ಚಂದ್ರ ಶತಮಾನೋತ್ಸವ

ನಿಮಗೆ ನೆನಪಿಸುತ್ತಿದ್ದೇನೆ, ಅಷ್ಟೇ. ಇಪ್ಪತ್ತನೇ ಶತಮಾನದ ಖಗೋಳವಿಜ್ಞಾನ ರಂಗ ಕಂಡ ಅದ್ವಿತೀಯ ತಾರೆಯ ಜನ್ಮದಿನ ಬಂದಿದೆ. ತನ್ನ ಕಾಲದಲ್ಲಿಯೇ ದಂತಕಥೆಯಾದ ಇವರನ್ನು ವಿಜ್ಞಾನ ಲೇಖಕ ಮಿಲ್ಲರ್ ನಕ್ಷತ್ರಲೋಕದ ಚಕ್ರವರ್ತಿಎಂದು ಕರೆದಿದ್ದಾರೆ. ಈ ಅನಭಿಷಕ್ತ ಚಕ್ರವರ್ತಿಯೇ ಪ್ರೊ. ಎಸ್.ಚಂದ್ರಶೇಖರ್ ಅತ್ಮೀಯರ ಪಾಲಿಗೆ ಚಂದ್ರ. ಹತ್ತೊಂಬತ್ತರ ಹರೆಯದಲ್ಲಿಯೇ ಇವರು ಸಾಗಿದ್ದು ಸಾಗರದಾಚೆಯ ಇಂಗ್ಲೆಂಡಿಗೆ ನಕ್ಷತ್ರಗಳ ಸಂಕೀರ್ಣ ಸಂರಚನೆಯ ಬಗ್ಗೆ ಅತ್ಯುನ್ನತ ಸಂಶೋಧನೆಗೆ. ರಾಯಲ್ ಸೊಸೈಟಿಯ ವಿದ್ವನ್ಮಣಿಗಳ ಸಭೆಯಲ್ಲಿ ತನ್ನ ನೂತನ ಸಿದ್ಧಾಂತವನ್ನು ಮಂಡಿಸಿ ಘನಂದಾರಿ ವಿಜ್ಞಾನಿಗಳಿಗೆ ಸಡ್ಡು ಹೊಡೆದರು; ಬಿಳಿ ದೊರೆಗಳ ಆಳ್ವಿಕೆಯ ದಿನಗಳ ಕೀಳರಿಮೆಯನ್ನು ತೊಡೆದು ಭಾರತೀಯ ಅಸ್ಮಿತೆಯನ್ನು ಪ್ರಪಂಚ ಮುಖಕ್ಕೆ ತೋರಿದರು. ಸಜ್ಜನಿಕೆಯ ಸಾಕಾರವಾಗಿದ್ದ ಇವರ ಜೀವನ ಸಾಧನೆ ಎಲ್ಲವೂ ರೋಚಕ ತಮ್ಮ ಕಾಲದಲ್ಲಿಯೆ ದಂತ ಕಥೆಯಾಗಿ ಹೋದರು. ಇರುತ್ತಿದ್ದರೆ ಇವರಿಗೆ ನೂರು ವರ್ಷಗಳಾಗುತ್ತಿದ್ದುವು. ಅಂದರೆ ವಿಜ್ಞಾನ ಪ್ರಿಯರಿಗೆ ಚಂದ್ರಶೇಖರ್ ಜನ್ಮ ಶತಮಾನೋತ್ಸವದ ಆಚರಣೆಯ ಸಂಭ್ರಮ. ಆ ಮೂಲಕ ಇನ್ನಷ್ಟು ವಿಜ್ಞಾನ ಚಿಂತನ ಮಂಥನಕ್ಕೊಂದು ಅವಕಾಶ.ಅರಳಿದ ಪ್ರತಿಭೆ

ಚಂದ್ರಶೇಖರ್ ಹುಟ್ಟಿದ್ದು ೧೯೧೦, ಅಕ್ಟೋಬರ್ ೧೯ ರಂದು, ಅವಿಭಕ್ತ ಭಾರತದ ಲಾಹೋರಿನ ಸುಸಂಸ್ಕೃತ ಕುಟುಂಬದಲ್ಲಿ. ತಂದೆ ಸುಬ್ರಹ್ಮಣ್ಯನ್ ಅಯ್ಯರ್, ಅಂದಿನ ಬ್ರಿಟಿಷ್ ಸರಕಾರದಲ್ಲಿ ಡೆಪ್ಯೂಟಿ ಅಕೌಂಟೆಂಟ್ ಜನರಲ್ ಆಗಿದ್ದವರು. ತಾಯಿ ಸೀತಾಲಕ್ಷ್ಮಿ ಸಹನೆಯೇ ಮೈವೆತ್ತಂತಿದ್ದವರು. ಈ ದಂಪತಿಗಳಿಗೆ ಹತ್ತುಜನ ಮಕ್ಕಳು. ಇವರಲ್ಲಿ ಚಂದ್ರಶೇಖರ್ ಮೂರನೇಯವರು. ಮನೆಯಲ್ಲಿ ಪ್ರೀತಿಯಿಂದ ಇವರನ್ನು ಕರೆಯುತ್ತಿದ್ದುದು ಚಂದ್ರ. ಮುಂದೆ ಆತ್ಮೀಯ ವಲಯದಲ್ಲಿ ಕೂಡ ಎಲ್ಲರೂ ಚಂದ್ರ ಎಂದೇ ಕರೆಯುತ್ತಿದ್ದರು.

ಇನ್ನು ಚಿಕ್ಕಪ್ಪ ಪ್ರೊಫೆಸರ್. ಸಿ.ವಿ.ರಾಮನ್ (೧೮೮೮೧೯೭೦) ರಾಮನ್ ಪರಿಣಾಮದ ಆವಿಷ್ಕಾರಕ್ಕೆ ೧೯೩೦ರಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು. ಬಾಲ್ಯದಿಂದಲೇ ಚಂದ್ರರಿಗೆ ಗಣಿತ ಮತ್ತು ಭೌತ ವಿಜ್ಞಾನದ ಬಗ್ಗೆ ಒಲವು. ಇವರ ತಂದೆ ತಮ್ಮ ಪರಿಚಿತರಲ್ಲಿ ಹೆಮ್ಮೆಯಿಂದ ಹೇಳುತ್ತಿದ್ದರಂತೆ ನೋಡಿ, ನಮ್ಮ ಚಂದ್ರ ಒಂದು ದಿನ ನನ್ನ ತಮ್ಮ ರಾಮನ್‌ನನ್ನೂ ಮೀರಿಸುತ್ತಾನೆ“. ಅವರ ಊಹೆ ಸುಳ್ಳಾಗಲಿಲ್ಲ.

ಮನೆಯಲ್ಲಿತ್ತು ಸುಸಜ್ಜಿತ ಗ್ರಂಥ ಭಂಡಾರ. ಆಟಕ್ಕಿಂತ ಪಾಠದಲ್ಲಿಯೇ ತಲ್ಲಿನ. ಅಜ್ಜನ ಕಾಲದಿಂದ ಶೇಖರವಾಗಿದ್ದ ಗಣಿತ ಮತ್ತು ವಿಜ್ಞಾನ ಪುಸ್ತಕಗಳೆಲ್ಲವನ್ನು ಹೈಸ್ಕೂಲು ಮೆಟ್ಟಲೇರುವ ಮೊದಲೇ ಚಂದ್ರ ಸ್ವಾಂಗೀಕರಿಸಿಕೊಂಡ. ಒಮ್ಮೆ ಓದಿದರೆ ಪುಟ ಪುಟಗಳಲ್ಲಿ ಏನಿದೆ ಎನ್ನುವುದನ್ನು ಕರಾರುವಾಕ್ಕಾಗಿ ಹೇಳಬಲ್ಲ ಆಸಾಧಾರಣ ನೆನಪು ಶಕ್ತಿ. ಸಹಜವಾಗಿಯೇ ತರಗತಿಯಲ್ಲಿ ಮೊದಲ ಸ್ಥಾನ. ಗಣಿತ, ವಿಜ್ಞಾನ ಬಿಟ್ಟರೆ ಆಸಕ್ತಿ ಇದ್ದುದು ಇಂಗ್ಲೀಷ್ ಸಾಹಿತ್ಯದಲ್ಲಿ. ಇಂಗ್ಲೀಷಿನ ಉದ್ದಾಮ ಸಾಹಿತಿಗಳ ಕೃತಿಗಳೆಲ್ಲವನ್ನು ಅರಗಿಸಿಕೊಂಡ ಕಾರಣದಿಂದಲೇ ಚಂದ್ರಶೇಖರ್ ವೈಜ್ಞಾನಿಕ ಬರಹದಲ್ಲಿ ಸಾಹಿತ್ಯದ ಸೊಗಡಿರುತ್ತಿತ್ತು. ಎಂದೇ ನೊಬೆಲ್ ಪ್ರಶಸ್ತಿ ವಿಜೇತ ಹ್ಯಾನ್ಸ್ ಬೇಥ್ ಬರೆಯುತ್ತಾರೆ ಚಂದ್ರ ಅವರ ಬರಹವೆಂದರೆ ವಿಕ್ಟೋರಿಯನ್ ಯುಗದ ಸೌಂದರ್ಯ“.

ಸಂಶೋಧನ ಪ್ರಪಂಚಕ್ಕೆ ಚಂದ್ರಶೇಖರ್ ಆಗಮನವಾದದ್ದು ಹದಿ ಹರಯದಲ್ಲಿ. ೧೯೨೮. ಆಗ ಅವರಿಗೆ ಹದಿನೆಂಟು ವರ್ಷ. ಮದ್ರಾಸಿನ ಮದ್ರಾಸಿನ ಪ್ರಸೆಡಿನ್ಸಿ ಕಾಲೇಜಿನಲ್ಲಿ ಬಿ.ಎಸ್.ಸಿ. ವಿದ್ಯಾರ್ಥಿ. ಬೇಸಗೆಯ ರಜೆಯಲ್ಲಿ ಕಲಕತ್ತೆಯಲ್ಲಿ ತನ್ನ ಚಿಕ್ಕಪ್ಪ ರಾಮನ್ ಅವರ ಸಂಶೋಧನ ಕೇಂದ್ರಕ್ಕೆ ಹೋದರು. ಅಲ್ಲಿಯ ಅನುಭವವನ್ನು ಚಂದ್ರಶೇಖರ್ ವರ್ಣಿಸುತ್ತಾರೆ ೧೯೨೮ ರ ಬೇಸಗೆಯಲ್ಲಿ ನಾನು ಸುಮಾರು ಎರಡು ತಿಂಗಳ ಕಾಲ ರಾಮನ್ ಅವರ ಪ್ರಯೋಗಾಲಯದಲ್ಲಿ ಕಳೆದೆ. ಆ ದಿನಗಳಲ್ಲಿ ಹಲವು ತರುಣ ಪ್ರತಿಭಾನ್ವಿತರು ರಾಮನ್ ಅವರ ನೂತನ ಆವಿಷ್ಕಾರಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುತ್ತಿದ್ದರು. ಅವರಲ್ಲಿ ಹಲವರು ಮುಂದೆ ಭಾರತೀಯ ವಿಜ್ಞಾನ ರಂಗದಲ್ಲಿ ಉನ್ನತ ಸ್ತರವನ್ನು ಅಲಂಕರಿಸಿದರು. ಈ ಎಲ್ಲರು ನೂತನಾ ಆವಿಷ್ಕಾರದಿಂದ ಸ೦ಭ್ರಮೋತ್ಸಾಹದಲ್ಲಿದ್ದರು. ನನ್ನಂಥ ತರುಣನಿಗೆ ಅದೊಂದು ಅನನ್ಯ ಅನುಭವವಾಗಿತ್ತು

ಆ ದಿನಗಳು ಇಂದಿನಂತೆ ಮಾಹಿತಿ ಯುಗವಲ್ಲ. ಅಂತಾರಾಷ್ಟ್ರೀಯ ಪತ್ರಿಕೆಗಳು ಅತ್ಯಂತ ಕಷ್ಟದಲ್ಲಿ ದೊರೆಯುತ್ತಿದ್ದುವು, ಅಷ್ಟೇ. ಚಂದ್ರ ಒಂದೆಡೆ ಹೇಳಿದ್ದಾರೆ ಪ್ರತಿ ತಿಂಗಳಿನ ನಿರ್ದಿಷ್ಟ ದಿನದಂದು ಹಡಗು ಬರುತ್ತಿತ್ತು ನಾನು ಕಾಯುತ್ತಿದ್ದೆ ಕಾತರದಿಂದ ಅ ಹಡಗಿಗಾಗಿ, ಅದರಲ್ಲಿ ಬರುತ್ತಿದ್ದ ನೇಚರ್, ಫಿಲಾಸಾಫಿಕಲ್ ಮ್ಯಾಗಝೀನಿನ ಪ್ರತಿಗಳಿಗಾಗಿ

೧೯೨೯, ಜನವರಿಯಲ್ಲಿ ಭಾರತೀಯ ವಿಜ್ಞಾನ ಮೇಳ ಮದ್ರಾಸಿನಲ್ಲಿ ನಡೆದಾಗ ಪ್ರಸಿಡೆನ್ಸಿ ಕಾಲೇಜಿನ ಬಿಎಸ್‌ಸಿ ವಿದ್ಯಾರ್ಥಿಯಾಗಿದ್ದ ಚಂದ್ರಶೇಖರ್ ತಮ್ಮ ಸಂಶೋಧನ ಲೇಖನವನ್ನು ಮಂಡಿಸಿ ಗಮನ ಸೆಳೆದರು. ಕೆಲವು ವರ್ಷಗಳ ಹಿಂದೆ ಆವಿಷ್ಕಾರವಾಗಿದ್ದ ಕಾಂಪ್ಟನ್ ಪರಿಣಾಮದ ಸಿದ್ಧಾಂತವನ್ನು ನಕ್ಷತ್ರಗಳ ಅಂತರಾಳಕ್ಕೆ ಅನ್ವಯಿಸಿ ಬರೆದ ಸಂಶೋಧನ ಪ್ರಬಂಧ (Thermodynamics of Compton Scattering with reference to the Interiors of Stars) ಅದಾಗಿತ್ತು.

ಪ್ರಬಂಧ ಮಂಡನೆಗೆ ಬಹುಮಾನವಾಗಿ ದೊರೆತದ್ದು ಖಗೋಳವಿಜ್ಞಾನಿ ಅರ್ಥರ್ ಎಡಿಂಗ್ಟನ್ ಬರೆದ – “ನಕ್ಷತ್ರಗಳ ಆಂತರಿಕ ರಚನೆ” (The Internal Constitution of the Stars) ಎಂಬ ಗ್ರಂಥ. ನಕ್ಷತ್ರಗಳ ಜನನ ಮತ್ತು ವಿಕಾಸದ ಬೇರೆ ಬೇರೆ ಹಂತಗಳನ್ನು ವಿವರಿಸುವ ಆ ಗ್ರಂಥ ಎಳೆಯ ಚಂದ್ರನ ಮೇಲೆ ಗಾಢ ಪ್ರಭಾವ ಬೀರಿತು.

ಇದೇ ಸಮಯದಲ್ಲಿ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಬಂದ ಜರ್ಮನಿಯ ಭೌತವಿಜ್ಞಾನಿಗಳಾದ ಸೊಮರ್‌ಫೆಲ್ಡ್ ಮತ್ತು ಹೈಸೆನ್‌ಬರ್ಗ್ ಅವರ ಉಪನ್ಯಾಸಗಳು ಚಂದ್ರಶೇಖರ್ ಆಸಕ್ತಿಗೆ ಮತ್ತಷ್ಟು ಉತ್ತೇಜನ ನೀಡಿದುವು. ನಕ್ಷತ್ರಗಳಲ್ಲಿ ವಿಕಿರಣದ ಚದರಿಕೆ ಬಗ್ಗೆ ಇನ್ನಷ್ಟು ವಿಸ್ತಾರವಾದ ಸಂಶೋಧನ ಲೇಖನ ಸಿದ್ಧಪಡಿಸಿ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿ ರಾಲ್ಫ್‌ಫೌಲರ್ (೧೮೮೯ ೧೯೪೪) ಅವರಿಗೆ ಕಳುಹಿಸಿದರು. –ರಾಯಲ್ ಸೊಸೈಟಿಯ ಸಂಶೋಧನ ಪತ್ರಿಕೆಯಲ್ಲಿ ಪ್ರಕಟಣೆಗಾಗಿ. ಲೇಖನದ ಪುಟ ಪುಟಗಳಲ್ಲಿ ಪುಟಿಯುತ್ತಿದ್ದುವು ನವ ನವೀನ ಭಾವಗಳು; ಅಜ್ಞಾತ ತರುಣನ ಅದ್ವಿತೀಯ ಪ್ರತಿಭೆ. ಫೌಲರ್ ತಡಮಾಡಲಿಲ್ಲ. Proceedings of Royal Society ಗೆ ಪ್ರಬಂಧವನ್ನು ರವಾನಿಸಿದರು ಮತ್ತು ಆ ಲೇಖನ ಪ್ರಕಟವಾಗಿಯೇ ಬಿಟ್ಟಿತು.

ತರಗತಿಗಳಿಗಿಂತ ಹೆಚ್ಚಾಗಿ ಗ್ರಂಥಾಲಯದಲ್ಲೇ ಇರುತ್ತಿದ್ದ ಚಂದ್ರ ಅವರ ಇನ್ನಷ್ಟು ಸಂಶೋಧನ ಲೇಖನಗಳು ಪ್ರಕಟವಾದುವು ಕಾಲೇಜು ದಿನಗಳಲ್ಲಿಯೇ. ಮದ್ರಾಸ್ ವಿಶ್ವವಿದ್ಯಾಲಯದಿಂದ ದಾಖಲೆ ಅಂಕಗಳೊಂದಿಗೆ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಚಂದ್ರ, ಇಂಗ್ಲೆಂಡಿನ ಕ್ಯಾಂಬ್ರಿಡ್ಜಿನಲ್ಲಿ ಉನ್ನತ ಅಧ್ಯಯನಕ್ಕೆ ಆಯ್ಕೆಯಾದರು.

ಆಗ ಚಂದ್ರರ ತಾಯಿ ಸೀತಾಲಕ್ಷ್ಮಿ ಕರುಳು ಹುಣ್ಣಿನಿಂದ ತೀವ್ರವಾಗಿ ಬಳಲುತ್ತಿದ್ದರು. ಹಾಗಾಗಿ ಇಂಗ್ಲೆಂಡಿಗೆ ಹೋಗುವ ಬಗ್ಗೆ ಚಂದ್ರ ಗೊಂದಲಕ್ಕೀಡಾದರು. ತಂದೆ ಸಿ.ಎಸ್.ಅಯ್ಯರ್ ಹೇಳಿದರು ನೀನು ಹೋಗಬೇಕಾದ ಅಗತ್ಯವಿಲ್ಲ. ಇಲ್ಲೇ ಸಾಧಿಸಬಹುದು ನಿನ್ನ ಚಿಕ್ಕಪ್ಪ ರಾಮನ್‌ನಂತೆ“. ಹೆಚ್ಚಿನ ಬಂಧುಗಳು ಕೂಡ ಇದೇ ಧಾಟಿಯ ಬಿಟ್ಟಿ ಸಲಹೆ ಕೊಟ್ಟರೆ, ತಾಯಿ ಮಾತ್ರ ಮಾತ್ರ ಉಜ್ವಲ ಭವಿಷ್ಯ ಕ್ಕಾಗಿ ಚಂದ್ರ ಇಂಗ್ಲೆಂಡಿಗೆ ಹೋಗಲೇಬೇಕೆಂದು ಹಠ ಹಿಡಿದಳು ಕಳವಳಪಡಬೇಡ. ನೀನು ಹೋಗಲೇಬೇಕು ಮತ್ತು ಚಿಕ್ಕಪ್ಪ ರಾಮನ್ ಅವರ ಕಕ್ಷೆಯಿಂದ ಹೊರಬಂದು ಪ್ರಕಾಶಿಸುವ ನಕ್ಷತ್ರವಾಗಬೇಕು, ನನಗೇನೂ ಆಗದು.”

ಆದರೆ ಹಾಗಾಗಲಿಲ್ಲ. ಹೊರಡುವ ದಿನಕ್ಕೆ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ಮನೆಯ ಗೇಟಿನಲ್ಲಿಯೇ ನಿಂತು ಹನಿ ದುಂಬಿಂದ ಕಂಗಳಿಂದ ಆ ತಾಯಿ ಮಗನನ್ನು ಕಳುಹಿಸಿಕೊಟ್ಟಳು. ಅದು ಮಾತ್ರ ಅವಳ ಪಾಲಿಗೆ ಅಂತಿಮ ವಿದಾಯವಾಗಿತ್ತು.

ಇಂದಿನಂತೆ ವಿಮಾನ ಯಾನದ ಸೌಲಭ್ಯವಿರದಿದ್ದ ಕಾಲ. ಹಡಗಿನಲ್ಲಿಯೇ ನಕ್ಷತ್ರಗಳ ಉಗಮ ಮತ್ತು ಬೆಳವಣಿಗೆಗಳ ಬಗ್ಗೆ ಚಿಂತಿಸುತ್ತ ತಮ್ಮ ಹೊಸ ಸಿದ್ಧಾಂತವನ್ನು ರೂಪಿಸಿದರು. ಎರಡು ತಿಂಗಳುಗಳ ಸಾಗರ ಯಾನ ಮಾಡಿ ಇಂಗ್ಲೆಂಡಿನಲ್ಲಿ ಬಂದಿಳಿಯುವ ಮುನ್ನವೇ ಚಂದ್ರಶೇಖರ್ ಅವರಿಗೆ ತಮ್ಮ ಹೊಸ ಸಿದ್ದಾಂತದ ರೂಪುರೇಖೆಗಳು ಸ್ಪಷ್ಟವಾಗಿದ್ದುವು.

ಪತ್ರ ಮುಖೇನ ಆ ಮೊದಲೇ ಪರಿಚಿತರಾಗಿದ್ದ ಫೌಲರ್ ಅವರೊಂದಿಗೆ ನಕ್ಷತ್ರಗಳ ವಿಕಾಸದ ಬಗ್ಗೆ ಸಂಶೋಧನೆಯಲ್ಲಿ ತೊಡಗಿದರು. ರಾಯಲ್ ಎಸ್ಟ್ರೊನೊಮಿಕಲ್ ಸೊಸೈಟಿಯ ಪತ್ರಿಕೆಯಲ್ಲಿ ಇವರ ಲೇಖನಗಳು ನಿಯತವಾಗಿ ಪ್ರಕಟವಾಗುತ್ತ ಬಂದಂತೆ ಇಂಡಿಯಾದಿಂದ ಬಂದ ಹುಡುಗನ ಹೆಸರು ಖಗೋಳ ವಿಜ್ಞಾನ ವಲಯದಲ್ಲಿ ಸಾಕಷ್ಟು ಕೇಳಿ ಬರತೊಡಗಿತು.

ಚಂದ್ರಶೇಖರ್ ಡಾಕ್ಟರೇಟ್ ಪದವಿ ಪಡೆದಾಗ ಇನ್ನೂ ಇಪ್ಪತ್ತಮೂರರ ಹರಯ (೧೯೩೩). ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಫೆಲೋಶಿಪ್ ಅವಧಿ ಮುಗಿಯುತ್ತ ಬಂದಿತ್ತು. ಪ್ರತಿಷ್ಟಿತ ಟ್ರ್ರಿನಿಟಿ ಕಾಲೇಜಿನ ಫೆಲೋಶಿಪ್ಪಿಗೆ ಅರ್ಜಿ ಹಾಕಿದರು. ಆ ಶಿಷ್ಯ ವೇತನಕ್ಕೆ ತುರುಸಿನ ಸ್ಪರ್ಧೆ ಇತ್ತು. ಆದರೆ ಚಂದ್ರಶೇಖರ್ ಫೆಲೋಶಿಪ್ಪಿಗೆ ಆಯ್ಕೆಯಾದರು. ರಾಮಾನುಜನ್ ಅವರಿಗೂ ಇದೇ ಪೆಲೋಶಿಪ್ ದೊರಕಿತ್ತೆನ್ನುವುದನ್ನು ನಾವು ಸ್ಮರಿಸಬಹುದು.

ಚಂದ್ರಶೇಖರ್ ತಮ್ಮ ಸಂಶೋಧನೆಯಲ್ಲಿ ತೀವ್ರವಾಗಿ ನಿರತರಾಗಿದ್ದ ಅದೊಂದು ದಿನ (೧೯೧೦೧೯೩೦) ತವರಿನಿಂದ ಬಂತು ಟೆಲಿಗ್ರಾಂ ತಾಯಿ ತೀರಿಕೊಂಡ ದು:ಖದ ವಾರ್ತೆ ಹೊತ್ತು. ತಾಯಿಯನ್ನು ಇನ್ನಿಲ್ಲದಂತೆ ನೆಚ್ಚಿಕೊಂಡ ಎಳೆಯ ಮನಸ್ಸಿಗೆ ಅದೆಂಥ ತೀವ್ರ ಆಘಾತ ಆಗಿರಬೇಡ. ಚಂದ್ರ ರವಾನಿಸಿದ ತಂತಿ ಹೀಗಿತ್ತು ಅದು ನಿಜವೆಂದು ಭಾವಿಸುವುದು ಘೋರ. ಸಮಾಧಾನವೆಲ್ಲಿದೆ? ಅತ್ಯಂತ ದು:ಖಿತನಾದ ನಾನು ಏನು ಸಮಾಧಾನ ನೀಡಲಿ? ನಾವೆಲ್ಲರೂ ಇದನ್ನು ಸಹನೆಯಿಂದ ಸಹಿಸಿಕೊಳ್ಳಬೇಕು, ಆಷ್ಟೇ

ಎಡಿಂಗ್ಟನ್ನರೊಂದಿಗೆ ತಿಕ್ಕಾಟ

ಚಂದ್ರ ತಮ್ಮ ಸಂಶೋಧನೆ ಪ್ರಾರಂಭಿಸುವ ಕಾಲಕ್ಕೆ ನಕ್ಷತ್ರಗಳ ಉಗಮ ಮತ್ತು ಬೆಳವಣಿಗೆಗಳ ಬಗ್ಗೆ ಪ್ರಾಥಮಿಕ ನೆಲೆಯ ಸಿದ್ಧಾಂತ ರೂಪಿತವಾಗಿತ್ತು. ಅಗಾಧ ವಿಶ್ವದ ಮೂಲದ್ರವ್ಯ ಹೈಡ್ರೋಜನ್ ಅಥವಾ ಜಲಜನಕ. ಆದರೆ ವಿಶ್ವದ ಅಸೀಮ ವಿಸ್ತಾರದಲ್ಲಿ ಈ ಅನಿಲ ಸಮಾನವಾಗಿ ಪಸರಿಸಿಲ್ಲ. ಕೆಲವೆಡೆ ಹೆಚ್ಚು ದಟ್ಟೈಸಿದೆ ಬಾನಿನಲ್ಲಿ ಮೋಡಗಳು ಒಟ್ಟೈಸಿದ೦ತೆ. ಇ೦ಥ ಹೈಡ್ರೋಜನ್ ಅನಿಲ ಮೋಡಕ್ಕೆ ನಿಹಾರಿಕೆ (Nebula) ಎನ್ನುತ್ತಾರೆ. ನಿಹಾರಿಕೆ ನಕ್ಷತ್ರದ ಉಗಮ ಸ್ಥಳ ತವರು ಮನೆ.

ನಿಹಾರಿಕೆಯಲ್ಲಿ ದಟ್ಟೈಸಿದ ಹೈಡ್ರೋಜನ್ ಅನಿಲ ರಾಶಿಯು ತನ್ನ ಅಗಾಧ ದ್ರವ್ಯರಾಶಿಯ ಕಾರಣದಿ೦ದ ಉ೦ಟಾಗುವ ಗುರುತ್ವ ಬಲದ ಒತ್ತಡಕ್ಕೆ ಸಿಲುಕಿ ಕುಗ್ಗಲಾರ೦ಭಿಸುತ್ತದೆ. ಗಾತ್ರ ಕುಗ್ಗಿದ೦ತೆ ಉಷ್ಣತೆ ಏರುತ್ತದೆ ೧೦೦ ಡಿಗ್ರಿ ೨೦೦ ಡಿಗ್ರಿ .. ೫೦೦ ಡಿಗ್ರಿ೧೦೦೦ ಡಿಗ್ರಿ.. ೧೦೦೦೦ ಡಿಗ್ರಿ. ಅನಿಲರಾಶಿಯ ಉಷ್ಣತೆ ಒ೦ದು ಕೋಟಿ ಡಿಗ್ರಿ ಸೆ೦ಟಿಗ್ರೇಡುಗಳಿಗೇರಿದಾಗ ಹೈಡ್ರೋಜನ್ ಪರಮಾಣುಗಳ ಬೀಜ ಅಥವಾ ನ್ಯೂಕ್ಲಿಯಸ್ಸುಗಳು ಪರಸ್ಪರ ಡಿಕ್ಕಿಯಾಗಿ ಒಟ್ಟಾಗುವ ಬೈಜಿಕ ಸ೦ಲಯನ ಕ್ರಿಯೆ ” (Nuclear Fusion Reaction) ಪ್ರಾರ೦ಭವಾಗುತ್ತದೆ. ಒ೦ದು ಸ೦ಲಯನ ಕ್ರಿಯೆಯೆಯಲ್ಲಿ ಎರಡು ಹೈಡ್ರೋಜನ್ ನ್ಯೂಕ್ಲಿಯಸ್ಸುಗಳು ಸ೦ಲಯನಗೊ೦ಡು ಇನ್ನಷ್ಟು ತೂಕದ ಹೀಲಿಯಮ್ ನ್ಯೂಕ್ಲಿಯಸ್ ಸೃಷ್ಟಿಯಾಗುತ್ತದೆ. ಕ್ರಿಯೆಯಲ್ಲಿ ನಷ್ಟವಾದ ದ್ರವ್ಯ ಶಕ್ತಿಯಾಗಿ ಬಿಡುಗಡೆಯಾಗುತ್ತದೆ.

ಸೆಕು೦ಡಿಗೆ ಹಲವು ಕೋಟಿ ಟನ್ ಪ್ರಮಾಣದಲ್ಲಿ ಹ್ಯೆಡ್ರೋಜನ್ ಹೀಲಿಯಮ್ ಆಗಿ ಪರಿವರ್ತನೆ ಹೊ೦ದುವ ಬೈಜಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅಗಾಧ ಪ್ರಮಾಣದ ಶಕ್ತಿಯು ಹೈಡ್ರೊಜನ್ ಅನಿಲರಾಶಿಯನ್ನು ವ್ಯಾಕೋಚಿಸಿದರೆ ಗುರುತ್ವಬಲ ಸ೦ಕೋಚಿಸುತ್ತದೆ. ಈ ಎರಡು ವಿರುದ್ಢ ಬಲಗಳ ನಡುವೆ ಸಮತೋಲನವೇರ್ಪಟ್ಟಾಗ ಅದೋ ಅಲ್ಲಿ ಮೈದಳೆಯುತ್ತದೊ೦ದು ನಕ್ಷತ್ರ. ನಮ್ಮ ಸೂರ್ಯ ಜನಿಸಿದ್ದು ಹೀಗೆಯೇ ೫ ಬಿಲಿಯ ಅಥವಾ ೫೦೦ ಕೋಟಿ ವರ್ಷಗಳ ಹಿ೦ದೆ. ಸೂರ್ಯ ಮಾತ್ರವಲ್ಲ. ಎಲ್ಲ ನಕ್ಷತ್ರಗಳು ಜನಿಸಿದ್ದು , ಜನಿಸುವುದು ಹೀಗೆಯೇ.

ಕಾಲಾ೦ತರದಲ್ಲಿ ಹೆಚ್ಚಿನ ಹೈಡ್ರೋಜನ್ ಹೀಲಿಯಮ್ ಆಗಿ ಪರಿವರ್ತಿತವಾದಾಗ ತಾರೆಯಲ್ಲಿ ಅಸ್ಥಿರತೆ ತೋರುತ್ತದೆ. ತಿರುಳಿನಲ್ಲಿ ಹೀಲಿಯಮ್ ಸಾ೦ದ್ರೀಕೃತವಾಗಿದ್ದರೆ, ಹೊರ ಆವರಣದಲ್ಲಿ ಹೈಡ್ರೋಜನ್ನಿನ ಆಧಿಕ್ಯ. ತಿರುಳು ತನ್ನ ದ್ರವ್ಯ ರಾಶಿಯ ಪರಿಣಾಮವಾಗಿ ಇನ್ನಷ್ಟು ಕುಗ್ಗುತ್ತದೆ ಮತ್ತು ಉಷ್ಣತೆ ಸುಮಾರು ಹತ್ತು ಕೋಟಿ ಡಿಗ್ರಿಗಳಾದಾಗ ಹೀಲಿಯಮ್ ನ್ಯೂಕ್ಲಿಯಸ್ಸುಗಳು ಸ೦ಲಯನಗೊಳ್ಳುವ ಬೈಜಿಕ ಕ್ರಿಯೆ ಪ್ರಾರ೦ಭವಾಗುತ್ತದೆ. ಇದರ ಪರಿಣಾಮವಾಗಿ ಒಟ್ಟು ನಕ್ಷತ್ರ ಅಸಾಧಾರಣವಾಗಿ ಹಿಗ್ಗುತ್ತದೆ ಗಾಳಿಯೂದಿದ ಬುಗ್ಗೆಯ೦ತೆ. ಲ೦ಬಿತ ಗಾತ್ರದಿ೦ದ ಉಷ್ಣತೆ ಬಹಳಷ್ಟು ಕಡಿಮೆಯಾಗಿ ಕೆ೦ಪು ಬಣ್ಣದಿ೦ದ ಗೋಚರಿಸುವ ಇ೦ಥ ನಕ್ಷತ್ರಕ್ಕೆ ರಕ್ತ ದೈತ್ಯ (Red Giant) ಎ೦ದು ಹೆಸರು. ಆಕಾಶದಲ್ಲಿ ಹಲವು ರಕ್ತ ದೈತ್ಯ ನಕ್ಷತ್ರಗಳನ್ನು ನೋಡಬಹುದು.

ಸ೦ಲಯನ ಕ್ರಿಯೆ ಮು೦ದುವರಿದ೦ತೆ ರಕ್ತ ದೈತ್ಯನ ಒಡಲಲ್ಲಿ ಅಪಾರ ಒತ್ತಡ ಸ೦ಜನಿಸಿ ಹೊರ ಆವರಣ ಸಿಡಿದು ಹಾರಿ ಹೋಗಿ ಅಲ್ಲಿ ಉಳಿಯುವುದೇನಿದ್ದರೂ ಬಹುಪಾಲು ಕಾರ್ಬನ್ ಅಥವಾ ಇ೦ಗಾಲದ ನ್ಯೂಕ್ಲಿಯಸ್ಸುಗಳ ತಿರುಳು ಚಿಕ್ಕ ತಾರೆ. ತನ್ನ ಅಧಿಕ ಉಷ್ಣತೆಯ ಕಾರಣವಾಗಿ ಬಿಳಿ ಬಣ್ಣದಿ೦ದ ಗೋಚರಿಸುವ ಈ ಪುಟ್ಟ ತಾರೆಗೆ ಶ್ವೇತ ಕುಬ್ಜ ( White Dwarf ) ಎ೦ದು ಹೆಸರು. ಶ್ವೇತ ಕುಬ್ಜ ನಕ್ಷತ್ರವೊ೦ದರ ಅ೦ತಿಮ ಸ್ಥಿತಿ ಎ೦ದು ಅಂದಿನ ಖಗೋಳ ಪಂಡಿತೋತ್ತಮ ಎಡಿಂಗ್ಟನ್ ಅವರ ನಂಬುಗೆಯಾಗಿತ್ತು. ಅವು ಉರಿಯುತ್ತ ಉರಿಯುತ್ತ ಕೆಲವು ಲಕ್ಷ ವರ್ಷಗಳಲ್ಲಿ ಇ೦ಗಾಲದ ಕಿಟ್ಟವಾಗಿ ವಿಶ್ವದ ಅ೦ತರಾಳದಲ್ಲಿ ಮಾಯವಾಗುತ್ತವೆ೦ದು ಅವರು ನ೦ಬಿದ್ದರು. ಅಂದರೆ ಶ್ವೇತ ಕುಬ್ಜ ಎಲ್ಲ ನಕ್ಷತ್ರಗಳ ಅಂತಿಮ ಸ್ಥಿತಿ ಎನ್ನುವ ಪರಿಕಲ್ಪನೆ ಅಂದು ಸಾರ್ವತ್ರಿಕವಾಗಿ ಪ್ರಚಲಿತವಾಗಿತ್ತು, ಮತ್ತು ಅದಕ್ಕೆ ಪ್ರಾಜ್ಞರ ಸಮ್ಮತವಿತ್ತು.

ಎಡಿಂಗ್ಟನ್ ಪುಸ್ತಕದಲ್ಲಿದ್ದ ಈ ಎಲ್ಲ ವಿವರಗಳನ್ನು ಓದಿದಾಗಲೇ ಚ೦ದ್ರಶೇಖರ್ ಮನದಲ್ಲಿ ಇದೇಕೆ ಹೀಗೆಎಂಬ ಪ್ರಶ್ನೆ ಹುಟ್ಟಿಕೊ೦ಡಿತು. ಶ್ವೇತಕುಬ್ಜ ತಾರೆಯೇ ಎಲ್ಲ ತಾರೆಗಳ ಅಂತಿಮ ಸ್ಥಿತಿ ಎನ್ನುವುದನ್ನು ಅವರು ಒಪ್ಪಿಕೊಳ್ಳಲಿಲ್ಲ. ಶ್ವೇತ ಕುಬ್ಜದ ಅಗಾಧ ಉಷ್ಣತೆಯಲ್ಲಿ ಅದರ ದ್ರವ್ಯವೆಲ್ಲವೂ ಅಯಾನೀಕೃತವಾಗಿ ಅಲ್ಲಿ ಎಲೆಕ್ಟ್ರಾನುಗಳೇ ತುಂಬಿರುತ್ತವೆ ಮತ್ತು ಅವು ಸರಿ ಸುಮಾರು ಬೆಳಕಿನ ವೇಗದಲ್ಲಿ ಚಲಿಸುತ್ತಿರುತ್ತವೆ. ಆಗಷ್ಟೇ ಮಂಡಿಸಲ್ಪಟ್ಟಿದ್ದ ಫರ್ಮಿ ಡಿರಾಕ್ ಸಂಖ್ಯಾಕಲನ (Fermi Dirac Statistics) ಮತ್ತು ಐನ್‌ಸ್ಟೈನ್ ಅವರ ವಿಶೇಷ ಸಾಪೇಕ್ಷತಾ ಸಿದ್ದಾಂತ (Special theory of Relativity) ವನ್ನು ಚಂದ್ರ ಬಳಸಿಕೊಂಡು ಶ್ವೇತಕುಬ್ಜದ ನಂತರವೂ ನಕ್ಷತ್ರ ಬೇರೆ ಬೇರೆ ಹಂತವನ್ನು, ವಿಕಾಸದ ಮಜಲುಗಳನ್ನು ತಲುಪುತ್ತದೆನ್ನುವ ಸತ್ಯವನ್ನು ಕಂಡರು. ಗಣಿತೀಯವಾಗಿ ಯಾವುದೇ ಕಾರಣಕ್ಕೆ ಶ್ವೇತ ಕುಬ್ಜವೊಂದರ ದ್ರವ್ಯರಾಶಿ ಸೂರ್ಯನ ಸೂರ್ಯನ ರಾಶಿಗಿ೦ತ ೧.೪ ಪಟ್ಟು ಅಥವಾ ಅದಕ್ಕಿ೦ತ ಹೆಚ್ಚಾದರೆ ಆ ತಾರೆ ಶ್ವೇತ ಕುಬ್ಜ ಸ್ಥಿತಿಯಲ್ಲೇ ಇರಲಾರದು. ಅದು ಮತ್ತೂ ಮು೦ದಿನ ಹ೦ತಗಳನ್ನು ಕಾಣುತ್ತದೆಎಂಬ ನಿರ್ಧಾರಕ್ಕೆ ಬಂದರು. ಶ್ವೇತಕುಬ್ಜಕ್ಕೆ ಸ೦ಬ೦ಧಿಸಿದ೦ತೆ ದ್ರವ್ಯರಾಶಿಯ ಈ ಪರಿಮಿತಿಯು ಚ೦ದ್ರಶೇಖರ್ ಪರಿಮಿತಿ” (Chandrashekhar Limit) ಎ೦ದೇ ಸುಪ್ರಸಿದ್ದವಾಯಿತು. ನಾವು ಮುಖ್ಯವಾಗಿ ಗಮನಿಸಬೇಕಾದದ್ದು ನಕ್ಷತ್ರವೊ೦ದರ ಮೂಲ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿಗಿ೦ತ ಸುಮಾರು ೮ ಪಟ್ಟು ಇದ್ದರೆ ಆ ನಕ್ಷತ್ರ ಚ೦ದ್ರಶೇಖರ್ ಪರಿಮಿತಿಯನ್ನು ಮೀರುತ್ತದೆ. ವಿಶ್ವದಲ್ಲಿ ಇ೦ಥ ಹಲವು ಬೃಹನ್ನಕ್ಷತ್ರಗಳಿವೆ. ಇವು ಶ್ವೇತಕುಬ್ಜಗಳಾಗದೇ ಬೇರೆ ಹಾದಿ ಹಿಡಿಯುತ್ತವೆ ಎನ್ನುವುದು ಚಂದ್ರ ಅವರ ಚಿಂತನೆಯಾಗಿತ್ತು

ಚ೦ದ್ರಶೇಖರ್ ತಮ್ಮ ಹೊಸ ಸಿದ್ದಾಂತವನ್ನು ಕ್ಯಾಂಬ್ರಿಡ್ಜನ ಸುಪ್ರಸಿದ್ದ ಖಗೋಳ ವಿಜ್ಞಾನಿಗಳಾದ ಫೌಲರ್, ಮಿಲ್ನ್ ಮತ್ತು ಎಡಿಂಗ್ಟನ್ ಅವರಿಗೆ ತೋರಿಸಿದರು ಪ್ರತಿಕ್ರಿಯೆಗಾಗಿ. ಆದರೆ ಅವರಿಂದ ಉತ್ತಮ ಪ್ರತಿಕ್ರಿಯೆ ಬರಲಿಲ್ಲ. ಆದರೆ ಚಂದ್ರಶೇಖರ್ ಅವರಿಗೆ ತನ್ನ ಹೊಸ ಸಿದ್ದಾಂತದ ತಥ್ಯದ ಬಗ್ಗೆ ಎಳ್ಳಷ್ಟೂ ಸಂಶಯವಿರಲಿಲ್ಲ. ಲಂಡನ್ನಿನ ರಾಯಲ್ ಸೊಸೈಟಿಯ ವಾರದ ಸಭೆಯಲ್ಲಿ ತಮ್ಮ ಸಿದ್ದಾಂತವನ್ನು ಮಂಡಿಸುವ ಇರಾದೆಯಿಂದ ಚಂದ್ರಶೇಖರ್ ಪ್ರಬಂಧವನ್ನು ಕಳುಹಿಸಿದರು.

ಅವರ ಪ್ರಬಂಧ ಮಂಡನೆಗೆ ಸ್ವೀಕಾರವಾಯಿತು. ಆದರೆ ಚಂದ್ರ ಅವರಿಗೆ ಅಚ್ಚರಿಯೊಂದು ಕಾದಿತ್ತು. ಅವರ ನಂತರ ಎಡಿಂಗ್ಟನ್ ತಮ್ಮ ಪ್ರಬಂಧವನ್ನು ಮಂಡಿಸಲಿದ್ದರು. ಜನವರಿ ೧೧. ೧೯೩೫. ತರುಣ ಚಂದ್ರಶೇಖರ್ ಲಂಡನ್ನಿಗೆ ಆಗಮಿಸಿದರುಆತ್ಮವಿಶ್ವಾಸ ಮತ್ತು ವಿಜ್ಞಾನ ರಂಗ ತನ್ನ ಪರಿಕಲ್ಪನೆಯನ್ನು ಒಪ್ಪುವ ಭರವಸೆಯೊಂದಿಗೆ.

ಸಭೆಯ ಮುನ್ನ ಹಜಾರದಲ್ಲಿ ಸಿಕ್ಕಿದಾಗ ಎಡಿಂಗ್ಟನ್ ಚಂದ್ರರನ್ನು ಬದಿಗೆ ಕರೆದು ನಿಮಗೆ ಒಂದು ಅಚ್ಚರಿ ಕಾದಿದೆಎನ್ನುತ್ತ ಕಣ್ಣು ಮಿಟುಕಿಸಿದರು. ಅದೇನು ಅಚ್ಚರಿ? ಗೊಂದಲಕ್ಕೀಡಾದರು. ಪ್ರಾಯಶ: ತನ್ನ ಸಿದ್ಧಾಂತವನ್ನು ಒಪ್ಪಿಕೊಂಡ ಮತ್ತು ಇನ್ನಷ್ಟು ವಿಸ್ತರಿಸಿದ ಪ್ರಬಂಧ ಅವರದ್ದು ಇರಬಹುದೆಂದು ಚಂದ್ರಶೇಖರ್ ಊಹಿಸಿ ಸಮಾಧಾನ ತಳೆದರು. ಸಭೆ ಆರಂಭವಾಯಿತು. ಚಂದ್ರಶೇಖರ್ ತಮ್ಮ ಹೊಸ ಸಿದ್ದಾಂತವನ್ನು ಮಂಡಿಸಿದರು. ಶ್ವೇತಕುಬ್ಜ ಅಸಾಮಾನ್ಯ ನಕ್ಷತ್ರ. ಸೂರ್ಯನಲ್ಲಿರುವ ಒತ್ತಡದ ಲಕ್ಷ ಪಟ್ಟು ಒತ್ತಡ ಮತ್ತು ಸಾಂದ್ರತೆ ಇರುವ ಸ್ಥಿತಿಯಲ್ಲಿ ಅಲ್ಲಿರುವ ದ್ರವ್ಯದ ಪರಿಸ್ಥಿತಿ ಹೇಗಿರುತ್ತದೆ? ಎಡಿಂಗ್ಟನ್ ಮತ್ತಿತರ ಸಮಕಾಲೀನ ಭೌತ ವಿಜ್ಞಾನಿಗಳು ನ್ಯೂಟನ್ ಬಲವಿಜ್ಞಾನ ಅಥವಾ ಅಭಿಜಾತ ಭೌತ ವಿಜ್ಞಾನವನ್ನು ಬಳಸಿಕೊಂಡು ಶ್ವೇತಕುಬ್ಜದಲ್ಲಿ ದ್ರವ್ಯ ಹೇಗಿರುತ್ತದೆಂದು ವಿವರಿಸಿದರು. ಈ ಜಾಡಿನ ಬಗ್ಗೆ ಚಂದ್ರಶೇಖರ್ ಅವರಿಗೆ ತೃಪ್ತಿ ಇರಲಿಲ್ಲ. ಅವರು ಹೊಸ ಹಾದಿ ಹಿಡಿದರು. ಚಂದ್ರಶೇಖರ್ ಮಾಡಿದ್ದೇನು?

ನಿಮಗೆ ತಿಳಿದಿದೆ, ಪರಮಾಣುವಿನ ಬೀಜ ಕೇಂದ್ರದ ಸುತ್ತ ಎಲೆಕ್ಟ್ರಾನುಗಳು ನಿರ್ದಿಷ್ಟ ದೂರದ ಕಕ್ಷೆಯಲ್ಲಿ ಪರಿಭ್ರಮಿಸುತ್ತವೆ. ಪ್ರತಿಯೊಂದು ಕಕ್ಷೆಯೂ ಶಕ್ತಿಯ ಮಟ್ಟಗಳು ಅಥವಾ ಮೆಟ್ಟಿಲುಗಳು. ಯಾವುದೇ ಎರಡು ಎಲೆಕ್ಟ್ರಾನುಗಳು ಒಂದೇ ಶಕ್ತಿ ಮಟ್ಟದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ ಚಿತ್ರಮಂದಿರದಲ್ಲಿ ಪ್ರತಿಯೊಬ್ಬ ಪ್ರೇಕ್ಷಕ ಪ್ರತ್ಯೇಕ ಕುರ್ಚಿಯಲ್ಲಿ ಆಸೀನನಾಗಬೇಕೆಂಬ ನಿಬಂಧನೆ ಇರುವಂತೆ. ಇಂಥ ನಿಯಮವನ್ನು ಸೈದ್ಧಾಂತಿಕವಾಗಿ ರೂಪಿಸಿದ್ದು ಆಸ್ಟ್ರಿಯಾದ ಭೌತ ವಿಜ್ಞಾನಿ ವೂಲ್ಫ್ ಗಾಂಗ್ ಪೌಲಿ (೧೯೦೦ ೧೯೫೮), ೧೯೨೫.ರಲ್ಲಿ. ಇದುವೇ ಪೌಲಿಯ ಬಹಿಷ್ಕರಣ ತತ್ವ.

ದ್ರವ್ಯಕ್ಕೆ ನಾಲ್ಕು ಸ್ಥಿತಿಗಳಿವೆ. ಘನ, ದ್ರವ, ಅನಿಲ ಮತ್ತು ಪ್ಲಾಸ್ಮಾ. ಪರಮಾಣುಗಳ ನಿಬಿಡತೆ ಹೇಗಿರುತ್ತದೆನ್ನುವುದರ ಮೇಲೆ ದ್ರವ್ಯ ಈ ಸ್ಥಿತಿಗಳನ್ನು ಕಾಣುತ್ತದೆ. ಘನ ಸ್ಥಿತಿಯಲ್ಲಿ ಪರಮಾಣುಗಳು ಒತ್ತೊತ್ತಾಗಿ ಅಳ್ಳಕವಾಗಿದ್ದರೆ, ದ್ರವದಲ್ಲಿ ಸಾಕಷ್ಟು ಸ್ವತಂತ್ರವಾಗಿರುತ್ತವೆ. ಇನ್ನು ಅನಿಲದಲ್ಲಾದರೋ ಸರ್ವ ಸ್ವತಂತ್ರ. ಇನ್ನು ಪ್ಲಾಸ್ಮದಲ್ಲಿ ಪರಮಾಣುವಿನ ಸುತ್ತ ಬಂದಿಯಾಗಿರುವ ಎಲೆಕ್ಟ್ರಾನುಗಳು ಬಿಡುಗಡೆಗಡೆಗೊಂಡು ಧನ ವಿದ್ಯುದಂಶ ಉಳ್ಳ ಪರಮಾಣು ಮತ್ತು ಋಣ ವಿದ್ಯುದಾವಿಷ್ಟ ಎಲೆಕ್ಟ್ರಾನುಗಳಿರುವ ಆಯಾನುಗಳದ್ದೇ ಬಾಹುಳ್ಯ. ಎಲೆಕ್ಟ್ರಾನುಗಳು ಪರಮಾಣುಗಳಿಂದ ತಪ್ಪಿಸಿಕೊಂಡು ಸ್ವತಂತ್ರವಾಗಿರುತ್ತವೆ ಹಗ್ಗ ಕಡಿದುಕೊಂಡು ಓಡುವ ಕರುಗಳ ಹಾಗೆ. ಸಾಮಾನ್ಯ ಒತ್ತಡದ ಸೂರ್ಯನಂಥ ನಕ್ಷತ್ರಗಳಲ್ಲಿ ದ್ರವ್ಯ ಇಂಥ ಪ್ಲಾಸ್ಮಾ ಸ್ಥಿತಿಯಲ್ಲಿರುತ್ತದೆ.

ಆದರೆ ಶ್ವೇತಕುಬ್ಜ ಅಸಾಮಾನ್ಯ ನಕ್ಷತ್ರ. ಅಲ್ಲಿ ಎಲೆಕ್ಟ್ರಾನುಗಳು ಸರಿ ಸುಮಾರು ಬೆಳಕಿನ ವೇಗದಲ್ಲಿ (.C, ಇಲ್ಲಿ C ಬೆಳಕಿನ ಸೂಚಕ) ಚಲಿಸುತ್ತಿರುತ್ತವೆ. ಹಾಗಾಗಿ ಇವುಗಳ ವಿವರಣೆಗೆ ಸಾಪೇಕ್ಷತಾ ಸಿದ್ಧಾಂತ ಬೇಕಾಗುತ್ತದೆ. ಸಾಮಾನ್ಯ ಒತ್ತಡದಲ್ಲಿ ಪೌಲಿಯ ಬಹಿಷ್ಕರಣ ತತ್ವವನ್ನು ಅನೂಚಾನವಾಗಿ ಅನುಸರಿಸುವ ಎಲೆಕ್ಟ್ರಾನುಗಳ ಮೇಲೆ ಅದೆಂಥ ಒತ್ತಡ ಹೇರಲ್ಪಡುತ್ತದೆಂದರೆ, ಒಂದೇ ಶಕ್ತಿ ಮಟ್ಟದಲ್ಲಿ ಹಲವು ಎಲೆಕ್ಟ್ರಾನುಗಳು ತುಂಬಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅರ್ಥಾತ್ ಪೌಲಿಯ ಬಹಿಷ್ಕರಣ ತತ್ವವೇ ಧಿಕ್ಕರಿಸಲ್ಪಟ್ಟ ಸ್ಥಿತಿ. ದ್ರವ್ಯದ ಇಂಥ ಸ್ಥಿತಿಯನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಸಾಪೇಕ್ಷಾತಾತ್ಮಕ ವಿಕೃತತ್ವ’ (relativistc degeneracy) ಎನ್ನುವುದುಂಟು. ಐನ್‌ಸ್ಟೈನರ ಸಾಪೇಕ್ಷತಾ ಸಿದ್ದಾಂತ ಮತ್ತು ವರ್ತಮಾನದ ಕ್ವಾಂಟಂ ಸಿದ್ದಾಂತವನ್ನು ಬಳಸಿಕೊಂಡು, ಹೇಗೆ ಶ್ವೇತಕುಬ್ಜದ ದ್ರವ್ಯರಾಶಿ ಸೂರ್ಯ ರಾಶಿಯ ೧.೪ ಪಟ್ಟು ಅಥವಾ ಹೆಚ್ಚಿಗೆ ಇದ್ದದ್ದಾದರೆ ಅದು ಮುಂದಿನ ಹಂತಗಳನ್ನು ಕಾಣುತ್ತದೆಂದು ಚಂದ್ರಶೇಖರ್ ವಿವರಿಸಿದರು. ಚಂದ್ರ ಅವರ ಉಪನ್ಯಾಸದ ವೈಖರಿಯೇ ಹಾಗೆ ಎಲ್ಲವೂ ನೇರ, ಸುಸ್ಪಷ್ಟ. ಆ ತನಕ ಎಡಿಂಗ್ಟನ್ ಏನು ಹೇಳಿದ್ದರೋ ಅದನ್ನು ಚಂದ್ರಶೇಖರ್ ನಯವಾಗಿ ಧಿಕ್ಕರಿಸಿದ್ದರು.

ಇದೀಗ ಬಂತು ಎಡಿಂಗ್ಟನ್ ಸರದಿ. ೫೫ ವರ್ಷದ ಧೀಮಂತ ಖಗೋಳ ವಿಜ್ಞಾನಿ ತಮ್ಮ ಪ್ರಬಂಧವನ್ನು ಮಂಡಿಸುವ ಬದಲಿಗೆ ಬೇರೆಯೇ ಜಾಡು ತುಳಿದರು. ಎಡಿಂಗ್ಟನ್ ಪ್ರಾರಂಭಿಸಿದರು

ನಾನು ಈ ಸಭೆಯಿಂದ ಜೀವ ಸಹಿತ ಪಾರಾಗುತ್ತೇನೋ ಇಲ್ಲವೋ ಹೇಳಲಾರೆ. ಆದರೆ ನನ್ನ ಲೇಖನದ ಸಾರವೆಂದರೆ ಸಾಪೇಕ್ಷತಾ ವಿಕೃತತ್ವ ಎನ್ನುವುದೇ ಇಲ್ಲ ಎನ್ನುವುದು. ಡಾ.ಚಂದ್ರಶೇಖರ್ ನಿರ್ದಿಷ್ಟ ರಾಶಿ ಪರಿಮಿತಿಯನ್ನು ಮೀರಿದ ನಕ್ಷತ್ರಗಳೆಂದೂ ತಣಿಯಲಾರವು ಎಂದು ಹೇಳಿದ್ದಾರೆ. ಅವು ವಿಕಿರಣವನ್ನು ಬೀರುತ್ತ ಹೋಗುತ್ತವೆ ಮತ್ತು ಉಷ್ಣತೆಯನ್ನು ಒಂದೇ ಪ್ರಮಾಣದಲ್ಲಿರಿಸಿಕೊಳ್ಳಲು ಕುಗ್ಗುತ್ತ ಕುಗ್ಗುತ್ತ ಹೋಗುತ್ತವೆ. ನಕ್ಷತ್ರದ ತ್ರಿಜ್ಯ ಕೆಲವು ಕಿಲೊಮೀಟರಿಗೆ ಸಂಕೋಚಿಸಿದಾಗ ಗುರುತ್ವಬಲ ಅದೆಷ್ಟಿರುತ್ತದೆಂದರೆ ವಿಕಿರಣವೂ ನಕ್ಷತ್ರದಿಂದ ಹೊರ ಸೂಸದು. ನಕ್ಷತ್ರದ ಚರಮ ಶಾಂತಿಯ ಸ್ಥಿತಿ ಇದು. ಡಾ.ಚಂದ್ರಶೇಖರ್ ಈ ಫಲಿತಾಂಶವನ್ನು ಹಿಂದೆಯೇ ಪಡೆದಿದ್ದರು ಮತ್ತು ಲೇಖನದಲ್ಲಿ ಅದನ್ನೇ ತುರುಕಿದ್ದಾರೆ. ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದಾಗ ಸಾಪೇಕ್ಷತಾ ವಿಕೃತತ್ವದ ಸೂತ್ರವನ್ನು ಅಸಂಬದ್ಧವಾಗಿ ಬಳಸಿದ್ದಾರೆಂದು ನನಗೆ ಮನವರಿಕೆಯಾಯಿತು. ಸೂರ್ಯನಿಗಿಂತ ರಾಶಿಯಲ್ಲಿ ಅಧಿಕ ರಾಶಿ ಇರುವ ಶ್ವೇತ ಕುಬ್ಜಗಳು ಮುಂದಿನ ಹಂತವನ್ನು ಕಾಣಬೇಕೆಂದೇನೂ ಇಲ್ಲ. ಅಲ್ಲಿ ಬೇರೆ ಹಲವು ಘಟನೆಗಳು ಸಂಭವಿಸಿ ನಕ್ಷತ್ರದ ಈ ಘೋರ ದುರಂತವನ್ನು ನಿಸರ್ಗ ತಪ್ಪಿಸುತ್ತದೆ೦ಬ ನಂಬಿಕೆ ನನಗಿದೆ. ಚಂದ್ರಶೇಖರ್ ಅವರು ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಸಿದ್ಧಾಂತವನ್ನು ಸಮನ್ವೀಕರಿಸಿದ್ದು ಅಸಂಗತ ಮತ್ತು ಅಬದ್ಧ. ಇದೊಂದು ನೀತಿ ಬಾಹಿರ ಮದುವೆ. ಇಂಥ ಅನೀತಿಯಿಂದ ಹುಟ್ಟಿದ ಗಣಿತವನ್ನು ನಂಬುವುದು ಕಷ್ಟ

ಚಂದ್ರರ ಒಟ್ಟು ಸಂಶೋಧನೆ ಗಣಿತೀಯವಾಗಿ ಎಷ್ಟೇ ಸರಿ ಮತ್ತು ಸುಂದರವಾಗಿದ್ದರೂ ಅದು ನಿಷ್ಪ್ರಯೋಜಕವೆಂದು ಎಡಿಂಗ್ಟನ್ ಗೇಲಿ ಮಾಡಿದರು. ಸುಮಾರು ಅರ್ದ ಗಂಟೆಗಳ ಕಾಲ ಓತಪ್ರೋತವಾಗಿ ಚಂದ್ರರನ್ನು ಹಿಗ್ಗಾ ಮುಗ್ಗ ಟೀಕೆ ಮಾಡಿದರು. ಚಂದ್ರ ಪೂರ್ಣ ಹತಾಶರಾದರು. ನೆರೆದ ಹೆಚ್ಚಿನ ಮಂದಿ ಚಂದ್ರಶೇಖರರ ಸಿದ್ಧಾಂತ ದೋಷಪೂರಿತವೆಂದು ತಿಳಿದದ್ದು ಸಹಜವೇ ಆಗಿತ್ತು ಏಕೆಂದರೆ ಎಡಿಂಗ್ಟನ್ ಪ್ರಭಾವ ಆ ದಿವಸಗಳಲ್ಲಿ ಅಷ್ಟಿತ್ತು.

ಆ ದಿನ ಚಂದ್ರಶೇಖರ್ ಮನೋಸ್ಥಿತಿ ಹೇಗಿದ್ದಿರಬಹುದು? ಅವರದೇ ಮಾತುಗಳಲ್ಲಿ

ಅತ್ಯಂತ ಪ್ರಾಮುಖ್ಯವಾದದ್ದನ್ನು ನಾನು ಕಂಡುಹಿಡಿದಿದ್ದೇನೆಂದು ಘೋಷಿಸುತ್ತಾರೆಂಬ ನಂಬುಗೆಯಿಂದ ನಾನು ಸಭೆಗೆ ಹೋಗಿದ್ದೆ. ಅದರ ಬದಲಿಗೆ, ಎಡಿಂಗ್ಟನ್ ನನ್ನನ್ನು ಮೂರ್ಖನನ್ನಾಗಿಸಿದರು. ನಾನು ಸಂಪೂರ್ಣ ಹತಾಶನಾದೆ. ಜೀವನೋಪಾಯಕ್ಕಾಗಿ ಆರಿಸಿಕೊಂಡದ್ದನ್ನು ಮುಂದವರಿಸುವ ಬಗ್ಗೆಯೇ ನನಗೆ ಸಂಶಯ ಬಂದಿತ್ತು. ಆ ದಿನ ತಡ ರಾತ್ರೆ ಕ್ಯಾಂಬ್ರಿಡ್ಜಿಗೆ ಬಂದೆ. ಬಹುಶ: ರಾತ್ರೆ ಒಂದು ಗಂಟೆಯಾಗಿತ್ತು. ನನಗಿನ್ನೂ ನೆನಪಿದೆ ಹಜಾರದಲ್ಲಿ ಅಗ್ಗಿಷ್ಟಿಕೆ ಉರಿಯುತ್ತಿತ್ತು. ಅದರೆದುರು ನಾನು ನಿಂತಿದ್ದೆ. ಮತ್ತೆ ಮತ್ತೆ ನಾನು ನನ್ನನ್ನಷ್ಟಕ್ಕೆ ಆಲೋಚಿಸುತ್ತಿದ್ದೆ ಪ್ರಪಂಚ ಕೊನೆಗಾಣುವುದೆಂದರೆ ಹೀಗೆ ಮಹಾ ಅಸ್ಫೋಟನೆಯಲ್ಲಲ್ಲ, ನಿಧಾನವಾಗಿ ನಂದುವುದರಲ್ಲಿ’”
ಆದರೆ ಚಂದ್ರರಿಗೆ ತಮ್ಮ ಗಣಿತ ಮತ್ತು ಭೌತ ವಿಜ್ಞಾನದ ತರ್ಕದಲ್ಲಿ ಎಳ್ಳಷ್ಟೂ ಸಂಶಯವಿರಲಿಲ್ಲ. ಮರುದಿನವೇ ಲೇಖನವನ್ನು ನೀಲ್ಸ್ ಬೋರ್ (೧೮೮೫೧೯೬೨), ಪಾಲ್‌ಡಿರಾಕ್ (೧೯೦೨೧೯೮೪), ರೊಸೆನ್‌ಫೆಲ್ಡ್ (೧೯೦೪೧೯೭೪) ಮೊದಲಾದ ಘನ ಭೌತ ವಿಜ್ಞಾನಿಗಳ ಅವಗಾಹನೆಗೆ ಕಳುಹಿಸಿದರು. ಅವರೆಲ್ಲರೂ ಸುಂದರ ಗಣಿತದಲ್ಲಿ ನಿಸರ್ಗದ ಸತ್ಯವನ್ನು ಕಂಡರು; ಸಿದ್ಧಾಂತವನ್ನು ಪುರಸ್ಕರಿಸಿದರು
ಮುಂದೊಂದು ದಿನ ಚಂದ್ರಶೇಖರ್ ಅವರನ್ನು ಕೇಳಿದರಂತೆ ಓಂದು ವೇಳೆ ಎಡಿಂಗ್ಟನ್ ಚಂದ್ರ ಅವರ ಹೊಸ ಸಿದ್ದಾಂತವನ್ನು ರಾಯಲ್ ಸೊಸೈಟಿಯ ಅಂದಿನ ಸಭೆಯಲ್ಲಿ ಒಪ್ಪಿದ್ದರೆ ಏನಾಗುತ್ತಿತ್ತು?” ಚಂದ್ರ ಅತ್ಯಂತ ಮಾರ್ಮಿಕವಾಗಿ ಉತ್ತರಿಸಿದರು.
ಪ್ರಾಯಶ: ನಾನು ಖಗೋಲ ವಿಜ್ಞಾನದಲ್ಲಿ ಅಂದೇ ಸುಪ್ರಸಿದ್ದನಾಗುತ್ತಿದ್ದೆ ಮತ್ತು ನನ್ನ ವ್ಯಕ್ತಿತ್ವಕ್ಕೆ ವರ್ಣರಂಜಿತ ಆಯಾಮ ಬರುತ್ತಿತ್ತು. ಈ ಹಟಾತ್ತನೆ ಪ್ರಸಿದ್ದಿಗೆ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆಂದು ಊಹಿಸಲಾರೆ. ಆದರೆ ಒಂದಂತೂ ಸತ್ಯ ಇಂಥ ಪ್ರಸಿದ್ದಿ ಪಡೆದ ಹಲವರು ಮತ್ತಿನ ದಿನಗಳಲ್ಲಿ ಯಾವ ಸಾಧನೆ ಮಾಡದೇ ಉಳಿದದ್ದುಂಟು
ಎಡಿಂಗ್ಟನ್ ಅವರೊಂದಿಗಿನ ವಿವಾದ ಚಂದ್ರರ ಮೃದು ಮನಸ್ಸಿನ ಮೇಲೆ ತೀವ್ರ ಘಾಸಿ ಒಡ್ಡಿತು. ಅವರು ಇಂಗ್ಲೆಂಡನ್ನು ತ್ಯಜಿಸುವ ನಿರ್ಧಾರಕ್ಕೆ ಬಂದರು. ಭಾರತಕ್ಕೆ ಮರಳಿ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಸೇರಲು ಆಲೋಚಿಸುತ್ತಿದ್ದಾಗ ಅವರಿಗೆ ಅಮೇರಿಕದ ಶಿಕಾಗೋ ವಿಶ್ವವಿದ್ಯಾಲಯದಿಂದ ಪ್ರಾದ್ಯಾಪಕ ಹುದ್ದೆಗೆ ಕರೆ ಬಂತು. ಚಂದ್ರ ಹಾರಿಯೇ ಬಿಟ್ಟರು ಹಲವಾರು ಹೊಸ ನಿರೀಕ್ಷೆಗಳೊಂದಿಗೆ ಅಮೇರಿಕಕ್ಕೆ.
.
ಚಂದ್ರಶೇಖರ್ ತಮ್ಮ ಹೊಸ ಪರಿಕಲ್ಪನೆಯನ್ನೆಲ್ಲವನ್ನು ಬಟ್ಟಿ ಇಳಿಸಿ Stellar structure of Stars – ಎಂಬ ಗ್ರಂಥವನ್ನು ೧೯೩೯ ರಲ್ಲಿ ಪ್ರಕಟಿಸಿದರು. ನಂತರ ಚಂದ್ರಶೇಖರ್ ಬೇರೆಯೇ ಕ್ಷೇತ್ರವನ್ನು ಆಯ್ದುಕೊಂಡರು. ಈ ಬಾರಿ ಅವರು ಅವರು ನಕ್ಷತ್ರಗಳ ಚಲನೆ ಬಗ್ಗೆ ಸಂಶೋಧನೆಗೆ ತೊಡಗಿದರು. ೧೯೪೯ ೪೩ ರ ಅವಧಿಯಲ್ಲಿ ಅವರ ಸಂಶೋಧನ ಲೇಖನಗಳು ನಕ್ಷತ್ರಗಳ ಚಲನೆಯ ಬಗ್ಗೆ ನೂತನ ಕಾಣ್ಕೆ ಒದಗಿಸಿದುವು. ೧೯೪೩ ರಲ್ಲಿ ಇನ್ನೊಂದು ಗ್ರಂಥವನ್ನು ರಚಿಸಿದರು. ಅದರ ಹೆಸರು – Stellar Dynamics. ಆ ನಂತರ ಅವರು ಇನ್ನೊಂದು ಹೊಸ ಕ್ಷೇತ್ರವನ್ನು ಆಯ್ದುಕೊಂಡರು. ಈ ಬಾರಿ ನಕ್ಷತ್ರಗಳಲ್ಲಿ ವಿಕಿರಣ ಯಾವ ಬಗೆಯಲ್ಲಿ ಪಸರಿಸುತ್ತದೆನ್ನುವ ಬಗ್ಗೆ ಸಂಶೋಧನೆಯಲ್ಲಿ ನಿರತರಾದರು. ಇದರ ಫಲವೇ ಅವರ ೧೯೫೦ ರಲ್ಲಿ ಪ್ರಕಟವಾದ Radiative Transfer ಎಂಬ ಗ್ರಂಥ
ಚಂದ್ರ ಅವರ ರೀತಿಯೇ ಹಾಗಿತ್ತು. ಯಾವುದೇ ಕ್ಷೇತ್ರವನ್ನು ಅವರು ಅಧ್ಯಯನಕ್ಕೆ ಆಯ್ದುಕೊಂಡರೂ ಅದರಲ್ಲಿ ತಲಸ್ಪರ್ಶೀ ಅಧ್ಯಯನ ಮಾಡಿ ಒಂದು ಉದ್ಗ್ರಂಥವನ್ನು ರಚಿಸಿ ಆ ಕ್ಷೇತ್ರವನ್ನು ಶ್ರೀಮಂತ ಗೊಳಿಸಿ ಬೇರೊಂದು ಕ್ಷೇತ್ರಕ್ಕೆ ಜಿಗಿಯುತ್ತಿದ್ದರು. Truth and Beauty ಎಂಬ ಪುಸ್ತಕದಲ್ಲಿ ಅವರೇ ಹೇಳುವಂತೆ
ಒಬ್ಬ ಶಿಲ್ಪಿ ಪರಿಪೂರ್ಣ ಮೂರ್ತಿಯನ್ನು ಕೆಡೆಯಬೇಕೇ ಹೊರತು ಅಲ್ಪ ಸ್ವಲ್ಪ ಕೆತ್ತುವುದಲ್ಲ. ಪರಿಪೂರ್ಣತೆಗೆ ಚಂದ್ರ ಅಪಾರ ಪ್ರಾಮುಖ್ಯತೆ ಮತ್ತು ಗಮನ ಕೊಡುತ್ತಿದ್ದರು
ಚಂದ್ರ ೧೯೩೬ ರಲ್ಲಿ ಭಾರತಕ್ಕೆ ಬಂದಾಗ ಇವರ ವಿವಾಹ ಲಲಿತಾ ದೊರೆಸ್ವಾಮಿಯವರೊಂದಿಗೆ ಸರಳವಾಗಿ ನಡೆಯಿತು. ಪ್ರಸಿಡೆನ್ಸಿ ಕಾಲೇಜಿನಲ್ಲಿ ಚಂದ್ರರಿಗಿಂತ ಒಂದು ವರ್ಷ ಕೆಳಗಿನ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಲಲಿತಾ ಅವರ ಮನೆ ಇದ್ದುದು ಚಂದ್ರರ ಮನೆಯಾದ ಚಂದ್ರ ವಿಲಾಸದ ಹತ್ತಿರವೇ. ಬಾಲ್ಯದ ಪರಿಚಯ ಮುಂದೆ ಅನುರಕ್ತಿಗೆ ಬದಲಾಯಿತು. ಇವರಿಬ್ಬರದು ಮಧುರ, ಅನುರೂಪ ದಾಂಪತ್ಯ
ಬಂತು ನೊಬೆಲ್

ಚಂದ್ರ ಅವರನ್ನು ನಿಧಾನವಾಗಿ ಪ್ರಶಸ್ತಿಗಳು ಅರಸಿಕೊಂಡು ಬಂದುವು. ರಾಯಲ್ ಸೊಸೈಟಿಯ ಆಜೀವ ಸದಸ್ಯತ್ವ (೧೯೪೪), ಪ್ರತಿಷ್ಟಿತ ಬ್ರೂಸ್ ಪದಕ (೧೯೫೨), ಇಂಗ್ಲೆಂಡಿನ ರಾಯಲ್ ಅಸ್ತ್ರಾನಾಮಿಕಲ್ ಸೊಸೈಟಿಯ ಚಿನ್ನದ ಪದಕ (೧೯೫೨), ಅಮೇರಿಕದ ರಂಫರ್ಡ್ ಪ್ರಶಸ್ತಿ (೧೯೫೭), ಭಾರತ ಸರಕಾರದಿಂದ ಪದ್ಮ ವಿಭೂಷಣ ಪ್ರಶಸ್ತಿ (೧೯೬೮) …. ಕೊನೆಗೂ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು!.

ಸಿವಿರಾಮನ್ ೧೯೪೫ರಲ್ಲೇ ಚಂದ್ರಶೇಖರ್ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಸೂಚಿಸಿದಾಗ ಖಗೋಲವಿಜ್ಞಾನಕ್ಕೆ ನೊಬೆಲ್ ಪ್ರಶಸ್ತಿ ಬರಲಾರದೆಂದು ರಾಮನ್ ಅವರಿಗೆ ಸ್ವಯಂ ಚಂದ್ರಶೇಖರ್ ಪತ್ರ ಬರೆದರು. ಅದು ನಿಜವಾಯಿತು ಕೂಡ. ನೊಬೆಲ್ ಬಂದದ್ದು ಬರೋಬ್ಬರಿ ಐವತ್ತು ವರ್ಷಗಳ ಬಳಿಕ, ಅಂದರೆ ೧೯೮೫ರಲ್ಲಿ ಚಂದ್ರಶೇಖರ್ ಮತ್ತು ಅಮೇರಿಕದ ವಿಲ್ಲಿ ಫೌಲರ್ ಜಂಟಿಯಾಗಿ ನೊಬೆಲ್ ಪ್ರಶಸ್ತಿ ಪಡೆದರು.

ಈ ಅವಧಿಯಲ್ಲಿ ಚಂದ್ರಶೇಖರ್ ಪರಿಮಿತಿಯನ್ನು ಮೀರುವ ಶ್ವೇತಕುಬ್ಜಗಳು ಏನಾಗುತ್ತವೆಂಬ ಪ್ರಶ್ನೆಯನ್ನು ಅರಸುತ್ತ ಹೋದ ಖಗೋಳವಿಜ್ಞಾನಿಗಳಿಗೆ ನಕ್ಷತ್ರಗಳ ಒಟ್ಟು ವಿಕಾಸದ ಕಥೆ ಅನಾವರಣಗೊಂಡಿತು. ಅದು ಹೀಗೆ ಸಾಗುತ್ತದೆ :

ಚಂದ್ರಶೇಖರ್ ಪರಿಮಿತಿಯನ್ನು ಮೀರಿದ ಶ್ವೇತಕುಬ್ಜ ಮುಂದಿನ ಹಂತಗಳಲ್ಲಿ ಮಹಾಸ್ಫೋಟಕ್ಕೆ ಒಳಗಾಗುತ್ತದೆ. ಇದುವೇ ಸೂಪರ್ನೋವಾ. ಸೂಪರ್ನೋವಾ ಅಸ್ಫೋಟನೆಯಲ್ಲಿ ಉಳಿದ ತಿರುಳು ನ್ಯೂಟ್ರಾನುಗಳ ಮುದ್ದೆ. ಎ೦ದೇ ಈ ನಕ್ಷತ್ರಕ್ಕೆ ನ್ಯೂಟ್ರ್ರಾನ್ ನಕ್ಷತ್ರವೆ೦ದು ಹೆಸರು. ಕೇವಲ ೧೫ ರಿ೦ದ ೨೦ ಕಿಮೀ ವ್ಯಾಸದ ಈ ಪುಟ್ಟ ನಕ್ಷತ್ರದ್ದು ಉಹಾತೀತ ಸಾ೦ದ್ರತೆ. ಇದು ಬುಗರಿಯ೦ತೆ ಗಿರ ಗಿರನೆ ಸುತ್ತುತ್ತ ಕಡಿಮೆ ಅಲೆಯುದ್ದದ ರೇಡಿಯೋ ಅಲೆಗಳನ್ನು ಉತ್ಸರ್ಜಿಸುತ್ತದೆ ಹೊತ್ತಿ ನ೦ದುವ ಟಾರ್ಚ್ ಲೈಟಿನ೦ತೆ. ಹಾಗಾಗಿ ಇವುಗಳನ್ನು ಪಲ್ಸಾರುಗಳೆ೦ದು ಕರೆಯುತ್ತಾರೆ. ನ್ಯೂಟ್ರಾನ್ ನಕ್ಷತ್ರ ನಕ್ಷತ್ರವೊ೦ದರ ಅ೦ತಿಮ ಸ್ಠಿತಿಯೇ ? ಖ೦ಡಿತವಾಗಿಯೂ ಅಲ್ಲ. ನ್ಯೂಟ್ರಾನ್ ನಕ್ಷತ್ರದ ಸಾ೦ದ್ರತೆ ಎಷ್ಟಿರುತ್ತದೆ೦ದರೆ, ಅದರ ವಿಮೋಚನ ವೇಗ ಭೂಮಿಯ ವಿಮೋಚನ ವೇಗಕ್ಕಿ೦ತ ಲಕ್ಷಪಟ್ಟು ಜಾಸ್ತಿ.

ನ್ಯೂಟ್ರಾನ್ ನಕ್ಷತ್ರ ಮತ್ತಷ್ಟು ಗುರುತ್ವ ಕುಸಿತಕ್ಕೊಳಗಾದಾಗ ಅದರ ಗಾತ್ರ ಇನ್ನೂ ಕಿರಿದಾಗುತ್ತದೆ. ವಿಮೋಚನವೇಗ ಏರುತ್ತದೆ. ವಿಮೋಚನ ವೇಗ ಬೆಳಕಿನ ವೇಗವನ್ನು ಮೀರಿದಾಗ , ಅ೦ದರೆ ಸೆಕು೦ಡಿಗೆ ಮೂರು ಲಕ್ಷ ಕಿಮಿಟರಿಗಿ೦ತ ಹೆಚ್ಚಾದಾಗ, ಆ ನಕ್ಷತ್ರ ಮಾಯವಾಗುತ್ತದೆ. ಅದು ಮತ್ತೆ೦ದೂ ಗೋಚರಿಸದು. ಏಕೆ೦ದರೆ ಅಲ್ಲಿ೦ದ ಬೆಳಕೂ ಸೇರಿದ೦ತೆ ಯಾವ ಬಗೆಯ ವಿಕಿರಣವೂ ಹೊರಬರದು. ಇದು ಎಲ್ಲವನ್ನೂ ಗುಳು೦ಕರಿಸುತ್ತದೆ, ಆದರೆ ಯಾವುದನ್ನೂ ಹೊರಬಿಡದು. ಇಂಥ ಅನೂಹ್ಯ ಕಾಯಕ್ಕೆ ಕಪ್ಪುರಂದ್ರ ಅಥವಾ ಕೃಷ್ಣ ವಿವರ (Black Hole) ಎಂದು ಹೆಸರು.
ವರ್ತಮಾನದ ಖಗೋಳ ವಿಜ್ಞಾನ ಹೇಳುವ೦ತೆ ನಕ್ಷತ್ರವೊ೦ದರ ಅ೦ತಿಮ ಸ್ಥಿತಿಯಿದು. ಕೃಷ್ಣ ವಿವರಗಳ ಅಸ್ತಿತ್ವವನ್ನು ಪ್ರಾಯೋಗಿಕವಾಗಿ ಸ್ಥಿರೀಕರಿಸಲಾಗಿದೆ. ನಮ್ಮ ಬ್ರಹ್ಮಾಂಡವೂ ಸೇರಿದ ಹಾಗೆ ಹೆಚ್ಚಿನ ಬ್ರಹ್ಮಾಂಡಗಳಲ್ಲಿ ಸೂರ್ಯನ ದ್ರವ್ಯರಾಶಿಗಿಂತ ನೂರಾರು ಲಕ್ಷಪಟ್ಟು ಜಾಸ್ತಿ ದ್ರವ್ಯರಾಶಿ ಇರುವ ದೈತ್ಯ ಕಪ್ಪುರಂದ್ರಗಳು ಇವೆ ಮತ್ತು ಅವು ಒಟ್ಟು ಬ್ರಹ್ಮಾಂಡದ ಗಾತ್ರ, ಆಕಾರ, ಶಕ್ತಿ ಉತ್ಪಾದನೆಯನ್ನು ನಿಯಂತ್ರಿಸುತ್ತಿವೆ ಎನ್ನುವುದನ್ನು ಆದಹುನಿಕ ಖಗೋಳ ವಿಜ್ಞಾನ ಒಪ್ಪಿಕೊಂಡಿದೆ. ಈ ಬಗ್ಗೆ ಹಲವು ಸಂಶೋಧನ ಲೇಖನಗಳನ್ನು ಪ್ರಕಟಿಸಿದ ಚಂದ್ರಶೇಖರ್ ಮತ್ತೊಂದು ಉದ್ಗ್ರಂಥವೊಂದನ್ನು ರಚಿಸಿದರು – The Mathematical Theory of Black Holes – ಕೃಷ್ಣ ವಿವರಗಳ ಗಣಿತ ಸಿದ್ಧಾಂತ.

ಶಿಕಾಗೋ ವಿಶ್ವವಿದ್ಯಾಲಯ ಪ್ರಕಟಿಸುತ್ತಿದ್ದ ಚಿಕ್ಕ ಸಂಶೋಧನ ಪತ್ರಿಕೆ Astrophysical Journalನ ಚಂದ್ರಶೇಖರ್ ಸಂಪಾದಕತ್ವದ ಹೊಣೆಗಾರಿಕೆ ಬಂತು ಚಂದ್ರಶೇಖರ್ ಪಾಲಿಗೆ (೧೯೫೭). ಮುಂದಿನ ಇಪ್ಪತ್ತು ವರ್ಷಗಳ ಕಾಲ ಈ ಪತ್ರಿಕೆಯನ್ನು ಮುನ್ನೆಡೆಸಿ ಖಗೋಳವಿಜ್ಞಾನದ ಮುಂಚೂಣಿಯ ಸಂಶೋಧನ ಪತ್ರಿಕೆಯನ್ನಾಗಿ ರೂಪಿಸಿದರು.

ಚಂದ್ರಶೇಖರ್ ಅತ್ಯುತ್ತಮ ಪ್ರಾದ್ಯಾಪಕರಾಗಿದ್ದರು. ಶಿಸ್ತು, ಕಾಲ ನಿಷ್ಠೆ ಅವರ ಜೀವನದ ರೀತಿಯಾಗಿತ್ತು. ಚಂದ್ರ ಅವರ ಶಿಷ್ಯಂದಿರು ಕೂಡ ಉದ್ದಾಮ ಗಣಿತ ಮತ್ತು ಭೌತ ವಿಜ್ಞಾನಿಗಳಾದದ್ದು ಸಹಜ. ಯೇರ್ಕ್ಸ್ ವಿಶ್ವವಿದ್ಯಾಲಯದಲ್ಲಿ ಚಂದ್ರಶೇಖರ್ ತರಗತಿಯನ್ನು ಮಾಡುತ್ತಿದ್ದರಂತೆ. ವಾರದಲ್ಲೊಂದು ದಿನ ಚಂದ್ರ ಅವರ ಪಾಠ. ಇಬ್ಬರು ವಿದ್ಯಾರ್ಥಿಗಳಿಗಾಗಿ ನೂರು ಕಿಮೀ ದೂರದಿಂದ ತಮ್ಮದೇ ಕಾರಿನಲ್ಲಿ ಅವರು ಬರುತ್ತಿದ್ದರು. ಶ್ರಮ ವ್ಯರ್ಥವಾಗಲಿಲ್ಲವೆಂದು ಸ್ವಯಂ ಚಂದ್ರ ಹೇಳಿಕೊಂಡರು. ಏಕೆಂದರೆ ಶಿಷ್ಯರಾದ ಲೀ ಮತ್ತು ಯಾಂಗ್ ಅವರಿಗೆ ೧೯೫೭ ರಲ್ಲಿ ನೊಬೆಲ್ ಪ್ರಶಸ್ತಿ ಬ೦ತು.

ಅರುವತ್ತೈದು ವರ್ಷಗಳ ಕಾಲ ಸಿದ್ಧಾಂತಿಕ ಖಭೌತ ವಿಜ್ಞಾನದಲ್ಲಿ ಸಂಶೋಧನಾ ನಿರತರಾದ ಚಂದ್ರಶೇಖರ್ ೧೯೯೫ ಅಗೋಸ್ತ್, ೨೧ರ ಮಧ್ಯ ರಾತ್ರೆ ಇನ್ನು ಬಾರದ ಲೋಕಕ್ಕೆ ತೆರಳಿದರು. ತೀರಿಹೋಗುವುದಕ್ಕೆ ಕೆಲವು ತಿಂಗಳುಗಳ ಹಿಂದೆ ಜನಸಾಮಾನ್ಯರಿಗೆ ನ್ಯೂಟನ್ನನ ಸೈದ್ಧಾಂತಿಕ ವಿವರಗಳನ್ನು ತಲುಪಿಸುವ ದೃಷ್ಟಿಯ ಮಹತ್ವದ ಕೃತಿಯೊಂದನ್ನು ಚಂದ್ರಶೇಖರ್ ರಚಿಸಿದ್ದು ವಿಜ್ಞಾನದ ಬಗ್ಗೆ ಅವರಿಗಿದ್ದ ಅನನ್ಯ ಬದ್ಧತೆಗೆ ಸಾಕ್ಷಿಯಾಗಿದೆ.

ಪರಿಪೂರ್ಣ ಚಂದ್ರ

ಚಂದ್ರ ಅವರ ಬಗ್ಗೆ ವಿಜ್ಞಾನ ಪ್ರಪಂಚದಲ್ಲಿತ್ತು ಪರಮ ಗೌರವ. ಹ್ಯಾನ್ಸ್ ಬೇಥ್ ಹೇಳಿದ್ದಾರೆ.

ಚಂದ್ರ ನಮ್ಮ ಕಾಲದ ಪರಮೋತ್ಕೃಷ್ಟ ಖಭೌತ ವಿಜ್ಞಾನಿ ಮತ್ತು ನನ್ನ ಸಂಪರ್ಕಕ್ಕೆ ಬಂದವರಲ್ಲಿ ಅತ್ಯಂತ ಸೌಹಾರ್ದದ ವ್ಯಕ್ತಿ. ನನಗೆ ಅವರ ಪರಿಚಯವಿದ್ದುದು ನನ್ನ ಭಾಗ್ಯ

ಅಮೇರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನ ಪ್ರಾದ್ಯಾಪಕ ಮಾರ್ಟಿನ್ ಸ್ಕ್ವಾಶ್ಚೈಲ್ಡ್ ಹೇಳುತ್ತಾರೆ.

ಎಲ್ಲ ಖಗೋಳ ವಿಜ್ಞಾನಿಗಳಲ್ಲಿ ಸಹಮತವಿದೆ ನಮ್ಮ ಕಾಲದ ಸರ್ವ ಶ್ರೇಷ್ಟ ಖಗೋಳ ವಿಜ್ಞಾನಿ. ವ್ಯಕ್ತಿಯಾಗಿ ಮತ್ತು ಆತ್ಮೀಯ ಸ್ನೇಹಿತನಾಗಿ ನಾನು ಅತ್ಯಂತ ಹೆಚ್ಚು ಪ್ರೀತಿಸಿದ ವ್ಯಕ್ತಿ ಇವರು

ಚಂದ್ರ ಅವರ ಶಿಷ್ಯ ಮತ್ತು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರಾದ್ಯಾಪಕರಾಗಿದ್ದ ನೋರ್ಮನ್ ಲೆಬೋವಿಟ್ಜ್ ಹೇಳುವಂತೆ

ಇವರು ಚಿಂತನಶೀಲರಲ್ಲಿ ಅಗ್ರಗಣ್ಯ. ವಿಜ್ಞಾನರಂಗದಲ್ಲಿ ದಣಿವಿರದ ಸಾಧಕ. ತಾನು ಆಯ್ಕೆ ಮಾಡಿಕೊಂಡ ಯಾವುದೇ ವಿಷಯದ ಬಗ್ಗೆ ಅದರ ತಲಸ್ಪರ್ಶೀ ಅಧ್ಯಯನ ಮಾಡುವುದೇ ಇವರ ಪಾಲಿನ ವಿನೋದವಾಗಿತ್ತು. ತಾನು ವಿಜ್ಞಾನದಿಂದ ದೂರ ಉಳಿಯುತ್ತೇನೆಂದು ಕೆಲವೊಮ್ಮೆ ಹೇಳಿದರೂ ಅವರಿಗೆ ಸಾಧ್ಯವಾಗಲಿಲ್ಲ ಏಕೆಂದರೆ ಹೊಸ ಹೊಸ ಸಮಸ್ಯೆಗಳು ಅವರನ್ನು ಆಕರ್ಷಿಸುತ್ತಿದ್ದುವು. ಕೊನೆಯ ತನಕವೂ ಪ್ರಖರ ಚಿಂತನೆಯಲ್ಲಿ ತಲ್ಲೀನರಾಗಿದ್ದುದು ಅದ್ಭುತ

ಖಗೋಲ ವಿಜ್ಞಾನಿ ಮಾರ್ಟಿನ್ ರೀಸ್ ಪ್ರಕಾರ

ಚಂದ್ರಶೇಖರ್ ನಮ್ಮ ಕಾಲದ ಪ್ರಖರವಾದ ಸೃಜನಶೀಲ ಪ್ರತಿಭೆ. ಐನ್‌ಸ್ಟೈನ್ ನಂತರ ಇವರಂತೆ ವಿಶ್ವದ ಬಗ್ಗೆ ಆಳ ಚಿಂತನೆ ನಡೆಸಿದವರು ಬೇರೊಬ್ಬರಿಲ್ಲ“.

ಭೌತ ವಿಜ್ಞಾನಿ ವಿಸ್ಕಾಫ್ ಹೇಳಿದ್ದಾರೆ

ಚಂದ್ರನ ಮೇಲಾದರೂ ಕಲೆಗಳಿವೆ. ಆದರೆ ಈ ಚಂದ್ರನ ವ್ಯಕ್ತಿತ್ವದಲ್ಲಿ ಒಂದಿನಿತಾದರೂ ಕಲೆ ಇರಲಿಲ್ಲ. ಪರಿಪೂರ್ಣ ಸುಸಂಸ್ಕೃತ, ಸಜ್ಜನ. ಚಂದ್ರ ಅವರಲ್ಲಿ ಟೀಕಿಸುವ ಒಂದೇ ಒಂದು ಗುಣವಿರಲಿಲ್ಲ. ಇತರರ ಬಗ್ಗೆ ಹೀಗೆ ಹೇಳುವಂತಿಲ್ಲ. ಒಂದೋ ಅವರು ದರ್ಪಿಗಳು, ಅಥವಾ ತಮ್ಮ ಸಹದ್ಯೋಗಿಗಳಿಗೆ ಅಪ್ರಿಯರು, ಅಥವಾ ವಿಜ್ಞಾನದಲ್ಲಿ ತೀರ ಸಾಮಾನ್ಯ ಮಟ್ಟದ ಕೊಡುಗೆ ನೀಡಿದವರು ಎನ್ನಬಹುದು. ಆದರೆ ಚಂದ್ರ ಮಟ್ಟಿಗೆ ಇವ್ಯಾವುವೂ ಲಗಾವಾಗುವುದಿಲ್ಲ. ನನ್ನ ಜೀವಮಾನದಲ್ಲಿ ವಿಜ್ಞಾನಿಯಾಗಿನಾನು ಕಂಡ ಅತ್ಯಂತ ಪರಿಪೂರ್ಣ ವ್ಯಕ್ತಿ ಇರುವುದಾದರೆ ಅವರು ಚಂದ್ರಶೇಖರ್“.

ನಿಜ, ಇವರು ವಿಜ್ಞಾನರಂಗದ ಪರಿಪೂರ್ಣ ಚಂದ್ರ.

  1. ಆನ೦ದ ಭಾವ
    ಅಕ್ಟೋಬರ್ 18, 2010 ರಲ್ಲಿ 5:01 ಫೂರ್ವಾಹ್ನ

    ಬಾರೀ ಲಾಯಕಿದ್ದು ಭಾವ. ಏಡ್ಡಿ೦ಗಟನ್ ಇಕ್ಕಾಟ ನೀನು ಬರ್ಫ಼ೆದದ್ದು ಓದುವಾಗ ಅವರ್ಫ಼ ಬಾಯಿಯಿ೦ದ ಇದನ್ನು ಕುದ್ದಾಗಿ ಕೇಳಿದ ಘಟನೆ ನೆನಪಾಯಿತು. ಅದನ್ನು ನನ್ನ ಅಪ್ಪನಿಗೆ ಹೇಳುವಾಗ ೪೦-೫೦ ವರ್ಷದ ಹಿ೦ದಿನ ವಿಚಾರವಾದರೂ ಅವರು ಅದನ್ನು ಹಿ೦ದಿನ ದಿನವೇ ಆದ೦ತೆ ಅಷ್ಟು ಭಾವೋದ್ವೇಗದಲ್ಲಿ ಹೇಳಿದರು!! ಇದೆಲ್ಲ ಟೇಪ್ ಮಾಡಿದೇನೆ, ಬೇಕಾದರೆ ನಿನಗೆ ಕಳಿಸುತ್ತೇನೆ. ಮತ್ತೆ ಅವರು ಹೇಳಿದ್ದು ಇನ್ನೊ೦ದು ನೆನ್ಪಪಿಗೆ ಬರಿತ್ತದೆ. ಆವರಿದದ್ದು ೪-೫ ಜನ ಶಿಶ್ಯ೦ದಿರು ಅಷ್ಟೆ ಆದರೆ ಅವರ ಪ್ರತಿಯೊಬ್ಬ ಶಿಶ್ಯನಿಗೂ ನೋಬೆಲ್ ಪಾರಿತೋಷಕ ಬ೦ದಿದೆ!! ಅದನ್ನು ಅವರು ಬಾರೀ ಲಘುವಾಗಿ ಹೇಳಿದರು ಮತ್ತೆ ಅಶ್ವಥಾಮ ಹಥ ….. ಎ೦ಬ೦ತೆ ನನ್ನ ಉಳಿದ ಶಿಶ್ಯ೦ದಿರು ನನ್ನ ಕಟಿಣತೆ ಸಹಿಸಲಾರದೆ ಬಿಟ್ಟು ಬಿಡುತ್ತಿದ್ದರು!! ಇನ್ನು ತು೦ಬಾ ಇದೆ, ಆದರೆ ಪುರುಸೋತು ಇಲ್ಲ ಮಾರಾಯ ಮತ್ತೆ ನಿನ್ನ ಹಾಗೆ ಬರೆಯುವ ಯೋಗ್ಯ್ತತೆಯಾಗಲಿ ಇಲ್ಲ ಬುದ್ಧಿ ಪೌಡಿಮೆ ಯಾಗಲಿ ಇಲ್ಲ. ಒಳ್ಳೆ ಕೆಲಸ ಮಾಡುತ್ತಾ ಇದ್ದೀಯ, ಮು೦ದುವರೆಸು. ನಿನಗೆ ಯಾರ ಹೆಸರು ಮರೆತರು, ಅವರ ತಾಯಿಯ ಹೆಸರು ಮರೆಯುವಾಗಿಲ್ಲ!!
    ಮತ್ತೆ ಕಾ೦ಬ
    ಆನ೦ದ ಭಾವ

  2. Dr. K M Balakrishna
    ಅಕ್ಟೋಬರ್ 18, 2010 ರಲ್ಲಿ 11:26 ಫೂರ್ವಾಹ್ನ

    Nice article on Prof. Chandrashekhar. Thanks for the detailed information.

  3. ಅಕ್ಟೋಬರ್ 18, 2010 ರಲ್ಲಿ 12:25 ಅಪರಾಹ್ನ

    ಲೇಖನ ಬಹಳ ಚೆನ್ನಾಗಿದೆ.

  4. ನವೆಂಬರ್ 2, 2010 ರಲ್ಲಿ 3:15 ಅಪರಾಹ್ನ

    ನಿಮ್ಮ ಈ ಸುದೀರ್ಘ ಲೇಖನವನ್ನು ಓದಿದೆ. ತುಂಬಾ ಆಸಕ್ತಿಕರವಾಗಿದೆ. ಕೇವಲ 23 ನೇ ವಯಸ್ಸಿನಲ್ಲಿ ತಮ್ಮ ಸಿದ್ಧಾಂತವನ್ನು ಮಂಡಿಸಿದ ಚಂದ್ರಶೇಖರವರ ಪ್ರತಿಭೆಗೆ ತಲೆ ಬಾಗಲೇಬೇಕು. ನಿಮ್ಮ ಈ ಸುದೀರ್ಘ ಲೇಖನಕ್ಕೆ ಮನಸೋತಿದ್ದೇನೆ.

  5. B Ramesh Adiga
    ನವೆಂಬರ್ 4, 2010 ರಲ್ಲಿ 3:31 ಅಪರಾಹ್ನ

    ಸಿವಿರಾಮನ್ ೧೯೪೫ರಲ್ಲೇ ಚಂದ್ರಶೇಖರ್ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಸೂಚಿಸಿದಾಗ ಖಗೋಲವಿಜ್ಞಾನಕ್ಕೆ ನೊಬೆಲ್ ಪ್ರಶಸ್ತಿ ಬರಲಾರದೆಂದು ರಾಮನ್ ಅವರಿಗೆ ಸ್ವಯಂ ಚಂದ್ರಶೇಖರ್ ಪತ್ರ ಬರೆದರು. ಅದು ನಿಜವಾಯಿತು ಕೂಡ. ನೊಬೆಲ್ ಬಂದದ್ದು ಬರೋಬ್ಬರಿ ಐವತ್ತು ವರ್ಷಗಳ ಬಳಿಕ, ಅಂದರೆ ೧೯೮೫ರಲ್ಲಿ ಚಂದ್ರಶೇಖರ್ ಮತ್ತು ಅಮೇರಿಕದ ವಿಲ್ಲಿ ಫೌಲರ್ ಜಂಟಿಯಾಗಿ ನೊಬೆಲ್ ಪ್ರಶಸ್ತಿ ಪಡೆದರು.

    Good article, so elaborate, yet in highly simple language. Keep writing.

    However, in the quotaion reproduced above, it needs to be 40 years, not full 50 years, as mentioned. Isn’t it? But not a big ‘factual’ error.

    Regards,

    B Ramesh Adiga, Manipal.

    • apkrishna
      ನವೆಂಬರ್ 4, 2010 ರಲ್ಲಿ 3:45 ಅಪರಾಹ್ನ

      ಧನ್ಯವಾದಗಳು. ನನ್ನ ಮನದಲ್ಲಿದ್ದುದು ೧೯೩೫ – ಚಂದ್ರ ತಮ್ಮ ಸಿದ್ಧಾಂತವನ್ನು ಮಂಡಿಸಿದ ವರ್ಷ ( ಜನವರಿ ೧೧. ೧೯೩೫) – ಪ್ರಮಾದಕ್ಕೆ ಕಾರಣ. ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆ ತುಂಬುತ್ತದೆ ಬರವಣಿಗೆಗೆ ಉಸಿರು – ಉತ್ಸಾಹ.
      ರಾಧಾಕೃಷ್ಣ

      • B Ramesh Adiga
        ನವೆಂಬರ್ 11, 2010 ರಲ್ಲಿ 4:29 ಅಪರಾಹ್ನ

        Thank you.

        Noted.

        B Ramesh Adiga

  6. ಡಿಸೆಂಬರ್ 20, 2010 ರಲ್ಲಿ 3:37 ಫೂರ್ವಾಹ್ನ

    thank you sir,
    i realy came to know about our real mistery of sun,

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: