Archive

Archive for the ‘ವ್ಯಕ್ತಿ – ಜೀವನ’ Category

ಚಂದ್ರ ಶತಮಾನೋತ್ಸವ

ಅಕ್ಟೋಬರ್ 17, 2010 8 comments

ನಿಮಗೆ ನೆನಪಿಸುತ್ತಿದ್ದೇನೆ, ಅಷ್ಟೇ. ಇಪ್ಪತ್ತನೇ ಶತಮಾನದ ಖಗೋಳವಿಜ್ಞಾನ ರಂಗ ಕಂಡ ಅದ್ವಿತೀಯ ತಾರೆಯ ಜನ್ಮದಿನ ಬಂದಿದೆ. ತನ್ನ ಕಾಲದಲ್ಲಿಯೇ ದಂತಕಥೆಯಾದ ಇವರನ್ನು ವಿಜ್ಞಾನ ಲೇಖಕ ಮಿಲ್ಲರ್ ನಕ್ಷತ್ರಲೋಕದ ಚಕ್ರವರ್ತಿಎಂದು ಕರೆದಿದ್ದಾರೆ. ಈ ಅನಭಿಷಕ್ತ ಚಕ್ರವರ್ತಿಯೇ ಪ್ರೊ. ಎಸ್.ಚಂದ್ರಶೇಖರ್ ಅತ್ಮೀಯರ ಪಾಲಿಗೆ ಚಂದ್ರ. ಹತ್ತೊಂಬತ್ತರ ಹರೆಯದಲ್ಲಿಯೇ ಇವರು ಸಾಗಿದ್ದು ಸಾಗರದಾಚೆಯ ಇಂಗ್ಲೆಂಡಿಗೆ ನಕ್ಷತ್ರಗಳ ಸಂಕೀರ್ಣ ಸಂರಚನೆಯ ಬಗ್ಗೆ ಅತ್ಯುನ್ನತ ಸಂಶೋಧನೆಗೆ. ರಾಯಲ್ ಸೊಸೈಟಿಯ ವಿದ್ವನ್ಮಣಿಗಳ ಸಭೆಯಲ್ಲಿ ತನ್ನ ನೂತನ ಸಿದ್ಧಾಂತವನ್ನು ಮಂಡಿಸಿ ಘನಂದಾರಿ ವಿಜ್ಞಾನಿಗಳಿಗೆ ಸಡ್ಡು ಹೊಡೆದರು; ಬಿಳಿ ದೊರೆಗಳ ಆಳ್ವಿಕೆಯ ದಿನಗಳ ಕೀಳರಿಮೆಯನ್ನು ತೊಡೆದು ಭಾರತೀಯ ಅಸ್ಮಿತೆಯನ್ನು ಪ್ರಪಂಚ ಮುಖಕ್ಕೆ ತೋರಿದರು. ಸಜ್ಜನಿಕೆಯ ಸಾಕಾರವಾಗಿದ್ದ ಇವರ ಜೀವನ ಸಾಧನೆ ಎಲ್ಲವೂ ರೋಚಕ ತಮ್ಮ ಕಾಲದಲ್ಲಿಯೆ ದಂತ ಕಥೆಯಾಗಿ ಹೋದರು. ಇರುತ್ತಿದ್ದರೆ ಇವರಿಗೆ ನೂರು ವರ್ಷಗಳಾಗುತ್ತಿದ್ದುವು. ಅಂದರೆ ವಿಜ್ಞಾನ ಪ್ರಿಯರಿಗೆ ಚಂದ್ರಶೇಖರ್ ಜನ್ಮ ಶತಮಾನೋತ್ಸವದ ಆಚರಣೆಯ ಸಂಭ್ರಮ. ಆ ಮೂಲಕ ಇನ್ನಷ್ಟು ವಿಜ್ಞಾನ ಚಿಂತನ ಮಂಥನಕ್ಕೊಂದು ಅವಕಾಶ. Read more…

Advertisements

ರಾಮನ್ ಪರಿಣಾಮ ಕಂಡ ಕೆ ಎಸ್ ಕೃಷ್ಣನ್

ಫೆಬ್ರವರಿ 28, 2010 2 comments

ಫೆಬ್ರವರಿ ೨೮ ಮತ್ತೆ ಬಂದಿದೆ – ವಿಜ್ಞಾನ ದಿನವೂ ಕೂಡ.ಈ ಬಾರಿ ರಾಮನ್ ಪರಿಣಾಮದ ರಾಮನ್ ಬದಲಿಗೆ ಆ ಆವಿಷ್ಕಾರದಲ್ಲಿ ಬಲು ಮುಖ್ಯ ಪಾತ್ರ ವಹಿಸಿದ ಅನನ್ಯ ಭೌತ ವಿಜ್ಞಾನಿ ಕೆ ಎಸ್ ಕೃಷ್ಣನ್ ಬಗ್ಗೆ ಬರೆದ ಲೇಖನ ಕೆಂಡ ಸಂಪಿಗೆ kendasampige.com ಯಲ್ಲಿ ಪ್ರಕಟವಾಗಿದೆ. ಅದನ್ನು ಇಲ್ಲಿ ನೀಡಿದ್ದೇನೆ. ಒಂದಿಷ್ಟು ಭೌತ ವಿಜ್ಞಾನದ ಬಗ್ಗೆ, ರೂಪಿಸಿದ ಭೌತ ವಿಜ್ಞಾನಿಯ ಬಗ್ಗೆ ಮಾತುಕತೆ! Read more…

ನಾರಾಯಣ ಮಾವ ಮತ್ತು ಮರಿಕೆ

ಜುಲೈ 7, 2009 2 comments
ಫ್ರಖರ ಚಿಂತಕ ಮೂಢನಂಬುಗೆಯ ಭಂಜಕ

ಫ್ರಖರ ಚಿಂತಕ ಮೂಢನಂಬುಗೆಯ ಭಂಜಕ

ವಿಜ್ಞಾನ ವಾಙ್ಮಯಕ್ಕೆ ಇವರು ಜಿಟಿಎನ್ – ಜಿಟಿನಾರಾಯಣ ರಾವ್.  ನಮಗೆ ಮರಿಕೆಯ ಮಂದಿಗೆ? ಮರಿಕೆಯ ಹಿರಿಯರಿಗೆ ನಾರಾಯಣ, ಮಕ್ಕಳಿಗೆ ನಾರಾಯಣ ಮಾವ, ಮರಿಮಕ್ಕಳಿಗೆ ನಾರಾಯಣಜ್ಜ.

ಇವರು ಮರಿಕೆಗೆ ಬರುತ್ತಾರೆಂದರೆ ನಮಗೆಲ್ಲ ಸಂಭ್ರಮ, ಉತ್ಸಾಹ, ಒಂದಷ್ಟು ದಿಗಿಲು – ಪುಂಖಾನುಪುಂಖವಾಗಿ  ಅವರೆಸೆಯುತ್ತಿದ್ದ ವಿಜ್ಞಾನ ಸಂಗೀತಾದಿ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲ.

ಮರಿಕೆ ಇರುವುದು ಪುತ್ತೂರು ಪೇಟೆಯಿಂದ ಐದು ಕಿಮೀ ದೂರದಲ್ಲಿ, ಹಸಿರು ಹೊದ್ದು ಮಲಗಿರುವ ಬಲ್ಲೇರಿ ಕಾಡಿನ ಸನಿಹದಲ್ಲಿ.  ಜಿಟಿಎನ್ ಹುಟ್ಟಿದ್ದು ಮರಿಕೆಯಲ್ಲಿ (೩೦.೧.೧೯೨೬). ನನ್ನ ತಂದೆಯ ತಂದೆ – ಅಂದರೆ ಅಜ್ಜ ಸುಬ್ಬಯ್ಯರ ತಂಗಿ ವೆಂಕಟಲಕ್ಶ್ಮಿ  ಜಿಟಿಯವರ ತಾಯಿ. ಸಾಹಿತ್ಯದಲ್ಲಿ ಅಗಾಧ ಆಸಕ್ತಿ ಇದ್ದ ಅಜ್ಜ ಜಿಟಿಎನ್ ಅವರ ಮೇಲೆ ಗಾಢ ಪ್ರಭಾವ ಬೀರಿದರೆನ್ನುವುದನ್ನು ಆಗಾಗ ಹೇಳುತ್ತಿದ್ದರು ಮತ್ತು ಅದನ್ನು ತಮ್ಮ ಎನ್ ಸಿಸಿ ದಿನಗಳು, ಮುಗಿಯದ ಪಯಣ ಕೃತಿಗಳಲ್ಲಿ ದಾಖಲಿಸಿದ್ದಾರೆ.

Read more…

ಕಾರಂತರ ವಿಜ್ಞಾನ ಪ್ರೀತಿ

ಏಪ್ರಿಲ್ 20, 2009 12 comments

ಕನ್ನಡದ ಧೀಮಂತ ಶಿವರಾಮ ಕಾರಂತಶಿವರಾಮಕಾರಂತರು ಕನ್ನಡದ ಶ್ರೇಷ್ಟ ಕಾದಂಬರಿಕಾರರಾಗಿ ಸುಪ್ರಸಿದ್ದರು. ಚೋಮನ ದುಡಿಯಿಂದ ತೊಡಗಿ ಮೂಕಜ್ಜಿಯ ಕನಸುಗಳ ತನಕ ಅವರು ಬರೆದ ಕಾದಂಬರಿಗಳು ಕನ್ನಡ ಮನಸ್ಸನ್ನು ತಟ್ಟಿದ ಬಗೆ ಅನನ್ಯವಾದದ್ದು. ಆದರೆ ಆಶ್ಚರ್ಯವಾಗಬಹುದು ಅವರ ಪ್ರಥಮ ಆಸಕ್ತಿ ಇದ್ದುದು ವೈಚಾರಿಕ ಬರಹಗಳಲ್ಲಿ ಅದರಲ್ಲೂ ವಿಜ್ಞಾನ ಸಾಹಿತ್ಯದಲ್ಲಿ.

ಕಾಲೇಜು ಮೆಟ್ಟಲೇರಿ, ವಿಶ್ವವಿದ್ಯಾಲಯದ ಅಂಗಣದಲ್ಲಿ ವಿಜ್ಞಾನದ ಕ್ರಮಬದ್ಧ ಶಿಕ್ಷಣಪಡೆಯದೇ ಹೋದರೂ ಬೆರಗಾಗುವಷ್ಟು ವಿಪುಲವಾಗಿ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕಾರಂತರು ರಚಿಸಿದರು. ಮೂರು ಸಂಪುಟಗಳ ಬಾಲಪ್ರಪಂಚ” (೧೯೩೬) ಮತ್ತು ನಾಲ್ಕು ಸಂಪುಟಗಳ ವಿಜ್ಞಾನ ಪ್ರಪಂಚ” (೧೯೫೯) ವಿಜ್ಞಾನದ ಬಗ್ಗೆ ಕಾರಂತರ ತೀವ್ರ ವಿಜ್ಞಾನ ಆಸ್ಥೆಗೆ ಸಾಕ್ಷಿಯಾಗಿವೆ. ಸುಮಾರು ಮೂರು ಸಾವಿರ ಪುಟಗಳಿಗೆ ವಿಸ್ತರಿಸಿಕೊಂಡಿರುವ ಈ ಸಂಪುಟಗಳು ಒಂದು ವಿಶ್ವವಿದ್ಯಾಲಯದ ಹಲವು ಪ್ರಾದ್ಯಾಪಕ ಮಹೋದಯರು ಸೇರಿ ಮಾಡಬಹುದಾದ ಮಹೋನ್ನತ ಕಾರ್ಯ. ಆದರೆ ನಾವು ಗಮನಿಸಬೇಕಾದದ್ದು ಶಿವರಾಮ ಕಾರಂತರು ಇವೆಲ್ಲವನ್ನು ಏಕಾಂಗಿಯಾಗಿ ಮಾಡಿದರು. ಇವಷ್ಟೇ ಅಲ್ಲ, ಮತ್ತೂ ಹಲವು ವಿಜ್ಞಾನ ಪುಸ್ತಕ ಮತ್ತು ಲೇಖನಗಳನ್ನು ಬರೆದರು.

Read more…

ತಪ್ಪಾದ ನಿರ್ಣಯ

“ನನ್ನ ಮರಣಾನಂತರ ನನ್ನ ಜೀವಮಾನದ ಎಲ್ಲ ಸಂಪತ್ತನ್ನು ಮೂಲಧನವಾಗಿಟ್ಟು ಅದರ ಬಡ್ಡಿಯಿಂದ ಭೌತ ವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ – ಈ ಐದು ಪ್ರಕಾರಗಳಲ್ಲಿ ಮಾನವ ಕಲ್ಯಾಣಕ್ಕೆ ಶ್ರಮಿಸಿದ ಶ್ರೇಷ್ಠ ಸಾಧಕರನ್ನು ಆರಿಸಿ ಅವರಿಗೆ ಪ್ರಶಸ್ತಿ ನೀಡಬೇಕು” ಇದು ಆಲ್ಫ್ರೆಡ್‌ನೊಬೆಲ್ ಬರೆದ ಉಯಿಲಿನ ಸಾರಾಂಶ. (೧೮೯೫,ನವೆಂಬರ್ ೨೭).

೧೮೯೬, ಡಿಸೆಂಬರ್ ೧೦ರಂದು ಇಟೆಲಿಯ ಸಾನ್‌ರೆಮೋ ಎಂಬಲ್ಲಿರುವ “ನೊಬೆಲ್ ವಿಲ್ಲಾ” ಎಂಬ ಭವ್ಯ ಬಂಗಲೆಯಲ್ಲಿ ನೊಬೆಲ್ ನಿಧನ ಹೊಂದಿದ. ಆದರೆ ಉಯಿಲು ಕಾರ್ಯರೂಪಕ್ಕೆ ಬರಲು ಮತ್ತೆ ನಾಲ್ಕು ವರ್ಷಗಳು ಬೇಕಾದುವು. ಸ್ವೀಡನ್ ಮತ್ತು ನಾರ್ವೇ ದೇಶದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕೇ? ಪ್ರಶಸ್ತಿಗೆ ಆರಿಸಲು ಅನುಸರಿಸಬೇಕಾದ ಮಾನದಂಡಗಳಾವುವು? ಪ್ರಶಸ್ತಿಯನ್ನು ಯಾವಾಗ ಮತ್ತು ಎಲ್ಲಿ ನೀಡಬೇಕು? ಇವೆಲ್ಲ ಚರ್ಚೆಗೆ ಬಂದ ವಿಷಯಗಳು. ಈ ನಡುವೆ ನೊಬೆಲ್ ಕುಟುಂಬದ ಕೆಲವರು ಈ ಉಯಿಲಿನ ವಿರುದ್ಧ ಕೋರ್ಟು ಮೆಟ್ಟಲೇರಿದರು. ಇಂಥ ಹಲವು ಅಡೆ ತಡೆಗಳನ್ನು ಹಿಂದಿಕ್ಕಿ ನೊಬೆಲ್ ಪ್ರಶಸ್ತಿ ನೀಡುವ ಪಧ್ಧತಿ ಇಪ್ಪತ್ತನೇ ಶತಮಾನದ ಅರುಣೋದಯದಂದು – ಅಂದರೆ ೧೯೦೧ರಿಂದ ಪ್ರಾರಂಭವಾಯಿತು.

Read more…

ಸ್ತೀಫೆನ್ ಹಾಕಿಂಗ್ ಗಾಲಿ ಕುರ್ಚಿಯ ಪ್ರತಿಭೆ

ಮಾರ್ಚ್ 3, 2009 4 comments

2001 ನವರಿಯಲ್ಲಿ ಮು೦ಬೈಯ ಟಾಟಾ ಮೂಲಭೂತ ಸ೦ಶೋಧನಾಲಯದಲ್ಲಿ ” ಎಳೆ ಸಿದ್ಧಾಂತ”ದ (String Theory) ಬಗ್ಗೆ ಏಪ೯ಡಿಸಲಾಗಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾರತಕ್ಕೆ ಹಾಕಿಂಗ್ ಭೇಟಿ ನೀಡಿದ ಸಂದರ್ಭದಲ್ಲಿ ಸ್ಟೀಫೆನ್ ಹಾಕಿಂಗ್ ಅವರ ಉಪನ್ಯಾಸವನ್ನು ದೂರದಶ೯ನ ನೇರ ಪ್ರಸಾರಿಸಿತು. ಆ ಕಾರ್ಯಕ್ರಮ ಅನಿರ್ವಚನೀಯ ಅನುಭವ ನೀಡಿತು. ಆ ತನಕ ಛಾಯಚಿತ್ರಗಳಲ್ಲಿ, ಪುಸ್ತಕಗಳಲ್ಲಷ್ಟೇ ಕ೦ಡ ಸ್ಟೀಫೆನ್ ಹಾಕಿಂಗ್ ಅಂದು ಟಿವಿ ಪರದೆ ಮೇಲೆ ಕಾಣಿಸಿಕೊ೦ಡರು. ಗಾಲಿ ಕುಚಿ೯ಗಂಟಿತ್ತು ಅವರ ಕೃಶಕಾಯ. ಹೆಗಲ ಮೇಲೆ ವಾಲಿಕೊ೦ಡ ತಲೆ; ವಾರೆಯಾಗಿ ತುಸು ತೆರೆದುಕೊ೦ಡ ಬಾಯಿ. ಒ೦ದೆಡೆಗೆ ತಿರುಚಿಕೊ೦ಡ ಕಾಲುಗಳು, ಮುರುಟಿಕೊಂಡ ಕೈಗಳು. ಗಾಲಿ ಕುಚಿ೯ಯಲ್ಲಿ ಒಂದು ಗುಪ್ಪೆಯಾಗಿ ಕುಳಿತ ದೇಹ. ದಪ್ಪ ಕನ್ನಡಕದೊಳಗಿ೦ದ ಕಣ್ಣು ಮಿಟುಕಿಸದೇ ಹೋದರೆ, ವಿಚಿತ್ರ ಗೊ೦ಬೆಯೊಂದು ಅಲ್ಲಿರುವಂತೆ ಭಾಸವಾದರೆ ಅಚ್ಚರಿಯಿಲ್ಲ. ಅವರು ಈ ಗಾಲಿ ಕುರ್ಚಿಗಂಟಿ ವರ್ಷಗಳೇ ಉರುಳಿಹೋಗಿವೆ. ನಲುವತ್ತು ವರ್ಷಗಳಷ್ಟು ಹಿಂದೆ ಅವರು ಗಾಲಿ ಕುರ್ಚಿಗೇರಿದರು – ನಡೆದಾಡುವುದಕ್ಕೆ ಸಂಪೂರ್ಣ ಅಸಮರ್ಥರಾದಾಗ.

ಅಂದ ಹಾಗೆ ಹಾಕಿಂಗ್ ಅಂಟಿಕೊಂಡ ಗಾಲಿ ಕುಚಿ೯ ಸಾಮಾನ್ಯವಾದದ್ದಲ್ಲ. ಅದರಲ್ಲೊಂದು ಕಂಪ್ಯೂಟರ್ ಇದೆ. ಅದರ ಕೀ ಬೋಡಿ೯ನ ಮೇಲೆ ಹಾಕಿ೦ಗ್ ಬೆರಳುಗಳು ಕಷ್ಟದಲ್ಲಿ ಓಡಾಡಿದಂತೆ – ಕ೦ಪ್ಯೂಟರಿಗೆ ಊಡಿದ ಆ ಸ೦ದೇಶಗಳು ಧ್ವನಿಯಾಗಿ ಹೊಮ್ಮುತ್ತದೆ. ಅ೦ದರೆ ನಾವು ಆಲಿಸುವ ತೀರ ಏಕತಾನತೆಯ ಆ ಧ್ವನಿ ಹಾಕಿ೦ಗ್ ಅವರದಲ್ಲ. ಏಕೆ೦ದರೆ ಅವರು ಧ್ವನಿ ಹೊರಡಿಸಲೂ ಅಶಕ್ತರು!  ಅವರು ಗಾಲಿ ಕುರ್ಚಿಗೇರಿ ಸುಮಾರು ನಲುವತ್ತು ವರ್ಷಗಳೇ ಕಳೆದಿರಬಹುದು.

Read more…

ಅನನ್ಯ ಕಲಾವಿದ ಶಂಭು ಹೆಗಡೆಯವರ ನಿರ್ಯಾಣ

ಫೆಬ್ರವರಿ 3, 2009 4 comments

ಸಂಜೆ ಕಾಲೇಜಿನಿಂದ ಬಸವಳಿದು ಬಂದಿದ್ದೆ ನಾನು. ಎಂದಿನಂತೆ ಟಿವಿಯೊಳಗೆ ಹೊಸ ಸುದ್ದಿ ಏನಿದೆ ಎಂದು ನೋಡಲು ಇಣುಕಿದೆ ಅದರೊಳಗೆ. ಆ ಸುದ್ದಿ ಮತ್ತಷ್ಟು ಬಸವಳಿಯುವಂತೆ ಮಾಡಿತು – ಕುಣಿಯುತ್ತ ಕುಣಿಯುತ್ತಲೇ ಕೆರೆಮನೆ ಶಂಭು ಹೆಗಡೆ ಈ ಭವದ ಆಟ ಮುಗಿಸಿ ಮತ್ತೆ ಬರದ ಲೋಕದತ್ತ ನಡೆದಿದ್ದಾರೆಂದು ತಿಳಿದಾಗ  ಮನ ಕಲಕಿತು. ಸಾಗರದಲ್ಲಿ ತೆರೆಗಳು ಎದ್ದೆದ್ದು ಬರುವಂತೆ ನೆನಪುಗಳು ಒತ್ತೊತ್ತಿ ಬರತೊಡಗಿದುವು. ಅದನ್ನಿಲ್ಲಿ ಮೂಡಿಸುತ್ತಿದ್ದೇನೆ.

1975ರ ಸುಮಾರಿಗೆ ಪುತ್ತೂರಿಗೆ “ಮಹಾಗಣಪತಿ ಯಕ್ಷಗಾನ ಮಂಡಳಿ, ಇಡಗುಂಜಿ” ಎಂಬ ಬಡಗು ತಿಟ್ಟಿನ ಮೇಳ ಬರುತ್ತದೆಂಬ ಸುದ್ದಿ ಕೇಳಿದಾಗ ಅದಾಗಲೇ ಯಕ್ಷಗಾನದ ಹುಚ್ಚು ಹಿಡಿಸಿಕೊಂಡಿದ್ದ ಹುಡುಗ ಪ್ರಾಯದ ನಮಗೆಲ್ಲ ಕುತೂಹಲ. ಆ ಮೇಳದಲ್ಲಿ ಕೆರೆಮನೆ ಕುಟುಂಬದ ಘಟಾನುಘಟಿ ಕಲಾವಿದರಿದ್ದಾರಂತೆ, ಪಾತ್ರಧಾರಿಗಳು ಕೇದಗೆ ಮುಂಡಾಸು ತೊಡುತ್ತಾರಂತೆ, ನೆಲದಲ್ಲಿ ಮಂಡಿಯೂರಿ ಗರಗರನೆ ಸುತ್ತುತ್ತಾರಂತೆ. ನಮ್ಮ ಕುತೂಹಲಕ್ಕೆ ಗರಿಗಳು, ರೆಕ್ಕೆ ಪುಕ್ಕಗಳು ಮೂಡತೊಡಗಿದುವು.

Read more…

%d bloggers like this: