ಭೂಕಂಪಕ್ಕೆ ತತ್ತರ ಪರಮಾಣು ಸ್ಥಾವರ
ಎಂಬತ್ತರ ದಶಕ. ನಾವೆಲ್ಲ ಕಾಲೇಜು ವಿದ್ಯಾರ್ಥಿಗಳು. ಉತ್ತರ ಕನ್ನಡದ ಕಾರವಾರ ಸಮೀಪ ಕಾಳೀ ನದಿಯ ತಟದ ಕಾನನ ಪ್ರದೇಶವಾದ ಕೈಗಾದಲ್ಲಿ ಉದ್ಧೇಶಿತ ಪರಮಾಣು ಸ್ಥಾವರದ ವಿರುದ್ಧ ಪರಿಸರವಾದಿಗಳು ನಡೆಸುತ್ತಿದ್ದ ಶಾಂತಿಯುತ ಹೋರಾಟವನ್ನು ಕುತೂಹಲದಿಂದ ಗಮನಿಸುತ್ತಿದ್ದ ಕಾಲ. ಹೋರಾಟದ ಮುಂಚೂಣಿಯಲ್ಲಿದ್ದ ಶಿವರಾಮ ಕಾರಂತರು ಅಂದು ಅಕ್ಷರಶ: ಭಾರ್ಗವನೇ ಆಗಿದ್ದರು. ನಾಗೇಶ್ ಹೆಗ್ಡೆ, ಕಲ್ಕುಳಿ ವಿಠಲ ಹೆಗ್ಡೆ, ಕ್ಲಾಡ್ ಆಲ್ವಾರಿಸ್, ಶಂಪಾ ದೈತೋಟ ಹೀಗೇ ಹಲವು ಮಂದಿ ಪರಿಸರ ಪ್ರಿಯರು ಅಂದು ಕೈಗಾ ವಿರುದ್ಧ ದನಿ ಎತ್ತಿದ್ದರು. ಪರಮಾಣು ಸ್ಥಾವರ ಅಥವಾ ರಿಯಾಕ್ಟರ್ ಬಗ್ಗೆ ಅಂದು ಪರ ವಿರೋಧದ ಚರ್ಚೆಗಳು ಬಿರುಸಿನಿಂದ ನಡೆಯುತ್ತಿದ್ದುವು. ರಿಯಾಕ್ಟರಿನಿಂದ ಉತ್ಪಾಟನೆಗೊಳ್ಳುವ ಹೊರಸೂಸುವ ವಿಕಿರಣಗಳು, ಅದರ ತ್ಯಾಜ್ಯದ ವಿಲೇವಾರಿಯ ಸಮಸ್ಯೆ, ವಿಕಿರಣಶೀಲ ರಾಸಾಯನಿಕಗಳು ವರ್ಷಗಟ್ಟಲೆ ಉಳಿದು ಜೈವಿಕ ಪರಿಣಾಮವನ್ನು ಬೀರುವ ಅಪಾಯಗಳ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದುವು ಸಭೆಗಳಲ್ಲಿ, ಪತ್ರಿಕೆಗಳಲ್ಲಿ. ಭೂಕಂಪ ಸಂಭವಿಸಿ ಪರಮಾಣು ಸ್ಥಾವರ ತೀವ್ರ ಅವಘಡಕ್ಕೆ ಒಳಗಾಗುವ ಅಪಾಯದ ಕುರಿತು ಹೆಚ್ಚಿನ ಚರ್ಚೆಗಳಲ್ಲಿ ಪ್ರಸ್ತಾವವಾಗುತ್ತಿತ್ತು. ಪರಮಾಣು ಸ್ಥಾವರದ ಪರವಾಗಿ ವಾದಿಸುತ್ತಿದ್ದ ತಜ್ಞರು “ಅಂಥ ಅಪಾಯವೇನೂ ಬರದು ಮತ್ತು ಅದಕ್ಕಾಗಿ ಎಲ್ಲ ಎಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗುತ್ತದೆ’ ಎನ್ನುತ್ತ ಜಪಾನನ್ನು ಉದಾಹರಿಸುತ್ತಿದ್ದರು.
ಅದಕ್ಕೆ ಕಾರಣವೂ ಇತ್ತು. ಎರಡನೇ ಮಹಾಯುದ್ಧ ಕಾಲದಲ್ಲಿ (೧೯೪೫, ಅಗೋಸ್ಟ್ ೬ ಮತ್ತು ೮) ತನ್ನ ನಗರಗಳಾದ ಹಿರೋಶಿಮಾ, ನಾಗಸಾಕಿಗಳಲ್ಲಿ ನಡೆದ ಪರಮಾಣು ಬಾಂಬಿನ ದಾಳಿಗೆ ತತ್ತರಿಸಿ ಹೋದ ಜಪಾನಿಗೆ ಪರಮಾಣುಶಕ್ತಿಯ ದೈತ್ಯ ಸಾಮರ್ಥ್ಯವೇನುನ್ನವ ಅನುಭವ ಚೆನ್ನಾಗಿಯೇ ತಿಳಿದಿದೆ. ಅಂದು ಆ ದಾಳಿಗೆ ಬಲಿಯಾದವರ ಸಂಖ್ಯೆ ಎರಡೂವರೆ ಲಕ್ಷ. ತೀವ್ರ ವಿಕಿರಣಕ್ಕೆ ತುತ್ತಾಗಿ ಆನುವಂಶಿಕ ವೈಕಲ್ಯಕ್ಕೆ ಒಳಗಾದ ಹಿಬಾಕುಷ್ ಸಂತತಿಗಳುಳ್ಳ ಜಪಾನ್ ಕೆಲವೇ ದಶಕಗಳಲ್ಲಿ ಪರಮಾದ್ಭುತವಾಗಿ ಚೇತರಿಸಿಕೊಂಡು ನಳನಳಿಸುವ ಬಗೆಯೇ ಅದ್ಭುತ. ಇದಕ್ಕಿಂತ ಸೋಜಿಗವೆಂದರೆ ವಿದ್ಯುದುತ್ಪಾದನೆಗೆ ಜಪಾನ್ ಮತ್ತೆ ನೆಚ್ಚಿಕೊಂಡದ್ದು ಪರಮಾಣು ಶಕ್ತಿಯನ್ನೇ!
ಜಪಾನ್ ಪುಟ್ಟ ದೇಶ. ನಮ್ಮ ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರಪ್ರದೇಶಕ್ಕಿಂತ ತುಸು ಹೆಚ್ಚು ವಿಸ್ತೀರ್ಣದ ಈ ದೇಶದ ತುಂಬ ಹರಡಿ ಹೋಗಿವೆ – ಒಂದೆರಡಲ್ಲ ಐವತ್ತೈದು ರಿಯಾಕ್ಟರುಗಳು!. ಇವು ಸುಮಾರು ಐವತ್ತು ಸಾವಿರ ಮೆಗಾವಾಟ್ ವಿದ್ಯುದುತ್ಪಾದನೆ ಮಾಡುತ್ತ ಜಪಾನಿಗೆ ಅಗತ್ಯವಾಗಿರುವ ವಿದ್ಯುತ್ತಿನಲ್ಲಿ ಶೇಕಡಾ ನಲುವತ್ತರಷ್ಟನ್ನು ಪೂರೈಸುತ್ತಿವೆ. ವಿಜ್ಞಾನ ತಂತ್ರಜ್ಞಾನಗಳಲ್ಲಿ ಅಮೇರಿಕ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳಿಗೆ ಸರಿ ಮಿಗಿಲಾದ ಸಾಧನೆ ಮಾಡುತ್ತಿರುವ ಜಪಾನಿಗೆ ಸಹಜವಾಗಿಯೇ ಅಗಾಧ ಪ್ರಮಾಣದಲ್ಲಿ ವಿದ್ಯುತ್ ಬೇಕು. ಯಾವ ಮೂಲವಾದರೂ ಅಡ್ಡಿ ಇಲ್ಲ, ವಿದ್ಯುದುತ್ಪಾದನೆ ಅನಿವಾರ್ಯ. ಎಂದೇ ಅದು ಆರಿಸಿಕೊಂಡಿದೆ ಪರಮಾಣು ಶಕ್ತಿಯಿಂದ ವಿದ್ಯುದುತ್ಪಾದನೆಯ ಹಾದಿಯನ್ನು. ಸದಾ ಕಂಪನ ೧೯೬೯ರಲ್ಲಿ ಮೊದಲ ಪರಮಾಣು ಸ್ಥಾವರ ಕಾರ್ಯಾರಂಭಿಸಿತು. ನಂತರದ ವರ್ಷಗಳಲ್ಲಿ ಎಂಥ ಭೂಕಂಪಕ್ಕೂ ಜಗ್ಗದಂಥ ಪರಮಾಣು ಸ್ಥಾವರಗಳನ್ನು ಸ್ಥಾಪಿಸುತ್ತ ಹೋದರು. ನಡು ನಡುವೆ ಜಪಾನಿನಲ್ಲಿ ಆಗಾಗ ಭೂಕಂಪನಗಳು ಸಂಭವಿಸಿದರೂ ಈ ಕಂಪನಗಳಿಂದ ಪರಮಾಣು ಸ್ಥಾವರಗಳಿಗೆ ಯಾವುದೇ ತೊಂದರೆ ಸಂಭವಿಸಲಿಲ್ಲ. ಜಪಾನೀಯರಿಗೆ ಇದು ಅಸಹಜವೇನೂ ಅಲ್ಲ. ಏಕೆಂದರೆ ಜಪಾನ್ ಇರುವುದೇ ಭೂಕಂಪ ವಲಯದಲ್ಲಿ.
ಮಾರ್ಚ್ ೧೧ ಶುಕ್ರವಾರ ಮಧ್ಯಾಹ್ನ ಎರಡರ ಹೊತ್ತಿಗೆ ಒಮ್ಮಿಂದೊಮ್ಮೆಗೇ ಜಪಾನಿನಲ್ಲಿ ಸಂಭವಿಸಿದ ಭೂಕಂಪ ಹೈಟಿಯನ್ನೂ ಮೀರಿಸಿ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು. ರಿಕ್ಟರ್ ಮಾನಕದಲ್ಲಿ ೯ ಸಂಖ್ಯೆಯ ಭೀಕರ ಭೂಕಂಪ ಸಂಭವಿಸಿದ್ದು ಜಪಾನಿನ ಫುಕುಷಿಮಾ ರಿಯಾಕ್ಟರ್ ಕೇಂದ್ರದ ಸಮೀಪದ ಸಾಗರದಾಳದಲ್ಲಿ. ಇದು ತನಕದ ಭೀಕರ ಭೂಕಂಪಗಳಲ್ಲಿ ನಾಲ್ಕನೇಯ ಸ್ಥಾನವನ್ನು ಅಲಂಕರಿಸಿಕೊಂಡ ಈ ಭಯಾನಕ ಭೂಕಂಪ ಸಾಗರ ಪ್ರದೇಶದಲ್ಲಿ ಸಂಭವಿಸಿ ದೈತ್ಯ ಅಲೆಗಳನ್ನೆಬ್ಬಿಸಿತು. ಇಂಥ ದೈತ್ಯ ಅಲೆಗಳಿಗೆ ಜಾಪನೀ ಭಾಷೆಯಲ್ಲಿ ಸುನಾಮೀ ಎಂದು ಹೆಸರು. ೨೦೦೫ರಲ್ಲಿ ಇಂಡೋನೇಶಿಯಾ ಸುಮಾತ್ರಾದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮೀಗೆ ಲಕ್ಷ ಮಂದಿ ಬಲಿಯಾದರು. ಮೊನ್ನೆ ಎದ್ದ ಸುನಾಮೀ ಕೂಡ ಅದೇ ಬಗೆಯಲ್ಲಿ ಪ್ರಳಯಸ್ವರೂಪಿಯಾಯಿತು. ತೀರ ಪ್ರದೇಶದ ನಗರಗಳ ಸಂದಿಗೊಂದಿಗಳಿಗೆಲ್ಲ ನುಗ್ಗುತ್ತ ಎಲ್ಲವನ್ನು ನುಂಗುತ್ತ ಅದು ಮಾಡಿದ ಅನಾಹುತ ಊಹೆಗೂ ನಿಲುಕದಾಗಿತ್ತು. ವಿಮಾನಗಳು, ವಾಹನಗಳು, ದೊಡ್ಡ ದೊಡ್ಡ ಮರದ ಮನೆ-ಕಟ್ಟಡಗಳೆಲ್ಲ ಬೆಂಕಿ ಪೆಟ್ಟಿಗೆಗಳಂತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಆ ದೃಶ್ಯ ಮನ ಕಲಕುತ್ತಿತ್ತು. ಸುಮಾರು ಮೂವತ್ತು ಸಾವಿರ ಮಂದಿ ಬಲಿಯಾಗಿರಬಹುದು ನಿಸರ್ಗದ ಈ ವಿಕೋಪಕ್ಕೆ.
ಅತ್ಯಂತ ಜನನಿಬಿಡ ನಗರವಾದ ಟೊಕಿಯೋದಿಂದ ಇನ್ನೂರೈವತ್ತು ಕಿಮೀ ಉತ್ತರಕ್ಕಿರುವ ಫುಕುಷಿಮಾ ದೊಡ್ಡ ಪರಮಾಣುಸ್ಥಾವರ ಕೇಂದ್ರ. ಭೂಕಂಪದಲೆಗಳು, ಸುನಾಮೀ ತೆರೆಗಳು ಈ ಪರಮಾಣು ಸ್ಥಾವರಗಳ ಮೇಲೆ, ಅನಿಲ ಸ್ಥಾವರಗಳ ಮೇಲೆ ಅನಿರೀಕ್ಷಿತ ಪ್ರಹಾರ ನಡೆಸಿದುವು. ಅದೆಂಥ ಪ್ರಹಾರವೆಂದರೆ ಪ್ರತಿಕ್ರಿಯಿಸುವುದಕ್ಕೂ ಪುರುಸೊತ್ತಿರಲಿಲ್ಲ. ಅಲ್ಲಿರುವ ಆರು ಸ್ಥಾವರಗಳಲ್ಲಿ ಒಂದು ತೀವ್ರವಾಗಿ ಹಾನಿಗೊಳಗಾಗಿದೆ. ಸ್ಥಾವರದ ಕೇಂದ್ರ ಭಾಗದಲ್ಲಿ ಭೀಕರ ಸ್ಫೋಟಗಳು ನಡೆದು ಮೇಲ್ಕವಚ ಬಿರಿದು ವಿಕಿರಣಶೀಲ ಪದಾರ್ಥಗಳು ಸೋರಿಕೆಯಾಗತೊಡಗಿವೆ. ಇತರ ಮೂರು ಸ್ಥಾವರಗಳು ಕೂಡ ಅದೇ ಹಾದಿಯಲ್ಲಿವೆ. ಅಂದರೆ ಜಪಾನ್ ಮತ್ತೆ ವಿಕಿರಣ ದುರಂತದತ್ತ ಮುಖ ಮಾಡಿದೆ.
ನಿಮಗೆ ತಿಳಿದಿರಬಹುದು, ಪರಮಾಣು ಸ್ಥಾವರ ಅಥವಾ ರಿಯಾಕ್ಟರಿನಲ್ಲಿ ಬಳಸುವ ಇಂಧನವೆಂದರೆ ಯುರೇನಿಯಮ್. ಯುರೇನಿಯಮ್ ಪರಮಾಣುವಿನ ಬೀಜಕೇಂದ್ರ ಅಥವಾ ನ್ಯೂಕ್ಲಿಯಸ್ಸನ್ನು ನ್ಯೂಟ್ರಾನ್ ಎಂಬ ಕಣದಿಂದ ತಾಡಿಸಿದಾಗ, ಅದು ಒಡೆದು ಕಡಿಮೆ ತೂಕದ ಧಾತುಗಳ ನ್ಯೂಕ್ಲಿಯಸ್ಸುಗಳು ಮೈದಳೆಯುತ್ತವೆ ಮತ್ತು ಅಲ್ಲಿ ನಷ್ಟವಾದ ದ್ರವ್ಯ ಶಕ್ತಿಯಾಗಿ ಬಿಡುಗಡೆಯಾಗುತ್ತದೆ. ಬೈಜಿಕವಿದಳನ (Nuclear fission) ಎಂಬ ಹೆಸರಿನ ಈ ನ್ಯೂಕ್ಲಿಯರ್ ಕ್ರಿಯೆಯನ್ನು ಆವಿಷ್ಕರಿಸಿದವರು ಜರ್ಮನಿಯ ರಸಾಯನ ವಿಜ್ಞಾನಿಗಳಾದ ಒಟ್ಟೊಹ್ಯಾನ್ ಮತ್ತು ಸ್ಟ್ರಾಸ್‌ಮನ್ (೧೯೩೯).
ಮಿಲಿಗ್ರಾಮ್ ತೂಕದ ಒಂದು ಚಿಟಿಕೆ ಯುರೇನಿಯಮ್ ದ್ರವ್ಯದಲ್ಲಿ ಕೋಟಿಗಟ್ಟಲೆ ಯುರೇನಿಯಮ್ ಪರಮಾಣುಗಳು ಇರುತ್ತವೆ. ಇವೆಲ್ಲವೂ ಕ್ಷಣ ಮಾತ್ರದಲ್ಲಿ ವಿದಳನಗೊಂಡರೆ ಏನಾಗಬಹುದು? ಬಿಡುಗಡೆಯಾಗುವ ಶಕ್ತಿ ಅಪಾರ. ಆ ದೈತ್ಯ ಶಕ್ತಿಯನ್ನು ಪರಮಾಣು ಬಾಂಬಿನಂಥ ಮಾರಕಾಸ್ತ್ರವಾಗಿ ರೂಪಿಸಬಹುದು, ಅಥವಾ ವಿದ್ಯುಚ್ಛಕ್ತಿಯ ಉತ್ಪಾದನೆಗೆ ಬಳಸಬಹುದು – ನಮ್ಮಲ್ಲಿರಬಹುದಾದ ಚೂರಿಯನ್ನು ಬಳಸುವುದರಲ್ಲಿದೆ ಬುದ್ಧಿವಂತಿಕೆ! ಯುರೇನಿಯಮ್ ರಾಸಾಯನಿಕದಲ್ಲಿ ಒಂದು ಪರಮಾಣುಬೀಜ ನ್ಯೂಟ್ರಾನಿನಿಂದ ವಿದಳನಗೊಂಡಾಗ ಅಲ್ಲಿ ಎರಡು ಅಥವಾ ಮೂರು ನ್ಯೂಟ್ರಾನುಗಳು ಬಿಡುಗಡೆಯಾಗುತ್ತವೆ. ಸನ್ನಿವೇಶ ಅನುಕೂಲವಿದ್ದಲ್ಲಿ – ಅಂದರೆ ರಾಸಾಯನಿಕದ ದ್ರವ್ಯರಾಶಿ ಒಂದು ಕನಿಷ್ಠ ಮಿತಿಗಿಂತ ಹೆಚ್ಚಿದ್ದಲ್ಲಿ – ಬಿಡುಗಡೆಗೊಂಡ ನ್ಯೂಟ್ರಾನುಗಳಿಂದ ಬೇರೆ ಯುರೇನಿಯಮ್ ನ್ಯೂಕ್ಲಿಯಸ್ಸುಗಳು ವಿದಳನಗೊಳ್ಳುತ್ತವೆ. ಪರಿಣಾಮವಾಗಿ ಮತ್ತೆ ಹಲವು ನ್ಯೂಟ್ರಾನುಗಳ ಸೃಷ್ಟಿ. ಇವುಗಳಿಂದ ಇನ್ನಷ್ಟು ವಿದಳನ. ಇದಕ್ಕೆ ವಿಜ್ಞಾನದ ಪರಿಭಾಷೆಯಲ್ಲಿ ಶೃಂಖಲಾ ಕ್ರಿಯೆ (chain reaction ) ಅನ್ನುತ್ತಾರೆ.
ಒಂದು ವೇಳೆ ಶೃಂಖಲಾಕ್ರಿಯೆಯ ಮೇಲೆ ಯಾವುದೇ ಹತೋಟಿ ಇಲ್ಲದೇ ಹೋದರೆ ಏನಾಗಬಹುದು? ಅದೊಂದು ಹರಾಕಿರಿ. ಕ್ಷಣ ಮಾತ್ರದಲ್ಲಿ ಬಿಲಿಯಗಟ್ಟಲೆ ಪರಮಾಣುಗಳು ವಿದಳನಗೊಂಡು ಊಹಾತೀತ ಪ್ರಮಾಣದಲ್ಲಿ ಶಕ್ತಿಯ ಮಹಾಸ್ಫೋಟವಾಗುತ್ತದೆ. ಇದುವೇ ನ್ಯೂಕ್ಲಿಯರ್ ಅಥವಾ ಪರಮಾಣು ಬಾಂಬ್. ಇಂಥದೊಂದು ಶಸ್ತ್ರವನ್ನು ಸಮರಾಂಗಣದಲ್ಲಿ ಪ್ರಯೋಗಿಸಿದರೆ ಅದು ಬ್ರಹ್ಮಾಸ್ತ್ರವೇ ಸರಿ. ಹಿರೋಶಿಮಾ ಮತ್ತು ನಾಗಸಾಕಿಗಳ ಮೇಲೆ ತಾಡಿಸಿದ ಪರಮಾಣು ಬಾಂಬ್ ಅದಕ್ಕೆ ದಿವ್ಯ ನಿದರ್ಶನ. ಇದರ ಬದಲಾಗಿ ನಡೆಯುವ ವಿದಳನ ಕ್ರಿಯೆಯನ್ನು ನಿಯಂತ್ರಿಸಿದಲ್ಲಿ ಆ ಶಕ್ತಿಯನ್ನು ನಮ್ಮ ಅನುಕೂಲಕ್ಕೆ ಸರಿಯಾಗಿ ಬಳಸಿಕೊಳ್ಳಬಹುದು; ವಿದ್ಯುದುತ್ಪಾದನೆ ಮಾಡಬಹುದು. ಇದು ಸಾಧ್ಯವಾಗುವುದು ಪರಮಾಣು ಸ್ಥಾವರದಲ್ಲಿ.
ಬೈಜಿಕ ವಿದಳನ ಕ್ರಿಯೆಯನ್ನು ನಿಯಂತ್ರಿಸುವ ಸಂಕೀರ್ಣ ವ್ಯವಸ್ಥೆ ಸ್ಥಾವರದಲ್ಲಿರುತ್ತದೆ. ಸರಣಿ ವಿದಳನ ಕ್ರಿಯೆಯನ್ನು ಪ್ರೇರಿಸಿ, ಕ್ರಿಯೆಯನ್ನು ಯಶಸ್ವಿಯಾಗಿ ನಿಯಂತ್ರಿಸುವ ಮೂಲಕ ಪರಮಾಣು ಸ್ಥಾವರವೊಂದು ಆರಂಭವಾದದ್ದು ೧೯೪೨ರಲ್ಲಿ. ಅದರ ನೇತೃತ್ವವನ್ನು ವಹಿಸಿದವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತ ವಿಜ್ಞಾನಿ ಎನ್ರಿಕೋ ಫರ್ಮಿ. ಫರ್ಮಿ ನಿರ್ಮಿಸಿದ ಸ್ಥಾವರ ತುಂಬ ಚಿಕ್ಕದು – ಬ್ಯಾಡ್ಮಿಂಟನ್ ಅಂಗಣದಷ್ಟೇ ಇತ್ತು. ೧೯೪೫, ಜುಲೈ ೧೬ರಂದು ಅಮೇರಿಕ ಮತ್ತು ಮಿತ್ರರಾಷ್ಟ್ರಗಳು ಪ್ರಪ್ರಥಮ ಪರಮಾಣು ಬಾಂಬಿನ ಯಶಸ್ವೀ ಸ್ಫೋಟದ ಪರೀಕ್ಷೆ ನಡೆಸಿತು. ೧೯೪೫ ಅಗೋಸ್ಟ್ ೬ ಮತ್ತು ೯ರಂದು ಅನುಕ್ರಮವಾಗಿ ಹಿರೋಶಿಮಾ ಮತ್ತು ನಾಗಸಾಕಿಗಳ ಮೇಲೆ ಪರಮಾಣು ಬಾಂಬಿನ ತಾಡನೆಯೊಂದಿಗೆ ಪರಮಾಣು ಗರ್ಭದಲ್ಲಿರುವ ದೈತ್ಯ ಶಕ್ತಿಯ ಅನಾವರಣವಾಯಿತು. ಹೀಗಿರುತ್ತದೆ ಸಾಮಾನ್ಯವಾಗಿ ರಿಯಾಕ್ಟರುಗಳಲ್ಲಿ ಯುರೇನಿಯಮ್, ಪ್ಲುಟೋನಿಯಮ್ ಅಥವಾ ಇವೆರಡರ ಮಿಶ್ರಣವನ್ನು ಬೈಜಿಕ ವಿದಳನ ಇಂಧನವಾಗಿ ಬಳಸುತ್ತಾರೆ. ನೈಸರ್ಗಿಕವಾಗಿ ದೊರೆವ ಯುರೇನಿಯಮ್ಮಿನಲ್ಲಿ ಯುರೇನಿಯಮ್ – ೨೩೩, ಯುರೇನಿಯಮ್ – ೨೩೫ ಮತ್ತು ಯುರೇನಿಯಮ್ – ೨೩೮ ಎಂಬ ಮೂರು ಬಗೆಯ ಐಸೋಟೋಪುಗಳಿವೆ.
ಇವುಗಳಲ್ಲಿ ಮೊದಲೆರಡರ ಪ್ರಮಾಣ ಶೇಕಡಾ ಒಂದಕ್ಕಿಂತಲೂ ಕಡಿಮೆ. ಆದರೆ ಇವುಗಳು ಅತ್ಯಂತ ಸುಲಭದಲ್ಲಿ ವಿದಳನಗೊಳ್ಳುತ್ತವೆ. ಹಾಗಾಗಿ ಇವುಗಳನ್ನೇ ಹೆಚ್ಚಾಗಿ ವಿದಳನ ದ್ರವ್ಯವನ್ನಾಗಿ ಬಳಸುತ್ತಾರೆ. ಯುರೇನಿಯಮ್ ಅದಿರು ಭೂಮಿಯ ಎಲ್ಲ ಕಡೆ ಸಮಾನವಾಗಿ ಪಸರಿಸಿಲ್ಲ. ರಷ್ಯಾ ಮತ್ತು ಅಮೇರಿಕಗಳಲ್ಲಿ ಹೆಚ್ಚಿನ ಯುರೇನಿಯಮ್ ಅದಿರು ನಿಕ್ಷೇಪಗಳಿವೆ. ನಮ್ಮಲ್ಲಿ ಬಿಹಾರದ ಜಾದುಗುಡ ಎಂಬಲ್ಲಿ ಯುರೇಮಿಯಮ್ ನಿಕ್ಷೇಪವಿದೆ. ತೀರ ಇತ್ತೀಚೆಗೆ ಗುಲ್ಬರ್ಗಾದ ಗೂಗಿ ಎಂಬಲ್ಲಿ ಹೇರಳ ಪ್ರಮಾಣದಲ್ಲಿ ಯುರೇನಿಯಮ್ ನಿಕ್ಷೇಪವನ್ನು ಪತ್ತೆ ಮಾಡಿದ್ದಾರೆ.
ಭೂಮಿಯಿಂದ ಬಗೆದು ತೆಗೆವ ನೈಸರ್ಗಿಕ ಯುರೇನಿಯಮ್ಮನ್ನು ಮೊದಲ ಹಂತದಲ್ಲಿ ಸಂಸ್ಕರಿಸಿ, ಪರಿಶುದ್ಧ ಇಂಧನವನ್ನು ಝಿರ್ಕೋನಿಯಮ್ ನಳಿಗೆಗಳಲ್ಲಿ ಭರ್ತಿ ಮಾಡಿ ಇಂಧನ ಕೊಳವೆಗಳನ್ನು ನಿರ್ಮಿಸುತ್ತಾರೆ. ಒಂದು ರಿಯಾಕ್ಟರಿನೊಳಗಡೆ ಇಂಥ ನೂರಾರು ಸರಳುಗಳು ಇರುತ್ತವೆ – ಹಿಡಿಸೂಡಿಯ ಹಾಗೆ. ಈ ಸರಳುಗಳಲ್ಲಿ ಮಂದಗತಿಯ ಮತ್ತು ಕಡಿಮೆ ಶಕ್ತಿಯ ನ್ಯೂಟ್ರಾನಿಂದ ಬೈಜಿಕ ವಿದಳನದ ಶೃಂಖಲಾ ಕ್ರಿಯೆಯನ್ನು ಪ್ರೇರಿಸಿದಾಗ ಅಲ್ಲಿ ಆರಂಭವಾಗುತ್ತದೆ ಅನುಸ್ಯೂತ ಬೈಜಿಕ ವಿದಳನ ಪ್ರಕ್ರಿಯೆ ಮತ್ತು ಅಗಾಧ ಶಕ್ತಿಯ ಬಿಡುಗಡೆ. ವಿದಳನಕ್ರಿಯೆಯನ್ನು ಹತೋಟಿಯಲ್ಲಿಡುವುದು ಇಲ್ಲಿ ಅತ್ಯಂತ ಮುಖ್ಯವಾದದ್ದು. ಅಂದರೆ ರಿಯಾಕ್ಟರ್ ಗರ್ಭದಲ್ಲಿ ಸೃಷ್ಟಿಯಾಗುವ ನ್ಯೂಟ್ರಾನುಗಳ ಸಂಖ್ಯೆಯ ಮೇಲೆ ನಿಯಂತ್ರಣವಿರಬೇಕಾಗುತ್ತದೆ. ಇದಕ್ಕಾಗಿ ಇಂಧನ ಕೊಳವೆಗಳ ನಡುನಡುವೆ ನ್ಯೂಟ್ರಾನುಗಳನ್ನು ಹೀರಿಕೊಳ್ಳುವುದಕ್ಕಾಗಿ ಕ್ಯಾಡ್ಮಿಯಮ್ ಅಥವಾ ಬೋರಾನ್ ಸರಳುಗಳಿರುತ್ತವೆ. ಯಾವುದೆ ಕಾರಣಕ್ಕೆ ನ್ಯೂಟ್ರಾನುಗಳ ಸಂಖ್ಯೆ ಹೆಚ್ಚುತ್ತ ವಿದದಳನ ಕ್ರಿಯಾ ಗತಿ ಅಂಕೆ ಮೀರಿದರೆ, ಅಂಕುಶ ಹಾಕಲು ನಿಯಂತ್ರಕ ಸರಳುಗಳನ್ನು ಇಂಧನ ಕೊಳವೆಗಳ ನಡುವೆ ಲೆಕ್ಕ ಹಾಹಾಕಿದ ಆಳಕ್ಕೆ ಇಳಿಸುತ್ತಾರೆ – ಹತೋಟಿ ಮೀರಲು ತೊಡಗಿದ ದೊಂಬಿ ನಿರತರನ್ನು ಲಾಠಿ ರುಚಿ ತೋರಿಸಿ ನಿಯಂತ್ರಿಸುವ ಹಾಗೆ. ಚೆರ್ನೋಬಿಲ್ ದುರಂತವಾದದ್ದು ಇಂಥ ನಿಯಂತ್ರಕ ಕುಸಿದ ಕಾರಣದಿಂದ.
ಬೈಜಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ನ್ಯೂಟ್ರಾನುಗಳಾದರೋ ಅತ್ಯಂತ ವೇಗದ ನ್ಯೂಟ್ರಾನುಗಳು. ಶರ ವೇಗದಲ್ಲಿ ಸಾಗುವ ಇವುಗಳನ್ನು ಮಂದಗತಿಯಲ್ಲಿ ಚಲಿಸುವಂತೆ ಮಾಡದೇ ಹೋದರೆ ಕ್ರಿಯೆ ಅನುಸ್ಯೂತವಾಗಿ ಮುಂದುವರಿಯಲಾರದು. ಅದಕ್ಕಾಗಿಯೇ ಗ್ರಾಫೈಟ್ ಅಥವಾ ಭಾರಜಲ (heavy water )ವನ್ನು ಬಳಸುತ್ತಾರೆ. ಈ ದ್ರವ್ಯಗಳ ವೇಗದ ನ್ಯೂಟ್ರಾನುಗಳು ಸಾಗುವಾಗ ವೇಗ ಕುಂಠಿತಗೊಳ್ಳುತ್ತವೆ – ಕಿಕ್ಕಿರಿದ ಪೇಟೆಯ ಜನಸಂದಣಿಯ ನಡುವೆ ಓಟ ಓಡುವ ಹಾಗೆ. ಮಂದ ಗತಿಯ ನ್ಯೂಟ್ರಾನುಗಳು ವಿದಳನ ಕ್ರಿಯೆಯಲ್ಲಿ ಭಾಗಿಯಾಗುತ್ತವೆ.
ಒಂದು ಲೆಕ್ಕಾಚಾರ ಪ್ರಕಾರ ಒಂದು ಕೆಜಿಯಷ್ಟು ಕಲ್ಲಿದ್ದಲು ಗಂಟೆಗೆ ಎರಡು ಕಿಲೋವಾಟ್ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿದರೆ, ಒಂದು ಕೆಜಿ ಯುರೇನಿಯಮ್ಮಿನಿಂದ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯ ಪ್ರಮಾಣ ಗಂಟೆಗೆ ಒಂದು ಲಕ್ಷದ ನಲುವತ್ತು ಸಾವಿರ ಕಿಲೋವಾಟ್, ಮತ್ತು ಅತ್ಯಾಧುನಿಕ ಬ್ರೀಡರ್ ರಿಯಾಕ್ಟರಿನಿಂದ ಬಿಡುಗಡೆಯಾಗುವ ವಿದ್ಯುಚ್ಛಕ್ತಿಯ ಪ್ರಮಾಣ ಗಂಟೆಗೆ ನಾಲ್ಕು ಲಕ್ಷ ಕಿಲೋವಾಟ್. ಈ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯೇ ಪರಮಾಣು ವಿದ್ಯುದ್ ಸ್ಥಾವರಗಳನ್ನು ನಿರ್ಮಿಸಲು ಕಾರಣ. ಎಲ್ಲ ಸುಸೂತ್ರವಾಗಿ ನಡೆದರೆ ಇದೊಂದು ಶಕ್ತಿಯ ಮಹಾ ಘನಿ. ಬ್ರೀಡರ್ ರಿಯಾಕ್ಟರುಗಳಲ್ಲಿ ಥೋರಿಮ್ – ೨೩೨, ಅಥವಾ ಯುರೇನಿಯಮ್ – ೨೩೮ ಐಸೊಟೋಪುಗಳನ್ನು ಬಳಸುತ್ತಾರೆ ಇಂಧನವಾಗಿ.
ಭಾರತದಲ್ಲಿ ಯುರೇನಿಯಮ್ ನಿಕ್ಷೇಪ ಕಡಿಮೆ. ಆದರೆ ಥೋರಿಯಮ್ ಹೇರಳವಾಗಿದೆ – ಪೂರ್ವ ಮತ್ತು ಕೇರಳ ಕರಾವಳಿ ಪ್ರದೇಶಗಳಲ್ಲಿ – ಕರಿ ಬಣ್ಣದ ಮರಳಿನೊಂದಿಗೆ ಮಿಶ್ರವಾಗಿ. ಹಾಗಾಗಿಯೇ ಆ ಕರಾವಳಿಯಲ್ಲಿ ನೈಸರ್ಗಿಕವಾಗಿ ವಿಕಿರಣ ಪ್ರಮಾಣ ಇತರೆಡೆಗಿಂತ ಹಲವು ಪಟ್ಟು ಜಾಸ್ತಿ. ಈ ಥೋರಿಯಮ್ ನಿಕ್ಷೇಪ ನಮ್ಮ ಭವಿಷ್ಯದ ಬ್ರೀಡರ್ ರಿಯಾಕ್ಟರುಗಳ ಬಲು ಮುಖ್ಯ ಇಂಧನ. ಕೇವಲ ವಿದ್ಯುಚ್ಛಕ್ತಿಗಷ್ಟೇ ಅಲ್ಲ, ಬಗೆ ಬಗೆಯ ವಿಕಿರಣಪಟುತ್ವ ಐಸೊಟೋಪುಗಳ ಉತ್ಪಾದನೆಯಲ್ಲಿ ಕೂಡ ರಿಯಾಕ್ಟರುಗಳನ್ನು ಬಳಸುತ್ತಾರೆ. ವೈದ್ಯಕೀಯ ರಂಗದಲ್ಲಿ ಇಂದು ವಿಕಿರಣ ಚಿಕಿತ್ಸೆಗೆ ಬಳಸುವ ವಿಕಿರಣಪಟುತ್ವ ಐಸೊಟೋಪುಗಳಾದ ಕೊಬಾಲ್ಟ್ – ೬೦, ಅಯೋಡಿನ್ -೧೩೧, ಸೀಸಿಯಮ್ -೧೩೭ ಇತ್ಯಾದಿಗಳು ರಿಯಾಕ್ಟರಿನ ಉಪೋತ್ಪನ್ನಗಳು. ಇವೆಲ್ಲವೂ ಬೇರೆ ಇನ್ನಿತರ ಕ್ಷೇತ್ರಗಳಲ್ಲೂ ಬಳಕೆಯಲ್ಲಿವೆ. ಎಂದೇ ಇವುಗಳ ಉತ್ಪಾದನೆ ಮತ್ತು ಬಳಕೆ ಬೇರೆಯೇ ಉದ್ದಿಮೆಯ ಆಯಾಮವನ್ನು ಪಡೆದುಕೊಂಡಿವೆ.
ಇದಕ್ಕಾಗಿಯೇ ಪುಟ್ಟದಾದ ಸಂಶೋಧಕ ರಿಯಾಕ್ಟರುಗಳು ನಮ್ಮಲ್ಲಿವೆ. ಧ್ರುವ, ಅಪ್ಸರಾ, ಕಾಮಿನಿ, ಝರ್ಲಿನಾ ಮೊದಲಾದುವು ನಮ್ಮ ದೇಶದಲ್ಲಿರುವ ಸಂಶೋಧನಾ ರಿಯಾಕ್ಟರುಗಳು. ಬೈಜಿಕ ವಿದಳನದಿಂದ ಪರಮಾಣು ಸ್ಥಾವರದ ಕೇಂದ್ರದಲ್ಲಿ ಸಾವಿರ ಡಿಗ್ರಿಗಗಳಷ್ಟು ಉಷ್ಣತೆ ಏರುತ್ತದೆ. ಬಿಸಿಯಿಂದ ಕುದಿವ ಕೇಂದ್ರದ ಸುತ್ತ ಕೊಳವೆಯಲ್ಲಿ ಸಾಗುವ ತಣ್ಣಗಿನ ನೀರು ಶಾಖವನ್ನು ಹೀರಿಕೊಳ್ಳುತ್ತ ಉಗಿಯಾಗಿ, ಆ ಉಗಿಯು ವಿದ್ಯುತ್ ಟರ್ಬೈನುಗಳನ್ನು ಚಾಲನೆ ಮಾಡುತ್ತ ಅಂತಿಮವಾಗಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಅಂದರೆ ಪರಮಾಣು ಸ್ಥಾವರದ ಉಷ್ಣ ನಿಯಂತ್ರಣಕ್ಕೆ ಮತ್ತು ವಿದ್ಯುದುತ್ಪಾದನೆಗೆ ನೀರು ಅನಿವಾರ್ಯ. ಎಂದೇ ಎಲ್ಲ ಸ್ಥಾವರಗಳು ಸಮದ್ರದ ಅಥವಾ ದೊಡ್ಡ ನದಿಗಳ ತಟದಲ್ಲಿಯೇ ನಿರ್ಮಾಣಗೊಂಡಿರುವುದನ್ನು ಗಮನಿಸಬಹುದು. ಉದಾಹರಣೆಗೆ, ಚೆನ್ನೈಯಿಂದ ನೂರು ಕಿಮೀ ದೂರದ ಕಲ್ಪಾಕ್ಕಮ್ ಸ್ಥಾವರ ಬಂಗಾಳ ಕೊಲ್ಲಿಯ ದಂಡೆಯಲ್ಲಿದ್ದರೆ, ಕೈಗಾ ಸ್ಥಾವರಗಳು ಕಾಳೀ ನದಿಯ ತಟದಲ್ಲಿವೆ. ಬೈಜಿಕ ವಿದಳನ ಕ್ರಿಯೆಯಲ್ಲಿ ಅನೇಕ ಬಗೆಯ ವಿಕಿರಣಶೀಲ ಐಸೊಟೋಪುಗಳು ಸೃಷ್ಟಿಯಾಗುತ್ತವೆ. ಉದಾಹರಣೆಗೆ ಪ್ಲುಟೋನಿಯಮ್ -೨೩೯, ಸೀಸಿಯಮ್ -೧೩೭, ಸ್ಟ್ರಾನ್ಷಿಯಮ್ -೮೯, ಅಯೋಡಿನ್ – ೧೩೧ ಇತ್ಯಾದಿ.
ಇವುಗಳಿಂದ ವಿಕಿರಣ ಉತ್ಸರ್ಜನೆಯಾಗುತ್ತಿರುತ್ತವೆ. ಒಂದು ರಾಸಾಯನಿಕ ವಿಷಕ್ಕೆ ಬಣ್ಣ ಅಥವಾ ವಾಸನೆ ಇರಬಹುದು ಮತ್ತು ಆ ಕಾರಣದಿಂದ ಅವುಗಳ ಇರುವಿಕೆ ನಮ್ಮ ಗಮನಕ್ಕೆ ಬರುತ್ತದೆ. ಆದರೆ ಇಲ್ಲಿ ಪರಿಸ್ಥಿತಿ ಭಿನ್ನ. ವಿಕಿರಣಶೀಲ ಐಸೊಟೋಪುಗಳು ಸೂಸುವ ಅಗೋಚರ ವಿಕಿರಣಕ್ಕೆ ಬಣ್ಣವಿಲ್ಲ, ಸುವಾಸನೆ ಮೊದಲೇ ಇಲ್ಲ. ಅವು ದೇಹದ ಜೀವಕೋಶಗಳನ್ನು ತೂರಿ ಸಾಗುವಾಗ ಮಾಡುವ ಪರಿಣಾಮ ಮಾತ್ರ ಭೀಕರ. ತೀವ್ರ ವಿಕಿರಣಕ್ಕೆ ತುತ್ತಾದವರಿಗೆ ಕೂದಲು ಉದುರಿ, ನಿಶ್ಯಕ್ತಿ ಅಡರಿ, ತಲೆ ಸುತ್ತು ಬರತೊಡಗಿದಾಗಲಷ್ಟೇ ಏನೋ ಎಡವಟ್ಟಾಗತೊಡಗಿದೆ ಎಂಬ ಅನುಭವ ಬರುತ್ತದೆ. ಹಾಗಾಗಿಯೇ ವಿಕಿರಣಶೀಲ ಪದಾರ್ಥಗಳು ಜೈವಿಕ ಪರಿಸರಕ್ಕೆ ಸೇರದಂತೆ ಎಲ್ಲ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಇಡೀ ರಿಯಾಕ್ಟರನ್ನು ದಪ್ಪ ಕಾಂಕ್ರೀಟಿನ ಕವಚ ಹೊದಿಸಿರುತ್ತಾರೆ. ಒಮ್ಮೆ ಜೈವಿಕ ಪರಿಸರಕ್ಕೆ ಸೇರಿದ ವಿಕಿರಣ ಪಟುತ್ವ ರಾಸಾಯನಿಕಗಳು ಗಾಳಿ, ನೀರು, ಆಹಾರದ ಮೂಲಕ ಜೀವಿಗಳ ದೇಹವನ್ನು ಸೇರುತ್ತವೆ. ವಿಕಿರಣಪಟುತ್ವದ ತೀವ್ರತೆ ಯಾವ ಬಗೆಯಲ್ಲಿ ಬದಲಾಗುತ್ತದೆನ್ನುವುದು ರಾಸಾಯನಿಕಗಳ ಗುಣ ವಿಶೇಷವಾದ “ಅರ್ಧಾಯು” (Half life ) ಎನ್ನುವುದರ ಮೇಲೆ ಅವಲಂಬಿಸಿದೆ.
ಪ್ಲುಟೋನಿಯಮ್ -೨೩೯ ರ ಅರ್ಧಾಯು ೨೪೦೦೦ ವರ್ಷಗಳು. ಅಂದರೆ ಇಂದು ಇರುವ ಅದರ ವಿಕಿರಣಪಟುತ್ವ ಪ್ರಮಾಣ ಇನ್ನು ೨೪,೦೦೦ ವರ್ಷಗಳಲ್ಲಿ ಅರ್ಧಾಂಶವಾಗುತ್ತದೆ. ಒಂದೊಮ್ಮೆ ಪ್ಲುಟೋನಿಯಮ್ ಬಿಲ್ಲೆಯೊಂದು ಗುಜರಿಗೆ ಸೇರಿತೆಂದು ಭಾವಿಸೋಣ. ಈ ಬಿಲ್ಲೆಯ ವಿಕಿರಣಶೀಲತೆ “ನಗಣ್ಯ” ಎನ್ನುವ ಪ್ರಮಾಣವನ್ನು ತಲುಪಬೇಕಾದರೆ ಕನಿಷ್ಠವೆಂದರೂ ಮೂರು ಲಕ್ಷ ವರ್ಷಗಳು ಬೇಕು. ಅದು ತನಕವೂ ಅದರಿಂದ ವಿಕಿರಣವು ಹೊಮ್ಮುತ್ತಲೇ ಇರುತ್ತದೆ. ಗುಜರಿಯಲ್ಲಿ ಸಿಕ್ಕ ಆ ಬಿಲ್ಲೆ ಮನೆ ಸೇರಿದರೆ ಮನೆ ಮಂದಿಗೆ ಮುಂದಿನ ತಲೆ ತಲೆಮಾರುಗಳ ತನಕ ವಿಕಿರಣ ಪ್ರಸಾದ ಸಿಗುತ್ತಿರುತ್ತದೆ. ಇದು ಉತ್ಪ್ರೇಕ್ಷಿತ ಊಹೆಯಲ್ಲ. ವರ್ಷದ ಹಿಂದೆ ಇಂಥದೊಂದು ಘಟನೆ ನಡೆದದ್ದು ನೆನಪಿಗೆ ಬಂತು. ಒಂದು ವೇಳೆ ಪರಮಾಣು ಸ್ಥಾವರದಲ್ಲಿ ವಿದಳನ ಕ್ರಿಯೆಯನ್ನು ಮತ್ತು ಶಾಖವನ್ನು ಹತೋಟಿಯಲ್ಲಿಡುವ ನಿಯಂತ್ರಕಗಳು ಸ್ಥಗಿತಗೊಂಡರೆ ಏನಾಗಬಹುದು? ಅದೊಂದು ಹರಾಕಿರಿ. ಸ್ಥಾವರದ ಕೇಂದ್ರದಲ್ಲಿ ಬೈಜಿಕ ಕ್ರಿಯೆ ಎಗ್ಗಿಲ್ಲದೇ ಸಾಗುತ್ತ ಇಡೀ ಸ್ಥಾವರ ಸ್ಫೋಟಗೊಂಡು ವಿಕಿರಣಶೀಲ ದ್ರವ್ಯ ಹೊರ ಚಿಮ್ಮುತ್ತದೆ. ಪರಮಾಣು ಸ್ಥಾವರಗಳ ಕಿರಿದಾದ ಇತಿಹಾಸದಲ್ಲಿ ಇಂಥ ಗಂಭೀರ ಅವಘಡಗಳು ಈಗಾಗಲೇ ಸಂಭವಿಸಿವೆ.
೧೯೭೯, ಎಪ್ರಿಲ್ ೧ರಂದು ಅಮೇರಿಕದ ಪೆನ್ಸಿಲ್ವೇನಿಯಾ ಪ್ರಾಂತ್ಯದ ತ್ರೀಮೈಲ್ ಐಲ್ಯಾಂಡ್ ಎಂಬಲ್ಲಿ ಪರಮಾಣು ಸ್ಥಾವರ ಅಪಘಾತ ಸಂಭವಿಸಿತು. ಇದಕ್ಕಿಂತ ಭೀಕರ ದುರ್ಘಟನೆ ನಡೆದದ್ದು ರಷ್ಯಾದ ಚೆರ್ನೋಬಿಲ್ ಎಂಬ ಪರಮಾಣು ಸ್ಥಾವರದಲ್ಲಿ. ೧೯೮೬, ಎಪ್ರಿಲ್೨೬ರಂದು ಸೊವಿಯತ್ ರಷ್ಯಾದ ಉಕ್ರೇನ್ ಪ್ರಾಂತ್ಯದ ಚೆರ್ನೋಬಿಲ್ ಪರಮಾಣು ಸ್ಥಾವರದಲ್ಲಿ ಕ್ರಿಯಾ ನಿಯಂತ್ರಕಗಳು ಸ್ಥಗಿತಗೊಂಡು ಇಡೀ ಸ್ಥಾವರ ಸ್ಫೋಟಗೊಂಡು ಅಗಾಧ ಪ್ರಮಾಣದಲ್ಲಿ ವಿಕಿರಣಪಟುತ್ವ ರಾಸಾಯನಿಕಗಳು ಪರಿಸರಕ್ಕೆ ಉತ್ಪಾಟನೆಗೊಂಡುವು.
ಇಂದಿನಂತೆ ಇಂಟರ್ನೆಟ್ ಯುಗವಲ್ಲದ ಅಂದಿನ ದಿನಗಳಲ್ಲಿ, ಇಂಥದೊಂದು ಅವಘಡ ಸಂಭವಿಸಲೇ ಇಲ್ಲ ಎಂದು ರಷ್ಯಾ ಹೇಳಿತಾದರೂ, ನೆರೆಯ ಪೊಲೆಂಡ್, ಹಂಗೆರಿ ಮೊದಲಾದ ರಾಷ್ಟ್ರಗಳಲ್ಲಿದ್ದ ವಿಕಿರಣ ಪತ್ತೆದರ್ಶಕಗಳು ಸುಳ್ಳು ಹೇಳಲಿಲ್ಲ. ಅವು ಸಾರತೊಡಗಿದುವು – ಸನಿಹದಲ್ಲೆಲ್ಲೋ ಗಂಭೀರ ಅಪಘಾತ ಸಂಭವಿಸಿದೆ ಎನ್ನುವುದನ್ನು. ಏಕೆಂದರೆ ವಿಕಿರಣಪಟುತ್ವ ರಾಸಾಯನಿಕಗಳು ವಾತಾವರಣ ಸೇರಿ ಸಾಗುತ್ತವೆ ದೇಶಗಳ ಎಲ್ಲೆ ಮೀರಿ ಪ್ರಪಂಚದ ಎಲ್ಲ ಕಡೆಗೆ – ದಿಗ್ದಿಗಂತಗಳನ್ನಳೆಯುವುದಕ್ಕೆ. ಚೆರ್ನೊಬಿಲ್ ರಿಯಾಕ್ಟರಿನ ಸುತ್ತ ವಾಸಿಸುತ್ತಿದ್ದ ಜನರನ್ನು ಬೇರೆ ಕಡೆ ಸ್ಥಾನಾಂತರಿಸುವುದರಿಂದ ತೊಡಗಿ ಸುತ್ತಲಿನ ಹಲವು ನೂರು ಕಿಮೀ ಪ್ರದೇಶದಲ್ಲಿದ್ದ ತೀವ್ರ ವಿಕಿರಣಶೀಲ ದ್ರವ್ಯವನ್ನು ಬಗೆದು ತೆಗೆದು ದೋಡ್ಡ ಪೀಪಾಯಿಗಳಲ್ಲೆಲ್ಲ ತುಂಬಿ ನೆಲದಾಳದಲ್ಲಿ ಹೂತು ಹಾಕುವ ತನಕ ನಡೆಸಿದ ಪ್ರಯತ್ನಗಳು ಹರಸಾಹಸ. ಇಂದು ಆ ಸ್ಥಾವರ ದೆವ್ವದ ಮನೆಯಂತೆ ಭೀಕರ ಘಟನೆಗೆ ಸಾಕ್ಷೀ ರೂಪದಲ್ಲಿದೆ; ಸನಿಹದ ಪಟ್ಟಣವೂ ಕೂಡ.
ಫುಕುಷಿಮಾದಲ್ಲಿ ರಿಕ್ಟರ್ ಮಾನಕದಲ್ಲಿ ೮.೨ ಅಂಕೆಯ ಭೂಕಂಪವನ್ನು ತಡೆದುಕೋಳ್ಳುವ ಸಾಮರ್ಥ್ಯವುಳ್ಳ ಪರಮಾಣು ಸ್ಥಾವರಗಳನ್ನು ಜಪಾನೀಯರು ನಿರ್ಮಿಸಿದ್ದರು. ಆದರೆ ಮೊನ್ನೆ ಮಾತ್ರ ಪೂರ್ವ ಸೂಚನೆ ಕೊಡದೇ ಹಟಾತ್ತನೆ ಎರಗಿದ ಭೂಕಂಪವು ೮.೯ ಅಂಕೆಯದು. ನೀವನ್ನಬಹುದು – ವ್ಯತ್ಯಾಸ ೦.೭ ರಿಕ್ಟರ್ ಅಂಕೆ ಮಾತ್ರ. ಆದರಲ್ಲೇನಿದೆ ವಿಶೇಷ. ವಿಶೇಷ ಇರುವುದೇ ಅಲ್ಲಿ. ರಿಕ್ಟರ್ ಅಂಕೆ ಲಗಾರಿಥಮಿಕ್ ಸ್ಕೇಲ್ – ಒಂದು ಅಂಕೆಯ ವ್ಯತ್ಯಾಸವೆಂದರೆ ಕಂಪನದ ತೀವ್ರತೆ ಹತ್ತು ಪಟ್ಟು ಅಧಿಕ ಮತ್ತು ಬಿಡುಗಡೆಯಾಗುವ ಶಕ್ತಿ ಮೂವತ್ತೆರಡು ಪಟ್ಟು ಹೆಚ್ಚುತ್ತದೆ. ಎಂಟು ರಿಕ್ಟರ್ ಅಂಕೆಯ ಭೂಕಂಪ ಆರು ಅಂಕೆಯದ್ದಕ್ಕಿಂತ ಸಾವಿರಪಟ್ಟು ಶಕ್ತಿ ಬಿಡುಗಡೆ ಮಾಡುತ್ತದೆ. ಅಂದರೆ ಪುಕುಶಿಮಾದ ಸ್ಥಾವರಗಳು ತುತ್ತಾದ ಭೂಕಂಪ ಸುಮಾರು ಹನ್ನೊಂದು ಪಟ್ಟು ಅಧಿಕ ಶಕ್ತಿಯದ್ದಾಗಿತ್ತು.
ಹಾಗಿದ್ದರೂ ಆ ಸ್ಥಾವರಗಳು ಭೂಕಂಪಕ್ಕೆ ಬಿರುಕುಗೊಳ್ಳಲಿಲ್ಲ. ಕುಸಿಯಲಿಲ್ಲ. ಅದು ಸುಭಧ್ರವಾಗಿಯೇ ಉಳಿಯಿತು. ಇಂಥ ವಿಷಮ ಸ್ಥಿತಿಯಲ್ಲಿಯೂ ನಿಯಂತ್ರಕ ವ್ಯವಸ್ಥೆ ಪರಿಪೂರ್ಣವಾಗಿ ಕಾರ್ಯ ನಿರ್ವಹಿಸಿದುವು ಅನ್ನುವುದು ಹೆಚ್ಚುಗಾರಿಕೆ. ಪರಮಾಣು ಸ್ಥಾವರಗಳು ಕೂಡಲೇ ಸ್ಥಗಿತಗೊಂಡುವು. ಹಾಗಿದ್ದರೂ ಸ್ಥಾವರದೊಳಗಡೆ ವಿಕಿರಣ ಪದಾರ್ಥಗಳಿಂದ ಸುಮಾರು ಶೇಕಡಾ ಮೂರರಷ್ಟು ಉಳಿದುಕೊಂಡ ಉಳಿಕೆ ಉಷ್ಣವಿದೆಯಲ್ಲ ಅದನ್ನು ತೆಗೆದುಬಿಟ್ಟಿದ್ದರೆ ಎಲ್ಲ ಸುಸೂತ್ರವಾಗುತ್ತಿತ್ತು. ಆದರೆ ಇಲ್ಲೇ ಎಡವಟ್ಟಾಯಿತು. ಸ್ಥಾವರಕ್ಕೆ ತಂಪು ನೀರನ್ನು ಊಡುವ ಯಂತ್ರಗಳು ಸುನಾಮಿಯ ಹುಚ್ಚು ಹೊಡೆತಕ್ಕೆ ಕೊಚ್ಚಿಕೊಂಡು ಹೋಗಿಬಿಟ್ಟಿವು. ವಿದ್ಯುತ್ ಕೈಕೊಟ್ಟಿತು. ಡಿಸೆಲ್ ಜನರೇಟರುಗಳು ಮುರಿದು ಬಿದ್ದಿದ್ದುವು. ಎಲ್ಲಿಂದಲೋ ಜನೇರಟರುಗಳು ಬಂದುವು. ಅವುಗಳನ್ನು ಜೋಡಿಸುವ ಪ್ರಯತ್ನಗಳು ನಡೆದರೂ ಎದುರಾದ ತೊಂದರೆಗಳು ನೂರಾರು.. ಸ್ಥಾವರದ ಹೊಣೆ ಹೊತ್ತ ಮಂದಿ ಕಾಲದೊಂದಿಗೆ, ಏರುತ್ತಿರುವ ಉಷ್ಣತೆಯ ನಡುವೆ, ಜೀವದ ಹಂಗು ತೊರೆದು ಹೆಣಗಾಡತೊಡಗಿದರು. ಈ ಹೋರಾಟದಲ್ಲಿ ಒಂದಿಬ್ಬರು ಸತ್ತರೆ ಇನ್ನು ಕೆಲವರು ತೀವ್ರವಾಗಿ ಘಾಸಿಗೊಳಗಾದರು. ಸ್ಥಾವರದ ಉಷ್ಣತೆ ಹೆಚ್ಚತೊಡಗಿತು. ಒಳಗಿನ ಒತ್ತಡವನ್ನು ಕಡಿಮೆ ಮಾಡಲು ಸಂಗ್ರಹವಾದ ಉಗಿಯನ್ನು ನಿಯಂತ್ರಕಗಳಿಂದ ಹೊರ ಬಿಟ್ಟರು – ಅದು ಹಬ್ಬಿತು ಬೆಳ್ಳಗಿನ ಧೂಮವಾಗಿ – ಸ್ಥಾವರವೇ ಹೊತ್ತಿ ಉರಿದಂತೆ. ನಡು ನಡುವೆ ಸ್ಥಾವರದ ಹೊರ ಒಂದಷ್ಟು ಸ್ಫೋಟಗಳು ಸಂಭವಿಸಿದುವು. ಇದೀಗ ಹೊರಗಿನಿಂದ ದೊಡ್ಡ ದೊಡ್ದ ಕೊಳವೆಗಳಲ್ಲಿ ಸ್ಥಾವರದ ಮೇಲೆ ನೀರು ಹರಿಯಿಸಲಾಗುತ್ತದೆ – ಹೇಗಾದರೂ ತಂಪುಗೊಳಿಸುವುದಕ್ಕಾಗಿ. ಫುಕುಶಿಮಾ ಪರಮಾಣು ಸ್ಥಾವರಗಳು ವಿಕಿರಣವನ್ನು ಸೂಸುತ್ತಿವೆ.
ವಿಕಿರಣದ ಪ್ರಮಾಣವನ್ನು ಅಳೆಯಲು ಬಳಸುವ ಮಾನಕವೇ ಸೀವರ್ಟ್. ಸೀವರ್ಟ್ ಅನ್ನುವುದು ದೊಡ್ದದಾದ ಮಾನಕ. ಹಾಗಾಗಿ ಮಿಲಿಸೀವರ್ಟ್ ಬಳಸುತ್ತಾರೆ. ಯಾವುದೋ ಕಾರಣಕ್ಕೆ ವೈದ್ಯರು ನಿಮ್ಮ ಕಂಕಾಲದ ಎಕ್ಸ್ ರೇ ಚಿತ್ರ ತೆಗೆದರೆ, ನೀವು ತುತ್ತಾದ ವಿಕಿರಣದ ಪ್ರಮಾಣ ಸುಮಾರು ೦.೨ ಮಿಲಿಸೀವರ್ಟ್. ಪ್ರಕೃತಿಯಲ್ಲಿ ಬಗೆ ಬಗೆ ಬಗೆಯ ವಿಕಿರಣ ಆಕರಗಳಿವೆ. ಭೂಮಿಯ ಮೇಲೆ ಸುರಿವ ವಿಶ್ವಕಿರಣಗಳು, ಭೂಮಿಯಲ್ಲಿರುವ ಯುರೇನಿಯಮ್, ಥೋರಿಯಮ್ ಮೊದಲಾದ ವಿಕಿರ ಪಟು ಧಾತುಗಳು ಮತ್ತು ಐಸೊಟೋಪುಗಳು.. ಹಾಗಾಗಿ ವಿಕಿರಣದಿಂದ ಅತೀತನಾಗಿ ಇರುವುದಕ್ಕೆ ಸಾಧ್ಯವಾಗದು – ಸಂತೆಯಲ್ಲಿದ್ದವ ಶಬ್ದಕ್ಕಂಜಿದಡೆಂತಯ್ಯ! ಹಾಗೆ ನೋಡಿದರೆ ದೇಹವೇ ಒಂದು ವಿಕಿರಣದ ಆಕರ! ದೇಹದಲ್ಲಿರುವ ಪೊಟ್ಯಾಸಿಯಮ್ – ೪೦ ವಿಕಿರಣವನ್ನು ಸೂಸುತ್ತದೆ – ಎಂದೇ ವಿಕಿರಣ ದರ್ಶಕವನ್ನು ನಮ್ಮ ಬಳಿ ತೆಗೆದುಕೊಂದು ಬಂದರೆ, ಪಾಪ ಅದು ಬೊಬ್ಬೆ ಹೊಡೆಯುತ್ತೆ. ಎಲ್ಲ ನೈಸರ್ಗಿಕ ವಿಕಿರಣಗಳ ಒಟ್ಟು ಪ್ರಮಾಣ ವರ್ಷಕ್ಕೆ ಒಂದು ಮಿಲಿಸೀವರ್ಟ್ ಒಳಗೆ ಇರಬೇಕೆಂದು ವಿಕಿರಣ ತಜ್ಞರು ವಿಧಿಸಿದ್ದಾರೆ. ಅದನ್ನು ಮೀರಿ ವಿಕಿರಣಕ್ಕೆ ತುತ್ತಾಗುವುದು ಒಳ್ಳೆಯದಲ್ಲ.
ಫುಕುಶಿಮಾ ಪರಮಾಣು ಸ್ಥಾವರದ ಸುತ್ತ ಸಾಮಾನ್ಯವಾಗಿ ಇರುವ ವಿಕಿರಣಕ್ಕಿಂತ ಸಾವಿರಪಟ್ಟು ವಿಕಿರಣ ಪ್ರಮಾಣ ಕಂಡು ಬಂದಿತ್ತು. ಆದರೆ ಇತ್ತೀಚೆಗಿನ ವರದಿಗಳು ಹೇಳುವಂತೆ ಸ್ಥಾವರಗಳು ತಣಿಯುತ್ತಿವೆ. ವಿಕಿರಣದ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಸಮಾಧಾನದ ವಿಷಯ. ಆದರೆ ಜಪಾನ್ ಸರಕಾರ ಈಗಾಗಲೇ ಪರಮಾಣು ಸ್ಥಾವರದ ಸುತ್ತುಮುತ್ತಲಿನ ಜನರನ್ನು ಸ್ಥಳಾಂತರಿಸಿದೆ. ಹೀಗೆ ಸ್ಥಳಾಂತರಿಸಲ್ಪಟ್ಟ ಜನರ ಸಂಖ್ಯೆಯೇ ಒಂದೂವರೆ ಲಕ್ಷವಂತೆ. ಇದುವೇ ಸಾಕು ಪರಿಸ್ಥಿತಿ ಎಷ್ಟೊಂದು ಗಂಭೀರವೆಂದು ಹೇಳುವುದಕ್ಕೆ. ಜಪಾನ್ ಮತ್ತಿತರ ದೇಶಗಳಿಗೆ ಪರಮಾಣು ಸ್ಥಾವರಗಳಿಗಾದ ಗಂಭೀರ ಹಾನಿ ಇಂದು ಭೂಕಂಪ ಅಥವಾ ಸುನಾಮೀಯ ವಿನಾಶಕ್ಕಿಂತ ಅಧಿಕ ಚಿಂತೆಯನ್ನು ತಂದಿದೆ.
ಇಂದು ಪ್ರಪಂಚದಾದ್ಯಂತ ಭಾರತ ಮತ್ತು ಪಾಕಿಸ್ಥಾನವೂ ಸೇರಿದಂತೆ ಮೂವತ್ತು ದೇಶಗಳಲ್ಲಿ ಒಟ್ಟು ೪೪೦ ಪರಮಾಣು ಸ್ಥಾವರಗಳಿವೆ. ಒಟ್ಟು ವಿದ್ಯುತ್ತಿನ ಶೇಕಡಾ ಹದಿನೈದರಷ್ಟನ್ನು ಈ ಸ್ಥಾವರಗಳ ಕೊಡುಗೆ. ಫ್ರಾನ್ಸಿನಲ್ಲಿ ಬೃಹತ್ ಸಾಮರ್ಥ್ಯದ ೫೯ ರಿಯಾಕ್ಟರುಗಳಿಂದ ಶೇಕಡಾ ೭೮ರಷ್ಟು (೬೫,೦೦೦ ಮೆಗಾವಾಟ್) ವಿದ್ಯುತ್ ಬರುತ್ತಿದ್ದು ಪರಮಾಣು ಶಕ್ತಿಯಿಂದ ವಿದ್ಯುದುತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅಮೇರಿಕಾ, ರಷ್ಯಾ, ಇಂಗ್ಲೆಂಡಿನಲ್ಲಿ ಇದರ ಪ್ರಮಾಣ ಶೇಕಡಾ ೨೦. ಇವುಗಳಿಗೆ ಹೋಲಿಸಿದರೆ ಭಾರತದ ಓಟ ನಿಧಾನಗತಿಯದು. ಇಲ್ಲಿ ೨೧ ಪರಮಾಣು ಸ್ಥಾವರಗಳಿಂದ ಸುಮಾರು ೬೫೦೦ಮೆಗಾವಾಟ್ ವಿದ್ಯುತ್ತು ಉತ್ಪಾದನೆಯಾಗುತ್ತಿದೆ – ಶೇಕಡಾ ಮೂರರಷ್ಟು. ಇವುಗಲಲ್ಲಿ ಅತ್ಯಂತ ಹಳೆಯದು – ಮಹರಾಷ್ಟ್ರದ ತಾರಾಪುರದಲ್ಲಿದ್ದರೆ (೧೯೬೯, ಅಕ್ಟೋಬರ್) ಇತ್ತೇಚೆಗಿನದು ಕೈಗಾದಲ್ಲಿದೆ (೨೦೦೭, ಮೇ). ತಮಿಳುನಾಡಿನ ತಿರುನ್ವೇಲಿಯ ಕುಡಂಕುಲಮ್ಮಿನಲ್ಲಿ ಪ್ರಸ್ತುತ ಭಾರತದಲ್ಲಿರುವ ಇನ್ನೂರೈವತ್ತು ಮೆಗಾವಾಟ್ ಸಾಮರ್ಥ್ಯದ ರಿಯಾಕ್ಟರುಗಳನ್ನೆಲ್ಲ ಮೀರಿಸಿ ಸಾವಿರ ಮೆಗಾವಾಟ್ ಸಾಮರ್ಥ್ಯದ ಬೃಹದ್ ರಿಯಾಕ್ಟರುಗಳು ವರ್ಷದೊಳಗೆ ಕಾರ್ಯಾಚರಣೆಗೆ ಸಿದ್ಧವಾಗುತ್ತಿವೆ. ಮುಂದಿನೆರಡು ದಶಕದೊಳಗೆ ಸುಮಾರು ಮೂವತ್ತು ರಿಯಾಕ್ಟರುಗಳ ಸ್ಥಾಪನೆಯ ಕನಸಿನ ಯೋಜನೆ ನ್ಯೂಕ್ಲಿಯರ್ ಪವರ್ ಕಾರ್ಪರೇಶನ್ ಲಿಮಿಟೆಡ್ ಮುಂದಿದೆ.
ಆಂಧ್ರಪ್ರದೇಶದ ಕೋವಡಾ, ಮಹಾರಾಷ್ಟ್ರದ ಜೈತಾಪುರ, ಹರ್ಯಾನದ ಗೋರಗ್‌ಪುರ, ಒರಿಸ್ಸಾದ ಸೋನಾಮರ್ ಹೀಗೆ ಹಲವೆಡೆ ತಲೆ ಎತ್ತಲಿರುವ ಈ ಸ್ಥಾವರಗಳ ವಿರುದ್ಧ ಸ್ಥಳೀಯ ಮಂದಿ ಹೋರಾಟದ ಹಾದಿ ಹಿಡಿದಿದ್ದಾರೆ. ಜಪಾನ್ ಘಟನೆಯ ಪರಿಣಾಮ ಆ ಕೂಗಿಗೆ ಇನ್ನಷ್ಟು ಬಲ ಕೊಡಬಹುದು. ಒಂದು ನೆಮ್ಮದಿಯೆಂದರೆ ಇದು ತನಕ ಅಭಿವೃದ್ಧಿಶೀಲ ಭಾರತದಲ್ಲಿ ಗಂಭೀರ ಪರಮಾಣು ಸ್ಥಾವರ ದುರಂತಗಳು ಸಂಭವಿಸಿಲ್ಲ. ಎಲ್ಲ ದುರಂತಗಳು ಆಗಿರುವುದು ಅಭಿವೃದ್ಧಿ ಹೊಂದಿರುವ ಅಮೇರಿಕ, ಇಂಗ್ಲೆಂಡ್, ಜಪಾನ್, ಫ್ರಾನ್ಸ್ ಮೊದಲಾದೆಡೆ!. ಸ್ಥಾವರಗಳು ಅತ್ಯಧಿಕ ಸಂಖ್ಯೆಯಲ್ಲಿರುವುದು ಮತ್ತು ಸಂತತವಾಗಿ ಅವು ಕಾರ್ಯಾಚರಿಸುತ್ತಿರುವುದು ಇದಕ್ಕೆ ಕಾರಣವಿರಲೂಬಹುದು.
ನಾವು ಯಾವ ಕಾರಣಕ್ಕೂ ನಿರ್ಲಕ್ಷ್ಯ ತಾಳುವಂತಿಲ್ಲ. ಒಂದು ಭೋಪಾಲ್ ದುರಂತವೇ ನಮಗೆ ಪಾಠ ಕಲಿಸಿದೆ. ಆದರೆ ರಿಯಾಕ್ಟರ್ ದುರಂತ ಹಾಗಲ್ಲ. ಇದರ ಅಪಾಯಗಳು ದೀರ್ಘಕಾಲದ್ದು ಮತ್ತು ತಲೆ ತಲಾಂತರಕ್ಕೆ ಸಂದು ಹೋಗುವದ್ದು. ಈ ದೈತ್ಯ ಶಕ್ತಿಯನ್ನು ನಿರ್ವಹಿಸುವಲ್ಲಿ ಕೊಂಚ ತಪ್ಪಿದರೂ ಸಾಕು -ಅದು ಅಸಹನೀಯವೆನ್ನುವುದನ್ನು ಇತಿಹಾಸದ ದುರಂತಗಳು ಮತ್ತು ಜಪಾನಿನ ವರ್ತಮಾನದ ದುರಂತ ಹೇಳುತ್ತಿವೆ. ಭವಿಷ್ಯದಲ್ಲಿ ಹಲವು ಪರಮಾಣು ಸ್ಥಾವರಗಳನ್ನು ಸ್ಥಾಪಿಸುವಾಗ ನಿಭಾಯಿಸಬೇಕಾದ ಹೊಣೆಗಳು ಯೋಜಕರ ವಿಶ್ವಾಸಾರ್ಹ ಬದ್ಧತೆ ಮೇಲಿದೆ.
ಒಂದೊಮ್ಮೆ ಭೂಕಂಪನದಂಥ ನೈಸರ್ಗಿಕ ಕಾರಣಕ್ಕೆ ಅಥವಾ ಮನುಷ್ಯ ದೌರ್ಬಲ್ಯದ ಕಾರಣಕ್ಕೆ ಪರಮಾಣು ಸ್ಥಾವರದಲ್ಲಿ ದುರ್ಘಟನೆ ಸಂಭವಿಸಿದರೆ ವಿಕಿರಣ ಆಪತ್ತನ್ನು ಎದುರಿಸುವ ಬಗೆ ಹೇಗೆ? ನಾವು ಆ ಮಹಾ ಪ್ರಮಾಣದ ವಿಪತ್ತನ್ನು ಎದುರಿಸಲು ಸಜ್ಜಾಗಿರುತ್ತೇವೆಯೇ? ಜನರು ತುಂಬಿ ತುಳುಕಿ ಉಕ್ಕೇರಿ ಹರಿವ ದೇಶದಲ್ಲಿ ಆ ದುರ್ಘಟನೆಗಳು ಉಂಟುಮಾಡುವ ಪರಿಣಾಮಗಳು, ಸಾಮಾಜಿಕ ಆಯಾಮಗಳ ಬಗ್ಗೆ ಕೂಡ ಚಿಂತನೆ ಬೇಕಾಗುತ್ತದೆ. ಜಪಾನ್ ದುರಂತದ ಹಿನ್ನೆಲೆಯಲ್ಲಿ “ಭಾರತದ ೨೧ ಪರಮಾಣು ಸ್ಥಾವರಗಳು ಭೂಕಂಪ ವಲಯದಲ್ಲಿಲ್ಲ. ಆದರೂ ಭೂಕಂಪವಾದಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಂಪೂರ್ಣ ಸನ್ನದ್ಧರಾಗಿದ್ದೇವೆ” ಎಂಬ ಅಭಯವನ್ನು ನ್ಯೂಕ್ಲಿಯರ್ ಪವರ್ ಕಾರ್ಪರೇಶನ್ ಲಿಮಿಟೆಡ್ ನೀಡಿದೆ.
ಇಲ್ಲಿ ನಾವು ಗಮನಿಸಬೇಕು – ಹಲವು ವರ್ಷಗಳ ಅಧ್ಯಯನದಿಂದ ನಮ್ಮ ದೇಶವನ್ನು ಭೂಕಂಪಕ್ಕೆ ಸಂಬಂಧಿಸಿದ ಹಾಗೆ ಐದು ವಲಯಗಳಾಗಿ ವಿಂಗಡಿಸಲಾಗಿದೆ. ಒಂದನೇಯ ವಲಯದಲ್ಲಿ ಭೂಕಂಪದ ಸಾಧ್ಯತೆ ತೀರ ಕನಿಷ್ಠವಾದರೆ, ಐದನೇ ವಲಯದಲ್ಲಿ ಅತ್ಯಂತ ಗರಿಷ್ಠ. ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳು ಮೊದಲ ವಲಯದಲ್ಲಿ ಬರುವ ಕಾರಣದಿಂದಲೇ ಇರಬೇಕು – ಹಲವು ಯೋಜಿತ ಪರಮಾಣು ಸ್ಥಾವರಗಳು ಈ ರಾಜ್ಯಗಳಲ್ಲಿ ಬರಲಿವೆ. ಕೈಗಾ ಸ್ಥಾವರಗಳು ವಲಯ ಮೂರರಲ್ಲಿವೆ. ಈಗಾಗಲೇಸ್ಥಾಪಿತವಾಗಿರುವ ನರೋರಾ ಪರಮಾಣು ಸ್ಥಾವರಗಳು ಮಾತ್ರ ನಾಲ್ಕನೇಯ ವಲಯದಲ್ಲಿದೆ – ಇದು ಚಿಂತನೆಗೆ ಮತ್ತು ಚಿಂತೆಗೆ ಸಕಾಲ. ಜಪಾನಿನಲ್ಲಿ ಪರಮಾಣು ಸ್ಥಾವರಗಳ ಪರಿಸ್ಥಿತಿ ತೀವ್ರ ದುರ್ಭರವೆಂದು ಜಪಾನಿನ ಸರಕಾರ ಪ್ರಾಂಜಲವಾಗಿ ಒಪ್ಪಿಕೊಂಡಿದೆ. ದೇಶವನ್ನು ಉದ್ಧೇಶಿಸುತ್ತ ಮಾಡಿದ ಭಾಷಣದಲ್ಲಿ ಪ್ರಧಾನ ಮಂತ್ರಿ ನಓಟೋಕಾನ್ ಹೇಳಿದ್ದಾರೆ “ಜಪಾನ್ ದ್ವಿತೀಯ ಮಹಾಯುದ್ಧದ ನಂತರ ಅತ್ಯಂತ ಭೀಕರ ಸಮಸ್ಯೆಯೊಂದನ್ನು ಎದುರಿಸುತ್ತಿದೆ. ಆದರೆ ಒಂದು ದೇಶವಾಗಿ ನಾವೆಲ್ಲ ಒಟ್ಟಾಗಿ ಈ ಸಮಸ್ಯೆಯಿಂದ ಹೊರ ಬರುತ್ತೇವೆನ್ನುವ ಬಗ್ಗೆ ನನಗೆ ಭರವಸೆ ಇದೆ ” ಆ ಭರವಸೆಯ ಬೆಳಕು ಬಹು ಬೇಗೆ ಬರಲಿ.
This article is worth publishing in newspapers.
ithink ired this article in Udyavani… very good detailed picture…
thanking you,
your`s
navada
http://beta.prajavani.net/web/include/story.php?news=1249§ion=54&menuid=13
Very informative and nicely written article. Everybody should read this.
ಎಂದಿನ ಖಾಚಿತ್ಯ, ಮಾಹಿತಿಯ ವೈಪುಲ್ಯಕ್ಕೆ ಕೃತಜ್ಞತೆಗಳು.
ಕಲ್ಕುಳಿ ವಿಠಲ ಹೆಗ್ಡೆ ಕೇವಲ ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ಸ್ವಾರ್ಥಮೂಲಕ್ಕಾಗಿ ವಿರೋಧಿಸಿದವ. ಕೈಗಾ ವಿರೋಧಿ ಆಂದೋಳನದಲ್ಲಿ ಗಂಭೀರವಾಗಿ ತೊಡಗಿಕೊಂಡವರ ಪಟ್ಟಿಯಲ್ಲಿ ಅವನಿಗೆ ಸ್ಥಾನ ಇಲ್ಲ.
ಮನುಷ್ಯನ ಮೇಲಿನ ವಿಕಿರಣದ ದುಷ್ಪರಿಣಾಮಗಳ ಪ್ರಾಥಮಿಕ ವಿವರಗಳು ಇನ್ನಷ್ಟು ಬೇಕು. ‘ಕೂದಲು ಉದುರಿ, ನಿಶ್ಯಕ್ತಿ ಅಡರಿ, ತಲೆ ಸುತ್ತು ಬರತೊಡಗಿದಾಗಲಷ್ಟೇ…’ ಸಾಲದು.
ಅಶೋಕ ವರ್ಧನ
ಭಾವ,
ನಿನ್ನ ವೈಜ್ನಾನಿಕ ವೈಚಾರಿಕ ಲೇಖನ ಅದ್ಭತವಾಗಿತ್ತು, ಎನಗೆ ಜಾಸ್ತಿ ಆರ್ಥವೂ ಅಯಿದಿಲ್ಲೆ. ಆದರೆ ಆ ದುರ೦ತದ ಮಾನವೀಯತೆ ಮುಖದ ಬಗ್ಗೆ ಒ೦ದು ನನ್ನ ಸಣ್ಣ ಟಿಪ್ಪಣಿ ಆಡಕ. ನಿನ್ನ ಮತ್ತು ನಮ್ಮ ಭಾರತದ ಓದುಗರಲ್ಲಿ ನನ್ನ ಒ೦ದು ಅನಿಸಿಕೆ ಹ೦ಚಿಕೊ೦ಡಿದ್ದೇನೆ ಇಲ್ಲಿ, ಓದುವವ೦ತರಾಗಿ(ಪುರುಸೋತು ಇದ್ದರೆ)
ಈ ಕೆಳಗಿನ ೧೦ ವಿಚಾರ ನಮ್ಮ ವರ್ತಮಾನ ಪತ್ರಿಕೆಯಲ್ಲಿ ಬ೦ದಿತ್ತು ನ೦ತರ ಅ೦ತರಜಾಲದಲ್ಲೂ ನೀವು ನೋಡಿರಬಹುದು. ನನಗಿಲ್ಲಿ ಹಲವಾರು ಜಪಾನಿ ಮಿತ್ರರೂ ಇದ್ದಾರೆ, ಅವರೋಡನೆ ಈ ೧೦ ವಿ ಚಾರದ ಬಗ್ಗೆ ಸಹ ಮಾತಾಡಿದ್ದೇನೆ. ನಾನು ಅವರಿಗೆ ಕೇಳಿದ ಪ್ರಶ್ನೆ, ಇ೦ಥ ಒ೦ದು ಸ೦ಸ್ಕೄತಿ ನಿಮಗೆ ಹೇಗೆ ಬ೦ತು? ಅವರ್ ಉತ್ತರ: ಜಪಾನಿಗಳು ಶೇಖಡ ೯೦ ಬೌಧಿಗಳು ಆದರೆ ಮತಾ೦ದರಲ್ಲ ಅಲ್ಲಿ ಮತದ ಹೆಸರಿನಲ್ಲಿ ಯಾವತ್ತೂ ಗಲಾಟೇ ಆದದ್ದೂ ಎ೦ದು ಇಲ್ಲ, ಮತದ ಹೆಸರಿನಲ್ಲಿ ಯಾರೂ ಯಾವುದೇ ದುಶ್ಕರ್ಮ ಮಾಡಿದಿಲ್ಲ, ಆಶ್ಚರ್ಯ ಎ೦ದರೆ ಅವರ ಮದುವೆ ಮು೦ತಾದ ಕಾರ್ಯಕ್ರಮಗಳು ಸಾ೦ಸ್ಕೃತಿಕವಾಗಿ ಆಗುತ್ತದೆ ಹೊರತು ದೈ ವಿಕವಾಗಿ ಅಲ್ಲ. ನಿತ್ಯ ಜೀವನದಲ್ಲಿ ದೇವರಿಗೆ ಅವಕಾಶವಿಲ್ಲ. ಕಾಯಕವೇ ಕೈಲಾಸ ಎ೦ದು ನಾವು ಹೋಡೆದುಕೊ೦ಡರೆ ಅವರು ಅದನ್ನು ಅನುಷ್ಟಾನಕ್ಕೆ ತ೦ದಿದ್ದಾರೆ. ನನ್ನ ಸ್ನೇಹಿತರು ಇಲ್ಲಿ ಇರುವವರು ಅ೦ತ ಸರಳರು. ಯಾವುದೇ ತರಹದ ಜಾತಿ, ಮತ, ದೇವರು, ಸ೦ಸ್ಕೃತಿ , ಬದನೇಕಾಯಿ ಎ೦ಬುದರ ಅನಾವಷ್ಯಕ ಬಾರವಿಲ್ಲದೆ ನಿಷ್ಟೆಯಿ೦ದ ಕ್ಲಲಸ ಮಾಡುತ್ತ ಪ್ರಾಮಾಣಿಕ ಜೀವನ ನಡೆಸುತ್ತಾರೆ.
ಭಾವ ವಿಕ್ರ್ಮಮಾದಿತ್ಯ ರಾಜನ೦ತೆ ಸಕಲ ಬಲ್ಲವನಾದ ನೀನು ಹೇಳು: ಈ ಬೌದ ಸ೦ಸ್ಕೄತಿಗೆ ಬುನಾದಿಯಾದ ಹಿ೦ದು ಸ೦ಸ್ಕೃತಿಯನ್ನು ಪಾಲಿಸುವ ನಾವು ಯಾಕೆ ಅಷ್ಟು ಹೀನ ಪ್ರವೃತ್ತಿಯವರು? ಉತ್ತರ ಗೊ೦ತಿದ್ದೂ ಹೇಳದಿದ್ದರೆ ನಿನ್ನ ತಲೆ ಸಾವಿರ ಹೋಳಾಗಿ ಹೋಗಲಿ!!
ಅ೦ಬಗ ಕಾ೦ಬ
ಆನ೦ದ ಭಾವ
1. THE CALM
Not a single visual of chest-beating or wild grief. Sorrow itself has been elevated.
2.THE DIGNITY Disciplined queues for water and groceries. Not a rough word or a crude gesture.
3. THE ABILITY
The incredible architects, for instance. Buildings swayed but didn’t fall.
4. THE GRACE
People bought only what they needed for the present, so everybody could get something.
5. THE ORDER
No looting in shops. No honking and no overtaking on the roads. Just understanding.
6. THE SACRIFICE
Fifty workers stayed back to pump sea water in the N-reactors. How will they ever be repaid?
7. THE TENDERNESS
Restaurants cut prices. An unguarded ATM is left alone. The strong cared for the weak.
8. THE TRAINING
The old and the children, everyone knew exactly what to do. And they did just that.
9. THE MEDIA
They showed magnificent restraint in the bulletins. No silly reporters. Only calm reportage.
10.THE CONSCIENCE
When the power went off in a store, people put things back on the shelves and left quietly.
ಬಾವಯ್ಯ,
ನಿನಗೆ ನನ್ನ ಲೇಖನ ಅರ್ಥ ಆವುತ್ತಿಲ್ಲೆ ಅನ್ನುವುದು “ಬರೇ ತಮಾಷೆ” ಅನ್ನುವುದು ಸಕಲ ಬಲ್ಲ ನಿನ್ನ ಈ ವಿಕ್ರಮಾದಿತ್ಯನ ಅಪರಾವತಾರಿಗೆ ಗೊತ್ತು.
ಬಾಲ್ಯದಿಂದಲೂ ನೀನು ಏರಿದ ಎತ್ತರವನ್ನು ಬೆರಗು ಗಣ್ಣಿನಿಂದ ನೋಡಿದವರು ನಾವು ತಾನೇ.
ಇರಲಿ, ಖುಷಿಯಾಯಿತು ಪುರುಸೊತ್ತಿಲ್ಲ – ಅಂಬಗ ಕಾಂಬ – ಅಂತ ಓಡುತ್ತಿದ್ದ ನೀನೂ ಈ ಬಾರಿ ತುಸು ಉದ್ದದ ಟಿಪ್ಪಣಿ ಬರೆದದ್ದಕ್ಕೆ.
ನಿಜ, ಜಪಾನೀಯರು ಎದೆ ಬಡಿದು ಗೋಳಾಡುವ ದೃಶ್ಯ ಕಾಣಲಿಲ್ಲ. ಅವರು ಹೆಣಗಳ ಚಿತ್ರವನ್ನು ತೋರಿಸಲೇ ಇಲ್ಲ. ಎಲ್ಲ ಸರಿಯಾಗಿದೆ ಅಂತ ತೋರಿಸಿದ್ದಾರೆ. ಅದೂ ಒಂದು ತಾಕತ್ತೇ. ದುರ್ಭರ ಕ್ಷಣದಲ್ಲೂ ಸಂಯಮದ ಅವರ ವರ್ತನೆ ಅನುಕರಣೀಯ. ಆದರೆ ಬೌದ್ಧ ಧರ್ಮ ಇದಕ್ಕೆ ಕಾರಣ ಅಂತ ಹೇಳುವುದು ಸರಳೀಕರಣವಾದೀತು. ದ್ವಿತೀಯ ಮಹಾಯುದ್ಧಕಾಲದಲ್ಲಿ ಜಪಾನೀ ಸೇನೆ ತುಂಬ ಕ್ರೂರವಾಗಿ ಬರ್ಮೀಯರನ್ನು, ಯುದ್ಧದಲ್ಲಿ ಸೆರೆ ಸಿಕ್ಕವರನ್ನು ನಡೆಸಿಕೊಂಡದ್ದನ್ನು ಇತಿಹಾಸ ಹೇಳುತ್ತದೆ. ಬೌದ್ಧ ಧರ್ಮವನ್ನು ಪರಿಪಾಲಿಸುವ ಚಿನಾ, ಕೊರಿಯಾಗಳಲ್ಲಿ ಹಿಂಸೆಗಿಳಿದರೆ ಅವರಿಗೆ ಸರಿ ಸಾಟಿ ಬೇರೆ ಇಲ್ಲದಂತೆ ವರ್ತಿಸುತ್ತಾರೆ. ಅಂದರೆ ಹಿಂಸೆಯಲ್ಲೂ – ಶಾಂತಿಯಲ್ಲೂ ಇವರದ್ದೆಲ್ಲ ಪರಿಪೂರ್ಣತೆ. ಹಿಡಿದ ಕೆಲಸದಲ್ಲಿ ತಾದಾತ್ಮ್ಯತೆ. ನಮ್ಮಂತೆ ಎಡೆಬಿಡಂಗಿಗಳಲ್ಲ.
ಜಪಾನೀಯರು ಉಳಿದವರಿಗಿಂತೆಲ್ಲ ಶಾಂತಿ ಪ್ರಿಯರು, ಪ್ರಾಮಾಣಿಕರೆಂದೆಲ್ಲ ಕೇಳಿ ಬಲ್ಲೆ. ಯಾವುದೋ ಬ್ಲಾಗಿನಲ್ಲಿ ಓದಿದ ನೆನಪು. ಅಮೇರಿಕದ ಪ್ರೊಫೆಸರ್, ಜಪಾನಿನಲ್ಲಿ ಹಿರೋಶಿಮಾ ವಿಳಾಸ ಕೇಳಿದಾಗ ಅಮೇರಿಕದವನೆಂದು ತಿಳಿದರೂ ಅವನನ್ನು ಸರಿ ದಾರಿ ತೋರಿಸಿ ಹಿರೊಶಿಮಾ ಬಾಂಬಿನ ಜಾಗಕ್ಕೆ ಬಿಟ್ಟನಂತೆ ಅನಾಮಿಕ ಜಪಾನೀಯ.
ನಾವು ಯಾಕೆ ಹೀಗೆ? ಉತ್ತರ ಕೊಡುವುದು ನನ್ನ ಅಳವಿಗೆ ನಿಲುಕದ್ದು. ಆದರೂ ನಮ್ಮ ಸಂಸ್ಕೃತಿಯ ಅಗಾಧ ಸಂಕೀರ್ಣತೆ, ಊಹಿಸಲಾಗದ ವೈವಿಧ್ಯತೆ ಎಲ್ಲವೂ ನಮ್ಮ ಚಿತ್ರ ವಿಚಿತ್ರ ವರ್ತನೆಗೆ ಕಾರಣವಾಗಿರಬಹುದು. ಉದಾಹರಣೆಗೆ ಅತೀವವಾಗಿ ಮನೆಯನ್ನು, ಮನೆ ಮಂದಿಯನ್ನು ಹಚ್ಚಿಕೊಳ್ಳುವುದು ಕೂಡ ದು:ಖಾತಿರೇಕಕ್ಕೆ ಕಾರಣವಾಗದೇ?
ತುಂಬಿ ತುಳುಕಾಡುತ್ತಿರುವ ಜನರು ಮತ್ತು ಬಡತನ. ನಡುವೆ ವಿಜ್ಞಾನ -ತಂತ್ರಜ್ಞಾನದಲ್ಲಿ ನಮ್ಮ ಪ್ರಗತಿ. ಎಲ್ಲ ವೈರುದ್ಧ್ಯಗಳ ನಡುವೆಯೂ ನಾವು ನಮ್ಮದೇ ಬಗೆಯಲ್ಲಿ ಮುಂದೆ ಮುಂದೆ ಸಾಗುತ್ತಿರುವುದೇ ಒಂದು ಅದ್ಭುತ.
ನಾವು ಒಂದು ದೇಶವಾಗಿ ಪ್ರಗತಿಯ ಹಾದಿಯಲ್ಲಿ ಸಾಗಬಹುದೇ ಭವಿಷ್ಯದಲ್ಲೂ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳಬೇಕು ಬಾವ, ಅಂಬಗ ಮಾತ್ರ ಎನಗೆ ಸಮಾಧಾನ.
ಭಾವ,
ನಿನ್ನ ವೈಚಾರಿಕ ಮನೋಭಾವಕ್ಕೆ ನನ್ನದೊ೦ದು ದೊಡ್ಡ ನಮನ. ನಾನು ನೀನು ವಿಶ್ಲೇಶಿಸದಷ್ಟು ಆಳಾ ಆಲೋಚನೆ ಮಾಡಿದಿಲ್ಲೆ. ಆಧಿನಿಕ ಜಪಾನಿಯರು ತಮ್ಮ ಬಾರ್ಬರ ಪ್ರವೃತ್ತಿಯನ್ನು ಬಿಟ್ಟಿದ್ದಾರೆ ಅ೦ತ ಆ೦ದು ಕೊಳ್ಳಬಹುದು!!
ಅದಿರಲಿ ನಾನೀಗ ಮೂರು ದಿನದಿ೦ದ ಬೆಳ್ಳುಳ್ಳಿ ಸೇವನೆ ಮಾಡುತ್ತಿದ್ದೇನೆ. ಒ೦ದೊ೦ದು ಲವ೦ಗ ಸಹ. ಒಳ್ಳೆಯದಾಗುತ್ತದೆ!!
ಅ೦ಬಗ ಖ೦ಬ
ಆನ೦ದ ಭಾವ
ಆನಣ್ದ ಬಾವ, ನೀನು ಬೆಳ್ಳುಳ್ಳಿ ಪ್ರಯೋಗಕ್ಕೆ ಹೊರಟಿದ್ದಿ – ಕೊಲೆಸ್ಟೆರಾಲ್ – ಎಸಿಡಿಟಿ ತೊಂದರೆಗಳು ಆರಂಭವಾಗಿದೆಯೇ? ಹೇ, ಪ್ರಾಯ ಆದರೆ ಅದೆಲ್ಲ ಇರುವಂಥದ್ದೆ – ಅಂದರೂ ಈ ಕೊಲೆಸ್ಟೆರಾಲ್ ತುಂಬ ತೊಂದರೆ ಕೊಡುತ್ತೆ – ನಮ್ಮ ಪ್ರಾಯದ ಆಸು ಪಾಸಿನ ಹಲವರಿಗೆ ವಿಪರೀತ ಮಾಡಿದೆ. ಹಾಗಾಗಿ ಆ ಮಾರಾಯನ ಬಗ್ಗೆ ಒಂತೆ ಜಾಗ್ರತೆ ಬೇಕು. ನಿನಗೆ ಅವನ ಉಪಟಳ ಇಲ್ಲ ಎಂದು ಹಾರೈಕೆ.
ರಾಧ
Very Informative..
೧೦ ವರುಷಗಳ ಹಿಂದಿನ ಅ ಕ್ಲಾಸ್ ರೂಂ, ನೀವು ಮಾಡುತಿದ್ದ ಅಣು ವಿಜ್ಞಾನ ಪಾಠಗಳು ನೆನಪಾದವು..
ಮತ್ತೆ ಮರುಕಳಿಸುವುದೇ ಅ ದಿನಗಳು…?