ಮುಖ ಪುಟ > ಅವಿಭಾಗೀಕೃತ > ಬೆಳ್ಳುಳ್ಳಿ ಮಾಹಾತ್ಮೆ !

ಬೆಳ್ಳುಳ್ಳಿ ಮಾಹಾತ್ಮೆ !

ಈ ದಿನ ಉದಯವಾಣಿಯಲ್ಲಿ ನೇಮಿಚಂದ್ರ ತಮ್ಮ ಅಂಕಣದಲ್ಲಿ  ಬರೆದಿದ್ದಾರೆ “ಬೆಳ್ಳುಳ್ಳಿ ಔಷಧಿಗಳ ಸಹಜ ಸಾಗರ”   ಓದಿ ಮೆಚ್ಚಿ ಅವರಿಗೆ ಅವರಿಗೆ ಪತ್ರ ಬರೆಯುತ್ತ ನನ್ನ ಅನುಭವವನ್ನು ತಿಳಿಸಿದೆ. ಮೆಚ್ಚುವುದಕ್ಕೆ ಕಾರಣವನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಆನುವಂಶಿಕವಾಗಿ ಬಂದ ಬಳುವಳಿ ಇರಬೇಕು. ಹೊಟ್ಟೆ ಉರಿ ಅಥವಾ ಎಸಿಡಿಟಿ ನನಗಿರುವ ತೊಂದರೆ.  ಸುಮಾರು ದಶಕಗಳಿಂದ ಎಸಿಡಿಟಿಯಲ್ಲಿ ನರಳತ್ತಿದ್ದೆ. ಖಾರ ಉಂಡರೆ , ಎಣ್ಣೆಯಲ್ಲಿ ಕರಿದ ಗರಿ ಗರಿ ತಿನಿಸು ತಿಂದರೆ ಸಾಕು – ಒಂದೆರಡು ದಿನಗಳಲ್ಲಿ ಶುರು – ಉರಿ- ನೋವು ಇತ್ಯಾದಿ.

ಐದಾರು ವರ್ಷಗಳ ಹಿಂದೆ ಗಂಟಲಿನ ಮೂಲಕ ಉದರದರ್ಶಕ ನಳಿಗೆ ಇಳಿಸಿ ಅಲ್ಲೇನಾದರೂ ಹೊಸ ಒಕ್ಕಲು ಆರಂಭವಾಗಿದೆಯೇ ಎಂದು ನೋಡಬೇಕೆಂದು ಹೇಳಿದಾಗ ಹೌಹಾರಿದೆ.  ಸಹಜವಾಗಿಯೇ ಹೆದರಿಕೆ – ಅಗೋಚರ  ಹೊಟ್ಟೆಯೊಳಗೆ ಮತ್ತೇನಾದರೂ ಗಡ್ಡೆ ಇರಬಹದೆನ್ನುವ ಗುಮಾನಿ. ಈ ನಡುವೆ ಪ್ರಾಯಕ್ಕೆ ಸಹಜವಾಗಿ ಕೊಲೆಸ್ಟೆರಾಲ್ ಇತ್ಯಾದಿ ಪರೀಕ್ಷೆ ಮಾಡಿಸಬೇಕೆಂದು ಹಲವರ ಸಲಹೆ. ಸರಿ ಬೆಳಗ್ಗೆದ್ದು “ಹಾಸಿಗೆ ಚಾ” ಏರಿಸದೇ ನಿರಾಹಾರಿಯಾಗಿ ಪುತ್ತೂರಿಗೆ ಧಾವಿಸಿ ರಕ್ತ ಪರೀಕ್ಷೆ  ಮಾಡಿಸಿದಾಗ ಎಲ್ಲವೂ ಒಂದಷ್ಟು ಏರಿದ್ದನ್ನು ಸಾರಿದುವು.

ಕೊಲೆಸ್ಟೆರಾಲ್ ಅನ್ನುವುದು ನಮ್ಮ ದೇಹದಲ್ಲಿರಬೇಕಂತೆ.  ಇರಬೇಕಾದಷ್ಟೇ ಇದ್ದರೆ ಚಂದ ಮಾರಾಯ್ರೇ. ಹೆಚ್ಚಾದರೆ ಗಡಿಬಿಡಿ ಶುರುವಾಗುತ್ತದಂತೆ.  ಪರೀಕ್ಷೆಯಲ್ಲಿ ನಾನು ಗಳಿಸಿದ ಅಂಕಗಳು ಹೀಗಿದ್ದುವು :

  • ಒಟ್ಟು ಕೊಲೆಸ್ಟೆರಾಲ್ ಅಂಕಗಳು : ೨೬೫ (ಸಜವಾಗಿ ಇರಬೇಕಾದದ್ದು ೧೫೦ – ೨೫೦ ಮಿಲಿಗ್ರಾಂ/ಡೆಸಿಲೀಟರ್)
  • ಟ್ರೈಗ್ಗ್ಲಿಸರೈಡ್ : ೨೩೦ (೧೯೦ರ ತನಕ ಹೋಗಬಹುದು – ವಾಹನಕ್ಕೆ ವೇಗ ಮಿತಿ ಇದ್ದ ಹಾಗೆ)
  • ಹೆಚ್ ಡಿ ಎಲ್ ಕೊಲೆಸ್ಟೆರಾಲ್ : ೫೧.೫  (ಇದು ಹಿರೋ ಅಂತೆ, ಗಂಡಸರಲ್ಲಿ ಇದರ ಸಹಜ ಪ್ರಮಾಣ ೩೫-೫೫, ಹೆಂಗಸರಲ್ಲಿ ೪೫ -೬೫)
  • ಎಲ್ ಡಿ ಎಲ್ ಕೊಲೆಸ್ಟೆರಾಲ್ : ೧೪೦.೫ ( ೧೦೦ಕ್ಕಿಂತ ಕಡಿಮೆ ಇದ್ದರೆ ಉತ್ತಮ)

ಪಡೆದ ಅಂಕಗಳೊಂದಿಗೆ ನಮ್ಮ ವೈದ್ಯರ ಬಳಿಗೆ ಹೋದೆ. ಅವರು ಅಂಕ ಪಟ್ಟಿಯನ್ನು ಗಮನಿಸುತ್ತ ಹೋದಂತೆ ಇಲ್ಲಿ ನನ್ನ ರಕ್ತದೊತ್ತಡ ಏರುತ್ತಿತ್ತು – ಅಧ್ಯಾಪಕ ಮಹಾಶಯ ವಿದ್ಯಾರ್ಥಿಯ ಉತ್ತರ ಪತ್ರವನ್ನು ಗಮನಿಸಿದರೆ ಹೇಗೋ ಹಾಗೆ.

ಕೊನೆಯಲ್ಲಿ ಅವರು ಹೇಳಿದರು” ನೋಡಿ ಇಡೀ ಕೊಲೆಸ್ಟೆರಾಲುಗಳಲ್ಲಿ ಟ್ರೈಗ್ಲಿಸರೈಡ್ ಇದ್ದಾನಲ್ಲ ಇವ  ವಿಲನ್. ನಮ್ಮ ರಕ್ತವನ್ನು ಕೊಂಡೊಯ್ಯುವ ಪೈಪುಗಳಲ್ಲಿ ತುಂಬಿಕೊಳ್ಳುತ್ತ ತೊಂದರೆ ಕೊಡುವ ಇವನ ಬಗ್ಗೆ ಎಚ್ಚರ ಬೇಕು ಅಂತ ನೀವು ಪಡೆದಿರುವ ಕೊಲೆಸ್ಟೆರಾಲ್ ಮಾರ್ಕುಗಳು ಹೇಳುತ್ತವೆ.  ಈ ಮಾತ್ರೆ ತೆಗೆದುಕೊಳ್ಳಿ. ಯಾವುದೇ ದುಷ್ಪರಿಣಾಮ ಇಲ್ಲ”.

ನಾನು ಅಪ್ಪಟ ಸಸ್ಯಹಾರಿ. ಆಹಾರದಲ್ಲಿ ಕಟ್ಟು ನಿಟ್ಟು – ತಿಂದದ್ದು ಜೀರ್ಣ ಆಗದಿದ್ದರೆ ಕಟ್ಟುನಿಟ್ಟು ಆಗದೇ ಬೇರೇನು ಮಾಡಬೇಕು? ಹೇಳಿ ಕೇಳಿ ಕೃಷ್ಣ – ತುಸು ಬೆಣ್ಣೆ ಮತ್ತು ಮೊಸರು ಪ್ರಿಯ. ಅವೆರಡನ್ನು ಪೂರ್ಣ ಬಿಟ್ಟೆ.

ಸರಿ ಮಾತ್ರೆ ತೆಗೆದುಕೊಳ್ಳುವುದಕ್ಕೆ ಆರಂಭಿಸಿದೆ ದಿನದೊಳಗೆ ಅದು ತನ್ನ ಕೆಲಸ ಆರಂಭಿಸಿತೋ ತಿಳಿಯದು – ತಲೆ ಸುತ್ತತೊಡಗಿತು. ಮೈಕೈ ನೋವು. ಮತ್ತೆ ಓಡಿದೆ ವೈದ್ಯರ ಬಳಿಗೆ. ಆ ಮಾತ್ರೆಯನ್ನು ಮತ್ತರ್ಧ ಮಾಡಿ ತೆಗೆದುಕೊಳ್ಳುವುದಕ್ಕೆ ಸೂಚಿಸಿದರು. ಧೈರ್ಯ ಬರಲಿಲ್ಲ. ಪೂರ್ಣ ಬಿಟ್ಟೆ.

ಇದು ಮಾಹಿತಿ ಯುಗ. ಜಾಲಾಡತೊಡಗಿದೆ – ಮಾಹಿತಿ ಸಾಗರದಲ್ಲಿ – ಸಹಜ ಪರಿಹಾರಕ್ಕೆ. ಆಗ ನನಗೆ ಸಿಕ್ಕಿದ್ದು ಬೆಳ್ಳುಳ್ಳಿ.  ಬಹು ಸಂಖ್ಯಾತರು ಸೂಚಿಸಿದ್ದು ಬೆಳ್ಳುಳ್ಳಿಯನ್ನು. ಎಸಿಡಿಟಿ ಮತ್ತು ಕೊಲೆಸ್ಟೆರಾಲ್ ಶೇಖರಣೆಯ ತಡೆಗೆ ಬೆಳ್ಳುಳ್ಳಿ ರಾಮ ಬಾಣವೆನ್ನುವ ಸಂಶೋಧನ ಲೇಖನಗಳು ಕೂಡ ಸಿಕ್ಕಿತು. ಇದರೊಂದಿಗೆ ಮೀನಿನೆಣ್ಣೆಯ ಮಾತ್ರೆ – cod lever tablet – ಅತ್ಯುತ್ತಮ.

ಪ್ರಯೋಗ ಆರಂಭಿಸಿದೆ. ಪ್ರತಿ ದಿನ ಬೆಳಗ್ಗೆಎದ್ದೊಡನೆ ಮೂರು ಎಸಳು ಹಸಿ ಹಸಿ ಬೆಳ್ಳುಳ್ಳಿ ಜಗಿದು ನುಂಗಿ ನೀರು ಕುಡಿದೆ!. ರಾತ್ರೆ ಒಂದು cod lever ಮಾತ್ರೆ. ಅಪ್ಪಟ ಸಸ್ಯಹಾರಿ ಮಾಂಸಹಾರಿಯಾದೆ! ಇದರೊಂದಿಗೆ ಹಸಿರು ತರಕಾರೀ ಸೇವನೆ ಹೆಚ್ಚಿಸಿದೆ.

ಬೆಳ್ಳುಳ್ಳಿ ಅದೆಂಥ ಖಾರ ಘಾಟು ಮಾರಾಯ್ರೇ. ಆದರೂ ಆ ಮಾತ್ರೆಗಿಂತ ಇದು ವಾಸಿ. ಹತ್ತಿರ ಬಿಡಿ – ಸುದೂರ ಇದ್ದವರಿಗೂ ತೊಂದರೆ. ವಾಸನೆ ಕಡಿಮೆ ಮಾಡಲು ಲವಂಗ ಸೇವನೆ. ಲವಂಗ ಕೂಡ ಎಸಿಡಿಟಿ ಹರ ತಾನೇ! ವಾರ ಕಳೆಯುವುದರೊಳಗೆ ಎಸಿಡಿಟಿಯ ತೊಂದರೆಗಳು ಕಡಿಮೆಯಾಗುತ್ತ ಬಂದ ಅನುಭವ. ತಿಂಗಳೊಳಗೆ ಮಂಗ ಮಾಯ. ದಶಕಗಳಿದ ಕಾಡುತ್ತಿದ್ದ ಹೊಟ್ಟೆ ಉರಿ-ನೋವು ಈಗ ಲವಲೇಶವೂ ಇಲ್ಲ.

ಎರಡೆರಡು ಬಾರಿ ರಕ್ತ ಪರೀಕ್ಷೆ ಮಾಡಿಸಿದೆ. ಈ ಬಾರಿ ದೊರೆತ ಅಂಕಗಳು ಹೀಗಿವೆ

  • ಒಟ್ಟು ಕೊಲೆಸ್ಟೆರಾಲ್ ಅಂಕಗಳು : ೧೫೫,  ಟ್ರೈಗ್ಗ್ಲಿಸರೈಡ್ : ೧೪೫,  ಹೆಚ್ ಡಿ ಎಲ್ ಕೊಲೆಸ್ಟೆರಾಲ್ : ೪೫,  ಎಲ್ ಡಿ ಎಲ್ ಕೊಲೆಸ್ಟೆರಾಲ್ : ೯೬

ಸ್ಪಷ್ಟವಾಗಿ ಕಡಿಮೆಯಾಗಿ ಎಲ್ಲವೂ ಇಂದು ಮಾಮೂಲಿಗೆ ಬಂದು  ಸದ್ಯಕ್ಕೆ ಡಿಸ್ಟಿಂಕ್ಷನ್ನಿನಲ್ಲಿ ಉತ್ತೀರ್ಣನಾಗಿ ಜಗವ ಗೆದ್ದ ಖುಷಿಯಲ್ಲಿದ್ದೇನೆ.

ಈಗ ಬೆಳ್ಳುಳ್ಳಿ ಸೇವಿಸುವುದನ್ನು ಬಿಟ್ಟಿದ್ದೇನೆ – ತಪ್ಪೋ ಸರಿಯೋ ತಿಳಿಯದು. ಹೊಟ್ಟೆಯ ತಳಮಳವಾದಾಗ ಮತ್ತೆ ಸೇವಿಸಿದೊಡನೆ ಎಲ್ಲ ನಿರಾಳವಾದ ಅನುಭವ.  ಎಂದೇ ಇದೆಲ್ಲವೂ ಬೆಳ್ಳುಳ್ಳಿಯ ಮಹಿಮೆ ಎಂಬ ನಂಬಿಕೆ ನನಗೆ. ಸರಿಯೇ? – ತಿಳಿಯದು.

ನಿಮ್ಮ ಅನುಭವ ಏನು?

ರಾಧಾಕೃಷ್ಣ

Categories: ಅವಿಭಾಗೀಕೃತ
  1. ಶ್ರೀವಿದ್ಯಾ ಮಹೇಶ್
    ಮಾರ್ಚ್ 27, 2011 ರಲ್ಲಿ 3:31 ಫೂರ್ವಾಹ್ನ

    ನಮಸ್ತೆ,
    ಅಂದದ ನಿರೂಪಣೆ!!!! 🙂

    ಡಿಸ್ಟಿಂಕ್ಷನ್ನಿನಲ್ಲಿ ಉತ್ತೀರ್ಣನಾಗಿರುವುದಕ್ಕೆ ಅಭಿವಂದನೆಗಳು ಸರ್ ಜೀ !! ನೀವು ವಿದ್ಯಾರ್ಥಿಗಳಿಗೆ ಹೇಳುವಂತೆ , ಸ್ವಲ್ಪ ವಾಕ್ಯ ತಿರುಚಿ ನಾವು ಹೇಳುವೆವು, ” keep it (cholesterol) down, but within the limit “

  2. ಆನ೦ದ ಭಾವ
    ಮಾರ್ಚ್ 27, 2011 ರಲ್ಲಿ 3:42 ಫೂರ್ವಾಹ್ನ

    ಭಾವ,

    ನಾಳೆ ಉಸಯಪ್ಪಗ ಆನುದೆ ಎರಡು ಬೆಳ್ಳುಳ್ಳಿ ಜಗಿದು, ಜಗಿದು ತಿ೦ದಿಕ್ಕಿ ಒ೦ದು ತಿ೦ಗಳ ನ೦ತರ ಅದರ ಪರಿಣಾಮ ತಿಳಿಸುತ್ತೇನೆ ದಾನೆ? ನಮ್ಮ ಪೂಜ್ಯ ಚಿಕ್ಕಯ್ಯನವರು ದಿನಕ್ಕೆ ಹತ್ತು ಹತ್ತು ಬೆಳ್ಳುಳ್ಳಿ ತಿನ್ನುತ್ತಿದ್ದರು … http://www.funstinks.com/ ನಾನು ಈ ಬೆಳ್ಳೂಳ್ಳೀ ಸಮಾರ೦ಬದಲ್ಲಿ ಬಾಗವಹಿಸುತ್ತಿದ್ದೇನೆ. ಒ೦ದು ಸೇಬು ತಿ೦ದರೆ, ವೈದ್ಯ್ರರನ್ನು ದೂರ ಮಡಗಲಕ್ಕಡ, ಒ೦ದು ಬೆಳ್ಳುಳ್ಳಿ ತಿ೦ದರೆ ಎಲ್ಲರ ದೂರ ಮಡಗಲಕ್ಕು!! ಒಳ್ಳೆ ಉಪಾಯ ಭಾವ.
    ಅ೦ಬಗ ಕಾ೦ಬ
    ಆನ೦ದ ಭಾವ

    • M S RAO
      ಮಾರ್ಚ್ 27, 2011 ರಲ್ಲಿ 1:38 ಅಪರಾಹ್ನ

      ಆನಂದ ಭಾವ ತಿಂಬ ಮೊದಲೇ ಒಂದಾರಿ ಪರೀಕ್ಷೆ ಮಾಡಿದರೆ ಒಳ್ಳೆಯದಲ್ಲದೋ ..

  3. M S RAO
    ಮಾರ್ಚ್ 27, 2011 ರಲ್ಲಿ 1:45 ಅಪರಾಹ್ನ

    ಇದು ಕೊಲೆಸ್ಟೆರಾಲ್ ಇರುವರು ಪ್ರಯತ್ನ ಮಾಡುವಂತಹ ಒಂದು ಅನುಭವ .. ಹಲವರಿಗೆ ಇದರ ಪ್ರಯೋಜನವಾದದ್ದು ಉಂಟು

  4. ramadevi
    ಮಾರ್ಚ್ 27, 2011 ರಲ್ಲಿ 2:25 ಅಪರಾಹ್ನ

    ಬೆಳ್ಳುಳ್ಳಿ ಮಹಾತ್ಮೆ ಚೆನ್ನಾಗಿದೆ-ಇಂಥಾದ್ದೂ ಬರಿತಾ ಬರಿ. ಬರಿವವರನ್ನೇ ಖಾಯಂ ಬುಸ್ಯಿ ಇಡುವ ಯೋಚನೆ ನಂದು!
    ನಿಮ್ಮ ಅಭಿಮಾನಿ,
    ರಮಾದೇವಿ

  5. Ravi
    ಮಾರ್ಚ್ 29, 2011 ರಲ್ಲಿ 1:09 ಅಪರಾಹ್ನ

    ಎಲ್ಲಾದರೂ ಒಮ್ಮೆ ತಿಂದದ್ದು ಹೆಚ್ಚು ಕಡಿಮೆ ಆಗಿ ಹೊಟ್ಟೆಯಲ್ಲಿ ಅಪಾನವಾಯು ಹರಿದಾಗ ಹಾಲಿನ ಜೊತೆ ಬೆಳ್ಳುಳ್ಳಿ ಎಸಳು ತಿನ್ನುವುದುಂಟು. ನಾನೂ ಬೆಳ್ಳುಳ್ಳಿ ಅಭಿಮಾನಿ. ನಿಮ್ಮ ಅನುಭವದ ರೂಪದಲ್ಲಿ ನಮಗೆ ಒಳ್ಳೆ ಮಾಹಿತಿ. ಧನ್ಯವಾದ ರಾಧಾಕೃಷ್ಣರೆ!

  1. No trackbacks yet.

Leave a reply to ramadevi ಪ್ರತ್ಯುತ್ತರವನ್ನು ರದ್ದುಮಾಡಿ