ಮುಖ ಪುಟ > ಅವಿಭಾಗೀಕೃತ > ಹಾರಾಟ ನಿಲ್ಲಿಸಿದ ಸ್ಪೇಸ್‌ಶಟಲ್

ಹಾರಾಟ ನಿಲ್ಲಿಸಿದ ಸ್ಪೇಸ್‌ಶಟಲ್

ಮನುಷ್ಯನಿಗೆ ಭೂಮಿ ಒಂದು ತೊಟ್ಟಿಲು. ಆದರೆ ಆತ ಅಲ್ಲೇ ಉಳಿಯಲಾರ 
–    ಕಾನ್‌ಸ್ಟಂಟಿನ್ ಟ್ಸಿಯೊಲೊವಿಸ್ಕಿ, ರಷ್ಯನ್ ಖಗೋಳವಿದ.

ಕಳೆದ ಗುರುವಾರ – ಜುಲೈ ೨೧, ಬೆಳಗ್ಗಿನ ಜಾವ ಅಮೇರಿಕದ ಫ್ಲಾರಿಡಾದಲ್ಲಿರುವ ಕೆನ್ನೆಡಿ  ಅಂತರಿಕ್ಷ ಉಡ್ಡಯನ ಕೇಂದ್ರದ ಇಳಿದಾಣದಲ್ಲಿ ಇನ್ನೂರು ಅಡಿಯಷ್ಟು ಉದ್ದದ  – ನೋಡುವುದಕ್ಕೆ  ವಿಮಾನದಂತಿದ್ದ ಬಿಳಿಯ ಹಕ್ಕಿ – ಅಟ್ಲಾಂಟಿಸ್ ಎಂಬ ಸ್ಪೇಸ್‌ಶಟಲ್ – ಕಿವಿಗಿಡಿಚುವ ಸದ್ದಿನೊಂದಿಗೆ  ಬಂದಿಳಿದ ಹೊತ್ತು. ನೆರೆದಿದ್ದ ನೂರಾರು ಖಗೋಳಪ್ರಿಯರಿಗೆ ಭಾವುಕ ಕ್ಷಣ. ಈ ವ್ಯೋಮ ಯೋಜನೆಯ ಅವಿಭಾಜ್ಯ ಭಾಗವಾಗಿ ಬೆಳೆದ ಮಂದಿಯಲ್ಲಿ ಎಲ್ಲ ಕಳೆದುಕೊಂಡ ನಿರಾಸೆ ಕಣ್ಣಂಚಿನ ನೀರಾಗಿ ಪ್ರಕಟವಾಗುತ್ತಿತ್ತು.


ಮೂವತ್ತು ವರ್ಷಗಳಿಂದ ಬಾಹ್ಯಾಕಾಶಕ್ಕೆ ಬೇಕೆಂದಾಗ ಖಗೋಳಯಾನಿಗಳನ್ನು, ಬಗೆ ಬಗೆಯ ಉಪಗ್ರಹಗಳನ್ನು, ಪ್ರಾಯೋಗಿಕ ಉಪಕರಣಗಳನ್ನು ಹೊತ್ತೊಯ್ದ ಅದ್ಭುತ ವ್ಯೋಮನೌಕೆ –  ಸ್ಪೇಸ್ ಶಟಲ್ (ಆಕಾಶ ಲಾಳಿ). ಇವುಗಳಿಗೆ ಅಂದು ಅಂತಿಮ ವಿದಾಯವನ್ನು ನಾಸಾ ಘೋಷಿಸಿತು;  ಅಂದರೆ ಇನ್ನೆಂದೂ ಸ್ಪೇಸ್‌ಶಟಲ್ ಎಂಬ ವ್ಯೋಮನೌಕೆಗಳು ಕೆಂಪಗಿನ ಬೆಂಕಿ ಮತ್ತು ಬಿಳಿಯ ಧೂಮರಾಶಿಯನ್ನು ಉಗುಳುತ್ತ ನಭಕ್ಕೆ ನೆಗೆಯಲಾರವು. ತಾನಿರುವ ವಿಶ್ವವನ್ನು ಅರಿಯಲು ಹೊರಟ ಮನುಕುಲದ ವ್ಯೋಮ ಸಾಹಸದ ಘಟ್ಟವೊಂದು ಹೀಗೆ ಇತಿಹಾಸಕ್ಕೆ ಸಂದಿತು.

ಬಾನಾಡಿ ಕನಸು
ಕಳೆದ ಶತಮಾನದ ಆದಿ ಭಾಗ.  ಅಮೇರಿಕದಲ್ಲಿ ರೈಟ್ ಸಹೋದರರಿಂದ  ನೆಲ ಬಿಟ್ಟು ಗಗನದಲ್ಲಿ ಹಾರುವ ವಿಮಾನವೆಂಬ ವಾಹನಗಳ ಸೃಷ್ಟಿ. ಬಾನಾಡಿ ತಾನಾಗಬೇಕೆಂಬ ಮಾನವನ ಕನಸು ಅಂದು ನನಸಾಗುವುದರೊಂದಿಗೆ (೧೯೦೩, ಡಿಸೆಂಬರ್೩),  ಇನ್ನಷ್ಟು, ಮತ್ತಷ್ಟು ಎತ್ತರಕ್ಕೆ ಸಾಗುತ್ತ ಭೂ ಗುರುತ್ವಾಲಿಂಗನದಿಂದ ಪಾರಾಗಿ  ಬಾಹ್ಯಾಕಾಶಕ್ಕೆ ಸಾಗುವ ಮತ್ತು ಭೂಮಿ ಸುತ್ತ ಸುತ್ತುವ, ಚಂದ್ರನ ಮೇಲೆ ಕಾಲೂರುವ ಕನಸಿಗೆ ರೆಕ್ಕೆ ಪುಕ್ಕಗಳೆಲ್ಲ ಹುಟ್ಟಿಕೊಂಡುವು. ಅತ್ತ ರಷ್ಯಾದಲ್ಲಿ ಟ್ಸಿಯೊಲೊವಿಸ್ಕಿ, ಇತ್ತ ಅಮೇರಿಕದಲ್ಲಿ ಹಚಿ೦ಗ್ಸನ್‌ಗೊಡ್ಡಾಡ್೯ ಹಲವು  ಮಹತ್ವದ ಪ್ರಯೋಗಗಳನ್ನು ಕೈಗೊಂಡರು. ಈ ಮಹಾನ್ ಪ್ರಯೋಗಶೀಲರ ಪ್ರಯತ್ನಗಳ ಫಲವಾಗಿ ರಾಕೆಟುಗಳು  ಗಗನದಲ್ಲಿ ಎತ್ತರೆತ್ತರಕ್ಕೆ ಏರಿದುವು. ಒಂದೊಂದೂ ಹೊಸ ಮಜಲುಗಳು.  ಪ್ರಥಮ ಮತ್ತು ದ್ವಿತೀಯ ಮಹಾಯುಧ್ದ ಕಾಲದಲ್ಲಿ – ಅ೦ದರೆ ೧೯೧೫ – ೧೯೪೫ ರ ಅವಧಿಯಲ್ಲಿ ರಾಕೇಟ್ ಸಂಬ೦ಧೀ ಪ್ರಯೋಗಗಳು ಮತ್ತಷ್ಟು ಚುರುಕಾದುವು. ಒಂದು ಬಗೆಯಲ್ಲಿ ಅನುದಿನವೂ ದೀಪಾವಳಿ!

ಆ ಐತಿಹಾಸಿಕ ದಿನ ಬಂದೇ ಬಂತು. ಸೊವಿಯತ್ ರಷ್ಯದಿಂದ ಫುಟ್ಬಾಲ್ ಗಾತ್ರದ ಸ್ಪುಟ್ನಿಕ್ ಎಂಬ ಆಕಾಶನೌಕೆಯು  ೧೯೫೭, ಅಕ್ಟೋಬರ್ ೪ ರಂದು  ಯಶಸ್ವಿಯಾಗಿ ಗಗನಕ್ಕೇರಿ ಭೂಮಿ ಸುತ್ತ ಪರಿಭ್ರಮಿಸಿತು.  ೧೯೬೧, ಎಪ್ರಿಲ್ ೧೨. ರಷ್ಯಾದ ಯೂರಿ ಗಾಗರಿನ್ ವಾಸ್ಟಾಕ್ ಎ೦ಬ ಆಕಾಶ ನೌಕೆಯಲ್ಲಿ ಬಾಹ್ಯಕಾಶಕ್ಕೇರಿ, ಭೂಮಿಗೆ ೧೦೮ ನಿಮಿಷಕ್ಕೊ೦ದರ೦ತೆ ೧೭ ಪ್ರದಕ್ಷಿಣೆ ಹಾಕಿದ – ೨೫ ಘ೦ಟೆಗಳ ಕಾಲ ಅಲ್ಲಿದ್ದು ಸುರಕ್ಷಿತವಾಗಿ ಮರಳಿ ದಾಖಲೆ ನಿಮಿ೯ಸಿದ.

ಈ ನಡುವೆ ಸ್ಥಾಪನೆಗೊಂಡದ್ದು ನಾಸಾ – ಅಮೇರಿಕದಲ್ಲಿ ಖಗೋಳ ಸಂಶೋಧನೆಗೆ ಮೀಸಲಾದ ಸ್ವತಂತ್ರ ಸಂಸ್ಥೆ (೧೯೫೮).  ಇದರೊಂದಿಗೆ ವ್ಯೋಮ ಸಂಶೋಧನೆ ಇನ್ನಷ್ಟು  ಬಿರುಸುಗೊಂಡಿತು. ೧೯೬೨ರಲ್ಲಿ  ಅಮೇರಿಕದ ಅಲೆನ್‌ಶೆಪಡ್೯ ಎಂಬ ಖಗೋಳಯಾನಿ ಗಾಗರಿನ್ ಸಾಹಸವನ್ನು ಪುನರಾವತಿ೯ಸಿದ. ಆ ಬಗ್ಗೆ ಏರ್ಪಡಿಸಲಾದ ಸ೦ತೋಷ ಕೂಟದಲ್ಲಿ ಅ೦ದಿನ ಅಮೇರಿಕನ್ ಅಧ್ಯಕ್ಷ ಜಾನ್‌ಆಫ್ ಕೆನ್ನಡಿ ಘೋಷಿಸಿದರು ” ಈ ದಶಕ ಮುಗಿಯುವುದರೊಳಗೆ ಚ೦ದ್ರನ ಮೇಲೆ ಮಾನವನನ್ನು ಇಳಿಸಿ ಪುನ: ಸುರಕ್ಷಿತವಾಗಿ ನೆಲಕ್ಕೆ ಕರೆತರುವ ಗುರಿಯನ್ನು ಈ ರಾಷ್ಟ್ರ ಸಾಧಿಸುವ ಭರವಸೆ ನನಗಿದೆ. ಆ ದಿಸೆಯಲ್ಲಿ ನಾಸಾ ಸಾಗಲಿದೆ.”

ಇದು ಬರಿದೇ ಘೋಷಣೆಯಾಗಲಿಲ್ಲ. ಅಮೇರಿಕ ಯಶಸ್ವಿಯಾಯಿತು ಕೂಡ. ದಶಕದೊಳಗೆ, ಅಂದರೆ ೧೯೬೯, ಜುಲೈ ೨೦ರಂದು ಅಪೊಲೋ ಆಕಾಶನೌಕೆ ಚಂದ್ರನೆಡೆಗೆ ಸಾಗಿತು, ನೀಲ್ ಅರ್ಮಸ್ತ್ರಾಂಗ್ ಮತ್ತು ಎಡ್ವಿನ್ ಕಾಲ್ಡ್ರಿನ್ ಚಂದ್ರನ ಮೇಲೆ ಕಾಲೂರಿಯೇ ಬಿಟ್ಟರು. ಆರ್ಮಸ್ಟ್ರಾಂಗನ ಅಂದಿನ ಭಾವೋದ್ವೇಗದ ಉದ್ಗಾರ ಇಂದಿಗೂ ಜಗತ್ಪ್ರಸಿದ್ಧ “That’s one small step for a man, one giant leap for mankind.”   –  ಒಬ್ಬ ಮನುಷ್ಯನಿಗೆ ಪುಟ್ಟ ಹೆಜ್ಜೆ, ಮಾನವ ಜನಾಂಗಕ್ಕೆ ದೈತ್ಯ ನೆಗೆತ!
ಶಟಲ್ ಯುಗ
ಅಂದು ಹೇಗಿತ್ತೆಂದರೆ, ಭೂಮಿಗೆ ಮರಳುವ ಸಂದರ್ಭದಲ್ಲಿ ಆಕಾಶನೌಕೆ ಉರಿದು ನಾಶವಾಗುವ ಮುನ್ನ ನೌಕೆಗೆ ಜೋಡಣೆಯಾದ ಅವತರಣಕೋಶ ಆಕಾಶನೌಕೆಯಿಂದ ಕಳಚಿಕೊಂಡು ದೊಡ್ಡ ಪ್ಯಾರಾಚ್ಯೂಟನ್ನು  ಅರಳಿಸಿಕೊಂಡು ಸಾಗರದಲ್ಲಿ ನಿಧಾನವಾಗಿ ಇಳಿಯುತ್ತಿತ್ತು. ಅಂದರೆ ಪ್ರತಿ ಬಾರಿಯೂ ಬಾಹ್ಯಾಕಾಶಕ್ಕೆ ತೆರಳಲು ಆಕಾಶನೌಕೆಯನ್ನು ನಿರ್ಮಿಸುವುದು ಅನಿವಾರ್ಯ. ಮಂಗಳೂರಿಂದ ಬೆಂಗಳೂರಿಗೆ ಪಯಣಿಸಲು ಪ್ರತಿ ಬಾರಿಯೂ ಹೊಸ ಟ್ರೈನ್ ನಿರ್ಮಿಸಿದರೆ ಹೇಗೋ ಹಾಗೆ!

ಇದರ ಬದಲಿಗೆ, ಇಂಧನ ತುಂಬಿಸಿಕೊಂಡು ಬಾಹ್ಯಾಕಾಶಕ್ಕೇರಿ,  ಭೂಮಿ ಸುತ್ತ ಪರಿಭ್ರಮಿಸಿದ ಬಳಿಕ ವಿಮಾನದಂತೆ ಬಂದಿಳಿಯುವ,  ಪುನರಪಿ ಬಳಸಬಹುದಾದ ನೌಕೆಯನ್ನು ಸೃಷ್ಟಿಸಿದರೆ ಹೇಗೆ?  ಇಪ್ಪತ್ತು ವರ್ಷಗಳ ಪ್ರಯತ್ನದಲ್ಲಿ ಅಂಥ ವ್ಯೋಮನೌಕೆಗಳು ಸಿದ್ಧಗೊಂಡುವು. ಇದುವೇ ಸ್ಪೇಸ್‌ಶಟಲ್ ಅಥವಾ ಆಕಾಶಲಾಳಿ. ಇದು ಮಾಮೂಲಿ ನೌಕೆಗಿಂತ ಭಿನ್ನ.

ನೋಡುವುದಕ್ಕೆ ಸ್ಪೇಸ್‌ಶಟಲ್ ವಿಮಾನದ ತದ್ವತ್ತು. ಬಾಹ್ಯಾಂತರಿಕ್ಷಕ್ಕೆ ಇದನ್ನು ಹೊತ್ತೊಯ್ಯುವ ಜವಾಬ್ದಾರಿ ಘನ ಇಂಧನ ಭರ್ತಿಗೊಂಡ

ಮೂರು ರಾಕೆಟ್‌ಗಳಿಗೆ. ಅಂದರೆ ರಾಕೆಟಿನ ಬೆನ್ನ ಮೇಲೆ ಇದರ ಸವಾರಿ!.  ಬಾಹ್ಯಾಕಾಶಕ್ಕೆ ರಾಕೆಟ್‌ಗಳು ನೌಕೆಯನ್ನು ಒಯ್ಯುತ್ತವೆ.

ಸ್ಪೇಸ್‌ಶಟಲ್ಲಿನ  ಇಂಧನ ಕೋಶದಲ್ಲಿ ದ್ರವರೂಪೀ ಹೈಡ್ರೋಜನ್ ಮತ್ತು ಆಕ್ಸಿಜನ್ ಮಿಶ್ರಣವಿರುತ್ತದೆ. ಭೂಮಿಯಿಂದ ಸುಮಾರು ಎಂಟುನೂರು ಕಿಮೀ ಎತ್ತರದ ಬಾಹ್ಯಾಕಾಶದಲ್ಲಿ  ಶಟಲ್ ಪರಿಭ್ರಮಿಸುತ್ತ, ನಂತರ  ಭೂ ವಾಯುಮಂಡಲದೊಳಕ್ಕೆ ಪ್ರವೇಶಿಸಿ ಗಂಟೆಗೆ ಸುಮಾರು ಮೂವತ್ತು ಸಾವಿರ ಕಿಮೀ ವೇಗದಲ್ಲಿ ಧಾವಿಸುತ್ತ ವಿಮಾನದಂತೆ – ನಿರ್ದಿಷ್ಟ ತಂಗುದಾಣದಲ್ಲಿ ಬಂದಿಳಿಯುತ್ತದೆ.

ಸ್ಪೇಸ್‌ಶಟಲ್ ಯೋಜನೆಯಲ್ಲಿ ಕೊಲಂಬಿಯಾ, ಚ್ಯಾಲೆಂಜರ್, ಡಿಸ್ಕವರಿ, ಅಟ್ಲಾಂಟಿಸ್, ಎಂಡೆವರ್ ಎಂಬ ಐದು ವ್ಯೋಮನೌಕೆಗಳನ್ನು ನಾಸಾ ನಿರ್ಮಿಸಿತು.  ಕೊಲಂಬಿಯಾ ೧೯೮೧, ಎಪ್ರಿಲ್೧೨ರಂದು ಬಾಹ್ಯಾಕಾಶಕ್ಕೆ ಏರುವುದರೊಂದಿಗೆ ಶಟಲ್‌ಯುಗ ಅಧಿಕೃತವಾಗಿ ಆರಂಭಗೊಂಡಿತು. ಚ್ಯಾಲೆಂಜರ್ ೧೯೮೨ ಜುಲೈ ತಿಂಗಳಲ್ಲಿ,  ಡಿಸ್ಕವರಿ ೧೯೮೩ ಸಪ್ಟೆಂಬರಿನಲ್ಲಿ, ಅಟ್ಲಾಂಟಿಸ್ ೧೯೮೫ ಎಪ್ರಿಲ್‌ನಲ್ಲಿ, ಎಂಡೆವರ್ ೧೯೯೨ ಮೇ ತಿಂಗಳಿನಲ್ಲಿ  ತಮ್ಮ ಯಾನವನ್ನು ಯಶಸ್ವಿಯಾಗಿ ಆರಂಭಿಸಿದುವು.

ಇದು ತನಕ ೧೩೫ ಬಾರಿ ಬಾಹ್ಯಾಕಾಶಕ್ಕೆ ಪಯಣಿಸಿದ ಸ್ಪೇಸ್‌ಶಟಲ್‌ಗಳಲ್ಲಿ ಮುನ್ನೂರ ಐವತ್ತೈದು ಮಂದಿ ವ್ಯೋಮ ಯಾನ ಮಾಡಿದ್ದಾರೆ; ನೂರೆಂಬತ್ತು ಉಪಗ್ರಹಗಳು ಕಕ್ಷೆಗೆ ಸೇರಿವೆ. ಐವತ್ತೆರಡು ಉಪಗ್ರಹಗಳನ್ನು ಕಕ್ಷೆಯಿಂದ  ಭೂಮಿಗೆ ತಂದು ದುರಸ್ತಿ ಮಾಡಿ ಮತ್ತೆ ಕಕ್ಷೆಗೆ ಸೇರಿಸಲಾಗಿದೆ.  ಶೂನ್ಯ ಗುರುತ್ವದಲ್ಲಿ ಮತ್ತು ನಿರ್ವಾತದಲ್ಲಿ ದ್ರವ್ಯಗಳು ತೋರ್ಪಡಿಸುವ ವಿಶೇಷ ಗುಣಲಕ್ಷಣಗಳನ್ನು ವಿಸ್ತ್ರುತ ಅಧ್ಯಯನ ನಡೆದಿದೆ.

ಇಂದು ಭೂ ವಾಯುಮಂಡಲದಾಚೆಗೆ ನೆಲೆನಿಂತು ವಿಶ್ವದಂತರಾಳವನ್ನು ತಪಾಸಿಸುತ್ತ ವಿಶ್ವ ಸೃಷ್ಟಿಯ ಅನೂಹ್ಯ ವಿಸ್ಮಯಗಳನ್ನು ಅನಾವರಣಗೊ

ಳಿಸುತ್ತ ಖಗೋಲ ವಿಜ್ಞಾನಕ್ಕೆ ನೂತನ ಆಯಾಮವನ್ನು ಕಲ್ಪಿಸಿರುವ ಹಬಲ್ ದೂರದರ್ಶಕವನ್ನು  ಸ್ಪೇಸ್‌ಶಟಲ್ ಡಿಸ್ಕವರಿಯಲ್ಲಿ ಒಯ್ದು ನೆಲೆಗೊಳಿಸಿದ್ದು ಇಪ್ಪತ್ತು ವರ್ಷಗಳಷ್ಟು ಹಿಂದೆ (ಎಪ್ರಿಲ್ ೨೫,೧೯೯೦). ಹಬಲ್ ದೂರದರ್ಶಕಕ್ಕೆ ಬಂದಿತ್ತು ಬಾಲ್ಯದಲ್ಲೇ ತೊಂದರೆ!. ಅಸಮರ್ಪಕ ಮಸೂರ. ಹಾಗಾಗಿ ಅದು ರವಾನಿಸಿದ ಚಿತ್ರಗಳು ಅಸ್ಪಷ್ಟ.  ದೂರದರ್ಶಕವನ್ನು ಮತ್ತೆ ಭೂಮಿಗೆ ತರುವಂತಿಲ್ಲ. ಯೋಜನೆ ಟುಸ್ ಆಗುವ ಭಯ.
ಆದರೆ ನಾಸಾ ಧೃತಿಗೆಡಲಿಲ್ಲ. ನೆರವಿಗೆ ಬಂದದ್ದು ಸ್ಪೇಸ್‌ಶಟಲ್ ಎಂಡೆವರ್ (೧೯೯೩). ಅಂದು ಖಗೋಳಯಾನಿಗಳು ಹಬಲ್ ಬಳಿ ಸಾಗಿ, ದೂರದರ್ಶಕವ

ನ್ನು ಶಟಲ್ ಒಳಗಡೆ ತಂದು,  ಐದು ದಿನಗಳ ಪ್ರಯತ್ನದಲ್ಲಿ ಮಸೂರವನ್ನು ದುರಸ್ತಿ ಮಾಡಿ ಮತ್ತೆ ಕಕ್ಷೆಯಲ್ಲಿ ನೆಲೆಗೊಳಿಸಿದರು. ಅಲ್ಲಿಂದ ಸತತವಾಗಿ ಮಾಹಿತಿಯ ಮಹಾಪೂರವನ್ನೇ ಒದಗಿಸುತ್ತಿರುವ ಹಬಲ್ ದೂರದರ್ಶಕದ ಗೈರೊಸ್ಕೋಪುಗಳು, ಇತರ ಭಾಗಗಳು ಸಹಜವಗಿಯೇ ದುರ್ಬಲ ಸ್ಥಿತಿಗೆ ಬಂದಿದ್ದುವು. ಕೊನೆಯ ಪ್ರಯತ್ನವಾಗಿ ಸ್ಪೇಸ್‌ಶಟಲ್ ಅಟ್ಲಾಂಟಿಸ್‌ನಲ್ಲಿ ಹಬಲ್ ಸನಿಹಕ್ಕೆ ಬಂದ ಖಗೋಳಯಾನಿಗಳು ದೂರದರ್ಶಕದ ಬಳಿಗೆ ಸಾಗಿ ವ್ಯೋಮನಡುಗೆಯಲ್ಲಿ ದುರಸ್ತಿ ಮಾಡಿದರು (೨೦೦೩). ಇದೊಂದು ಪರಮಾದ್ಭುತ ವ್ಯೋಮ ಸಾಹಸ. ಪರಿಣಾಮವಾಗಿ ಹಬಲ್ ಆಯುಷ್ಯ ಇನ್ನೊಂದು ದಶಕಕ್ಕೆ ವಿಸ್ತರಿಸಿದೆ.

ಕೇವಲ ಹಬಲ್ ಮಾತ್ರವಲ್ಲ, ಚಂದ್ರ ಎನ್ನುವ ಎಕ್ಸ್ ಕಿರಣ ದೂರದರ್ಶಕ, ಕಾಂಪ್ಟನ್ ಎಂಬ ಗ್ಯಾಮಾ ವಿಕಿರಣ ದರ್ಶಕ, ಅಂತಾರಾಷ್ಟ್ರೀಯ ವ್ಯೋಮ ನಿಲ್ದಾಣಗಳ ನಿರ್ಮಾಣಗಳಲ್ಲಿಯೂ  ಸ್ಪೇಸ್ ಶಟಲ್‌ಗಳದು ಮಹತ್ವದ ಪಾತ್ರವಿದೆ.  ಬುಧ ಗ್ರಹದ ಅಧ್ಯಯನಕ್ಕೆ ಕಳುಹಿಸಲಾದ ಮೆಜೆಲಾನ್ ದರ್ಶಕ, ಗುರು ಗ್ರಹದ ಅಧ್ಯಯನಕ್ಕೆ ರವಾನಿಸಲ್ಪಟ್ಟ ಗೆಲಿಲಿಯೋ,  ಸೌರ ಮಾಹಿತಿಗಾಗಿ ಹೋದ ಯೂಲಿಸಿಸ್ ….

ಇವೆಲ್ಲವೂ ಸ್ಪೇಸ್ ಶಟಲ್ ಮೂಲಕ ಬಾಹ್ಯಾಕಾಶ ಸೇರಿದಂಥವು. ಈ ಎಲ್ಲ ವೈಜ್ಞಾನಿಕ ಯಶೋಗಾಥೆಗಳ ನಡುವೆ ಮರೆಯಲಾಗದ ದುರಂತಗಳ ನೆನಪೂ ಇದೆ.
ಮರೆಯಾದ ಕಲ್ಪನಾ
೧೯೮೬, ಜನವರಿ ೨೮, ಸ್ಪೇಸ್‌ಶಟಲ್ ಚ್ಯಾಲೆಂಜರ್ ಉಡ್ಡಯನಗೊಂಡು, ಕೇವಲ ಒಂದು ನಿಮಿಷ ಕಳೆದಿರಬಹುದಷ್ಟೇ, ಭೀಕರವಾಗಿ ಆಸ್ಫೋಟಿಸಿ ಉರಿದೇ ಹೋಯಿತು – ಏಳು ಮಂದಿ ಖಗೋಳಯಾನಿಗಳ ಸಹಿತ. ಅಮೇರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ದು:ಖಿಸಿದರು “ನಾವು ಆ ಖಗೋಳ

ಯಾನಿಗಳನ್ನು ಎಂದಿಗೂ ಮರೆಯಲಾರೆವು. ಈ ದಿನ

 

ಬೆಳಗ್ಗೆ ಕೈಬೀಸುತ್ತ ನಗು ನಗುತ್ತ ಹೋದ ಅವರನ್ನು ಮರೆಯುವುದಾದರೂ ಹೇಗೆ? ಈ ಭುವಿಯ ಬಂಧದಿಂದ ಪಾರಾಗಿ ಹೋಗುವುದಕ್ಕೆ ಹೊರಟವರು ದೇವರ ಪಾದದೆಡೆಗೆ ತೆರಳಿದರು. ಮತ್ತೆ ಬರದ ಕಡೆಗೆ ತೆರಳಿದರು”

 

ಚ್ಯಾಲೆಂಜರ್ ದುರ್ಘಟನೆ ಯಾಕೆ ಮತ್ತು ಹೇಗೆ ಸಂಭವಿಸಿತೆನ್ನುವುದನ್ನು  ತಪಾಸಿಸಲು ರೋಜರ್ ಎಂಬ ಖಗೋಳವಿದನ ನೇತೃತ್ವದಲ್ಲಿ ಒಂದು ಸಮಿತಿಯ ರಚನೆಯಾಯಿತು. ಘಟಾನುಘಟಿಗಳಿದ್ದ ಆ ಸಮಿತಿಯ ಒಬ್ಬ ಸದಸ್ಯ – ನೊಬೆಲ್ ವಿಜ್ಞಾನಿ ರಿಚರ್ಡ್ ಫೈನ್ಮನ್, ಇಪ್ಪತ್ತನೇ ಶತಮಾನ ಕಂಡ ಪರಮೋತ್ಕೃಷ್ಟ ಪ್ರಾಧ್ಯಾಪಕ. ಉಡ್ಡಯನ ಸಂದರ್ಭದಲ್ಲಿ  ಘನ ಇಂಧನ ರಾಕೇಟಿನ ಒಂದು ವಾಷರ್ ಕೆಟ್ಟುಹೋಗಿ ಇಂಧನ ಕೋಶಕ್ಕೆ ಬೆಂಕಿ ತಗಲಿತೆಂದು ಸಮಿತಿಯ ವರದಿ ತಿಳಿಸಿತು.  ವಾತಾವರಣದ ಉಷ್ಣತೆ ತೀರ ಕಡಿಮೆ ಇದ್ದಾಗ ವಾಷರ್ ತನ್ನ ಗುಣವನ್ನು ಕಳೆದುಕೊಳ್ಳುತ್ತದೆಂದು ಹೇಳಿದ ರಿಚರ್ಡ್‌ಫೈನ್ಮನ್,  ವ್ಯೋಮ ನೌಕೆಯಲ್ಲಿ ಬಳಸುವ ವಾಷರನ್ನು ಬರ್ಫದ ನೀರಿನಲ್ಲಿ ಮುಳುಗಿಸಿ ತೆಗೆದು, ಅದು ತನ್ನ ಸ್ಥಿಸ್ಥಾಪಕತ್ವ ಗುಣವನ್ನು ಕಳೆದುಕೊಳ್ಳುವುದನ್ನು ಪ್ರಾಯೋಗಿಕವಾಗಿ ನಿರೂಪಿಸಿದರು.  ತನಗನಿಸಿದ್ದನ್ನು ಮುಲಾಜಿಲ್ಲದೇ ಹೇಳುವ ಜಾಯಮಾನದ ಫೈನ್ಮನ್,  ಶಟಲ್ ಉಡ್ಡಯನ ಸಂದರ್ಭಗಳಲ್ಲಿ ನಾಸಾ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳು ಸಾಕಾಗುತ್ತಿಲ್ಲವೆಂದು ಸಾರ್ವಜನಿಕವಾಗಿ ಟೀಕಿಸಿದರು;  ಹಲವರ ವಿರೋಧ ಕಟ್ಟಿಕೊಂಡರು.

ಚ್ಯಾಲೆಂಜರ್ ದುರ್ಘಟನೆಯಿಂದ ಹೊರಬರಲು ನಾಸಾ ಸಂಸ್ಥೆಗೆ  ಮತ್ತೆರಡು ವರ್ಷಗಳು ಬೇಕಾಯಿತು – ಸಪ್ಟೆಂಬರ್ ೨೯, ೧೯೮೮ರಂದು ಸ್ಪೇಸ್‌ಶಟಲ್ ಡಿಸ್ಕವರಿಯ ಉಡ್ಡಯನದೊಂದಿಗೆ ಮತ್ತೆ ಈ

ಅಸಾಧಾರಣ ನೌಕೆಗಳ ಯಾನ ಆರಂಭವಾಯಿತು. ಆದರೆ..

ಹದಿನೈದು ವರ್ಷಗಳ ಬಳಿಕ. ೨೦೦೩ ಫೆಬ್ರವರಿ೧. ಇಪ್ಪತ್ತೇಳು ಬಾರಿ ವ್ಯೋಮ ಯಾನ ಮಾಡಿದ ಅನುಭವೀ ಸ್ಪೇಸ್‌ಶಟಲ್ ಕೊಲಂಬಿಯಾ, ಹೊರಟಿತ್ತು ಇಪ್ಪತ್ತೆಂಟನೇಯ ಯಾನಕ್ಕೆ. ಭಾರತೀಯರಾದ ನಮಗೆ ಸಂಭ್ರಮವೋ ಸಂಭ್ರಮ. ಏಕೆಂದರೆ ನಮ್ಮ ಹುಡುಗಿ ಅದರಲ್ಲಿದ್ದಳು. ಅವಳ ಹೆಸರು ಕಲ್ಪನಾ ಚಾವ್ಲಾ. ಹರ್ಯಾನಾದಲ್ಲಿ ಹುಟ್ಟಿದ (೧೯೬೧, ಜುಲೈ೧) ಕಲ್ಪನಾ, ಚಂಡೀಗಢದ ಎಂಜನೀಯರಿಂಗ್ ಕಾಲೇಜಿನಿಂದ ಎರೋನ್ಯಾಟಿಕಲ್ ಎಂಜನೀಯರಿಂಗ್ ಮುಗಿಸಿ, ನಾಸಾಕ್ಕೆ ತೆರಳಿ ಖಗೋಳಯಾನಿಯಾದ ಪ್ರತಿಭಾವಂತೆ. ೧೯೯೮ರಲ್ಲಿ ಪ್ರಥಮ ಬಾರಿ ಬಾಹ್ಯಾಕಾಶಕ್ಕೆ ಯಾನ ಮಾಡಿದ ಅನುಭವವಿದ್ದ ಈಕೆಗೆ ಈ ಬಾರಿ ಹಲವು ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳುವ ಜವಾಬ್ದಾರಿ ಇತ್ತು.

ಕರಾರುವಾಕ್ಕಾಗಿ ನಾಜೂಕಿನಿಂದ ನಭಕ್ಕೆ ಏರಿದ ಕೊಲಂಬಿಯಾ ಹದಿನಾರು ದಿನಗಳ ಕಾಲ  ಬಾಹ್ಯಾಕಾಶ ಯಾನ ಮುಗಿಸಿ ತವರಿಗೆ ಮರಳುವ ಹೊತ್ತು ಬಂತು. ಭೂ ವಾಯುಮಂಡಲವನ್ನು ಪ್ರವೇಶಿಸುತ್ತಲೇ ಅದರ ಹೊರಮೈ ಬಿಸಿಯೇರತೊಡಗಿತು. ಇದು ಸಹಜವೇ. ಆದರೆ ದುರದೃಷ್ಟದಿಂದ, ಉಡ್ಡಯನ ಸಂದರ್ಭದಲ್ಲಿಯೇ ಅದರ ಮೇಲ್ಮೈಯಲ್ಲಿ ತಾಪವನ್ನು ತಡೆಯುವ ಕೆಲವು ಫಲಕಗಳು ಕಿತ್ತೆದ್ದು ಬಂದಿದ್ದುವು. ಅದು ಗೊತ್ತಾಗುವಾಗ ಕಾಲ ಮಿಂಚಿತ್ತು. ಕೊಲಂಬಿಯಾದ  ಉಷ್ಣತೆ ಹೆಚ್ಚುತ್ತ ಹೆಚ್ಚುತ್ತ ಅದು  ಬಾನಂಗಳದಲ್ಲಿ ಉರಿದೇ ಹೋಯಿತು.     ನಗುಮುಖದ ಚಾವ್ಲಾ ನಡೆದಳು ಅನೂಹ್ಯ ಲೋಕಕ್ಕೆ – ಲಕ್ಷೋಪಲಕ್ಷ ಎಳೆಯ ಭಾರತೀಯರಲ್ಲಿ ವ್ಯೋಮ ವಿಜ್ಞಾನದ ಕನಸನ್ನು ಬಿತ್ತಿ.

ಖಗೋಳ ವಿಜ್ಞಾನದ ಪ್ರವರ್ಧನೆಯಲ್ಲಿ ಅವಿಭಾಜ್ಯ ಅಂಗವೇ ಆಗಿದ್ದ ಸ್ಪೇಸ್‌ಶಟಲ್ ಯೋಜನೆ ಇಂದು ಅದಿಕೃತವಾಗಿ ಬರ್ಖಾಸ್ತಾಗಿದೆ. ಅಮೇರಿಕದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ದುರ್ಭರವಾಗುತ್ತಿದೆ. ಎಂದೇ ನಾಸಾ ವ್ಯೋಮ ಯೋಜನೆಗಳಷ್ಟೇ ಅಲ್ಲ, ವೈಜ್ಞಾನಿಕ ಸಂಶೋಧನೆಗಳನ್ನು ಕೈಬಿಡುತ್ತಿದೆ. ಹಬಲ್ ದೂರದರ್ಶಕದ ಸ್ಥಾನವನ್ನು ತುಂಬಲು ಜೇಮ್ಸ್‌ವೆಬ್ ಎಂಬ ದೂರದರ್ಶಕದ ನಿರ್ಮಾಣವಾಗುತ್ತಿತ್ತು. ಒಬಾಮಾ ಸರಕಾರ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಸ್ಥಾಪನೆಯಾಗಬೇಕಾಗಿದ್ದ ಗುರುತ್ವದೂರದರ್ಶಕದ ಯೋಜನೆಯನ್ನು ಮುಂದೂಡಿದೆ. ಹೊಸ ಬಗೆಯ ವ್ಯೋಮ ನೌಕೆಗಳು ಇನ್ನು ಬರಲು ದಶಕಗಳು ಬೇಕಾಗಬಹುದು. ಅಥವಾ ಬದಲಾದ ಸನ್ನಿವೇಶದಲ್ಲಿ ಅವು  ಬರದೇ ಹೋಗಬಹುದೆಂದು ಆರ್ಥಿಕ ವಿಶ್ಲೇಷಕರ ಅಭಿಮತ.

ಸ್ಪೇಸ್ ಶಟಲ್ ಮತ್ತು ವ್ಯೋಮ ಸಂಶೋಧನೆಗಳು ದುಬಾರಿ ಎನ್ನುವುದು ನಿಜ. ಬಿಲಿಯಗಟ್ಟಲೆ ಡಾಲರ್ ಖರ್ಚಾಗಿದೆ ಮತ್ತು ಆಗುತ್ತಿದೆ ಎನ್ನುವುದೂ ನಿಜ. ಆದರೆ ನಮಗೆ ಕನಸುಗಳು ಬೇಕು. ಆ ಕನಸುಗಳನ್ನು ನನಸಾಗಿಸುವ ಪ್ರಯತ್ನಗಳೂ ಬೇಕು. ಇತಿಹಾಸದಲ್ಲಿ ನಡೆದ ಇಂಥ ಪ್ರಯತ್ನಗಳು ಇಂದು ನಮ್ಮನ್ನು ಮುನ್ನಡೆಸುತ್ತಿವೆ ಎನ್ನುವುದನ್ನು ಮರೆಯಬಾರದು. ಸ್ಪೇಸ್‌ಶಟಲ್ ಶಾಶ್ವತವಾಗಿ ನಿಲುಗಡೆಯಾಗದಿರಲಿ!

Categories: ಅವಿಭಾಗೀಕೃತ
 1. ಅಶೋಕ ವರ್ಧನ
  ಆಗಷ್ಟ್ 3, 2011 ರಲ್ಲಿ 1:19 ಫೂರ್ವಾಹ್ನ

  ಮಹಾಸ್ವಾರ್ಥಿ ಅಮೆರಿಕಾಕ್ಕೆ ತಾನೇ ಗೆಳೆಯನೂ ಖಳನೂ ಆಗಿ ಎಬ್ಬಿಸಿದ ಭೂ-ಕಲ್ಲೋಲದಲ್ಲಿ settle ಆಗುವ ಗೊಂದಲದಲ್ಲಿ shuttle ಅನುತ್ಪಾದಕವಾಗಿ ಕಾಣಿಸಿರಬೇಕು. ಮೂಲಭೂತ ವಿಜ್ಞಾನದ ವಿಶ್ವತೋಮುಖವನ್ನು (ಹಬ್ಬಲ್ ಅದಕ್ಕೊಂದು ಸಂಕೇತ ಮಾತ್ರ) ಅಬ್ಬೊಟಾಬಾದಿನ ಲಾಡೆನ್-ನಿವಾಸಕ್ಕೆ ಸೀಮಿತಗೊಳಿಸುವುದು ಹೆಚ್ಚು ಪ್ರಾಯೋಗಿಕ ಅನಿಸಿರಬಹುದು. ವಾಮನಾವತಾರದ ಕಾಲದಲ್ಲಿ ಎರಡೇ ಹೆಜ್ಜೆಗೆ ಮುಗಿದ ವಿಶ್ವವನ್ನು ಇಂದು ವಿಜ್ಞಾನ (ಸಾಂಕೇತಿಕವಾಗಿ ತಲೆ) ತ್ರಿವಿಕ್ರಮ ವ್ಯಾಪ್ತಿ ಪಡೆಯುತ್ತಿರುವ ಕಾಲಕ್ಕೆ (ಜಾಗತೀಕರಣ ಎನ್ನುವ ಭ್ರಮೆಯಲ್ಲಿ) ಭೂಮಿ ಒಂದಕ್ಕೆ ಸೀಮಿತಗೊಳಿಸುವ ನಿರ್ಧಾರ ನಿಜಕ್ಕೂ ಚಿಂತಾಜನಕ. ಪ್ರಾದೇಶಿಕವಾಗಿ, “ಇವನಾರವ ಇವನಾರವ ಎನ್ನದಿರಯ್ಯಾ” ಎಂದು ಹೇಳಿದ ನಿಜಾರ್ಥದ ಜಗದ್ಗುರುಗಳು ಮೆರೆದ ನಾಡಿನಲ್ಲೇ “ಇಂವಾ ನಮ್ಮವ, ಇಂವಾ ನಮ್ಮವ” ಎನ್ನುವ ಜಗದ ಕುರುಗಳನ್ನು ಕಾಣುವಾಗ ನಾವೂ ವಿಶ್ವರಹಸ್ಯಗಳ (ದೊಡ್ಡ ಆದರ್ಶಗಳನ್ನು) ಬಗ್ಗೆ ಕನಸುಕಾಣುವುದು ಬಿಟ್ಟು ನಮ್ಮ ಎಂಟೊಂಬತ್ತು ಅಂಗುಲದ ಪಾದದಡಿ ಮಾತ್ರ ಗಟ್ಟಿ ಮಾಡಿಕೊಳ್ಳುವುದೇ ಲೇಸು ಸರ್ವಜ್ಞ
  ಅಶೋಕವರ್ಧನ

 2. Adhyanadka Krishna Bhat
  ಆಗಷ್ಟ್ 3, 2011 ರಲ್ಲಿ 1:17 ಅಪರಾಹ್ನ

  It is an all inclusive wholesome article.Congratulations.
  Abandoning of the use of Space shuttles – is it a consequence of the
  general policy decision of US regarding the entire space programme or
  a result of any inhernt drawbacks of Spaceshuttles? Doubts of a common
  reader continue to haunt.

  Warm regards,
  AKB

 3. Shyamala.M
  ಆಗಷ್ಟ್ 15, 2011 ರಲ್ಲಿ 10:13 ಫೂರ್ವಾಹ್ನ

  ಸರ್,
  ಈ ಲೇಖನ ತುಂಬಾ ಚೆನ್ನಾಗಿದೆ.ಓದಿ ತುಂಬಾ ಖುಶಿಯಾಯ್ತು.Thanks.

  ಶ್ಯಾಮಲ

 4. ನವೆಂಬರ್ 18, 2011 ರಲ್ಲಿ 7:07 ಅಪರಾಹ್ನ

  I wish I understood Kannada. I gave this a whirl through Google Translate, but it didn’t fare too well. I could get a feel for the general wistful tone of the article, and I’d love to be able to read it in the original voice. Actually, what did come through on google was a bit poetic. A lamentation on the final flight of the “white bird”.

  Hopefully this is a brief lull between inefficient government controlled spaceflight and a boom in private-sector startrekking!

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: