ಬಂದಿದೆ ಸೂಪರ್ನೋವಾ
ನಾವಿರುವ ವಿಶ್ವ ಅದ್ಭುತ. ಈ ಅದ್ಭುತ ವಿಶ್ವವನ್ನು ಇನ್ನಷ್ಟು ಅದ್ಭುತವಾಗಿ ಡಿವಿ ಗುಂಡಪ್ಪನವರು ವರ್ಣಿಸಿದ್ದಾರೆ
ಏನು ಭೈರವ ಲೀಲೆ ಈ ವಿಶ್ವವಿಭ್ರಮಣೆ
ಏನು ಭೂತಗ್ರಾಮ ನರ್ತನೋನ್ಮಾದ
ಏನಗ್ನಿಗೋಳಗಳು ಏನಂತರಾಳಗಳು
ಏನು ವಿಸ್ಮಯ ಸೃಷ್ಟಿ – ಮಂಕುತಿಮ್ಮ
ಇಂಥ ಅದ್ಭುತ ವಿಶ್ವದ ವಿಸ್ಮಯ ಸೂಪರ್ನೋವಾ. ಈ ಕುರಿತು ಬರೆದ ಬರಹ ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿದೆ. ದಾಖಲೆಗಾಗಿ ಇಲ್ಲಿ ಇದೀಗ ನನ್ನ ತಾಣದಲ್ಲಿ ಏರಿಸಿದ್ದೇನೆ. ಕೆಂಡ ಸಂಪಿಗೆಯಲ್ಲಿ ಆ ಲೇಖನದ ಕುರಿತು ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ. ಸೂಪರ್ನೋವಾ ಕುರಿತು ಲೇಖನ ಅಗತ್ಯವಿರಲ್ಲ – ಅದಕ್ಕಿಂತ ಮುಖ್ಯ – ಬೇರೆ ದೈನಂದಿನ ಸಮಸ್ಯೆಗಳಿವೆ. ಆ ಕುರಿತು ಹೇಳಬಹುದಾಗಿತ್ತು, ವಿಜ್ಞಾನದ ಕರಾಳ ಮುಖದ ಚರ್ಚೆ ಇಂದಿನ ತುರ್ತು – ಇತ್ಯಾದಿ. ನೀವು ಒಮ್ಮೆ ಅಲ್ಲಿಗೆ ಹೋಗಿ ನಿಮ್ಮ ಪ್ರತಿಕ್ರಿಯೆ ಸೇರಿಸಬಹುದು. ಅಥವಾ ಇಲ್ಲಿಯೇ ದಾಖಲಿಸಬಹುದು. ಬನ್ನಿ ಸೂಪರ್ನೋವಾದ ಕುರಿತು ಒಂದಷ್ಟು ವಿಷಯ – ವಿವರ ಹಂಚಿಕೊಳ್ಳೋಣ
ಹೊಸ ಸುದ್ದಿ
ಖಗೋಳಪ್ರಿಯರಿಗೆ ಇದೀಗ ಸಂಭ್ರಮ. ಅವಸಾನದ ಆಕ್ರಂದನವೋ ಎಂಬಂತೆ ನಕ್ಷತ್ರವೊಂದು ಅಸಾಧಾರಣ ಬಗೆಯಲ್ಲಿ ಆಸ್ಫೋಟಿಸುವ ಅಪರೂಪದ ವಿದ್ಯಮಾನವಾದ ಸೂಪರ್ನೋವಾ ಕಾಣಿಸುತ್ತಿದೆಯೆಂಬ ಸುದ್ದಿ ಬಂದಿದೆ.
ಬರಿಗಣ್ಣಿಗೆ ಬಿಡಿ, ಅತ್ಯಂತ ಪ್ರಬಲ ದೂರದರ್ಶಕಕ್ಕೂ ನಿಲುಕದಷ್ಟು ದೂರದಲ್ಲಿರುವ ಬ್ರಹ್ಮಾಂಡದಾಳದಲ್ಲಿ ನಕ್ಷತ್ರವೊಂದು ಆಸ್ಫೋಟಿಸಿದಾಗ ಅದರ ಉಜ್ವಲತೆ ಅಥವಾ ಕಾಂತಿ ಮಾಮೂಲಿಗಿಂತ ಹಲವು ಲಕ್ಷ ಪಟ್ಟು ಹೆಚ್ಚುತ್ತದೆ. ಅಲ್ಲಿಂದ ಹೊರಟ ಬೆಳಕಿನ ಕಂಬಿ ಅನಂತ ವ್ಯೋಮವನ್ನು ದಾಟಿ, ಇಳೆಯ ದಟ್ಟ ವಾಯುಮಂಡಲವನ್ನು ತೂರಿ ನಮ್ಮ ಕಣ್ಣು ಸೇರಿದಾಗ ರಾತ್ರೆಯ ಆಗಸದಲ್ಲಿ ಚೆಲ್ಲಿ ಹೋಗಿರುವ ಅಸಂಖ್ಯ ತಾರೆಗಳ ನಡುವೆ ಹೊಸದೊಂದು ಬೆಳಕಿನ ಮಚ್ಚೆ ಗೋಚರಿಸುತ್ತದೆ. ಅಂಥದೊಂದು ಸೂಪರ್ನೋವಾ ಇದೀಗ ಕಾಣಿಸತೊಡಗಿದೆ. ಆದರೆ ಬರಿಗಣ್ಣಿಗೆ ಇದು ಗೋಚರಿಸದು. ದುರ್ಬೀನು ಅಥವಾ ದೂರದರ್ಶಕ ಅನಿವಾರ್ಯ.
ದೂರದರ್ಶಕಗಳಿಂದ ಖಗೋಳವಿದರು ಆಕಾಶವನ್ನು ನಿರಂತರ ಗಮನಿಸುತ್ತಲೇ ಇರುತ್ತಾರೆ – ನಿತ್ಯ ಚಿರಂತನವೆಂಬಂತಿರುವ ಆಕಾಶದಲ್ಲಿ ಹೊಸದೇನಾದರೂ ಗೋಚರಿಸುತ್ತದೆಯೇ ಎಂಬ ಕುತೂಹಲ ಅವರಿಗೆ. ನಿಸರ್ಗ ನಿರಾಸೆ ಮಾಡಲಿಲ್ಲ. ಅಮೇರಿಕದ ಲಾರೆನ್ಸ್ ಬರ್ಕ್ಲೀ ಸಂಶೋಧನಾಲಯದ ಖಗೋಳ ವಿಜ್ಞಾನಿಗಳು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕಾಣಿಸಿಕೊಡ ಸೂಪರ್ನೋವಾಗಳಲ್ಲಿಯೇ ಅತ್ಯುಜ್ವಲವಾದದ್ದನ್ನು ಪತ್ತೆ ಮಾಡಿದ್ದಾರೆ. ಈ ಸೂಪರ್ನೋವಾ ಇರುವುದು ಸಪ್ತರ್ಷಿ ಮಂಡಲದ ದಿಶೆಯಲ್ಲಿ.
ಆಕಾಶ ಕಾಲ ಮತ್ತು ಎಲ್ಲ ದ್ರವ್ಯಗಳನ್ನು ಒಳಗೊಂಡ ಈ ವಿಶ್ವ ಅದೆಷ್ಟು ಅಗಾಧವೆಂದರೆ ಅಲ್ಲಿ ಸುಮಾರು ಕೋಟಿ ಕೋಟಿ ಬ್ರಹ್ಮಾಂಡಗಳಿವೆ ಮತ್ತು ಪ್ರತಿಯೊಂದು ಬ್ರಹ್ಮಾಂಡಲ್ಲಿಯೂ ಮತ್ತೆ ಹಲವು ಸಾವಿರ ಕೋಟಿ ನಕ್ಷತ್ರಗಳಿವೆ. ಅಂಥ ಬ್ರಹ್ಮಾಂಡಗಳ ಸಮುಚ್ಚಯಗಳಲ್ಲಿ ನಾವಿರುವ ಬ್ರಹ್ಮಾಂಡವೇ ಆಕಾಶಗಂಗೆ (Galaxy). ಆಕಾಶಗಂಗೆಯಲ್ಲಿ ಯಾದೃಚ್ಛಿಕವಾಗಿ ಹರಡಿ ಹೋಗಿರುವ ನಕ್ಷತ್ರಗಳಲ್ಲಿ ನಮಗೆ ಗೋಚರಿಸುತ್ತವೆ ಬಗೆ ಬಗೆಯ ವಿನ್ಯಾಸಗಳು. ಕಂಡ ವಿನ್ಯಾಸಗಳಲ್ಲಿ ಹುಟ್ಟಿಕೊಂಡಿವೆ ಕಥೆಗಳು, ಐತಿಹ್ಯಗಳು ಸಂಸ್ಕೃತಿ ಮತ್ತು ಇತಿಹಾಸದ ಭಾಗಗಳಾಗಿ. ಸಪ್ತರ್ಷಿ ಮಂಡಲ ಅಂಥದೊಂದು ನಕ್ಷತ್ರ ಪುಂಜ. ಉತ್ತರಾಕಾಶದಲ್ಲಿ ಗೋಚರಿಸುವ ಈ ನಕ್ಷತ್ರ ಪುಂಜಗಳಲ್ಲಿರುವ ಏಳು ನಕ್ಷತ್ರಗಳು – ಅತ್ರಿ, ಪುಲಸ್ತ್ಯ, ಪುಲಹ, ಕ್ರತು, ಅಂಗೀರಸ್ಸು ಮರೀಚಿ, ವಸಿಷ್ಠ – ಪ್ರಶ್ನಾರ್ಥಕ ಚಿಹ್ನೆಯಾಗಿ ಕಾಣಿಸುತ್ತವೆ. ಇವೆಲ್ಲವೂ ನಮ್ಮ ಬ್ರಹ್ಮಾಂಡದ ನಕ್ಷತ್ರಗಳು – ಎಂದೇ ಬರಿಗಣ್ಣಿಗೆ ಗೋಚರಿಸುತ್ತವೆ. ಹೊಸದಾಗಿ ಕಂಡ ಸೂಪರ್ನೋವಾ ಈ ದಿಶೆಯಲ್ಲಿಯೇ ಇದೆ – ಹೊರತು ನಮ್ಮ ಬ್ರಹ್ಮಾಂಡಕ್ಕೆ ಸೇರಿದ್ದಲ್ಲ.
ಸಪ್ತರ್ಷಿ ಮಂಡಲದಲ್ಲಿ ಮೊದಲ ನಾಲ್ಕು ನಕ್ಷತ್ರಗಳು ದೊಡ್ದ ತ್ರಾಪಿಜ್ಯವನ್ನು ನಿರ್ಮಿಸಿದರೆ, ಉಳಿದವು ಕೆಳಭಾಗದಲ್ಲಿ ಅದರ ಕೈ ಎನ್ನುವಂತೆ ಚಾಚಿಕೊಂಡಿದೆ. ಈ ಕೈಯ ಕೆಳ ಭಾಗವನ್ನು ನಿಟ್ಟಿಸಿದರೆ ಅಲ್ಲಿ ಸೂಪರ್ನೋವಾ ನಕ್ಷತ್ರ ಕಾಣಿಸುತ್ತದೆಂದು ಖಗೋಳವಿದರು ತಿಳಿಸಿದ್ದಾರೆ.
PTF 11 ಎಂದು ಹೆಸರಿಸಿದ ಈ ಸೂಪರ್ನೋವಾ ಇರುವುದು ಪಿನ್ವ್ಹೀಲ್ ಅಥವಾ ಗಾಲಿ ಬ್ರಹ್ಮಾಂಡದಲ್ಲಿ. ನೋಡುವುದಕ್ಕೆ ಸುರುಳಿಯಾಕಾರದ ಈ ಬ್ರಹ್ಮಾಂಡ ನಮ್ಮಿಂದ ೨೧ ಮಿಲಿಯ ಜ್ಯೋತಿರ್ವರ್ಷ ದೂರದಲ್ಲಿದೆ. ಸೆಕುಂಡಿಗೆ ಮೂರುಲಕ್ಷ ಕಿಮೀನಂತೆ ಧಾವಿಸುವ ಬೆಳಕಿನ ಕಿರಣ ಒಂದು ವರ್ಷದಲ್ಲಿ ಕ್ರಮಿಸುವ ಒಂಬತ್ತೂವರೆ ಸಾವಿರ ಬಿಲಿಯ ಕಿಮೀ ದೂರವೇ ಜ್ಯೋತಿರ್ವರ್ಷ.
ರಾತ್ರೆಯ ಆಕಾಶದಲ್ಲಿ ಗೋಚರಿಸುವ ತಾರೆಗಳ ಅದ್ಭುತ ಚಿತ್ರ ವಾಸ್ತವವಾಗಿ ಭೂತಕಾಲದ್ದು. ಅವೆಲ್ಲವೂ ನಮ್ಮಿಂದ ಹಲವು ಲಕ್ಷ ಕಿಮೀ ದೂರದಲ್ಲಿವೆ. ಅಲ್ಲಿಂದ ಹೊರಟ ಬೆಳಕಿನ ಕಿರಣ ಸೆಕುಂಡಿಗೆ ಮೂರುಲಕ್ಷ ಕಿಮೀನಂತೆ ಸಾಗುತ್ತ ಒಂದು ವರ್ಷದಲ್ಲಿ ಸುಮಾರು ಒಂಬತ್ತೂವರೆ ಸಾವಿರ ಬಿಲಿಯ ಕಿಮೀ ಕ್ರಮಿಸಿ (ಜ್ಯೋತಿರ್ವರ್ಷ) ನಮ್ಮ ಕಣ್ಣು ಸೇರಿದಾಗ ಆ ನಕ್ಷತ್ರಗಳು ನಮಗೆ ಗೋಚರಿಸುತ್ತವೆ. ವಾಸ್ತವವಾಗಿ ಈಗ ನಮಗೆ ಕಾಣಿಸುವ ಸೂರ್ಯ ಎಂಟು ನಿಮಿಷಗಳಷ್ಟು ಹಿಂದಿನದು.
ಅಂದರೆ PTF 11 ಸೂಪರ್ನೋವಾ ಸಂಭವಿಸಿದ್ದು ಇಂದು ನಿನ್ನೆಯಲ್ಲ. ೨೧ ಮಿಲಿಯ ಅಥವಾ ೨೧೦ ಲಕ್ಷ ವರ್ಷಗಳ ಹಿಂದೆ. ಅಂದು ಸಂಭವಿಸಿದ ನಕ್ಷತ್ರ ಆಸ್ಫೋಟ ಇಂದು ಅನಾವರಣಗೊಳ್ಳುತ್ತಿದೆ.
ಅತಿಥಿ ನಕ್ಷತ್ರ
ಕ್ರಿಸ್ತಪೂರ್ವ ಎರಡನೇ ಶತಮಾನ. ಗ್ರಿಕ್ ಖಗೋಳವಿದ ಹಿಪ್ಪಾರ್ಕಸ್ (ಕ್ರಿ.ಪೂ ೧೪೬ -೧೨೭) ಅದೊಂದು ದಿನ ಬದಲಾಗದ ಆಕಾಶದಲ್ಲಿ ಪ್ರಕಾಶಮಾನವಾದ ಬೆಳಕಿನ ಪುಂಜವನ್ನು ಕಂಡ. ಹಿಪ್ಪಾರ್ಕಸ್ ಅಂದು ನೋಡಿದ್ದು ವಾಸ್ತವವಾಗಿ ನಕ್ಷತ್ರದ ಮಹಾಸ್ಪೋಟವನ್ನು – ಅಂದರೆ ಸೂಪರ್ನೋವಾವನ್ನು. ಹಟಾತ್ತನೆ ಅನಾವರಣಗೊಂಡ ಈ ಹೊಸ ನಕ್ಷತ್ರವನ್ನು “ಅತಿಥಿ ನಕ್ಷತ್ರ” ಎಂದು ಕರೆದ. ಮುಂದಿನ ದಿನಗಳಲ್ಲಿ ಚೀನಾ, ಅರೇಬಿಯಾ, ಈಜಿಪ್ಟ್ ಮತ್ತು ಯುರೋಪಿನ ಕೆಲವು ದೇಶಗಳಲ್ಲಿ ಕೂಡ ಇಂಥ ಅತಿಥಿ ತಾರೆಗಳನ್ನು ಗಮನಿಸಿದ್ದಕ್ಕೆ ದಾಖಲೆಗಳಿವೆ.
ಕ್ರಿಸ್ತಶಕ ೧೦೫೪ರಲ್ಲಿ ವೃಷಭ ರಾಶಿಯಲ್ಲಿ ಸಂಭವಿಸಿದ ಸೂಪರ್ನೋವಾ ಆಸ್ಪೋಟದ ಬಳಿಕ ಅಳಿದುಳಿದದ್ದು ನಿಹಾರಿಕೆಯಾಯಿತು. ಯದ್ವಾತದ್ವ ಚಾಚಿಕೊಂಡ ಅಂಚುಗಳನ್ನು ಹೊಂದಿರುವ ಈ ನಿಹಾರಿಕೆ ಏಡಿಯ ನೆನಪನ್ನು ತರುತ್ತದೆ. ಹಾಗಾಗಿ ಇದು ಕ್ರ್ಯಾಬ್ ನೆಬ್ಯೂಲಾ (ಏಡಿ ನಿಹಾರಿಕೆ) ಎಂದೇ ಸುಪ್ರಸಿಧ್ಧವಾಯಿತು.
೧೫೭೨. ಡೆನ್ಮಾರ್ಕಿನಲ್ಲಿ ೨೬ರ ತರುಣ – ಟೈಕೋ ಬ್ರಾಹೆ (೧೫೪೬-೧೬೦೧) ತನ್ನ ಚಿಕ್ಕಪ್ಪನ ರಾಸಾಯನಿಕ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳುವಾಗ ರಾತ್ರೆ ಗಂಟೆ ಹತ್ತಾಗಿತ್ತು. ನಕ್ಷತ್ರ ಸೌಂದರ್ಯವನ್ನು ಸವಿಯುವುದು ಟೈಕೋನಿಗೆ ಬಲು ಆಸಕ್ತಿಯ ವಿಷಯ. ಉತ್ತರಾಕಾಶದಲ್ಲಿ ಇಂಗ್ಲೀಷಿನ ಒ ಆಕ್ಷರ ವಿನ್ಯಾಸವನ್ನುಂಟು ಮಾಡುವ ಐದು ಪ್ರಕಾಶಮಾನ ನಕ್ಷತ್ರಗಳುಳ್ಳ ಕ್ಯಾಸಿಯೋಪಿಯಾ (ಕುಂತೀ) ನಕ್ಷತ್ರಪುಂಜದಲ್ಲಿ ಆತ ಹೊಸದೊಂದು ನಕ್ಷತ್ರವನ್ನು ಕಂಡ. ಅರೇ, ಇದೆಲ್ಲಿಂದ ಬಂತು? ಆತ ಬರೆಯುತ್ತಾನೆ ದಿಗ್ಭ್ರಮೆಗೊಂಡೆ.ಅಚ್ಚರಿಯಿಂದ ಅಚಲನಾಗಿ ನಿಂತೆ – ಆ ಬೆಳಕಿನ ಪುಂಜವನ್ನೆ ನಿಟ್ಟಿಸುತ್ತ. ಅದು ಕೂಡ ನನ್ನನ್ನೇ ನಿಟ್ಟಿಸುವಂತೆ ನನಗನ್ನಿಸುತ್ತಿತ್ತು! ನನಗೆ ಮನವರಿಕೆಯಾಯಿತು – ಅದೊಂದು ಹೊಸ ನಕ್ಷತ್ರ. ಆದರೆ ನಂಬುವುದಾದರೂ ಹೇಗೆ?
ಸುಮಾರು ಒಂದೂವರೆ ವರ್ಷ ಪ್ರಕಾಶಮಾನವಾಗಿ ಬೆಳಗಿದ ಈ ಅತಿಥಿ ತಾರೆಯನ್ನು ನಿತ್ಯ ವೀಕ್ಷಿಸಿದ ಟೈಕೋ, ಒಂದು ಚಿಕ್ಕ ಪುಸ್ತಕವನ್ನೇ ಪ್ರಕಟಿಸಿದ. ಲ್ಯಾಟಿನ್ ಭಾಷೆಯಲ್ಲಿದ್ದ ಅದರ ಹೆಸರು “De Nova Stella” ಅಂದರೆ ನವ ತಾರೆಯ ಬಗ್ಗೆ. ಹಟಾತ್ತನೆ ಗೋಚರಿಸಿ ಕೆಲವು ತಿಂಗಳುಗಳ ಕಾಲ ಪ್ರಕಾಶಮಾನವಾಗಿ ಗೋಚರಿಸಿ ಕಣ್ಮರೆಯಾಗುವ ಇಂಥ ನವ ನಕ್ಷತ್ರಕ್ಕೆ ನೋವಾ (Nova) ಎಂಬ ಹೆಸರು ರೂಢಿಗೆ ಬಂತು.
೧೬೦೪ರಲ್ಲಿ ಇನ್ನೊಂದು ನೋವಾ ಅತ್ಯುಜ್ವಲವಾಗಿ ಬೆಳಗಿತು – ಕಾರಿರುಳಿನಲ್ಲೂ ಅದರ ಬೆಳಕಿನಲ್ಲಿ ವಸ್ತುಗಳು ಮಸುಕಾಗಿ ಗೋಚರಿಸುವಷ್ಟು. ಖಗೋಳವಿದ ಯೊಹಾನ್ ಕೆಪ್ಲರ್ (೧೫೭೧-೧೬೩೦)ಈ ನೋವಾ ತಾರೆಯನ್ನು ಕೂಲಂಕಷವಾಗಿ ಅಧ್ಯಯನಿಸಿದ.
ನೋವಾಗಳಲ್ಲಿ ಕೆಲವೇ ಕೆಲವು ಮಹೋಜ್ವಲ. ಹೆಚ್ಚಿನವು ಮಸುಕು. ಈ ಬಗ್ಗೆ ವಿಸ್ತ್ರತ ಅಧ್ಯಯನವನ್ನು ಮಾಡಿದ ಸ್ವಿಜರ್ಲೆಂಡಿನ ಖಗೋಳ ವಿಜ್ಞಾನಿಗಳಾದ ಫ್ರಿಟ್ಜ್ ಝ್ವಿಕ್ಕಿ (೧೮೯೮-೧೯೭೪) ಮತ್ತು ಜರ್ಮನಿಯ ವಾಲ್ಟರ್ ಬಾಡೆ (೧೮೩೯-೧೯೬೦), ಮಹೋಜ್ವಲ ನೋವಾಗಳನ್ನು ಸೂಪರ್ನೋವಾ ಎಂದು ಕರೆದರು. ಹಿಪ್ಪಾರ್ಕಸ್, ಟೈಕೋ ಮತ್ತು ಕೆಪ್ಲರ್ ವೀಕ್ಷಿಸಿದ್ದು ಸೂಪರ್ನೋವಾಗಳನ್ನು. ಇವು ಸಂಭವಿಸಿದ್ದು ನಮ್ಮ ಬ್ರಹ್ಮಾಂಡದಲ್ಲಿಯೇ.
ನಮ್ಮ ಬ್ರಹ್ಮಾಂಡದಲ್ಲಿಯೇ ಸೂಪರ್ನೋವಾ ಆಸ್ಫೋಟದ ಸಂಭಾವ್ಯತೆ ತೀರ ಸನಿಹದಲ್ಲಿದೆಯೇ? ಹೌದು ಅನ್ನುತ್ತಿದ್ದಾರೆ ಖಗೋಳವಿಜ್ಞಾನಿಗಳು. ಮಹಾವ್ಯಾಧ (Orion) ನಕ್ಷತ್ರ ಪುಂಜದ ಆರ್ದ್ರಾ ನಕ್ಷತ್ರ ಸೂಪರ್ನೋವಾ ಹಂತದಲ್ಲಿದೆಯಂತೆ. ನೀವು ನೋಡಿರಬಹುದು ಮಹಾವ್ಯಾಧನನ್ನು. ಅದು ತ್ರಾಪಿಜ್ಯಾಕಾರದ ನಕ್ಷತ್ರ ಪುಂಜ. ತ್ರಾಪಿಜ್ಯದ ನಾಲ್ಕು ಭುಜಗಳ ಕೊನೆಗಳಲ್ಲಿ ನಕ್ಷತ್ರಗಳು. ನಡುವೆ ಮೂರು ನಕ್ಷತ್ರಗಳು – ಈ ಮೂರು ನಕ್ಷತ್ರಗಳ ಮಧ್ಯೆ – ದೂರದರ್ಶಕಕ್ಕಷ್ಟೇ ಗೋಚರಿಸುವ ನಿಹಾರಿಕೆ. ನಮ್ಮ ಪೂರ್ವೀಕರು ಈ ನಕ್ಷತ್ರಪುಂಜದಲ್ಲಿ ಒಬ್ಬ ನುರಿತ ಬೇಟೆಗಾರನನ್ನು ಕಂಡರು. ವೀಕ್ಷಕನನ್ನು ಥಟ್ಟನೆ ಸೆಳೆಯುವ ಸುಂದರ ವಿನ್ಯಾಸದ ಈ ನಕ್ಷತ್ರ ಪುಂಜ ಸುಪ್ರಸಿದ್ಧ.
ಮಹಾವ್ಯಾಧನ ನಾಲ್ಕು ನಕ್ಷತ್ರಗಳಲ್ಲಿ ಎಡ ಬಾಹುವಿನಲ್ಲಿದೆ ಕೆಂಬಣ್ಣದಿಂದ ಹೊಳೆವ ಆರ್ದ್ರಾ ((Betelgeuse). ೨೦೧೨ರಲ್ಲಿ ಈ ನಕ್ಷತ್ರವು ಸೂಪರ್ನೋವಾ ಆಸ್ಫೋಟನೆಯಾಗುವ ಸಾಧ್ಯತೆಯನ್ನು ಕೆಲವು ಖಗೋಳವಿದರು ಊಹಿಸಿದ್ದಾರೆ. ಅಂದು ಅದು ಎಷ್ಟು ಉಜ್ವಲವಾಗುತ್ತದೆಂದರೆ ಹಗಲಿನಲ್ಲಿಯೂ ಗೊಚರಿಸುತ್ತದಂತೆ. ಹಾಗಿದ್ದರೆ ನಮಗೆ ಎರಡು ಸೂರ್ಯರು! ಆದರೆ ಹಾಗಾಗುತ್ತದೆಯೇ? – ನಿಖರವಾಗಿ ಹೇಳುವುದಕ್ಕೆ ಪುರಾವೆ ಸಾಕಾಗದು.
ಸುಮಾರು ೧೩೦೦ ಖಗೋಳಮಾನ (ಒಂದು ಖಗೋಳಮಾನವೆಂದರೆ ಭೂಮಿ-ಸೂರ್ಯರ ನಡುವಣ ದೂರ, ೧೫೦ಮಿಲಿಯ ಕಿಮೀ) ವ್ಯಾಸದ ದೈತ್ಯ ನಕ್ಷತ್ರವಾದ ಆರ್ದ್ರಾವನ್ನು ಸೂರ್ಯನಿರುವಲ್ಲಿ ಪ್ರತಿಷ್ಠಾಪಿಸಿದರೆ ಗುರುಗ್ರಹದ ತನಕ ಚಾಚಿಕೊಳ್ಳುತ್ತದೆ. ಉಜ್ವಲ ನಕ್ಷತ್ರಗಳಲ್ಲಿ ಇದಕ್ಕಿದೆ ಒಂಬತ್ತನೇ ಸ್ಥಾನ. ನಮ್ಮಿಂದ ಸುಮಾರು ೬೪೦ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವುದರಿಂದ ಇಂದು ನಮಗೆ ಗೋಚರಿಸುವ ಆರ್ದ್ರಾ ವಾಸ್ತವಾಗಿ ೬೪೦ ವರ್ಷಗಳಷ್ಟು ಹಿಂದಿನದು. ಅಂದರೆ ಅಲ್ಲಿ ಈಗಾಗಲೇ ಆರ್ದ್ರಾ ಸ್ಫೋಟವಾಗಿ ಹೋಗಿರಬಹುದು. ಅಂದು ಈ ಭೂಮಿಯಲ್ಲಿ ವಿದ್ಯುತ್ತಿರಲಿಲ್ಲ. ಖಗೋಳ ವಿಜ್ಞಾನ ಅಂಬೆಗಾಲಿಕ್ಕುತ್ತಿದ್ದ ಆರಂಭದ ದಿನಗಳು. ನ್ಯೂಟನ್ ಇನ್ನೂ ಹುಟ್ಟಿರಲಿಲ್ಲ!
ಆರ್ದ್ರಾ ನಕ್ಷತ್ರ ಹದಿನೈದು ವರ್ಷಗಳಲ್ಲಿ ಹದಿನೈದು ಶೇಕಡಾದಷ್ಟು ಕುಗ್ಗಿರುವುದನ್ನು ಅಮೇರಿಕದ ಬರ್ಕ್ಲೀ ವಿಶ್ವವಿದ್ಯಾಲಯದಖಗೋಳ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ಕುಗ್ಗುವಿಕೆ ಹೀಗೆಯೇ ಮುಂದುವರಿಯುತ್ತಿದೆಯೇ ? ಅಥವಾ ಪುನ: ಮೊದಲಿನ ಗಾತ್ರಕ್ಕೆ ಬರಬಹುದೇ? “ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ” – ಎನ್ನುತ್ತಾರೆ ಖಭೌತ ವಿಜ್ಞಾನಿ ಚಾರ್ಲ್ಸ್‌ಟೌನ್ಸ್. ಚಾರ್ಲ್ಸ್‌ಟೌನ್ಸ್ ಇನ್ನೂ ವಿಜ್ಞಾನದಲ್ಲಿ ಆಸಕ್ತಿಯನ್ನು ಉಳಿಸಿಕೊಂಡಿರುವುದೇ ವಿಶೇಷ. ಲೇಸರ್ ಆವಿಷ್ಕಾರದಲ್ಲಿ ಮಹತ್ತರ ಪಾತ್ರ ವಹಿಸಿದ, ೯೪ವರ್ಷ ಪ್ರಾಯದ ಈ ಹಿರಿಯನಿಗೆ ಇನ್ನೂ ಇಪ್ಪತ್ತನಾಲ್ಕರ ಉತ್ಸಾಹ. ಆರ್ದ್ರಾ ನಕ್ಷತ್ರದ ಕುರಿತು ವಿಶೇಷ ಸಂಶೋಧನೆಯಲ್ಲಿ ಅವರು ನಿರತರಾಗಿದ್ದಾರೆ.
ಮಹಾಸ್ಫೋಟ
ಈ ಅಗಾಧ ವಿಶ್ವದ ಮೂಲದ್ರವ್ಯ – ಹ್ಯೆಡ್ರೋಜನ್ ಅಥವಾ ಜಲಜನಕ. ವಿಶ್ವದ ಅಸೀಮ ವಿಸ್ತಾರದಲ್ಲಿ ಹೈಡ್ರೋಜನ್ ಸಮಾನವಾಗಿ ಪಸರಿಸಿಲ್ಲ. ಬಾನಿನಲ್ಲಿ ಮೋಡಗಳು ಒಟ್ಟೈಸಿದ೦ತೆ ಕೆಲವೆಡೆ ಹೆಚ್ಚು ದಟ್ಟೈಸಿದೆ. ಇ೦ಥ ಹೈಡ್ರೋಜನ್ ಅನಿಲ ಮೋಡಕ್ಕೆ ನಿಹಾರಿಕೆ (ಓebuಟಚಿ) ಎನ್ನುತ್ತಾರೆ. ಬರಿಗಣ್ಣಿಗೆ ಕೆಲವು ನಿಹಾರಿಕೆಗಳು ಮ೦ದಪ್ರಕಾಶದ ಮಚ್ಚೆಗಳಾಗಿ ಗೋಚರಿಸುತ್ತವೆ. ನಿಹಾರಿಕೆಯಲ್ಲಿ ದಟ್ಟೈಸಿದ ಹೈಡ್ರೋಜನ್ ಅನಿಲ ರಾಶಿಯು ತನ್ನ ಅಗಾಧ ದ್ರವ್ಯರಾಶಿಯ ಕಾರಣದಿ೦ದ ಗುರುತ್ವ ಬಲದ ಒತ್ತಡಕ್ಕೆ ಸಿಲುಕಿ ಕುಗ್ಗಲಾರ೦ಭಿಸುತ್ತದೆ. ಪರಿಣಾಮವಾಗಿ ಅದರ ಉಷ್ಣತೆ ಏರುತ್ತದೆ. ಒಂದು ಹಂತದಲ್ಲಿ ಹೈಡ್ರೋಜನ್ ಪರಮಾಣುಗಳ ಬೀಜ ಅಥವಾ ನ್ಯೂಕ್ಲಿಯಸ್ಸುಗಳು ಪರಸ್ಪರ ಡಿಕ್ಕಿಯಾಗಿ ಒಟ್ಟಾಗುವ ” ಬೈಜಿಕ ಸ೦ಲಯನ ಕ್ರಿಯೆ ” (Nuclear Fusion Reaction) ಆರಂಭವಾಗುತ್ತದೆ.
ಸೆಕು೦ಡಿಗೆ ಹಲವು ಕೋಟಿ ಟನ್ ಪ್ರಮಾಣದಲ್ಲಿ ಹ್ಯೆಡ್ರೋಜನ್ ಹೀಲಿಯಮ್ ಆಗಿ ಪರಿವರ್ತನೆ ಹೊ೦ದುವ ಬೈಜಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಶಕ್ತಿ ಅನಿಲರಾಶಿಯನ್ನು ವ್ಯಾಕೋಚಿಸಿದರೆ, ಗುರುತ್ವಬಲ ಸ೦ಕೋಚಿಸುತ್ತದೆ. ಈ ಎರಡು ವಿರುದ್ಢ ಬಲಗಳ ನಡುವೆ ಸಮತೋಲನ ಏಪ೯ಟ್ಟಾಗ ಅಲ್ಲಿ ಮೈದಳೆಯುತ್ತದೊ೦ದು ನಕ್ಷತ್ರ. ನಮ್ಮ ಸೂರ್ಯ ಜನಿಸಿದ್ದು ಹೀಗೆಯೇ – ೫ ಬಿಲಿಯ ಅಥವಾ ೫೦೦ ಕೋಟಿ ವರ್ಷಗಳ ಹಿ೦ದೆ. ಸೂರ್ಯ ಮಾತ್ರವಲ್ಲ, ಎಲ್ಲ ನಕ್ಷತ್ರಗಳು ಜನಿಸಿದ್ದು ಮತ್ತು ಜನಿಸುವುದು ಹೀಗೆಯೇ.
ಕಾಲಾ೦ತರದಲ್ಲಿ ಹೆಚ್ಚಿನ ಹೈಡ್ರೋಜನ್ ಹೀಲಿಯಮ್ ಆಗಿ ಪರಿವರ್ತಿತವಾದಾಗ ಆ ತಾರೆಯಲ್ಲಿ ಅಸ್ಥಿರತೆ ಹಣಿಕುತ್ತದೆ. ಇದರ ತಿರುಳಿನಲ್ಲಿ ಹೀಲಿಯಮ್ ಸಾ೦ದ್ರೀಕೃತವಾಗಿದ್ದರೆ, ಹೊರ ಆವರಣದಲ್ಲಿ ಹೈಡ್ರೋಜನ್ನಿನ ಆಧಿಕ್ಯ. ತಿರುಳು ತನ್ನ ದ್ರವ್ಯ ರಾಶಿಯ ಪರಿಣಾಮವಾಗಿ ಇನ್ನಷ್ಟು ಕುಗ್ಗುತ್ತದೆ ಮತ್ತು ಉಷ್ಣತೆ ಮತ್ತಷ್ಟು ಹೆಚ್ಚುತ್ತದೆ. ಇದೀಗ ಸುಮಾರು ಹತ್ತು ಕೋಟಿ ಡಿಗ್ರಿಗಳಾದಾಗ ಹೀಲಿಯಮ್ ನ್ಯೂಕ್ಲಿಯಸ್ಸುಗಳ ಬೈಜಿಕ ಸಂಲಯನ ಕ್ರಿಯೆ ಪ್ರಾರ೦ಭವಾಗುತ್ತದೆ. ಪರಿಣಾಮವಾಗಿ ಒಟ್ಟು ನಕ್ಷತ್ರ ಅಸಾಧಾರಣವಾಗಿ ಹಿಗ್ಗುತ್ತದೆ – ಗಾಳಿಯೂದಿದ ಬುಗ್ಗೆಯ೦ತೆ. ಲ೦ಬಿತ ಗಾತ್ರದಿ೦ದ ನಕ್ಷತ್ರದ ಉಷ್ಣತೆ ಬಹಳಷ್ಟು ಕಡಿಮೆಯಾಗಿ ಅದು ಕೆ೦ಪು ಬಣ್ಣದಿ೦ದ ಹೊಳೆಯಲಾರಂಭಿಸುತ್ತದೆ. ಇಂಥ ದೈತ್ಯ ಗಾತ್ರದ ಮತ್ತು ಕೆಂಬಣ್ಣದ ನಕ್ಷತ್ರಕ್ಕೆ ರಕ್ತ ದೈತ್ಯ (Red Giant) ಎ೦ಬ ಕಾವ್ಯಾತ್ಮಕ ಹೆಸರಿದೆ.
ಹೀಲಿಯಮ್ ಸ೦ಲಯನ ಕ್ರಿಯೆ ಮು೦ದುವರಿಯುತ್ತ, ರಕ್ತ ದೈತ್ಯನ ಒಡಲಲ್ಲಿ ಅಪಾರ ಒತ್ತಡ ಸ೦ಜನಿಸಿ ಹೊರ ಆವರಣ ಸಿಡಿದು ಹಾರಿ ಹೋಗುತ್ತದೆ. ಅಲ್ಲಿ ಉಳಿಯುವುದೇನಿದ್ದರೂ ಬಹುಪಾಲು ಕಾರ್ಬನ್ ಅಥವಾ ಇ೦ಗಾಲದ ಪರಮಾಣುಗಳ ಚಿಕ್ಕ ತಾರೆ. ತನ್ನ ಅಧಿಕ ಉಷ್ಣತೆಯ ಕಾರಣವಾಗಿ ಬಿಳಿ ಬಣ್ಣದಿ೦ದ ಗೋಚರಿಸುವ ಈ ಪುಟ್ಟ ತಾರೆಯೇ ಶ್ವೇತ ಕುಬ್ಜ (White dwarf ).
ಶ್ವೇತ ಕುಬ್ಜದ ಮುಂದಿನ ಹಂತದ ಕಥೆಯನ್ನು ನಿರೂಪಿಸಿದವರು ಭಾರತೀಯ ಸ೦ಜಾತ ಮತ್ತು ನೊಬೆಲ್ ವಿಜ್ಞಾನಿ ಸುಬ್ರಹ್ಮಣ್ಯನ್ ಚ೦ದ್ರಶೇಖರ್ (೧೯೧೦-೧೯೯೫). ಇಪ್ಪತ್ತೈದರ ತರುಣ ಚ೦ದ್ರಶೇಖರ್ ೧೯೩೫ ರಲ್ಲಿ ಹೇಳಿದರು ” ಶ್ವೇತಕುಬ್ಜ ತಾರೆಯ ದ್ರವ್ಯರಾಶಿಯು ಸೂರ್ಯನ ರಾಶಿಗಿ೦ತ ೧.೪ ಪಟ್ಟು ಅಥವಾ ಅದಕ್ಕಿ೦ತ ಹೆಚ್ಚಾದರೆ ಆ ತಾರೆ ಶ್ವೇತ ಕುಬ್ಜ ಸ್ಥಿತಿಯಲ್ಲೇ ಇರಲಾರದು. ಅದು ಮತ್ತೂ ಮು೦ದಿನ ಹ೦ತಗಳನ್ನು ಕಾಣುತ್ತದೆ. “. ಶ್ವೇತಕುಬ್ಜಕ್ಕೆ ಸ೦ಬ೦ಧಿಸಿದ೦ತೆ ದ್ರವ್ಯರಾಶಿಯ ಈ ಪರಿಮಿತಿಗೆ “ಚ೦ದ್ರಶೇಖರ್ ಪರಿಮಿತಿ” (Chandrashekhar Limit) ಎ೦ದು ಹೆಸರು.
ಚ೦ದ್ರಶೇಖರ್ ಪರಿಮಿತಿಯನ್ನು ಮೀರಿದ ಶ್ವೇತಕುಬ್ಜ ಇನ್ನಷ್ಟು ತೀವ್ರ ಗುರುತ್ವ ಕುಸಿತಕ್ಕೆ ಒಳಗಾಗುತ್ತ, ಒ೦ದು ಹ೦ತದಲ್ಲಿ ಒತ್ತಡ ಸಹಿಸಿಕೊಳ್ಳಲಾಗದೇ ಭೀಕರವಾಗಿ ಸ್ಫೋಟಿಸುತ್ತದೆ. ಲಕ್ಷ ವರ್ಷಗಳಲ್ಲಿ ಸೂರ್ಯ ಬಿಡುಗಡೆಮಾಡುವ ಶಕ್ತಿಯು ಕೆಲವೇ ಕೆಲವು ಸೆಕು೦ಡುಗಳಲ್ಲಿ ಉತ್ಪಾಟನೆಯಾಗುವ ಅಸಾಮಾನ್ಯ ಆಸ್ಫೋಟವಿದು. ಇದುವೇ ಸೂಪರ್ನೋವಾ.
೧೯೮೭, ಫೆಬ್ರವರಿ ೨೩. ಚಿಲಿಯ ಲಾಸ್‌ಕಂಪಾನಸ್ ಖಗೋಳಾಲಯದಲ್ಲಿ ಖಗೋಳ ವಿಜ್ಞಾನಿ ಇಯಾನ್ ಶೆಲ್ಟನ್ ಲಾರ್ಜ್‌ಮೆಜೆಲಾನಿಕ್‌ಕ್ಲೌಡ್ ಎಂಬ ಬ್ರಹ್ಮಾಂಡವನ್ನು ದೂರದರ್ಶಕದಲ್ಲಿ ವೀಕ್ಷಿಸುತ್ತಿದ್ದಾಗ ಈ ಹಿಂದೆಂದೂ ಕಾಣದೇ ಇದ್ದ ಪ್ರಕಾಶಮಾನ ಬೆಳಕಿನ ಮಚ್ಚೆಯನ್ನುಗುರುತಿಸಿದರು. ಮುಂದಿನ ಒಂದೆರಡು ಗಂಟೆಗಳಲ್ಲಿ ಅದು ಉಜ್ವಲವಾಗುತ್ತ ಬರಿಗಣ್ಣಿಗೆ ಗೋಚರಿಸಿತು. ಅದೊಂದು ಸೂಪರ್ನೋವಾ. ಮೆಜಾಲಾನಿಕ್ ಬ್ರಹ್ಮಾಂಡ ನಮ್ಮಿಂದ ಸುಮಾರು ಎರಡು ಲಕ್ಷ ಜ್ಯೋತಿರ್ವರ್ಷ ದೂರದಲ್ಲಿದೆ. ಅಂದರೆ ಅಲ್ಲಿಂದ ಹೊರಟ ಬೆಳಕು ನಮಗೆ ಗೋಚರಿಸಲು ತಗಲುವ ಅವಧಿ ಎರಡು ಲಕ್ಷ ವರ್ಷಗಳು. ಶೆಲ್ಟನ್ ಗುರುತಿಸಿದ್ದು ಎರಡು ಲಕ್ಷ ವರ್ಷಗಳಷ್ಟು ಹಿಂದೆ ಸಂಭವಿಸಿದ ಮಹಾ ಆಸ್ಫೋಟವನ್ನು.
ಬಾಹ್ಯಾಕಾಶದಲ್ಲಿ ಭೂಮಿ ಸುತ್ತ ಪರಿಭ್ರಮಿಸುತ್ತ ವಿಶ್ವವನ್ನು ನಿರಂರವಾಗಿ ನಿಟ್ಟಿಸುತ್ತಿರುವ ಹಬಲ್, ಚಂದ್ರ, ಸ್ಪಿಟ್ಜರ್ ಮೊದಲಾದ ಅತ್ಯಾಧುನಿಕ ಪ್ರಬಲ ದೂರದರ್ಶಕವನ್ನು ಬಳಸಿಕೊಂಡು PTF 11 ಸೂಪರ್ನೊವಾವನ್ನು ತಪಾಸಿಸುತ್ತ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸೂಪರ್ನೋವಾ ನಂತರ ಇನ್ನೇನು? ಉಳಿದ ಶೇಷ ನ್ಯೂಟ್ರಾನ್ ನಕ್ಷತ್ರವಾಗಬಹುದು, ವಿದ್ಯುತ್ಕಾಂತೀಯ ಸಂಜ್ಞೆಗಳನ್ನು ನಿಯತವಾಗಿ ಉತ್ಸರ್ಜಿಸುವ ಪಲ್ಸಾರ್ ಆಗಬಹುದು, ಮತ್ತು ಅಂತಿಮವಾಗಿ ಎಲ್ಲವನ್ನು ನುಂಗಿ ನೊಣೆಯುವ ಆದರೆ ತನ್ನಿಂದ ಬೆಳಕೂ ಸೇರಿದ ಹಾಗೆ ಯಾವುದನ್ನೂ ಬಿಡಲೊಲ್ಲದ ಕೃಷ್ಣವಿವರವಾಗಬಹುದು (Black Hole).
ಭೌತವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಾಗಿ ೨೦೧೧ರ ನೊಬೆಲ್ ಪ್ರಶಸ್ತಿ ಇತ್ತೀಚೆಗೆ ಘೋಷಣೆಯಾದಾಗ ಮತ್ತೆ ಸೂಪರ್ನೋವಾ ಸುದ್ದಿಗೆ ಬಂತು. ಸೂಪರ್ನೋವಾಗಳ ಉಜ್ವಲತೆಯನ್ನು ಅಧ್ಯಯನಿಸಿ ಆ ಮೂಲಕ ಅಗೋಚರ ದ್ರವ್ಯ – ಡಾರ್ಕ್ ಮ್ಯಾಟರ್ – ಅಸ್ತಿತ್ವವನ್ನು ಸ್ಥಿರೀಕರಿಸಿದ ಸಂಶೋಧನೆಗಾಗಿ ಅಮೇರಿಕದ ಅಡಮ್ ರೀಸ್, ಬ್ರಿಯಾನ್ ಸ್ಮಿಟ್ಜ್ ಮತ್ತು ಸೌಲ್ ಪರ್ಲ್‌ಮ್ಯುಟರ್ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂದ ಹಾಗೆ ಸೂಪರ್ನೋವಾ ಎಂಬ ಹೆಸರು ಟಂಕಿಸಿದ ಫ್ರಿಟ್ಜ್‌ಝ್ವಿಕ್ಕಿಗೂ ಡಾರ್ಕ್ ಮ್ಯಾಟರಿಗೂ ಸಂಬಂಧವಿದೆ. ಡಾರ್ಕ್ ಮ್ಯಾಟರ್ ಎಂಬ ಅನೂಹ್ಯ ದ್ರವ್ಯವಿದೆ ಎಂಬ ಊಹೆಯನ್ನು ಮಾಡಿದ ಹಿರಿಮೆ ಈತನದು. ಈ ಎಲ್ಲ ವಿವರಗಳದ್ದು ಬೇರೆಯೇ ಕಥೆ. ಮುಂದಿನ ದಿನಗಳಲ್ಲಿ ಬಿತ್ತರಿಸುತ್ತೇನೆ.
ನೊಬೆಲ್ ವಿಜ್ಞಾನಿ ರಿಚರ್ಡ್‌ಫೈನ್ಮನ್ ಹೇಳುತ್ತಾನೆ “ನಿಸರ್ಗ ಎಷ್ಟೊಂದು ವಿಸ್ಮಯ. ಅದನರಿಯಲು ಪಡುವ ಮನುಷ್ಯ ಸಾಹಸ ಮತ್ತಷ್ಟು ವಿಸ್ಮಯ!”
ಇತ್ತೀಚೆಗಿನ ಪ್ರತಿಕ್ರಿಯೆಗಳು…