ಮುಖ ಪುಟ > ಅವಿಭಾಗೀಕೃತ > ಗೋ ಸಾಕಣೆಯ ತಲ್ಲಣಗಳು

ಗೋ ಸಾಕಣೆಯ ತಲ್ಲಣಗಳು

ಚಿಕ್ಕವನಾಗಿದ್ದಾಗಿನಿಂದ ಇಂದಿನ ತನಕ – ಅಂದರೆ ಸುಮಾರು ನಾಲ್ಕು ದಶಕಗಳಿಂದ ಜಾನುವಾರು ಅಥವಾ ಗೋಸಾಕಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಬೆಳೆದವನು. ಗೋ ಸಾಕಣೆಯಲ್ಲಿ ಆಸಕ್ತಿ  ಹುಟ್ಟಲು ಕಾರಣ ನನ್ನಮ್ಮ. ಬಾಲ್ಯವನ್ನು ಮುಂಬಯಿಯಂಥ ದೊಡ್ದ ಪೇಟೆಗಳಲ್ಲಿ ಕಳೆದ ಅವಳು ಮದುವೆಯಾಗಿ ಬಂದದ್ದು ಪುತ್ತೂರಿನ ಹಳ್ಳಿ ಮನೆಗೆ. ಪೇಟೆಯ ಬೆಡಗಿ ಹಳ್ಳಿಗೆ ಎಷ್ಟು ಹೊಂದಿಕೊಂಡಳೆಂದರೆ, ಬೆಳಗ್ಗೆ – ಸಂಜೆ ಹಾಲು ಕರೆಯುವುದರಿಂದ ಹಿಡಿದು ಹಸುಗಳನ್ನು ಪ್ರೀತಿಯಿಂದ ಸಾಕುವುದು ಸಾಹಿತ್ಯ ಬರವಣಿಗೆಯಷ್ಟೇ ಅವಳಿಗೆ ಪ್ರಿಯ ಹವ್ಯಾಸವಾಗಿ ಹೋಯಿತು. ಇಂಥ ಪ್ರೀತಿಯೇ ಪ್ರಾಯಶ: ನನ್ನಲ್ಲೂ  ಗೋವುಗಳ ಬಗ್ಗೆ ಒಂದಿಷ್ಟು ಆಸಕ್ತಿ ಹುಟ್ಟಿಸಲು ಕಾರಣವಾಯಿತೇನೋ.

ನನ್ನ ಮತ್ತು ತರವಾಡು ಮನೆಯಲ್ಲಿ ಚಿಕ್ಕ ಪ್ರಮಾಣದ ಡೈರಿ ಇನ್ನೂ ಉಳಿದುಕೊಂಡಿದೆ. ನನ್ನ ದೊಡ್ದಪ್ಪ ನಾಲ್ಕು ದಶಕಗಳ ಹಿಂದೆಯೇ ದೊಡ್ದ ಪ್ರಮಾಣದಲ್ಲಿ ಹಟ್ಟಿಯನ್ನು ಕಟ್ಟಿ ವೃತ್ತಿಪರತೆ ತೋರಿ ನಮಗೆ ಆದರ್ಶರಾದವರು. ಅವರ ಬಾಚಟ್ಟಿಯ ಹಟ್ಟಿ ಸುಮಾರು ಐವತ್ತು ಮೀಟರ್ ಉದ್ದವಿದೆ. ಆದರೆ ನಮ್ಮ ಹೆಚ್ಚಿನವರ ಡೈರಿ ಹಾಲು ಮಾರಾಟಕ್ಕಿಂತ ಹೆಚ್ಚಿಗೆ ಕೃಷಿಗೆ ಬೇಕಾದ ಗೊಬ್ಬರಕ್ಕಾಗಿ ಮತ್ತು ಗೋಬರ್ ಅನಿಲಕ್ಕಾಗಿ.

೧೯೭೦ರ ಹೊತ್ತಿಗೇ ನಮ್ಮ ಮನೆಗೆ  ಗೋಬರ್ ಅನಿಲ ಸ್ಥಾವರ ಬಂತು. ಆ ಸ್ಥಾವರದ ರಚನೆ ತುಂಬ ವೈಶಿಷ್ಟ್ಯವಾದದ್ದು. ಸ್ಥಾವರದಲ್ಲಿ ಕಬ್ಬಿಣದ ಡ್ರಮ್ ಸೆಗಣಿಯಲ್ಲಿ ಮುಳುಗೇಳುವ ಬದಲಿಗೆ,  ಹೊರ ಬಳೆಯ ಎಣ್ಣೆಯಲ್ಲಿ ಮುಳುಗೇಳುತ್ತದೆ.  ಡ್ರಮ್ಮಿಗೆ ಸೆಗಣಿಯ ಸೋಕಿಲ್ಲದೇ  ಇರುವ ಕಾರಣದಿಂದ ತುಕ್ಕಿನ ಅಪಾಯವಿಲ್ಲ. ಮೂವತ್ತೈದು ವರ್ಷಗಳಲ್ಲಿ ಇದು ತನಕ ಒಂದೇ ಒಂದು ಬಾರಿಯೂ ಡ್ರಮ್ಮನ್ನು  ಎತ್ತಿಲ್ಲ. ಡ್ರಮ್ ತೂತಾಗಿಲ್ಲ. ಅನಿಲ ಸ್ಥಾವರ ಮನೆಗೆ ನಿರಂತರ ಅನಿಲ ಉತ್ಪಾದನೆ ಮಾಡುತ್ತಿದೆ. ಖಾದಿ ಗ್ರಾಮೋದ್ಯೋಗ ಮುಂದಿನ ದಿನಗಳಲ್ಲಿ ಈ ರಚನೆಯನ್ನು ಕೈ ಬಿಟ್ಟಿತೆಂದು ಕೇಳಿದ್ದೇನೆ – ಯಾಕೋ ತಿಳಿಯದು.

ಎಲ್ಲ ಕೃಷಿಕರ ಮನೆಯಲ್ಲಿ ಗೋ ಅನಿಲ ಸ್ಥಾವರವಿರಬೇಕು. ಅಷ್ಟರ ಮಟ್ಟಿಗೆ ನಾವು ಸ್ವಾವಲಂಬಿಗಳಾಗುತ್ತ ಇಂಧನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಆದರೆ ಇದಕ್ಕೆ ಮನೆಗಳಲ್ಲಿ ಹಸುಗಳಿರಬೇಕಾಗುತ್ತದೆ.

ಹಿಂದೆ ನಮ್ಮ ಹಟ್ಟಿಯಲ್ಲಿ ಗಿಡ್ಡ ಕಾಲಿನ, ಚಿಕ್ಕ ಗಾತ್ರದ, ಕಿರು ಕೆಚ್ಚಲಿನ,  ರೋಗ ಬಾಧೆಗೆ ತುತ್ತಾಗದ ನಾಡ ತಳಿಗಳ ಹಸುಗಳು, ಮುರ, ಸೂರ್ತಿ ಎಮ್ಮೆಗಳಿದ್ದುವು. ಶಿಲೆ ಹಾಸಿನ ಬದಲಿಗೆ ಸೊಪ್ಪಿನ ಹಟ್ಟಿ. ಮನೆ ತುಂಬ ಝೋಂಯ್ಯುಗುಟ್ಟುತ್ತ ಮೂಗು ಕಿವಿಗಳೆನ್ನದೇ ಎಲ್ಲೆಡೆ ನುಗ್ಗುವ ನೊಣಗಳ ಕಾಟ. ಹಳ್ಳಿಯ ತಾಪತ್ರಯ.

ನಿಧಾನವಾಗಿ ನಾಡ ತಳಿಗಳ  ಜಾಗದಲ್ಲಿ ಹಾಲ್‌ಸ್ಟೀನ್, ಜೆರ್ಸಿ, ರಡ್‌ಡೇಯಿನ್ ಮೊದಲಾದ ಭಾರೀ ಗಾತ್ರದ ವಿದೇಶೀ ತಳಿಗಳು ಬಂದುವು. ಹಟ್ಟಿಯಲ್ಲಿ ಶಿಲೆ ಹಾಸು – ಬಾಚಟ್ಟಿ ವ್ಯವಸ್ಥೆ ಬಂತು. ಗುಡ್ಡ ಬೆಟ್ಟಗಳಲ್ಲಿ, ಹುಲ್ಲುಗಾವಲುಗಳಲ್ಲಿ ಸುತ್ತಾಡಿ ಗೋಧೂಳಿಗೆ ಹಟ್ಟಿ ಸೇರುವ ದಿನಗಳು ಹಿನ್ನೆಲೆಗೆ ಸರಿದು, ಹಗ್ಗ ಸರಪಳಿಗಳಲ್ಲಿಯೇ ಹಸುಗಳು ಬಂದಿಯಾದುವು. ಅವುಗಳೊಂದಿಗೆ ನಾವೂ ಕೂಡ.

ಡೈರಿ ಅನ್ನುವುದು ಇದ್ದರೆ ಮನೆ ಮಂದಿಗೆ ಬೇರೆ ಬಂದೀಖಾನೆ ಬೇಕಿಲ್ಲ. ಕೃಷಿಯ ಬೇರೆ ಕೆಲಸಗಳನ್ನು ಒಂದೆರಡು ದಿನ ಮುಂದೂಡಬಹುದು. ಆದರೆ ಡೈರಿಯ ಕೆಲಸ ಮಾತ್ರ ಆ ದಿನದ್ದು ಆ ದಿನ ಆಗಲೇ ಬೇಕು. ಕೆಚ್ಚಲಲ್ಲಿ ಹಾಲು ಉಳಿದು ಗಟ್ಟಿಕಟ್ಟಿದರೆ  ಮತ್ತೆ ಗೋವಿಂದನೇ ಬರಬೇಕು!

ಹೈಬ್ರಿಡ್ ತಳಿಗಳಿಗೆ ಬರುವ ರೋಗಗಳು ಕೂಡ ಒಂದು ಬಗೆಯಲ್ಲಿ ಹೈಬ್ರಿಡ್ಡೇ. ಅವು ಡೈರಿ ಮಾಡುವ ನಮ ಉತ್ಸಾಹವನ್ನು ನಡುಗಿಸಿ ಬಿಡುತ್ತವೆ. ಕೆಲವು ವರ್ಷಗಳ ಹಿಂದೆ ಕಾಲು-ಬಾಯಿ ರೋಗಕ್ಕೆ ತುತ್ತಾಗಿ ನನ್ನ ಚಿಕ್ಕಪ್ಪನ ಮನೆಯಲ್ಲಿ ಭಾರೀ ಗಾತ್ರದ ನಾಲ್ಕೈದು ಹಾಲ್‌ಸ್ಟೀನ್ ದನಗಳು ಸತ್ತೇ ಹೋದುವು – ಯಾವ ಮದ್ದಿಗೂ ರೋಗ ಜಗ್ಗಲಿಲ್ಲ. ಸತ್ತ ಅವುಗಳ ಸಂಸ್ಕಾರ ಸುಲಭವೇ?  ಹಸುಗಳ ಭಾರೀ ಗಾತ್ರಕ್ಕೆ ಸಮನಾಗಿ ಏಳೆಂಟು ಅಡಿ ಉದ್ದ ಮತ್ತು ಆಳದ ಗುಂಡಿಗಳಾಗಬೇಕು. ಅರ್ಧ ಟನ್ನಿಗೂ ಮಿಕ್ಕಿದ ತೂಕವಿರುವ ಹಸುವಿನ ಕಳೇಬರವನ್ನು ಹಟ್ಟಿಯಿಂದ ಹಾಗೂ ಹೀಗೂ ಹೊತ್ತು, ಎಳೆದು ಗುಂಡಿಗೆ ಹಾಕುವಾಗ ಜೀವವೇ ಬಾಯಿಗೆ ಬಂದಂತಾಗಿತ್ತು. ಜನ ಬಲವಿಲ್ಲದೇ ಇಂಥ ಕೆಲಸಗಳು ಸಾಧ್ಯವಾಗದು.

ಒಂದೂವರೆ ವರ್ಷಗಳ ಹಿಂದೆ. ನನ್ನ ಹಟ್ಟಿಗೇ ಶೋಭಾಯಮಾನವಾಗಿರುವ ಘನ ಗಾಂಭೀರ್ಯದ ಶಹಿವಾಲ್ ದನ ನಡು ರಾತ್ರೆ ಕರು ಹಾಕಿತು. (ಹೆಚ್ಚಾಗಿ ಹಸುಗಳು ರಾತ್ರೆಯೇ ಕರು ಹಾಕುತ್ತವೆ. ಅಂದರೆ ಮನೆ ಮಂದಿಗೆ ಜಾಗರಣೆ). ಬೆಳಗ್ಗೆ ನೋಡುತ್ತೇನೆ – ಕರು ಹೊರಗೆ ಬಿದ್ದಿದ್ದೆನೋ ನಿಜ, ಅದರೊಂದಿಗೆ ಕರುವಿನ ಆಕಾರದಲ್ಲಿರುವ, ಮೈಮೇಲಲ್ಲೆಲ್ಲ ಗಂಟುಗಳಿದ್ದ ಗರ್ಭಕೋಶ ಕೂಡ ಹೊರಗೆ ಬಂದಿತ್ತು. ಪುಣ್ಯ, ಅರುವತ್ತೈದರ ಎಳೆಹರೆಯದ ಪಶುವೈದ್ಯರು (ಡಾ.ಸದಾಶಿವ ಭಟ್ , ಮುದ್ಲಜೆ) ಬೆಳ್ಳಂಬೆಳಗ್ಗೆ ಧಾವಿಸಿ ಬಂದರು ನನ್ನ ಕರೆಗೆ. ಅವರೂ, ನಾನೂ, ನನ್ನ ಕೆಲಸದಾಳುಗಳೂ ಸೇರಿ ಗರ್ಭಕೋಶವನ್ನು ಒಳ ಸೇರಿಸಿ, ಮತ್ತೆ ಪುನ: ಹೊರ ಜಾರದಂತೆ ಹೊಲಿಗೆ ಹಾಕಿ, ಕೆಲಸ ಮುಗಿಸುವಾಗ ಬರೋಬ್ಬರಿ ಮೂರು ಗಂಟೆಗಳು ಕಳೆದಿತ್ತು. ದನದೊಂದಿಗೆ ನಾವೂ ಜನರು ಸುಸ್ತು. ಗಟ್ಟಿ ಜೀವವಾದರೂ ಈ ಎಲ್ಲ ಎಳೆದಾಟದಿಂದ ದನ ಜ್ವರಪೀಡಿತವಾಯಿತು. ನಾನಿನ್ನು ಏಳಲಾರೆ ಎಂದು ಹಠ ಹಿಡಿಯಬೇಕೇ? ದನ ಏಳದೇ ಹೋದರೆ ಅದು ಅಪಾಯಕಾರೀ ಲಕ್ಷಣ. ಗಂಟೆಗಳಲ್ಲಿ ಹೊಟ್ಟೆ ಉಬ್ಬರಿಸಿ ಜೀವ ಬಿಡುವುದಕ್ಕೆ ಸನ್ನದ್ಧವಾಗುತ್ತದೆ. ಮತ್ತೆ ಅಗಾಧ ಗಾತ್ರದ ದನವನ್ನು ಏಳಿಸುವ,  ನಿಲ್ಲಿಸುವ ಸಾಹಸ ಶುರು. ಜತೆ ಜತೆಯಲ್ಲಿ ಹುಳಗಳಾಗದಂತೆ ಬೇವಿನ ಎಣ್ಣೆ, ಕರ್ಪೂರದ ಹುಡಿಯ ಸಿಂಪರಣೆ. ಎಲ್ಲ ಒಟ್ಟು ಸೇರಿ ಇಡೀ ಹಟ್ಟಿಯಲ್ಲಿ ಒಂದು ಬಗೆಯ ವಿಶಿಷ್ಟ ಮೂರಿ. ಹಾಗೂ ಹೀಗೂ ವಾರದಲ್ಲಿ ದನ ಹುಷಾರಾದಾಗ ಓಹ್, ಅದೆಂಥ ಆನಂದ,  ಕೃತಾರ್ಥ ಭಾವ.

ಮುಂದಿನ ಬಾರಿ ಏನಾಗಬಹುದು ಎಂಬ ಆತಂಕ ಇನ್ನೂ ಕಾಡುತ್ತಿದೆ. “ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ” ದೊಡ್ದದೆರಡು ಚೆಂಬು ತುಂಬ ಹಾಲು ಕೊಡುವ (ಹದಿನೈದು ಲೀಟರ್!) ಈ ಪುಣ್ಯಕೋಟಿಯನ್ನು ಕೊಡುವುದಕ್ಕೆ ಮನ ಹೇಗೆ ಬಂದೀತು? ಹಲವರು ದನವನ್ನು ಕೊಟ್ಟು ಬಿಡಿ ಅಂದರೂ ಮನಸ್ಸಾಗದೇ ಉಳಿಸಿಕೊಂಡಿದ್ದೇನೆ. ಇದೀಗ ಅದಕ್ಕೆ ನಾಲ್ಕು ತಿಂಗಳು ಗಬ್ಬ.  ಧೈರ್ಯ ಮಾಡಿದ್ದೇನೆ. ಒಮ್ಮೆ ಆದದ್ದು ಎಲ್ಲ ಸಮಯದಲ್ಲೂ ಆಗಬೇಕೆಂದಿಲ್ಲ ತಾನೇ.

ಯಾವುದೇ ದನ ಕರು ಹಾಕುವ ಕಾಲಕ್ಕೆ ಆತಂಕ ಶುರುವಾಗುತ್ತದೆ.  ಕಾಲು ಕೈ ಒಳಕ್ಕೆ ಸಿಕ್ಕಿಕೊಂಡು, ಅಥವಾ ಕರುವಿನ ಗಾತ್ರ ಅಗಾಧವಾಗಿರು ಹಾಕಲು ಕಷ್ಟವಾಗಿ ಕರು – ದನ ಗತಪ್ರಾಣವಾದದ್ದೂ ಇದೆ ನಮ್ಮ ಹಟ್ಟಿಯಲ್ಲಿ. ಹೊರಕ್ಕೆ ಬಾರದೇ ಗರ್ಭದೊಳಗೇ ಸಿಕ್ಕಿಕೊಂಡ ಕರುವನ್ನು ತೆಗೆಯಲು ಕರುವಿನ ಭುಜದ ಭಾಗಕ್ಕೆ ಹಗ್ಗವನ್ನು ಬಿಗಿದು, ಇನ್ನೊಂದು ತುದಿಗೆ ಬಡಿಗೆ ಸಿಕ್ಕಿಸಿ ಎರಡು ಮೂರು ಮಂದಿ ಸೇರಿ ಎಳೆದೆಳೆದು ಹೊರ ತೆಗೆವ ಗಲಾಟೆಯಲ್ಲಿ, ಕರು ಸತ್ತು ದನದ ಪಕ್ಕೆಗೆ ಪೆಟ್ಟಾಗಿ ಅದು ಮೇಲೇಳದ ಸ್ಥಿತಿಗೆ ಬಂದ ಉದಾಹರಣೆಗಳು ಎಷ್ಟೋ ಇವೆ. ಬಸರಿ ಮರದ ಸೊಪ್ಪು  ತಿಂದು ನಮ್ಮ ಹಟ್ಟಿಯಲ್ಲಿ ಎರಡು ದನಗಳು ಸತ್ತದ್ದು ನೆನಪಾಗುತ್ತಿದೆ.

ಸುಮಾರು ಆರೇಳು ತಿಂಗಳಾಯಿತು. ಒಂದು ದಿನ ಬೆಳಗ್ಗೆ ಐದರ ಹೊತ್ತಿಗೆ ಎಂದಿನಂತೆ ಹಟ್ಟಿಯ ಕೆಲಸ ಮುಗಿಸಿ ತುಸು ವೇಗದಲ್ಲಿ ಹೆಜ್ಜೆ ಹಾಕಿದೆ. ತಲೆ ಎಲ್ಲಿತ್ತೋ ಗೊತ್ತಿಲ್ಲ – ಅಂಗಾತ – ಬೆನ್ನಿನ ಮೇಲೆ ಅಪ್ಪಳಿಸಿದ್ದಷ್ಟೇ ಗೊತ್ತು. ತುಸು ಹೊತ್ತು ಕಣ್ಣು ಕವಿಯಿತು. ಅಸಾಧ್ಯ ನೋವು. ಹಾಗೂ ಹೀಗೂ ಮನೆ ಸೇರಿದೆ. ಬೆನ್ನು ಮೂಳೆಗಳು ಮುರಿಯದೇ ಇದ್ದದ್ದು ನನ್ನ ಅದೃಷ್ಟ. ತಿಂಗಳುಗಳ ಕಾಲ ಅಸಾಧ್ಯ ನೋವು. ಇನ್ನೂ ಉಳಿದಿದೆ ಅದರ ಶೇಷ ಅಷ್ಟಿಷ್ಟು. ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ ಗೋ ಸಾಕಣೆ ಸಹನೆ ಮತ್ತು ಶ್ರಮ ಎರಡನ್ನೂ ಬೇಡುತ್ತದೆ.

ಇಂದು ಗೋ ಸಾಕಣೆ ಅರ್ಥಿಕವಾಗಿ ಹಿಂದೆಂದಿಗಿಂತ ತೀವ್ರವಾಗಿ ದುಬಾರಿಯಾಗುತ್ತಿದೆ. ಹಿಂಡಿಯ ಕ್ರಯ ದಿನದಿಂದ ದಿನಕ್ಕೆ ಲಂಗುಲಗಾಮಿಲ್ಲದೇ ಏರುತ್ತಿದೆ. ಕರಾವಳಿಯ ನಮ್ಮ ಗದ್ದೆಗಳು ಅಡಿಕೆಯ ತೋಟಗಳಾಗಿವೆ, ಇಲ್ಲವೇ ಬಂಜರು ಬಿದ್ದಿವೆ. ಹಾಗಾಗಿ ನಾವು ಒಣ ಮೇವಿಗಾಗಿ ಘಟ್ಟ ಅಥವಾ ಬಯಲು ಸೀಮೆಯನ್ನು ಆಶ್ರಯಿಸಬೇಕಾಗಿದೆ. ಅಲ್ಲಾದರೂ ಅಷ್ಟೇ. ಭತ್ತ, ಜೋಳದ ಗದ್ದೆಗಳಲ್ಲಿ ಕಬ್ಬು ಅಥವಾ ಅಡಿಕೆ, ಅರಷಿಣ, ಶುಂಠಿ ಏಳುತ್ತಿವೆ. ಪರಿಣಾಮವಾಗಿ ಒಣ ಹುಲ್ಲು ಸಿಗುವುದು ದುರ್ಭರವಾಗಿ ಕ್ರಯ ಊಹಿಸಲಾಗದಷ್ಟು ಹೆಚ್ಚಿದೆ.  ಹಿಡಿ ಗಾತ್ರದ ಬೈಹುಲ್ಲಿನ ಕಂತೆಗೆ ವರ್ಷದ ಹಿಂದೆ ಹನ್ನೆರಡರಿಂದ ಹದಿಮೂರು ರೂಪಾಯಿ ಇದ್ದರೆ ಇಂದು ಬರೋಬ್ಬರಿ ಇಪ್ಪತ್ತು ರೂಪಾಯಿ. ಲಾರಿ ಲೋಡಿಗೆ ನಲುವತ್ತೈದು ಸಾವಿರ ರೂಪಾಯಿ. ನಾನು ವರ್ಷಕ್ಕೆ ಒಂದೂವರೆ ಲೋಡ್ ಬೈಹುಲ್ಲು ಕೊಳ್ಳುತ್ತೇನೆ – ಇದು ಅನಿವಾರ್ಯ. ತೋಟದ ತುಂಬ ಹಸಿರು ಹುಲ್ಲು ತುಂಬಿದೆ. ದನಗಳನ್ನು ಮೇಯಿಸಲು ಕಂತಾಮುಟ್ಟೆ ತೋಟ. ದನಕ್ಕೂ ನಮಗೂ ಕ್ರಮ ತಪ್ಪಿ ಹೋಗಿದೆ. ಹುಲ್ಲು ಮಾಡಲು ಜನ ಬಲವಿಲ್ಲ.

ಇನ್ನು ಹಿಂಡಿಯ ಕ್ರಯ ಕನಸಿನಲ್ಲೂ ಬೆಚ್ಚಿಸುವಷ್ಟು ಹೆಚ್ಚಿದೆ. ವರ್ಷದ ಹಿಂದೆ ಐವತ್ತು ಕೆಜಿ ಬೂಸಾ ಗೋಣಿಗೆ ಸುಮಾರು ಐನೂರು ರೂಪಾಯಿಗಳಷ್ಟಿತ್ತು. ಇಂದು ಆರೂನೂರೈವತ್ತರ ಗಡಿ ದಾಟಿ ಮತ್ತೂ ಮುನ್ನುಗ್ಗುತ್ತಿದೆ. ಚಿದಂಬರ ಸಾಹೇಬರು ಪೆಟ್ರೋಲ್ – ಡಿಸೆಲ್ ದರ ಏರಿಸದೇ ಏರಿಸುವ ಸಾಧ್ಯತೆ ಇದೆ ಎಂದರೂ ಸಾಕು – ಹಿಂಡಿಯ ಕ್ರಯ ಏರುವುದೇ ಚಿದಂಬರ ರಹಸ್ಯ. ಎಷ್ಟು ಏರಿದರೇನು – ಹಸು ಸಾಕಬೇಕೆಂದರೆ ಕೊಳ್ಳುವುದು ಅನಿವಾರ್ಯ. ಅದು ಹಿಂಡಿಯ ಉತ್ಪಾದಕರಿಗೆ ಚೆನ್ನಾಗಿ ಅರಿವಿದೆ.

ಹಟ್ಟಿ ಗೊಬ್ಬರ ಅತ್ಯುತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಚೆನ್ನಾಗಿ ಕಳಿತ ಗೊಬ್ಬರದಲ್ಲಿ ಕೃಷಿ ಹಸನಾಗುತ್ತದೆ. ಆದರೆ ಈ ಗೊಬ್ಬರದ ಸೃಷ್ಟಿ ಹಿಂದಿನಷ್ಟು ಸರಳವಾಗಿಲ್ಲ. ನಿರಂತರವಾಗಿ ಸೊಪ್ಪು ತರಬೇಕು. ಇದಕ್ಕೆ ಕಾಡು ಬೇಕು ಮತ್ತು ಜನ ಬೇಕು. ಎರಡಕ್ಕೂ ತೀವ್ರ ಬರ. ಒಂದು ಭಟ್ಟಿ ಹಟ್ಟಿಗೊಬ್ಬರಕ್ಕೆ ಕನಿಷ್ಠ ಇಪ್ಪತ್ತೈದು ರೂಪಾಯಿ ವೆಚ್ಚವಾಗುತ್ತದೆ. ಈ ಎಲ್ಲ ತಾಪತ್ರಯ ಬೇಡವೆಂದು ಹಟ್ಟಿಯ ಗಂಜಲವೆಲ್ಲವನ್ನು ಟ್ಯಾಂಕಿಗಳಲ್ಲಿ ಶೇಖರಿಸಿ ಸಿಂಪರಣೆಯ ಹೊಸ ವ್ಯವಸ್ಥೆಗಳು ಇಂದು ಜನಪ್ರಿಯವಾಗುತ್ತಿವೆ. ಕಾಲಕ್ಕೆ ತಕ್ಕ ಕೋಲದ ಇಂಥ ವ್ಯವಸ್ಥೆಗಳಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಸಬ್ಸಿಡಿ ಘೋಷಣೆಯಾದೊಡನೆ ಹಸುಗಳಿಗೆ ಖಾಯಸ್ಸು ಹೆಚ್ಚುತ್ತದೆ. ಸಬ್ಸಿಡಿ ಆಶೆಗೆ ಡೈರಿಗಳನ್ನು ಆರಂಭಿಸುವವರಿದ್ದಾರೆ. ಒಮ್ಮೆಲೇ ದೊಡ್ಡ ಮಟ್ಟದಲ್ಲಿ ಡೈರಿ ಆರಂಭಿಸಿ,  ಒಂದೆರಡು ವರ್ಷಗಳಲ್ಲಿ  ಸದ್ದಿಲ್ಲದೇ ಡೈರಿ ಮುಚ್ಚಿದವರೂ ಹಲವರಿದ್ದಾರೆ. ನಮ್ಮ ಕರಾವಳಿಯ ಹಳ್ಳಿಗಳಲ್ಲಿ ಇಂದು ಮನೆ ಮನೆಗಳಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರೈತರ ಮನೆಗಳಲ್ಲಿಯೂ ಪೆಕೇಟು ಹಾಲಿನ ಸಂಸ್ಕೃತಿ ಬಂದಿದೆ. ಹಳ್ಳಿಯ ಮೂಲೆಗಳಲ್ಲಿರುವ ಗೋಡಂಗಡಿಗಳಲ್ಲಿ ಇಂದು ಪೆಕೇಟು ಹಾಲು ಲಭ್ಯ ತಾನೇ. ಎಷ್ಟೋ ದೊಡ್ಡ  ಕೃಷಿಕರಲ್ಲಿ ಇಂದು ಹಸುಗಳಿಲ್ಲ. ಕೃಷಿಗಾಗಿ ಕೋಳಿ, ಕುರಿ, ಆಡು ಅಥವಾ ಹಂದಿಯ ಗೊಬ್ಬರವನ್ನು ಆಶ್ರಯಿಸುತ್ತಿದ್ದಾರೆ. ಡೈರಿ ಸಾಕಣೆಯ ಕರಕರೆ ಇಲ್ಲದೇ ಅಷ್ಟರ ಮಟ್ಟಿಗೆ ನಾವು ಸ್ವತಂತ್ರರೆಂದು ಹೇಳಿಕೊಳ್ಳುವಾಗ ಆ ದನಿಯಲ್ಲಿ ಗಾಢ ನೋವು ಕಾಣಬಹುದು. ಸತ್ಯ ಹೇಳಬೇಕೆಂದರೆ ಅವರ ಸಾಲಿಗೆ ನಾನು ಸೇರಿಕೊಳ್ಳುವ ದಿನ ಯಾವಾಗ ಬರುತ್ತದೋ ತಿಳಿಯದು.

ಹಸುಗಳ ಸಾಕಣೆಯಲ್ಲಿ ಯಾವಾಗ ಕೃತಕ ಗರ್ಭಧಾರಣೆಯ ವ್ಯವಸ್ಥೆ ಬಂತೋ, ವರ್ಷಕ್ಕೊಂದರಂತೆ ಹಸುಗಳು ಕರು ಹಾಕತೊಡಗಿದುವು. ಅವುಗಳ ಸಾಕಣೆಯ ಜತನದಲ್ಲಿ ಒಂದೆರಡೇ ವರ್ಷಗಳಲ್ಲಿ ಹಟ್ಟಿ ಹಸುಗಳಿಂದ ತುಂಬಿ ತುಳುಕುತ್ತದೆ. ಹಾಗಾಗಿ ಕೆಲವನ್ನು ಮಾರಾಟ ಮಾಡುವುದು ಅನಿವಾರ್ಯ. ಮಾರದೇ ಎಲ್ಲ ಉಳಿಸಿಕೊಂಡರೆ ಆತ ಅವೆಲ್ಲವನ್ನು ಸಾಕಲು ತನ್ನ ಜಾಗವನ್ನು ಇಂಚು ಇಂಚಾಗಿ ಮಾರಬೇಕಾದೀತು! ಅಂಥ ಪರಿಸ್ಥಿಗೆ ಬಂದವರಿದ್ದಾರೆ ಕೂಡ.

ನಿಜ, ಗೋ ಹತ್ಯೆ ತುಂಬ ವೇದನೆ ತರುತ್ತದೆ ಮನಸ್ಸಿಗೆ. ದನ-ಕರುಗಳ ಮಾರಾಟ ಮಾಡುವ ಆ ದಿನಗಳಲ್ಲಿ ಮನ ಭಾರವಾಗುತ್ತದೆ. ಇವ್ಯಾವುವೂ ಬೇಡ ಅನ್ನಿಸುತ್ತದೆ. ಭಾವನಾತ್ಮಕ ಪ್ರಪಂಚ ಬೇರೆ; ವಾಸ್ತವ ಪ್ರಪಂಚ ಬೇರೆಯೇ. ಹಾಗಾಗಿ ಇಂದಿಗೂ ಕುಂಟುತ್ತ ಏಗುತ್ತ ಸಾಗುತ್ತಿದೆ ನಮ್ಮ ಮನೆಯಲ್ಲಿ ಡೈರಿ.

ಗೋವುಗಳನ್ನು ಮಾಂಸವಾಗಿ ಕೊಲ್ಲುವ ಅಥವಾ ತಿನ್ನುವ ಎಲ್ಲರೂ ಕಟುಕರೆಂದು ಭಾವಿಸಬಾರದು. ನಮ್ಮದಲ್ಲದ ಆಯ್ಕೆಯ ಕಾರಣದಿಂದ ಹುಟ್ಟಿದ ಧರ್ಮದಲ್ಲಿ ಗೋ ಮಾಂಸ ಭಕ್ಷಣೆ ನಿಷಿದ್ಧವೆಂದಾದರೆ, ಅದುವೇ ಅಂತಿಮ ಶಾಸನವಾಗಿ ಎಲ್ಲರ ಮೇಲೆ ಹೇರುವ ಹಕ್ಕು ನಮಗಿಲ್ಲ. ತಳವಾರು ಝಳಪಿಸಿಕೊಂಡು ಕಂಡ ಕಂಡಲ್ಲಿ ಗೋವುಗಳ ಬೇಟೆಯಾಡುತ್ತ ಹೋದಾಗ ನಾವು ವಿರೋಧಿಸುವುದರಲ್ಲಿ ಅರ್ಥವಿದೆ. ಕೇವಲ ಮಾಂಸಕ್ಕಾಗಿಯೇ ದನ ಸಾಕುವ ಮಂದಿ ಇದ್ದರೂ ಇರಬಹುದು. ಅಪ್ಪಟ ಸಸ್ಯಹಾರೀ ಬ್ರಾಹ್ಮಣರು ಕೂಡ ಹೈಬ್ರಿಡ್ ಆಡುಗಳ ಸಾಕಣೆಯನ್ನು, ಕೋಳಿ ಫಾರ್ಮುಗಳನ್ನು, ಸಿಗಡಿ ಕೃಷಿಯನ್ನು ಮಾಡುತ್ತಿರುವ ಮತ್ತು ಅದರಲ್ಲಿ ಯಶಸ್ಸು ಕಂಡ ಉದಾಹರಣೆಗಳೂ ಉಂಟು.   ಇದು  ಬದುಕಿನ ವೈವಿದ್ಯತೆ.

ಸುಮಾರು ಮೂರು ತಿಂಗಳುಗಳಾಯಿತು. ಒಂದು ದಿನ “ಬೆಳ್ಳಂಬೆಳೀಗೆ”  ನಮ್ಮ ಮನೆಯ ಸನಿಹದಲ್ಲೇ ಸಾಗುವ ಹೆದ್ದಾರಿಯಲ್ಲಿ ಗಲಾಟೆ. ರಸ್ತೆಯ “ತಿರ್ಗಾಸಿನಲ್ಲಿ” ಲಾರಿಯೊಂದು ಪಲ್ಟಿಯಾಗಿ ಅದರೊಳಗೆ ಇದ್ದ ನಾಲ್ಕೈದು ದನಗಳು ಸತ್ತರೆ, ಉಳಿದವು ಬದುಕಿದೆಯಾ ಬಡ ಜೀವವೇ ಎನ್ನುತ್ತ ಬಾಲ ಎತ್ತಿ ಓಡಿ ಪಾರಾದುವು. ಆದದ್ದಿಷ್ಟು. ದನಗಳನ್ನು ಒಯ್ಯುತ್ತಿದ್ದ ಲಾರಿಯನ್ನು ಬೆಂಬತ್ತಿ ಬರುತ್ತಿದ್ದರು ಪೋಲೀಸರು. ತಿರ್ಗಾಸಿನಲ್ಲಿ ಲಾರಿ ಆಯ ತಪ್ಪಿ ಉರುಳಿತು. ಚಾಲಕ ಮತ್ತಿತರರು ಓಡಿ ಮರೆಯಾದರು. ಲಾರಿಯಿಂದ ಸಾಯದೇ, ಓಡದೇ ಉಳಿದ ನಾಲ್ಕೈದು ಕರುಗಳನ್ನು ಊರಿನ ಕೆಲವರಿಗೆ ಪೋಲೀಸರು ದಾನವಾಗಿ ಇತ್ತರು. ಆ ಕರುಗಳನ್ನು ಸಾಕುವುದು ಆ ಹೊತ್ತಿಗೆ ಅವರಿಗೆ ಅಭಿಮಾನದ, ಖುಷಿಯ ಸಂಗತಿಯಾದದ್ದು ಸುಳ್ಳಲ್ಲ. ತಿಂಗಳೊಳಗೆ ಸುಸ್ತಾದರು. ಇಂದು ಕರುಗಳು ಬೇರೆ ಬೇರೆ ಕಡೆಗೆ ಸಾಗಿವೆ.

ನಿಜ, ಹಸುಗಳನ್ನು ತೀವ್ರ ಪೈಶಾಚಿಕ ಬಗೆಯಲ್ಲಿ ಕೊಲ್ಲುತ್ತಾರೆನ್ನುವುದನ್ನು ಅಲ್ಲಗಳೆಯಲಾರೆ. ಮಾಂಸಕ್ಕಾಗಿ ಇತರ ಪ್ರಾಣಿಗಳನ್ನು ಕೊಲ್ಲುವಲ್ಲೂ ಇಂಥದೇ ಪರಮಾವಧಿ ಕ್ರೌರ್ಯ ಇರಬಹುದು. ಕೋಳಿಗಳನ್ನು ಲಾರಿಗಳಲ್ಲಿ ತುಂಬಿ ಸಾಗಿಸುವ ರೀತಿಯನ್ನು ಕಂಡಾಗ, ಕ್ಯಾಬೇಜು ಮಾರಾಟ ಮಾಡಿದಂತೆ ಸೈಕಲ್ಲಿನಲ್ಲಿ ಕೋಳಿಗಳನ್ನು ತಲೆಕೆಳಗಾಗಿ ನೇತು ಹಾಕಿಕೊಂಡು ಮಾರಾಟ ಮಾಡುವ ಹೊಸ ಬಗೆಯನ್ನು ನೋಡಿದಾಗ ಮನಸ್ಸು ಕಲಕುತ್ತದೆ. ಪ್ರಾಣಿ ಹತ್ಯೆ ಬಿಟ್ಟು ಮಾಂಸಾಹಾರವನ್ನು ಜನರು ಎಷ್ಟು ತ್ಯಜಿಸುತ್ತಾರೋ ಅಷ್ಟಷ್ಟು ಒಳ್ಳೆಯದು. ಇದು ಕೂಡ ಒಂದು ಬಗೆಯಲ್ಲಿ  ಭಾವನಾತ್ಮಕವಾದ ಸಾಪೇಕ್ಷ ನಿಲುವೇ ಆಗಿದೆ.  ಪ್ರಾಯಶ: ಗೋಹತ್ಯೆ ನಿಷೇಧದ ಕಾನೂನಿಗಿಂತ, ಗೋವುಗಳ ಹತ್ಯೆಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಕ್ರೌರ್ಯದಲ್ಲಿ, ಸಹನೀಯ ವಿಧಾನಗಳಲ್ಲಿ ಮಾಡುವಂತೆ ಕ್ರಮ ಕೈಗೊಳ್ಳುವುದು ಹೆಚ್ಚು ಸಮಂಜಸವೆಂದು ನನಗೆ ಅನ್ನಿಸುತ್ತದೆ. ನೀವೇನನ್ನುತ್ತೀರಿ?

(ಇದು ಕೆಂಡ ಸಂಪಿಗೆಯಲ್ಲಿ ಪ್ರಕಟವಾದ ಬರಹ. ದಾಖಲೆಗಾಗಿ ಇಲ್ಲಿದೆ. http://kendasampige.com/article.php?id=3435)

Categories: ಅವಿಭಾಗೀಕೃತ
  1. ಏಪ್ರಿಲ್ 18, 2011 ರಲ್ಲಿ 4:46 ಅಪರಾಹ್ನ

    ರಾಧಾ,
    ಮಾಂಸಾಹಾರದ ಬಗ್ಗೆ ನನಗೂ ನಿನ್ನಂತೆ ಅಭಿಪ್ರಾಯ. ದನಗಳ ಬಗ್ಗೆ ಏನು ಮಾಡಬೇಕು ಎಂದು ತೋಚುವುದಿಲ್ಲ. ನಿನ್ನ ಲೇಖನ ಚೆನ್ನಾಗಿ ಮೂಡಿ ಬಂದಿದೆ. ಆದರೆ ನಾವಿನ್ನು ಭವಿಷ್ಯದಲ್ಲಿ ಹಾಲಿನ ಬದಲಿಗೆ ಏನನ್ನು ಸೇವಿಸಬೇಕೆಂದು ಗೊತ್ತಿಲ್ಲ, ಅದೊಂದು ಸಮಸ್ಯೆ ! ದೊಡ್ಡ ಊರುಗಳಲ್ಲಿ ದನ ಸಾಕುವವರು ದನಗಳನ್ನು ಹಿಂಡುವುದೊಂದನ್ನು ಬಿಟ್ಟು ಬೇರೇನನ್ನೂ ಮಾಡುವುದಿಲ್ಲ. ದನಗಳು ಕೊಳಚೆ ತಿಪ್ಪೆಯಿಂದ ತಿನ್ನುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ.ಮನುಷ್ಯನ ಸ್ವಾರ್ಥಕ್ಕೆ ಮಿತಿಯೇ ಇಲ್ಲ ! ಒಂದು ಸಂದರ್ಭದಲ್ಲಿ ದನವೊಂದು ಬೆಂಗಳೂರಿನ ಹೊಲಸು ನಾಲಾವೊಂದರಿಂದ ನೀರನ್ನು ಕುಡಿಯುತ್ತಿತ್ತು. ಅದಕ್ಕೆ ರೋಗ ಬರಲಾರದ ಎಂದು ಸಮಸ್ಯೆಯಾಯಿತು ನನಗೆ.ಈ ಲೋಕದಲ್ಲಿ ಎಷ್ಟೋ ಸಮಸ್ಯೆಗಳಿಗೆ ಪರಿಹಾರವಿಲ್ಲ.
    ಶೈಲಾ

    • NagathihalliDivakar
      ಜನವರಿ 25, 2013 ರಲ್ಲಿ 3:23 ಅಪರಾಹ್ನ

      houdu nijavaada mAthu, janagalu hasugalannu sakthare adakke mevu-nirannu sariyaagi needuvudilla. ellandaralli bittiruthare. NagathihalliDivakar.

  2. Nemichandra
    ಏಪ್ರಿಲ್ 19, 2011 ರಲ್ಲಿ 9:54 ಫೂರ್ವಾಹ್ನ

    Namaste,

    I did not know all that is involved in taking care of cows – very nicely you have explained the complexities involved.

    Regards,
    Nemichandra

  3. ಏಪ್ರಿಲ್ 20, 2011 ರಲ್ಲಿ 3:02 ಫೂರ್ವಾಹ್ನ

    ಬಲು ಹಿಂದೆ ನಮ್ಮ ಮನೆಯಲ್ಲಿಯೂ ಒಂದು ಹಸು ಸಾಕುತ್ತಿದ್ದರು. ಒಂದು ಹಸು ಸಾಕುವುದೇ ಕಷ್ಟವಾದಾಗ ಅದನ್ನು ಮಾರಿದರು. (ಕಸಾಯಿ ಖಾನೆಗಲ್ಲ. ಹೈನುಗಾರಿಕೆ ಪೂರ್ಣಾವಧಿ ಗಮನ ಬೇಡುವ ಉದ್ಯಮ ಎಂಬುದು ನನ್ನ ಅಭಿಪ್ರಾಯ. ಯಾವುದೇ ಪ್ರಾಣಿಯನ್ನು ತಿನ್ನಲೋಸುಗ ಕೊಲ್ಲುವುದು ಅಕ್ಷಮ್ಯ ಎಂಬುದು ನನ್ನ ನಿಲುವು. ವಯಸ್ಸಾದ/ನಿಷ್ಪ್ರಯೋಜಕ ಎಂದು ನಾವು ಭಾವಿಸುವ ಜಾನುವಾರುಗಳನ್ನು ನೋಡಿಕೊಳ್ಳುವ ವ್ಯವಸ್ಥೆ (ನಮ್ಮ ವೃದ್ಧಾಶ್ರಮಗಳಂತೆ)ಸೃಷ್ಟಿಯಾಗ ಬೇಕು.

  4. ಗೋವಿಂದ ನೇಲ್ಯಾರು
    ಏಪ್ರಿಲ್ 20, 2011 ರಲ್ಲಿ 10:26 ಫೂರ್ವಾಹ್ನ

    ತುಂಬಾ ಚೆನ್ನಾಗಿ ಬರೆದಿದ್ದೀರಿ. ಮುಂದಿನ ದಿನಗಳು ಇನ್ನೂ ಕಠೀಣ ಅನಿಸುತ್ತದೆ. ಮೊದಲೆಲ್ಲ ಹುಲ್ಲು ಸೊಪ್ಪು ತಿನ್ನುತ್ತಿದ್ದ ನಮ್ಮ ದನಗಳೆಲ್ಲ ಕ್ರಮೇಣ ಖನಿಜ ತೈಲ ಅವಲಂಬಿಸಿವೆ. ಈ ತೈಲವನ್ನು ವಾಹನಕ್ಕೆ ಬಳಸುವುದೋ, ನಮಗೆ ಆಹಾರಕ್ಕೋ ಅಲ್ಲ ಪಶು ಆಹಾರಕ್ಕೋ ಅನ್ನುವ ದ್ವಂದ್ವ ಪ್ರಾರಂಬವಾಗಲಿದೆ. ಇನ್ನು ಮೂವತ್ತು ವರ್ಷ ಕಳೆಯುವಾಗ ನಮ್ಮ ಅಹಾರ ಅಥವಾ ಪಶು ಆಹಾರಕ್ಕೆ ಅನಿವಾರ್ಯವಾಗಿರುವ ಯುರಿಯಾ ತಯಾರಿಸಲು ತೈಲವೇ ಮುಗಿದಿರುತ್ತದೆ. ಯೋಚಿಸುವಾಗ ಗಾಬರಿಯಾಗುತ್ತದೆ.

    ಕೊಲ್ಲುವಾಗ ಹಿಂಸೆ ಉಂಟುಮಾಡದ ಅದುನಿಕ ಕಸಾಯಿಖಾನೆಗಳೂ ಸ್ಥಾಪನೆಗೊಳ್ಳಬೇಕು. ಉತ್ತಮ ತರಗತಿಯ ಊರ ತಳಿಯ ದನಗಳೂ ಉಳಿದುಕೊಳ್ಳಬೇಕು.ಹಾಗಾಗುತ್ತದೆ ಎಂದು ಆಶಿಸೋಣ. ನಾಲ್ಕು ಗೊಡ್ಡುಗಳ ಸಾಕಿ ಊರ ತಳಿ ಉಳಿಸುವ ನಾಟಕವೂ ಪ್ರಯೋಜನಕ್ಕಿಲ್ಲ. ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ನಾನು ಕೊನೆಯ ದನವನ್ನು ತಿಂಗಳ ಹಿಂದೆ ಮಾರಿದ್ದೇನೆ. ಅದುದರಿಂದ ಉಳಿದವರು ಸಾಕಲಿ ಎನ್ನುವುದೂ ತಪ್ಪಾಗುತ್ತದೆ.

  5. ಮೇ 1, 2011 ರಲ್ಲಿ 3:20 ಅಪರಾಹ್ನ

    “ಇದೀಗ ಅದಕ್ಕೆ ನಾಲ್ಕು ತಿಂಗಳು ಗಬ್ಬ. ಧೈರ್ಯ ಮಾಡಿದ್ದೇನೆ. ಒಮ್ಮೆ ಆದದ್ದು ಎಲ್ಲ ಸಮಯದಲ್ಲೂ ಆಗಬೇಕೆಂದಿಲ್ಲ ತಾನೇ.”-ಎಂದಿದ್ದೀರಿ. ಇಲ್ಲ. ಒಮ್ಮೆ ಆದದ್ದು ಮತ್ತೊಮ್ಮೆ ಆಗಬೇಕೆಂದೇನೂ ಇಲ್ಲ. ಆಗದಿರಲಿ ಎನ್ನುವುದರಲ್ಲಿ ನಾನೂ ನಿಮ್ಮೊಂದಿಗಿದ್ದೇನೆ..
    ಸ್ವಲ್ಪ ಹೊತ್ತಿನ ಮೊದಲು “ಡೈವರ್ಶನ್ ಸಹ ಪೂರ್ಣ ಪ್ರಮಾಣದ ಪರಿಹಾರವಲ್ಲ” ಎಂದು ಪುಸ್ತಕೋದ್ಯಮದ ಬಗ್ಗೆ ಬರೆದಿದ್ದ ಅಶೋಕರಿಗೆ ಪ್ರತಿಕ್ರಿಯಿಸಿದ್ದೆ. ಪುನಃ ಅದನ್ನೇ ಹೇಳಬೇಕು: “ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದೊಡೆ ನಿಲಬಹುದೇ?”

  6. ramadevi.b
    ಮೇ 2, 2011 ರಲ್ಲಿ 7:00 ಫೂರ್ವಾಹ್ನ

    ಹಾಲು ಬೇಕಾಗಿರುವ ನಮಗೆಲ್ಲಾ ನೀವು ಬರೆದಿರುವ ಸಮಸ್ಯೆ ಅರ್ಥವಾಗ್ತದೆ-ಪರಿಹಾರ ಹೊಳೆಯುವುದಿಲ್ಲ-ಎಲ್ಲಿ ಹೋಗ್ತಿದ್ದೇವೆ ನಾವು? ಯಾವುದು ವಿದ್ಯೆ, ಯಾವುದು ಅಭಿವ್ರುಧ್ದಿ -ಎಲ್ಲ ಪ್ರಶ್ನೆಗಳೆ. ಒಟ್ಟು ಮೇಲೆ ದನ ನಮ್ಮ ಹಳ್ಳಿಗೂ ಹೊರೆ- ಸಂಕಟಪಡಬೇಕಾ, ಸ್ಥಿತಪ್ರಜ್ನರಾಗಬೇಕಾ ಗೊತ್ತಿಲ್ಲ ಮಾರಾಯ್ರೆ. -ರಮಾದೇವಿ

  7. ಜೂನ್ 9, 2011 ರಲ್ಲಿ 6:09 ಫೂರ್ವಾಹ್ನ

    ಪ್ರಿಯ ಬ್ಲಾಗಿಗರೆ,
    ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
    ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

    ತಮ್ಮ ವಿಶ್ವಾಸಿ
    ಬೇಳೂರು ಸುದರ್ಶನ
    ಸಲಹಾ ಸಮನ್ವಯಕಾರ, ಕಣಜ ಯೋಜನೆ
    (ಕರ್ನಾಟಕ ಜ್ಞಾನ ಆಯೋಗದ ಯೋಜನೆ)
    ಈ ಮೈಲ್: projectmanager@kanaja.net
    http://www.kanaja.in
    ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
    ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
    ಬೆಂಗಳೂರು – 560100
    ದೂರವಾಣಿ: ೯೭೪೧೯೭೬೭೮೯

  1. No trackbacks yet.

Leave a reply to my pen from shrishaila ಪ್ರತ್ಯುತ್ತರವನ್ನು ರದ್ದುಮಾಡಿ