Archive

Archive for the ‘ವಿಜ್ಞಾನ ಲೇಖನಗಳು’ Category

ಚಂದ್ರ ಶತಮಾನೋತ್ಸವ

ಅಕ್ಟೋಬರ್ 17, 2010 8 comments

ನಿಮಗೆ ನೆನಪಿಸುತ್ತಿದ್ದೇನೆ, ಅಷ್ಟೇ. ಇಪ್ಪತ್ತನೇ ಶತಮಾನದ ಖಗೋಳವಿಜ್ಞಾನ ರಂಗ ಕಂಡ ಅದ್ವಿತೀಯ ತಾರೆಯ ಜನ್ಮದಿನ ಬಂದಿದೆ. ತನ್ನ ಕಾಲದಲ್ಲಿಯೇ ದಂತಕಥೆಯಾದ ಇವರನ್ನು ವಿಜ್ಞಾನ ಲೇಖಕ ಮಿಲ್ಲರ್ ನಕ್ಷತ್ರಲೋಕದ ಚಕ್ರವರ್ತಿಎಂದು ಕರೆದಿದ್ದಾರೆ. ಈ ಅನಭಿಷಕ್ತ ಚಕ್ರವರ್ತಿಯೇ ಪ್ರೊ. ಎಸ್.ಚಂದ್ರಶೇಖರ್ ಅತ್ಮೀಯರ ಪಾಲಿಗೆ ಚಂದ್ರ. ಹತ್ತೊಂಬತ್ತರ ಹರೆಯದಲ್ಲಿಯೇ ಇವರು ಸಾಗಿದ್ದು ಸಾಗರದಾಚೆಯ ಇಂಗ್ಲೆಂಡಿಗೆ ನಕ್ಷತ್ರಗಳ ಸಂಕೀರ್ಣ ಸಂರಚನೆಯ ಬಗ್ಗೆ ಅತ್ಯುನ್ನತ ಸಂಶೋಧನೆಗೆ. ರಾಯಲ್ ಸೊಸೈಟಿಯ ವಿದ್ವನ್ಮಣಿಗಳ ಸಭೆಯಲ್ಲಿ ತನ್ನ ನೂತನ ಸಿದ್ಧಾಂತವನ್ನು ಮಂಡಿಸಿ ಘನಂದಾರಿ ವಿಜ್ಞಾನಿಗಳಿಗೆ ಸಡ್ಡು ಹೊಡೆದರು; ಬಿಳಿ ದೊರೆಗಳ ಆಳ್ವಿಕೆಯ ದಿನಗಳ ಕೀಳರಿಮೆಯನ್ನು ತೊಡೆದು ಭಾರತೀಯ ಅಸ್ಮಿತೆಯನ್ನು ಪ್ರಪಂಚ ಮುಖಕ್ಕೆ ತೋರಿದರು. ಸಜ್ಜನಿಕೆಯ ಸಾಕಾರವಾಗಿದ್ದ ಇವರ ಜೀವನ ಸಾಧನೆ ಎಲ್ಲವೂ ರೋಚಕ ತಮ್ಮ ಕಾಲದಲ್ಲಿಯೆ ದಂತ ಕಥೆಯಾಗಿ ಹೋದರು. ಇರುತ್ತಿದ್ದರೆ ಇವರಿಗೆ ನೂರು ವರ್ಷಗಳಾಗುತ್ತಿದ್ದುವು. ಅಂದರೆ ವಿಜ್ಞಾನ ಪ್ರಿಯರಿಗೆ ಚಂದ್ರಶೇಖರ್ ಜನ್ಮ ಶತಮಾನೋತ್ಸವದ ಆಚರಣೆಯ ಸಂಭ್ರಮ. ಆ ಮೂಲಕ ಇನ್ನಷ್ಟು ವಿಜ್ಞಾನ ಚಿಂತನ ಮಂಥನಕ್ಕೊಂದು ಅವಕಾಶ. Read more…

Advertisements

ಗ್ರಹಣ – ಬಡಿಯದಿರಲಿ ವೈಚಾರಿಕ ಪ್ರಜ್ಞೆಗೆ

ಜುಲೈ 21, 2009 12 comments

ಪೂರ್ಣ ಸೂರ್ಯಗ್ರಹಣ ಇರಾನಿನಲ್ಲಿ ನಡೆದಾಗ ಮತ್ತೆ ಸೂರ್ಯಗ್ರಹಣ ಬಂದಿದೆ. ಮತ್ತದೇ ಹಳೇ ರಾಗ – ಗ್ರಹಣ ವೀಕ್ಷಣೆ ಸರ್ವಥಾ ಸಲ್ಲ. ಆಹಾರ ನಿಶಿದ್ಧ – ಹಳೆ ಪೇಪರ್.. ಹಳೆ ಚಿಂದಿ..ಯ ಹಾಗೆ.

ಬೆಂಗಳೂರಲ್ಲಿ ವಿಜ್ಞಾನಿಗಳಿಗೂ ಜ್ಯೋತಿಷಿಗಳಿಗೂ ಜಟಾಪಟಿ ಶುರುವಾಗಿದೆಯಂತೆ.

ದೈವಜ್ಞರೊಬ್ಬರು ಅಪ್ಪಣೆ ಕೊಡಿಸಿದ್ದಾರೆ

ಮಹಾಭಾರತ ಯುದ್ಧ, ದ್ವಿತೀಯ ಜಾಗತಿಕ ಯುದ್ಧ, ಇಂದಿರಾಗಾಂಧಿಯ ಹತ್ಯೆ ನಡೆದಾಗ ಸೂರ್ಯಗ್ರಹಣ ಸಂಭವಿಸಿತ್ತು. ಗ್ರಹಣ ಕಾಲದಲ್ಲಿ ವ್ಯಕ್ತಿ ಹೆಚ್ಚು ವ್ಯಗ್ರನಾಗುತ್ತಾನೆ. ಅವನ ಮಾನಸಿಕ ಸ್ಥಿತಿಯಲ್ಲಿ ಏರು ಪೇರಾಗುತ್ತದೆ. ಹೆಚ್ಚು ಸೋಲುವ ಮನೋಭಾವ ಗೋಚರಿಸುತ್ತೆ. ಇದಕ್ಕೆಲ್ಲ ಪರಿಹಾರವೆಂದರೆ ಜನರು ಪೂಜೆ, ಯಜ್ಞಗಳಲ್ಲಿ ತೊಡಗುವುದು ಅಥವಾ ದೇವಸ್ಥಾನಕ್ಕೆ ತೆರಳಿ ಪರಿಹಾರ ಕಂಡುಕೊಳ್ಳುವುದು.

Read more…

ವಿಜ್ಞಾನ ದಿನ ರಾಮನ್ ಪರಿಣಾಮದ ಒಂದು ನೆನಪು

ಮಾರ್ಚ್ 28, 2009 2 comments

1928, ಫೆಬ್ರವರಿ 28. ಕಲ್ಕತ್ತಾದ ಬೌಬಝಾರ್ ಓಣಿಯಲ್ಲಿದ್ದ “ದಿಇಂಡಿಯನ್ ಎಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್” ಸಂಸ್ಥೆಯ ಕಛೇರಿಯಲ್ಲಿ ಮುಸ್ಸಂಜೆ ಮುಸುಕುತ್ತಿತ್ತು.  ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ವಿ.ರಾಮನ್ (ಚಂದ್ರಶೇಖರ ವೆಂಕಟರಾಮನ್, (1888-1970) ಕರೆದಿದ್ದ  ಪತ್ರಿಕಾ ಗೋಷ್ಠಿಗಾಗಿ ವರದಿಗಾರರು ಅಲ್ಲಿ ಸೇರಿದ್ದಾರೆ. ರಾಮನ್ ಕರೆದ ಗೊಷ್ಠಿ ಅಂದ ಮೇಲೆ ಅಲ್ಲೇನೋ ವಿಶೇಷವಾದದ್ದು ಇರಲೇಬೇಕೆಂದು ಅವರಿಗೆ ಗೊತ್ತಿತ್ತು. ಆವರ ನಿರೀಕ್ಷೆ ಹುಸಿಯಾಗಲಿಲ್ಲ. Read more…

ತಪ್ಪಾದ ನಿರ್ಣಯ

“ನನ್ನ ಮರಣಾನಂತರ ನನ್ನ ಜೀವಮಾನದ ಎಲ್ಲ ಸಂಪತ್ತನ್ನು ಮೂಲಧನವಾಗಿಟ್ಟು ಅದರ ಬಡ್ಡಿಯಿಂದ ಭೌತ ವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ – ಈ ಐದು ಪ್ರಕಾರಗಳಲ್ಲಿ ಮಾನವ ಕಲ್ಯಾಣಕ್ಕೆ ಶ್ರಮಿಸಿದ ಶ್ರೇಷ್ಠ ಸಾಧಕರನ್ನು ಆರಿಸಿ ಅವರಿಗೆ ಪ್ರಶಸ್ತಿ ನೀಡಬೇಕು” ಇದು ಆಲ್ಫ್ರೆಡ್‌ನೊಬೆಲ್ ಬರೆದ ಉಯಿಲಿನ ಸಾರಾಂಶ. (೧೮೯೫,ನವೆಂಬರ್ ೨೭).

೧೮೯೬, ಡಿಸೆಂಬರ್ ೧೦ರಂದು ಇಟೆಲಿಯ ಸಾನ್‌ರೆಮೋ ಎಂಬಲ್ಲಿರುವ “ನೊಬೆಲ್ ವಿಲ್ಲಾ” ಎಂಬ ಭವ್ಯ ಬಂಗಲೆಯಲ್ಲಿ ನೊಬೆಲ್ ನಿಧನ ಹೊಂದಿದ. ಆದರೆ ಉಯಿಲು ಕಾರ್ಯರೂಪಕ್ಕೆ ಬರಲು ಮತ್ತೆ ನಾಲ್ಕು ವರ್ಷಗಳು ಬೇಕಾದುವು. ಸ್ವೀಡನ್ ಮತ್ತು ನಾರ್ವೇ ದೇಶದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕೇ? ಪ್ರಶಸ್ತಿಗೆ ಆರಿಸಲು ಅನುಸರಿಸಬೇಕಾದ ಮಾನದಂಡಗಳಾವುವು? ಪ್ರಶಸ್ತಿಯನ್ನು ಯಾವಾಗ ಮತ್ತು ಎಲ್ಲಿ ನೀಡಬೇಕು? ಇವೆಲ್ಲ ಚರ್ಚೆಗೆ ಬಂದ ವಿಷಯಗಳು. ಈ ನಡುವೆ ನೊಬೆಲ್ ಕುಟುಂಬದ ಕೆಲವರು ಈ ಉಯಿಲಿನ ವಿರುದ್ಧ ಕೋರ್ಟು ಮೆಟ್ಟಲೇರಿದರು. ಇಂಥ ಹಲವು ಅಡೆ ತಡೆಗಳನ್ನು ಹಿಂದಿಕ್ಕಿ ನೊಬೆಲ್ ಪ್ರಶಸ್ತಿ ನೀಡುವ ಪಧ್ಧತಿ ಇಪ್ಪತ್ತನೇ ಶತಮಾನದ ಅರುಣೋದಯದಂದು – ಅಂದರೆ ೧೯೦೧ರಿಂದ ಪ್ರಾರಂಭವಾಯಿತು.

Read more…

ಪೈಗಳ ದಿನ

ಮಾರ್ಚ್ 27, 2009 1 comment

ಮಾರ್ಚ್ ೧೪ ಕಳೆದಿದೆ. ಕಾಲ ಯಾರಿಗೂ ಕಾಯುವುದಿಲ್ಲ. ಮಾರ್ಚ್ ೧೪ರ ವಿಶೇಷತೆಯ ಬಗ್ಗೆ ಉದಯವಾಣಿಯಲ್ಲಿ ನನ್ನ ಬರಹ ಪ್ರಕಟವಾಯಿತು. ಅದರ ವಿಸ್ತ್ರುತ ರೂಪ kendasampige.com ನಲ್ಲಿದೆ. ಎರಡನ್ನೂ ಸೇರಿಸಿದ ಬರಹ ಇದೀಗ ನನ್ನದೇ ತಾಣದಲ್ಲಿದೆ. ಆ ವಿಶೇಷ ಏನು ? ಗೊತ್ತುಂಟ ಮಾರಾಯ್ರೆ – ಅದು ನಮ್ಮ ಪೈಗಳ ದಿನ!

ನನಗೊಬ್ಬರು ಮಿಂಚಂಚೆಯ – ಅಂದರೆ ಇ-ಮೈಲ್ ಸ್ನೇಹಿತರು. ಅವರು ಉಡುಪಿಯ ರಮೇಶ ಅಡಿಗರು. ಇತ್ತೀಚೆಗೆ ಅಡಿಗರು ಎಚ್ಚರಿಸಿದರು “ಮಾರ್ಚ ೧೪ ಬರುತ್ತಿದೆ. ಪ್ರಪಂಚದ ಹಲವೆಡೆ  ಪೈ ಡೇ (ದಿನ) ಆಚರಣೆ ಮಾಡುತ್ತಿದ್ದಾರೆ.” ನಿಜ, ಈ ಆಚರಣೆ ನಮ್ಮಲ್ಲಿ ಇಲ್ಲ. ಆದರೆ ಅಮೇರಿಕ, ಆಸ್ಟ್ರೇಲಿಯಾ ಮೊದಲಾದೆಡೆ ಈ “ಪೈ ಡೇ”  ಅಂದರೆ “ಪೈ ದಿನ” ವನ್ನು ವಿಜೃಂಭಣೆಯಿಂದ ಆಚರಿಸುತ್ತಾರಂತೆ. ನಾವು ಯಾವ್ಯಾವುದೋ ದಿನವನ್ನು ಎರವಲು ಪಡೆದು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವಾಗ ಇದನ್ನೂ ಆಚರಿಸಿದರೆ ನಷ್ಟವೇನೂ ಆಗದು. ಅಷ್ಟಕ್ಕೂ ಈ  ಪೈ ಅಂದರೆ ಯಾರು?

ಅಪರಿಮೇಯ ಸಂಖ್ಯೆ

ಈ ಪೈ ಅಸಾಮಾನ್ಯ.  ಗಣಿತ ಮತ್ತು ಭೌತ ವಿಜ್ಞಾನದಲ್ಲಿ ಎಲ್ಲೆಲ್ಲಿ ವೃತ್ತ ಬರುತ್ತದೋ ಅಲ್ಲೆಲ್ಲ ಪೈ ಪ್ರತ್ಯಕ್ಷ. ಬೈಬಲ್‌ನಲ್ಲಿ ಇದರ ಕುರಿತು ಪ್ರಸ್ತಾಪವಿದೆಯಂತೆ. ಕ್ರಿಸ್ತ ಪೂರ್ವದ ದಿನಗಳ ಬೆಬಿಲೊನಿಯಾ,  ಈಜಿಪ್ಟ ಗಣಿತವಿದರಿಗೆ ಪೈಯ ಬೆಲೆ ಸರಿ ಸುಮಾರಾಗಿ ೩.೧ ಎಂದು ತಿಳಿದಿತ್ತು. ಆದರೆ ಪೈ ಎಂಬ ಮಾಯಾವಿ ಸಂಖ್ಯೆಯನ್ನು  ಶೋಧಿಸಿದವರು ಯಾರು? ಸ್ಪಷ್ಟವಾಗಿ ತಿಳಿಯದು ಯಾರಿಗೂ.

Read more…

ಭೂಮಿಯ ಚಲನೆ ಋತು ಬದಲಾವಣೆ

ಮಾರ್ಚ್ 27, 2009 4 comments

ತರಂಗ ಯುಗಾದಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಲೇಖನಕ್ಕೆ ಒಂದಷ್ಟು ಸೇರಿಸಿ ಇಲ್ಲಿರಿಸಿದ್ದೇನೆ. ಯುಗಾದಿಯ ಆಚರಣೆಯ ಹಿನ್ನೆಲೆಯ ಋತು ಬದಲಾವಣೆಯ ಬಗ್ಗೆ ನನ್ನ ಆಸಕ್ತಿ. ನಿಮಗೂ ಆಸಕ್ತಿ ಮೂಡಿಸಿದರೆ ನನ್ನ ಯುಗಾದಿ ಬೆಲ್ಲ ಸವಿಯಾಗುತ್ತದೆ!

ನೀವು www.whether.com ಎಂಬ ಅಂತರ್ಜಾಲ ನೋಡಿದ್ದೀರಾ? ಒಮ್ಮೆ  ಇಣುಕಿ ನೋಡಿ. ಪ್ರಪಂಚದ ಬೇರೆ ಬೇರೆ ದೇಶಗಳ ಸ್ಥಳಗಳ ಹವಾಮಾನ ಮಾಹಿತಿ ನಿಮ್ಮ ಕಂಪ್ಯೂಟರ್ ಪರದೆ ಮೇಲೆ ತೆರೆದುಕೊಳ್ಳುತ್ತದೆ. ಅಲ್ಲಿ ಎಲ್ಲೋ ಕೆಲವೆಡೆ ಬಿರು ಬೇಸಗೆ. ಇನ್ನೆಲ್ಲೋ ಹಿಮ ಪಾತ. ಮತ್ತೆಲ್ಲೋ ವರ್ಷಧಾರೆ. ಕೆಲವು ಪ್ರದೇಶಗಳಲ್ಲಿ ನಿರಭ್ರ ಬಾನು. ಮತ್ತೆ ಹಲವು  ಪ್ರದೇಶಗಳಲ್ಲಿ ಮೋಡ ಮುಸುಕಿದ ಬಿಗುಮಾನ. ಅಂದರೆ ಭೂ ಹವಾಮಾನ ಸ್ಥಾಯಿಯಲ್ಲ,  ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವ ಕ್ರಿಯಾಶೀಲ ಪ್ರಕ್ರಿಯೆ.

ಹವಾಮಾನದ ಈ ವೈವಿದ್ಯತೆಗೆ ಋತುಗಳು (seasons) ಎನ್ನುತ್ತೇವೆ. ಭೂಮಿಯಲ್ಲಿ ಜೀವ ಕೋಟಿ ನಳನಳಿಸಲು ಇಂಥ ಋತು ವೈವಿದ್ಯತೆ ಅಗತ್ಯ. ನಮ್ಮ ಪೂರ್ವೀಕರು ಇಡೀ ವರ್ಷವನ್ನು ಆರು ಋತುಗಳಾಗಿ ವಿಂಗಡಿಸಿದರೆ (ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಮತ್ತು ಶಿಶಿರ), ಜಾಗತಿಕವಾಗಿ ನಾಲ್ಕು ಮುಖ್ಯ ಋತು ಅಥವಾ ಕಾಲಗಳನ್ನು ಗುರುತಿಸಲಾಗುತ್ತದೆ – ಹೇಮಂತ, ಗ್ರೀಷ್ಮ (ಬೇಸಗೆ), ಶರದ್ ಮತ್ತು ಶಿಶಿರ (ಚಳಿ). ಋತುಗಳ ವೈವಿದ್ಯತೆ ಸೂರ್ಯನ ಸುತ್ತ ಭೂಮಿ ಸುತ್ತುವ ಬಗೆಯಲ್ಲಿದೆ. ಅಂದರೆ ಭೂಮಿಯ ಚಲನೆಯಲ್ಲಿದೆ.

Read more…

ಝೀಮಾನ್ ಎಳೆಯ ಪ್ರೊಫೆಸರ್

ಝೀಮಾನ್ ಪೀಟರ್

೧೯೦೨ರಲ್ಲಿ ಭೌತ ವಿಜ್ಞಾನ ವಿಭಾಗದ ನೊಬೆಲ್ ಪ್ರಶಸ್ತಿ ಪಡೆದ ಪೀಟರ್ ಝೀಮಾನ್, ಹಾಲೆಂಡಿನ ದ್ವೀಪ ಸಮೂಹಗಳಲ್ಲಿ ಒಂದಾದ ಝೀಲ್ಯಾಂಡಿನ ಝೊನ್ನೆಮೆಯರ್ ಎಂಬ ಪಟ್ಟಣದಲ್ಲಿ ೧೮೬೫ ಮೇ ೨೫ರಂದು ಜನಿಸಿದರು. ಝೀಮಾನ್ ಅವರದು ಎಂಥ ಪ್ರತಿಭೆ ಎಂದರೆ, ಹನ್ನೆರಡು ವರ್ಷದ ಬಾಲಕ ಝೀಮಾನ್, ಅರೋರಾವನ್ನು (ಧ್ರುವ ಪ್ರಭೆ) ಹಲವು ದಿನಗಳ ಕಾಲ ವೀಕ್ಷಿಸಿ ಬರೆದ ಲೇಖನ ಪ್ರಕಟವಾದದ್ದು Nature ಪತ್ರಿಕೆಯಲ್ಲಿ. ಇದೊಂದು ಪ್ರತಿಷ್ಠಿತ ಸಂಶೋಧನ ಪತ್ರಿಕೆ. ಲೇಖನದೋಂದಿಗೆ ಸಂಪಾದಕರು  ಟಿಪ್ಪಣಿ ಸೇರಿಸಿದರು ‘ಪ್ರೊ.ಝೀಮಾನ್ ತಮ್ಮ ಝೊನ್ನೆಮೆಯರ್ ವೀಕ್ಷಣಾ ಕೇಂದ್ರದಲ್ಲಿ ಅರೋರಾವನ್ನು ಅತ್ಯಂತ ಕಾಳಜಿಯಿಂದ ವೀಕ್ಷಿಸಿ ಬರೆದ ಲೇಖನವಿದು!’

ಭೌತವಿಜ್ಞಾನದಲ್ಲಿ ಉನ್ನತ ಅಧ್ಯಯನಕ್ಕೆಂದು ಲೀಡೆನ್ ವಿಶ್ವವಿದ್ಯಾಲಯವನ್ನು  ಝೀಮಾನ್ ಸೇರಿದ ಸಂದರ್ಭ. ಲೊರೆಂಟ್ಝ್, ಕ್ಯಾಮರ್ಲಿಂಗ್ ಒನ್ನೆಸ್ (೧೯೧೩ರ ನೊಬೆಲ್ ಪ್ರಸಸ್ತಿ ವಿಜೇತ) ವಾಂಡರ್‌ವಾಲ್ಸ್ ಮೊದಲಾದ ಶ್ರೇಷ್ಠ ಭೌತವಿಜ್ಞಾನಿಗಳು ಅಲ್ಲಿ ಪ್ರಾಧ್ಯಾಪಕರಾಗಿದ್ದರು. ಇಂಥ ಶ್ರೇಷ್ಠ ವಿಜ್ಞಾನಿಗಳ ಗರಡಿಯಲ್ಲಿ ಪಳಗಿದ ಝೀಮಾನ್, ಬೆಳಕಿನ ಮೇಲೆ ಕಾಂತಕ್ಷೇತ್ರ ಬೀರಬಹುದಾದ ಪರಿಣಾಮದ ಬಗ್ಗೆ ಸ್ವತಂತ್ರವಾಗಿ ಪ್ರಯೋಗ ಪ್ರಾರಂಭಿಸಿದರು (೧೮೯೫).

Read more…

%d bloggers like this: