ಸರಿ ಸುಮಾರಾಗಿ ೩.೧ ಎಂದು ತಿಳಿದಿತ್ತು. ಆದರೆ ಪೈ ಎಂಬ ಮಾಯಾವಿ ಸಂಖ್ಯೆಯನ್ನು ಶೋಧಿಸಿದವರು ಯಾರು? ಸ್ಪಷ್ಟವಾಗಿ ತಿಳಿಯದು ಯಾರಿಗೂ.
Keep reading →
Categories: ವಿಜ್ಞಾನ ಲೇಖನಗಳು