ಮುಖ ಪುಟ > ಅವಿಭಾಗೀಕೃತ > ರಂಗು ರಂಗಿನ ಕ್ರಿಕೆಟ್

ರಂಗು ರಂಗಿನ ಕ್ರಿಕೆಟ್

ಭಾರತಕ್ಕೆ ವಿಶ್ವಕಪ್ ಒಲಿದಿದೆ. ಕ್ರಿಕೆಟಿನ ದೇವರಿಗೆ ದೇವರು ಕಣ್ಣು ಬಿಟ್ಟಿದ್ದಾನೆ. ಈ ಹೊತ್ತು ಅಯಾಚಿತವಾಗಿ ನೆನಪಿನ ಅಲೆಗಳು ಏಳುತ್ತಿವೆ.

ಹೇಳಿ ಕೇಳಿ ನಾನೂ ಕ್ರಿಕೆಟ್ ಪ್ರಿಯ.  ಬಾಲ್ಯದಿಂದಲೇ ಕ್ರಿಕೆಟ್ ಹುಚ್ಚು ಅಂಟಿಕೊಂಡಿತು. ನಡೆಯುತ್ತಿದ್ದಾಗಲೆಲ್ಲ ಬಲದ ಕೈಯ ಮಣಿಗಂಟನ್ನು  ತಿರುಗಿಸುತ್ತ ಹೋಗುತ್ತಿದ್ದ ನನ್ನನ್ನು ತಮಾಷೆ ಮಾಡುತ್ತಿದ್ದುದುಂಟು ಮನೆ ಮಂದಿ – “ಅಗೋ ಅಲ್ಲಿ ಚಂದ್ರಶೇಖರ್ ಬಂದ”. ಆ  ಕಾಲದಲ್ಲಿ ಚಂದ್ರಶೇಖರ್ ಬಲು ದೊಡ್ಡ ಲೆಗ್ ಸ್ಪಿನ್ನರ್, ಚಾಣಕ್ಷ್ಯ ಗೂಗ್ಲೀ ಬೌಲರ್.

ಕೊತ್ತಳಿಗೆಯ ಬ್ಯಾಟು. ತೆಂಗಿನ ಒಣ ಮಡಲಿನ ಬುಡವನ್ನೇ ಕತ್ತರಿಸಿ ತುಸು ಒಪ್ಪ ಮಾಡಿದರೆ ಕ್ಷಣ ಮಾತ್ರದಲ್ಲಿ ಬ್ಯಾಟು ರೆಡಿ, ಆಟ ಶುರು. ರಜೆಯ ದಿನಗಳಲ್ಲಿ ಮನೆಯ ಚಿಕ್ಕ ಅಂಗಳವೇ “ಚಿನ್ನಸಾಮಿ” ಸ್ಟೇಡಿಯಮ್. ಕ್ರಿಕೆಟ್ಟೋ ಕ್ರಿಕೆಟ್ಟು. ನಮ್ಮ ಆಟದ ಗದ್ದಲ ಎಷ್ಟೇ ಮೇರೆ ಮೀರಿದರೂ ಸ್ವಾತಂತ್ರ್ಯಕ್ಕೆ ಭಂಗ ಬಂದದ್ದಿಲ್ಲ. ಹೊಡೆದ ಚೆಂಡು ಬಹು ಬಾರಿ ತೋಟಕ್ಕೆ, ಕೆಳಗೆ ಹರಿವ ತೋಡಿಗೆ. ಆಟಕ್ಕಿಂತ ಹೆಚ್ಚು ಚೆಂಡಿಗಾಗಿ ಬಲ್ಲೆಯೊಳಗೆಲ್ಲ ಹುಡುಕಾಟ. ನಡುನಡುವೆ ಮಜ್ಜಿಗೆಯ ಸಮಾರಾಧನೆ

ಸಂಟ್ಯಾರೆಂಬೋ ನಮ್ಮ ಹಳ್ಳಿಯಲ್ಲಿ ನಮ್ಮದೇ ಆದ ಕ್ರಿಕೆಟ್ ತಂಡವಿತ್ತು. ಶಾಲೆ ಮುಗಿದ ಮೇಲೆ ಇರುಳು ಕವಿಯುವ ತನಕ ಆಟ. ಶನಿವಾರ, ಆದಿತ್ಯವಾರಗಳಂದು  ಕ್ರಿಕೆಟ್ ಮ್ಯಾಚ್.  ಸೋಲಾದಾಗ ಜೀವನದಲ್ಲಿ ಎಲ್ಲವನ್ನು ಕಳಕೊಂಡ ಹತಾಶೆ, ಗೆದ್ದಾಗ ಜಗವನ್ನೆ ಗೆದ್ದ ಸಂತಸ – ಆಟ ಹಲವು ಗೆಳೆಯರನ್ನು ಗಳಿಸಿಕೊಟ್ಟ ಆ ದಿನಗಳು ಇಂದಿಗೂ ಹಸಿರು.

ಕ್ರಿಕೆಟ್ ಹುಚ್ಚು ಹೆಚ್ಚಾಗುತ್ತ ನಮ್ಮ ಆದಿತ್ಯವಾರದ ಸರ್ಕೀಟು ನಿಧಾನವಾಗಿ ವಿಸ್ತಾರವಾಗುತ್ತ ಬಂದ ಒಂದು ಆದಿತ್ಯವಾರ ಅಪ್ಪ ಕೇಳಿಯೇ ಬಿಟ್ಟರು “ಎಲ್ಲಿಗೆ ಸವಾರಿ? ” ನಾನು ಉಸುರಿದೆ “ಇಲ್ಲೆ ಮಾವಿನಕಟ್ಟೆಗೆ”. ಅಪ್ಪ ಅಪರೂಪಕ್ಕೆಂಬಂತೆ ಗುಡುಗಿದರು “ಸಾಕು ಕ್ರಿಕೆಟ್, ನೀನೇನೂ ಗವಾಸ್ಕರ್ ಆಗುವುದು ಬೇಡ. ಇಂದೇ ಕೊನೆಯಾಗಬೇಕು”. ಅಪ್ಪನ ಮಾತು ಮೀರದ ಮಗ ನಾನಾಗಿದ್ದೆ. ಮತ್ತೆ ಮುಂದುವರಿಸಲಿಲ್ಲ – ಅಲ್ಲಿಗೆ ಗವಾಸ್ಕರ್  ಒಬ್ಬ ಪ್ರತಿಸ್ಪರ್ಧಿಯನ್ನು ಕಳೆದುಕೊಂಡ!.

ನನಗೆ ಇನ್ನೂ ನೆನಪಿದೆ. ಆ ದಿನಗಳಲ್ಲಿ (೧೯೭೫) ಕಸ್ತೂರಿಯ ಪುಸ್ತಕ ಪುರವಣಿಯಲ್ಲಿ ಕ್ರಿಕೆಟ್ ಬಗ್ಗೆ ಸುದೀರ್ಘ ಲೇಖನವೊಂದು ಪ್ರಕಟವಾಯಿತು. ವೆಸ್ಟ್ ಇಂಡೀಸಿಗೆ ತೆರಳಿದ ಭಾರತ ತಂಡದ ಅಮೋಘ ಸಾಧನೆಯ ವಿವರಗಳು ಅಲ್ಲಿದುವು. ಅಜಿತ್‌ವಾಡೇಕರ್ ನೇತೃತ್ವದಲ್ಲಿ ವೆಸ್ಟ್‌ಇಂಡೀಸಿಗೆ ತೆರಳಿದ ಭಾರತ ತಂಡ ಅಲ್ಲಿ ಟೆಸ್ಟ್ ಮ್ಯಾಚ್ ಗೆದ್ದು ಇತಿಹಾಸ ಬರೆಯಿತು. ಗವಾಸ್ಕರ್ ಎಂಬ ಪ್ರತಿಭೆ ಉದಯಿಸಿದ್ದು ಆ ಸರಣಿಯಲ್ಲಿ.  ಗವಾಸ್ಕರ್,  ದಿಲೀಪ್ ಸರ್ದೇಸಾಯಿ, ಸೋಲ್ಕರ್ ಆಟದ ವಿವರಗಳು, ಚಂದ್ರಶೇಖರ್ ಎಂಬ ಮಾಂತ್ರಿಕನ ಕೈಚಳಕ.. ಎಲ್ಲವನ್ನು ವಿವರವಾಗಿ ಬಣ್ಣಿಸುವ ಆ ಲೇಖನವನ್ನು ಯಾರು ಬರೆದದ್ದೆಂದು ಈಗ ನೆನಪಾಗುತ್ತಿಲ್ಲ. ಇಂದು ಮುರಳೀಧರನ್ ಹೇಗೋ ಪ್ರಾಯಶ: ಚಂದ್ರಶೇಖರ್ ಅಂದು ಇದ್ದರು. ಅವರ ಬಲಗೈ ಮಣಿಗಂಟು ಹೇಗೆ ಬೇಕಾದರೂ ತಿರುಗುತ್ತಿದ್ದುದರಿಂದ – ಅವರೆಸೆದ ಚೆಂಡು ದಾಂಡಿಗನಿಗೆ (ಬ್ಯಾಟ್ಸ್‌ಮ್ಯಾನ್) ಬೆರಗಾಗುವ ಪರಿಯಲ್ಲಿ ಸರಕ್ಕನೆ ತಿರುಗುತ್ತಿತ್ತಂತೆ.

ಅಂದು ಟಿವಿ ಇರಲಿಲ್ಲ. ಏನಿದ್ದರೂ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ವೀಕ್ಷಕ ವಿವರಣೆ ಮಾತ್ರ. ಅವು ದೇಶದೊಳಗೆ ಅಥವಾ ಖಂಡಾತರದಾಚೆಯ ಯಾವುದೋ ಅಂಗಣದಲ್ಲಿ ನಡೆಯುತ್ತಿದ್ದ ಕ್ರಿಕೇಟ್ ಆಟವನ್ನು ಬಣ್ಣಿಸುತ್ತ ನಮ್ಮಲ್ಲಿ ಅನೂಹ್ಯ ಕಲ್ಪನೆಗಳನ್ನು ಕಟ್ಟಿಕೊಡುತ್ತಿದ್ದುವು.  ವೆಸ್ಟ್‌ಇಂಡೀಸ್ ಧ್ವೀಪ, ಅಲ್ಲಿನ ವೇಗದ ಅಂಗಣ, ದೈತ್ಯಾಕಾರದ ಬೌಲರುಗಳು, ಅವರೆನ್ನೆದುರಿಸುವ ನಮ್ಮ ಆರಾಧ್ಯ ಆಟಗಾರರು –  ಕಲ್ಪನೆಯ ಮೂಸೆಯಲ್ಲಿ ಬೆರಗಿನ ರಂಗುಗಳು.

ನಮ್ಮ ಬಾಲ್ಯದ ದಿನಗಳಲ್ಲಿ ವಿಶ್ವನಾಥ್, ಗವಾಸ್ಕರ್, ಮೋಹೀಂದರ್,  ಪ್ರಸನ್ನ, ಚಂದ್ರಶೇಖರ್, ಬೇಡಿ, .. ಇವರೆಲ್ಲ ಆರಾಧ್ಯ ಆಟಗಾರರು. ಅವರೆಲ್ಲ ಹೀಗೆ ವರ್ಷವರ್ಷಗಳು ಉರುಳುರುಳಿದರೂ ಆಟವಾಡುತ್ತಲೇ ಇರುವ ಅಜರಾಮರರೆಂದೇ ತಿಳಿದಿದ್ದ ಮುಗ್ದ ದಿನಗಳು. ” ಪ್ರಸನ್ನ ವಿಕೆಟ್ ಬಳಿ ಇಟ್ಟ ಒಂದು ನಾಣ್ಯವನ್ನಿರಿಸಿದರೆ ಎಲ್ಲ ಚೆಂಡುಗಳನ್ನು ಅದರ ಮೇಲೆಸೆದು ತಿರುಗಿಸುವ ಸ್ಪಿನ್ನರ್” ಎಂಬ ಹಾಗೆ ನನ್ನ ಅಣ್ಣ ತಾನೇ ಸ್ವತ: ಪ್ರಸನ್ನನ ಆಟ ನೋಡಿ ಬಂದವರ ಹಾಗೆ ವಿವರಿಸುತ್ತಿದ್ದಾಗ ಬೆಕ್ಕಸಬೆರಗಾಗಿ ಕೇಳುತ್ತಿದ್ದೆವು. ವಿಶ್ವನಾಥ್ ಬಗೆಗೆ ಎಲ್ಲಿಲ್ಲದ ಅಭಿಮಾನ. ಅವರೊಬ್ಬ ಕಲಾತ್ಮಕ ಆಟಗಾರ, ಆಪದ್ಭಾಂಧವ, ಅಪ್ಪಟ ಸಜ್ಜನ .. ಎಂಬಿತ್ಯಾದಿ ವಿವರಗಳು ಪತ್ರಿಕೆಯಲ್ಲೆಲ್ಲ ಪ್ರಕಟವಾಗುತ್ತಿದ್ದುವು. ಕಾನ್ಪುರದ ಅಂಗಣದಿಂದ ಶತಕದೊಂದಿಗೆ ಅಡಿ ಇಟ್ಟ ಗುಂಡಪ್ಪ ಕ್ರಿಕೇಟ್ ಮಟ್ಟಿಗೆ ಕವಿಯೇ ಆದಂತಿದ್ದ. ರಾಜನ್ ಬಾಲಾ, ಆರ್ ಮೋಹನ್, ನಿರ್ಮಲ್‌ಶೇಖರ್ ಬರೆಯುತ್ತಿದ್ದ ವರದಿಗಳಿಂದ,  ಸುರೇಶ್ ಸರಯ್ಯ, ಅನಂತ್ ಸೆಟ್ಲವಾಡ್, ದೋಷಿ ಕಮೆಂಟ್ರಿಯಿಂದ ನಮ್ಮ ಆರಾಧ್ಯ ಮೂರ್ತಿಗಳ ಆಟವನ್ನು ಊಹಿಸಿಕೊಂಡು ಮುದಗೊಳ್ಳುತ್ತಿದ್ದ ದಿನಗಳನ್ನು ಈಗ ನೆನಪಿಸಿಕೊಂಡಾಗ ಕೊಡುವ ಖುಷಿ ಅನನ್ಯವಾದದ್ದು.

೧೯೭೫ರ ಸರಣಿ ಇರಬೇಕು.  ವೆಸ್ಟಿಂಡೀಸಿನ ತಂಡ ಭಾರತಕ್ಕೆ ಬಂತು. ಕ್ಲೈವ್‌ಲಾಯ್ಡ್ ಎಂಬ ದಿಗ್ಗಜ ಮುಂಬೈಯಲ್ಲಿ ಟೆಸ್ಟಿನಲ್ಲಿ ಇನ್ನೂರೈವತ್ತು ರನ್ನು ಬಾರಿಸಿದ್ದು ಅಂದು ದೊಡ್ಡ ಸುದ್ದಿಯಾಯಿತು. ಕಲ್ಕತ್ತಾದಲ್ಲಿ ವಿಶ್ವನಾಥ್ ಗಳಿಸಿದ ಶತಕ, ವಿವಿಯನ್ ರಿಚರ್ಡ್ಸ್ ಎಂಬ ಪ್ರತಿಭೆ ಬಾರಿಸಿದ ಶತಕಗಳು ಪತ್ರಿಕೆಗಳಲ್ಲೆಲ್ಲ ರಾರಾಜಿಸಿದುವು. ಇವೆಲ್ಲವುಗಳನ್ನು ಮೀರಿಸಿದ ಕಲಾತ್ಮಕ ಆಟವೊಂದನ್ನು ವಿಶ್ವನಾಥ್ ಆಡಿದ್ದು ಮದ್ರಾಸಿನ ಚಿಪಾಕ್ ಅಂಗಣದಲ್ಲಿ.  ಅಂದು ವೆಸ್ಟ್‌ಇಂಡೀಸಿನಲ್ಲಿತ್ತು ಪೇಸ್ ಬ್ಯಾಟರೀ (ವೇಗದ ಬೌಲರುಗಳ ದಂಡು). ಆಂಡೀ ರಾಬರ್ಟ್ಸ್, ಜೋಯೆಲ್ ಗಾರ್ನರ್, ಮೈಕ್ ಹೋಲ್ಡಿಂಗ್, ಮಾರ್ಷಲ್!   ಪುಟಿದೆದ್ದು ಬರುತ್ತಿರುವ ಬೌನ್ಸರುಗಳನ್ನೆದುರಿಸಿ ಆಡಬೇಕಾಗಿತ್ತು – ಭುಜಕ್ಕೆ, ಪಕ್ಕೆಗೆ ಪ್ಯಾಡ್ ಕಟ್ಟಿಕೊಳ್ಳದೇ, ತಲೆಗೆ ಹೆಲ್ಮೆಟ್ ಧರಿಸಿಸದೇ. ತಲೆಗೆ ಚೆಂಡು ಬಡಿದರೆ ಕಥೆ ಮುಗಿದ ಹಾಗೆಯೇ (ನಾರೀಕಂಟ್ರಾಕ್ಟರ್ ತಲೆ ಒಡೆದುಕೊಂಡಡ್ಡು,  ಚ್ಯಾಟ್ಫೇಲ್ದ್ ಕ್ರಿಕೆಟಿಗೆ ವಿದಾಯ ಹೇಳಿದ್ದು, ಫೀಲ್ದಿಂಗ್ ಮಾಡುತ್ತಿದ್ದ ರಮನ್ ಲಂಬಾ ಇಹವನ್ನೇ ತ್ಯಜಿಸಿದ್ದು ಕಲ್ಲಿನಂಥ ಕ್ರಿಕೆಟ್ ಚೆಂಡಿನ ಬಡಿತಕ್ಕೆ)  ಅಂಥ ಘಟಾನುಘಟಿಗಳ  ವಿರುದ್ಧ ಗುಂಡಪ್ಪ ವಿಶ್ವನಾಥ್ ಅಜೇಯ ೯೭ ರನ್ನು ಹೊಡೆದರು. ಅದೊಂದು ಬಣ್ಣಿಸುವುದಕ್ಕೆ ನಿಲುಕದ  ಆಟವೆಂದು ಅಂದು ಎಲ್ಲ ಪತ್ರಿಕೆಗಳು  ಬರೆದುವು. ಇಂದು ಟಿವಿಯಲ್ಲಿ ನೋಡುತ್ತೇವೆ ಒಬ್ಬ ಬ್ಯಾಟ್ಸ್‌ಮ್ಯಾನ್ ಐವತ್ತು ರನ್ನುಗಳನ್ನು ಹೊಡೆದಾಗ ಪರದೆಯಲ್ಲಿ ಆತ ಗಳಿಸಿದ ರನ್ನುಗಳನ್ನು ಬಣ್ಣಿಸುವ “ವ್ಯಾಗನ್ ವೀಲು” ಕಾಣಿಸುತ್ತದೆ. ಅದೇ ಬಗೆಯಲ್ಲಿ   ಅಂದು ವಿಶ್ವನಾಥ್

ಹೊಡೆದ ರನ್ನುಗಳ ವಿವರಗಳು “ಪ್ರಜಾಮತ ಪತ್ರಿಕೆಯಲ್ಲಿ” ಪ್ರಕಟವಾಗಿದ್ದು ಈ ಹೊತ್ತಿನಲ್ಲಿ ನೆನಪಾಗುತ್ತಿದೆ.

ಬಲಿಷ್ಟ ವೆಸ್ಟ್‌ಇಂಡೀಸ್ ವಿರುದ್ಧ ಅದರ ನೆಲದಲ್ಲಿಯೇ – ಫೋರ್ಟ್‌ಆಫ್ ಸ್ಪೇಯಿನಲ್ಲಿ – ಭಾರತ ಗಳಿಸಿದ  ಅತ್ಯಧ್ಬುತ ಗೆಲುವು ರೋಚಕ ಅನುಭವ ಕಟ್ಟಿಕೊಟ್ಟಿತು. ದಿನವೊಂದರಲ್ಲಿ – ಅಂದರೆ ಸುಮಾರು ಮುನ್ನೂರೆಂಬತ್ತು ನಿಮಿಷಗಳಲ್ಲಿ – ಭಾರತದ ಗೆಲುವಿಗೆ ೪೦೪ ರನ್ನುಗಳ ಸವಾಲನ್ನು ವೆಸ್ಟ್‌ಇಂಡೀಸ್ ಒಡ್ಡಿತು. ಸಂಜೆ ಎಂಟರ ಹೊತ್ತಿಗೆ ರೇಡಿಯೋದಲ್ಲಿ ಕಮೆಂಟ್ರಿ ಆರಂಭ.  ಟೊನೀಕೋಝಿಯರ್, ಸುರೇಶ್ ಸರಯ್ಯ, ಅನಂತ್ ಸೆಟ್ಲ್‌ವಾಡ್ ಫೋರ್ಟ್‌ಆಫ್ ಸ್ಪೇಯಿನ ಆಟವನ್ನು ಬಿತ್ತರಿಸುತ್ತಿರುವಂತೆ ಗವಾಸ್ಕರ್, ಅಮರನಾಥ್ ದಿಟ್ಟತನದಿಂದ ರನ್ನು ಪೇರಿಸತೊಡಗಿದರು. ಹೊತ್ತು ಕಳೆದಂತೆ ಇಲ್ಲಿ ನಮಗೆ ನಿದ್ರೆ ಕೇಳಬೇಕಲ್ಲ. ನಿದ್ದೆಗೆ ಜಾರಿದೆವು. ಬೆಳ್ಳಂಬೆಳಗ್ಗೆ ಎದ್ದು ರೇಡಿಯೋ ಆನ್ ಮಾಡಿದರೆ, ಆಶ್ಚರ್ಯ – ಭಾರತ ಗೆಲುವಿನಂಚಿಗೆ ಬಂದಿತ್ತು –  ಬಿರುಸಿನ ಆಟಗಾರ ಬ್ರಿಜೇಶ್ ಪಟೇಲ್ ಆಡುತ್ತಿದ್ದ. ನೋಡುತ್ತಿರುವಂತೆ – ಅಲ್ಲಲ್ಲ ಕೇಳುತ್ತಿರುವಂತೆ –  ಬ್ರಿಜೇಶ್ ಆಟ ಗೆಲುವು ತಂದೇ ಬಿಟ್ಟಿತು. ಆ ಐತಿಹಾಸಿಕ “ರನ್ ಚೇಸ್ ಆಟ”ದಲ್ಲಿ ಗವಾಸ್ಕರ್ ಮತ್ತು ವಿಶ್ವನಾಥ್ ಇಬ್ಬರೂ ಶತಕ ಬಾರಿಸಿದರೆ,  ಮೊಹಿಂದರ್ ಎಂಬತ್ತರ ಆಸು ಪಾಸಿನ ರನ್ನು ಗಳಿಸಿದರು.

ಎಂಬತ್ತರ ದಶಕದಲ್ಲಿ ಭಾರತ ಪಾಕಿಸ್ಥಾನಕ್ಕೆ ತೆರಳಿತು. ಅದೊಂದು ಎರಡು ದೇಶಗಳ ನಡುವೆ ಪೂರ್ಣ ಪ್ರಮಾಣದ ಕ್ರಿಕೆಟ್ ಸರಣಿ. ಮುದಸ್ಸರ್ ನಝರ್, ಜಹೀರ್ ಅಬ್ಬಾಸ್, ಜವೇದ್ ಮಿಯಂದಾದ್‌ರಂಥ ಅಪ್ರತಿಮ ದಾಂಡಿಗರಿದ್ದ, ಇಮ್ರಾನ್ ಖಾನ್, ಸರ್‌ಫ್ರಾಜ್ ನವಾಜ್, ಸಿಕಂದರ್ ಭಕ್ತ್‌ರಂಥ ಶ್ರೇಷ್ಠ ವೇಗದ ಬೌಲರುಗಳಿದ್ದ ಪಾಕಿಸ್ಥಾನ ತಂಡದೆದುರು ಹೆಚ್ಚಿನ ಎಲ್ಲ ಟೆಸ್ಟ್‌ಗಳಲ್ಲಿ – ನನಗೆ ನೆನಪಿರುವ ಹಾಗೆ – ಭಾರತ ಹೀನಾಯವಾಗಿ ಸೋಲು ಗಳಿಸುವುದರೊಂದಿಗೆ ಬೇಡಿ, ಚಂದ್ರಶೇಖರ್ .. ಎಂಬ ಸ್ಪಿನ್ನರುಗಳ ಯುಗಾಂತ್ಯವಾಯಿತು. ವಿಶ್ವನಾಥ್ ಎಂಬ ಕಲಾತ್ಮಕ ಆಟಗಾರ ನೇಪಥ್ಯಕ್ಕೆ ಸರಿಯಬೇಕಾಯಿತು.

ಆ ಹೊತ್ತಿಗೆ ನಮ್ಮೂರುಗಳಲ್ಲಿ ಅಲ್ಲಲ್ಲಿ ಟಿವಿ ಬಂದುವು.  ದೂರದೆಲ್ಲೆಲ್ಲೋ ನಡೆಯುವ ಆಟಗಳು ಟಿವಿಯಲ್ಲಿ ಕಾಣಿಸಿಳಿಸಿಕೊಳ್ಳತೊಡಗಿದುವು. ಐವತ್ತು ಓವರುಗಳ ಒನ್‌ಡೇ ಮ್ಯಾಚುಗಳ ಅವತಾರವಾಯಿತು. ನಮಗೆ ಹೊಸ ಕುತೂಹಲ, ಅಚ್ಚರಿ. ಟಿವಿ ಇರುವಲ್ಲಿ ಜನ ಸೇರತೊಡಗಿದರು. ಅಲ್ಲಿಯೇ ಮಹಾಭಾರತ ಮತ್ತು ರಾಮಾಯಣ. ಕಮೆಂಟ್ರಿ ಕೇಳಿಯೇ ಬೆಳೆದ ಮಂದಿಗೆ ಗೊಂದಲ.  ಟಿವಿಯಲ್ಲಿ ಆಟ ಪ್ರಸಾರವಾಗುತ್ತಿದ್ದಾಗ, ಅದರಲ್ಲಿ ಬರುವ ವೀಕ್ಷಕ ವಿವರಣೆಯನ್ನು ಸ್ತಬ್ದಗೊಳಿಸಿ, ರೇಡಿಯೋ ಕಮೆಂಟ್ರಿ ಹಾಕಿಕೊಂಡು  ಎಷ್ಟೋ ಮಂದಿ ಕ್ರಿಕೇಟ್ ಆಟ ಸವಿಯುತ್ತಿದ್ದುದುಂಟು!

ಏಕದಿನ ಕ್ರಿಕೆಟ್ ಆರಂಭವಾದಾಗ ನಮ್ಮದೇಶ ಈ ಹೊಸ ಬಗೆಯ ಕ್ರಿಕೆಟ್ಟಿಗೆ ನಿಧಾನವಾಗಿ ಓಗ್ಗಿಕೊಳ್ಳತೊಡಗಿತು. ಆರಂಭದ ವಿಶ್ವಕಪ್‌ಗಳಲ್ಲಿ ನಮ್ಮದು ತೀರ ಸಾಮಾನ್ಯ ಪ್ರದರ್ಶನ. ಗವಾಸ್ಕರ್ ಅಂತ ಮಹಾನ್ ಆಟಗಾರ ಇಡೀ ಐವತ್ತು ಓವರುಗಳ ಆಟವಾಡಿ ಬರೋಬ್ಬರಿ ಮೂವತ್ತೈದರ ಆಸುಪಾಸಿನಷ್ಟು ರನ್ನು ಗಳಿಸಿದ್ದಕ್ಕೆ ಟೀಕೆಗಳ ಮಹಾಪೂರವೇ ಬಂತು.

ಈ ನಡುವೆ ೧೯೮೩ರ ವಿಶ್ವಕಪ್ ನಲ್ಲಿ ಇಂಗ್ಲೆಂಡಿನಲ್ಲಿ ಭಾರತ ತಂಡ ಅಸಾಧಾರಣ ಪ್ರದರ್ಶನ ನೀಡಿತು – ಕಪಿಲ್‌ದೇವ್ ಎಂಬ ಸುಂಟರಗಾಳಿಯ ನೇತೃತ್ವದಲ್ಲಿ. ಈ ಸವ್ಯಸಾಚಿ (ಆಲ್‌ರೌಂಡರ್) ಝಿಂಬಾಬ್ವೇ ವಿರುದ್ಧ ದಾಂಡಿಗನಾಗಿ ೧೭೫ರನ್ನುಗಳನ್ನು ಗಳಿಸಿ ಭಾರತಕ್ಕೆ ಅಮೋಘ ಜಯ ತಂದದ್ದು ನಮಗೆ ತಿಳಿದದ್ದು ಮರುದಿನ ಪೇಪರುಗಳಲ್ಲಿ. ಫೈನಲ್ಸ್‌ನಲ್ಲಿ ಬಲಿಷ್ಟ ವೆಸ್ಟ್‌ಇಂಡೀಸ್ ತಂಡವನ್ನು ಮಣಿಸಿ ಭಾರತ ವಿಶ್ವಕಪ್ ಗೆದ್ದಾಗ  ದೇಶ ಸಂಭ್ರಮ ಪಟ್ಟಿತು. ಆದರೆ ಅಂದು ಇಂದಿನಷ್ಟು ಟಿವಿಯ ಮಾಯಾಜಾಲ ವ್ಯಾಪಕವಾಗಿರಲಿಲ್ಲ. ಜಗತ್ತು ಸಾಕಷ್ಟು ದೊಡ್ದದಾಗಿಯೇ ಇತ್ತು. “ಕಪಿಲ್ದೇವ್ ಡೆವಿಲ್ಸ್” ವಿಶ್ವಕಪ್ ಗೆದ್ದದ್ದು ನಮ್ಮನ್ನು ತಲುಪಿದ್ದು ಬಾನುಲಿಯ ಮೂಲಕ, ಪತ್ರಿಕೆಗಳ ಮೂಲಕ.

ನಂತರದ ಕೆಲವೇ ವರ್ಷಗಳಲ್ಲಿ ಜೀವನದ ರೀತಿಯೊಂದಿಗೆ ಕ್ರಿಕೇಟ್ ಸ್ವರೂಪವೇ ಬದಲಾಯಿತು.  ಕಪ್ಪು -ಬಿಳುಪಿನ ಟಿವಿ ಹೋಗಿ  ಬಣ್ಣದ ಟಿವಿಗಳು ಉದಯಿಸಿದುವು. ಬಣ್ಣದ ಟಿವಿಯಲ್ಲಿ ಆಟವೂ ರಂಗು ರಂಗೀನವಾಗಬೇಕು. ಬಿಳಿ ಉಡುಪಿನ ಬದಲಿಗೆ ಬಣ್ಣದ ಉಡುಗೆಗಳು ಬಂದುವು. ಭಾರತ ನೀಲಿಗೆ ಒಪ್ಪಿಕೊಂಡರೆ, ಪಾಕಿಸ್ಥಾನ ಹಸಿರುಡುಗೆಗೆ, ಆಸ್ಟ್ರೇಲಿಯಾ ಹಳದಿಗೆ. ಇನ್ನೂ ಆಟ ರಂಗೇರಲು ಹೊನಲು ಬೆಳಕಿನ ಪಂದ್ಯಗಳು ಆರಂಭವಾದುವು. ಜಾಹಿರಾತು ಮತ್ತು ಹಣದ ಹುಚ್ಚು ಪ್ರವಾಹದಲ್ಲಿ ಕ್ರಿಕೇಟ್ ತೇಲುತ್ತಿದೆ.. ಐದು ದಿನಗಳ ಆಟಕ್ಕೆ ಸಡ್ಡು ಹೊಡೆಯುವಂತೆ ಬಂದ ಸೀಮಿತ ಓವರುಗಳ ಕ್ರಿಕಟಿನ ಹೊಸ ಅವತಾರವಾಗಿ ಇಪ್ಪತ್ತು ಓವರುಗಳ ಪಂದ್ಯಗಳು ಶುರುವಾಗಿವೆ. ಖುಷಿಯ ಮತ್ತೇರಿಸಲು ಹಾಡುಗಳ ನಡುವೆ ಮಾನಿನಿಯರ ನೃತ್ಯವೂ ಮೇಳೈಸಿಕೊಂಡಿದೆ. ವಿಕೆಟ್ ಬಿದ್ದಾಗ, ಶತಕ ಹೊಡೆದಾಗ, ಪಂದ್ಯ ಗೆದ್ದಾಗ ಆಟಗಾರ ಸಂಭ್ರಮ, ಪ್ರೇಕ್ಷಕರ ಖುಷಿಗಳೆಲ್ಲ ಟಿವಿಯ ಮೂಲಕ  ಮನೆ ಮನೆಗೆ ತಲುಪುವ ಹೊತ್ತಿನಲ್ಲಿ ಸಾಕಷ್ಟು ಅಭಿನಯಾವಕಾಶಗಳು ತೆರೆದುಕೊಂಡಿವೆ. ಇವೆಲ್ಲವುಗಳ ನಡುವೆ ಆಟದ ಮುಗ್ದತೆ ಎಲ್ಲೋ ಮಾಯವಾದಂತಿದೆ.

ಉದ್ದಿಮೆಯ ಪ್ರಭುಗಳು ಇಂದು ಕ್ರಿಕೆಟ್ ಆಟಕ್ಕೆ ಹಣ ಸುರಿಯುವುದಷ್ಟೇ ಅಲ್ಲ, ಅಂಗಣದಲ್ಲಿಯೇ ಕಾಣಿಸಿಕೊಳ್ಳತೊಡಗಿದ್ದಾರೆ. ಹೀಗೆಯೇ ಆಟ ಆಡಬೇಕು ಎನ್ನುವ ತಾಕೀತು ತಕರಾರು ಮಾಡತೊಡಗಿದ್ದಾರೆ. ಟಿವಿಯ ಮೂಲಕ ಕೋಟ್ಯಾಂತರ ವೀಕ್ಷಕರನ್ನು ತಲುಪಬಹುದಾದ ಕಾರಣದಿಂದಲೋ ಏನೋ – ಹಾಲಿವುಡ್, ಬಾಲಿವುಡ್ ಮಂದಿ, ರಾಜಕಾರಣದ ಮಂದಿ ಮಾಗಧರೆಲ್ಲ ಇಂದು ಕ್ರಿಡಾಂಗಣದಲ್ಲಿ ತುಂಬಿ ತುಳುಕುತ್ತಿರುವಾಗ ಕ್ರಿಕೆಟ್ ಆಟದ ನಿಜ ಅಭಿಮಾನಿಯಾದ ಜನಸಾಮಾನ್ಯ ಅಂಗಣದ ಹೊರಗೆ ಬೆರಗಿನಿಂದ ನಿಂತು ನೋಡುತ್ತಿದ್ದಾನೆ – ಆರ್ ಕೆ. ಲಕ್ಷ್ಮಣ್ ರೂಪಿಸಿದ ಜನಸಾಮಾನ್ಯನ ಹಾಗೆ.

ಟಿವಿಯಲ್ಲಿ ಮೊನ್ನೆ ಮೊನ್ನೆ ವಿಶ್ವಕಪ್ ಮುಗಿಯಿತು. ಭಾರತ ತಂಡ ಗೆದ್ದು ಹರ್ಷದ ಹೊನಲು ಹರಿಯಿಸಿದೆ. ಚ್ಯಾನೆಲ್ಲುಗಳಲ್ಲಿ ಈ ಬಗ್ಗೆ ಭರದಿಂದ ಚರ್ಚೆಗಳು, ಸಂವಾದಗಳು ನಡೆಯುತ್ತಿವೆ. ಅಭಿಮಾನಿಗಳ ಉನ್ಮಾದ ಹುಚ್ಚೇರಿ ಹರಿದಿದೆ.  ಈ ಎಲ್ಲ ಸಂತೋಷ ಅಭಿಮಾನಗಳು ಸಹಜ. ತಪ್ಪೇನೂ ಇಲ್ಲ. ಸದಾ ಗಂಭೀರರಾಗಿಯೇ ಚಿಂತನೆಯಲ್ಲಿ ಇರುವುದು ಅಥವಾ ಚಿಂತೆಯಲ್ಲಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಅದರ ಸವಿ ಮುಗಿಯುವುದರೊಳಗೆ ಇನ್ನೊಂದು ಕ್ರಿಕಟ್ ಸರಣಿ – ಐಪಿಎಲ್ ಆರಂಭವಾಗಲಿದೆ.  ನಮ್ಮ ಮಕ್ಕಳು  ಮತ್ತೆ ತಯಾರಾಗುತ್ತಿದ್ದಾರೆ ಇನ್ನೊಂದು ಕ್ರಿಕೇಟ್ ಜ್ವರ ತಗಲಿಸಿಕೊಳ್ಳಲು!

ಓಹ್, ಅದೆಷ್ಟು ಪಂದ್ಯಗಳು. ಹೆಚ್ಚಿನದೆಲ್ಲವೂ ಹೊನಲು ಬೆಳಕಿನ ಅಹರ್ನಿಶಿ ಪಂದ್ಯಗಳು. ಒಂದೆಡೆ ವಿದ್ಯುತ್ ಬರ, ಇನ್ನೊಂದೆಡೆ ಈ ಆಟಗಳು! ಬಯಲಿಗಿಳಿದು ಆಟವಾಡುವ ಮಕ್ಕಳಿಗೆ ಕುರುಕುರೆ ತಿನ್ನುತ್ತ, ಐಸ್ ಕ್ರೀಮ್ ಕ್ಯಾಡ್‌ಬರೀಯೊಂದಿಗೆ ಪೆಪ್ಸೀ, ಕೊಕ್ ಕುಡಿಯುತ್ತ, ಹೆಗೇಗೋ ಕೈಕಾಲು ಸುತ್ತಿಕೊಂಡು  ಬಿದ್ದುಕೊಂಡು ಟಿವಿಯ ಆಟವನ್ನು ಬಿಡುಗಣ್ಣರಾಗಿ ನೋಡುವ ಸಂಭ್ರಮ. ಬಗೆ ಬಗೆಯ ಆಟೋಟಗಳಿಂದ ತುಂಬ ಬೇಕಾದ ಶಾಲೆ – ಕಾಲೇಜುಗಳ  ಆಟದ ಬಯಲುಗಳು ಸಂಜೆಯ ಹೊತ್ತಿನಲ್ಲಿಯೂ  ಬಿಕೋ ಎನ್ನುತ್ತಿವೆ. ಎಲ್ಲೋ ಒಂದು ಕಡೆ ನಾವು ಎಡಹುತ್ತಿದ್ದೇವೆ. ಹೆಚ್ಚಾದರೆ ಅಮೃತವೂ ವಿಷ ಅನ್ನುವ ಪ್ರಜ್ಞೆ ಜಾಗೃತವಾಗಿರಬೇಕು.

Categories: ಅವಿಭಾಗೀಕೃತ
  1. Ashokavardhana
    ಏಪ್ರಿಲ್ 14, 2011 ರಲ್ಲಿ 10:06 ಫೂರ್ವಾಹ್ನ

    ಪ್ರಿಯ ರಾಧಾ
    ನಿನ್ನ ಕ್ರಿಕೆಟ್ ಅತಿಯಾಗುವ ಕುರಿತ ಲೇಖನ ಅಂದೇ ಓದಿದ್ದೇನೆ, ಸಾಮಯಿಕವಾಗಿದೆ, ಚೆನ್ನಾಗಿದೆ, ಯಾವುದೇ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ (ಅಥವಾ ಇನ್ಯಾವುದೇ ವಿಷಯಗಳಲ್ಲೂ) ನಮಗೊಂದು ಮಟ್ಟದ ಪೂರ್ವ ಪಕ್ಷ ಇದ್ದರೆ ರುಚಿ ಹೆಚ್ಚು. ಇಲ್ಲಿ ಬೆಂಗಳೂರು ತಂಡ ಎನ್ನುತ್ತಾರೆ – ಕನ್ನಡದ ಗಂಧಗಾಳಿ ಇಲ್ಲ. ಮತ್ತೆ ಆಟವಾದರೋ ಒತ್ತಡ ನಿರ್ವಹಣೆಯದೇ ಪ್ರಧಾನ ಪಾತ್ರವಾಗಿಬಿಡುತ್ತದೆ. ರಾತ್ರಿ ಬೇರೇನೂ ಕೆಲಸವಿಲ್ಲದಿದ್ದರೆ ತಂಡ ಯಾವುದೇ ಇದ್ದರೂ ಸರಿ ನಿರ್ಮಮವಾಗಿ ನಾಲ್ಕು ಬೀಸುಹೊಡೆತಗಳನ್ನೋ ಸಾಲೇಸಾಲಾಗಿ ಹುದ್ದರಿಗಳು ದಿಂಡುರುಳುವುದನ್ನೋ ನೋಡುತ್ತೇನೆ – ಅಷ್ಟೆ.

  2. AK Bhat
    ಏಪ್ರಿಲ್ 14, 2011 ರಲ್ಲಿ 10:07 ಫೂರ್ವಾಹ್ನ

    Blog on cricket is good and has emerged naturally good – in intent,
    narration and record.

  3. M S RAO
    ಏಪ್ರಿಲ್ 14, 2011 ರಲ್ಲಿ 12:24 ಅಪರಾಹ್ನ

    Well written.. I am afraid if Gavaskar comes across the article will really be happy..that you did not pursue cricket.. Yes today cricket has become a money spinner and the real game is taking sidelines..the money bags are exploiting the viewer, player and cricket lovers..the game is the ultimate looser..

  4. Vaidehi
    ಏಪ್ರಿಲ್ 16, 2011 ರಲ್ಲಿ 1:28 ಫೂರ್ವಾಹ್ನ

    ಓದಿದೆ ಕಣೋ. ಚೆನ್ನಾಗಿ ಬರೆದಿದ್ದೀ. ಅದರೊಂದಿಗೆ ನಿಮ್ಮ ಮನೆಯ ಗೇಟು ಮತ್ತು ಮುಂದಿನಗಳ ನೋಡಿ ಭಾರೀ ಖುಷಿಯಾಯ್ತು.

  5. ಏಪ್ರಿಲ್ 16, 2011 ರಲ್ಲಿ 6:17 ಫೂರ್ವಾಹ್ನ

    ಐಪಿಎಲ್ ೨೦-೨೦ ಕ್ರಿಕೆಟ್ ಪಂದ್ಯ ನೋಡುವಾಗ ಇದು ಬೇಕಿತ್ತ ಎಂಬ ಭಾವವೇ ನನ್ನನ್ನು ಕಾಡುತ್ತದೆ. ಕ್ರಿಕೆಟ್ಟನ್ನು ಹಾಳು ಮಾಡಿದ್ದೇ ಈ ಐಪಿಲ್ ಎಂಬುದು ನನ್ನ ಭಾವನೆ. ಇಲ್ಲಿ ದುಡ್ಡಿನದ್ದೇ ದೊಡ್ಡಪ್ಪ. ಒಂದೊಂದು ತಂಡದಲ್ಲಿ ಟೀಮ್ ಇಂಡಿಯಾದ ಆಟಗಾರರು ಹಂಚಿ ಹರಿದು ಹೋಗಿದ್ದಾರೆ. ಅದನ್ನು ನೋಡುವಾಗ ಮುದ ಅನಿಸುವುದಿಲ್ಲ. ಯಾವ ತಂಡ ಗೆದ್ದರೂ ಒಂದೇ ಎಂಬ ಭಾವ. ಈ ಆಟ ನೋಡುವಾಗ ರೋಮಾಂಚನವಂತೂ ಆಗುವುದೇ ಇಲ್ಲ.

  6. ಏಪ್ರಿಲ್ 17, 2011 ರಲ್ಲಿ 3:11 ಅಪರಾಹ್ನ

    ನಮಸ್ತೆ ರಾಧ ಮಾವ,
    ಬಾಲ್ಯದಲ್ಲಿ ಅಂಬೆಗಾಲು ಇಕ್ಕುವಷ್ಟೇ ಸಹಜವಾಗಿ ಹುಡುಗು ವಯಸ್ಸಿನಲ್ಲಿ ಕ್ರಿಕೆಟ್ ಆಡಿದ್ದೇನೆ.
    ಆದರೆ ಈಗ ಅದರ ಬದ್ಧ ವಿರೋಧಿ. ನಾನು ಭಾರತ ಸೋಲಲೆಂದು ಬಯಸಿದ್ದೆ. ಅಷ್ಟರ ಮಟ್ಟಿಗೆ ಪೋಸ್ಟರುಗಳು, ಜಾಹಿರಾತುಗಳು ಕೆಲವು ತಿಂಗಳುಗಳ ವರೆಗಾದರೂ ಹಿಂಬಡ್ತಿ ಪಡೆಯುತ್ತಿದ್ದವು. ಪ್ರಕೃತಿ ಪರಿಸರಕ್ಕೆ ತುಂಬಾ ಒಳ್ಳೆಯದಿತ್ತು.
    ಆದರೆ ನೀವೇ ಬರೆದಂತೆ ಬಹುಶ ಉದ್ಯಮಪತಿಗಳೇ ನಮ್ಮ ವಿಜಯವನ್ನು ನಿರ್ಧರಿಸಿ ಬಿಟ್ಟಿದ್ದಾರೆ.
    ವಸಂತ್ ಕಜೆ.

    • ramadevi.b
      ಮೇ 2, 2011 ರಲ್ಲಿ 7:08 ಫೂರ್ವಾಹ್ನ

      ಸದಾ ಗಂಭೀರರಾಗಿಯೇ ಚಿಂತನೆಯಲ್ಲಿ ಇರುವುದು ಅಥವಾ ಚಿಂತೆಯಲ್ಲಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

  7. ಏಪ್ರಿಲ್ 17, 2011 ರಲ್ಲಿ 3:15 ಅಪರಾಹ್ನ

    Priya Radhaakrishna

    Nimma Cricket odide! Bahushaha andina Cricket abhimaanigalellara manadalli suydaaduttiruva bhavanegalannu nimma blog kooda helide. Eee vishaya eshtondu janara mana kalakide ennuvudakke itteechege Kannada Prabha patrike nadesida prabhandha spardheyalli modala bahumaana galisida prabhanda (http://www.kannadaprabha.com/pdf/1042011/15.pdf ) and (http://www.kannadaprabha.com/pdf/1042011/17.pdf) kooda Cricket kuritE ide. Achchariyallave? Nimma haagoo Raveendra Kumarravara prabhandhagalu lekhanagala shaili haagoo barehada vishistategala bagge toulanika adhyayanakke olleya maadarigalu.

    Kollegala Sharma

  1. No trackbacks yet.

Leave a reply to Kollegala Sharma ಪ್ರತ್ಯುತ್ತರವನ್ನು ರದ್ದುಮಾಡಿ