ಮುಖ ಪುಟ > ಅವಿಭಾಗೀಕೃತ > ಬೆಳಕಿನ ವೇಗವ ಮೀರಲು ಹೊರಟ ಪೌಲಿಯ ದೆವ್ವ!

ಬೆಳಕಿನ ವೇಗವ ಮೀರಲು ಹೊರಟ ಪೌಲಿಯ ದೆವ್ವ!

ವಿಜ್ಞಾನ ಸಂತತವಾಗಿ ಬದಲಾಗುತ್ತಲೇ ಇರುತ್ತದೆ. ಏಕೆಂದರೆ ಇದು ಜ್ಞಾನ ಪ್ರವಾಹ. ಇಂದಿನ ಪರಿಕಲ್ಪನೆ ನಾಳೆಯ ದಿನ ತಪ್ಪು ಎಂದು ಸಾಬೀತಾಗಬಹುದು ಅಥವಾ ಅದಕ್ಕೆ ಇನ್ನಷ್ಟು ಪರಿಷ್ಕರಣೆಯ ಅವಶ್ಯಕತೆ ಬರಬಹುದು. ವಿಜ್ಞಾನ ಅದನ್ನು ಒಪ್ಪುತ್ತದೆ. ವಾಸ್ತವವಾಗಿ ಸವಾಲುಗಳು ಬಂದಾಗಲೆಲ್ಲ ವಿಜ್ಞಾನದ ಪ್ರವರ್ಧನೆಗೆ ಇನ್ನಷ್ಟು ಚಾಲನೆ ಬರುತ್ತದೆ. ಅಂಥದೊಂದು ಸವಾಲು ಬಂದಿದೆ ಎನ್ನುತ್ತಿದ್ದಾರೆ ಕೆಲವು ವಿಜ್ಞಾನಿಗಳು. ೨೦೧೧, ಸಪ್ಟೆಂಬರ್ ೧೯ರಂದು ಸೆರ್ನ್ ಸಂಶೋಧನಾಲಯದ ವಿಜ್ಞಾನಿಗಳು ನ್ಯೂಟ್ರಿನೊ ಎಂಬ ಕಣಗಳು ಬೆಳಕಿನ ವೇಗವನ್ನು ಮೀರಿ ಧಾವಿಸುತ್ತಿವೆ ಎಂದು ಘೋಷಿಸಿ ಅಚ್ಚರಿಯನ್ನು ತಂದರು. ಇದು ಸಾಧ್ಯವೇ? ಈ ನ್ಯೂಟ್ರಿನೋಗಳು ಅಂದರೆ ಏನು? ಅವುಗಳ ವೈಚಿತ್ರ್ಯ ಏನು? ಸೆರ್ನ್ ಪ್ರಯೋಗ ಏನು? ಪ್ರಯೋಗ ಫಲಿತಾಂಶ ಸರಿ ಎಂದಾದರೆ ಅದು ತರಬಹುದಾದ ಪರಿಣಾಮವೇನು? .. ಹೀಗೆ ಒಂದು ರೋಚಕ ಸುದ್ದಿಯ ಬೆಂಬತ್ತಿದಾಗ ರೂಪುಗೊಂಡಿತೊಂದು ಬರಹ. ಅದರ ಸಂಕ್ಷಿಪ್ತ ರೂಪ ಸುಧಾ ಪತ್ರಿಕೆಯಲ್ಲಿ  (೨೪ ನವೆಂಬರ್ ೨೦೧೧), ನಂತರ ವಿಸ್ಟ್ರುತ ವಾಗಿ ಕೆಂಡ ಸಂಪಿಗೆಯಲ್ಲಿ  (http://www.kendasampige.com/article.php?id=4918) ಬೆಳಕು ಕಂಡಿತು. ದಾಖಲೆಗಾಗಿ ಇಲ್ಲಿದೆ ನನ್ನ ಮನೆಯಲ್ಲಿ.  ನೀವು ಓದಿ ಪ್ರತಿಕ್ರಿಯಿಸಿ. 

“ಸಿದ್ಧಾಂತ ಮತ್ತು ಪ್ರಯೋಗಗಗಳೆಂಬ ಎರಡು ಪಾದಗಳಿಂದ ವಿಜ್ಞಾನ ಪ್ರವರ್ಧಿಸುತ್ತದೆ. ಒಮ್ಮೆ ಒಂದು ಪಾದವನ್ನು ಮುಂದಿಟ್ಟರೆ, ಇನ್ನೊಮ್ಮೆ ಮತ್ತೊಂದು ಪಾದವನ್ನು ಮುಂದಿಡುತ್ತದೆ. ಆದರೆ ವಿಜ್ಞಾನದ ಅಭಿವರ್ಧನೆಯಾಗುವುದು ಎರಡು ಪಾದಗಳನ್ನು ಬಳಸುವಲ್ಲಿ ಹೊಂದಾಣಿಕೆ ಇದ್ದಾಗ – ಸೈಧ್ಧಾಂತಿಕವಾಗಿ ಊಹಿಸಿದ್ದನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವುದರಿಂದ ಅಥವಾ ಪ್ರಯೋಗ ಫಲಿತಾಂಶಗಳಿಗೆ ನೂತನ ಸೈಧ್ಧಾಂತಿಕ ನೆಲೆಗಟ್ಟನ್ನು ನಿರ್ಮಿಸುವ ಮೂಲಕ ಸೈದ್ಧಾಂತಿಕ ಪಾದವನ್ನು ಮತ್ತಷ್ಟು ಮುಂದಕ್ಕೆ ಇಡುವುದರಿಂದ” ಹೀಗೆ ಹೇಳಿದವರು ಅಮೇರಿಕದ ನೊಬೆಲ್ ವಿಜ್ಞಾನಿ ರಾಬರ್ಟ್ ಆಂಡ್ರೂಸ್ ಮಿಲಿಕನ್ (೧೮೬೮-೧೯೫೩).

ಈ ಹೇಳಿಕೆಯನ್ನು ಸಮರ್ಥಿಸುವ ಅವೆಷ್ಟೋ ನಿದರ್ಶನಗಳು ವಿಜ್ಞಾನ ಇತಿಹಾಸದಲ್ಲಿವೆ. ಅವುಗಳ ಸಾಲಿಗೆ ತೀರ ಇತ್ತೀಚೆಗೆ ಸೇರ್ಪಡೆಯಾದದ್ದು –   ನ್ಯೂಟ್ರಿನೊ ಎಂಬ ಕಣಗಳು ಬೆಳಕಿನ ವೇಗವನ್ನೂ ಮೀರಿ ಧಾವಿಸುತ್ತಿವೆ ಎಂಬ ಪ್ರಯೋಗ ಫಲಿತಾಂಶವನ್ನು ಮೊನ್ನೆ ಸಫ್ಟೆಂಬರ್ ೧೯ ರಂದು ಸೆರ್ನ್ (CERN) ಸಂಶೋಧನಾಲಯದ ವಿಜ್ಞಾನಿಗಳು ಪ್ರಕಟಿಸಿದಾಗ.

ಸೆರ್ನ್ ಇರುವುದು ಸ್ವಿಝರ್ಲೆಂಡಿನಲ್ಲಿ.  ನ್ಯೂಕ್ಲಿಯರ್ ಮತ್ತು ಕಣ ಭೌತ ವಿಜ್ಞಾನದಲ್ಲಿ ಇದು ಮುಂಚೂಣಿಯ ಸಂಶೋಧನ ಕೇಂದ್ರ. ಯುರೋಪಿನ ಹಲವು ರಾಷ್ಟ್ರಗಳು ಕೈಜೋಡಿಸಿ ಸ್ಥಾಪನೆಗೊಂಡ ಕೇಂದ್ರದಲ್ಲಿ ಬೃಹತ್ ಕಣವೇಗವರ್ಧಕಗಳು (particle accelerator) ಇವೆ. ಲಾರ್ಜ್ ಹಡ್ರಾನ್ ಕೊಲೈಡರ್ (LHC) ಎಂಬ ದೈತ್ಯ ಉಪಕರಣದಿಂದ ವಿಶ್ವ ಸೃಷ್ಟಿಯ ದಿನಗಳ ಅನಾವರಣದ ಪ್ರಯತ್ನಗಳು ನಡೆಯುತ್ತಿವೆ.  

ಇಂಥ ಅಗ್ರಮಾನ್ಯ ಸಂಶೋಧನ ಕೇಂದ್ರದ  ವಿಜ್ಞಾನಿಗಳ ಗಡಣವು  ನ್ಯೂಟ್ರಿನೊಗಳು ಬೆಳಕಿನ ವೇಗವನ್ನೂ ಮೀರಿ ಧಾವಿಸುತ್ತಿರುವುದನ್ನು ಗಮನಿಸಿದ್ದೇವೆ ಎಂಬ ಹೇಳಿಕೆ ಇತ್ತಾಗ ವಿಜ್ಞಾನ ಪ್ರಪಂಚದಲ್ಲೊಂದು ಅಭೂತಪೂರ್ವ ಸಂಚಲನ ಹುಟ್ಟಿತು. ಅಲ್ಲ, ನ್ಯೂಟ್ರಿನೊ ಎಂಬ ಸೂಕ್ಷ್ಮದಲ್ಲಿ ಅತಿ ಸೂಕ್ಷ್ಮ ಕಣಗಳು ಬೆಳಕಿನ ವೇಗವನ್ನೂ ಮೀರಿ ಚಲಿಸಿದರೇನಾಯಿತು? ಚಲಿಸಬಾರದೇಕೆ? ರೋಚಕತೆ ಇರುವುದೇ ಇಲ್ಲಿ.

ಇಪ್ಪತ್ತನೇ ಶತಮಾನದ ಮೊದಲ ದಶಕ. ೧೯೦೫.  ಜರ್ಮನಿಯ ಭೌತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ (೧೮೭೯-೧೯೫೫) ಅನೆಲಿನ್ ಡರ್‌ಫಿಸಿಕ್ (Annalen der Physik  ) ಎಂಬ ಪ್ರತಿಷ್ಟಿತ ಸಂಶೋಧನ ಪತ್ರಿಕೆಯಲ್ಲಿ ಮೂವತ್ತು ಪುಟಗಳ ತನ್ನ ವಿಶೇಷಸಾಪೇಕ್ಷತಾ ಸಿದ್ಧಾಂತವನ್ನು (Special Theory of Relativity) ಪ್ರಕಟಿಸುವ ಮೂಲಕ ಬೆಳಕಿನ ವೇಗಕ್ಕೆ ದಿವ್ಯತ್ವವನ್ನು ನೀಡಿದರು. ಸಾಪೇಕ್ಷತಾ ಸಿದ್ಧಾಂತ ಹೇಳುವಂತೆ ಬೆಳಕಿನ ವೇಗ ನಿರಪೇಕ್ಷವಾದದ್ದು. ಉಳಿದೆಲ್ಲವೂ ಸಾಪೇಕ್ಷ. ವೆಳಕಿನ ವೇಗ ಆಕರ ಅಥವಾ ವೀಕ್ಷಕನ ನೆಲೆಯನ್ನು  ಅವಲಂಬಿಸಿಲ್ಲ. ನಿರ್ವಾತದಲ್ಲಿ ಬೆಳಕಿನದು  ಗರಿಷ್ಠ ವೇಗ. ಸೆಕುಂಡಿಗೆ ೨೯೯,೭೯೨,೪೫೮ ಮೀಟರ್  ವೇಗದಲ್ಲಿ ಬೆಳಕಿನ ಕಿರಣ ಧಾವಿಸುತ್ತದೆ. ಯಾವುದೇ ಕಣವಿರಲಿ, ವಿಕಿರಣವಿರಲಿ –  ಈ ವೇಗವನ್ನು ಮೀರಲಾರದು. ಒಂದು ರೀತಿಯಲ್ಲಿ ಇದು ವೇಗಕ್ಕೆ ಸಂಬಂಧಿಸಿದ ಹಾಗೆ ನಿಸರ್ಗದ ಲಕ್ಷ್ಮಣ ರೇಖೆ!

ಬೆಳಕಿನ ವೇಗದಲ್ಲಿ ವಸ್ತು ಚಲಿಸುವಾಗ ವಸ್ತುವಿನ ಆಯಾಮ ಚಲನ ದಿಶೆಯಲ್ಲಿ ಸಂಕೋಚನ ಹೊಂದುತ್ತದೆ, ಅದರ ದ್ರವ್ಯರಾಶಿ ಹೆಚ್ಚುತ್ತದೆ, ಕಾಲ ಕುಂಠಿತವಾಗುತ್ತದೆ, ಕಣಗಳು ಶಕ್ತಿಯನ್ನು ವಿಕಿರಿಸುತ್ತವೆ – ಒಟ್ಟಾರೆ ನಿತ್ಯದ ನಮ್ಮ ಊಹೆಗಳೆಲ್ಲ ತಲೆಕೆಳಗಾಗುತ್ತವೆ.  ಸಾಪೇಕ್ಷತಾ ಸಿದ್ಧಾಂತದ ಪರಿಕಲ್ಪನೆಗಳು ನೂರಾರು ಬಾರಿ ಇನ್ನಿಲ್ಲದ ಹಾಗೆ ಪರೀಕ್ಷೆಗೆ ಒಳಪಟ್ಟು ತೇರ್ಗಡೆಗೊಂಡಿವೆ.  ಅಣು, ಪರಮಾಣು ರಂಗದ ಸೂಕ್ಷ್ಮ ಪ್ರಪಂಚದಲ್ಲಿ ಸಾಪೇಕ್ಷತಾ ಸಿದ್ಧಾಂತ ಅನಿವಾರ್ಯ.  ಅದಿಲ್ಲದೇ ನೂತನ ಭೌತವಿಜ್ಞಾನವಿಲ್ಲ.  ಅಂಥ ಸಾಪೇಕ್ಷತಾ ಸಿದ್ಧಾಂತದ ಮೂಲಭೂತ ಅಭಿಗೃಹೀತಕ್ಕೆ ಇಂದು ನ್ಯೂಟ್ರಿನೋ ಸಡ್ಡು ಹೊಡೆಯುತ್ತಿವೆಯೇ?

ಹಾಗೆ ನೋಡಿದರೆ  ಯಾವ ಸಿದ್ಧಾಂತವೂ ಪರಿಪೂರ್ಣವಲ್ಲ. ಪ್ರತಿಯೊಂದಕ್ಕೂ ಒಂದು ಮಿತಿ ಇದೆ. ನಾಲ್ನೂರು ವರ್ಷಗಳಷ್ಟು ಹಿಂದೆ ಲಂಡನ್ ಸಮೀಪದ ತನ್ನ ಹಳ್ಳಿ ಮನೆಯಲ್ಲಿ ಐಸಾಕ್ ನ್ಯೂಟನ್ (೧೬೪೨-೧೭೨೭) ಎಂಬ ಇಪ್ಪತ್ತಮೂರರ ತರುಣ,  ದಂತ ಕಥೆ ಹೇಳುವ ಹಾಗೆ, ತೊಟ್ಟು ಕಳಚಿಕೊಂಡ ಸೇಬು ಭೂಮಿಗೆ ಬೀಳುವುದನ್ನು ಕಂಡ. ಅರೇ, ಅದೇತಕ್ಕೆ ಮೇಲೆ ಹೋಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಅರಸುತ್ತ ಹೊರಟು ಗುರುತ್ವಾಕರ್ಷಣ ಸಿದ್ಧಾಂತವನ್ನು ನಿಗಮಿಸಿದ; ಗೋಚರ ಪ್ರಪಂಚದಲ್ಲಿ ವಸ್ತುಗಳ ಚಲನೆ ಮತ್ತು ಶಕ್ತಿಯ ಸಂಬಂಧವನ್ನು  ವಿವರಿಸುವ ಬಲವಿಜ್ಞಾನವನ್ನು (mechanics) ಕೊಟ್ಟ.  ನ್ಯೂಟನ್ ನೀಡಿದ ಈ ಸೈದ್ಧಾಂತಿಕ ಹತ್ಯಾರನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ವಿಜ್ಞಾನ ಮತ್ತು ನಾಗರೀಕತೆ ಪ್ರವರ್ಧಿಸಿದ ಬಗೆಯೇ  ಒಂದು ಅದ್ಭುತ.

ಸಾಮಾನ್ಯ ವೇಗಗಳಲ್ಲಿ – ಬೈಕು, ಬಸ್ಸು, ರಾಕೇಟ್ ಮುಂತಾದವು ಚಲಿಸುವ ವೇಗಗಳಲ್ಲಿ – ನ್ಯೂಟನ್ ಬಲವಿಜ್ಞಾನ ಯಶಸ್ವಿ. ಆದರೆ ಅಣು ಪರಮಾಣುಗಳ ಲೋಕಗಳಲ್ಲಿ ಅಲ್ಲ. ಅಲ್ಲಿ ಕಣಗಳು ಬೆಳಕಿನ ವೇಗದಲ್ಲಿ ಸಾಗುತ್ತವೆ. ನ್ಯೂಟನ್ ಸಿದ್ಧಾಂತಕ್ಕೆ ಪರಿಷ್ಕರಣೆ ಅಗತ್ಯವಾಗುತ್ತದೆ. ಅಂಥ ಪರಿಷ್ಕರಣೆಯನ್ನು ನೀಡಿದ ಹಿರಿಮೆ ಐನ್ ಸ್ಟೈನ್ ಅವರದ್ದು.

ಗೆಲಿಲಿಯೋ ಬಗ್ಗೆ ಐನ್‌ಸ್ಟೈನ್ ನುಡಿದ ಮಾತು ” ಗೆಲಿಲಿಯೊನ ವೈಜ್ಞಾನಿಕ ಸಂಶೋಧನೆಗಳು ಪ್ರಭುತ್ವ ಹೇರಿದ ನಂಬುಗೆ, ಸಂಪ್ರದಾಯ ಪೇರಿಸಿದ ಕಂದಾಚಾರಗಳ ವಿರುದ್ಧ ಮಾಡಿದ ಹೋರಾಟ. ಅನುಭವ ಮತ್ತು ಅತ್ಯಂತ ಎಚ್ಚರಿಕೆಯ ವೀಕ್ಷಣೆಗಳಿಂದ ಕಂಡ ಸತ್ಯವನ್ನು ಒಪ್ಪುವುದು ಅವನ ರೀತಿಯಾಗಿತ್ತು” ವಾಸ್ತವವಾಗಿ ಇದು ಐನ್‌ಸ್ಟೈನ್ ನಂಬಿದ ಮತ್ತು ಬಾಳಿದ ರೀತಿಯೂ ಹೌದು.  ಹಾಗಾಗಿಯೇ ಅವರು ನ್ಯೂಟನ್ ಸಿದ್ಧಾಂತಕ್ಕೆ ಸಡ್ಡು ಹೊಡೆಯಲು ಸಾಧ್ಯವಾಯಿತು.

ಸೆರ್ನ್‌ನಲ್ಲಿ ಮಾಡಿದ ಪ್ರಯೋಗ ಫಲಿತಾಂಶಗಳು ಅಂದು ಐನ್‌ಸ್ಟೈನ್ ಯಾವ ಬಗೆಯಲ್ಲಿ ಜ್ಞಾನ ಸೀಮೆಯನ್ನು ವಿಸ್ತರಿಸಿದರೋ, ಅದೇ ಬಗೆಯಲ್ಲಿ ಇನ್ನೊಂದು ಆಯಾಮಕ್ಕೆ ವಿಸ್ತರಿಸಲು ಶಕ್ತ – ಅವು  ನಿಜವೆಂದಾದರೆ! ಹಾಗಾಗಿಯೇ ವಿಜ್ಞಾನರಂಗ ಸೆರ್ನ್ ವಿಜ್ಞಾನಿಗಳ ಘೋಷಣೆಯನ್ನು ಅಚ್ಚರಿ, ಕುತೂಹಲ ಮತ್ತು ಎಚ್ಚರಿಕೆಯಿಂದ ಗಮನಿಸುತ್ತಿದೆ.

ಇಲ್ಲ, ಪ್ರಯೋಗದಲ್ಲಿಯೇ ಅದೆನೋ ಐಬು ಇರಬಹುದೆಂದು ಹಲವರ ಅಭಿಮತವಾದರೆ, ಇರಬಹುದೇನೋ ಎಂಬ ಸಂಶಯ ಇನ್ನು ಕೆಲವರಿಗೆ. ವೈಜ್ಞಾನಿಕ ಸಂಶೋಧನ ಲೇಖನಗಳು  ತಜ್ಞರ ಪರಿಶೀಲನೆಗೆ ಒಳಪಟ್ಟು (peer review), ಅರ್ಹವೆಂದಾದರೆ ಮತ್ತೆ  ಸಂಶೋಧನ ಪತ್ರಿಕೆಯಲ್ಲಿ ಪ್ರಕಟವಾಗುವುದು ಜಾಯಮಾನ. ಆದರೆ ಇಂದಿನ  ಮಾಹಿತಿ ಯುಗದಲ್ಲಿ ಆ ಮೊದಲೇ ಇತರ ವಿಜ್ಞಾನಿಗಳಿಂದ ಪ್ರತಿಕ್ರಿಯೆ ನಿರೀಕ್ಷಿಸಿ, ಅದರ ಮೇಲೆ ಲೇಖನಕ್ಕೆ ಅಂತಿಮ ರೂಪ ಕೊಡುವ ಒಂದು ಬಗೆಯ ಸಾಮೂಹಿಕ ಪ್ರಯತ್ನದ ಫಲವಾಗಿ ಕರಡು ಅಥವಾ ಕಚ್ಚಾ ಪ್ರತಿಯ ಅಸಂಖ್ಯ ಲೇಖನಗಳು ಅಮೇರಿಕದ ಕೊರ್ನೆಲ್ ವಿಶ್ವವಿದ್ಯಾಲಯದ ArXiv.org   ತಾಣದಲ್ಲಿ ಲಭ್ಯ – ಇದು ಒಂದು ಬಗೆಯಲ್ಲಿ ವಿಕಿಪೆಡಿಯಾ ಇದ್ದ ಹಾಗೆ.

ArXiv.org ನಲ್ಲಿ ಈಗಾಗಲೇ ಬೆಳಕಿನ ವೇಗವನ್ನು ಮೀರಿದ ನ್ಯೂಟ್ರಿನೋ ಬಗ್ಗೆ ಇನ್ನೂರಕ್ಕೂ ಮಿಕ್ಕಿ ಲೇಖನಗಳು ಬಂದಿವೆ. Journal of Physical Review of Letters ಪತ್ರಿಕೆಯಲ್ಲಿ ನೊಬೆಲ್ ವಿಜ್ಞಾನಿ ಶೆಲ್ಡೆನ್‌ಗ್ಲಾಷೊ ಮತ್ತು ಕೊಹೆನ್ ಅವರ ಲೇಖನ ಪ್ರಕಟವಾಗುವ ಮುನ್ನ ArXiv.org ತಾಣದಲ್ಲಿ ಮೊದಲು ಬಂದದ್ದು (http://arxiv.org/abs/1109.6562). ಗಮನೀಯ.

ಸರ್ನೆ ಪ್ರಯೋಗದ ಹೀರೋ ಆಗಿರುವ ಈ ನ್ಯೂಟ್ರಿನೋ ಅಂದರೆ ಯಾರು?

ವಿಕಿರಣಪಟುತ್ವ ಸಮಸ್ಯೆ

ಪ್ರೋಟಾನ್, ಎಲೆಕ್ಟ್ರಾನ್, ನ್ಯೂಟ್ರಾನುಗಳು ಪರಮಾಣುವಿನ ಪ್ರಾಥಮಿಕ ಅಥವಾ ಮೂಲಭೂತ ಕಣಗಳೆಂದು (elementary particles) ಪ್ರಾಥಮಿಕ ಶಾಲೆಯ ಹುಡುಗನಿಗೂ ಇಂದು ಗೊತ್ತು. ಆದರೆ ಕೇವಲ ನೂರು ವರ್ಷಗಳ ಹಿಂದೆ.  ವಿಜ್ಞಾನ ದಿಗ್ಗಜರಿಗೂ ಈ ಬಗ್ಗೆ ಸ್ಪಷ್ಟ ಅರಿವಿರಲಿಲ್ಲ.!  ಮೊದಲಿಗೆ ಎಲೆಕ್ಟ್ರಾನುಗಳು ಆವಿಷ್ಕಾರಗೊಂಡುವು(೧೮೯೭), ನಂತರ ಪ್ರೊಟಾನ್ (೧೯೦೯), ಆಮೇಲೆ ನ್ಯೂಟ್ರಾನುಗಳು (೧೯೩೨)  ಪತ್ತೆಯಾದುವು. ವಾಸ್ತವವಾಗಿ ಪ್ರೊಟಾನ್, ನ್ಯೂಟ್ರಾನುಗಳಿಗೆ ಕ್ವಾರ್ಕ್ ಎಂಬ ಇನ್ನಷ್ಟು ಸೂಕ್ಷ್ಮ ಘಟಕಗಳಿವೆಯಂತೆ. ಇದು ತನಕ ತಿಳಿದಿರುವ ಹಾಗೆ ಎಲೆಕ್ಟ್ರಾನಿಗೆ ಪ್ರತ್ಯೇಕ ಘಟಕವಿಲ್ಲ. ಅಂದರೆ ನಿಜಕ್ಕೂ ಇದು ಪ್ರಾಥಮಿಕ ಕಣವೇ. ಇಂಥ ಕಣಗಳ ಮಾಲೆಯಲ್ಲಿ ಎಲೆಕ್ಟ್ರಾನಿಗಿಂತಲೂ ಹಗುರದ, ಪ್ರತ್ಯೇಕ ಘಟಕಗಳಿಲ್ಲದ  ಪ್ರಾಥಮಿಕ ಕಣಗಳೇ ನ್ಯೂಟ್ರಿನೊ. ನ್ಯೂಟ್ರಿನೊ ಅಸ್ತಿತ್ವದ ಬಗ್ಗೆ ಮಾಡಿದ ಊಹೆ, ನಂತರ ಪತ್ತೆಗೆ ನಡೆದ ಪ್ರಯತ್ನಗಳು ಭೌತ ವಿಜ್ಞಾನದ ರಮ್ಯ ಕಥಾನಕ. ಈ ಕಥೆ ಆರಂಭವಾಗುವುದು ರೇಡಿಯೋಎಕ್ಟಿವಿಟಿ ಅಥವಾ ವಿಕಿರಣಪಟುತ್ವ ವಿದ್ಯಮಾನದಲ್ಲಿ.

ಹತ್ತೊಂಬತ್ತನೇ ಶತಮಾನದ ಕೊನೆಯ ದಿನಗಳು. ಯುರೇನಿಯಮ್, ಥೋರಿಯಮ್ ಮೊದಲಾದ ಮೂಲವಸ್ತುಗಳ ಪರಮಾಣುವಿನ ಅಂತರಾಳದಿಂದ ಆಲ್ಫಾ, ಬೀಟಾ, ಗ್ಯಾಮಾ ಎಂಬ ವಿಕಿರಣ ಉತ್ಸರ್ಜನೆಯಾಗುವ ವಿದ್ಯಮಾನವನ್ನು ಪ್ರೆಂಚ್  ಭೌತ ವಿಜ್ಞಾನಿ ಹೆನ್ರಿಬೆಕೆರಲ್ (೧೮೫೨-೧೯೦೮) ತೀರ ಅಚಾನಕ್ಕಾಗಿ ಆವಿಷ್ಕರಿಸಿದರು (೧೮೯೭). ವಾಸ್ತವವಾಗಿ ಬೆಕೆರೆಲ್ ಹೊರಟದ್ದು ಯುರೇನಿಯಮ್ ಧಾತುವಿನ ಸಂದೀಪ್ತಿಯನ್ನು ಅಧ್ಯಯನಿಸಲು. ಆದರೆ ಅಂತಿಮವಾಗಿ ಆವಿಷ್ಕರಿಸಿದ್ದು ಯುರೇನಿಯಮ್ ಪರಮಾಣುವಿನಿಂದ ಶಕ್ತಿಶಾಲೀ ಕಿರಣಗಳ ಉತ್ಸರ್ಜನೆಯನ್ನು. ಈ ವಿದ್ಯಮಾನ  ಕೇವಲ ಯುರೇನಿಯಮ್ ಪರಮಾಣುವಿನ  ಗುಣವಲ್ಲ;  ಯುರೇನಿಯಮ್ ಅದಿರಿನಿಂದ ಪಡೆದ ಹೊಸ  ಧಾತುಗಳಾದ ರೇಡಿಯಮ್, ಪೊಲೋನಿಯಮ್ ಪರಮಾಣುಗಳು ಕೂಡ ಇದೇ ಬಗೆಯಲ್ಲಿ ಶಕ್ತಿಶಾಲೀ ವಿಕಿರಣವನ್ನು ಉತ್ಸರ್ಜಿಸುತ್ತವೆಂದು ಮೇರೀಕ್ಯೂರಿ (೧೮೬೭-೧೯೩೪) ಆವಿಷ್ಕರಿಸಿದರು ಮತ್ತು ಒಟ್ಟು  ವಿದ್ಯಮಾನವನ್ನು radioactivity – ವಿಕಿರಣಪಟುತ್ವ ಎಂದು ಕರೆದರು. ವಿಕಿರಣಪಟುತ್ವವೆಂದರೆ ಪರಮಾಣು ಗರ್ಭದ ಅನೈಚ್ಛಿಕ ಪ್ರಕ್ರಿಯೆ.  ಇಲ್ಲಿ ಪರಮಾಣು ಗರ್ಭದಿಂದ ಧನಾವಿಷ್ಟ ಆಲ್ಫಾ, ಋಣಾವಿಷ್ಟ ಎಲೆಕ್ಟ್ರಾನ್ ಅಥವಾ ಬಿಟಾ ಮತ್ತು ವಿದ್ಯುತ್ಕಾಂತ ಅಲೆಗಳಾದ ಗ್ಯಾಮಾ ವಿಕಿರಣ ಉತ್ಸರ್ಜನೆಗೊಳ್ಳುತ್ತವೆ.

ನಂತರದ ಪ್ರಯೋಗಗಳಿಂದ   ಬೀಟಾ ಕಣಗಳೆಂದರೆ  ಎಲೆಕ್ಟ್ರಾನುಗಳೆಂದು ಸ್ಪಷ್ಟವಾಯಿತು. ಸಿನಿಮೀಯವಾಗಿ ಹೇಳುವುದಾದರೆ, ಅದೆಲ್ಲ ಓಕೆ –  ನ್ಯೂಕ್ಲಿಯಸ್ಸಿನೊಳಗಿಂದ ಎಲೆಕ್ಟ್ರಾನುಗಳು ಬರುವುದು ಯಾಕೆ? ಹಾಗಿದ್ದರೆ ಅವು ಅಲ್ಲಿರಬಹುದೇ – ನ್ಯೂಟಾನ್, ಪ್ರೋಟಾನುಗಳ ಜತೆ ಜತೆ ಹಾಯಾಗಿ? ಆದರೆ ನಂತರ ಸ್ಪಷ್ಟವಾಯಿತು – ಎಲೆಕ್ಟ್ರಾನುಗಳಿಗೆ ಪರಮಾಣು ಕೇಂದ್ರದಲ್ಲಿ ಜಾಗವಿಲ್ಲ. ಅಂದ ಮೇಲೆ, ನಾವು ಗಮನಿಸುವ ಬೀಟಾ ಕಣಗಳು – ಅಂದರೆ ಎಲೆಕ್ಟ್ರಾನುಗಳು –  ಸೃಷ್ಟಿಯಾಗುವ ಪರಿ ಹೇಗೆ? ಇಪ್ಪತ್ತನೇ ಶತಮಾನದ ಆರಂಭದಲ್ಲಿ ಎದ್ದ ಪ್ರಶ್ನೆಗೆ ಉತ್ತರ ದೊರೆಯಲು ದಶಕಗಳ ಕಾಲ ಹೆಣಗಾಡಬೇಕಾಯಿತು.

ವಿಕಿರಣಪಟು ಪರಮಾಣುವಿನಲ್ಲಿ ನ್ಯೂಟ್ರಾನ್ ಸಂಖ್ಯೆ ಹೆಚ್ಚಿದ್ದರೆ ನಿಸರ್ಗ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ – ನ್ಯೂಟ್ರಾನ್ ಕ್ಷಯದ ಮೂಲಕ. ಇಲ್ಲಿ ಒಂದು ನ್ಯೂಟ್ರಾನ್ ಇನ್ನೊಂದು ಪ್ರೋಟಾನ್ ಆಗಿ ಪರಿವರ್ತನೆಯಾಗುತ್ತದೆ ಮತ್ತು ಆ ಕ್ರಿಯೆಯಲ್ಲಿ ಋಣಾವಿದ್ಯುದಾವಿಷ್ಟ ಎಲೆಕ್ಟ್ರಾನ್ ಸೃಷ್ಟಿಯಾಗುತ್ತದೆ. ಹೀಗೆ ಸೃಷ್ಟಿಯಾದ ಎಲೆಕ್ಟ್ರಾನಿಗೆ ನ್ಯೂಕ್ಲಿಯಸ್ಸಿನಲ್ಲಿ  ಜಾಗವಿಲ್ಲ. ಅದು ಅಲ್ಲಿಂದ ಹೊರ ರಟ್ಟಲೇ ಬೇಕು. ಹೊರ ಚಿಮ್ಮಿದ  ಈ ಎಲೆಕ್ಟ್ರಾನೇ ಬೀಟಾಕಣ. ಅಧಿಕ ದ್ರವ್ಯರಾಶಿಯ ನ್ಯೂಟ್ರಾನ್, ತುಸು ಕಡಿಮೆ ದ್ರವ್ಯರಾಶಿಯ  ಪ್ರೋಟಾನ್ ಆಗುವ ಇಂಥ ಕ್ರಿಯೆಯಲ್ಲಿ ನಷ್ಟವಾಗುವ ದ್ರವ್ಯರಾಶಿಯು ಶಕ್ತಿ ರೂಪದಲ್ಲಿ  ಬೀಟಾ ಕಣಕ್ಕಿರಬೇಕು. ಇದು ಸಿದ್ಧಾಂತದ ನಿರೀಕ್ಷೆ. ಆದರೆ ಪ್ರಯೋಗಗಳು ಹೇಳಿದ್ದೇ ಬೇರೆ. ಅವುಗಳ ಶಕ್ತಿ ಮೂರನೇ ಒಂದಂಶವಷ್ಟೇ ಇತ್ತು. ಹಾಗಿದ್ದರೆ ಉಳಿದದ್ದು ಏನಾಯಿತು? ಕೊರತೆಗೆ ವಿವರಣೆ ಏನು?

ಶಕ್ತಿಯನ್ನು ಸ್ಥೂಲವಾಗಿ ಚಲನಶಕ್ತಿ (kinetic energy) ಮತ್ತು ವಿಭವಶಕ್ತಿ (potential energy) ಎಂದು ವಿಂಗಡಿಸಬಹುದು. ವಸ್ತುವಿನ ಚಲನೆಯಿಂದ ಚಲನಶಕ್ತಿ ಬಂದರೆ, ಸ್ಥಾನದಿಂದ ವಿಭವಶಕ್ತಿ ಒದಗುತ್ತದೆ. ಉದಾಹರಣೆಗೆ, ಮರದಲ್ಲಿರುವ ಹಣ್ಣು ವಿಭವಶಕ್ತಿ ಹೊಂದಿದೆ. ಆದರೆ ಅದಕ್ಕೆ ಚಲನ ಶಕ್ತಿ ಇಲ್ಲ. ಅದೇ ಹಣ್ಣು ತೊಟ್ಟಿನಿಂದ ಕಳಚಿ ಭೂಮಿಗೆ ಬೀಳುವಾಗ ಚಲನೆಯ ಕಾರಣದಿಂದ ಚಲನಶಕ್ತಿ ಪ್ರಾಪ್ತವಾಗುತ್ತದೆ. ಕೆಳಕ್ಕೆ ಬಂದಂತೆ ಅದರ ವೇಗ ಹೆಚ್ಚುತ್ತದೆ – ಚಲನ ಶಕ್ತಿಯೂ ಕೂಡ. ಭೂಮಿಯನ್ನು ತಲಪುವಾಗ ಚಲನ ಶಕ್ತಿ ಗರಿಷ್ಠವಾಗುತ್ತದೆ. ವಿಭವಶಕ್ತಿ ಕನಿಷ್ಠವಾಗುತ್ತದೆ. ಆದರೆ ಒಟ್ಟು ಶಕ್ತಿ ಮೊದಲಿನಷ್ಠೇ ಇರುತ್ತದೆ. ಇದಕ್ಕೆ  ಶಕ್ತಿ ನಿತ್ಯತೆ ನಿಯಮ (law of conservation of energy) ಎಂದು ಹೆಸರು.

ಶಕ್ತಿ ನಿತ್ಯತೆ ನಿಯಮ ನಿಸರ್ಗದ ಇನ್ನೊಂದು ರಹಸ್ಯವನ್ನು ಕೂಡ ಹೇಳುತ್ತದೆ. ಶಕ್ತಿಯ ರೂಪಗಳು ಹಲವು. ಇದಕ್ಕೆ ಸರಿಯಾಗಿ ಬೇರೆ ಬೆರೆ ನಾಮಗಳು – ವಿದ್ಯುತ್ತು, ಬೆಳಕು, ಉಷ್ಣ, ಶಬ್ದ, ರೇಡಿಯೋ ಅಲೆಗಳು, ಎಕ್ಸ್ ವಿಕಿರಣಗಳು – ಇತ್ಯಾದಿ.   ಒಂದು ಪ್ರಕಾರದ ಶಕ್ತಿಯನ್ನು ಇನ್ನೊಂದಾಗಿ ಪರಿವರ್ತಿಸಲು ಸಾಧ್ಯ. ಆದರೆ ಒಟ್ಟು ಶಕ್ತಿ ಮೊದಲಿನಷ್ಟೇ ಇರುತ್ತದೆ. ಎಲ್ಲ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳೆಲ್ಲವೂ ಶಕ್ತಿ ನಿತ್ಯತೆ ನಿಯಮಕ್ಕೆ ಒಳಪಟ್ಟೇ ನಡೆಯುತ್ತದೆ ಮತ್ತು ನಡೆಯತಕ್ಕದ್ದು. ಶೂನ್ಯದಿಂದ ವಸ್ತುವನ್ನು ಎಂಥ ದೇವಮಾನವನೂ ಸೃಷ್ಟಿಸಲಾರ.

ಆಲ್ಫಾಕಣಗಳ ಉತ್ಸರ್ಜನೆಯಲ್ಲಿ ಶಕ್ತಿ ನಿತ್ಯತೆ ನಿಯಮ ಅನುಸರಣೆಯಾಗುತ್ತಿತ್ತು. ಹಾಗಿದ್ದರೆ ಬೀಟಾ ಕಣಗಳ ಉತ್ಸರ್ಜನೆಯಲ್ಲಿ ಮಾತ್ರ ನಿಸರ್ಗದ ಮೂಲಭೂತ ನಿಯಮ ಉಲ್ಲಂಘನೆಯಾಗುತ್ತಿದೆಯೇ? ಭೌತ ವಿಜ್ಞಾನಿಗಳಿಗೆ ತಲೆಬಿಸಿಯ ಹೊತ್ತು. ಕೆಲವರು ಆ ಹೊತ್ತಿಗೆ ಸಮಸ್ಯೆಯನ್ನು ಸರಳಗೊಳಿಸಲು ಬೀಟಾ ವಿಕಿರಣಪಟುತ್ವವು ಶಕ್ತಿನಿತ್ಯತೆ ನಿಯಮಕ್ಕೊಂದು ಅಪವಾದ ಎಂದರು.  ಗೊಂದಲದ ನಿವಾರಣೆಗೆ ವಿಜ್ಞಾನಿಗಳು ಹೆಣಗಾಡತೊಡಗಿದರು.  ಸರಿ ಉತ್ತರ ದೊರೆಯಲು ಮತ್ತೆ ಹಲವು ವರ್ಷಗಳು  ಬೇಕಾದುವು –  ನ್ಯೂಟ್ರಿನೋ ಪರಿಕಲ್ಪನೆಯನ್ನು ಪೌಲಿ ಮಂಡಿಸುವ  ತನಕ (೧೯೩೧).

ಪೌಲಿಯ ದೆವ್ವ!

ವೂಲ್ಫ್ ಗಾಂಗ್ ಪೌಲಿ (೧೯೦೦ – ೧೯೫೮) ಇಪ್ಪತ್ತನೇ ಶತಮಾನ ಕಂಡ ಒಬ್ಬ ಪ್ರಖರ ಸೈದ್ಧಾಂತಿಕ ಭೌತವಿಜ್ಞಾನಿ.  ಹುಟ್ಟಿದ್ದು ಆಸ್ಟ್ರಿಯಾದ ರಾಜಧಾನಿಯಾದ ವಿಯೆನ್ನಾದಲ್ಲಿ. ಇವರ ತಂದೆ ವೂಲ್ಫ್ ಗಾಂಗ್‌ಪಾಶ್ಚೇಲಿಸ್ ಒಬ್ಬ ವೈದ್ಯ. ತನ್ನ ಸಹಪಾಠಿಯಾಗಿದ್ದ ಶ್ರೇಷ್ಠ ಭೌತವಿಜ್ಞಾನಿ ಅರ್ನ್ಸ್ಟ್ ಮಾಕ್ (೧೮೩೮-೧೯೧೬) ಬಗ್ಗೆ ಅತಿಶಯ ಪ್ರೀತಿ ಮತ್ತು ಅಭಿಮಾನ. ಹಾಗಾಗಿ ತನ್ನ ಮಗನಿಗೆ ವೂಲ್ಫ್ ಗಾಂಗ್ ಅರ್ನ್ಸ್ಟ್ ಪೌಲಿ ಎಂದು ಹೆಸರಿಟ್ಟ!.

ಪೌಲಿ ಅಂದರೆ ಗಣಿತ ಮತ್ತು ಭೌತ ವಿಜ್ಞಾನದಲ್ಲಿ ಪ್ರಚಂಡ ಪ್ರೌಢಿಮೆಯನ್ನು ತೋರಿ ಗಮನ ಸೆಳೆದ ಬಾಲ್ಯ ಪ್ರತಿಭೆ. ಹದಿನೆಂಟರ ಹರೆಯದಲ್ಲಿಯೇ ಜರ್ಮನಿಯ ಮ್ಯುನಿಕ್ ವಿಶ್ವವಿದ್ಯಾಲಯದ ಮೆಟ್ಟಲೇರಿ ಘನಸ್ಥಿತಿ ಭೌತ ವಿಜ್ಞಾನಕ್ಕೆ ಅನನ್ಯ ಕೊಡುಗೆ ನೀಡಿದ ಶ್ರೇಷ್ಠ ಸೈದ್ಧಾಂತಿಕಭೌತ ವಿಜ್ಞಾನಿ ಅರ್ನಾಲ್ಡ್ ಸಾಮರ್‌ಫೇಲ್ಡ್ (೧೮೬೮-೧೯೫೧) ಬಳಿ ಸಂಶೋಧನೆಗೆ ತೊಡಗುವ ಹೊತ್ತಿಗೇ  ಐನ್‌ಸ್ಟೈನರ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತದ ಕುರಿತು ಸ್ವತಂತ್ರವಾಗಿ ಸಂಶೋಧನ ಲೇಖನವನ್ನು ಬರೆದು ಬೆರಗು ಮೂಡಿಸಿದ. ಅಯಾನೀಕೃತ ಹೈಡ್ರೋಜನ್ ಅಣುಗಳ ಕ್ವಾಂಟಮ್ ಸಿದ್ಧಾಂತವೆಂಬ ಘನ ಪ್ರಬಂಧಕ್ಕೆ ಪೌಲಿಗೆ ಡಾಕ್ಟರೇಟ್ ಪದವಿ ಬಂದಾಗ ಇನ್ನೂ ಇಪ್ಪತ್ತೊಂದರ ಹರೆಯ.  ಬೈಜಿಕ ವಿದಳನ ಕ್ರಿಯೆಯ ಆವಿಷ್ಕಾರದಲ್ಲಿ ಪಾತ್ರವಹಿಸಿದ ಲಾಮೈಟ್ನರ್ (೧೮೭೮-೧೯೬೮) ಪೌಲಿ ಬಗ್ಗೆ ಹೇಳಿದ್ದಾರೆ “ಸಾಮ್ಮರ್‌ಫೇಲ್ಡ್ ಹೇಳುತ್ತಿದ್ದರು – ನನಗೊಬ್ಬ ಪೌಲಿ ಅನ್ನುವ ಶಿಷ್ಯನಿದ್ದಾನೆ. ಆತ  ಅದೆಂಥ ಪ್ರಖರಮತಿ ಎಂದರೆ ಅವನಿಗೆ ಏನನ್ನೂ ಹೇಳಿಕೊಡುವ ಅಗತ್ಯವಿಲ್ಲ. ಆದರೂ ವಿಶ್ವವಿದ್ಯಾಲಯದ ನಿಯಮಾನುಸಾರ ಆತ ತನ್ನ ಡಾಕ್ಟರೇಟ್ ಪದವಿಗೆ ಆರು ಸೆಮೆಸ್ಟರುಗಳ ಕೋರ್ಸವರ್ಕ್ ಮಾಡಲೇಬೇಕಾಗಿದೆ”

ತನ್ನ ಶಿಷ್ಯೋತ್ತಮ ಪೌಲಿಗೆ ಐನ್‌ಸ್ಟೈನರ ಸಾಪೇಕ್ಷತಾ ಸಿದ್ಧಾಂತದ ಬಗೆಗೆ ವಿಸ್ತಾರವಾದ ಒಂದು ಪ್ರಬಂಧ  ಬರೆದುಕೊಡಲು ಸಾಮ್ಮರ್‌ಫೇಲ್ಡ್ ಸೂಚಿಸಿದರೆ,  ಪೌಲಿ ಸಲ್ಲಿಸಿದ.  ಆ ಪ್ರಬಂಧವಾದರೋ ೨೩೭ ಪುಟಗಳಿಗೆ ವಿಸ್ತರಿಸಿ, ಕಿರು ಹೊತ್ತಗೆಯ ರೂಪ ಪಡೆಯಿತು.  ಸ್ವಯಂ ಐನ್‌ಸ್ಟೈನ್ ಆ ಪ್ರಬಂಧವನ್ನು ಓದಿ ಶ್ಲಾಘಿಸಿದರು ” ಅದ್ಭುತವಾಗಿ ಮೂಡಿರುವ ಈ ರಚನೆಯನ್ನು ಓದಿದ ಯಾರೇ ಆದರೂ ಇದರ ಕರ್ತೃ ಇಪ್ಪತ್ತೊಂದರ ತರುಣನೆಂದು ಊಹಿಸಲಾರರು!”  ಜರ್ಮನ್ ಭಾಷೆಯಲ್ಲಿರುವ ಈ ಪ್ರಬಂಧ ಮುಂದೆ ಇಂಗ್ಲೀಷಿಗೆ ಅನುವಾದಗೊಂಡು  ಸಾಪೇಕ್ಷತಾಸಿದ್ಧಾಂತದ ಬಗ್ಗೆ ಮುಖ್ಯ ಆಕರ ಗ್ರಂಥವಾಯಿತು. ಇದು ಪೌಲಿ.

ಪರಮಾಣುವಿನ ಕಕ್ಷೆಯಲ್ಲಿ  ಎಷ್ಟು ಎಲೆಕ್ಟ್ರಾನುಗಳು ಹಿಡಿಯುತ್ತವೆನ್ನುವುದು ಸ್ಪಷ್ಟವಾದದ್ದು ಪೌಲಿ ಮಂಡಿಸಿದ ಮೂಲಭೂತ ನಿಯಮದ ನಂತರವೇ (೧೯೨೪). ಪರಮಾಣು ಕೇಂದ್ರದ ಸುತ್ತ ಸುತ್ತುತ್ತಿರುವ ಎಲೆಕ್ಟ್ರಾನುಗಳ ಶಕ್ತಿ, ಸಂವೇಗ, ದೂರ  ಇತ್ಯಾದಿಗಳನ್ನು ವಿವರಿಸಲು ಬೇಕಾಗುತ್ತವೆ – ಬೇರೆ ಬೇರೆ ಕ್ವಾಂಟಮ್ ಸಂಖ್ಯೆಗಳು – ಮನೆಗಳ ಗುರುತಿಗೆ ದಾರಿ, ಗಲ್ಲಿ, ಮನೆನಂಬ್ರ, ಅಂಚೆನಂಬ್ರ ಇರುವಂತೆ. ಪೌಲಿ ಹೇಳಿದರು “ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಇರುವ ಎರಡು ಎಲೆಕ್ಟ್ರಾನುಗಳಿಗೆ ಒಂದೇ ನಮೂನೆಯ ಕ್ವಾಂಟಮ್ ಸಂಖ್ಯೆಗಳು ಇರಲು ಸಾಧ್ಯವಿಲ್ಲ”  ಇದುವೇ “ಪೌಲಿ ಎಕ್ಸ್‌ಕ್ಲೂಷನ್ ಪ್ರಿನ್ಸಿಪಲ್” (paulis exclusion principle ) ಎಂದೇ ಸುಪ್ರಸಿದ್ಧ – ವಿಜ್ಞಾನ ಇರುವ ತನಕ ಅಜರಾಮರ.  ಸಿನೆಮಾ ಥಿಯೇಟರಿನಲ್ಲಿ ಪ್ರತಿಯೊಂದು ಸೀಟಿನಲ್ಲಿ ಒಬ್ಬನಿಗಷ್ಟೇ ಜಾಗ  ಇರುವ ಹಾಗೆ ಪ್ರೇಕ್ಷಕರು ತುಂಬುತ್ತ ಹೋಗುವ ಹಾಗೆ, ಪರಮಾಣುವಿನ ಕಕ್ಷೆಯಲ್ಲಿ ಎಲೆಕ್ಟ್ರಾನುಗಳ ವಿತರಣೆಯಾಗುತ್ತದೆ  ಪೌಲಿಯ ನಿಯಮವನ್ನನುಸರಿಸಿ. ಪರಮಾಣು ಕೇಂದ್ರದ ಸುತ್ತ ಎಲೆಕ್ಟ್ರಾನ್ ಪರಿಭ್ರಮಿಸುತ್ತದಷ್ಟೇ ಅಲ್ಲ, ಎಲೆಕ್ಟ್ರಾನಿಗೆ ಅದರದ್ದೇ ಆದ ಗಿರಕಿ (spin) ಗುಣವಿದೆ ಎಂಬ ಸೂಚನೆ ದೊರೆತದ್ದು ಪೌಲಿಯಿಂದ. ಆಧುನಿಕ ಕ್ವಾಂಟಮ್ ಸಿದ್ಧಾಂತದ ಜನಕರಲ್ಲಿ ಪೌಲಿ ಕೂಡ ಒಬ್ಬರು. ಈ ಒಟ್ಟು ಕೊಡುಗೆಗಾಗಿ ೧೯೪೫ರಲ್ಲಿ ಪೌಲಿಗೆ ಬಂತು ನೊಬೆಲ್ ಪ್ರಶಸ್ತಿ. ಯುದ್ಧದ ಕಾರಣದಿಂದ ಸ್ವೀಡನ್ನಿಗೆ ಹೋಗಿ ಪ್ರಶಸ್ತಿ ಸ್ವೀಕರಿಸದ ಪೌಲಿಗೆ ಅಮೇರಿಕದ ಪ್ರಿನ್ಸ್‌ಟನ್ನಿನಲ್ಲಿ ಸನ್ಮಾನ ಸಮಾರಂಭ ನಡೆಯಿತು. ಅಭಿನಂದಿಸುತ್ತ ಐನ್‌ಸ್ಟೈನ್ ಹೇಳಿದರು “ಪೌಲಿ ನನ್ನ ಉತ್ತರಾಧಿಕಾರಿ!”.

ಸೈದ್ಧಾಂತಿಕ ಪ್ರಖರ ಪೌಲಿ, ಪ್ರಯೋಗ ಉಪಕರಣದ ಬಳಿ ಬಂದರೆ ಸಾಕು ಆ ಉಪಕರಣಗಳು ಎಕ್ಕೆಟ್ಟುಹೋಗುತ್ತಿದ್ದುವೆಂದು ತಮಾಷೆಯ ಮಾತುಗಳು ಅಂದು ಜನಜನಿತವಾಗಿತ್ತು. ಹಾಗಾಗಿ ವಿಜ್ಞಾನಿಗಳ ವಲಯದಲ್ಲಿ ಇದಕ್ಕೆ ಪೌಲಿಪರಿಣಾಮ (Pauli Effect) ಅನ್ನುತ್ತಿದ್ದರು! ಒಮ್ಮೆ ಜರ್ಮನಿಯ ಗಾಟ್ಟಿಂಗೆನ್ ವಿಶ್ವವಿದ್ಯಾಲಯದಲ್ಲಿ ಒಟ್ಟೊಸ್ಟೆರ್ನ್ (೧೮೮೮ -೧೯೬೯) ನಡೆಸುತ್ತಿದ್ದ ಪ್ರಯೋಗ ಉಪಕರಣಗಳು ಹಟಾತ್ತನೆ ಕೆಟ್ಟು ಹೋದುವು. ತನ್ನ ಗೆಳೆಯ ಪೌಲಿಗೆ ಈ ವಿಚಾರವನ್ನು ಪತ್ರ ಮುಖೇನ ತಿಳಿಸಿದಾಗ ಪೌಲಿ ಮರು ಉತ್ತರ ಬರೆದರಂತೆ “ಆ ದಿನ ನಾನು ಡೆನ್ಮಾರ್ಕಿನಲ್ಲಿರುವ ನೀಲ್ಸ್ ಬೋರ್ ಭೇಟಿಗೆ ಹೋಗುವಾಗ ನಾನಿದ್ದ ರೈಲು ಗಾಟ್ಟಿಂಗೆನ್ ರೈಲು ನಿಲ್ದಾಣದಲ್ಲಿ ತುಸು ಹೊತ್ತು ನಿಂತಿತ್ತು. ಕ್ಷಮಿಸು ! “

ಧಡೂತಿ ದೇಹದ ಪೌಲಿ, ಅತ್ತ ಇತ್ತ ತೊನೆಯುತ್ತ ಗಂಭೀರ ಸ್ವರದಲ್ಲಿ ತನ್ನ  ವಿಚಾರ ಮಂಡಿಸಲು ಸಂಕಿರಣದಲ್ಲಿ ಎದ್ದರೆ ಸಾಕು – ಉಪನ್ಯಾಸಕನ ಬೆವರು ಬಿಚ್ಚುತ್ತಿತ್ತಂತೆ. ತಪ್ಪು ಅನಿಸಿದ್ದನ್ನು ಮುಲಾಜಿಲ್ಲದೇ ಟೀಕಿಸುತ್ತಿದ್ದ  ಪೌಲಿಯನ್ನು “ಭೌತವಿಜ್ಞಾನದ ಅಂತ:ಸ್ಸಾಕ್ಷಿ” ಎನ್ನುತ್ತಿದ್ದರು. ಇಂಥ ಪೌಲಿ ವಿಕಿರಣಪಟುತ್ವದ ಸಮಸ್ಯೆಯ ನಿವಾರಣೆಗೆ ತುಳಿದದ್ದು ಹೊಸ ಹಾದಿ.

ವಿಕಿರಣಪಟುತ್ವದಲ್ಲಿ ಬೀಟಾ ಕಣದೊಂದಿಗೆ ಹೊಸದೊಂದು  ಕಣ ಉತ್ಸರ್ಜನೆಯಾಗುತ್ತಿದೆ   ಮತ್ತು ಯಾವ ಶಕ್ತಿ ಮತ್ತು ಸಂವೇಗ  ನಷ್ಟವಾಗಿದೆಯೆಂದು ಹೇಳುತ್ತಿದ್ದೇವೆಯೋ, ಅವನ್ನು  ಈ ಕಣಗಳು ಹೊಂದಿವೆ ಎಂಬ ಊಹೆಯನ್ನು ಪೌಲಿ ಮಾಡಿದರು. ಇಂಥದೊಂದು ದಿಟ್ಟ ಊಹೆ ಮಾಡಲು ಸಾಧ್ಯವಾಗುವುದು ಅಭಿಜಾತ ಪ್ರತಿಭೆಗೆ ಮಾತ್ರ.  ಝೆಕೊಸ್ಲೊವಾಕಿಯಾದ  ಪ್ರಾಗಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮೂವತ್ತರ ತರುಣ ಪೌಲಿ ತಮ್ಮ  ಸಿದ್ಧಾಂತ ಮಂಡಿಸುತ್ತ ಹೇಳಿದರು “ನಾನು ವಿಕಿರಣಪಟುತ್ವ ಕ್ರಿಯೆಯಲ್ಲಿ ಶಕ್ತಿ ನಿತ್ಯತೆ ನಿಯಮ ಉಳಿಸಲಿಕ್ಕೆಂದೇ ಈ ಹೊಸ ಕಣವನ್ನು ಪರಿಚಯಿಸುತ್ತಿದ್ದೇನೆ. ಇವಿಲ್ಲದೇ ಸಮಸ್ಯೆಯ ಪರಿಹಾರ ಆಗದು”. ಆರಂಭದಲ್ಲಿ ಪೌಲಿ ತನ್ನ ಹೊಸ ಕಣವನ್ನು ನ್ಯೂಟ್ರಾನ್ ಎಂದು ಹೆಸರಿಸಿದರು (೧೯೩೧). ಆದರೆ ಸರಿಸುಮಾರು ಆದೇ ಸಮಯದಲ್ಲಿ ಪರಮಾಣು ಕೇಂದ್ರದಲ್ಲಿರುವ ವಿದ್ಯುದಂಶವಿಲ್ಲದ ಕಣಗಳನ್ನು ಬ್ರಿಟಿಷ್ ಭೌತ ವಿಜ್ಞಾನಿ ಜೇಮ್ಸ್ ಛಾಡ್ವಿಕ್ ಆವಿಷ್ಕರಿಸಿದರು ಮತ್ತು  ಆ ಕಣಗಳನ್ನು  ನ್ಯೂಟ್ರಾನ್ ಎಂದು ಕರೆದರು. (೧೯೩೨). ಹಾಗಾಗಿ ಪೌಲಿಯ ಕಣಗಳಿಗೆ ಹೊಸ ಹೆಸರು ನೀಡಬೇಕಾದದ್ದು ಅನಿವಾರ್ಯವಾಯಿತು.

ಪೌಲಿಯ ಕಣಗಳಿಗೆ ಹೊಸ ಹೆಸರು ಟಂಕಿಸಿದವರು ಇನ್ನೊಬ್ಬ ನ್ಯೂಕ್ಲಿಯರ್ ದಿಗ್ಗಜ ಎನ್ರಿಕೋ ಫರ್ಮಿ (೧೯೦೧-೧೯೫೪); ಪೌಲಿಯ ಪರಮಾಪ್ತ ಮಿತ್ರ. ಪೌಲಿ ಕಣಗಳನ್ನು ನ್ಯೂಟ್ರಿನೋ ಎಂದು ತಮ್ಮ ಸಂಶೋಧನ ಲೇಖನಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಫರ್ಮಿ ಹೆಸರಿಸುವುದರೊಂದಿಗೆ ನ್ಯೂಟ್ರಿನೊ ಎಂಬ ಹೆಸರು ಚಾಲ್ತಿಗೆ ಬಂತು.

ಪೌಲಿಯ ಜೀವನ ಪ್ರಕ್ಷುಬ್ದವಾಗಿತ್ತು. ತಾಯಿಯ ಆತ್ಮಹತ್ಯೆ, ವರ್ಷದೊಳಗೆ ದಾಂಪತ್ಯದಲ್ಲಿ ವಿರಸ ಮತ್ತು ವಿಚ್ಛೇದನ ನಡೆದು ಮನದ ಶಾಂತಿ ಕದಡಿ ಸುಪ್ರಸಿದ್ಧ ಮನೋವಿಜ್ಞಾನಿ ಕಾರ್ಲ್‌ಝಂಗ್ (೧೮೭೫-೧೯೬೧) ಅವರ ಮೊರೆ ಹೋದದ್ದು ಪೌಲಿಯ ಬದುಕಿನ ಸಂಕಷ್ಟಕ್ಕೆ ಹಿಡಿದ ಕೈಗನ್ನಡಿ. ಸಿಗಾರ್ ಮತ್ತು ಮದಿರೆಯ ಪಾನ ಕೂಡ ಧಡೂತಿ ಪೌಲಿಯ ದೇಹದ ಮೇಲೆ ಪರಿಣಾಮ ಬೀರಿರಬೇಕು.  ೫೮ರ ಹರೆಯದಲ್ಲೇ ಮೆದೋಜೀರಕ ಗ್ರಂಥಿಯ ಕ್ಯಾನ್ಸರಿಗೆ ಬಲಿಯಾದರು. ಆಸ್ಪತ್ರೆಯಲ್ಲಿ ಮಲಗಿದ್ದ ಪೌಲಿ ಅಲ್ಲಿಂದಲೇ ಸಂಶೋಧನ ಲೇಖನಗಳನ್ನು ಬರೆಯುತ್ತ ಸಾವನ್ನು ಎದುರಿಸಿದ ದಿಟ್ಟ.  ಪೌಲಿ ತಮ್ಮ ಗೆಳೆಯರೊಂದಿಗೆ ಹೇಳುತ್ತಿದ್ದರಂತೆ “ನನಗೆ ಮಕ್ಕಳಿಲ್ಲ. ಇರುವುದಿದ್ದರೆ ಆತ ಒಬ್ಬ ಶತಮೂರ್ಖ – ಪತ್ತೆಯಾಗದೇ ಉಳಿದಿರುವ ನ್ಯೂಟ್ರಿನೊ”

ನಿಜ, ನ್ಯೂಟ್ರಿನೊ ಇತರ ಪ್ರಾಥಮಿಕ ಕಣಗಳಿಗಿಂತ ಬಲು ವಿಚಿತ್ರ. ಇವುಗಳಿಗೆ ವಿದ್ಯುದಂಶವಿಲ್ಲ. ಶೂನ್ಯವೋ ಎನ್ನುವಷ್ಟು ಅಲ್ಪ ದ್ರವ್ಯರಾಶಿ. ಕಾಂತಶಕ್ತಿ ಇಲ್ಲ.  ಬೆಳಕಿನ ಸನಿಹದ ವೇಗದಲ್ಲಿ ಸಾಗುವ ಇವು ದ್ರವ್ಯದೊಂದಿಗೆ ಕಿಂಚಿತ್ತೂ ವರ್ತಿಸಲಾರವು. ಬೆಳಕಿಗೆ ಅಪಾರದರ್ಶಕವಾದ ಮರ, ಗೋಡೆ, ಲೋಹದ ಹಾಳೆಗಳೆಲ್ಲವೂ ಇವುಗಳಿಗೆ ಪಾರದರ್ಶಕ – ಲೀಲಾಜಾಲವಾಗಿ ತೂರಿ ಸಾಗುತ್ತವೆ – ಅವ್ಯಾವುವೂ ಅಲ್ಲಿ ಇಲ್ಲವೆನ್ನುವಂತೆ. ಒಂದು ವಿಕಿರಣಪಟು ರಾಸಾಯನಿಕದಿಂದ ಬರುವ ಅತ್ಯಂತ ಶಕ್ತಿಶಾಲಿಯಾದ ಗ್ಯಾಮಾ ಕಿರಣವನ್ನು ತಡೆಯಲು ಕೆಲವು ಸೆಂಟಿಮೀಟರ್ ದಪ್ಪದ ಸೀಸ (lead) ಸಾಕು. ಆದರೆ ನ್ಯೂಟ್ರಿನೋಗಳನ್ನು ತಡೆಯಲು ಜ್ಯೋತಿರ್ವರ್ಷಗಳಷ್ಟು ದಪ್ಪದ ಸೀಸ ಬೇಕು.  ಹಾಗಾಗಿಯೇ ಈ ಕಣಗಳ ಪತ್ತೆ  ಅತ್ಯಂತ ಪ್ರಯಾಸದ್ದು.

ನ್ಯೂಟ್ರಿನೊಗಳ ಪತ್ತೆಯಾಗದೇ ಅವುಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಹೇಗೆ? ಪೌಲಿಯದು ಬರಿದೇ ರಮ್ಯ ಕಥೆಯಾಗದೇ?. ಹಾಗಾಗಿ ನ್ಯೂಟ್ರಿನೊ ಪತ್ತೆಗೆ ಅಹರ್ನಿಶಿ ಪ್ರಯತ್ನ ಆರಂಭವಾಯಿತು.  ಆದರೆ ದಕ್ಕಿದ್ದು ಶೂನ್ಯ ಫಲಿತಾಂಶ. ಕಣ್ಣಿಗೆ ಕಾಣದ, ಅಸ್ತಿತ್ವವೇ ಇಲ್ಲದ ಹಾಗೆ ವರ್ತಿಸುತ್ತಿರುವ   ನ್ಯೂಟ್ರಿನೊಗಳೆಂದರೆ  “ಪೌಲಿಯ ದೆವ್ವಗಳು” ಎಂಬ ತಮಾಷೆಯ ಹೇಳಿಕೆಗಳು ಕೂಡ ಹುಟ್ಟಿಕೊಂಡುವು.

ನ್ಯೂಟ್ರಿನೋ ಪತ್ತೆಯ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿತು.  ನ್ಯೂಕ್ಲಿಯರ್ ರಿಯಾಕ್ಟರಿನಿಂದ ಹೊರ ಚಿಮ್ಮುವ ನ್ಯೂಟ್ರಿನೊಗಳು ಕ್ಷಯಿಸಿದಾಗ ಸೃಷ್ಟಿಯಾಗುವ ಎಲೆಕ್ಟ್ರಾನ್ ಮತ್ತು ಪಾಸಿಟ್ರಾನ್ ಕಣಗಳು ದರ್ಶಕದ (detector) ರಾಸಾಯನಿಕ ದ್ರವದಲ್ಲಿ ಸಾಗುವಾಗ ಉದ್ಭವಿಸುವ ಸೆರೆಂಕೋವ್ ವಿಕಿರಣವನ್ನು ಅಮೇರಿಕದ ಭೌತ ವಿಜ್ಞಾನಿಗಳಾದ ಫ್ರೆಡ್ರಿಕ್‌ರಿಯಾನ್ಸ್ (೧೯೧೮-೧೯೯೮) ಮತ್ತು ಕ್ಲೈಡ್‌ಲಾರೆನ್ಸ್ ಕೊವಾನ್ಸ್ (೧೯೧೯-೧೯೭೪) ಪತ್ತೆ ಮಾಡಿದರು (೧೯೫೬). ಇಲ್ಲಿ ಗಮನಿಸಬೇಕಾದದ್ದು ಇದು ನ್ಯೂಟ್ರಿನೊಗಳ ನೇರ ಪತ್ತೆಯಲ್ಲ – ಪರೋಕ್ಷವಾದ ಪತ್ತೆ. ಈ ಆವಿಷ್ಕಾರಕ್ಕೆ ರಿಯಾನ್ಸ್ ನೊಬೆಲ್ ಪ್ರಶಸ್ತಿ ಕೂಡ ಪಡೆದರು (೧೯೯೫), ಸಂತಸದಲ್ಲಿ ಭಾಗಿಯಾಗಬೇಕಾದ ಕೊವಾನ್ಸ್ ಅದಾಗಲೇ ನಿಧನರಾಗಿದ್ದರು.

ಸೂರ್ಯ ಸೇರಿದ ಹಾಗೆ ಎಲ್ಲ ನಕ್ಷತ್ರಗಳು, ಸೂಪರ್ನೊವಾಗಳು ನ್ಯೂಟ್ರಿನೊ ಆಕರಗಳು. ಸೂರ್ಯ ಗರ್ಭದಲ್ಲಿ ನಡೆಯುವ ಹೈಡ್ರೋಜನ್ ಪರಮಾಣುಗಳ ಬೈಜಿಕಸಂಲಯನ ಕ್ರಿಯೆಯಲ್ಲಿ (nuclear fusion reaction )  ಸೆಕುಂಡಿಗೆ ಕೋಟಿ ಕೋಟಿ ನ್ಯೂಟ್ರಿನೊಗಳು ಸೃಷ್ಟಿಯಾಗಿ ಸರ್ವ ದಿಕ್ಕುಗಳಿಗೆ ಎರಚಿ ಹೋಗುತ್ತಿವೆ. ಸೂರ್ಯ ಕೇಂದ್ರದಿಂದ ಮೂರು ಸೆಕುಂಡಿನೊಳಗೆ ಬಾಹ್ಯಾವರಣ ತಲುಪಿ, ಅಲ್ಲಿಂದ ಜಿಗಿದು ಎಂಟು ನಿಮಿಷಗಳೊಳಗೆ ಭೂಮಿ ಸೇರಿ, ಕ್ಷಣ ಮಾತ್ರದಲ್ಲಿ ಭೂಮಿಯನ್ನು ತೂರಿ, ಮತ್ತೆ ಆ ಬದಿಯಿಂದ  ಬಾಹ್ಯಾಕಾಶಕ್ಕೆ ನೆಗೆದು ವಿಶ್ವದಂತರಾಳದ ಅನೂಹ್ಯ ಲೋಕದತ್ತ ಇವು ಪಯಣಿಸುತ್ತವೆ. ಕಂಪ್ಯೂಟರ್ ಎದುರು ಕುಳಿತು ಈ ಲೇಖನ ನೀವು ಓದುತ್ತಿರುವ ಈ ಹೊತ್ತಿನಲ್ಲಿ ನಿಮ್ಮ ಮೇಲೆ  ಹಲವು ಸಾವಿರ ಕೋಟಿ ನ್ಯೂಟ್ರಿನೊಗಳು ಅಪ್ಪಳಿಸಿ ಸಾಗುತ್ತಿವೆ  – ಅದೃಷ್ಟ, ಅರಿವಿಗೆ ಮಾತ್ರ ಬರುತ್ತಿಲ್ಲ! ಹಾಗೆ ನೋಡಿದರೆ ನ್ಯೂಟ್ರಿನೊ ಮಾತ್ರವಲ್ಲ, ಇನ್ನಿತರ ಕಣಗಳು, ವಿಕಿರಣಗಳು ಅಗೋಚರ. ವಿದ್ಯುತ್ಕಾಂತ ವಿಕಿರಣದಲ್ಲಿ ಕೇವಲ ಶೇಕಡಾ ನಾಲ್ಕಂಶ ಮಾತ್ರ ನಮಗೆ ದೃಷ್ಟಿ ನೀಡುತ್ತವೆ – ಅದುವೇ ಬೆಳಕು. ಎಲ್ಲ ವಿಕಿರಣಗಳು, ಕಣಗಳನ್ನು ನೋಡುವ ದಿವ್ಯ  ದೃಷ್ಟಿ  ನಮಗಿದ್ದಿದ್ದರೆ!?

ನ್ಯೂಟ್ರಿನೊಗಳ ಅಧ್ಯಯನ ವಿಶ್ವದ ಕುರಿತಂತೆ ನಮಗೆ ಹೊಸ ಅರಿವು ನೀಡಬಲ್ಲವು. ಎಂದೇ ನ್ಯೂಟ್ರಿನೊ ಖಗೋಳ ವಿಜ್ಞಾನ ಇಂದು ಮುಂಚೂಣಿಯ ಅಧ್ಯಯನ ಕ್ಷೇತ್ರ. ಅಮೇರಿಕದ ರೇಮಂಡ್ ಡೇವಿಸ್ (೧೯೧೪-೨೦೦೬) ನೊಬೆಲ್ ಪ್ರಶಸ್ತಿ ಪಡೆದದ್ದು ನ್ಯೂಟ್ರಿನೊ ಅಧ್ಯಯನಕ್ಕೆ (೨೦೦೨). ಸೌರನ್ಯೂಟ್ರಿನೋಗಳನ್ನು  ಪತ್ತೆ ಮಾಡಿದ ಡೇವಿಸ್ ತಮ್ಮ ಜೀವನವನ್ನೇ ನ್ಯೂಟ್ರಿನೊ ಅಧ್ಯಯನಕ್ಕೆ ಮುಡಿಪಾಗಿಟ್ಟವರು. ೨೦೦೧ರ ತನಕ ಸೌರ ನ್ಯೂಟ್ರಿನೊ ಸಂಖ್ಯೆ ದೊಡ್ದ ಸವಾಲಿನದ್ದಾಗಿತ್ತು. ಪ್ರಾಯೋಗಿಕವಾಗಿ ಅಳೆದ ನ್ಯೂಟ್ರಿನೊಗಳ ಸಂಖ್ಯೆ ಸೈದ್ಧಾಂತಿಕವಾಗಿ ಲೆಕ್ಕ ಹಾಕಿದ ನ್ಯೂಟ್ರಿನೋಗಳ ಸಂಖ್ಯೆಯೊಂದಿಗೆ ತಾಳೆ ಹೊಂದುತ್ತಿರಲಿಲ್ಲ. 

ಹಾಗಾಗಿಯೇ ಡೇವಿಸ್ ೧೯೯೫ರಲ್ಲಿ ಹೇಳಿದರು

” ಪ್ರಯೋಗ ಫಲಿತಾಂಶಗಳು ಮತ್ತು ಸಿದ್ಧಾಂತದ ನಿರೀಕ್ಷೆಗಳು ತಾಳೆ ಹೊಂದುತ್ತಿಲ್ಲವೆಂದಾದರೆ ಸೂರ್ಯಗರ್ಭದ ಸಂಲಯನ ಕ್ರಿಯೆಯ ವಿವರಣೆಗೆ ಇನ್ನಷ್ಟು ನವುರಾದ ಸಿದ್ಧಾಂತಗಳು ಬೇಕಾಗಿವೆ ಎಂದರ್ಥ”

ಅದು ನಿಜವಾಯಿತು. ನ್ಯೂಟ್ರಿನೊಗಳಲ್ಲಿ ತರಹೇವಾರಿಗಳಿವೆ – ಎಲೆಕ್ಟ್ರಾನ್ ನ್ಯೂಟ್ರಿನೊ, ಮ್ಯೂ ನ್ಯೂಟ್ರಿನೊ, ಟೌ ನ್ಯೂಟ್ರಿನೋ, ಇತ್ಯಾದಿ. ಸೂರ್ಯನಿಂದ ಉತ್ಸರ್ಜನೆಯಾಗುವ ನ್ಯೂಟ್ರಿನೊಗಳಲ್ಲಿ ಮೂವತ್ತು ಶೆಕಡಾದಷ್ಟು ಮಾತ್ರ ಎಲೆಕ್ಟ್ರಾನ್ ನ್ಯೂಟ್ರಿನೋ ಮತ್ತು ಉಳಿದಂಶ ಇನ್ನಿತರ ಬಗೆಯವು. ಡೆವಿಸ್ ಪ್ರಯೋಗಗಳು ಎಲೆಕ್ಟ್ರಾನ್ ನ್ಯೂಟ್ರಿನೋಗಳನ್ನಷ್ಟೇ ಪತ್ತೆ ಮಾಡಲು ಶಕ್ತವಾಗಿದ್ದುವು. ಯಾವಾಗ  ಇನ್ನುಳಿದ ನ್ಯೂಟ್ರಿನೋಗಳನ್ನು ಪತ್ತೆ ಮಾಡಲು ಸಾಧ್ಯವಾಯಿತೋ,  ಸೌರ ನ್ಯೂಟ್ರಿನೊ ಸಮಸ್ಯೆ ಪರಿಹಾರವಾಯಿತು.

ಒಪೆರಾ ಪ್ರಯೋಗ

ನ್ಯೂಟ್ರಿನೊಗಳ ವೇಗದ ಕುರಿತಾಗಿ ಇತ್ತೀಚೆಗೆ ಸುದ್ದಿ ತಂದ ಪ್ರಯೋಗದ ಸಂಕ್ಷಿಪ್ತ ಹೆಸರು ಒಪೆರಾ (OPERA , Oscillation Project with Emulsion tracking Apparatus). ಸ್ವಿಟ್ಜರ್ಲೆಂಡಿನ ಸೆರ್ನ್ ಸಂಶೋಧನ ಕೇಂದ್ರದಿಂದ ಹೊರಟ ನ್ಯೂಟ್ರಿನೊಗಳ ದಂಡು ಆಲ್ಫ್ಸ್ ಪರ್ವತ ಶ್ರೇಣಿಯ ನೆಲದಾಳದಲ್ಲಿ ೭೩೦ಕಿಮೀ ದೂರ ಕ್ರಮಿಸಿ,  ಇಟೆಲಿಯ  ಗ್ರಾನ್‌ಸಾಸ್ಸೋ ಎಂಬಲ್ಲಿ ಸ್ಥಾಪಿಸಲಾದ ನ್ಯೂಟ್ರಿನೊ ದರ್ಶಕದ ಮೇಲೆ ಪಾತವಾಗುತ್ತವೆ.

ಬೆಳಕಿನ ವೇಗದಲ್ಲಿ  ಸಾಗುವ ನ್ಯೂಟ್ರಿನೊಗಳಿಗೆ ಪ್ರಯೋಗ ದೂರವನ್ನು ಕ್ರಮಿಸಲು ಕೇವಲ ೨.೪೩ ಮಿಲಿ ಸೆಕುಂಡುಗಳು ಸಾಕು.  ಅಂದರೆ ಸೆರ್ನ್‌ನಿಂದ ಹೊರಟ ನ್ಯೂಟ್ರಿನೊಗಳು ಇಟೆಲಿಯ ಒಪೆರಾ ದರ್ಶಕವನ್ನು ತಲುಪುವ ಕಾಲಾವಧಿಯನ್ನು ಉಪಗ್ರಹ ಆಧಾರಿತ (GPS) ವ್ಯವಸ್ಥೆಯನ್ನು ಬಳಸಿಕೊಂಡು ಅತ್ಯಂತ ಕರಾರುವಾಕ್ಕಾಗಿ ನಿಗದಿಪಡಿಸಲಾಗಿತ್ತು. ಆದರೆ ಆಶ್ಚರ್ಯವೆಂದರೆ ನ್ಯೂಟ್ರಿನೋಗಳು ೬೦ನ್ಯಾನೊ ಸೆಕುಂಡುಗಳಷ್ಟು (ನ್ಯಾನೋ ಅಂದರೆ ಸೆಕುಂಡಿನ ಬಿಲಿಯನೇ ಒಂದು ಪಾಲು) ಮೊದಲೇ ಬಂದುವು. ಇದೀಗ  ವಿಜ್ಞಾನಿಗಳಿಗೆ ಗಡಿಬಿಡಿ – ಕರಾರುವಾಕ್ಕಾಗಿ ಇಷ್ಟೇ   ಹೊತ್ತಿಗೆ ಬರಬೇಕಾದ ಅಭ್ಯಾಗತ ಮೊದಲೆ ಬಂದರೆ ಆಗುವ ಗಡಿಬಿಡಿಯ ಹಾಗೆ! ಇದು ಕೇವಲ ಒಂದೆರದು ನ್ಯೂಟ್ರಿನೊಗಳ ಕಥೆಯಲ್ಲ. ಸುಮಾರು ೧೫,೦೦೦ ನ್ಯೂಟ್ರಿನೊಗಳು ಹೀಗೆ ಬೆಳಕಿಗಿಂತ ಅಧಿಕ ಅವಸರದಲ್ಲಿ ಗುರಿ ತಲುಪಿವೆ. ವಿಜ್ಞಾನಿಗಳು ಆರು ತಿಂಗಳ ಕಾಲ ಮತ್ತೆ ಮತ್ತೆ ಪ್ರಯೋಗ, ಗಣನೆ ಮಾಡಿ, ಅಂತಿಮವಾಗಿ ಫಲಿತಾಂಶವನ್ನು ವಿಜ್ಞಾನ ಪ್ರಪಂಚಕ್ಕೆ ಪ್ರಕಟಿಸಿ ಇತರ ವಿಜ್ಞಾನಿಗಳಿಂದ ವಿವರಣೆ ಕೋರಿದ್ದಾರೆ;  ಪ್ರಯೋಗ ಸಂದರ್ಭದಲ್ಲಿ ತಾವು ಎಸಗಿರುವ ತಪ್ಪನ್ನು ಸೂಚಿಸಲು ವಿನಂತಿಸಿದ್ದಾರೆ.

ಬೆಲಕಿನ ವೇಗವನ್ನು ಮೀರುವ ಕಣಗಳು ಇವೆಯೇ? ಇರಬಹುದೆಂದು ಪೌಲಿಯ ಗುರು ಸಾಮ್ಮರ್‌ಫೇಲ್ಡ್ (೧೮೬೮-೧೯೫೧) ಐನ್‌ಸ್ಟೈನರಿಗೆ ಸವಾಲು ಎಸೆದಿದ್ದರು. ಇವರ ಪರಿಕಲ್ಪನೆಗೆ ಸ್ಪಷ್ಟ ಸೈದ್ಧಾಂತಿಕ ರೂಪವನ್ನು ಭಾರತೀಯ ಭೌತವಿಜ್ಞಾನಿ ಮತ್ತು ಟೆಕ್ಸಾಸ್ ವಿವಿಯ ಪ್ರಾಧ್ಯಾಪಕ ಇಸಿಜಿ ಸುದರ್ಶನ್ (೧೯೩೧ -)  ನೀಡಿ ಅಂಥ ಕಣಗಳನ್ನು ಟೆಕಿಯಾನ್ ಎಂದು ಹೆಸರಿಸಿದರು. ಗ್ರೀಕ್ ಭಾಷೆಯಲ್ಲಿ ಟೆಕಿಯಾನ್ ಎಂದರೆ ಅಸಾಧಾರಣ ವೇಗ ಎಂಬ ಅರ್ಥವಿದೆಯಂತೆ. ಆದರೆ ಟೆಕಿಯಾನ್ ಬಗ್ಗೆ ವಿಜ್ಞಾನ ರಂಗ ಅಂಥ ಗಮನ ಕೊಡಲಿಲ್ಲ. ಸುದರ್ಶನ್ ಕ್ವಾಂಟಮ್ ಭೌತವಿಜ್ಞಾನದಲ್ಲಿ ಅಗಾಧ ಕೆಲಸ ಮಾಡಿದವರು. ಅವರ ಸಿದ್ಧಾಂತವನ್ನು ಅನುಸರಿಸಿದ ಇಬ್ಬರಿಗೆ ನೊಬೆಲ್ ಬಹುಮಾನ ಬಂತೆನ್ನುವುದನ್ನು ಗಮನಿಸಬೇಕು. ಇಂದಿನ ನ್ಯೂಟ್ರಿನೊ ಸಮಸ್ಯೆ ಟೆಕಿಯಾನುಗಳ ಬಗ್ಗೆ ಮತ್ತೆ ಆಸಕ್ತಿಯನ್ನು ಕುದುರಿಸಬಹುದು.

ಒಪೆರಾ ಪ್ರಯೋಗದ ವಕ್ತಾರ  ಎಂಟೊನಿಯೋ ಎರ್ಡಿಟೋ ಹೇಳುತ್ತಾರೆ “ನಾವು ಯಾವುದೋ ಚಿಕ್ಕ ತಪ್ಪು ಮಾಡಿರಬಹುದು. ಹಾಗಾಗಿ ಎಲ್ಲ ಕೋನಗಳಿಂದ ಪ್ರಯೋಗವನ್ನು ಮತ್ತೆ ಮತ್ತೆ ಪುನರಾವರ್ತಿಸಿ, ಮೂರು ವರ್ಷದ ಬಳಿಕವಷ್ಟೇ ಅಂತಿಮ ತೀರ್ಮಾನಕ್ಕೆ ಬಂದು ವಿಜ್ಞಾನ ಪ್ರಪಂಚಕ್ಕೆ ಫಲಿತಾಂಶ ಒಪ್ಪಿಸಿ, ಸೂಕ್ತ ವಿವರಣೆಯನ್ನು ಬಯಸಿದ್ದೇವೆ. ಇದೇ ಬಗೆಯ ಪ್ರಯೋಗವನ್ನು ಇನ್ನೊಂದೆಡೆ ಬೇರೆ ವಿಜ್ಞಾನಿಗಳ ತಂಡ ಮಾಡಿ ನಮ್ಮ ಫಲಿತಾಂಶವನ್ನು ಸ್ಥಿರೀಕರಿಸಿದಾಗಲಷ್ಟೇ ನಮಗೆ ನೆಮ್ಮದಿ. ಹಾಗೆ ಆಗುತ್ತದೆನ್ನುವ ಭರವಸೆ ನಮಗಿದೆ”.

ನ್ಯೂಟ್ರಿನೊಗಳು ಬೆಳಕಿನ ವೇಗವನ್ನು ಮೀರಿ ಧಾವಿಸುತ್ತಿರುವ ಫಲಿತಾಂಶ ಪ್ರಕಟವಾದದ್ದು ಕಳೆದ ಸಪ್ಟೆಂಬರ್ ೨೧ರಂದು. ಪರ, ವಿರೋಧ ಅಭಿಪ್ರಾಯಗಳ ನಡುವೆ ಇನ್ನಷ್ಟು ಎಚ್ಚರಿಕೆಯಿಂದ ಮತ್ತೊಮ್ಮೆ ಪ್ರಯೋಗವನ್ನು ಪುನರಾವರ್ತಿಸಿದ ವಿಜ್ಞಾನಿಗಳ ತಂಡ  ಕೆಲವು  ದಿನಗಳ ಹಿಂದೆ ಇನ್ನೊಂದು ಫಲಿತಾಂಶ ಪ್ರಕಟಿಸಿದೆ.  ಈ ಬಾರಿ ಕೂಡ ಫಲಿತಾಂಶ ಅದೇ – ಬೆಳಕಿನ ವೇಗಕ್ಕಿಂತ ತುಸು ಅಧಿಕ ವೇಗದಲ್ಲಿಯೇ ನ್ಯೂಟ್ರಿನೋಗಳು ಧಾವಿಸುತ್ತಿದ್ದಾವೆ.

ನ್ಯೂಟ್ರಿನೋಗಳು ಬೆಳಕಿಗಿಂತ ವೇಗದಲ್ಲಿ ಚಲಿಸುವುದಾದರೆ, ಆ ನ್ಯೂಟ್ರಿನೊಗಳು ಎಲೆಕ್ಟ್ರಾನ್ ಮತ್ತು ಪಾಸಿಟ್ರಾನ್ ಎಂಬ ಕಣಗಳಾಗಿ ಕ್ಷಯಿಸುವುದರೊಂದಿಗೆ ಸೆರೆಂಕೋವ್ ವಿಕಿರಣವನ್ನು ವಿಕಿರಿಸುತ್ತ  ಅವುಗಳ ವೇಗ ಹಂತಹಂತವಾಗಿ ಕಡಿಮೆಯಾಗುತ್ತ ಅಂತಿಮವಾಗಿ ಬೆಳಕಿನ ವೇಗಕ್ಕಿಂತ ಕಡಿಮೆಯಾಗಬೇಕೆಂದು ನೊಬೆಲ್ ವಿಜ್ಞಾನಿ ಗ್ಲಾಷೋ ಮತ್ತು ಕೊಹೆನ್ ತಮ್ಮ ಪ್ರಕಟಿತ ಲೇಖನದಲ್ಲಿ ಸೂಚಿಸಿದರು. ಅವರ ಸೂಚನೆಯನ್ನು ಕೂಡಲೇ ಅನುಸರಿಸಿದ ಒಪೆರಾ ತಂಡದ ಕೆಳ ಅಂತಸ್ತಿನಲ್ಲಿರುವ ಇನ್ನೊಂದು ವಿಜ್ಞಾನಿಗಳ ತಂಡ ICARUS ( Imaging Cosmic And Rare Underground Signal  ) ನ್ಯೂಟ್ರಿನೊಗಳಲ್ಲಿ ಶಕ್ತಿಯ ವ್ಯತ್ಯಾಸವಾಗಿದೆಯೇ ಎಂಬ ತಪಾಸಣೆ ಮಾಡಿತು. ಆದರೆ ಅವರಿಗೆ   ನ್ಯೂಟ್ರಿನೊಗಳ ಶಕ್ತಿಯಲ್ಲಿ ಯಾವ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಈ ಕುರಿತು ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ ಅಂತರ್ಜಾಲವೆಂಬ ಸಾಗರದಲ್ಲಿ.

ಹಾಗೆ ನೋಡಿದರೆ ನ್ಯೂಟ್ರಿನೊಗಳು ಬೆಳಕಿಗಿಂತ ತುಸು ಹೆಚ್ಚಿನ ವೇಗದಲ್ಲಿ ಚಲಿಸುತ್ತಿವೆಯೋ ಎಂಬ ಗುಮಾನಿ ೨೦೦೭ರಲ್ಲಿಯೇ ಬಂದಿತ್ತಂತೆ. ಇದು ನಡೆದದ್ದು ಅಮೇರಿಕದ ಫರ್ಮಿ ಪ್ರಯೋಗಾಲಯದಲ್ಲಿ. ಇಲಿನಾಯ್ಸ್ ಪ್ರಾಂತ್ಯದಲ್ಲಿರುವ  ಫರ್ಮಿ ಪ್ರಯೋಗಾಲಯದಿಂದ ಹೊರಟ ನ್ಯೂಟ್ರಿನೋಗಳ ದಂಡು  ೭೩೨ ಕಿಮೀ ದೂರ ಕ್ರಮಿಸಿ ಮಿನಿಸೋಟಾದಲ್ಲಿರುವ ಗಣಿಯಾಳದ ದರ್ಶಕವನ್ನು ತಲುಪುತ್ತವೆ. ನ್ಯೂಟ್ರಿನೊಗಳ ಆಂದೋಲನವನ್ನು ಯಶಸ್ವಿಯಾಗಿ ಪತ್ತೆ ಮಾಡಿದ ಆ ಪ್ರಯೋಗದ ಸಂದರ್ಭದಲ್ಲಿ ನ್ಯೂಟ್ರಿನೊ ವೇಗ ಬೆಳಕಿಗಿಂತ ತುಸು ಹೆಚ್ಚಿರುವುದನ್ನು ಗಮನಿಸಿದರೂ, ಆ ಕುರಿತು ಹೆಚ್ಚಿನ ಗಮನ ಕೊಡಲಿಲ್ಲವಂತೆ – ಪ್ರಾಯಶ: ತಮ್ಮ ಪ್ರಯೋಗದಲ್ಲಿ ಒಂದಿಷ್ಟು ತಪ್ಪುಗಳು ನುಸುಳಿರಬಹುದೆನ್ನುವ ಭಾವದಿಂದ. ಇದೀಗ ಆ ಹಳೆಯ ಫಲಿತಾಂಶಗಳ ದಫ್ತರವನ್ನು ಮತ್ತೆ ತೆರೆದಿದ್ದಾರೆ ; ಕೂಲಂಕಷವಾಗಿ ಪರಿಶೀಲನೆಗೆ ತೊಡಗಿದ್ದಾರೆ. ಇದರೊಂದಿಗೆ ಇನ್ನಷ್ಟು ನಿಖರ ಉಪಕರಣಗಳನ್ನು ಬಳಸಿಕೊಂಡು ನ್ಯೂಟ್ರಿನೊ ವೇಗವನ್ನು ಅಳೆಯಲು ಫರ್ಮಿ ಪ್ರಯೋಗಾಲಯದ ವಿಜ್ಞಾನಿಗಳು  ಸಜ್ಜಾಗುತ್ತಿದ್ದಾರೆ. ವರ್ಷದೊಳಗೆ  ನ್ಯೂಟ್ರಿನೋ ವೇಗದ ಕುರಿತು ಫರ್ಮಿ ಪ್ರಯೋಗಾಲಯ ತನ್ನ ಫಲಿತಾಂಶವನ್ನು ಘೋಷಿಸಲಿದೆ.

ಇತ್ತ ಜಪಾನಿನಲ್ಲಿ ಮತ್ತೊಂದು ತಂಡ ನ್ಯೂಟ್ರಿನೊ ವೇಗವನ್ನು ಅಳೆಯುವುದಕ್ಕೆ ಸಿದ್ಧವಾಗಿದೆ. ಜಪಾನಿನ ಹಿಡಾ ಪ್ರಾಂತ್ಯದಲ್ಲಿರುವ ಕಾಮಿಯೋಕಾ ಎಂಬ ಪರ್ವತದ ಕೆಳಗೆ ಒಂದು ಕಿಮೀ ಆಳದಲ್ಲಿ ನ್ಯೂಟ್ರಿನೋ ಆಧ್ಯಯನಕ್ಕೆ ಅತ್ಯಾಧುನಿಕ ಸಂಶೋಧನಕೇಂದ್ರವಿದೆ. ಇದನ್ನು ಬಳಸಿಕೊಂಡು ನ್ಯೂಟ್ರಿನೊ ವೇಗವನ್ನು  ಅಳೆಯಲು ಉದ್ಧೇಶಿಸಲಾಗಿದೆ.  ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ನ್ಯೂಟ್ರಿನೊ ಕುರಿತು ರೋಚಕ ಸುದ್ದಿಗಳು ಬರುವುದಂತೂ ನಿಜ.

ಪ್ರಬಲ ಗುರುತ್ವ ಕ್ಷೇತ್ರದ ಸನಿಹದಲ್ಲಿ ಬೆಳಕಿನ ಕಿರಣ ಬಾಗುತ್ತದೆಂದು ಐನ್‌ಸ್ಟೈನ್ ಸೈದ್ಧಾಂತಿಕವಾಗಿ ಹೇಳಿದರು ತಮ್ಮ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದಲ್ಲಿ (೧೯೧೫). ಇದು ನಿಜವೇ? ದ್ರವ್ಯರಾಶಿ ಇಲ್ಲದ ಫೋಟಾನುಗಳ ದಂಡು ಗುರುತ್ವ ಕ್ಷೇತ್ರದಲ್ಲಿ ಬಾಗುತ್ತದೆಯೇ? ಬೆಳಕಿನ ಈ ಬಾಗುವಿಕೆಯನ್ನು  ಸಂಪೂರ್ಣ ಸೂರ್ಯಗ್ರಹಣ ಸಂದರ್ಭದಲ್ಲಿ (೧೯೧೯) ಬ್ರಿಟಿಷ್ ಖಗೋಲವಿದ ಎಡಿಂಗ್ಟನ್ ಮತ್ತು ಸಂಗಡಿಗರು ದಕ್ಷಿಣ ಆಫ್ರಿಕಾದ ಪ್ರಿನ್ಸಿಪೀ ಎಂಬಲ್ಲಿ ಪ್ರಯೋಗ ಮೂಲಕ ದಾಖಲಿಸಿದರು. ಇದು ಸಿದ್ಧಾಂತಕ್ಕೆ ದಕ್ಕಿದ ಪ್ರಾಯೋಗಿಕ ಸಮರ್ಥನೆ. ಅಂದು ಪತ್ರಿಕೆಗಳು ಸಾರಿದುವು “ವಿಜ್ಞಾನದಲ್ಲಿ ರಕ್ತಪಾತವಿಲ್ಲದ ಕ್ರಾಂತಿ – ವಿಶ್ವದ ಬಗ್ಗೆ ಹೊಸ ಸಿದ್ಧಾಂತ – ನ್ಯೂಟನ್ ಪರಿಕಲ್ಪನೆಗಳು ಬುಡಮೇಲಾಗಿವೆ” ಇಂದು ಒಪೆರಾ ಪ್ರಯೋಗ ಫಲಿತಾಂಶಗಳು “ಐನ್‌ಸ್ಟೈನ್ ಪರಿಕಲ್ಪನೆಗಳು ಬುಡಮೇಲಾಗಿವೆ” ಎನ್ನುವ ಸೂಚನೆ ಕೊಡತೊಡಗಿವೆಯೇ?.

ಒಂದು ವೇಳೆ ವರ್ಷದೊಳಗೆ ಒಪೆರಾ ಪ್ರಯೋಗದ ಇಂದಿನ ಫಲಿತಾಂಶಗಳು ಬೇರೆ ಬೇರೆ ಪ್ರಯೋಗಾಲಯಗಳಿಂದ ಸ್ಥಿರೀಕೃತಗೊಂಡರೆ, ನ್ಯೂಟನ್ ಸಿದ್ಧಾಂತಕ್ಕೆ ಕ್ರಾಂತೀಕಾರೀ ಬದಲಾವಣೆಯನ್ನು ಅಂದು ಐನ್‌ಸ್ಟೈನ್ ಹೇಗೆ ತಂದರೋ ಅಂಥದೇ ಬದಲಾವಣೆಯನ್ನು ಇಂದು ಐನ್‌ಸ್ಟೈನ್  ಸಿದ್ಧಾಂತಕ್ಕೆ ರೂಪಿಸಬೇಕಾಗುತ್ತದೆ.  ಆದರೆ ಒಂದು ಮುಖ್ಯ ವ್ಯತ್ಯಾಸವೆಂದರೆ ಐನ್‌ಸ್ಟೈನ್ ನಿಸರ್ಗದ ಸತ್ಯದ ಬಗ್ಗೆ ಚಿಂತಿಸುತ್ತ ಸಿದ್ಧಾಂತವನ್ನು ಮೊದಲು ಕಟ್ಟಿದರು, ಆ ಸಿದ್ಧಾಂತದ ನಿರೀಕ್ಷೆಗಳನ್ನು ಮತ್ತೆ ಪ್ರಯೋಗಗಳು ಸಾಬೀತು ಮಾಡಿದುವು. ಆದರೆ ಇಲ್ಲಿ? ಪ್ರಯೋಗ ಫಲಿತಾಂಶಗಳು ಮೊದಲು. ಅವುಗಳಿಗೆ ಹೊಸ ವಿವರಣೆಗಳು, ಸಿದ್ಧಾಂತಗಳು ಮತ್ತೆ ರೂಪುಗೊಳ್ಳಬೇಕಾಗುತ್ತದೆ.

ಹಾಗೆಯೇ ಆಗಲಿ. ಓಹ್, ವಿಜ್ಞಾನದ ಮುನ್ನಡೆಗೆ ಮತ್ತು ಎಳೆಯ ಪ್ರತಿಭೆಯ ಕನಸುಗಳಿಗೆ ಆಗ ಅದೆಂಥ ಅದ್ಭುತ ಅವಕಾಶ ತೆರೆದುಕೊಳ್ಳುತ್ತದೆ!

Categories: ಅವಿಭಾಗೀಕೃತ
 1. ಜನವರಿ 2, 2012 ರಲ್ಲಿ 8:36 ಅಪರಾಹ್ನ

  ಅತ್ಯಂತ ಸುಲಭವಾಗಿ, ಸುಂದರವಾಗಿ ವಿಷಯವನ್ನು ತಿಳಿಸಿದ್ದೀರಿ. ಧನ್ಯವಾದ

 2. ಜಿ.ಎಸ್.ಶ್ರೀನಾಥ
  ಅಕ್ಟೋಬರ್ 5, 2012 ರಲ್ಲಿ 9:23 ಫೂರ್ವಾಹ್ನ

  ಲೇಖನ ತುಂಬಾ ಚೆನ್ನಾಗಿದೆ, ಧನ್ಯವಾದಗಳು

 3. venu
  ಅಕ್ಟೋಬರ್ 24, 2013 ರಲ್ಲಿ 3:18 ಅಪರಾಹ್ನ

  Thanks For scientific article in Kannada great work…….

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: