ಬೇಸಗೆಯಲ್ಲಿ ಬೀದರಕ್ಕೊಂದು ಪಯಣ
“ಏನ್ರೀ, ತಮಾಷೆ ಮಾಡ್ತಾ ಇದೀರಾ. ಬೀದರಕ್ಕೆ ಈ ಕಾಲದಲ್ಲಿ. ಅದೂ ಶಾಲೆಯ ಬಸ್ಸಿನಲ್ಲಿ .. ” ಎನ್ನುತ್ತಿದ್ದ ಹಿರಿಯ ಪ್ರಾಧ್ಯಾಪಕರ ಕಾಳಜಿಯ ಮಧ್ಯೆ ನಮ್ಮ ಪಯಣ ಆರಂಭವಾಯಿತು – ಬೀದರಕ್ಕೆ ಬಿರು ಬೇಸಗೆಯಲ್ಲಿ. ಬೀದರದ ಭೂಮರೆಡ್ಡಿ ಪದವಿ ಕಾಲೇಜಿನಲ್ಲಿ ಎಪ್ರಿಲ್ ೭ ಮತ್ತು ೮ ರಂದು ಏರ್ಪಡಿಸಿದ ವಿಜ್ಞಾನ ಮಾದರಿಗಳ ತಯಾರಿಯ ರಾಜ್ಯ ಮಟ್ಟದ ಅಂತಿಮ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕಾಗಿ ಅಹ್ವಾನ ಬಂದದ್ದು ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ. ಪುತ್ತೂರಿನ ವಿವೇಕಾನಂದ ಕಾಲೇಜಿನ ಮೂರು ತಂಡಗಳ ಒಟ್ಟು ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಅವರಿಗೋ ಅತ್ಯುತ್ಸಾಹ, ಹುಮ್ಮಸ್ಸು. ನಮಗೋ ಆತಂಕ.
ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ಹೀಗೆ :
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕನ್ನಡದಲ್ಲಿ ವಿಜ್ಞಾನ ಪ್ರಸಾರ, ಸಾರ್ವಜನಿಕರಲ್ಲಿ ವಿಜ್ಞಾನ ಆಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸುವ ಸ್ವಾಯತ್ತ ಸಂಸ್ಥೆ. ಅಢ್ಯನಡ್ಕ ಕೃಷ್ಣ ಭಟ್, ಜೆ.ಆರ್.ಲಕ್ಷ್ಮಣ್ ರಾವ್ , ಸೇತೂರಾಮ್ ಮೊದಲಾದ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆ ಇದು. ಪರಿಷತ್ತು ಪ್ರಕಟಿಸುತ್ತಿರುವ ಬಾಲವಿಜ್ಞಾನ ಎಂಬ ಮಾಸ ಪತ್ರಿಕೆ ಕನ್ನಡದಲ್ಲಿ ವಿಜ್ಞಾನ ಬರವಣಿಗೆಯ ಆಸಕ್ತಿಯನ್ನು ಪ್ರೇರಿಸುತ್ತಿದೆ.
ಕಾಲೇಜು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಆಸಕ್ತಿಯನ್ನು ಇನ್ನಷ್ಟು ಗಾಢವಾಗಿಸಲು ಪರಿಷತ್ತು ಇತ್ತೀಚೆಗೆ ಹಮ್ಮಿಕೊಂಡ ಕಾರ್ಯಕ್ರಮ – ವಿಜ್ಞಾನ ಮಾದರಿಗಳ ನಿರ್ಮಾಣ ಮತ್ತು ಮಂಡನೆಯ ಸ್ಪರ್ಧೆ . ಇದು ಆರಂಭವಾದದ್ದು ನಾಲ್ಕು ವರ್ಷಗಳ ಹಿಂದೆ. ಇದಕ್ಕೆ ರಾಜ್ಯ ವಿಜ್ಞಾನ – ತಂತ್ರಜ್ಞಾನ ಸಮಿತಿಯ ಆರ್ಥಿಕ ಸಹಕಾರವೂ ಇದೆ. ವಿಜ್ಞಾನ ಮತ್ತು ಅದರ ಪರಿಣಾಮಗಳ ಕುರಿತಂತೆ ಎಂಟು ಬೇರೆ ಬೇರೆ ವಿಷಯಗಳು ಮತ್ತು ಪ್ರತಿಯೊಂದು ವಿಷಯದಲ್ಲಿ ಒಂದು ಕಾಲೇಜಿನಿಂದ ಎರಡು ವಿದ್ಯಾರ್ಥಿಗಳ ಒಂದು ತಂಡಕ್ಕೆ ಭಾಗವಹಿಸಲು ಅವಕಾಶ. ಅಂದರೆ ಒಂದು ಕಾಲೇಜಿನಿಂದ ಗರಿಷ್ಠ ಎಂಟು ತಂಡಗಳು ಭಾಗವಹಿಸಬಹುದು.
ರಾಜ್ಯದ ಆರು ವಿಶ್ವ ವಿದ್ಯಾಲಯಗಳಲ್ಲಿ (ಮಂಗಳೂರು, ಮೈಸೂರು, ಬೆಂಗಳೂರು, ಕರ್ನಾಟಕ, ಸಹ್ಯಾದ್ರಿ ಮತ್ತು ಗುಲ್ಬರ್ಗಾ) ವಿಶ್ವವಿದ್ಯಾಲಯ ಮಟ್ಟದಲ್ಲಿ ಸ್ಪರ್ಧೆಗಳು ನಡೆದು, ನಂತರ ರಾಜ್ಯ ಮಟ್ಟದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಈ ಸ್ಪರ್ಧೆಗಳು ೨೦೦೬ ರಲ್ಲಿ ಆರಂಭವಾದಾಗ ಮಂಗಳೂರುವಿವಿಯ ವಲಯ ಮಟ್ಟದ ಸ್ಪರ್ಧೆ ನಡೆದದ್ದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ. ೨೦೦೭ರಲ್ಲಿ ಸ್ಪರ್ಧೆಗೆ ವೀಳ್ಯ ದೊರೆತದ್ದು ಪುತ್ತೂರಿನ ಸಂತಫಿಲೋಮಿನಾ ಕಾಲೇಜಿಗೆ. ೨೦೦೮ರಲ್ಲಿ ಸ್ಪರ್ಧೆ ನಡೆದದ್ದು ಸುಳ್ಯದ ನೆಹರೂ ಸ್ಮಾರಕ ವಿದ್ಯಾಲಯದಲ್ಲಿ. ಈ ಬಾರಿ ಅಂದರೆ ೨೦೦೯ರಲ್ಲಿ ಉಡುಪಿಯ ಎಮ್ ಜಿ ಎಮ್ ಕಾಲೇಜಿನಲ್ಲಿ ವಲಯ ಮಟ್ಟದ ಸ್ಪರ್ಧೆ ನವೆಂಬರ್ ತಿಂಗಳಿನಲ್ಲಿ ನಡೆಯಿತು. ವಿಷಯಗಳು : E – waste management, Alternate Materials, Nano Technology & Application, Global Warming, Bio Diversity, Evolution of Life, Food Preservation, Satellite Technology and Application.
ನಾನಾದರೋ ವಿವೇಕಾನಂದ ಮತ್ತು ಫಿಲೋಮಿನಾ ಕಾಲೇಜುಗಳೆರಡರಲ್ಲಿಯೂ ಕೆಲಸ ಮಾಡುತ್ತಿರುವ ತ್ರಿಶಂಕು. ಸರಕಾರದ ಬುದ್ಧಿಶೂನ್ಯ ಆದೇಶದ ಕಾರಣದಿಂದ ಎರಡು ಕಾಲೇಜುಗಳಲ್ಲಿ ಅಧ್ಯಾಪನ ಮಾಡುವ ಅಪೂರ್ವ ಅವಕಾಶ ನನ್ನ ಪಾಲಿಗೆ ಬಂದದ್ದು ಏಳು ವರ್ಷಗಳ ಹಿಂದೆ. ಇದರಿಂದಾಗಿ ಎರಡೂ ಕಾಲೇಜುಗಳಲ್ಲಿ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ನಿರ್ಮಿಸುವ ಹಂತಗಳಲ್ಲಿ ಕ್ರಿಯಾಶೀಲನಾಗಿ ಮಾರ್ಗದರ್ಶನ ಮಾಡುವ ಸುಯೋಗ ನನ್ನದಾಯಿತು. ಈ ಬಾರಿ ವಿವೇಕಾನಂದ ಕಾಲೇಜಿನ ಮೂರು ತಂಡಗಳು (E – waste management, Alternate Materials, Nano Technology & Application ವಿಭಾಗಗಳಲ್ಲಿ) ಮತ್ತು ಫಿಲೋಮಿನಾದ ಎರಡು ತಂಡಗಳು (Global Warming, Bio Diversity) ಮತ್ತು ಎಮ್ ಜಿ ಎಮ್ ಕಾಲೇಜಿನ ಮೂರು ತಂಡಗಳು ( Evolution of Life, Food Preservation, Satellite Technology and Application) ಅಂತಿಮ ಹಂತದ ಸ್ಪರ್ಧೆಗಳಿಗೆ ಆಯ್ಕೆಯಾದುವು.
ಎಮ್ ಜಿ ಎಮ್ ಅಂದರೆ ಕೇಳಬೇಕೆ? ವಲಯ ಮಟ್ಟದ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾದರು. ಮಂಗಳೂರು ವಿವಿ, ಎನ್ ಐ ಟಿಕೆ ಸುರತ್ಕಲ್, ಎಮ್ ಐಟಿ ಮಣಿಪಾಲ ಮತ್ತು ಕೆ ಎಮ್ ಸಿ ಯಿಂದ ಅವರು ನಿರ್ಣಾಯಕರನ್ನು ಕರೆಸಿದ್ದರು. ವಿದ್ಯಾರ್ಥಿಗಳ ದಂಡೇ ಅಲ್ಲಿ ಕಾರ್ಯಶೀಲವಗಿತ್ತು. ಭಾಗವಹಿಸಿ ಬಂದ ವಿದ್ಯಾರ್ಥಿಗಳಿಗೆ ಮತ್ತು ನಮಗೆಲ್ಲ ಖುಷಿಯ ಅನುಭವ. ಸಹಜವಾಗಿಯೇ ಮುಂದಿನ ಹಂತಕ್ಕೆ ಆಯ್ಕೆಯಾದ ನಮ್ಮ ಮಕ್ಕಳಿಗೆ ಇನ್ನಷ್ಟು ಉತ್ಸಾಹ.
ಸ್ಪರ್ಧೆ ಎಲ್ಲಿ ನಡೆಯುತ್ತದೆಂದು ಸ್ಪಷ್ಟ ಕಲ್ಪನೆ ಇರಲಿಲ್ಲ. ರಾಜ್ಯ ವಿಜ್ಞಾನ ಪರಿಷತ್ತಿನ ಸಂಘಟಕರು ಕೂಡ ಈ ಬಗ್ಗೆ ವಿವರ ಹೇಳಲಿಲ್ಲ. ಮೈಸೂರಿನಲ್ಲಿ ನಡೆಯುತ್ತದೆಂದು ಗಾಳಿ ಸುದ್ದಿ ಬಂದಾಗ ನಾವೆಲ್ಲ ನಿರಮ್ಮಳವಾದೆವು. ಆದರೆ ಕಲ್ಪನೆ ತಲೆಕೆಳಗಾದದ್ದು ಸ್ಪರ್ಧಗೆ ಕೇವಲ ಹತ್ತು ದಿನ ಮುಂಚಿತವಾಗಿ – ಪರಿಷತ್ತಿನಿಂದ ಪತ್ರ ಬಂದಾಗ. ಸ್ಪರ್ಧೆಯು ಎಪ್ರಿಲ್ ೬ ಮತ್ತು ೭ ರಂದು ಬೀದರದ ಭೂಮರೆಡ್ಡಿ ಕಾಲೇಜಿನಲ್ಲಿ ನಡೆಯುತ್ತದೆ ಮತ್ತು ಹಿಂದಿನ ದಿನ ವಿದ್ಯಾರ್ಥಿಗಳು ಹಾಜರಿರತಕ್ಕದ್ದು, ಹೋಗಿ ಬರಲು ತೃತೀಯ ದರ್ಜೆಯ ಅಥವಾ ಸಾಮಾನ್ಯ ಬಸ್ಸಿನ ಪ್ರಯಾಣ ಭತ್ತೆ ನೀಡಲಾಗುತ್ತದೆ, ಹವಾನಿಯಂತ್ರಿತ ಬಸ್ಸು ಯಾ ರೈಲಿನ ಪಯಣಕ್ಕೆ ಇಲ್ಲ.. ಇತ್ಯಾದಿ ಇತ್ಯಾದಿ.. ಆ ಪತ್ರದ ಒಕ್ಕಣೆಯಲ್ಲಿತ್ತು. ತಯಾರಿಗೆ ಸಮಯವಿದ್ದುದು ಕೇವಲ ಒಂದು ವಾರ. ಪ್ರಾಯಶ: ಅತ್ಯಂತ ಕಡಿಮೆ ಅವಧಿಯಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆನ್ನುವುದೂ ಕೂಡ ಸ್ಪರ್ಧೆಯ ಭಾಗವೋ ಏನೋ ಎಂಬ ಗುಮಾನಿಯೊಂದಿಗೆ ನಮ್ಮ ವಿದ್ಯಾರ್ಥಿಗಳು ತಯಾರಿಗೆ ಹೊರಟರು.
ಕಡಲ ತೀರದ ನಮಗೆ ಬೀದರ ಬಲು ದೂರ – ಸುಮಾರು ಸಾವಿರ ಕಿಮೀ. ಕರ್ನಾಟಕದ ಉತ್ತರೋತ್ತರ ಭಾಗದ – ಆಂದ್ರದ ಗಡಿಯಲ್ಲಿರುವ ಐತಿಹಾಸಿಕ ಮಹತ್ವದ ಬೀದರಕ್ಕೆ ಪಯಣಿಸುವುದು ದೊಡ್ಡ ವಿಷಯವಲ್ಲ. ದೊಡ್ಡ ದೊಡ್ಡ ವಿಜ್ಞಾನ ಮಾದರಿಗಳನ್ನು ಒಂದಿಷ್ಟೂ ಹಾಳಾಗದಂತೆ ಅಷ್ಟು ದೂರದ ಊರಿಗೆ ಒಯ್ಯುವುದು ಮತ್ತು ಉತ್ಸಾಹ ಉಳಿಸಿಕೊಂಡು ಭಾಗವಹಿಸಿವುದೇ ನಮ್ಮ ಪಾಲಿನ ದೊಡ್ಡ ವಿಷಯ. ಬೀದರಕ್ಕೆ ರೈಲಿದೆ ಎಂದು ಯಾರೋ ಹೇಳಿದರು. ರೈಲಿನಲ್ಲಿ ಪಯಣಿಸುವುದೆಂದರೆ ನಮಗೆ ನಿಜಕ್ಕೂ ಕೊಂಕಣಕ್ಕೆ ಮೈಲಾರಿ ಸುತ್ತಿ ಹೋದ ಹಾಗೆಯೇ. ಬೆಂಗಳೂರು ಮೂಲಕವೇ ನಾವು ಸಾಗಬೇಕು. ಪುತ್ತೂರಿನಿಂದ ಬೆಂಗಳೂರಿಗೆ ರೈಲಿರುವುದೇನೋ ನಿಜ. ಬೆಂಗಳೂರಿಗೆ ತಲುಪಿ ಮತ್ತೆ ರಾತ್ರೆ ಹತ್ತರ ರೈಲೇರಿ ಮರು ದಿನ ಮಧ್ಯಾಹ್ನ ಬೀದರ ತಲುಪೋಣವೆಂದರೆ ರೈಲುಗಳಲ್ಲಿ ಟಿಕೇಟುಗಳೇ ಇರಲಿಲ್ಲ. ಸಾಮಾನ್ಯವಾಗಿ “ಸಾಮಾನ್ಯ ಜನರಿಗೆ” ರೈಲುಗಳಲ್ಲಿ ಟಿಕೇಟುಗಳಿಲ್ಲ. ತಿಂಗಳ ಮೊದಲೇ ಎಲ್ಲ ಟಿಕೇಟುಗಳು ಮಾರಾಟವಾಗಿರುತ್ತವೆ ಅಂತರ್ಜಾಲದಲ್ಲಿ ಟಿಕೇಟುಗಳನ್ನು ಕಾದಿರಿಸುವ ಘನ ವ್ಯವಸ್ಥೆ ಬಂದ ಮೇಲೆ. ಅದೊಂದು ಹೆಚ್ಚಿನ ಮುನಾಫೆ ಇರುವ ಹೊಸದೊಂದು ದಂದೆ. ಹೋಗುವುದು ಹೇಗೆ?
ನಮ್ಮದೇ ವಾಹನ ಮಾಡಿಕೊಂಡರೆ ಆಗುವ ವೆಚ್ಚ ಭರಿಸುವುದು ಯಾರು? ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದುವು. ದಿನಗಳು ಹತ್ತಿರವಾಗುತ್ತಿವೆ. ಆತಂಕ ಹೆಚ್ಚ ತೊಡಗಿತು. ಎಮ್ ಜಿ ಎಮ್ ಪ್ರಾಂಶುಪಾಲರಾದ ಡಾ.ವೆಂಕಟ್ರಮಣ ಗೌಡರೊಂದಿಗೆ ಮೊಬೈಲ್ ನಲ್ಲಿಯೇ ವಿಚಾರ ವಿನಿಮಯ ನಡೆದುವು. ವಿವೇಕಾನಂದ, ಫಿಲೋಮಿನಾ ಮತ್ತು ಎಮ್ ಜಿ ಎಮ್ ಕಾಲೇಜುಗಳು ಒಟ್ಟಾಗಿ ವಿವೇಕಾನಂದ ಶಾಲೆಯ ಬಸ್ಸಿನಲ್ಲಿ ಪಯಣಿಸುವ ಬಗ್ಗೆ ಕಾರ್ಯೋನ್ಮುಖನಾದೆ. ಶಾಲೆಯ ಬಸ್ಸಿಗೆ ತಾಲೂಕಿನ ಗಡಿ ದಾಟಲು ಒಪ್ಪಿಗೆ ಇಲ್ಲವೆಂಬ ತೊಡಕು. ಸಹಾಯಕ್ಕೆ ಒದಗಿದವನು ಮಿತ್ರ ವಿಪಿನ್. ಅವನಾದರೋ ಸರಕಾರದ ಸಾರಿಗೆ ಇಲಾಖೆಯ ಓಳ ಹೊರ ಕಾರ್ಯಾಚರಣೆಗಳೆಲ್ಲವನ್ನು ಅರಿತ ಅನುಭವಿ. ” ಚಿಂತೆ ಬೇಡ ಎಪಿ, ಒಂದೆರಡು ದಿನಗಳಲ್ಲಿ ರಾಜ್ಯ ಸುತ್ತಲು ಪರವಾನಿಗೆ ಮಾಡಿಸುವ ಜವಾಬ್ದಾರಿ ನನಗಿರಲಿ” ಎಂದಾಗ ಕಡಿಮೆಯಾಯಿತು ನನ್ನ ಬಿಪಿ.
ಬೀದರಕ್ಕೆ ಹುಬ್ಬಳ್ಳಿಯ ಮೂಲಕ ಸಾಗಬೇಕು. ಸಾವಿರ ಕಿಮೀ ದೂರದ ನಿರಂತರ ಪ್ರಯಾಣ – ಅದರಲ್ಲೂ ಅಪರಿಚಿತ ಜಾಗದಲ್ಲಿ ರಾತ್ರೆಯ ಪಯಣಿಸುವ ಬದಲಿಗೆ, ನಡು ದಾರಿಯಲ್ಲಿ ಸಿಗುವ ಹುಬ್ಬಳ್ಳಿಯಲ್ಲಿ ಉಳಿಯುವ ಬಗ್ಗೆ ಆಲೋಚಿಸಿದೆ. ಆಗ ನೆರವಿಗೆ ಬಂದವರು ಡಾ.ಜೆಡ್ಡು ಸದಾಶಿವ ಭಟ್. ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದ ಡಾ. ಸದಾಶಿವ ಭಟ್, ಪ್ರಸ್ತುತ ಕರ್ನಾಟಕ ವಿಶ್ವ ವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು. ಅವರನ್ನು ಸಂಪರ್ಕಿಸಿ ಹುಬ್ಬಳ್ಳಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಬಗ್ಗೆ ವಿಚಾರಿಸಿದೆ. ನನ್ನೆಲ್ಲ ಅಹವಾಲು ಆಲಿಸಿದ ಮೇಲೆ ” ಅಷ್ಟೇಯೋ, ಹೆದರೆಡಿ. ಎಲ್ಲ ವ್ಯವಸ್ಥೆ ಆನು ಮಾಡುತ್ತೆ – ಯುನಿವರ್ಸಿಟಿಯ ಹೊಸ ಗೆಸ್ಟ್ ಹೌಸ್ ಇದ್ದು. ಯೋಚನೆ ಮಾಡೆಡ” ಎಂದಾಗ ಪಯಣದ ಗುರುತರ ಸಮಸ್ಯೆ ಹೂ ಎತ್ತಿದ ಹಾಗೆ ಪರಿಹಾರವಾಯಿತು. ಬೀದರಕ್ಕೆ ಹೋಗುವ, ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಕನಸು ನನಸಾಗುವ ಧೈರ್ಯ ಬಂತು. ಈ ನಡುವೆ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಗಾಗಿ ಕೊನೆಯ ಕ್ಷಣದಲ್ಲಿ ಹಿಂಜರಿಯಬೇಕೇ? ಆದರೆ ನಾವು ಹಿಂದುಳಿಯಲಿಲ್ಲ.
ಎಪ್ರಿಲ್ ೪ರಂದು ಬೆಳಗ್ಗೆ ಆರರ ಹೊತ್ತಿಗೆ ವಿವೇಕಾನಂದ ಕಾಲೇಜಿನಿಂದ ಇಬ್ಬರು ಚಾಲಕರು (ಶ್ರೀಧರ್ ಮತ್ತು ವೆಂಕಟ್ರಮಣ) ಸೇರಿದಂತೆ ನಾವು ಒಂಬತ್ತು ಹನ್ನೊಂದು ಮಂದಿ (ಆರು ವಿದ್ಯಾರ್ಥಿಗಳು – ಶ್ರೀಶ, ಹರಿಪ್ರಸಾದ್, ರೇಖಾ, ದಿವ್ಯಶ್ರೀ, ಸ್ಮ್ರುತಿ ಹೆಬ್ಬಾರ್ ಮತ್ತು ತನ್ಮಯ ಲಕ್ಷ್ಮಿ, ರಸಾಯನ ಶಾಸ್ರ ಉಪನ್ಯಾಸಕಿ ರಮ್ಯಾ, ಭೌತಶಾಸ್ತ್ರ ವಿಭಾಗದ ಸಹಾಯಕ ಜಯಂತ್ ಮತ್ತು , ನಾನು) ಹೊರಡುವ ಹೊತ್ತಿಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವೇದವ್ಯಾಸರು ಖುದ್ದಾಗಿ ಹಾಜರಿದ್ದರು ನಮ್ಮನ್ನು ಬಿಳ್ಕೊಡಲು. ಚಿಕ್ಕ ಬಸ್ಸಿನ ಕೊನೆಯ ಎರಡು ಸಾಲುಗಳ ತುಂಬ ದೊಡ್ಡ ದೊಡ್ದ ಪೆಟ್ಟಿಗೆಗಳು ಹೇರಿಕೊಂಡಿದ್ದುವು ನಮ್ಮಿಂದ ಮೊದಲೇ. ಬರದ ಊರಿನ ಗಡಸು ನೀರಿನ ತತ್ವಾರ ಎಣಿಸಿಯೇ ವಿದ್ಯಾರ್ಥಿನಿ ತನ್ಮಯ ಲಕ್ಷ್ಮಿಯ ತಂದೆ ಅರುವತ್ತು ನೀರ ಬಾಟಲ್ ಇರಿಸಿದರು ಸೀಟುಗಳ ಕೆಳಗೆಲ್ಲ. ಜಂಬು ನೇರಳೆ, ಬಗೆ ಬಗೆಯ ಖಾರ – ಸಿಹಿ ತಿಂಡಿಗಳ ಕಟ್ಟುಗಳು ಕೂಡ ಜಾಗ ಪಡೆದುಕೊಂಡುವು ಸ್ವಸ್ಥಾನ ಸೇರುವ ಮುನ್ನ!
ಒಂಬತ್ತು ಗಂటెಯ ಹೊತ್ತಿಗೆ ನಮ್ಮ ಶಾಲಾ ಬಸ್ಸು ಎಮ್ ಜಿ ಎಮ್ ಕಾಲೇಜಿನಂಗಣಕ್ಕೆ ತಲುಪಿತು. ಅಲ್ಲಿ ನೋಡುತ್ತೇವೆ – ಎಮ್ ಜಿ ಎಮ್ ತಂಡದಲ್ಲಿತ್ತು ನಮ್ಮದಕ್ಕಿಂತ ಇನ್ನಷ್ಟು ಭಾರೀ ಕಟ್ಟುಗಳು. ಆರು ಅಡಿ ಉದ್ದ ಮತ್ತು ನಾಲ್ಕಡಿ ಎತ್ತರದ ಮರದ ಸ್ಟ್ಯಾಂಡ್ ಬಸ್ಸೊಳಗೆ ಏರಲು ಕಾತರದಿಂದ ಕಾಯುತ್ತಿತ್ತು. ಚಿಕ್ಕ ಬಸ್ಸೊಳಗೆ ಇವನ್ನೆಲ್ಲ ತುಂಬಬಹುದು , ಅಷ್ಟೊಂದು ದೂರ ಪಯಣಿಸುವುದು ಹೇಗೆ ? – ಪ್ರಾಂಶುಪಾಲರಿಗೆ ಮತ್ತು ನಮ್ಮೆಲ್ಲ ರಾದ್ದಾಂತಗಳನ್ನು ಕಂಡು ಕುತೂಹಲದಿಂದ ಬಂದ ಹಿರಿಯ ಅಧ್ಯಾಪಕರಿಗೆ ಆತಂಕ ಶುರುವಾಯಿತು. ಬೇರೊಂದು ವಾಹನ ಮಾಡಿದರೆ ಹೇಗೆ? ಎಂಬ ಬಗ್ಗೆ ಚರ್ಚೆಗಳಾದುವು. ನನಗಾದರೋ ಹೋಗಬಹುದು ಹೇಗಾದರೂ “ಒಂತೆ ಎಡ್ಜೆಸ್ಟ್ ಮಾಳ್ಪಿ” ಎಂಬ ಭಂಡ ಧೈರ್ಯ – ಜಯಂತರಿದ್ದಾರೆಂಬ ಕಾರಣದಿಂದ. ಮರದ ಸ್ಟ್ಯಾಂಡನ್ನು ಕದಲಿಸಿ ಕೇವಲ ಹಲಗೆಗಳನ್ನು ಒಯ್ದು ಬೀದರದಲ್ಲೇ ಮತ್ತೆ ಜೋಡಿಸುವುದೆಂದು ನಿಶ್ಚಯಿಸಿದೆವು. ಅದನ್ನು ನಿರ್ಮಿಸಿದ ವಿಶ್ವಕರ್ಮಿಗೆ ಕರೆ ಹೋಯಿತು. ಸುತ್ತಿಗೆ ಹಿಡಿದು ಬಂದ ವೃದ್ಧ ಬಡಗಿಗೋ ತನ್ನ ಕೌಶಲ್ಯದ ಪ್ರತೀಕವನ್ನು ಕೈಯಾರೆ ಕದಲಿಸಬೇಕಲ್ಲ ಎಂಬ ದು:ಖ. “ನಿಕ್ಳೆಗ್ ಅವ್ಳು ಕೊಂಡೊತು ಪಿರ ಇಂದೆನ್ ಜೋಡಣೆ ಮಾಳ್ಪ್ಯಾರ ತೀರಾಂದ್” ಎನ್ನುತ್ತ ಹಠ ಹಿಡಿಯಬೇಕೇ? ಅಂತೂ ಮನವೊಲಿಸುವಾಗ ಸುಸ್ತಾಯಿತು. ಹಲಗೆಗಳನ್ನೆಲ್ಲ ಬಸ್ಸಿನೊಳಗೆ ತುಂಬಿಸಿ, ಕಟ್ಟಗಳನ್ನೆಲ್ಲ ಪೇರಿಸಿ, ಇಬ್ಬರು ಅಧ್ಯಾಪಕರೊಂದಿಗೆ ಎಮ್ ಜಿ ಎಮ್ ನ ಎಂಟು ಜನರ ತಂಡ ಬಸ್ಸೇರಿತು. ಚಿಕ್ಕ ಬಸ್ಸು ಜ್ಯಾಮ್ ಪ್ಯಾಕ್ !
ಒಂದಿಷ್ಟು ದೂರ ಹೋಗುವುದರೊಳಗೆ ಆರಂಭದ ಆತಂಕಗಳು ಮಾಯವಾದುವು. ಮತ್ತೆ ಕೇಳಬೇಕೆ? – ಶುರುವಾಯಿತು – ಹಾಡು – ಆಟಗಳು. ಮಧ್ಯಾಹ್ನ ಕುಮುಟಾದ ಕಾಮತ್ ಹೋಟೇಲಿನಲ್ಲಿ ಊಟ ಮುಗಿಸಿ ಧಾವಿಸಿದ್ದೇ ಧಾವಿಸಿದ್ದು. ಶಿರಸಿಯ ದೇವೀಮನೆ ಘಾಟಿಯ ನಡುವೆ ಇರುವ ದೇವಿಯ ಗುಡಿಯಲ್ಲಿ ಒಂದಷ್ಟು ಹೊತ್ತು ವಿಶ್ರಮಿಸಿ, ಸಂಜೆ ಏಳರ ಹೊತ್ತಿಗೆ ಕರ್ನಾಟಕ ವಿಶ್ವವಿದ್ಯಾಲಯದ ಅತಿಥಿಗೃಹ ತಲುಪಿದೆವು.
ಮರು ದಿನ ಬೆಳ್ಳಂಬೆಳಿಗ್ಗೆ ಹೊರಟೆವು ಬೀದರದ ಕಡೆಗೆ. ನಾವು ಹಿಡಿದದ್ದು ಬೆಳಗಾಂ, ಮದ್ದೂರು, ಬಾಗಲಕೋಟೆ, ಜಮಖಂಡಿ, ಬಿಜಾಪುರ, ಜೇವರ್ಗಿ, ಗುಲ್ಬರ್ಗಾದ ಮೂಲಕ ಸಾಗುವ ರಾಷ್ತ್ರೀಯ ಹೆದ್ದಾರಿಯನ್ನು. ಬೆಳಗಾಂ ಗಡಿ ದಾಟಿ ಇನ್ನೂ ಉತ್ತರ-ಪೂರ್ವಕ್ಕೆ ಸಾಗಿದಂತೆ ಬಟಾ ಬಯಲು ಪ್ರತ್ಯಕ್ಷವಾಗತೊಡಗಿತು. ಕಣ್ಣು ದಣಿವಷ್ಟು ದೂರ ದೂರಕ್ಕೆ ಹರಡಿ ಬಿದ್ದ ಬಯಲು. ನಡುವೆ ಹೆಬ್ಬಾವಿನಂತೆ ಬಿದ್ದುಕೊಂಡ ಹಾದಿ. ಬಿರು ಬಿಸಿಲು. ರಾಚುತ್ತಿದ್ದ ಬಿಸಿ ಗಾಳಿ.
ನಡು ನಡುವೆ ನದೀ ಪ್ರದೇಶ – ಒಂದಷ್ಟು ಹಸಿರು – ಜೋಳ, ಕಬ್ಬು. ತೀರ ತೀರ ಕಡಿಮೆ ವಾಹನಗಳು. ಸತತ ಪಯಣದ ಬಳಿಕ, ಮಧ್ಯಾಹ್ನ ಎರಡರ ಹೊತ್ತಿಗೆ ಬಿಜಾಪುರ ಸೇರಿದೆವು. ಮಕ್ಕಳ ಹಾಡು, ಮಾತುಗಲೆಲ್ಲ ಸ್ತಬ್ದವಾಗಿ ಹೊಟ್ಟೆಯಷ್ಟೇ ತಾಳ ಹಾಕುತ್ತಿತ್ತು. ಬಿಜಾಪುರದಲ್ಲಿ ಮೈಸೂರು ಕೆಫೆ ಇದ್ದುದರಲ್ಲಿ ಉತ್ತಮೆ ಎಂದು ದಾರಿಹೋಕರೊಬ್ಬರು ಹೇಳಿದುದರಿಂದ, ಪೇಟೆ ಮಧ್ಯದಲ್ಲಿರುವ ಹೋಟೇಲಿಗೆ ಹೋದರೆ – ಅಲ್ಲಿ ನೆರೆದಿತ್ತು ಜನಜಂಗುಳಿ ಕಂಡು ದಿಗ್ಭ್ರಮೆ. ಬಿಜಾಪುರದ ಗೋಳ ಗುಮ್ಮಟ ನೋಡುವುದಕ್ಕೂ ಅಷ್ಟು ಜನವಿರಲಾರರು. ಅಷ್ಟೊಂದು ಜನರು. ನೂರಾರು ಜನರು ಊಟ ಮಾಡುತ್ತಿದ್ದರೆ ಅಲ್ಲೇ ಸುಮಾರು ಅಷ್ಟೇ ಜನರು ಕಾಯುತ್ತಿದ್ದರು – ಎಷ್ಟು ಹೊತ್ತಿಗೆ ಊಟದ ತಾಟು ಇಡುವ ಮೇಜು ಖಾಲಿಯಾಗುತ್ತದೆಂದು. ಕುಂದಾಪುರದ ಆ ಹೋಟೇಲಿನಲ್ಲಿ ಉಪ್ಪಿನಂಗಡಿ, ಮಾಣಿಯ ಮಾಣಿಗಳು. ನಾವು ಇಪ್ಪತ್ತು ಮಂದಿ ಅಲ್ಲಿಗೆ ಜಮೆಯಾಗಿ ಒಂದರ್ಧ ಗಂಟೆ ಕಾದು ಒಂದಿಷ್ಟು ಖಾರದ ಊಟವನ್ನು ಹೊಟ್ಟೆಗೆ ಇಳಿಸಿಕೊಂಡು ಮತ್ತೆ ಮುಂದುವರಿದೆವು. ಎಷ್ಟು ಪಯಣಿಸಿದರೂ ಮತ್ತಷ್ಟು ದೂರವನ್ನು ಬೀದರಕ್ಕೆಂದು ತೋರಿಸುತ್ತಿದ್ದ ಮೈಲು ಕಲ್ಲುಗಳು – ಅಲ್ಲಲ್ಲ ಕಿಮೀ ಕಲ್ಲುಗಳು.
ಸಂಜೆ ಏಳರ ಹೊತ್ತಿಗೆ ಗುಲ್ಬರ್ಗಾ ತಲುಪಿದೆವು. ಅಲ್ಲಿಂದ ಮತ್ತೆ ಬೀದರಕ್ಕೆ ಮತ್ತೂ ಇತ್ತು ನೂರಿಪ್ಪತ್ತು ಕಿಮೀ. ಉತ್ತಮ ಮಾರ್ಗ. ಅಂತೂ ಇಂತೂ ರಾತ್ರೆ ಒಂಬತ್ತರ ಹೊತ್ತಿಗೆ ಬೀದರ್ ತಲುಪಿದೆವು.
ಸ್ಪರ್ಧೆಯನ್ನು ಏರ್ಪಡಿಸಿದ ಭೂಮರೆಡ್ಡಿ ಕಾಲೇಜನ್ನು ತಲಪುವಾಗ ರಾತ್ರೆಯಾಗಬಹುದೆಂದು ತಿಳಿದ ಮೇಲೆ, ಅದಾಗಲೇ ನಾನು ಮತ್ತು ನನ್ನೊಂದಿಗೆ ಇದ್ದ ಎಮ್ ಜಿ ಎಮ್ ಕಾಲೇಜಿನ ತರುಣ ಉತ್ಸಾಹೀ ಭೌತ ಶಾಸ್ತ್ರ ಉಪನ್ಯಾಸಕ ಪ್ರಶಾಂತ್ ಹಲವು ಬಾರಿ ನಾವು ಇಷ್ಟು ಹೊತ್ತಿಗೆ ಬರುತ್ತೇವೆಂದು ಸಂಘಟಕರಿಗೆ ತಿಳಿಸುತ್ತಿದ್ದೆವು. “ಚಿಂತೆ ಮಾಡಬ್ಯಾಡ್ರೀ, ಎಲ್ಲ ವ್ಯವಸ್ಥೆ ಆಗಿದೆ” ಎಂಬ ಅವರ ಉತ್ತರ ಕೇಳಿದ್ದರೂ, ನನಗೆ ಒಳಗೊಳಗೆ ಒಂದಿಷ್ಟು ಅನುಮಾನ ಮತ್ತು ಆತಂಕ. ದಾರಿ ಕೇಳುತ್ತ ಕಾಲೇಜಿಗೆ ಬಂದರೆ – ಅಲ್ಲಿ ನಮ್ಮ ಸುಸ್ವಾಗತಕ್ಕೆ ಕತ್ತಲೆಯ ಗೌಹ್ವರ ಕುಳಿತಿತ್ತು. ಯಾರೊಬ್ಬರೂ ಇರಲಿಲ್ಲ. ಪಹರೆ ಕಾಯುತ್ತಿದ್ದಾತ ಹೋಗಿ ತಿಳಿಸಿದ ತುಸು ಹೊತ್ತಿನಲ್ಲಿ ಒಂದಿಬ್ಬರು ಬಂದಾಗ ಜೀವ ಬಂತು. ಉಭಯಕುಶಲೋಪರಿ ಮಾತನಾಡುತ್ತಿರುವಂತೆ ಊಟದ ವ್ಯವಸ್ಥೆ ಬಗ್ಗೆ ಕೇಳಿದಾಗ ” ಊಟ ಆಗಿಲ್ವೇ, ” ಅನ್ನುತ್ತ ನಮ್ಮನ್ನು ಊಟದ ವ್ಯವಸ್ಥೆಯ ಜಾಗಕ್ಕೆ ಕರೆದೊಯ್ದರು. ಅಲ್ಲಾದರೋ ಅದಾಗಲೇ ಹಲವರು ಊಟ ಮಾಡಿ ಹೋದ ಮೇಲೆ ಯಾವ ಬಗೆಯ ಅವ್ಯವಸ್ಥೆ ಇರಬೇಕೋ ಹಾಗಿತ್ತು. ಅನ್ನ ತಳ ಕಂಡಿತ್ತು, ಸಾರು ಖಾಲಿಯಾಗಿತ್ತು. “ಒಂದರ್ಧ ಗಂಟೆ ಕಾಯಬೇಕು” ಎಂದ ಮೇಲೆ ಬೇರೆ ನಿರ್ವಾಹ ನಮಗಿರಲಿಲ್ಲ. ರಾತ್ರೆ ಬೇರೆ – ಹೋಗುವುದಾದರೂ ಎಲ್ಲಿಗೆ? ಅಂತೂ ಊಟ ತಯಾರಾಯಿತು.. ಹಸಿ ಬಿಸಿಯಾಗಿದ್ದ ಅನ್ನವೆಂಬೋ ಬಿಳಿ ಅಕ್ಕಿ. ಒಂದಷ್ಟು ಖಾರ – ಉಪ್ಪು ಸುರಿದ ಸಾರೆಂಬ ಬಿಸಿ ನೀರು. ಹತ್ತಿರವೇ ನಾಥ ಗಬ್ಬೆಂದು ಹೊಡೆಯುತ್ತಿದ್ದ ಕಕ್ಕಸಿನ ಪಕ್ಕದ ಕೊಠಡಿ (ಉತ್ಪ್ರೇಕ್ಷೆ ಇಲ್ಲ)ಯಲ್ಲಿ ಮತ್ತು ಜನರು ಓಡಾದುವ ಜಗಲಿಯಲ್ಲೇ ಮಂದ ಬೆಳಕಿನಲ್ಲಿ ಮರುದಿನದ ಊಟಕ್ಕೆಂದು ಜಾಮೂನಿನ ಹಿಟ್ಟನ್ನು ನಾದುತ್ತಿದ್ದರು. ನೀರುಳ್ಳಿ, ಬಟಾಟೆಗಳ ಕಗ್ಗೊಲೆ ನಡೆಯುತ್ತಿತ್ತು. ವಿದ್ಯಾರ್ಥಿನಿಯರಿಗೆ ಅಲ್ಲೇ ಹತ್ತಿರದ ಹಾಸ್ಟೇಲಿನಲ್ಲಿ ಎಲ್ಲ ಸುವ್ಯವಸ್ಥೆ ಮಾಡಿದೇವೆಂದು ಹೇಳಿದಾಗ ನಿರಾಳವಾಯಿತು. ಹಾಸ್ಟೇಲಿಗೆ ಹೋದರೆ ಅಲ್ಲಿ ಕೊಠಡಿಗಳಲ್ಲೆಲ್ಲ ಅದಾಗಲೇ ವಿದ್ಯಾರ್ಥಿನಿಯರು ತುಂಬಿದ್ದರು. ನಮಗಾಗಿ ಡೈನಿಂಗ್ ಹಾಲನ್ನು ತೋರಿಸಿದರು. ನೆಲದಲ್ಲೆಲ್ಲ ಊಟದ ಅಂಟು. ಪಕ್ಕದಲ್ಲಿಯೇ ಅಡುಗೆ ಮನೆ. ಅಲ್ಲಿಂದ ಹೊರಡುತ್ತಿತ್ತು ಗೋಬಿಮಂಚೂರಿಯ ಘಮಘಮ (ಸು) ವಾಸನೆ. ನಮ್ಮ ಹನ್ನೆರಡು ವಿದ್ಯಾರ್ಥಿನಿಯರು ಮತ್ತು ಇಬ್ಬರು ಉಪನ್ಯಾಸಕಿಯರು ಅಲ್ಲಿರಲು ಒಪ್ಪಿಕೊಡದ್ದೇ ಅವರ ದೊಡ್ಡತನ.
ಇದೀಗ ಗಮನ ನಮ್ಮ ವಾಸ್ತವ್ಯದ ಬಗ್ಗೆ. ಪೇಟೆಯ ಮಧ್ಯದಲ್ಲಿರುವ ಗುರುಧ್ವಾರದ ಸನಿಹದಲ್ಲಿರುವ ಯಾತ್ರಿಗಳ ಛತ್ರ – ನಾನಕ್ ನಿವಾಸದಲ್ಲಿ ಪ್ರೊಫೆಸರುಗಳಿಗೆ ವ್ಯವಸ್ಥೆ ಮಾಡಿದ್ದರು. ಅದಾಗಲೇ ವಿದ್ಯಾರ್ಥಿನಿಯರ ಪಡಿಪಾಡು ಕಂಡ ನಾವು ನಮ್ಮೊಂದಿಗಿದ್ದ ನಾಲ್ವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಹಾಸ್ಟೇಲಿನಲ್ಲಿ ಬಿಡುವ ಬದಲಿಗೆ ನಮ್ಮೊಂದಿಗೇ ಕರೆದೊಯ್ದೆವು. ತಡ ರಾತ್ರೆ. ಅವರಿವರಲ್ಲಿ ಕೇಳುತ್ತ ಪೇಟೆ ಸುತ್ತಿ ಸುತ್ತಿ ನಾನಕ್ ನಿವಾಸಕ್ಕೆ ಬಂದು ಕೊಠಡಿ ಸೇರುವ ಹೊತ್ತಿಗೆ ಬರೋಬ್ಬರಿ ಹನ್ನೊಂದೂವರೆ ಗಂಟೆ. ಪುಣ್ಯ – ಅದು ಸ್ವಚ್ಛ ಕೊಠಡಿ. ಇಬ್ಬರು ಚಾಲಕರು ಸೇರಿದಂತೆ ನಾವು ಒಂಬತ್ತು ಮಂದಿ ನೆಲದ ಮೇಲೆ ಅಡ್ಡಾದಿಡ್ಡಿ ಬಿದ್ದುಕೊಂಡದ್ದಷ್ಟೇ ನೆನಪು – ಬೆಳಗ್ಗೆ ಐದರ ಹೊತ್ತಿಗೆ ಹತ್ತಿರದ ಗುರುಧ್ವಾರದಿಂದ ಸುಶ್ರಾವ್ಯ ಗುರ್ಬಾನಿ ಕೇಳುವ ಹೊತ್ತಿಗೆ ಎಚ್ಚರವಾಯಿತು. ಮುಂಜಾನೆ ಬಹು ಬೇಗ ನಾವು ಕಾಲೇಜಿನ ಹಾದಿ ಹಿಡಿಯುವ ಹೊತ್ತಿಗೆ ಬೀದರ್ ಪೇಟೆ ಆ ದಿನದ ಕೆಲಸಗಳಿಗೆ ಸಜ್ಜಾಗುತ್ತ ಏಳುತ್ತಿತ್ತು. ಎಲ್ಲ ಊರುಗಳಂತೆ ಬೀದರ್ ಹೊಸತು – ಹಳತರ ಸಮ್ಮಿಷ್ರಣ. ಚಕ್ಕಡಿಗಳು, ಎಮ್ಮೆ – ದನಗಳು ಸರಾಗವಾಗಿ ದಾರಿಯಲ್ಲಿ ಓಡಾಡುವ ದೃಶ್ಯ ಸಾಮಾನ್ಯ. ಊರ ನಡುವೆ ಐತಿಹಾಸಿಕ ಕೋಟೆಯ ಕುರುಹುಗಳು. ಅಡ್ಡಾದಿಡ್ಡಿ ಸಾಗುವ ವಾಹನಗಳ ನಡುವೆ ಜನಜಂಗುಳಿ.
ನಾವು ಬೆಳಗ್ಗೆ ಏಳರ ಹೊತ್ತಿಗೆ ಕಾಲೇಜಿಗೆ ಹೋದರೆ – ರಾಜ್ಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ವಸ್ತುಪ್ರದರ್ಶನವೊಂದು ನಡೆಯಲಿದೆ ಎಂಬ ಬಗ್ಗೆ ಪರಿವೆ ಇಲ್ಲದಂತೆ ಅಥವಾ ತೀರ ಅಸಡ್ದೆಯಿಂದಲೋ ಎಂಬಂತೆ ಕಾಲೇಜು ತಣ್ಣಗೆ ಇತ್ತು. ಒಂದರ್ಧ ಗಂಟೆಯ ನಂತರ ಕೆಲವು ಸಂಘಟಕರು ಕಾಣಿಸಿಕೊಂಡರು. ಪ್ರಯೋಗಾಲಯಗಳಲ್ಲಿ ವಿಜ್ಞಾನ ಮಾದರಿಗಳನ್ನು ಸಜ್ಜುಗೊಳಿಸಲು ವ್ಯವಸ್ಥೆ ಮಾಡಿದ್ದರು. ನಮ್ಮ ಕಾಲೇಜಿನ ತಂಡಕ್ಕೆ ಗುಪ್ತ ಸಂಖ್ಯೆ (ಕೋಡ್) ಕೊಟ್ಟಿದ್ದರು. ಅಲ್ಲಿ ಹೋದರೆ ಟೇಬಲ್ ವ್ಯವಸ್ಥೆ ಇರಲಿಲ್ಲ. ಸರಿ, ಮತ್ತೆ ಮೇಜಿಗಾಗಿ ಹುಡುಕಾಟ. (ಟೇಬಲ್ ಪಡೆಯುವುದಕ್ಕೇ ಒಂದಿಷ್ಟು ಹರಸಾಹಸ ಮಾಡಿದ್ದು ಉಳಿದ ಸಾಹಸಗಳಿಗೆ ಹೋಲಿಸಿದರೆ ನಗಣ್ಯ). ಅಂತೂ ನಮ್ಮ ತಂಡಗಳು ತಾವು ನಿರ್ಮಿಸಿದ ವಿಜ್ಞಾನ ಮಾದರಿಗಳನ್ನೆಲ್ಲ ಜೋಡಿಸಿ ಸಿದ್ಧರಾದರು.
ಕಾರ್ಯಕ್ರಮದ ಅನುಸಾರ ಹತ್ತು ಗಂಟೆಯ ಹೊತ್ತಿಗೆ ಉದ್ಘಾಟನೆ. ಹನ್ನೊಂದೂವರೆಯ ಹೊತ್ತಿಗೆ ಉದ್ಘಾಟನೆಯ ಕಾರ್ಯಕ್ರಮ ಆರಂಭವಾಯಿತು. ಉದ್ಘಾಟಿಸಿದವರು ಗುಲಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಮುಲೀಮನಿ. ಅವರದು ಅತ್ಯುತ್ತಮ ಭಾಷಣ. ವಿಜ್ಞಾನದ ಆವಿಷ್ಕಾರಗಳ ಬಗ್ಗೆ ಒಳನೋಟ ಕೊಡುವ ಭಾಷಣ ಅವರದಾಗಿತ್ತು. ಮುಖ್ಯ ಅತಿಥಿಗಳಾಗಿ ಬಂದ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ;ಗಜೇಂದ್ರಗಢರೂ ಚೆನ್ನಾಗಿ ಮಾತನಾಡಿದರು. ಅದಾಗಲೇ ಅವಧಿ ಮೀರಿದ ಕಾರ್ಯಕ್ರಮವಾದುದರಿಂದ ಹೆಚ್ಚಿನ ಮಂದಿಗೆ ಕೇಳುವ ತಾಳ್ಮೆ ಇರಲಿಲ್ಲ.
ಪ್ರತಿ ವಿವಿಯಿಂದ ಎಂಟು ತಂಡಗಳಂತೆ ಒಟ್ಟು ನಲುವತ್ತೆಂಟು ತಂಡಗಳು ಭಾಗವಹಿಸಬೇಕಾಗಿತ್ತು. ಒಟ್ಟು ಮೂವತ್ತು ತಂಡಗಳು ಸ್ಪರ್ಧೆಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ್ದುವು. ನಿರ‍್ಣಾಯಕರು ಮಧ್ಯಾಹ್ದ ಹೊತ್ತಿಗೆ, ಸಂಜೆಯ ಹೊತ್ತಿಗೆ – ಭೇಟಿ ಕೊಟ್ಟು ಸ್ಪರ್ಧಾರ್ಥಿಗಳ ವಿವರಣೆಯನ್ನು ವೀಕ್ಷಿಸಿದರಾದರೂ ಸಂವಾದಗಳು ನಡೆದದ್ದು ಕಡಿಮೆ. ಆದರೆ ತೀವ್ರವಾಗಿ ನಿರಾಶೆಯಾದದ್ದು – ಅತಿಥೇಯ ಕಾಲೇಜಿನ ವಿದ್ಯಾರ್ಥಿಗಳ ಗೈರು ಹಾಜರಿ ಮತ್ತು ಸಾರ್ವಜನಿಕರ ನಿರಾಸಕ್ತಿ. ಇಡೀ ಕಾಲೇಜಿಗೆ ಎರಡು ದಿನಗಳ ರಜೆ ಘೋಷಿಸಿದ್ದು ಯಾಕೋ ತಿಳಿಯದು. ಸಹಜವಾಗಿಯೇ ಸಾವಿರಾರು ವಿದ್ಯಾರ್ಥಿಗಳಲ್ಲಿ ಅಲ್ಲಿ ಸುಳಿದಾಡುತ್ತಿದ್ದವರು ಬೆರಳೆಣಿಕೆಯಷ್ಟೇ ಮಂದಿ. ವಿದ್ಯಾರ್ಥಿಗಳು ಕಾಲೇಜಿನ ಚಟುವಟಿಕೆಗಳಲ್ಲಿ ಅವಿಭಾಜ್ಯ ಅಂಗ. ಉಳಿದೆಲ್ಲ ವ್ಯವಸ್ಥೆಗಳು ಇದ್ದರೆಷ್ಟು? ಬಿದ್ದರೆಷ್ಟು? ವಿದ್ಯಾರ್ಥಿಗಳಿಲ್ಲದ ಕಾಲೇಜು ಸತ್ತಂತಿತ್ತು.
ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಉಫೋತ್ಪನ್ನವಾಗಿ ತುಂಬಿ ಹೋಗಿದೆ ಬಗೆ ಬಗೆಯ ಎಲೆಕ್ಟ್ರಾನಿಕ್ ಸಲಕರಣೆಗಳು. ಮೊಬೈಲುಗಳು, ಕಂಪ್ಯೂಟರುಗಳು, ಅದರ ಸಂಬಂಧೀ ನಾನಾ ನಮೂನೆಯ ಹತ್ಯಾರುಗಳು, ಉಪಕರಣಗಳು – ಒಂದೇ ಎರಡೆ .. ಆದರೆ ಇವುಗಳು ಬಳಕೆಗೆ ಯೋಗ್ಯವಾಗದೇ ಹೋದಾಗ ನಿವಾರಿಸುವ ಬಗೆ ಹೇಗೆ? ಸಿಲಿಕಾನ್, ಜರ್ಮೇನಿಯಮ್ ಮೊದಲಾದ ಅರೆವಾಹಕ ಧಾತುಗಳು, ಕ್ಯಾಡ್ಮಿಯಮ್, ಮರ್ಕ್ಯೂರಿಯಂಥ ವಿಷ ಪದಾರ್ಥಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಕೊಳಚೆಯ ನಿವಾರಣೆ ಬಲು ದೊಡ್ದ ಸವಾಲಾಗುತ್ತಿದೆ. ಶ್ರೀಶ ಮತ್ತು ಹರಿಪ್ರಸಾದ್ ಈ ಕುರಿತು ಅಚ್ಚುಕಟ್ಟಾದ ಮಾದರಿಯನ್ನು ನಿರ್ಮಿಸಿದ್ದರು. ಕಂಪ್ಯೂಟರ್ ಮಾನಿಟರನ್ನು ವಾಷ್ ಬೆಸಿನ್ ಆಗಿ, ಹಾಳಾದ ಕಂಪ್ಯೂಟರಿನ ಸಿಡಿ ಪ್ಲೇಯರನ್ನು ಸಂಗೀತ ಕೇಳುವ ಉಪಕರಣವಾಗಿ, ಮೆದುಳು ಸತ್ತ ಕಂಪ್ಯೂಟರಿನಲ್ಲಿರುವ ಫ್ಯಾನನ್ನು ಡ್ರೈಯರ್ ಆಗಿ, ಹಾಳಾದ್ ಸಿಡಿ ಅಥವಾ ಡಿವಿಡಿ ತಟ್ಟೆಗಳನ್ನು ಬೆಳಕಿನ ಪ್ರತಿಫಲಕಗಳಾಗಿ, ಉರಿಯದ ಬಲ್ಬುಗಳನ್ನು ಸೀಮೆ ಎಣ್ಣೆ ಬುಡ್ಡಿಗಳಾಗಿ … ಹೀಗೆ ನಿರುಪಯುಕ್ತವೆಂದು ಕಾಣುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬೇರೆಯೇ ಬಗೆಯಲ್ಲಿ ಬಳಸುವ ಬಗ್ಗೆ ತಮ್ಮ ಸೃಜನಶೀಲತೆಯನ್ನು ತೋರಿದ್ದರು. ಇದರೊಂದಿಗೆ ಯಾವ ಬಗೆಯಲ್ಲಿ E – Waste ಅಥವಾ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಪರಿಸರಕ್ಕೆ ಧಕ್ಕೆಯಾಗದಂತೆ ಸಂಸ್ಕರಿಸಲು ಸ್ಥಾಪಿಸಬಹುದಾದ ದೊಡ್ಡ ಮಟ್ಟದ ಸಂಸ್ಕರಣಾ ಕೇಂದ್ರ ಹೇಗಿರುತ್ತದೆಂದು ತಮ್ಮ ಮಾದರಿಯಲ್ಲಿ ನಿರೂಪಿಸಿದ್ದರು. ನನಗನ್ನಿಸುವ ಹಾಗೆ ದೊಡ್ಡ ದೊಡ್ದ ನಗರಗಳಲ್ಲಿ ಇಂಥ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗುವ ದಿನ ದೂರವಿಲ್ಲ – ಏಕೆಂದರೆ ದಿನ ನಿತ್ಯ ಟನ್ನು ಗಟ್ಟಲೆ ಇ -ತ್ಯಾಜ್ಯ ಶೇಖರವಾಗುತ್ತಿದೆ. ಎಮ್ ಜಿ ಎಮ್ ಕಾಲೇಜಿನಲ್ಲಿ ಈ ಕಾರಣಕ್ಕಾಗಿಯೇ ಇ-ತ್ಯಾಜ್ಯ ದ ಇವರ ಮಾದರಿ ಅಪಾರ ಮೆಚ್ಚುಗೆ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿತ್ತು.
ನಿತ್ಯ ನಾವು ಬಳಸುವ ವಸ್ತುಗಳ ಬದಲಿಗೆ ಪರಿಸರ ಸ್ನೇಹೀ ಬೇರೆ ವಸ್ತುಗಳನ್ನು ಬಳಸುವ ಬಗ್ಗೆ ಹೊಸ ದಾರಿಗಳನ್ನು ಹುಡುಕುವ ಪ್ರಯತ್ನವೇ Alternate Materials and Application. ಈ ವಿಭಾಗದಲ್ಲಿ ಸ್ಪರ್ಧಿಸಿದವರು ಸ್ಮೃತೀ ಹೆಬ್ಬಾರ್ ಮತ್ತು ತನ್ಮಯ ತನ್ಮಯ ಲಕ್ಷ್ಮಿ. ಹಾಳೆಯ ತಟ್ಟೆ, ಮುಟ್ಟಾಳೆ, ಅಡಿಕೆಯ ಸಲಿಕೆ ಮತ್ತು ಗೆರೆಟೆಯಿಂದ ರೂಪು ಪಡೆದ ಸೌಟು … ಇಂಥವು ಹಲವಿದ್ದುವು. ಮುಖ್ಯವಾಗಿ ಇವರ ಮಾದರಿಯಲ್ಲಿ ಕಲ್ಲಿದ್ದಲು ವಿದ್ಯುತ್ ಸ್ಥಾವರದಿಂದ ಬಿಡುಗಡೆಯಾಗುವ ಹಾರು ಬೂದಿ (fly ash)ಯನ್ನು ಇಟ್ಟಿಗೆಯಾಗಿ ಬಳಸುವ ಬಗ್ಗೆ ವಿವರವಾದ ಮಾಹಿತಿಯಷ್ಟೇ ಅಲ್ಲ – ಇಟ್ಟಿಗೆಗಳನ್ನು ಮಾಡಿ ತೋರಿಸುವ ಮಾದರಿಯೊಂದನ್ನು ಮಾಡಿದ್ದರು. ಪ್ಲಾಸ್ಟಿಕ್, ರಬ್ಬರ್ ತ್ಯಾಜ್ಯಗಳು ಮಣ್ಣಿಗೆ ಸೇರವು. ಸುಟ್ಟರೆ – ಅದರಿಂದ ಬಿಡುಗಡೆಯಾಗುವ ವಿಷ ಪದಾರ್ಥಗಳು ಪರಿಸರವನ್ನು ಇನ್ನಷ್ಟು ಕೊಳಚೆಯನ್ನಾಗಿಸುತ್ತವೆ. ಹಾಗಾಗಿ ಅವುಗಳನ್ನು ರಸ್ತೆಯ ನಿರ್ಮಾಣದಲ್ಲಿ ಉಪಯೋಗಿಸುವ ಕುರಿತು ಚಿಂತನೆ ನಡೆದಿದೆ. ಇವರ ಮಾದರಿಯಲ್ಲಿ ಈ ಕುರಿತು ವಿವರವಾದ ಮಾಹಿತಿ ಮಾತ್ರವಲ್ಲ ಅದನ್ನು ಹೇಗೆ ಮಾಡುತ್ತಾರೆನ್ನುವ ಬಗ್ಗೆ working model ಇತ್ತು.
ದಿವ್ಯಶ್ರೀ ಮತ್ತು ರೇಖಾ ನಿರ್ಮಿಸಿದ ಮಾದರಿ ಅಚ್ಚುಕಟ್ಟಾದ ಸುಂದರ ಮಾದರಿಗಳನ್ನು ನಿರ್ಮಿಸಿದ್ದರು. ನೊಬೆಲ್ ವಿಜೇತ ಭೌತ ವಿಜ್ಞಾನಿ ರಿಚರ್ಡ್ ಫೈನ್ಮಾನ್ ಕ್ಯಾಲಿಫೋರ್ನಿಯಾ ವಿವಿಯಲ್ಲಿ (ಡಿಸೆಂಬರ್ ೨೯,೧೯೫೯) ಒಂದು ಐತಿಹಾಸಿಕ ಉಪನ್ಯಾಸ ಮಾಡಿದರು. ಫೈನ್ಮಾನ್ ಇಪ್ಪತ್ತನೇ ಶತಮಾನ ಕಂಡ ಪ್ರಖರ ಸೈದ್ಧಾಂತಿಕ ಭೌತ ವಿಜ್ಞಾನಿ ಮಾತ್ರವಲ್ಲ – ಶ್ರೇಷ್ಠ ಪ್ರಾಧ್ಯಾಪಕ – ಅವರ ಉಪನ್ಯಾಸ ಕುಮಾರವ್ಯಾಸ ಮಹಾಭಾರತವನ್ನು ಹಾಡಿದಂತೆ! ಅಂದು ಅವರು ನೀಡಿದ ಉಪನ್ಯಾಸದ ವಿಷಯ : There’s Plenty of Room at the Bottom . ಸೂಕ್ಶ್ಮ ರೂಪವಾದ ನ್ಯಾನೋ ಗಾತ್ರದಲ್ಲಿ ದ್ರವ್ಯ ಯಾವೆಲ್ಲ ವಿಚಿತ್ರ ಬಗೆಯಲ್ಲಿ ವರ್ತಿಸುತ್ತದೆ, ನಮ್ಮ ಇಂದಿನ ಭೌತ ಜ್ಞಾನ ಅದನ್ನು ವಿವರಿಸುವಲ್ಲಿ ಹೇಗೆ ಸೋಲುತ್ತದೆ, ಮತ್ತು ಇಂಥ ವಿಷಿಷ್ಟ ಗುಣಗಳನ್ನು ಯಾವ ಬಗೆಯಲ್ಲಿ ಬಳಸಿಕೊಳ್ಲಬಹುದು ಎಂಬಿತ್ಯಾದಿ ವಿವರಗಳನ್ನು ಒಳಗೊಂಡ ಆ ಉಪನ್ಯಾಸ ನ್ಯಾನೋ ಎಂಬ ಮಾಯಾ ತಂತ್ರಜ್ಞಾನಕ್ಕೆ ಕಾರಣವಾಯಿತು. ಬೇರೆ ಬೇರೆ ನ್ಯಾನೋ ವಸ್ತುಗಳ ಮಾದರಿಗಳನ್ನು ಪ್ಲಾಸ್ಟಿಕ್ ಮಣಿಗಳನ್ನು, ಕಬ್ಬಿಣದ ಜಾಲರಿಗಳನ್ನು ಬಳಸಿಕೊಂಡು ಅವರು ನಿರ್ಮಿಸಿದ್ದರು. ೬೪ ಕಾರ್ಬನ್ ಪರಮಾಣುಗಳ ಜೋಡಣೆಯಿಂದ ಒಂದು ಕಾಲ್ಚೆಂಡಿನ ಆಕಾರವನ್ನು ಹೊಂದುವ ಕಾರ್ಬನ್ ಅಣುವಿನ ಮಾದರಿಯನ್ನು ನಿರ್ಮಿಸುವಲ್ಲಿ ತಮ್ಮ ಸೃಜನಶೀಲತೆ ತೋರಿದ ಹುಡುಗಿಯರು ನ್ಯಾನೋ ಬ್ರೆಶ್ ಮತ್ತು ವಾಹನದ working model ಮಾಡಿದ್ದರು. ವಲಯ ಹಂತದಲ್ಲಿ ತುರುಸಿನ ಸ್ಪರ್ಧೆಯನ್ನು ಎದುರಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಇವರನ್ನು “ಸ್ಪರ್ಧೆಯಲ್ಲಿ ಗೆಲ್ಲಬಹುದಾದ ಕರಿ ಕುದುರೆಗಳು” ಎಂದು ತಮಾಷೆ ಮಾಡುತ್ತಿದ್ದೆವು.


ಇದೀಗ ಸ್ಪರ್ಧೆಯ ಫಲಿತಾಂಶದ ಬಗ್ಗೆ ಕುತೂಹಲ. ಸಂಜೆ ಐದರ ಹೊತ್ತಿಗೆ ಸಮಾರೋಪ ಸಮಾರಂಭದ ಔಪಚಾರಿಕತೆಗಳೆಲ್ಲ ಮುಗಿದ ಮೇಲೆ ಫಲಿತಾಂಶಗಳ ಘೋಷಣೆಯಾದುವು. ನಮ್ಮ ತಂಡಗಳ ಮಾದರಿಗಳು ಅತ್ಯುತ್ತಮವಾಗಿದ್ದುವು. ಹಾಗಾಗಿ ಬಹುಮಾನಕ್ಕೆ ಆಯ್ಕೆಯಾಗುವ ನಿರಿಕ್ಷೆ ನಮಗಿತ್ತು ಇತ್ತು. ಆದರೆ ನಿರ್ಣಾಯಕರ ನಿಲುವು ಬೇರಾಗಿತ್ತು. ಅವರು ನಿರೀಕ್ಷಿಸಿದ ಮಟ್ಟಕ್ಕೆ ನಾವಿರಲಿಲ್ಲವೇನೋ ! ಎರಡೂ ಕಾಲೇಜುಗಳ ತಂಡಗಳಿಗೆ – ಮಂಗಳೂರು ವಿವಿಗೆ ಶೂನ್ಯ ಪ್ರಾಪ್ತಿಯಾಯಿತು. ಸಹಜವಾಗಿಯೇ ಸೋಲು ಒಮ್ಮೆ ತರುತ್ತದೆ ಹತಾಶೆ, ದು:ಖ. ಎಳೆಯ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಮೇಲೆ, ಮತ್ತೆ ಮುಖದಲ್ಲಿ ತುಂಬಿತು ಎಂದಿನ ಮಂದಹಾಸ. ಅದು ಜೀವನೋತ್ಸಾಹ!
ಆ ದಿನ ಬೀದರಿನ ನಾನಕ್ ನಿವಾಸದಲ್ಲಿಯೇ ಉಳಿದುಕೊಂಡ ನಾವು, ಬೆಳ್ಳಂಬೆಳಗ್ಗೆ ಕೋಟೆಯ ವೀಕ್ಷಣೆಗೆ ಧಾವಿಸಿದೆವು. ಅತ್ಯಾಗಾಧ ಕೋಟೆ. ಎಷ್ಟೊಂದು ಜನರು ಈ ಅಗಾಧ ರಚನೆ ನಿರ್ಮಿಸಲು ದುಡಿದಿರಬಹುದು ಮತ್ತು ಅದಕ್ಕಿಂತ ಹೆಚ್ಚಿಗೆ ಅವರನ್ನು ದುಡಿಸಿಕೊಳ್ಲಲು ಸಾಧ್ಯವಾದ ಪ್ರಭುತ್ವ ವ್ಯವಸ್ಥೆ! ನೋಡುತ್ತ ಹೋದ ಹಾಗೆ ವಿಸ್ಮಯ, ದುಗುಡ, ಭಯ ಎಲ್ಲವೂ ಆವರಿಸಿಕೊಳ್ಳುತ್ತದೆ.
ಅಲ್ಲಿಂದ ಮತ್ತೆ ಆರಂಭವಾಯಿತು ನೋಡಿ ನಮ್ಮ ಮರು ಪಯಣ. ದಾರಿಯಲ್ಲಿ ಸಿಗುವ ಬಿಜಾಪುರದ ಗೋಳಗುಮ್ಮಟದ ಒಳ ಹೊಕ್ಕೆವು. ಕಂಬಗಳಿಲ್ಲದೇ ಅತ್ಯಂತ ಎತ್ತರದ ಗೋಡೆಯ ಮೇಲೆ ನೆಲೆನಿಂತ ವಿಶಾಲವಾದ ಗುಮ್ಮಟ. ಹದಿಮೂರನೇ ಶತಮಾನವಿರಬೇಕು – ಪ್ರಾರ್ಥನಾ ಮಂದಿರವಾಗಿದ್ದ ಇಲ್ಲಿ ಅಂದು ಜನಸಮುದಾಯ ಹೇಗಿದ್ದಿರಬಹುದು ಎಂಬ ಊಹೆಯೇ ರೋಮಾಂಚನ ಹುಟ್ಟಿಸುತ್ತದೆ. ಗುಮ್ಮಟದೊಳಗೆ ಪಿಸು ದನಿಯೂ ಮಾರ್ದನಿಸುತ್ತದೆ – ಹಲವು ಬಾರಿ ಪ್ರತಿಫಲನದಿಂದ. ಓಲಗೆ ತುಂಬಿದ ಜನರ ಕೇಕೆ, ಶಿಳ್ಳೆ, ಚಪ್ಪಾಳೆ, ಬಗೆ ಬಗೆಯ ವಿಕಾರ ಕೂಗುಗಳು ಮಾತ್ರ ಕಳೆದುಹೋದವರ ದನಿಯೋ ಎಂಬಂತೆ ಭಾಸವಾಗುತ್ತಿತ್ತು. ಗೋಳಗುಮ್ಮುಟ ಅನನ್ಯ ಅನುಭವ ಕಟ್ಟಿಕೊಡುವ ಅದ್ಭುತ ರಚನೆ. ಇಷ್ಟೆಲ್ಲ ನೋಡಿ ಮುಗಿಸುವಾಗ ಸೂರ್ಯ ನಡು ನೆತ್ತಿಗೆ ಬಂದಿದ್ದ. ಹಸಿವು ಕೂಡ ನೆತ್ತಿಗೇರತೊಡಗಿತ್ತು! ಅಲ್ಲೇ ಸನಿಹದ “ಕಾಮತ ಖಾನಾವಳಿ”ಯಲ್ಲಿ ಊಟ ಮುಗಿಸಿ ಮುಂದುವರೆಯಿತು ಪಯಣ.
ಹುಬ್ಬಳ್ಳಿ ತಲಪುವಾಗ ಸಂಜೆ ಏಳು. ಕರ್ನಾಟಕ ವಿಶ್ವವಿದ್ಯಾಲಯದ ವಸತಿ ಗೃಹದಲ್ಲಿ ಉಳಿದು, ಮರುದಿನ ಬೆಳಗ್ಗೆ ಆರರ ಮೊದಲೇ ಹೊರಟೆವು ಊರ ಕಡೆಗೆ. ಬೆಳಗ್ಗಿನ ನಾಷ್ಟಾ ಯಲ್ಲಾಪುರದಲ್ಲಿ. ಮಧ್ಯಾಹ್ದದ ಹೊತ್ತಿಗೆ ಎಮ್ ಜಿ ಎಮ್ ತಲಪುವಾಗ ಅಲ್ಲಿ ಸ್ವಾಗತಿಸಲು ಕಾದಿದ್ದರು ಪ್ರಾಂಶುಪಾಲರು ಮತ್ತು ಇತರ ವಿದ್ಯಾರ್ಥಿ ವೃಂದ. ನಮ್ಮ ಮತ್ತು ಎಮ್ ಜಿ ಎಮ್ ವಿದ್ಯಾರ್ಥಿಗಳ ನಡುವೆ ಅಟೋಗ್ರಾಫುಗಳ ವಿನಿಮಯಗಳೆಲ್ಲ ನಡೆದು, ಕಣ್ಣಂಚಿನಲ್ಲಿ ಒಂದಷ್ಟು ತೆಳ್ಳಗೆ ಕಂಬನಿ ಒಸರಿಕೊಂಡು ಸಮಯ ಜಾರತೊಡಗಿದಂತೆ ಎಚ್ಚರಿಸಬೇಕಾಯಿತು. ನಾವು ಸೇರಬೇಕಲ್ಲ ನಮ್ಮ ಗೂಡನ್ನು! ಸಂಜೆ ಐದರ ಹೊತ್ತಿಗೆ ನಾವು ಸುಕ್ಷೇಮವಾಗಿ ವಿವೇಕಾನಂದ ಕಾಲೇಜು ತಲಪಿದೆವು. ಅಲ್ಲಿಗೆ ಒಂದು ವಾರದ ಬೀದರ್ ಪಯಣ ಮುಕ್ತಾಯವಾಯಿತು.
ಬೀದರಕ್ಕೆ ಪಯಣಿಸುವ ಮುನ್ನ ಆತಂಕಗೊಂಡದ್ದು ನಿಜ ಮತ್ತು ಸಹಜ. ಹಲವು ಹಿರಿಯ ಮಿತ್ರರು ಶಾಲೆಯ ಬಸ್ಸಿನಲ್ಲಿ ಅಷ್ಟೊಂದು ದೂರ ಪ್ರಯಾಣಿಸುವುದು ಹುಡುಗಾಟವಲ್ಲವೆಂದು ಎಚ್ಚರಿಸಿದ್ದರು. ಹುಡುಗಾಟ ಮಾಡದೇ ಸಾಕಷ್ಟು ಪೂರ್ವ ಯೋಜನೆಗಳನ್ನು ಶಿಸ್ತು ಬದ್ಧವಾಗಿ ರೂಪಿಸಿದ ಕಾರಣದಿಂದ ಪಯಣದಲ್ಲಿ ಯಾವುದೇ ತೊಂದರೆಗಳು ಸಂಭವಿಸಲಿಲ್ಲ. ಆದರೆ ಬೇಸರವಾದದ್ದು – ಇಡೀ ಕಾರ್ಯಕ್ರಮದ ಅವ್ಯವಸ್ಥೆಯಿಂದಾಗಿ. ಅದು ನಮ್ಮ ಕೈಯಲ್ಲಿರಲಿಲ್ಲ. ರಾಜ್ಯ ಮಟ್ಟದ ಸ್ಪರ್ಧೆಯನ್ನು ಒಪ್ಪಿಕೊಂಡ ಕಾಲೇಜು, ಇದನ್ನು ಅತ್ಯುತ್ತಮವಾಗಿ ಸಂಘಟಿಸಬಹುದಾಗಿತ್ತು; ಇಡೀ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಬಹುದಾಗಿತ್ತು. ಆದರೆ ಈ ನಿಟ್ಟಿನಲ್ಲಿ ಆಲೋಚಿಸದೇ ಹೋದದ್ದು ದುರಂತ. ಸ್ಪರ್ಧೆಯಲ್ಲಿ ಭಾಗವಿಸುವ ೯೬ ಮಂದಿ ವಿದ್ಯಾರ್ಥಿಗಳಿಗೆ ಅವರನ್ನು ಸೇರಿಕೊಳ್ಳುವ ಮಾರ್ಗದರ್ಶಿ ಉಪನ್ಯಾಸಕರಿಗೆ ವಾಸ್ತವ್ಯ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬಹುದಾಗಿತ್ತು. ಆದರೆ ಇದರ ಕುರಿತು ಆಲೋಚಿಸದೇ ಹೋದದ್ದು ಕಂಡಾಗ ವಿಜ್ಞಾನ ಪ್ರಸಾರಕ್ಕೆ ವಿಜ್ಞಾನ ಪರಿಷತ್ತಿಗೂ ಅಷ್ಟೇನೂ ಬದ್ಧತೆ ಇಲ್ಲವೇನೋ ಎಂದು ನಮಗನ್ನಿಸಿತು.
ರಾಜ್ಯ ಮಟ್ಟದ ಅಂತಿಮ ಹಂತದ ಇಂಥ ಸ್ಪರ್ಧೆಯಲ್ಲಿ ಸ್ಪರ್ಧೆಗೆ ಬಂದ ವಿಜ್ಞಾನ ಮಾದರಿಗಳನ್ನು ಪರಿಶೀಲಿಸಲು ಯೋಜಿಸುವ ನಿರ್ಣಾಯಕರು ಅತ್ಯಂತ ಸಮರ್ಥರಾಗಿರಬೇಕಾದದ್ದು ಅವಶ್ಯ. ಬೀದರದಲ್ಲಿ ಅಂಥ ನಿರ್ಣಾಯಕರು ಇದ್ದಿರಬಹುದು. ಆದರೆ ಅವರು ಯಾರು? ಅವರ ಅಹ್ರತೆಗಳೇನು? ಇಂಥ ಮಾಹಿತಿಗಳನ್ನು ವಲಯ ಮಟ್ಟದ ಸ್ಪರ್ಧೆಗಳಲ್ಲಿ ನೀಡಿದಂತೆ ನೀಡಬಹುದಾಗಿತ್ತು. ಇದರಿಂದ ಇಡೀ ತೀರ್ಪಿನ ವ್ಯವಸ್ಥೆ ಇನ್ನಷ್ಟು ಪಾರದರ್ಶಕವಾಗುತ್ತಿತ್ತು.
ಉಡುಪಿಯ ಎಮ್ ಜಿ ಎಮ್ ಕಾಲೇಜಿನಲ್ಲಿ ವಲಯ ಮಟ್ಟದ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಲು ಸಾಧ್ಯವಾಗುವುದಾದರೆ, ರಾಜ್ಯ ಮಟ್ಟದ ಸ್ಪರ್ಧೆ ಅದಕ್ಕಿಂತ ದುಪ್ಪಟ್ಟು ಉತ್ಕೃಷ್ಟವಾಗಿರಬಹುದೆಂದು ನಾವು ನಿರೀಕ್ಷಿಸಿದ್ದರೆ, ಅಚ್ಚರಿಯೋ ಎನ್ನುವಂತೆ ಅವ್ಯವಸ್ಥೆಯ ಪರಮಾವಧಿಯ ಸಂಘಟನೆ ಅಲ್ಲಿತ್ತು. ಮುಂದಿನ ಬಾರಿ ಹೀಗಾಗದಿರಲಿ ಎಂಬ ಆಶಯ ಭಾಗವಹಿಸಿದ ನಮ್ಮೆಲ್ಲರದು.
ಇವೆಲ್ಲವುಗಳ ನಡುವೆ, ಉತ್ತರ ಕರ್ನಾಟಕದ ಬಹು ಭಾಗವನ್ನು ನೋಡುವ, ಅನುಭವಿಸುವ ಅಪೂರ್ವ ಅವಕಾಶವೊಂದನ್ನು ಬೀದರದ ಪಯಣ ನಮಗೆ ಕೊಟ್ಟಿತು. ಈ ಅನುಭವಗಳು ವಿದ್ಯಾರ್ಥಿಗಳ ಪಾಲಿಗೆ ಇನ್ನಷ್ಟು ಸವಾಲನ್ನು ಎದುರಿಸುವ ಛಲವನ್ನು ಪ್ರೇರಿಸಿವೆ. ವೈವಿದ್ಯ ಜೀವನಾನುಭವವವೇ ಸಮೃದ್ಧ ಜೀವನದ ಲಕ್ಷಣವೆಂದು ಬಟ್ರೆಂಡ್ ರಸೆಲ್ ಹೇಳಿದ್ದು ನೆನಪಾಗುತ್ತಿದೆ.
ಪ್ರಿಯ ರಾಧಾ
ಪ್ರವಾಸ ಕಥನ ವಿಸ್ತರಿಸದೆ, ಹೋಗಲಿ ಎಂದರೆ ವಿಜ್ಞಾನ ಮೇಳದ ಕನಿಷ್ಠ ನಿಮ್ಮ ಪಾಲ್ದಾರಿಕೆಯ ವಿವರಗಳನ್ನೂ (ಬರಿಯ ಹೆಸರುಗಳು, ಕೆಲವು ಚಿತ್ರಗಳು ಸಾಲವು) ಕೊಡದೆ ಜಿಪುಣನಾದದ್ದು ಯಾಕೆ? ಸ್ಪರ್ಧೆಯಲ್ಲಿ ನಿಮ್ಮ ಪ್ರದರ್ಶನಗಳ ವಿವರಗಳು, ‘ವಿಜೇತ’ ತಂಡದ ವಿವರಗಳನ್ನಷ್ಟಾದರೂ ಕೊಟ್ಟು ಬ್ಲಾಗ್ ಓದುಗರ ತೀರ್ಮಾನಕ್ಕೆ ಸವಾಲು ಅಲ್ಲದಿದ್ದರೆ ತಿಳುವಳಿಕೆಗೆ ಅವಕಾಶವಾದರೂ ಕಲ್ಪಿಸಬಹುದಿತ್ತು. ನಿಮ್ಮ ಒಂದು ಪ್ರದರ್ಶಿಕೆ e-waste ಎಂದಿದ್ದೀ. ಅದರ ಜೊತೆಗೆ ನಿಷ್ಕಾಳಜಿಯ ವಿಜ್ಞಾನ ಮೇಳವೆಂಬ ಈ ವೇಸ್ಟ್ (ಆತಿಥೇಯ ಕಾಲೇಜೂ ಪರಿಷತ್ತೂ ಪಾಲ್ದಾರರು) ಓದಿ ಮನಸ್ಸು ಭಾರವಾಯ್ತು. ಹಣಚಲಾವಣೆ, ಕಡತಗಳ ಬೆಳವಣಿಗೆ ಇಂದು ಎಲ್ಲಾ ಮೇಳಗಳ ಸಾಮಾನ್ಯ ಲಕ್ಷಣ. ಅದರಲ್ಲಿ ಉತ್ತಮಿಕೆಯನ್ನು ಕಾಣಿಸಿದ್ದು ಎಂಜಿಎಂ ಕಾಲೇಜಿನ ಪರಂಪರೆಯ ದೊಡ್ಡತನ. “ಅಯ್ಯೋ……..” ಎಂದು ತಾವು ಭಾಗವಹಿಸದ ಕುರಿತು ನೂರೆಂಟು ಸಬೂಬು ಹೇಳುತ್ತ, ಪಡೆಯುವ ಸಂಬಳ ಸವಲತ್ತುಗಳಿಗೆ ಕೆಟ್ಟ ಉದಾಹರಣೆಗಳಾಗಿ ಕೂರುವವರಿಗೆ ಕಣ್ಣಕಿಸರಾಗುವಂತೆ ನೀನು/ ನೀವು ಸಮರ್ಪಕವಾಗಿ ಅನುಭವಿಸಿದ್ದಕ್ಕೆ ಹಾರ್ದಿಕ ಅಭಿನಂದನೆಗಳು. ಶಿಖರವೊಂದೇ ಲಕ್ಷ್ಯವಲ್ಲ, ದಾರಿ ಕೂಡಾ ಎನ್ನುವುದನ್ನು ಮರೆಯದೆ ಕಿಂಚಿತ್ತಾದರೂ ಬರೆದದ್ದಕ್ಕೆ ಹೊಗಳಬೇಕೋ ಬೈಬೇಕೋ 🙂
ಅಶೋಕವರ್ಧನ
wow.. sir. awesome.. really what a writing sir.. You have mentioned all matters.. Hats off to your work sir.. Bidar trip was successfull because of you sir its cent percent sure.. there is no dout.. thaks alot sir.. 🙂
very nice article sir..:) i still remember u made me read Feynman! I was so captivated by his thought process,i even read his biography which goes by the title ‘surely you are joking Mr.Feynman’!! during my mbbs! he still stands as my hero!! about the participation experience, i had a similar experience while i went for a surgery quiz in pondicherry recently… one good thing we can get from it is that a feel good factor about our own college isnt it sir? sorry for the late reply,it is because of hectic schedule of medicine and surgery..