ಮುಖ ಪುಟ > 1 > ಎಂದೂ ಮರೆಯದ ನನ್ನ ದೊಡ್ಡಪ್ಪ

ಎಂದೂ ಮರೆಯದ ನನ್ನ ದೊಡ್ಡಪ್ಪ

ನನ್ನ ಬಾವ ಅಶೋಕವರ್ಧನ – ಅಥವಾ ಸಲುಗೆಯಿಂದ ಹೇಳುವುದಾದರೆ ಅಶೋಕ ಬಾವನ – ಭಾವ ಪೂರ್ಣ ಲೇಖನ “ಅಸಮ ಸಾಹಸಿ ಮರಿಕೆಯ ಅಣ್ಣ”   http://www.athreebook.com/2015/03/blog-post_27.html

ಓದುತ್ತಿರುವಂತೆ ವರ್ಷಗಳ ಹಿಂದೆ ಕಾಲ ಪ್ರವಾಹಿನಿಯಲ್ಲಿ ಲೀನವಾಗಿ ಹೋದ ನಮ್ಮ ಒಲುಮೆಯ ದೊಡ್ಡಪ್ಪನ (ಎ.ಪಿ.ತಿಮ್ಮಪ್ಪಯ್ಯ) ನೆನಪಿನ ಸರಮಾಲೆಯೇ ಒತ್ತರಿಸಿ ಬಂತು.

ಮೊಮ್ಮಗ ಅಭಿಜಿತ್ ತೆಗೆದ ಚಿತ್ರ

ಮೊಮ್ಮಗ ಅಭಿಜಿತ್ ತೆಗೆದ ಚಿತ್ರ

ದೊಡ್ಡಪ್ಪನ ಮಕ್ಕಳಾದ ಸುಬ್ಬಯ್ಯ, ಚಂದ್ರಶೇಖರ, ಶಾರದೆ, ಸದಾಶಿವ ಮತ್ತು ನಳಿನಿ ಜತೆ ಜತೆಯಲ್ಲಿಯೇ ಮರಿಕೆಯ ದೊಡ್ಡ ಮನೆಯಲ್ಲಿಯೇ ದಿನದ ಬಹುಪಾಲು ಆಡುತ್ತ, ಅಡ್ಡಾಡುತ್ತ ಬೆಳೆದವನು ನಾನು. ನಳಿನಿ ಮತ್ತು ನನಗೆ ಎರಡು ತಿಂಗಳ ಅಂತರ – ನಾನು ಎರಡು ತಿಂಗಳಿಗೆ ದೊಡ್ಡವನು – ಹಕ್ಕಿನಲ್ಲಿ ಅಣ್ಣ (ರಾಧಣ್ಣ). ಹಾಗಾಗಿ ನಮಗೆ ಚಡ್ಡಿ ದೋಸ್ತಿ. ಆಟ ಪಾಠಗಳಲ್ಲಿ ಒಟ್ಟಾಗಿ ಬೆಳೆದವರು. ಬೆಳಗ್ಗೆ ಆದೊಡನೆ ದೊಗಳೆ ಚಡ್ಡಿ, ಬರಿ ಮೈಯಲ್ಲಿ ಮರಿಕೆ ಮನೆಗೆ ಧಾವಿಸಲು ಕಾತರಿಸುತ್ತಿದ್ದೆ. ಓಡುವಾಗ ಅಲ್ಲಲ್ಲಿ ಬೀಳುತ್ತ ಮೊಣಗಂಟೆಲ್ಲ ತರಚಿದ ಗಾಯಗಳು ಸಾಮಾನ್ಯ. ಹಾಗಾಗಿ ದೊಡ್ಡಪ್ಪ ನನಗಿಟ್ಟ ಅಡ್ಡ ಹೆಸರು “ಸ್ಟೀಲ್ ಗ್ಲಾಸ್”. ದೊಡ್ಡವನಾಗಿ ಕಾಲೇಜು ಅದ್ಯಾಪಕನಾದ ಮೆಲೂ ಹಾಗೆ ಕರೆಯುವಾಗ ಅದೆನೋ ಖುಷಿ – ಬಾಲ್ಯದ ದಿನಗಳ ನೆನೆಪಾಗಿ.  ನನಗೆ ಈಗಲೂ ನೆನಪಿದೆ. ಅಪ್ಪನಿಗೆ ಹುಷಾರಿಲ್ಲದೇ ಅಮ್ಮ , ಅಪ್ಪ ಮತ್ತು ತಂಗಿ ಲಲಿತ ಬೆಂಗಳೂರಿಗೆ ಚಿಕಿತ್ಸೆಗೆ ಹೋದ ಸಂದರ್ಭದಲ್ಲಿ ನಾನಿರುತ್ತಿದ್ದುದು ಮರಿಕೆ ಮನೆಯಲ್ಲಿ. ಮೈಯೆಲ್ಲ ಅಲ್ಲಲ್ಲಿ ಹುಣ್ಣು. ಅದರ ಕೀವು ತೆಗೆದು ಆರೈಕೆ ಮಾಡಿದವಳು ದೊಡ್ಡಮ್ಮ. ದೊಡ್ಡಮ್ಮನ  ಮಕ್ಕಳ ಪ್ರೀತಿಯಲ್ಲಿ ಒಂದಷ್ಟು ಪಾಲು ನಮಗೂ ಸಿಕ್ಕಿತ್ತು.

ಮಕ್ಕಳಾದ ನಾವು “ಒಬ್ಬರು ಇನ್ನೊಬ್ಬರ ಮನೆಯಲ್ಲಿ ಉಳಿಯುವುದು” ಅಂದರೆ ಎಣೆ ಇಲ್ಲದ ಸಂಭ್ರಮ. ನಮ್ಮ ಮನೆಯಿಂದ ಒಂದು ಫರ್ಲಾಂಗ್ ದೂರದಲ್ಲಿದೆ ತರವಾಡು ಮನೆ. ಆದರೂ ಅಲ್ಲಿಗೆ ಹೋಗುವುದೆಂದರೆ ಅದಕ್ಕಿಂತ ಸಂಭ್ರಮ ಇನ್ನೊಂದಿರಲಿಲ್ಲ. ಆಟಗಳೆಲ್ಲ ಮುಗಿದು ನಿದ್ದೆಗೆ ಜಾರಿ ಬೆಳಗ್ಗೆ ಆರರ ಹೊತ್ತಿಗೆ ಏಳುವಾಗ ನಮಗೆ ಕಾಯುತ್ತಿತ್ತು ಬಿಸಿಯಾದ ಬೆಲ್ಲನೀರು – ಅಂದರೆ ಬೆಲ್ಲದ ನೀರಿಗೆ ಬಿಸಿ ಹಾಲು ಹಾಕಿದ ಪೇಯ – ಅದೊಂದು ಮಾತ್ರ ನನಗೆ ಹಿಡಿಸುತ್ತಿರಲಿಲ್ಲ. ಸಾವಯವ ಇನ್ನಿತರ ವಿಷಯಗಳು ಮಕ್ಕಳಾದ ನಮಗೆಲ್ಲಿ ಗೊತ್ತು?  ಅದು ಸೇರುತ್ತಿಲ್ಲ ಎಂದು  ಹೇಳುವ ಧೈರ್ಯ ಮಾತ್ರ ಇರಲಿಲ್ಲ. ಏಕೆಂದರೆ ದೊಡ್ಡಪ್ಪನ ಬಗ್ಗೆ ಮನದ ಮೂಲೆಯಲ್ಲಿ ಅದೆನೋ ಹೆದರಿಕೆ. ಒಮ್ಮೆ ನಾನು ಮರಿಕೆಯ ಮನೆಗೆ ಹೋದಾಗ ಕಾಲಲ್ಲೆಲ್ಲ ಮಣ್ಣು. ದೊಡ್ಡಪ್ಪ ತಮಾಷೆಗೆ ಗದರಿಸಿದರು” ಮಣ್ಣು ಕಾಲಲ್ಲಿ ಬಂದರೆ ಜಾಗ್ರತೆ, ಮನೆಗೆ ಹೋಗಿ ತೊಳೆದು ಕೊಂಡು ಬಾ..” ನಾನು ತೊಳೆದು ಬರಲು ಪುನ: ಮನೆಗೆ ಹೋದನಂತೆ. ನನಗೆ ಮಾತ್ರ ನೆನಪಿಲ್ಲ. ನನ್ನ ತಂಗಿ ಲಲಿತ ಮತ್ತು ನನ್ನನ್ನು ದೊಡ್ಡಪ್ಪ ತಮಾಷೆ ಮಾಡುತ್ತಿದ್ದುದುಂಟು “ಪುಟ್ಟಿ ಕೂಸ್ ರಾಧ ಮಾಣಿ”. ತೀರ ಇತ್ತೀಚೆಗಿನ ತನಕವೂ ಮನೆಗೆ ಬಂದಾಗಲೆಲ್ಲ ಅದನ್ನುದ್ಧರಿಸಿ ಬೊಚ್ಚು ಬಾಯಿಯಲ್ಲಿ ನೆಗಾಡುತ್ತಿದ್ದರು.

ಅಜ್ಜ (ಎ.ಪಿ.ಸುಬ್ಬಯ್ಯ) – ಅಂದರೆ ದೊಡ್ಡಪ್ಪನ ಅಪ್ಪನಿಗೆ ಕೃಷಿಗಿಂತ ಸಾಮಾಜಿಕ ಚಟುವಟಿಕೆಗಳಲ್ಲಿ, ಸಾಹಿತ್ಯದಲ್ಲಿ ಆಸಕ್ತಿ. ಹಾಗಾಗಿ ಅವರು ಪುತ್ತೂರಿನಲ್ಲಿ ವಾಸ್ತವ್ಯ ಹೂಡಿದರೆ ಮರಿಕೆಯ ದೊಡ್ಡ ಆಸ್ತಿಯ ಮತ್ತು ದೊಡ್ಡ ಕುಟುಂಬದ ಜವಾಬ್ದಾರಿ ದೊಡ್ಡಪ್ಪನ ಹೆಗಲೇರಿದ್ದು ಹದಿನಾರರ ಹರೆಯದಲ್ಲಿಯೇ. ಆದರೆ ದೊಡ್ಡಪ್ಪ ಅಂಜಲಿಲ್ಲ. ಅಳುಕಲಿಲ್ಲ. ಬಂದ ಜವಾಬ್ದಾರಿಯನ್ನು ನಿಭಾಯಿಸುತ್ತ ಮರಿಕೆಯ ಇಡೀ ಕುಟುಂಬವನ್ನು ಉದ್ದರಿಸಿದರು. ಅವರಿಲ್ಲದಿರುತ್ತಿದ್ದರೆ ನಾವು ಹೀಗಿರುತ್ತಿರಲಿಲ್ಲ ಎನ್ನುತ್ತಾರೆ ಆಗಾಗ ನನ್ನ ಅಪ್ಪ.

ನನ್ನಮ್ಮ ಹೇಳುವುದುಂಟು “ ದೊಡ್ಡಪ್ಪ ಇಡೀ ಮರಿಕೆಯ ಆಸ್ತಿಯನ್ನು ಪಾಲು – ಹಂಚಿಕೆ ಮಾಡುವ ಸಂದರ್ಭದಲ್ಲಿ ಅಣ್ಣ ತಮ್ಮಂದಿರ ನಡುವೆ ಎಳ್ಳಷ್ಟೂ ಮನಸ್ತಾಪ ಬರಲಿಲ್ಲ. ಬದಲಾಗಿ ಸ್ವಯಂ ದೊಡ್ಡಪ್ಪನೇ ತನ್ನ ತಮ್ಮಂದಿರಿಗೆ ಮನೆಯನ್ನು ಕಟ್ಟಲು, ಆಸ್ತಿಯಲ್ಲಿ ತೋಟ ಮಾಡಲು ತನ್ನೆಲ್ಲ ಶ್ರಮವನ್ನು ವ್ಯಯಿಸಿದರು – ಒಂದಿಷ್ಟೂ ಗೊಣಗಾಟವಿಲ್ಲದೇ. ಅವರಿಗೆ ನಾವು ಎಷ್ಟು ಋಣಿಗಳಾಗಿದ್ದರೂ ಕಡಿಮೆಯೇ”

ಸಂಟ್ಯಾರಿನಲ್ಲಿರುವ ನಮ್ಮ ಮತ್ತು ಚಿಕ್ಕಪ್ಪನ (ರಾಮನಾಥಪ್ಪಚ್ಚಿ) ಮನೆ ಕಟ್ಟುವ ದಿನಗಳಲ್ಲಿ, ಗದ್ದೆಗೆ ಅಡಿಕೆ ತೋಟ ಇಡುವ ಸಂದರ್ಭದಲ್ಲಿ ಎಲ್ಲ ಜವಾಬ್ದಾರಿಯನ್ನು ಎಳೆಯ ಸಹೋದರರಿಗೆ ಬಿಟ್ಟು ದೊಡ್ಡಪ್ಪ ಹಾಯಾಗಿ ಇರಬಹುದಾಗಿತ್ತು. ಆದರೆ ದೊಡ್ಡಪ್ಪನ ಜಾಯಮಾನವೇ ಅದಲ್ಲ. ತಾನು ಕಷ್ಟ ಪಟ್ಟರೂ ಆಗಬಹುದು – ತನ್ನ ತಮ್ಮಂದಿರು, ಅಕ್ಕ ತಂಗಿಯರು ಸದಾ ಖುಷಿಯಾಗಿರಬೇಕು ಅನ್ನುವ ನಿಸ್ವಾರ್ಥ ದೊಡ್ಡ ಮನಸ್ಸು. ಅಣ್ಣನ ಜವಾಬ್ದಾರಿಯನ್ನು ಕಾಯಕದಲ್ಲಿ ತೋರಿದ ನಿಜಯೋಗಿ. ಸಹೋದರ ಗೌರಿಶಂಕರ – ಶಂಕರಪ್ಪಚ್ಚಿ – ವಕೀಲ ವೃತ್ತಿಯ ಕಾರಣದಿಂದ ಮಂಗಳೂರಿಗೆ ಹೋದರೆ, ಅವರ ಪಾಲಿನ ಆಸ್ತಿಯನ್ನು ತನ್ನ ಆಸ್ತಿಯ ಹಾಗೆ ನೋಡುತ್ತ ಅದರ ಉತ್ಪತ್ತಿಯನ್ನು ಕಾಲ ಕಾಲಕ್ಕೆ ನೀಡುತ್ತ, ಸಕಾಲದಲ್ಲಿ ಇಡೀ ಆಸ್ತಿಯನ್ನು ಮರಳಿಸಿದವರು ದೊಡ್ಡಪ್ಪ. ಇಂಥ ಪ್ರಾಮಾಣಿಕತೆಯೇ ದೊಡ್ಡಪ್ಪನ ಬಲು ದೊಡ್ಡ ಆಸ್ತಿ.

ಅಣ್ಣನಾಗಿ ಸದಾ ತನ್ನ ಅಧಿಕಾರದ ಮರ್ಜಿಯನ್ನು ಚಲಾಯಿಸುತ್ತ ಸಾಲದ ಹೊರೆಯನ್ನು ತನ್ನ ಸಹೋದರರ ಮೇಲೆ ಹೊರಿಸಿದ ಮತ್ತು ಆ ಸಾಲದ ಹೊರೆಯಲ್ಲಿಯೇ ಜೀವಮಾನ ಪರ್ಯಂತ ಸಹೋದರರನ್ನು ನಲುಗಿಸಿದ ಉದಾಹರಣೆಗಳಿವೆ. ದೊಡ್ಡಪ್ಪ ಇದಕ್ಕೆ ಅಪವಾದ. ದೊಡ್ಡಪ್ಪ ಮತ್ತು ಸಹೋದರ ನಡುವೆ, ಸಹೋದರಿಯರ ನಡುವೆ ಇರುವ ಅನ್ಯೋನ್ಯತೆಯೇ ಅನ್ಯಾದೃಶವಾದದ್ದು. ಏನಾದರೂ ಮಾಡು  ಸಾಲ ಮಾಡ ಬೇಡ ಅನ್ನುತ್ತಿದ್ದರು ದೊಡ್ಡಪ್ಪ.

ದೊಡ್ಡಪ್ಪನಿಗೆ ತನ್ನ ತಮ್ಮಂದಿರೆಂದರೆ ಎಲ್ಲಿಲ್ಲದ ಅಭಿಮಾನ. ಅವರಿಗೂ ಅಣ್ಣನ ಬಗೆಗೆ ಅಷ್ಟೇ ಅಭಿಮಾನ. ಒಂದು ಘಟನೆ ನೆನಪಾಗುತ್ತದೆ. ಭೂ ಮಸೂದೆ ಕಾನೂನು ಬಂದ ಸಂದರ್ಭ. ನಮ್ಮ ಆಸ್ತಿಯ ಒಂದು ಭಾಗದಲ್ಲಿ ಬಾಡಿಗೆ ಚೀಟಿನ ಆಧಾರದಲ್ಲಿ ಚಿಕ್ಕ ಮನೆ ಮಾಡಿಕೊಂಡು ಇದ್ದವನು, ತಾನಿದ್ದ ಮನೆಯ ಹಿತ್ತಲು ಮತ್ತು ಬೇಲಿಯಾಚೆಗಿನ ನಮ್ಮ ಒಂದೆಕ್ರೆ ಜಾಗವೆಲ್ಲವೂ ತನ್ನದೇ ಕೃಷಿ ಎನ್ನುತ್ತ ಸ್ವಾಧೀನಕ್ಕಾಗಿ ಡಿಕ್ಲರೇಶನ್ ಹಾಕಿದ. ಆತ ದೊಡ್ಡಪ್ಪನ ಬಳಿಗೆ ಸಾಗಿ ನನ್ನ ತಂದೆಯ ಬಗೆಗೆ ದೂರು ನೀಡುತ್ತ ಅಪಹಾಸ್ಯ ಮಾಡಿದಾಗ ಸಿಡಿದೆದ್ದ ದೊಡ್ಡಪ್ಪ ಅವನ ಕತ್ತಿನ ಪಟ್ಟಿ ಹಿಡಿದು ಗೇಟಿನ ಆಚೆಗೆ ಹಾಕಿ ಇನ್ನು ಮುಂದುವರಿದರೆ ಜಾಗ್ರತೆ ಅಂದರಂತೆ. ಕೋರ್ಟಿನಲ್ಲಿ ಕೇಸು ಅವನ ಪರವಾಗಲಿಲ್ಲ. ಹಾಗಾಗಿ ಮನೆಯ ಸನಿಹದ ಜಾಗ ನಮ್ಮ ಪಾಲಿಗೆ ಉಳಿಯಿತು. ಕೇಸು ಹಾಕಿದವನ ಮನೆಯನ್ನು ಧರೆಗುರುಳಿಸಿ ಹೊರ ಹಾಬಹುದಾಗಿತ್ತು. ಆತ ಶರಣಾದ. ಶರಣು ಬಂದವನನ್ನು ದೊಡ್ಡಪ್ಪ ಮತ್ತು ಅಪ್ಪ ಕ್ಷಮಿಸಿದ್ದು “ಅವರ ದೊಡ್ಡತನ” ಅನ್ನುವುದು ಈಗ ನನಗೆ ಅರ್ಥವಾಗುತ್ತದೆ. ಮನುಷ್ಯ ಸಂಬಂಧದಲ್ಲಿತ್ತು ದೊಡ್ಡಪ್ಪನಿಗೆ ವಿಶ್ವಾಸ. ಬಂಧುಗಳಲ್ಲಿಯೇ ದೊಡ್ಡಪ್ಪನನ್ನು ಅವಮಾನಿಸಿದರೂ ಸಂಬಂಧದ ಉಳಿವಿಗೆ ಆ ಅವಮಾನವನ್ನು ನುಂಗಿಕೊಂಡರು – ವಿಷಕಂಠನಂತೆ.

ದೊಡ್ಡಪ್ಪನ ಕಾಲ ನಿಷ್ಟೆ ಮರಿಕೆಯ ನಮಗೆಲ್ಲರಿಗೂ ಆದರ್ಶ. ಅವರ ದಿನಚರಿ ಬೆಳಗ್ಗೆ ನಾಲ್ಕೂ ಮುಕ್ಕಾಲಕ್ಕೆ ಆರಂಭವಾಗುತ್ತಿತ್ತು. ಮರಿಕೆಯ ಸುಮಾರು ಐವತ್ತು ಮೀಟರ್ ಉದ್ದದ ಹಟ್ಟಿಯಲ್ಲಿ ಅಂದು ತುಂಬಿ ತುಳುಕುತ್ತಿತ್ತು – ಹತ್ತು ಹದಿನೈದು ದನಗಳು, ಹೋರಿಗಳು, ಮುರ ಎಮ್ಮೆ ಮತ್ತು ಕೋಣಗಳು. ಹಾಲು ಕರೆದು, ದನಗಳಿಗೆಲ್ಲ ಹಿಂಡಿ ಮೇವು ಹಾಕುವ ದಿನಚರಿ ಸೂರ್ಯೋದಯದಷ್ಟೇ ಕರಾರುವಾಕ್ಕಾಗಿ ನಡೆಯುತ್ತಿತ್ತು. ಆ ದಿನಗಳಲ್ಲಿ ತೋಟದ ಕೆಲಸಗಾರರು ಮುಂಜಾನೆ ಏಳುಗಂಟೆಯ ಹೊತ್ತಿಗೆ ಹಾಜರಾಗುತ್ತಿದ್ದರು. ಅವರನ್ನು ಕರೆಯಲು, ಮಧ್ಯಾಹ್ನ ಅಥವಾ ಸಂಜೆ ಕೆಲಸ ಬಿಡುವ ಹೊತ್ತಿಗೆ ದೊಡ್ಡಪ್ಪ ಹಾಕುತ್ತಿದ್ದ “ ಕೂಕುಳು” ಕಂಪ್ಯೂಟರ್ ಪರದೆಯಲ್ಲಿ ಅಕ್ಷರಗಳನ್ನು ಮೂಡಿಸುತ್ತಿರುವ ಈ ಹೊತ್ತಿನಲ್ಲಿಯೂ ನನ್ನ ಕಿವಿಯಲ್ಲಿ ಮಾರ್ಧನಿಸುತ್ತಿದೆ.

ಬೆಳಗ್ಗೆ ಏಳರಿಂದ ಮಧ್ಯಾಹ್ನ ಹನ್ನೆರಡು ಘಂಟೆಯ ತನಕ, ಮಧ್ಯಾಹ್ನ ಎರಡರಿಂದ ಸಂಜೆ ಆರರವರೇಗೆ ಕೆಲಸದವರೊಂದಿಗೆ ಸರಿ ಸಮವಾಗಿ ದೊಡ್ಡಪ್ಪ ದುಡಿಯುತ್ತಿದ್ದರು. ದೇಹವನ್ನು ದಂಡಿಸುವುದರಲ್ಲಿಯೇ ಎಲ್ಲಿಲ್ಲದ ಸಂತಸ. ಹಾಗಾಗಿ ಬೊಜ್ಜಿನ ದೇಹ ದೊಡ್ಡಪ್ಪನದ್ದಾಗಿರಲಿಲ್ಲ. ಹುರಿಗಟ್ಟಿದ ಮಾಂಸ ಖಂಡಗಳು – ಮಹೋನ್ನತ ಬಾಹುಬಲಿಯ ಹಾಗೆ. ಕೊಟ್ಟು, ಪಿಕ್ಕಾಸಿನ ಮಣ್ಣು ಕೆಲಸಗಳಲ್ಲಿ ಅನನ್ಯ ಖುಷಿಯನ್ನು ಕಾಣುತ್ತಿದ್ದ ದೊಡ್ಡಪ್ಪನೊಟ್ಟಿಗೆ ಅಂದಿನ ಜಮಾನಕ್ಕೆ ಸರಿಯಾಗಿ ಸಹಾಯಕರ ಪಡೆಯೇ ಇತ್ತು. ಬುಲ್ಡೋಝರ್, ಹಿಟಾಚಿ ಮೊದಲಾದ ಇಂದಿನ ಯಂತ್ರಗಳು ಮಾಡುವ ಕೆಲಸಗಳನ್ನೆಲ್ಲ ಅಂಗಾರ, ಭೈರ, ಹುಕ್ರ, ಎಲ್ಯಣ್ಣ, ಕೇಪು, ಬಾಳಪ್ಪಾದಿಗಳು ಮಾಡುತ್ತಿದ್ದರೆ ಅವರೆಲ್ಲರೊಂದಿಗೆ ಕೆಲಸದ ಹೊತ್ತಿನಲ್ಲಿ ಸರಿ ಸಮವಾಗಿ ದೇಹ ಮುರಿದು ದುಡಿದವರು ದೊಡ್ಡಪ್ಪ – ಅವರೆಲ್ಲರ ಕಷ್ಟ ಸುಖಗಳಿಗೆ ಇನ್ನಿಲ್ಲದಂತೆ ಸ್ಪಂದಿಸಿದವರು. ಹಾಗಾಗಿಯೇ ನಿಜಾರ್ಥದಲ್ಲಿ ಅಣ್ಣೆರಾಗಿದ್ದವರು. ಕೃಷಿಯ ತಮ್ಮ ಅನುಭವಗಳನ್ನು ಬೋಢಿಸುವುದಕ್ಕಿಂತ ಮಾಡಿದವರು. ಆದರ್ಶವನ್ನು ಹೇಳುವುದಕ್ಕಿಂತ ಬಾಳಿ ತೋರಿದವರು. ಎಷ್ಟೋ ಬಾರಿ ಇಂಥವರು ಆಪ್ಯಾಯಮಾನರಾಗುವುದು ಇದೇ ಕಾರಣದಿಂದಲೇ.

ಮರಿಕೆ ಮನೆಯ ಬಳಿಯಲ್ಲೇ ಸಾಗುವ ತೋಡಿಗೆ ನಲುವತ್ತು ಅಡಿ ಎತ್ತರ, ಸುಮಾರು ಮುನ್ನೂರಡಿ ಉದ್ದದ ಶಿಲಾಗೋಡೆ ನಿರ್ಮಾಣವಾಗಿದೆ – ಮಣ್ಣು ಕೊರೆಯದ ಹಾಗೆ ತಡೆಯಲು. ಇದೊಂದು ಸುಂದರ ಕುಸುರಿ ಕೆಲಸ. ಇದರಲ್ಲೇನು ವಿಶೇಷ? ದೊಡ್ಡಪ್ಪ ಸ್ವಯಂ ತಾವೇ ಉಳಿ, ಪಿಕ್ಕಾಸು, ಸುತ್ತಿಗೆ ಹಿಡಿದು ಈ ತಡೆಗೋ ನಿರ್ಮಿಸಿದ್ದು ಅವರ ಅದಮ್ಯ ಕಾರ್ಯಕ್ಷಮತೆಯ ಪ್ರತೀಕವೆನ್ನುವುದೇ ಇದರ ವಿಶೇಷತೆ.

ಮಡಿಕೇರಿಯ ಹೊರವಲಯದ ಗಾಳೀಬೀಡಿನಲ್ಲಿ ಉಂಬಳಿರೂಪದಲ್ಲಿ ನೂರಾರು ಎಕರೆ ಭೂಮಿ ಮರಿಕೆ ಕುಟುಂಬಕ್ಕಿತ್ತು. ಆ ಜಾಗಕ್ಕ, ಆ ಕಾಲಕ್ಕೆ ಸರಿಯಾಗಿ ಬೇಲಿ, ಅಗಳು ಇರಲಿಲ್ಲ. ಸಹಜವಾಗಿಯೇ ಜಾಗದ ಒತ್ತುವರಿಗಳಾಗಿ ಅಳಿದುಳಿದ ಕೆಲವು ಎಕರೆ ಭೂಮಿಯನ್ನು ಉಳಿಸಿಕೊಳ್ಳುವ ಉತ್ಸಾಹ ಬಂತು ಈ ಜಮಾನದ ನಮಗೆ. ದೊಡ್ಡಪ್ಪ ನಮ್ಮ ನೆರವಿಗೆ ಬಂದರು. ಅರುವತ್ತೈದರ ಅಂಚಿನಲ್ಲಿದ್ದ ದೊಡ್ಡಪ್ಪ ನಮ್ಮ ಬೈಕೇರಿದರು, ಗುಡ್ಡ ಬೆಟ್ಟ ಸುತ್ತಿದರು,  ಸರ್ವೆ ಕೆಲಸ ಮಾಡಿಸಿದರು, ಅಲ್ಲಿದ್ದ ಜನರನ್ನು ಮಾತನಾಡಿ ಒಲಿಸಿಕೊಂಡರು, ವಕೀಲರನ್ನು ಸಂಪರ್ಕಿಸಿದರು. ಅಳಿದುಳಿದ ಜಾಗಕ್ಕೆ ಕಲ್ಲ ಕಂಬ, ಬೇಲಿ ಹಾಕಿಸುವ ಅವರ ಉತ್ಸಾಹ ಯುವಕರಾದ ನಮ್ಮನ್ನೂ ನಾಚಿಸುವಂತಿತ್ತು.

ಕಳೆದ ಶತಮಾನದ ಎಪ್ಪತ್ತು ಎಂಬತ್ತರ ದಶಕದಲ್ಲಿ ದೊಡ್ಡಪ್ಪ ಆಧುನಿಕ ಕೃಷಿಯ ವಕ್ತಾರರಾಗಿದ್ದವರು. ಆಧುನಿಕ ಅಂದೊಡನೆ “ಪರಿಸರದಿಂದ ದೂರ” ಅನ್ನುವ ಅರ್ಥವಲ್ಲ. ಕೃಷಿಯನ್ನು ಪರಿಸರಕ್ಕೆ  ಪೂರಕವಾಗಿ  ಜತೆ ಜತೆಯಲ್ಲೇ ಬೆಳೆಸುವ ಬಗ್ಗೆ ವೈಚಾರಿಕ ಚಿಂತನೆ ಅವರಲ್ಲಿತ್ತು ಅನ್ನುವುದಕ್ಕೆ ಹಲವು ನಿದರ್ಶನಗಳನ್ನು ಕೊಡಬಹುದು. ತೋಟಕ್ಕೆ ಸ್ಪ್ರಿಂಕ್ಲರ್ ಜೋಡಣೆ, ಗಾಡಿಗೆ ರಬ್ಬರ್ ಟಯರ್ ಅಳವಡಿಕೆ,  ಹೈನುಗಾರಿಕೆಯಲ್ಲಿ ಹೊಸತನ … ನಿಜ, ಹೈನುಗಾರಿಕೆಯಲ್ಲಿ ಈ ಭಾಗದಲ್ಲಿ ದೊಡ್ಡಪ್ಪನದು ದೊಡ್ಡ ಹೆಸರಾಗಿತ್ತು. ಹಾಲ್ ಸ್ಟೀನ್, ಜೆರ್ಸಿ, ರೆಡ್ಡೇನ್ ಮೊದಲಾದ ತಳಿಗಳ ಹಸುಗಳು ದೂರದೂರಿಂದ ಮರಿಕೆಯ ಹಟ್ಟಿ ತುಂಬಿದುವು. ಗೋಬರ್ ಗ್ಯಾಸ್ ಪ್ಲಾಂಟ್ ನಿರ್ಮಾಣ ಮಾಡಿದ್ದು, ಸೊಪ್ಪಿನ ಹಟ್ಟಿ ಬಾಚಟ್ಟಿಯಾಗಿ (ಶಿಲಾ ಹಾಸು)  ಪರಿವರ್ತಿತವಾದದ್ದು ಅವರ ಆಧುನಿಕತೆಯ ಸ್ಪರ್ಶಕ್ಕೆ ಕೆಲವು ಉದಾಹರಣೆಗಳು. ಪುತ್ತೂರಿಗೆ  ಸೈಕಲ್ಲಿನಲ್ಲಿ ಹಾಲು ಸಾಗಾಟ. ಒಂದು ತೊಟ್ಟೂ ನೀರು ಇಲ್ಲದ ಮರಿಕೆ ಮನೆಯ ಹಾಲಿಗೆ ಅಗಾಧ ಬೇಡಿಕೆ. ಹೈನುಗಾರಿಕೆಯ ಅವರ ಉತ್ಸಾಹ ಸಹೋದರರ ಮನೆಗಳಿಗೂ  ಪಸರಿಸಿತು. ಪುತ್ತೂರಿನಲ್ಲಿ ಖಾಸಗಿಯಾದ ಹಾಲಿನ ಸೊಸೈಟಿಯೊಂದರ ಸ್ಥಾಪನೆಯ ಹಿಂದೆ ದೊಡ್ಡಪ್ಪನ ಆಸ್ಥೆ ಇದೆ. ಅದೊಂದು ದಿನ ಹೊಟೆಲ್ ಮಂದಿ ಹೈನುಗಾರರ ಹಾಲಿನ ಬಗ್ಗೆ ಕೇವಲವಾಗಿ ಮಾತನಾಡಿದ್ದು ದೊಡ್ಡಪ್ಪ ಮತ್ತು ಇತರರನ್ನು ಕೆರಳಿಸಿತು. ಡಾ|ಸದಾಶಿವ ಭಟ್ಟರ ಕ್ಲಿನಿಕ್ಕಿನಲ್ಲಿಯೇ ಸಭೆ ನಡೆಯಿತು. ತಮ್ಮ ಹಾಲನ್ನು ತಾವೇ ಮನೆ ಮನೆಗೆ ಮಾರಾಟ ಮಾಡುವ ಖಾಸಗೀ ಹಾಲಿನ ಸೊಸೈಟಿ ಅಲ್ಲಿ ರೂಪುಗೊಂಡಿತು. ಆ ಸಂಸ್ಥೆ ಅಸ್ತಿತ್ವಕ್ಕೆ ಬಂದು ಮೂರು ದಶಕಗಳಾಯಿತು. ಇನ್ನೂ ಇದೆ – ಚೆನ್ನಾಗಿಯೇ ನಡೆಯುತ್ತಿದೆ – ಏಕೆಂದರೆ ನೇರ ಹೈನುಗಾರರಿಂದ ತಾಜಾ ಮತ್ತು ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುತ್ತಿದೆ.

ದೊಡ್ಡಪ್ಪ ಮೂವರು ಸಹೋದರರ ಪಾಲಿಗಷ್ಟೇ ಅಲ್ಲ, ಆರು ಮಂದಿ ಸಹೋದರಿಯರ  (ಲಕ್ಷ್ಮೀ ದೇವಿ, ಮೀನಾಕ್ಷಿ, ಲಲಿತಾ, ಭವಾನಿ, ಸೀತೆ, ಅನುರಾಧಾ) ಪಾಲಿಗೂ ಪ್ರೀತಿಯ “ಅಣ್ಣ”. ಅವರೆಲ್ಲರ ಮದುವೆಯನ್ನು ಮಾಡಿಸಿದ್ದು, ಕಷ್ಟ ಸುಖಗಳಿಗೆ ಇನ್ನಿಲ್ಲದಂತೆ ಸ್ಪಂದಿಸಿದವರು ದೊಡ್ಡಪ್ಪ. ಸಹೋದರ, ಸಹೋದರಿಯರು, ಅವರ ಮಕ್ಕಳಾದ ನಾವೆಲ್ಲ .. ನವರಾತ್ರೆ, ಚೌತಿ ಇತ್ಯಾದಿ ಹಬ್ಬಗಳಂದು ಮರಿಕೆ ಮನೆಯಲ್ಲಿ ಸಡಗರ ಸಂಭ್ರಮ. ಅದರಲ್ಲಿ ಮುಕ್ತವಾಗಿ ಭಾಗಿಯಾಗುತ್ತಿದ್ದ ದೊಡ್ಡಪ್ಪನಿಗೆ ಕೀಟಲೆ ಮಾಡುವುದೆಂದರೆ ಎಲ್ಲಿಲ್ಲದ ಖುಷಿ.

ಆರರಲ್ಲಿ ಐವರು ಇಲ್ಲಿದ್ದಾರೆ – ಎಡದಿಂದ ಬಲಕ್ಕೆ ಅನುಕ್ರಮವಾಗಿ ಲಕ್ಷ್ಮೀದೇವಿ (ದೊಡ್ಡತ್ತೆ), ಮೀನಾಕ್ಷಿ ಅತ್ತೆ, ಭವಾನಿ ಅತ್ತೆ, ಸೀತತ್ತ, ಅನು ಅತ್ತೆ

ಮೇಲಿನ ಚಿತ್ರದಲ್ಲಿಲ್ಲದ “ಲಲಿತತ್ತೆ” ಮಧ್ಯದಲ್ಲಿದ್ದಾಳೆ (ಹಕ್ಕು ಡಾ.ಅಭಿಜಿತ್)

ದೊಡ್ಡಪ್ಪ ಕಾಲೇಜಿಗೆ ಹೋಗದಿದ್ದರೂ  ವೈಚಾರಿಕತೆ ಅವರ ಜೀವನದ ಭಾಗವೇ ಆಗಿತ್ತು. ಈ ವೈಚಾರಿಕತೆ ಆನುವಂಶಿಕವಾಗಿ ಬಂದ ಬಳುವಳಿ ಇರಬೇಕು. ಇಲ್ಲಿ ದೊಡ್ಡಪ್ಪನ ಸೋದರ ಬಾವನ ಗಾಢ ಪ್ರಭಾವವನ್ನು ತಳ್ಳಿ ಹಾಕುವಂತಿಲ್ಲ. ಯಾರು ಈ ದೊಡ್ಡಪ್ಪನ ಸೋದರ ಬಾವ? “ಅತ್ರಿಯ ಅಶೋಕರ” ತಂದೆ – ಜಿಟಿ ನಾರಾಯಣ ರಾವ್ – ಮರಿಕೆಯ ನಮ್ಮ ಪಾಲಿಗೆ ನಾರಾಯಣ ಮಾವ. “ಯಾವುದನ್ನೂ ಪ್ರಶ್ನಿಸದೇ ಒಪ್ಪಬೇಡ – ಸ್ವಯಂ ದೇವರು ಪ್ರತ್ಯಕ್ಷನಾದರೂ ಕೂಡ” ಎಂದು ಆಗಾಗ ಉದ್ದರಿಸುತ್ತಿದ್ದ ಮಾವನದು  ಪ್ರಖರ ವೈಚಾರಿಕ ನಿಲುವು. ಆಸಕ್ತರು ಅವರ ಆತ್ಮವೃತ್ತಾಂತ “ಮುಗಿಯದ ಪಯಣ” ಓದಬಹುದು. ದೊಡ್ಡಪ್ಪ ಮತ್ತು ಅವರದ್ದು ಸಮಪ್ರಾಯ. ಹಾಗಾಗಿ ಮರಿಕೆಯ ಕಾಡು, ಬೆಟ್ಟ, ಹೊಳೆ , ಹಳ್ಳಗಳಲ್ಲಿ  ಬಾಲ್ಯದ ಆಟ ಕೂಟಗಳಲ್ಲಿ ಒಟ್ಟಾಗಿ ಬೆಳೆದವರು. ಅವರಿಬ್ಬರ ನಡುವೆ ಇದ್ದ ಅನ್ಯೋನ್ಯತೆಯನ್ನು ವಿವರಿಸುವಲ್ಲಿ ಇಲ್ಲಿನ ಪದಗಳು ಸೋಲುತ್ತವೆ. ಈ ವೈಜ್ಞಾನಿಕ ಮನೋಭಾವದ ಬಾವನ ಚಿಂತನೆಗಳು ದೊಡ್ಡಪ್ಪನದ್ದಷ್ಟೇ ಅಲ್ಲ, ಮರಿಕೆಯ ಎಲ್ಲ ಸಹೋದರರ ಹಾಗೂ ಅವರ ಮಕ್ಕಳಾದ ನಮ್ಮೆಲ್ಲರನ್ನು ಇನ್ನಿಲ್ಲದ ಹಾಗೆ ಆವಾಹಿಸಿದೆ ಮತ್ತು ಪ್ರಭಾವಿಸಿದೆ – ಎಂದರೆ ಅದು ಅತಿಶಯೋಕ್ತಿಯಾಗದು. ಅವರ ಸಂಸರ್ಗ ನಮ್ಮ ಜೀವನದ ಭಾಗ್ಯ ಅನ್ನಬೇಕು. ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮರಿಕೆಗೆ ಬಂದಾಗ ನಮಗೆ ಹಬ್ಬದ- ಸಂಭ್ರಮದ ವಾತಾವರಣ. ಅವರ ಮಾತು ಕಥೆಗಳಲ್ಲಿ ವಿಜ್ಞಾನ, ಸಾಹಿತ್ಯ, ಕಾವ್ಯ, ಸಂಗೀತಗಳೆಲ್ಲವೂ ಭೋರ್ಗರೆದು ಪ್ರವಹಿಸುತ್ತಿದ್ದಾಗ ದೊಡ್ಡಪ್ಪ ಅವುಗಳಲ್ಲಿ ಭಾಗಿಯಾಗುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೇನೆ.

ವಾರದ ಏಳು ದಿನಗಳಲ್ಲಿ ಹೆಚ್ಚಿನ ದಿನಗಳಲ್ಲಿ ಸಂಜೆಯ ಹೊತ್ತಿಗೆ ತನ್ನ ತಮ್ಮಂದಿರ ಮನೆಗೆ ಭೇಟಿ ಕೊಡುವುದು ದೊಡ್ಡಪ್ಪನ ಪರಿಪಾಠ. ಉಳಿದ ದಿನಗಳಲ್ಲಿ ತಮ್ಮಂದಿರು ಅವರನ್ನು ನೋಡಲು ಮರಿಕೆಯ ಮನೆಗೆ ಹೋಗುವುದು ವಾಡಿಕೆ. ಅಂದರೆ ಪ್ರತಿ ದಿನ ಸಂಜೆ ಸಹೋದರರು (ದೊಡ್ಡಪ್ಪ, ನನ್ನ ಅಪ್ಪ ಮತ್ತು ಚಿಕ್ಕಪ್ಪ) ಒಂದಲ್ಲ ಒಂದು ಕಡೆ ಭೇಟಿಯಾಗದೇ ಹೋದರೆ ಆ ದಿನ ಅವರಿಗೆ ಮುಗಿದಂತಾಗುತ್ತಿರಲಿಲ್ಲ. ರಾಜಕೀಯ, ಸಾಮಾಜಿಕ ವಿಚಾರಗಳ ನಡುವೆ ಅವರೊಳಗೆ ನಡೆಯುತ್ತಿದ್ದ ಬಿರುಸಿನ ಚರ್ಚೆಗಳನ್ನು ನೋಡುತ್ತ ಬೆಳೆದವರು ನಾವೆಲ್ಲ. ಮರಿಕೆ ಮನೆಯಲ್ಲಿ ನಡೆಯುತ್ತಿದ್ದ ಅನಂತನ ವೃತ, ಗಣೇಶ ಚತುರ್ಥಿ, ನವರಾತ್ರೆಯ ಒಂಬತ್ತು ದಿನಗಳ ಪೂಜೆಯ ಸಂದರ್ಭಗಳಲ್ಲಿ ಊಟದ ನಂತರ ನಡೆಯುತ್ತಿದ್ದ ಬಿರುಸಿನ ಚರ್ಚೆಗಳಲ್ಲಿಯೂ ದೊಡ್ಡಪ್ಪ ಉತ್ಸಾಹದಿಂದ ಭಾಗಿಯಾಗುತ್ತಿದ್ದರು. ಉದ್ದನೆಯ ಹಜಾರದಲ್ಲಿ ನಾವು ಮಕ್ಕಳು ಕಬಡಿ ಆಟ ಆಡುತ್ತಿದ್ದಾಗ ದೊಡ್ಡಪ್ಪ ಆಟಕ್ಕೆ ಸೇರುತ್ತಿದ್ದರೆ ನಮ್ಮ ಗಲಾಟೆ ಏರುತ್ತಿತ್ತು. ಅವೆಲ್ಲವೂ ಇಂದು ಸಿಹಿ ನೆನಪುಗಳು.

ನಾರಾಯಣ ಮಾವ (ಜಿಟಿಎನ್)  ಮೊಮ್ಮಗ ಅಭಯ ಸಿಂಹ ತೆಗೆದ ಅಪರೂಪದ ಚಿತ್ರ

ನಾರಾಯಣ ಮಾವ (ಜಿಟಿಎನ್)
ಮೊಮ್ಮಗ ಅಭಯ ಸಿಂಹ ತೆಗೆದ ಅಪರೂಪದ ಚಿತ್ರ

ಅನು ಅತ್ತೆಯ ಮದುವೆ ಸಂದರ್ಭ – ಪುತ್ತೂರಿಗೆ ಹೋಗಿ ನೇಮಿರಾಜ ಸ್ಟುಡಿಯೋದಲ್ಲಿ ತೆಗೆಸಿದ ಚಿತ್ರ. ಯಾರೆಲ್ಲ ಇಲ್ಲಿದ್ದಾರೆ? (ಎಡದಿಂದ ಬಲಕ್ಕೆ ಅನುಕ್ರಮವಾಗಿ) ಮೇಲಿನ ಸಾಲು – – ಅನಿತ, ಶಾರದೆ, ಶೈಲ, ಚಂದ್ರಣ್ಣ, ಎರಡನೇಯ ಸಾಲು – ಬಂಗಾರ್ಡಕ್ಕ ಮಹಾಬಲ ಭಟ್, ತಿಮ್ಮಪ್ಪಯ್ಯ, ರಮಾ ದೇವಿ (ದೊಡ್ಡಮ್ಮ), ದೇವಕಿ, ಮಾಲತಿ (ನನ್ನ ಅಮ್ಮ), ಗೋವಿಂದ ಭಟ್ (ನನ್ನಪ್ಪ), ರಾಮನಾಥ, ಶಾಂತಾ ಕುಳಿತ ಸಾಲು – ಲಲಿತಾ, ಸೀತೆ, ಮೀನಾಕ್ಷಿ, ಪಾರ್ವತಿ (ಅಜ್ಜಿ), ಸುಬ್ಬಯ್ಯ (ಅಜ್ಜ), ಡಾ|ಶಂಕರ ಭಟ್ , ಅನುರಾಧಾ, ಲಕ್ಷ್ಮೀದೇವಿ, ಭವಾನಿ (ಕೆಳಗೆ ಕುಳಿತ ಮಕ್ಕಳ ದಂಡು) – ಸದಾಶಿವ, ಕುಸುಮಮ್ ಸತೀಷ, ಪ್ರಕಾಶ, ಸುಬ್ರಹ್ಮಣ್ಯ, ಲಲಿತ, ನಳಿನಿ, ಪ್ರಕಾಶ ಅಂದ ಹಾಗೆ ನಾನೆಲ್ಲಿ?

ತಾರುಣ್ಯಕಾಲದಿಂದಲೂ ಸೈಕಲ್ ದೊಡ್ದಪ್ಪನ ಜೀವನದ ಭಾಗ. ಅವರ ರಾಲಿ ಸೈಕಲ್ ಸದಾ ಪಳ ಪಳ ಹೊಳೆಯುತ್ತಿತ್ತು. ಸೈಕಲ್ ಬಿಟ್ಟರೆ ಎತ್ತಿನ ಗಾಡಿ. ಸ್ವಯಂ ದೊಡ್ಡಪ್ಪನೇ ಗಾಡಿ ಹೊಡೆಯುತ್ತಿದ್ದರು ಪುತ್ತೂರು ಪೇಟೆಗೆ – ಅಂದರೆ ನಂಬುವುದಕ್ಕೆ ನೋಡಿದ ನನಗೇ ಕಷ್ಟವಾಗುತ್ತದೆ. ಮರದ ಚಕ್ರದ ಗಾಡಿಗೆ ಟಯರ್ ಚಕ್ರ ಜೋಡಿಸಿ ಇನ್ನಷ್ಟು ಆಧುನೀಕರಿಸಿದರು. ಆ ಕಾಲದಲ್ಲಿ ಎತ್ತಿನ ಗಾಡಿ ಇದ್ದ ಮತ್ತು ಸ್ವಯಂ ತಾವೇ ಎತ್ತಿನ ಗಾಡಿಯನ್ನು ಚಲಾಯಿಸುತ್ತಿದ್ದ ಕೃಷಿಕರು ಈ ಭಾಗದಲ್ಲಿ ಬೇರೆ ಯಾರಿದ್ದರೆನ್ನುವುದು ನನಗೆ ತಿಳಿಯದು. ಪುತ್ತೂರಿನ ಪೇಟೆಗೆ ಸೈಕಲ್ಲಿನಲ್ಲಿಯೇ ಹೋಗಿ ಬರುತ್ತಿದ್ದ ದೊಡ್ಡಪ್ಪನಿಗೆ ಐವತ್ತರಂಚಿಗೆ ಬಂದಾಗ ಸ್ಕೂಟರ್ ಕಲಿಯುವ ಹುಮ್ಮಸ್ಸು. ಅಣ್ಣ ಕಲಿಯಲು ಹೊರಟಾಗ ತಮ್ಮನಾದ ನನ್ನ ಅಪ್ಪನಿಗೂ ಕೂಡ ಉತ್ಸಾಹ ಹುಟ್ಟಿತು. ಇಬ್ಬರೂ ಸ್ಕೂಟರ್ ಕಲಿಯುವುದಕ್ಕೆ ಹೊರಟರು. ದೊಡ್ಡಪ್ಪ ಗೆದ್ದಲ್ಲಿ ನನ್ನಪ್ಪ ಸೋತರು. ಅಪ್ಪ ತೆಗೆದ ಹೊಸ ಲ್ಯಾಂಬ್ರೆಟ್ಟಾ ಸ್ಕೂಟರ್ (೧೫೦ಸಿಸಿ) ನನ್ನ ಪಾಲಿಗೆ ಬಂತು. ಅದುವೋ ಯಮ ಭಾರ. ಕಾಲೇಜಿಗೆ ಹೋಗುತ್ತಿದ್ದ ಸಣಕಲು ಹುಡುಗನಾದ ನಾನು ಆ ಸ್ಕೂಟರ್ ಚಲಾಯಿಸಲು ಹೊರಟೆ. ಯಮಭಾರದ ಆ ಸ್ಕೂಟರಿನಲ್ಲಿ ನಾನು ಮತ್ತು ದೊಡ್ಡಪ್ಪ ಚಂದ್ರಣ್ಣನಿಗೆ ಆಸ್ತಿ ಖರದಿಸಲು ಗುಡ್ಡೆ, ಬೆಟ್ಟಗಳ ಜಾರು ಮಣ್ಣ ದಾರಿಯಲ್ಲೆಲ್ಲ ಸುತ್ತಾಡಿದ್ದು ಇಂದು ನೆನಪಾಗುತ್ತಿದೆ. ಒಮ್ಮೆ ಒಂದು ಕಡೆ ಸ್ಕೂಟರ್ ಸ್ಕಿಡ್ ಆಗಿ ಬೀಳಲು ಹೊರಟಾಗ, ಸ್ಕೂಟರಿನಿಂದ ಹಾರಿದ ದೊಡ್ಡಪ್ಪ ಸ್ಕೂಟರನ್ನು ಬೀಳದಂತೆ ತಡೆ ಹಿಡಿದು ನಿಲ್ಲಿಸಿದಾಗ ನನಗೋ ಜಗವನ್ನು ಗೆದ್ದ ಭಾವ. ದೊಡ್ಡಪ್ಪ ಹಿಂದಿದ್ದಾರಲ್ಲ – ಎಲ್ಲವನ್ನು ಗೆಲ್ಲುತ್ತೇನೆನ್ನುವ ಧೈರ್ಯ ನನ್ನಲ್ಲಿ. ಇದು ನನಗಷ್ಟೇ ಅಲ್ಲ, ಮರಿಕೆಯ ನಮ್ಮೆಲ್ಲರಿಗೂ ದೊಡ್ದಪ್ಪ ಇದ್ದಾರೆಂದರೆ ಅದೆನೋ ಮಾನಸಿಕ ಧೈರ್ಯ.

ಒಮ್ಮೆ ನಾನು ಮತ್ತು ದೊಡ್ಡಪ್ಪ ಸ್ಕೂಟರಿನಲ್ಲಿ ಬರುತ್ತಿದ್ದೆವು. ಪುತ್ತೂರಿನ ದರ್ಭೆಯಲ್ಲಿರುವ ಜಗ್ಗಣ್ಣನ (ಜಗನ್ನಾಥ ಶೆಟ್ಟಿ) ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಲು ನಿಂತಾಗ ಅಲ್ಲೊಂದು ಆಲ್ಸೇಶಿಯನ್ ನಾಯಿ ಪರದೇಶಿಯಾಗಿ ದರವೇಶಿಯಂತೆ ಅಡ್ಡಾಡುತ್ತಿದ್ದುದನ್ನು ಕಂಡಾಗ ದೊಡ್ಡಪ್ಪನಿಗೆ ಉತ್ಸಾಹ ಬಂತು “ರಾಧಾ ಯಾರದ್ದೋ ಸಾಕಿದ ನಾಯಿಯ ಹಾಗೆ ಕಾಣುತ್ತೆ. ಮನೆಗೆ ಕರೆದುಕೊಂಡು ಹೋದರೆ ಹೇಗೆ?” ದೊಡ್ಡಪ್ಪನಿಗೆ ಬೇಡ ಎನ್ನುವ ಧೈರ್ಯ ನನಗೆಲ್ಲಿ? ಸರಿ, ದೊಡ್ಡಪ್ಪ ಎದುರಿದ್ದ ಮೀನಾಕ್ಷಿ ಭವನದಿಂದ ಬಿಸ್ಕಿಟ್ ತಂದು – ನಾಯಿಗೆಸೆದರು. ನಾಯಿಯ ಬೆನ್ನು ಸವರಿದರು. ಮಿಸುಕಾಡಲಿಲ್ಲ. ಅಲ್ಲೇ ಇದ್ದ ರಿಕ್ಷವನ್ನು ಕರೆದು ನಾಯಿ ಸಮೇತ ರಿಕ್ಷ ಏರಿ ಮರಿಕೆಯ ಮನೆಗೆ ತಂದೇ ಬಿಟ್ಟರು. “ಆ ಬೀಡಾಡಿ ನಾಯಿಗೆ ರೇಬಿಸ್ ಇರಬಹುದು, ಈಗಾಗಲೇ ಅದನ್ನು ಎಲ್ಲಿಂದ ತಂದಿರೋ ಅಲ್ಲಿಯೇ ಬಿಟ್ಟುಬಿಡಿ” – ದೊಡ್ಡಮ್ಮ ಎಚ್ಚರಿಸಿದಾಗಲೇ ದೊಡ್ಡಪ್ಪನಿಗೆ ಜ್ಞಾನೋದಯವಾಯಿತು. ನಾಯಿಯನ್ನು ಸ್ವಸ್ಥಾನಕ್ಕೆ ಮರಳಿಸಿದರು. ಇಂಥ ಘಟನೆಗಳು ಒಂದೊಂದಾಗಿ ನೆನಪಾಗುತ್ತಿವೆ ಈ ಹೊತ್ತಿನಲ್ಲಿ.

ಪ್ರೀತಿಯ ದೊಡ್ದಮ್ಮ – ಎಂಥ ನಗುವಿದು (ಮೊಮ್ಮಗ ಅಭಿಜಿತ್ ತೆಗೆದ ಚಿತ್ರ)

ಮೈಸೂರಿನ ಹೊರವಲಯದ ಹಳ್ಳಿಯಾದ ಕಳಲವಾಡಿಯಲ್ಲಿ ತೆಂಗಿನ ತೋಟ ಮತ್ತು ಮನೆಯಿರುವ ಜಾಗವನ್ನು ಎಂಬತ್ತರ ದಶಕದಲ್ಲಿ ದೊಡ್ಡಪ್ಪ ಖರೀದಿಸಿದರು ತನ್ನ ಮಗ ಚಂದ್ರಶೇಖರ – ಚಂದ್ರಣ್ಣನಿಗೆ. ಆಸ್ತಿಯ ರಿಜಿಸ್ಟ್ರೇಶನ್ ಆದ ಕೂಡಲೇ ಮನೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕಲ್ಲ. ಆ ಜವಾಬ್ದಾರಿಯನ್ನು ನೀಡಿದ್ದು ಕಾಲೇಜು ವಿದ್ಯಾರ್ಥಿಗಳಾಗಿದ್ದ ನನ್ನ ಮತ್ತು ಸತೀಶನ (ಚಿಕ್ಕಪ್ಪನ ಮಗ) ಮೇಲೆ. ಆ ಅಪರಿಚಿತ ಮನೆಯಲ್ಲಿ ತುಂಬಿತ್ತು ಕಸ ಕಡ್ಡಿ, ದೂಳು. ನಮಗೋ ಉತ್ಸಾಹ. ಕಸಬರಿಕೆ ಹಿಡಿದು ದೂಳು ಝಾಡಿಸಿದೆವು ಮರುದಿನ ಮನೆ ಒಕ್ಕಲಾಗಲಿರುವ ಅಣ್ಣ ಮತ್ತು ದೊಡ್ಡಪ್ಪನಿಗಾಗಿ. ಆ ರಾತ್ರೆ ನಾವು ಎಳೆಯರಿಬ್ಬರು ಆ ಅಪರಿಚಿತ ಮನೆಯಲ್ಲಿ ಕಳೆದದ್ದು ಮರೆಯಲಾಗದ ಅನುಭವ. ಕಳಲವಾಡಿಯ ಆ ಆಸ್ತಿಯಲ್ಲಿ ಬಗೆ ಬಗೆಯ ಸಸ್ಯ ಸಂಕುಲಗಳನ್ನು ಬೆಳೆಸುತ್ತ ಅದು ನಿಜ ಅರ್ಥದಲ್ಲಿ ಇಂದ್ರಪ್ರಸ್ಥವಾಯಿತು ಕೆಲವು ವರ್ಷಗಳಲ್ಲಿ. ಅಣ್ಣನ ಕೃಷಿ ಪ್ರಯೋಗಕ್ಕೆ ದೊಡ್ಡಪ್ಪ ತಂದೆಯಾಗಿ ಎಂದೂ ಅಡ್ಡಿ ಬರಲಿಲ್ಲ – ಬದಲಾಗಿ ಪ್ರೋತ್ಸಾಹ ನೀಡಿದರು; ಬೆಂಬಲವಾಗಿ ನಿಂತರು. ತನಗೆ ತಂದೆಯಿಂದ ಬಂದ ಸ್ವಾತಂತ್ರ್ಯವನ್ನು ಮಕ್ಕಳಿಗೆ ಸಕಾಲದಲ್ಲಿ ನೀಡುವಲ್ಲಿ ದೊಡ್ಡಪ್ಪ ಚೌಕಾಶಿ ಮಾಡಲಿಲ್ಲ. ಇಲ್ಲಿ ಮರಿಕೆಯ ಇತರ ಸಹೋದರರು ಕೂಡ ತನ್ನಣ್ಣನನ್ನೇ ಅನುಸರಿಸಿದವರು.

ಎಪ್ಪತ್ತರ ಅಂಚಿಗೆ ಬಂದ ದೊಡ್ಡಪ್ಪನಿಗೆ ಪ್ರಾಯ ಸಹಜವಾಗಿ ಪ್ರಾಸ್ಟೇಟ್ ಗ್ರಂಥಿ ಊದಿಕೊಂಡಿತು.  ಶಸ್ತ್ರಚಿಕಿತ್ಸೆಗೆ ಮಣಿಪಾಲಕ್ಕೆ ಸೇರಿಸಿದಾಗ ದೊಡ್ಡಪ್ಪನಿಗೆ ರಕ್ತ ನೀಡುವ ಭಾಗ್ಯ ನನ್ನದಾಯಿತು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ದೊಡ್ಡಪ್ಪ ಆಸ್ಪತ್ರೆಯ ಕೋಣೆಯಲ್ಲಿ ಮಲಗಿದ್ದಾರೆ. ರಕ್ತ ಕೊಟ್ಟ ಕಾರಣದಿಂದಲೋ ಎನೋ,  ಅವರ ಶೂಶ್ರೂಷೆಗೆ ಬಂದ ನನಗೇ ತಲೆ ಸುತ್ತಿ ಬಂದು ಮಂಚಕ್ಕೆ ಓರಗಿದೆ. “ಏನಾಯ್ತು ರಾಧ, ತಲೆ ತಿರುಗಿತೇ, ಅಲ್ಲೇ ಬೊಂಡದ ನೀರಿದೆ.  ಗ್ಲುಕೋಸ್ ಹಾಕಿ ಕುಡಿದರೆ ಸರಿಯಾಗುತ್ತದೆ” ಎನ್ನುವುದು ದೊಡ್ಡಪ್ಪನ ಕಾಳಜಿ.  ಒಂದೆರಡು ದಿನ ಮಣಿಪಾಲದ ಆಸ್ಪತ್ರೆಯಲ್ಲಿ ಅವರ ಸೇವೆಯ ಪಾಳೆ ನನಗೆ. ಮೂತ್ರದ ಹರಿವಿನ ತೊಂದರೆ ಹೆಚ್ಚಿ ದೊಡ್ಡಪ್ಪನ ದೇಹ ಬೆಲೂನಿನಂತೆ ಉಬ್ಬುತ್ತ ಡಯಾಲಿಸಿಸ್ ಹಂತಕ್ಕೆ ಬಂದಾಗ ನಮಗೋ ಗಾಬರಿ. ಆದರೆ ಡಯಾಲಿಸಿಸ್ ಬೇಕಾಗಲಿಲ್ಲ. ಈ ಗಂಡಾಂತರದಿಂದ ಚೇತರಿಸಿಕೊಂಡರು. ಮುಂದೆ ಇಂಥ ದೊಡ್ಡ ಅಪಾಯ ದೊಡ್ಡಪ್ಪನಿಗೆ ಕೊನೆ ತನಕವೂ ಬಾಧಿಸಲಿಲ್ಲ.

ಬಾಳ ಸಂಜೆಯ ದಿನಗಳಲ್ಲಿ ದೊಡ್ಡಪ್ಪನ ಸದೃಢ ದೇಹ ಕೃಶವಾಗಿತ್ತು.  ಮೈ ಮಾಲುತ್ತಿದ್ದರೂ, ಮರೆವು ಕಾಡುತ್ತಿದ್ದರೂ ಕೇಳುತ್ತಿರಲಿಲ್ಲ- ತಮ್ಮಂದಿರ ಮನೆಗೆ ಭೇಟಿ ನೀಡಿ ಮನೆ ಮಂದಿಯನ್ನು ವಿಚಾರಿಸದೇ ಹೋದರೆ ಅವರಲ್ಲಿ ಅದೆನೋ ಚಡಪಡಿಕೆ. . ಬಿದಿರ ದಂಟೆ ಹಿಡಿದುಕೊಂಡು ಅವರಿಗಾಗಿಯೇ ಮಗ ಸದಾಶಿವ ಹಾಕಿಕೊಟ್ಟ ಕಲ್ಲು ಬೆಂಚಿನ ಮೇಲೆ ಒಂದಷ್ಟು ಹೊತ್ತು ವಿಶ್ರಮಿಸಿ, ಮಣ್ಣ ಹಾದಿಯಲ್ಲಿ “ನಿಧಾನವಾಗಿ ಅಲ್ಲ – ಬಿರುಸಾಗಿಯೇ ನಡೆಯುತ್ತ”, ಸಿಕ್ಕ ಮಂದಿಯಲ್ಲೆಲ್ಲ  “ ಬೆಳ್ಳಾರೆಯ ಸನಿಹದ ಕೆದಿಲದಲ್ಲಿರುವ ತನ್ನ ಮಗಳಾದ ಶಾರದೆ ಮನೆಗೆ ಕೂಲಿ ಕೆಲಸಕ್ಕೆ ಯಾರಾದರೂ ಸಿಗುತ್ತಾರೆಯೇ?” ಎಂದು ವಿಚಾರಿಸುತ್ತ, ಹೆದ್ದಾರಿಯ ಅಂಚಿನಲ್ಲಿ ನಡೆದು ನಮ್ಮ ಮನೆ ಸೇರುತ್ತಿದ್ದರು – ಏದುಸಿರು ಬಿಡುತ್ತ. ಬಂದು ಕುಳಿತುಕೊಳ್ಳುವ ಮೊದಲೇ ಹೊರಡುವ ಧಾವಂತ. “ದೊಡ್ದಪ್ಪ ಇಷ್ಟೇನು ಅವಸರ” ಅಂದರೆ “ಸಂಜೆಯ ವ್ಯಾಯಾಮದ ಹೊತ್ತಾಯಿತು” ಅನ್ನುತ್ತಿದ್ದರು.  ಮಜ್ಜಿಗೆ ಅಥವಾ ಬಿಸಿ ನೀರು ಕುಡಿದು, ಬಾಳೆ ಹಣ್ಣು ಅಥವಾ ಪಪ್ಪಾಯಿ ತಿಂದು, ಒಂದಷ್ಟು ಪ್ರಾಣಾಯಾಮ, ಬಸ್ತಿ ವರಸೆ ತೋರಿಸಿ, ಹಳೆಯ ತನ್ನ ಸಾಹಸ ನೆನಪಿಸಿ, ಮಗುವಿನಂಥ ನಗೆ ಸೂಸಿ, ಸೇತುವೆಗೆ ಇಳಿಯುವ ಮೆಟ್ಟಲಿಗೆ ಹಿಡಿಯಲು ಕೈತಂಗ ಹಾಕಲು ಸೂಚಿಸಿ ….. ತಾವೇ ಎಬ್ಬಿಸಿದ ಹಸಿರು ತೋಟದ ಆ ಹಾದಿಯಲ್ಲಿ ಸಾಗುತ್ತಿದ್ದರು. ವಯಸ್ಸಾದರೂ ಬೆನ್ನು ಬಾಗಿರಲಿಲ್ಲ. ಇನ್ನೂ ಉತ್ಸಾಹವಿದೆ ಎಂದು ತೋರ್ಪಡಿಸುವ ಹಂಬಲ – ನಾರಾಯಣಮಾವನ ಪಡಿಯಚ್ಚು. ದೊಡ್ಡಪ್ಪ ಸುತ್ತಾಡಿದ ಅದೇ ಹಾದಿಯಲ್ಲಿ ಆಗೊಮ್ಮೆ ಈಗೊಮ್ಮೆ ಸಾಗುವಾಗ ಹಟಾತ್ತನೆ, ಆಯಾಚಿತವಾಗಿ ಮಿಂಚಿ ಮರೆಯಾಗುತ್ತಾರೆ ಮನದ ಭಿತ್ತಿಯಲ್ಲಿ.   ಕಣ್ಣಂಚಿನಲ್ಲಿ ಕಂಡೂ ಕಾಣದ ಹಾಗೆ ನೀರು.

ತಮ್ಮ ಜೀವನದ ಕೊನೆಯ ದಶಕದಲ್ಲಿ ದೊಡ್ಡಪ್ಪ ನಮ್ಮ ಮನೆಗೆ ಬಂದಾಗಲೆಲ್ಲ ಹೇಳುತ್ತಿದ್ದರು “ರಾಧ, ತೋಡಿಗೆ ಬ್ರಿಡ್ಜ್ ಕಟ್ಟಿಸು. ತೋಟಕ್ಕೆ ವಾಹನ ಹೋಗುವಂತೆ ಮಾಡು, ತೋಟಕ್ಕೆ ವಾಹನ ಹೋಗದೇ  ಕೃಷಿ ಅಸಾಧ್ಯ”   ದೊಡ್ಡಪ್ಪ ಮುಂದಿನ ದಿನಗಳನ್ನು ಅದಾಗಲೇ ಕಂಡಿರಬೇಕು. ಅದು ಅವರ ಜೀವನದ ಅನುಭವ. ನಾನು “ಸರಿ .. ಸರಿ ಎನ್ನುತ್ತಿರುವಂತೆ ಕಾಲ ಸರಿಯುತ್ತ ಹೋಯಿತು. ಸಿಕ್ಕಾಗ ಕೆಲವೊಮ್ಮೆ ತಮಾಷೆ ಮಾಡುತ್ತಿದ್ದೆ “ದೊಡ್ಡಪ್ಪ..ಸೇತುವೆ” ಅವರ ಮುಖದಲ್ಲಿ ಮುಗ್ದ ನಗು.  ಈ ಬಾರಿ ತೋಟಕ್ಕೆ ಹೋಗುವ ದೊಡ್ಡ ಸೇತುವೆಯ ನಿರ್ಮಾಣಕ್ಕೆ ಕೆಲಸ ಆರಂಭವಾಗಿದೆ. ಇನ್ನು ತಿಂಗಳೊಳಗೆ ಅದು ಪೂರ್ಣವಾಗುತ್ತದೆ.   ಆದರೆ ದೊಡ್ಡಪ್ಪ ಇಲ್ಲ.  ಭಾವ ಸೇತುವೆ ಮಾತ್ರ ಇಲ್ಲಿದೆ.

Categories: 1
  1. Ranjan Sham
    ಮಾರ್ಚ್ 29, 2015 ರಲ್ಲಿ 5:51 ಫೂರ್ವಾಹ್ನ

    ಬಹಳ ಚೆನ್ನಗಿದ ರಾಧ ಮಾವ. ಅಜ್ಜನ ಆದರ್ಶಗಳಾದಂತಹ ಸ್ವತಂತ್ರತೆ, ನಿಷ್ಟೆ, ಸ್ವದೇಶೀ ಉಪಯೋಗ ಹಾಗ “ಹುಟು ಹಬ್ಬ್ದಂತಹ ಆಚರಗಳಿಗೆ ಅರ್ಥವಿಲ್ಲ” ಇತ್ಯಾದಿ ನನಗೆ ಬೋಧನೆ ಮಾಡುತ್ತಿದ್ದರು. ಚಿಕ್ಕವನಾದ ನನ್ನ ಮೇಲೆ ಬಹಳ ಪ್ರಭಾವ ಬೀರಿತ್ತು. ಶಾಲಿಯಲ್ಲಿರುವಗಲೇ ನಾನು “I don’t celebrate birthday” , “Sincerity and Honesty are my qualities” ಎಂದು ಜಂಭದಿಂದ ಹೇಳಿಕೊಳ್ಳುತಿದ್ದೆ.
    ಅಜ್ಜ-ಮಾವಂದಿರ ಸ್ವದೇಶೀ, ಸ್ವಾವಲಂಬನೆಯ ವಾದಗಳನ್ನು ಚರ್ಚ ಸ್ಪರ್ದೆಗಳಲ್ಲಿ ಹಾಗು ಸ್ನೇಹಿತರೊಂದಿಗೆ ಚರ್ಚಿಸುವಾಗ ನೆನಪಿಗೆ ಬರುತ್ತದೆ.
    ನಮ್ಮ ಜೀವನ ಪ್ರೇರಣೆಗೆ ನಮ್ಮ ಸುತ್ತು-ಮುತ್ತಿರುವವರೇ ಸಾಕು.

  2. ಮಾರ್ಚ್ 29, 2015 ರಲ್ಲಿ 6:28 ಅಪರಾಹ್ನ

    ರಾಧ,
    ನನ್ನ ನೆನಪಿನಲ್ಲಿರುವ ದೊಡ್ಡಪ್ಪನ ಪಾತ್ರಗಳು ಇನ್ನೂ ಬಹಳಷ್ಟು ಇವೆ. ನಾನು ಪುತ್ತೂರಿನಲ್ಲಿದ್ದವಳಲ್ಲವೇ , ದೊಡ್ಡಪ್ಪ ಪ್ರತೀ ಸೋಮವಾರಗಳಲ್ಲಿ ಸಂತೆಗೆ ಬರುತ್ತಿದ್ದರು. ಆ ದಿನಗಳಲ್ಲಿಅಂದರೆ ೧೯೭೦ ರ ದಶಕದಲ್ಲಿ ಅವರಿನ್ನೂ ಸೈಕಲ್ನಲ್ಲಿ ಪ್ರಯಾಣಿಸುತ್ತಿದ್ದ ದಿನಗಳು. ನಾನು ಮತ್ತು ತಮ್ಮಣ್ಣ ಪ್ರತೀ ಸೋಮವಾರ ಅವರ ಬರವಿಗೆ ಎದುರು ನೋಡುತ್ತಿದ್ದೆವು. ನಮ್ಮ ಅಲ್ಲಾಡುತ್ತಿದ್ದ ಹಾಲು ಹಲ್ಲನ್ನು ತೆಗೆದುದು ಅವರು. ನಾವು ದೊಡ್ಡಪ್ಪನೆಂದರೆ ಹೆದರುತ್ತಿದ್ದರೂ ಪ್ರೀತಿಯೂ ಇತ್ತು. ನನ್ನ ಸೈಕಲ್ ತುಳಿಯುವ ಮೊದಲ ಪಾಠ ಅವರ ಸೈಕಲ್ಲಿನಲ್ಲೇ ನಡೆದುದು. ಅವರು ಮಧ್ಯಾಹ್ನ ಮಲಗಿದ್ದಾಗಲೋ ಅಥವಾ ಬೇರೆ ಕೆಲಸಕ್ಕೆಂದು ನಡಿಗೆಯಲ್ಲೇ ಹೊರ ಹೋದಾಗ ನನ್ನ ಸಾಹಸ ಪ್ರಾರಂಭವಾಗುತ್ತಿತ್ತು. ಅಂತೂ ನಮ್ಮ ನೆರೆಯಲ್ಲಿದ್ದ ಅಧ್ಯಾಪಕರೊಬ್ಬರ ನೆರವಿನಿಂದ ದೊಡ್ಡಪ್ಪನ ಸೈಕಲ್ಲನ್ನು ತುಳಿಯಲು ಕಲಿತೆ, ಆದರೆ ಅದು ಆಸನದಲ್ಲಿ ಕುಳಿತುಕೊಂಡಲ್ಲ, “ಕ್ರಾಸ್ ಪೆಡಲ್” ಮಾಡುತ್ತಾ ಬೀಳದೇ ಮುಂದಕ್ಕೆ ಹೋಗಲು ಕಲಿತೆ. ಇನ್ನು ಅವರ ನೆನಪಾಗುವುದು ನನ್ನ ಮದುವೆ ಸಂದರ್ಭದಲ್ಲಾದ ಘಟನೆ. ನನ್ನ ಮದುವೆ ನಮ್ಮ ದೇಶದ ಮಾಜೀ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ತೀರಿದ ಮೂರನೇ ದಿನ ನಡೆಯಿತು. ಹಾಗಾಗಿ ಎಲ್ಲೆಲ್ಲೂ ಗುಂಪು ಗಲಭೆ, ಎಲ್ಲಾ ಮುಖ್ಯ ರಸ್ತೆಗಳನ್ನು ಅಡ್ಡಗಟ್ಟಿದ್ದರು. ಮದುವೆಯೊಂದನ್ನು ಹೇಗೋ ಮಂಗಳೂರಲ್ಲಿ ತೀರಿಸಿದೆವು, ಆ ಬಳಿಕ ಪುತ್ತೂರಿಗೆ ಬಂದು ರಾತ್ರಿ ಮರಿಕ್ಕೆ ಮನೆ ಸೇರುವುದೆಂದು ದೊಡ್ಡಪ್ಪನೇ ನಿರ್ಧಾರ ತೆಗೆದುಕೊಂಡರು. ಅದಲ್ಲದಿದ್ದರೆ ವಧು ಗೃಹಪ್ರವೇಶಕ್ಕೆ ಬೆಳಗ್ಗೆ ಹುಡುಗಿ ಕಡೆಯವರು ಪುತ್ತೂರಿಗೆ ಬರಬೇಕು, ವಾಹನ ಸಂಚಾರವಿರದಂತೆ ರಸ್ತೆಗಳನ್ನು ಮುಚ್ಚಿದ್ದರು. ದೊಡ್ಡಪ್ಪನ ನಿರ್ಧಾರದಿಂದಾಗಿ ನಾವು ಮದುವೆ ದಿನ ರಾತ್ರಿಯೇ ಮರಿಕ್ಕೆ ಮನೆ ಸೇರಿದೆವು. ಮಾರನೇ ದಿನ ನಿಶ್ಚಿಂತರಾಗಿ ಮುಹೂರ್ತಕ್ಕೆ ಸರಿಯಾಗಿ ಪುತ್ತೂರಿನ ಮರೀಲಿನಲ್ಲಿರುವ ನಮ್ಮ ಮನೆಯನ್ನು ಸೇರಿದ್ದೆವು. ಆ ರಾತ್ರಾ ರಾತ್ರಿ ಅಷ್ಟೊಂದು ಮಂದಿಗೆ (ಸುಮಾರು ೫೦-೬೦ ಮಂದಿಗೆ)ಉಳಿಯಲು , ಉಣ್ಣಲು ಬೇಕಾದ ವ್ಯವಸ್ಥೆ, ಮತ್ತು ಸಂಜೆಯಲ್ಲಿ ನಡೆಯಲಿರುವ ಮದುವೆ ಸಂದರ್ಭದ ಹೋಮಕ್ಕೆ ಬೇಕಿದ್ದ ವ್ಯವಸ್ಥೆಗಳು ದೊಡ್ಡಪ್ಪ-ದೊಡ್ಡಮ್ಮನ ದೊಡ್ಡ ಮನಸ್ಸಿನಿಂದಾಗಿ ಸಾಂಗವಾಗಿ ನೆರವೇರಿದವು. ಹೀಗೇ ನಮ್ಮ ಮನಸ್ಸಿನಲ್ಲಿ ಅಳಿಯಲು ಅಸಾಧ್ಯವೆನಿಸುವ ಎಷ್ಟೊಂದು ಘಟನೆಗಳು ದೊಡ್ಡಪ್ಪನನ್ನು ನೆನಪಿಗೆ ತರಿಸುತ್ತವೆ

  3. ಮಾರ್ಚ್ 31, 2015 ರಲ್ಲಿ 9:35 ಫೂರ್ವಾಹ್ನ

    doddappa maththu dodda kutumba! Mundeyu intha dodda manassina sambandhagalirali.Raadha ,
    namma balyavella kanmunde bantu.

  4. apkrishna
    ಏಪ್ರಿಲ್ 5, 2015 ರಲ್ಲಿ 2:02 ಅಪರಾಹ್ನ

    ಶೈಲ, ನೀನು ನೆನಪಿಸಿದಂತೆ – ನಿಜ, ನಮ್ಮ ಹಲ್ಲುಗಳನ್ನು ತೆಗೆದ ಡಾಕ್ಟರ್ ದೊಡ್ಡಪ್ಪ. ಅಬ್ಬಬ್ಬ .. ಈಗಲೂ ಮೈಝುಂ ಅನ್ನುತ್ತದೆ. ನಿನ್ನ ಮದುವೆ ನಿನಗಷ್ಟೇ ಅಲ್ಲ, ನಮಗೂ ಕೂಡ ಎಂದೂ ಮರೆಯದು – ನಾನು ಎಡಂಬಳೆ ಮನೆಯಿಂದ ಮಂಗಳೂರಿಗೆ – ಇಪ್ಪತ್ತ್ಯ್ ಕಿಮೀ ದೂರ ನಡೆದೇ ಕ್ರಮಿಸಿದೆ – ಮದುವೆ ಸುಧಾರಿಕೆಗೆ. ಇಂದಿನ ತನಕವೂ ಅದೇ ನನ್ನ ದೀರ್ಘ ನಡಿಗೆ!

  1. No trackbacks yet.

Leave a reply to apkrishna ಪ್ರತ್ಯುತ್ತರವನ್ನು ರದ್ದುಮಾಡಿ