ಚೇತನದ ಚೇತನ – ಅಪ್ಪ, ಇನ್ನಿಲ್ಲ
ನಮ್ಮ ಮನೆ ಚೇತನ. ಚೇತನದ ಚೇತನವಾದ ಅಪ್ಪ ಮೊನ್ನೆ ಸೋಮವಾರ ಮುಂಜಾನೆ (23.10.2017) ಎಂಟು ಗಂಟೆಯ ಹೊತ್ತಿಗೆ ಇಹದ ಬದುಕಿಗೆ ವಿದಾಯ ಹೇಳಿದರು; ಮತ್ತೆ ಬಾರದ ಲೋಕಕ್ಕೆ ತೆರಳಿದರು.
87 ವರ್ಷಗಳ ಸುದೀರ್ಘ ಜೀವನ – ಸಮೃದ್ಧ ಬದುಕು ಅಪ್ಪನದು. ಅಜಾತ ಶತ್ರು. ಸಾಹಿತ್ಯ ಮತ್ತು ಸಂಗೀತದಲ್ಲಿ ಗಾಢ ಒಲವು. ಹಗಲಿನಲ್ಲಿ ಕೃಷಿ ಕಸುವು. ಮನೆಯ ಸುತ್ತ ಇಂದು ಎದ್ದಿರುವ ಸಮೃದ್ಧ ಹಸಿರಿನ ತೋಟ ಅಪ್ಪನ ದೃಷ್ಟಿ -ಸೃಷ್ಟಿ.
ಅಪ್ಪನಿಗೆ ಮಡಿಕೇರಿಯ ಬಗೆಗೆ ಎಲ್ಲಿಲ್ಲದ ಪ್ರೀತಿ. ಏಕೆಂದರೆ ಕುಟುಂಬದ ಮೂಲ ಮಡಿಕೇರಿ. ಎಲೋಶಿಯಸ್ ಕಾಲೇಜಿನಲ್ಲಿ BA ಮಾಡಿ, ಮಡಿಕೇರಿಯಲ್ಲಿ BEd ಮುಗಿಸಿದ ಅಪ್ಪ, ಅಲ್ಲಿಯೇ St.Michel ಶಾಲೆಯಲ್ಲಿ ಒಂದೆರಡು ವರ್ಷ ಇತಿಹಾಸದ ಪಾಠ ಮಾಡಿದರು. ಅಪ್ಪ ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದರಂತೆ. ಸ್ವತಂತ್ರ ಜೀವನ ಅಪ್ಪನ ರೀತಿ. ಹಾಗಾಗಿ ಕೆಲಸಕ್ಕೆ ರಾಜಿನಾಮೆ ನೀಡಿದರು. ಮಡಿಕೇರಿಯಿಂದ ಮತ್ತೆ ಮರಿಕೆಗೆ ಬಂದರು. ಕೃಷಿ ಕಾಯಕದಲ್ಲಿ ನಿರತರಾದರು.
ಕೃಷಿಯಲ್ಲಿತ್ತು ಅಪ್ಪನಿಗೆ ಅತಿಶಯ ಪ್ರೀತಿ. ಒಂದೂವರೆ ಎಕರೆ ಗದ್ದೆ ಕೃಷಿ. ಸಸಿ ತೋಟವನ್ನು ನಂದನವನವನ್ನಾಗಿಸಿದರು. ಉದ್ದದ ಹಟ್ಟಿ, ಗೋಬರ್ ಗ್ಯಾಸ್ ಸ್ಥಾವರ ..ವಿಶ್ವಾಮಿತ್ರ ಸೃಷ್ಟಿ. ಮನೆ ಪಕ್ಕದ ಗುಡ್ಡೆಯಲ್ಲಿ ತಟ್ಟು ಮಾಡಿ ತೆಂಗಿನ ತೋಟ ಎಬ್ಬಿಸಿದರು. ಮಹಾಗನಿ, ತೇಗ, ಬೀಟೆ ..ಹೀಗೆ ಅರಣ್ಯ ಇಲಾಖೆಯಿಂದ ಪ್ರತಿ ಮಳೆಗಾಲ ಸಸಿಗಳನ್ನು ತರುತ್ತಿದ್ದರು. ತೋಟದ ಸುತ್ತ ಗುಡ್ಡೆಯಲ್ಲಿ ತಂಸ ಸಸಿಗಳನ್ನು ಶೃದ್ಧೆಯಿಂದ ನಡಿಸುತ್ತಿದ್ದರು. ಆಗಾಗಿ ಇಂದು ನಿಜ ಕಾಡು – ಹಸಿರು ತುಂಬಿದೆ. ಅಪ್ಪ ಕಾಡಿನ ಬಗೆಗೆ, ಹಸಿರಿನ ಕುರಿತು ಭಾಷಣ ಮಾಡದೇ ಮಾಡಿ ತೋರಿಸಿದರು. ತರಕಾರಿ ಕೃಷಿಯಲ್ಲಿ ಅಪ್ಪನದು ಎತ್ತಿದ ಕೈ. ಬೆಳಗ್ಗಿನಿಂದ ಸಂಜೆ ತನಕ ನಿರಂತರ ಕೆಲಸಗಾರರ ಜತೆಯಲ್ಲಿಯೇ ಇರುತ್ತಿದ್ದರು.
ಇದೆಲ್ಲ ಹಗಲಿನ ಕಾಯಕವಾದರೆ, ಸಂಜೆ ಮುಸುಕುತ್ತಿರುವಂತೆ ಓದು ಅಪ್ಪನ ಖಯಾಲಿ. The Hindu, ಉದಯವಾಣಿ, ಪ್ರಜಾವಾಣಿ, ವಿಜಯಕರ್ನಾಟಕ..ಹೀಗೆ ಎಲ್ಲ ಪತ್ರಿಕೆಗಳನ್ನು ಗುಪ್ಪೆ ಹಾಕಿ, ಹ್ಯೂಗೋ, ಡಿಕನ್ಸ್, ತೇಜಸ್ವಿ, ಗುಂಡಪ್ಪ, ಮಾಸ್ತಿ ಮೊದಲಾದವರ ಪುಸ್ತಕಗಳನ್ನು ಹರವಿಕೊಂಡು ಇಸಿಚೆಯರಿನಲ್ಲಿ ಕುಳಿತು ನಟ್ಟಿರುಳು ತನಕ ಒಂದಾದ ಮೇಲೆ ಒಂದರಂತೆ ಓದುತ್ತಿದ್ದರು. ಓದಿದ್ದನ್ನುಚರ್ಚಿಸುತ್ತಿದ್ದರು- ಮುಖ್ಯವಾಗಿ ತಮ್ಮ ರಾಮನಾಥನೊಂದಿಗೆ.
ಪ್ರತಿದಿನವೂ ಎನ್ನುವಂತೆ ಇವರಿಬ್ಬರು ಒಂದೊ ಚೇತನದಲ್ಲಿ, ಅಥವಾ “ಭೂತಗುರಿ” ಮನೆಯಲ್ಲಿ ಒಟ್ಟಾಗುತ್ತಿದ್ದರು – ದಿನದ ಶ್ರಮವನ್ನೆಲ್ಲ ಮಾತು ಕಥೆಯಲ್ಲಿ ಹಗುರಾಗಿಸಿಕೊಳ್ಳುತ್ತಿದ್ದರು. ಅಪ್ಪ ಸೇರಿದಂತೆ ನಾಲ್ಕು ಮಂದಿ ಸಹೋದರರು – ದೊಡ್ಡಪ್ಪ (ತಿಮ್ಮಪ್ಪಯ್ಯ), ಅಪ್ಪ, ಗೌರಿಶಂಕರ ಮತ್ತು ರಾಮನಾಥ – ಒಬ್ಬೊಬ್ಬರದು ಒಂದೊಂದು ವೈಶಿಷ್ಟ್ಯತೆ. ಆರು ಮಂದಿ ಸಹೋದರಿಯರು. ತೀರಿ ಹೋದ ತನ್ನ ಅಣ್ಣನ ಹಾದಿಯಲ್ಲಿ ಅಪ್ಪ ನಡೆದಿದ್ದಾರೆ ದೊಡ್ಡ ಆತ್ಮೀಯ ಕುಟುಂಬದವರನ್ನೆಲ್ಲ ಇಲ್ಲೇ ಬಿಟ್ಟು. ಎಂದೂ ಮರೆಯದ ನನ್ನ ದೊಡ್ಡಪ್ಪ

(ಎಡದಿಂದ ) ಗೌರಿಶಂಕರ, ಅಪ್ಪ ಮತ್ತು ರಾಮನಾಥ
ಅಪ್ಪನಿಗೆ ಇತಿಹಾಸ ಮತ್ತು ರಾಜಕೀಯವೆಂದರೆ ಅತ್ಯಂತ ಅಚ್ಚು ಮೆಚ್ಚು. ಆದರೆ ಸ್ವತಃ ಎಂದೂ “ರಾಜಕೀಯ ಮಾಡಿದವರಲ್ಲ”. ಅಪ್ಪಟ ಪಾರದರ್ಶಕತೆ – ನಡೆ ನುಡಿಯಲ್ಲಿ. ರಾಮನಾಥಪ್ಪಚ್ಚಿ ಮತ್ತು ಅಪ್ಪ ಮಾತುಕತೆಗೆ ಕುಳಿತರೆ ಅದು ಮುಕ್ತಾಯವಾಗುತ್ತಿದ್ದುದು ತೀವ್ರವಾದ ಚರ್ಚೆಯಲ್ಲಿ. ಅವರಿವರ ಮನೆಯ ರಾಜಕೀಯಗಳಿಗೆ ಇವರ ಮಾತುಕಥೆಯಲ್ಲಿ ಆಸ್ಪದವಿರುತ್ತಿರಲಿಲ್ಲ. ಇವರಿಬ್ಬರ ದನಿ ಅದೆಷ್ಟು ಏರುತ್ತಿತ್ತೆಂದರೆ ಹಾದಿಯಲ್ಲಿ ಹೋಗುವ ಮಂದಿ ಅಲ್ಲೆನೋ ಗಲಾಟೆ ನಡೆಯುತ್ತಿದೆಯೋ ಅನ್ನುವಷ್ಟರ ಮಟ್ಟಿಗೆ. ರಾಜಕೀಯ, ಸಾಮಾಜಿಕ ಸಮಸ್ಯೆಗಳ ಬಗೆಗೆ ನಡೆಯುತ್ತಿದ್ದ ಚರ್ಚೆಗಳಲ್ಲಿ ಎಳೆಯರಾದ ನಾವು ಕೂಡ ಒಮ್ಮೊಮ್ಮೆ ದನಿ ಸೇರಿಸುತ್ತಿದ್ದೆವು. ಮರಿಕೆಯ ತರವಾಡು ಮನೆಯಲ್ಲಿ ನವರಾತ್ರೆಯ ಒಂಬತ್ತು ದಿನವೂ ಊಟದ ನಂತರದ ಬಿರುಸಿನ ಚರ್ಚೆಗಳೆಲ್ಲ ಇಂದು ಮರೆಯಲಾಗದ ಮಧುರ ನೆನಪು. ನಮ್ಮನ್ನು ತಟ್ಟಿದ ಇತಿಹಾಸ.

ಅಪ್ಪ ಮತ್ತು ರಾಮನಾಥಪ್ಪಚ್ಚಿ
ಅಪ್ಪನಿಗೆ ಬುದ್ಧನ ಮೇಲೆ ಪೂಜ್ಯ ಭಾವನೆ. ಆ ಕಾರಣಕ್ಕಾಗಿಯೇ ಮನೆಯ ಹೆಬ್ಬಾಗಿಲ ಮೇಲೆ ಬುದ್ಧನ ಸುಂದರವಾದ ಫೊಟೋ ಇಟ್ಟಿದ್ದಾರೆ – ಅದರ ಕೆಳಗೆ ಒಕ್ಕಣೆ : Mercy is the Essence of Religion. ನಡೆ ನುಡಿಯಲ್ಲಿ ಅಪ್ಪ ಇದನ್ನು ಅನುಸರಿಸಿದವರು. ಅದೊಂದು ದಿನ ಸಂಬಂಧಿಕರೊಬ್ಬರು ಬುದ್ಧ ಪಟ ಇರುವ ಬಗ್ಗೆ ಅಪ್ಪನೊಂದಿಗೆ ಕ್ಯಾತೆ ತೆಗೆದಾಗ ಅಪ್ಪ ಅದು ನಿಮಗೆ ಸಂಬಂಧಿಸಿದ್ದಲ್ಲ ಎಂದು ಮುಲಾಜಿಲ್ಲದೇ ಹೇಳಿದ್ದು ಮಾತ್ರವಲ್ಲ, ಬುದ್ಧನ ಶ್ರೇಷ್ಥತೆ ಬಗ್ಗೆ ವಿವರವಾದ ವ್ಯಾಖ್ಯಾನವನ್ನೇ ನೀಡಿದರು.
ಶಿವರಾಮ ಕಾರಂತರ ಬಗೆಗೆ ಅತಿಶಯ ಅಭಿಮಾನ. ಕಾರಂತರು ನನ್ನ ಅಜ್ಜನ ಆಪ್ತ ಸ್ನೇಹಿತರಾಗಿದ್ದರು. ಹಾಗಾಗಿ ತನ್ನ ಸ್ನೇಹಿತ ಸುಬ್ಬಯ್ಯನ ಮಗ ಗೋವಿಂದನ ಮೇಲೆ ಅವರಿಗೆ ಪ್ರೀತಿ. ಅಪ್ಪ ಕಾರಂತರೊಂದಿಗೆ, ಅವರ ಕುಟುಂಬದೊಂದಿಗೆ ಕಳೆದ ಕ್ಷಣಗಳನ್ನು ಆಗಾಗ ನೆನೆಸಿಕೊಳ್ಳುತ್ತಿದ್ದರು. ಒಂದು ದಿನ ಅಪ್ಪ ಕಾರಂತರೊಡನೆ ಕೇಳಿದರಂತೆ ” ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು ಹೇಗೆ?” ಕಾರಂತರು ತಮ್ಮ ಎಂದಿನ ಶೈಲಿಯಲ್ಲಿ ಹೇಳಿದರು” ನೋಡು, ಯಾರಿಗೂ ಉಪಕಾರ ಮಾಡದಿದ್ದರೂ ಆಗಬಹುದು, ಉಪದ್ರ ಮಾತ್ರ ಮಾಡದೇ ಬಾಳು” ಅಪ್ಪ ಆಗಾಗ ಹೇಳುತ್ತಿದ್ದರು. ಹಾಗಾಗಿ ಚಾವಡಿಯ ಗೋಡೆಯಲ್ಲಿ ಕಾರಂತರು ನೆಲೆಸಿದ್ದಾರೆ. ಮತ್ತೆ ಸ್ವಾಮಿ ವಿವೇಕಾನಂದ.
ಯಕ್ಷಗಾನ, ಸಾಹಿತ್ಯ, ಸಂಗೀತಗಳಲ್ಲಿ ಅಪ್ಪ ಸೇರಿದ ಹಾಗೆ ಮರಿಕೆಯ ಹಿರಿಯರಿಗಿದ್ದ ಆಸಕ್ತಿ ಪರೋಕ್ಷವಾಗಿ ನಮ್ಮೆಲ್ಲರನ್ನು ಪ್ರಭಾವಿಸಿದುವು. ಅಪ್ಪನೊಟ್ಟಿಗೆ ಹೋದ ಯಕ್ಷಗಾನ, ಸಂಗೀತ ಕಛೇರಿಗಳು, ನಾಟಕಗಳು, ಸಾಹಿತ್ಯ ಕಾರ್ಯಕ್ರಮಗಳು, ರಾಜಕೀಯ ಸಭೆಗಳು ಲೆಕ್ಕವಿಲ್ಲದಷ್ಟು. ಇದು ಜೀವನದ ಭಾಗ್ಯ. ಪ್ರಾಯಶ: ಹಿರಿಯರ ಇಂಥ ನಡೆ ನುಡಿಯೇ ಕಿರಿಯರ ಜೀವನವನ್ನು ರೂಪಿಸುತ್ತದೆ. ದಾರಿ ತೋರುತ್ತದೆ.
ಬಗೆ ಬಗೆಯ ಒಕ್ಕಣೆ ಇರುವ ಬೋರ್ಡ ಸ್ವತ: ಬರೆಯುವುದು ಅಥವಾ ಪುತ್ತೂರಿನಲ್ಲಿ ಕಲಾಕಾರರಿಂದ ಬರೆಸಿ ಹಾಕುವುದೆಂದರೆ ಅಪ್ಪನಿಗೆ ಅತ್ಯಂತ ಖುಷಿ. ಮನೆಯ ಮುಖ್ಯ ಗೇಟು ತೆಗೆದಾಗಲೆಲ್ಲ ದನಗಳ ಹಿಂಡು ನುಗ್ಗುತ್ತಿತ್ತು ತೋಟಕ್ಕೆ ಕೆಲವು ವರ್ಷಗಳ ಹಿಂದೆ. ಹಾಗಾಗಿ ಅಪ್ಪ ಬೋರ್ಡ್ ತಗಲಿಸಿದರು – ” ಗೇಟನು ಹಾಕಿ ತೋಟವ ನಿವೇ ರಕ್ಷಿಸಿ”. ದಾರಿ ಬದಿಯ ಮನೆಗೆ ಗೊಬ್ಬರ ಮಾರಾಟಗಾರರು, ರದ್ದಿ ಸಂಗ್ರಾಹಕರು ಆಗಾಗ ಬರುತ್ತಾರೆರೆ. ಹಾಗಾಗಿ ಮತ್ತೊಂದು ಬೋರ್ಡ್ ಬಿತ್ತು. ಮನೆಯ ಅಂಗಳದ ಗೇಟು ತೆಗೆದೊಡನೆ ದೊಡ್ಡದೊಂದು ಗಂಟೆ ಹೊಡೆಯುವ ವ್ಯವಸ್ಥೆಯನ್ನು ಮಾಡಿದ್ದರು – ಆ ಗಂಟೆಯ ಸದ್ದು ಸಂಟ್ಯಾರಿಗೂ ಕೇಳಿಸುತ್ತಿತ್ತು. ಮನೆಯ ಹಳೆ ಅಡಿಗೆ ಮನೆಗೆ ಹೊಸ ರೂಪ ಕೊಟ್ಟೆವು ಹತ್ತು ವರ್ಷಗಳ ಹಿಂದೆ. ಅಪ್ಪ ಪೇಟೆಗೆ ಹೋಗಿ ಗುಟ್ಟಾಗಿ ಬೋರ್ಡ್ ಬರೆಸಿ ಅಡಿಗೆ ಮನೆಯ ಬಾಗಿಲಿನ ಗೋಡೆಗೆ ಹಾಕಿದರು “ ಸವಿರುಚಿ“. ನಿಜ, ಅಪ್ಪ ಊಟ ತಿಂಡಿಯ ಬಗೆಗೆ ಕಟ್ಟು ನಿಟ್ಟು. ಮಾಧುರ್ಯದಲ್ಲಿ, ಸುವಾಸನೆಯಲ್ಲಿ ಒಂದಿಷ್ಟು ವ್ಯತ್ಯಾಸವಾದರೂ ಸಾಕು, ಗೊತ್ತಾಗುತ್ತಿತ್ತು. ಮುಖವೇ ಹೇಳುತ್ತಿತ್ತು. ಅಪ್ಪ ತನ್ನನ್ನೇ ತಮಾಷೆ ಮಾಡಿಕೊಳ್ಳುತ್ತಿದ್ದರು” ಮಾಹಾ ಅಲ್ಸೇಶಿಯನ್ ನಾಯಿಯ ಹಾಗೆ!
1970ರ ಸುಮಾರಿಗೆ ಅಪ್ಪ ಹಲ್ಲರ್ – ಭತ್ತ ಬೇಯಿಸಿ ಅಕ್ಕಿ ಮಾಡುವ ಚೇತನ ರೈಸ್ ಮಿಲ್ ಆರಂಭಿಸಿದರು. ಚಿಕ್ಕ ಮಿಲ್ಲಿಗೆ ದೂರದೂರಿಂದಲೂ ಭತ್ತ ಬರತೊಡಗಿತು. ಭತ್ತ ಬೇಯಿಸುವುದು, ಹರಡುವುದು, ಅಕ್ಕಿ ಮಾಡುವುದು..ಹೀಗೆ ಅಪ್ಪನೊಂದಿಗೆ ಕಳೆದ ಆ ದಿನಗಳು ನೆನಪಾಗುತ್ತಿದೆ. ಅದೊಂದು ದಿನ ಮುಂಜಾನೆ, ನೋಡುತ್ತೇವೆ – ಮನೆ ಮುಂದೆ ದೊಡ್ಡ ಲಾರಿಯಲ್ಲಿ ತುಂಬಿದ ಭತ್ತ. ಸುಳ್ಯದ ಮೂಲೆಯಿಂದ ಬಂದಿತ್ತು ಭತ್ತದ ರಾಶಿ. ಅಷ್ಟೊಂದು ಭತ್ತ ಬೇಯಿಸಿ, ಅಕ್ಕಿ ಮಾಡುವುದು ಚಿಕ್ಕ ಮಿಲ್ಲಿಗೆ ದೊಡ್ಡ ಹೊರೆ. ಅಪ್ಪ ಸಾಧ್ಯವಾಗದೆಂದು ಹೇಳಿದರೂ ಅವರು ಕೇಳಲಿಲ್ಲ. ಮತ್ತೆ ೧೯೮೫ರ ಹೊತ್ತಿಗೆ ಅಕ್ಕಿ ಮಿಲ್ಲು ನಿಲ್ಲುವ ತನಕವೂ ಅಲ್ಲಿಂದ ಪ್ರತಿ ವರ್ಷವೂ ಭತ್ತ ಬರುತ್ತಿತ್ತು.
ಅಪ್ಪ ಮುಂಗೋಪಿಯಾಗಿರಲಿಲ್ಲ. ಸದಾ ಹಸನ್ಮುಖಿ. ಹಾಗಾಗಿಯೇ ಮಕ್ಕಳಿಗೆಲ್ಲ ಅಪ್ಪ ಅಚ್ಚು ಮೆಚ್ಚು. ನಾವು ಸೇರಿದ ಹಾಗೆ ಮರಿಕೆಯ ಮಕ್ಕಳು ರಜೆಯಲ್ಲಿ ನಮ್ಮ ಮನೆಯಲ್ಲಿ ಸೇರಿದಾಗ ಅಪ್ಪ ಫ್ಯಾಂಟಮ್, ಭೂತದ ಕಥೆ – ಒಡಂಬರಣೆ, ಶಂಭುವಿನ ಆತ್ಗಮಕಥೆ – ಹೀಗೆ ಕಥೆಯ ಮೇಲೆ ಕಥೆಗಳನ್ನು ರಂಜನೀಯವಾಗಿ ಹೇಳುತ್ತಿದ್ದರೆ ನಮಗೆ ಖುಷಿಯೋ ಖುಷಿ.
ಅಪ್ಪ ಸ್ನೇಹ ಜೀವಿ. ಹಲವು ಮಂದಿ ಸ್ನೇಹಿತರು. ಹಿರಿ, ಕಿರಿಯರ ಬೇಧವಿಲ್ಲದೆ ಅಪ್ಪ ಬೆರೆಯುತ್ತಿದ್ದರು ಎಲ್ಲರೊಂದಿಗೆ ಒಂದಾಗಿ. ಮೊನ್ನೆ ಅಪ್ಪನ ಸ್ನೇಹಿತರರನೇಕರು ಬಂದು, ದೂರವಾಣಿಯಲ್ಲಿ ಸಂಪರ್ಕಿಸಿ ಸಾಂತ್ವನದ ನುಡಿಗಳನ್ನಾಡಿದ್ದು ಭಾವಪೂರ್ಣ ಕ್ಷಣಗಳು.
ಅಪ್ಪ ಮತ್ತು ಮರಿಕೆಯ ಕುಟುಂಬಕ್ಕೆ ಜಿಟಿ ನಾರಾಯಣ ರಾವ್ (ವಿಜ್ಞಾನ ಸಾಹಿತಿ) (ನಾರಾಯಣ ಮಾವ ಮತ್ತು ಮರಿಕೆ )ತೀರ ಆತ್ಮೀಯರು – ಬಂಧುವಾಗಿ. ಅವರು ಮರಿಕೆ ಕುಟುಂಬದ ಅಳಿಯ – ಅಪ್ಪನಿಗೆ ಹುಟ್ಟಿನಿಂದ ಸೋದರ ಬಾವ. ಅವರು ಮನೆಗೆ ಬಂದಾಗಲೆಲ್ಲ ಅಪ್ಪ ಮತ್ತು ಅವರ ನಡುವೆ ನಡೆಯುತ್ತಿದ್ದ ಸಂಭಾಷಣೆಗಳು ಸಾಹಿತ್ಯ, ವಿಜ್ಞಾನಗಳ ರಸಗವಳ. ನಾರಾಯಣ ಮಾವ ಅಪ್ಪನ ಮದುವೆ ಮಾಡಿಸಿದವರು. ಎಲ್ಲಿಯ ಪುತ್ತೂರು, ಎಲ್ಲಿಯ ಧಾರವಾಡ? ಅಮ್ಮ (ಎ.ಪಿ.ಮಾಲತಿ) ಭಟ್ಕಳದಲ್ಲಿ ಹುಟ್ಟಿ, ಧಾರವಾಡದಲ್ಲಿ ಬೆಳೆದು ಪಿಯುಸಿ ಹಂತದಲ್ಲಿದ್ದ ಮುಗ್ದ ಹುಡುಗಿ. ಮಾವ ಸಂಬಂಧ ಕುದುರಿಸಿದರು. ಪುತ್ತೂರಿನಿಂದ ಮುಂಜಾನೆ ಹೊರಟ ದಿಬ್ಬಣ ಸಿಕ್ಕ ನದಿಗಳನ್ನೆಲ್ಲ ದೋಣಿಯಲ್ಲಿ ದಾಟಿ (ಅಂದು ಇಂದಿನ ಹಾಗೆ ಸೇತುವೆಗಳಿರಲಿಲ್ಲ!) ಕರ್ಕಿಯ ಮದುವೆ ತಾಣಕ್ಕೆ ತಲಪುವಾಗ ರಾತ್ರೆ ಹತ್ತು ಗಂಟೆ. ಹುಡುಗಿ ಕಡೆಯವರು ಕಂಗಾಲು – ಹುಡುಗ ಕೈಕೊಟ್ಟನೋ ಎಂಬ ಹೆದರಿಕೆ. ಆಗಾಗ ನಾರಾಯಣ ಮಾವ ಗೋವಿಂದನ ನಾಮ ಸ್ಮರಣೆ ಎನ್ನುತ್ತ ರಸವತ್ತಾಗಿ ಘಟನೆಯನ್ನು ವಿವರಿಸುತ್ತಿದ್ದದ್ದು ಈ ಹೊತ್ತು ನೆನಪಾಗುತ್ತಿದೆ.
ಪೂರ್ಣ ಪೇಟೆಯ ಹುಡುಗಿಯಾದ ಅಮ್ಮ ಅಪ್ಪನ ಕೈಹಿಡಿದು, ಕೃಷಿ ಬದುಕನ್ನು ನೆಚ್ಚಿ ಕೃಷಿ ಕಾಯಕದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತ, ಸಾಹಿತ್ಯ ಪ್ರಪಪಂಚದಲ್ಲಿ ಏರಿದ ಎತ್ತರವೇ ಇವರಿಬ್ಬರ ೫೭ ವರ್ಷಗಳ ಅನ್ಯೋನ್ಯ ದಾಂಪತ್ಯಕ್ಕೆ ಸಾಕ್ಷಿ. ಅಮ್ಮನ ಕಥೆ, ಕಾದಂಬರಿ, ಲೇಖನಗಳ ಮೊದಲ ವಿಮರ್ಶಕ ಅಪ್ಪ. ಅಮ್ಮನಿಗೆ ಬಹುಮಾನ ಬಂದಾಗ, ವೇದಿಕೆ ಏರಿದಾಗ ಅಪ್ಪ ಸಂಭ್ರಮಿಸುತ್ತಿದ್ದರು. ಖುಷಿ ಪಡುತ್ತಿದ್ದರು.ಇವರ ದಾಂಪತ್ಯದದ ಕುರುಹು – ನಾನು ಮತ್ತು ನನ್ನ ತಂಗಿ ಲಲಿತ. ಆದರೆ ಇದಕ್ಕಿಂತ ಮಿಗಿಲಾದದ್ದು ಕೃಷಿ ಸಾಹಿತ್ಯ ಸಂಗಮಿಸಿದ ಒಪ್ಪ ಓರಣದ ಬದುಕು.
ಅಪ್ಪನಿಗೆ ಮೊಮ್ಮಕ್ಕಳೆಂದರೆ ಎಲ್ಲ ಅಜ್ಜ ಅಜ್ಜಿಯರಿಗೆ ಇರುವ ಹಾಗೆ ಎಲ್ಲಿಲ್ಲದ ಮಮತೆ. ಮೂವರು ಮೊಮ್ಮಕ್ಕಳು. ನನ್ನ ಮಕ್ಕಳಾದ ಅನೂಷ , ಗೌತಮ ಮತ್ತು ತಂಗಿಯ ಮಗ ಅಪೂರ್ವನ ಜತೆ ಮಕ್ಕಳಾಗುತ್ತಿದ್ದರು. ಅನೂಷ ಅಂದರೆ ಒಂದಷ್ಟು ಪ್ರೀತಿ ಜಾಸ್ತಿ. ಇಳಿ ವಯಸ್ಸಿನಲ್ಲಿ ಸಂಜೆ ಹೊತ್ತು ಒಂದಷ್ಟು ಕಾಲ ಅಪ್ಪ TV ನೋಡುತ್ತಿದ್ದರು. ಮಲೆಯಾಳಿನ ಚಿತ್ರಗಳು ಅಪ್ಪನಿಗೆ ಆಪ್ಯಾಮ್ಯಮಾನ. ಅಪ್ಪ TV ನಡುವಾಗ ಮುದ್ದಿನ ಮೊಮ್ಮಗಳು ಅಪ್ಪನ ಮಡಿಲೇರುತ್ತಿದ್ದಳು. ಮೊಮ್ಮಗಳು ದೊಡ್ಡದಾಗುತ್ತ ಬಂದಂತೆ ಅಜ್ಜ TV ನೋಡಲು ಬಗ್ಗಬೇಕಾಗುತ್ತಿತ್ತು. ಅಜ್ಜ ಮತ್ತು ಪುಳ್ಳಿಯ ಭಾರಕ್ಕೆ ಖುರ್ಚಿಯ ಕಾಲು ಕಿಸಿದು ಇಬ್ಬರೂ ನೆಲಕ್ಕೆ ಬೀಳುವ ತನಕ ಈ ಆಟ ಮುಂದುವರೆಯಿತು. ಓದಿ ಬೆಂಗಳೂರು ಸೇರಿದ ಮೊಮ್ಮಗಳು ಬರುತ್ತಾಳೆಂದರೆ ಎಂಥ ನೋವಿನ ಕ್ಷಣದಲ್ಲೂ ನಗೆಯ ಸೆಳಕು. ಮೊಮ್ಮಗಳಿಂದ “ಡೊಕೊಮ” – ಅಂದರೆ – ತಲೆ ತುರಿಸಿಕೊಳ್ಳದಿದ್ದರೆ ಅಜ್ಜನಿಗೆ ತೃಪ್ತಿ ಆಗುತ್ತಿರಲಿಲ್ಲ, ಅಜ್ಜನಿಗೆ ಡೊಕೊಮಾ ಮಾಡದಿದ್ದರೆ ಮೊಮ್ಮಗಳಿಗೆ ಸಮಾಧಾನವಿಲ್ಲ. ಅಪ್ಪನ ಕೊನೆ ಕ್ಷಣಗಳಲ್ಲಿ ಈ ಪ್ರೀತಿಯ ಮೊಮ್ಮಗಳು ಜತೆ ಇದ್ದು ಇನ್ನಿಲ್ಲದ ಹಾಗೆ ಆರೈಕೆ ಮಾಡಿದಳು.
ಬರೆಯುತ್ತ ಹೋದರೆ ಹೀಗೆ ನೆನಪುಗಳ ಸರಮಾಲೆ ಉದ್ಧವಾಗುತ್ತ ಹೋಗುತ್ತದೆ. ಬಾಳ ಕೊನೆಯ ವರ್ಷದಲ್ಲಿ ಧ್ವನಿ ಪೆಟ್ಟಿಗೆಯಲ್ಲಿ ಹುಟ್ಟಿದ ಸಮಸ್ಯೆಗೆ ಧ್ವನಿ ಉಡುಗಿತು. ಉಸಿರಿಗಾಗಿ ಗಂಟಲನಲ್ಲಿ ಚಿಕ್ಕ ಕೊಳವೆಯ ಜೋಡಣೆ (tracheostomy) ಅನಿವಾರ್ಯವಾಯಿತು. ಅಮ್ಮ ಅಪ್ಪನನ್ನು ಕಳೆದೊಂದು ವರ್ಷಲ್ಲಿ.
ಅನು ಕ್ಷಣವೂ ಮಾಡಿದ ಜತನದ ಆರೈಕೆ ಮರೆಯಲಾಗದ್ದು. ಹಾಗಾಗಿ ಯಾವುದೇ ದೊಡ್ಡ ತೊಂದರೆ ಅಪ್ಪನನ್ನು ಬಾಧಿಸಲಿಲ್ಲ. ಮತ್ತೆ ಆಸ್ಪತ್ರೆ ವಾಸ ಮಾಡಲಿಲ್ಲ. ಸ್ವಗೃಹದಲ್ಲಿಯೇ ಶಾಂತವಾಗಿ ಮೊನ್ನೆ ಶಾಶ್ವತ ವಿಶ್ರಾಂತಿಗೆ ತೆರಳಿದರು.
ರಾತ್ರೆಯ ಹೊತ್ತು ಬಾನಿನ ತುಂಬ ಹರಡಿ ಹೋದ ತಾರೆಗಳನ್ನು ನೋಡುತ್ತ ಹೋದಂತೆ ಯಾವುದೋ ಏಕಾಂಗಿತನ ಕಾಡುತ್ತದೆಂದು ಕಾರ್ಲ್ ಸಾಗಾನನ್ನು ಉದ್ಧರಿಸುತ್ತಿದ್ದೆ ಆಗಾಗ ನನ್ನ ಖಗೋಳ ವಿಜ್ಞಾನ ಉಪನ್ಯಾಸಗಳಲ್ಲಿ – ಅದೇನೆಂದು ಅರಿವು ಇರದಿದ್ದರೂ.
ಅಪ್ಪನಿಲ್ಲದ ಈ ಹೊತ್ತು ಆ ಏಕಾಂಗಿತನ ನಿಜಕ್ಕೂ ಏನೆಂದು ಅರಿವಾಗುತ್ತಿದೆ.
ಕಾಲ ಸರಿಯುತ್ತದೆ – ಸರಿಸುತ್ತದೆ – ಯಾರನ್ನೂ ಬಿಡದೆ, ಎಲ್ಲರನ್ನು.
ಇತ್ತೀಚೆಗಿನ ಪ್ರತಿಕ್ರಿಯೆಗಳು…