ಮುಖ ಪುಟ > ವ್ಯಕ್ತಿ - ಜೀವನ > ನಾರಾಯಣ ಮಾವ ಮತ್ತು ಮರಿಕೆ

ನಾರಾಯಣ ಮಾವ ಮತ್ತು ಮರಿಕೆ

ಫ್ರಖರ ಚಿಂತಕ ಮೂಢನಂಬುಗೆಯ ಭಂಜಕ

ಫ್ರಖರ ಚಿಂತಕ ಮೂಢನಂಬುಗೆಯ ಭಂಜಕ

ವಿಜ್ಞಾನ ವಾಙ್ಮಯಕ್ಕೆ ಇವರು ಜಿಟಿಎನ್ – ಜಿಟಿನಾರಾಯಣ ರಾವ್.  ನಮಗೆ ಮರಿಕೆಯ ಮಂದಿಗೆ? ಮರಿಕೆಯ ಹಿರಿಯರಿಗೆ ನಾರಾಯಣ, ಮಕ್ಕಳಿಗೆ ನಾರಾಯಣ ಮಾವ, ಮರಿಮಕ್ಕಳಿಗೆ ನಾರಾಯಣಜ್ಜ.

ಇವರು ಮರಿಕೆಗೆ ಬರುತ್ತಾರೆಂದರೆ ನಮಗೆಲ್ಲ ಸಂಭ್ರಮ, ಉತ್ಸಾಹ, ಒಂದಷ್ಟು ದಿಗಿಲು – ಪುಂಖಾನುಪುಂಖವಾಗಿ  ಅವರೆಸೆಯುತ್ತಿದ್ದ ವಿಜ್ಞಾನ ಸಂಗೀತಾದಿ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲ.

ಮರಿಕೆ ಇರುವುದು ಪುತ್ತೂರು ಪೇಟೆಯಿಂದ ಐದು ಕಿಮೀ ದೂರದಲ್ಲಿ, ಹಸಿರು ಹೊದ್ದು ಮಲಗಿರುವ ಬಲ್ಲೇರಿ ಕಾಡಿನ ಸನಿಹದಲ್ಲಿ.  ಜಿಟಿಎನ್ ಹುಟ್ಟಿದ್ದು ಮರಿಕೆಯಲ್ಲಿ (೩೦.೧.೧೯೨೬). ನನ್ನ ತಂದೆಯ ತಂದೆ – ಅಂದರೆ ಅಜ್ಜ ಸುಬ್ಬಯ್ಯರ ತಂಗಿ ವೆಂಕಟಲಕ್ಶ್ಮಿ  ಜಿಟಿಯವರ ತಾಯಿ. ಸಾಹಿತ್ಯದಲ್ಲಿ ಅಗಾಧ ಆಸಕ್ತಿ ಇದ್ದ ಅಜ್ಜ ಜಿಟಿಎನ್ ಅವರ ಮೇಲೆ ಗಾಢ ಪ್ರಭಾವ ಬೀರಿದರೆನ್ನುವುದನ್ನು ಆಗಾಗ ಹೇಳುತ್ತಿದ್ದರು ಮತ್ತು ಅದನ್ನು ತಮ್ಮ ಎನ್ ಸಿಸಿ ದಿನಗಳು, ಮುಗಿಯದ ಪಯಣ ಕೃತಿಗಳಲ್ಲಿ ದಾಖಲಿಸಿದ್ದಾರೆ.

ಮಡಿಕೇರಿ ಮನೆಯ ಪರಿಸರಕ್ಕಿಂತ ಮರಿಕೆಯಲ್ಲಿಯದೇ ನನಗೆ ಹೆಚ್ಚು ಪ್ರಿಯವಾಗುತ್ತಿತ್ತು. ಅದೊಂದು ಸಂತೆ, ಕಿರಿಯ ಸಂಗಾತಿಗಳಿಲ್ಲದ ಒಂಟಿ ಬಾಳು. ಮರಿಕೆಯಾದರೋ ಒಲುಮೆಯ ಪುಟ್ಟ ಗೂಡು. ಸೋದರಮಾವ ಸುಬ್ಬಯ್ಯ, ಅಜ್ಜಿ ಅಮ್ಮಯ್ಯ ಮತ್ತು ಅತ್ತೆ ಪಾರ್ವತಿ ನಮ್ಮನ್ನು ಎತ್ತಿ ಪ್ರೀತಿಸಿ ತಮ್ಮ ಸರೀಕನೆಂದು ಮುದ್ದು ಮಾಡುತ್ತಿದ್ದುದನ್ನು ಎಂದೂ ಮರೆಯಲಾರೆ. ಮಾವ ಕತೆ ಹೇಳಿದರು, ನಾಟಕದ ಮಟ್ಟು ಹಾಡಿದರು, ಪೈಯನ್ನೂ ನನ್ನನ್ನೂ ಎತ್ತಿಕೊಂಡು ಗದ್ದೆ ತೋಟವಿಡೀ ಅಡ್ಡಾಡಿದರು, ಜೊತೆಗೆ ಜೀವನ ಮೌಲ್ಯಗಳನ್ನು ಪ್ರತ್ಯಕ್ಷ ಆಚರಣೆಯಿಂದ ಬಿಂಬಿಸಿದರು
(ಮುಗಿಯದ ಪಯಣ ಪುಟ ೬)

ಮರಿಕೆಯೊಂದಿಗೆ ಇವರ ಸಂಬಂಧ ಮತ್ತಷ್ಟು ಗಾಢವಾಗುವುದಕ್ಕೆ ಇವರ ಸೋದರಿಕೆಯ ಮದುವೆಯೂ ಕಾರಣವಾಯಿತು. ಮುಂದೆ ಇವರು ಕೈಹಿಡಿದದ್ದು ನಮ್ಮ ಅಜ್ಜನ ಹಿರಿಯ ಮಗಳಾದ ಲಕ್ಷ್ಮಿಯನ್ನು, ಅಂದರೆ ನನ್ನ ದೊಡ್ದ ಅತ್ತೆ ಯನ್ನು(ತಂದೆಯ ಅಕ್ಕ). ಮಾವ ತಮ್ಮ ಮುಗಿಯದ ಪಯಣ ಕೃತಿಯ “ಬಾಳಿಗೊದಗಿದ ಬೆಳಕು” ಅಧ್ಯಾಯದಲ್ಲಿ (ಪು೬೪) ಬರೆಯುತ್ತಾರೆ

ಅಂದು ನಾನೊಬ್ಬ ಅತ್ಯಂತ ಅರ್ಹ ಬ್ರಹ್ಮಚಾರಿ. ಮದುವೆ ಮಾರುಕಟ್ಟೆಯಲ್ಲಿ ನನ್ನ ಬೆಲೆ ಏರಿತ್ತು! ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನ್ನಲ್ಲಿಗೆ ಬಂದ ಎಲ್ಲ ಸೂಚನೆಗಳಿಗೂ ನನ್ನ ಉತ್ತರ ಒಂದೇ : ವಯಸ್ಸು ಮೂವತ್ತು ತುಂಬಿದ ಬಳಿಕವೇ ವಿವಾಹದ ಯೋಚನೆ ಮಡಿಕೇರಿಯ ತವರಿನಲ್ಲಿದ್ದ ನಾಲ್ವರು ಅಜ್ಜಿಯರದೂ ಒಂದೇ ಒತ್ತಾಯ, “ಸುಬ್ಬಯ್ಯನ ಮಗಳನ್ನು ಒಪ್ಪಿಕೊಳ್ಳೋ. ನಿನಗೆ ಇಷ್ಟವಾದ ತೆಂಗಿನಕಾಯಿ ಹುಳಿಯನ್ನೂ ಅಕ್ಕಿ ಪಾಯಸವನ್ನೂ ಚೆನ್ನಾಗಿ ತಯಾರಿಸುತ್ತಾಳೆ ಕಣೋ!”

ಈ ಸುಬ್ಬಯ್ಯ ಬೇರೆ ಯಾರೂ ಅಲ್ಲ,ನನ್ನ ತಾಯಿಯ ಅಣ್ಣ, ಮರಿಕೆಯ ದೊರೆ, ನನ್ನ ಸಾಹಿತ್ಯ – ಸಂಗೀತಾಸಕ್ತಿಗಳಿಗೆ ಸಮೃದ್ಧ ಪೋಷಣೆಯಿತ್ತ ಆದರ್ಶ ಪುರುಷ. ನಾನು ಎಷ್ಟು ಮಡಿಕೇರಿಯ ಶಿಶುವೋ ಅಷ್ಟೇ ಮರಿಕೆಯ ಶಿಶು ಕೂಡ. ಇನ್ನು ಈ ಮಾವನ ಹೆಂದತಿ (ನನ್ನತ್ತೆ) ನನ್ನನ್ನು ಖುದ್ದು ತಮ್ಮ ಮಕ್ಕಳಿಗಿಂತಲೂ ಹೆಚ್ಚು ಅಕ್ಕರೆಯಿಂದ ಲಾಲಿಸಿ ಬೆಳೆಸಿದ ಮಹಾಮಾತೆ. ಇಂಥವರ ಮಗಳು ಲಕ್ಷ್ಮಿ (ತಂಗಿ) ನನ್ನ ಸೋದರತ್ತಿಗೆ. ನನಗಿಂತ ನಾಲ್ಕು ವರ್ಷ ಕಿರಿಯಳು, ತುಂಬ ಜಾಣೆ …

ತಮ್ಮ “ಎನ್ ಸಿಸಿ  ದಿನಗಳು” ಕೃತಿಯಲ್ಲಿ ತಮ್ಮ ಮೇಲೆ ಬಲು ಪರಿಣಾಮಕಾರೀ ಪ್ರಭಾವ ಬೀರಿದ ಇಬ್ಬರು ಹಿರಿಯರನ್ನು ಪ್ರಸ್ತಾವಿಸುತ್ತಾರೆ. ಒಬ್ಬರು ಅವರ ಚಿಕ್ಕಪ್ಪ, ಪ್ರಾಯದಲ್ಲಿ ಮಾವನಿಗಿಂತ ತುಸು ಹಿರಿಯರು. ಆದರೆ ಪ್ರಖರ ವಿಚಾರವಾದಿ.

“ಹಿಂದೀ ಸಿನೆಮಾದ ಹಾಡುಗಳು, ಇಸ್ಪೀಟ್ ಎಲೆಯ ಚಳಕಗಳು, ಸಾಹಸದ ಕತೆಗಳು, ಗಣಿತಶಾಸ್ತ್ರದ ಮೂಲ ಸೂತ್ರಗಳು, ಇವನ್ನೆಲ್ಲ ನನಗೆ ಸಮಪ್ರಾಯದವನೆಂದು ಆತ್ಮೀಯತೆಯಿಂದ ಹೇಳಿಕೊಡುವಾಗ ಅವರೇ ನನಗೆ ದೇವರು ಲೆಕ್ಕವನ್ನು ನಾನು ಕಲಿತದ್ದು ಅವರಿಂದ, ಸಾಹಸ ಪ್ರೀಯತೆಯ ಬೀಜ ಬಿತ್ತಿದವರು ಅವರು. ಇಂದು (೧೯೭೨) ದುರ್ದೈವದಿಂದ ಅವರು ಬದುಕಿಲ್ಲ. ಅವರ ಜೀವನ ನಿರಂತರ ಸಾಹಸ. ಪ್ರಯೋಗಗಳ ಗಾಥ, ೧೯೬೨ನೇ ಇಸವಿ ೧೯೩೨ರಲ್ಲಿ ಬಂದಿದ್ದರೆ ಹೇಗಿರಬಹುದು?

ಇನ್ನೊಬ್ಬರು ನನ್ನ ಸೋದರ ಮಾವ. ಈಚೆಗೆ ಹೆಣ್ಣುಕೊಟ್ಟ ಮಾವನೂ ಹೌದು. ಇವರು ನನ್ನ ತಾಯಿಯ ಗಂಡುರೂಪ. ಬಲು ತೀಕ್ಷ್ಮ ಮನಸ್ಸು, ಅತ್ಯುದಾರ ಸ್ವಭಾವ. ಸಾಹಿತ್ಯ ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿ. ಸ್ವತ: ಉತ್ತಮ ಬರಹಗಾರರು. ಭಾಷಾಂತಕಾರರು. ವ್ಯಕ್ತಿ ಇತರರಿಗಾಗಿಯೇ ಬಾಳುವುದು ಪರಮಪುರುಷಾರ್ಥ ಎಂದು ನಂಬಿ ತೀರ ಸಹಜವಾಗಿ ಅದನ್ನು ಅನುಷ್ಠಾನಕ್ಕೆ ತಂದಿರುವ ಇವರ ಜೀವನ ನನಗೆ ಸಕಲ ಸದ್ಗುಣಗಳ ಆಗರ.

ಇನ್ನೆಲ್ಲಿ ಈ ನೆಗೆ?

(ಮಾವನ ಮಾವ ಅಂದರೆ ನನ್ನಜ್ಜನ ನೆನಪುಗಳನ್ನು ಇಲ್ಲಿ ದಾಖಲಿಸಿದ್ದೇನೆ.)

ಮಾವ ತಮ್ಮ ಅಧ್ಯಾಪನ ಕಾಲದಲ್ಲಿ ಎನ್ ಸಿಸಿ ಅಧಿಕಾರಿಯಾಗಿ ವಿದ್ಯಾರ್ಥಿಗಳೊಂದಿಗೆ ಪಶ್ಚಿಮಘಟ್ಟದ ಹಲವು ಪರ್ವತ ಶಿಖರಗಳನ್ನು ಏರಿದವರು. ಅಕಾಲದಲ್ಲಿ ಅಮೃತವೂ ವಿಷ ಎನ್ನುತ್ತ ಹಿತ ಮಿತ ಆಹಾರ ಸೇವಿಸುತ್ತ ಗಟ್ಟಿ ಮುಟ್ಟಾಗಿ ಬಾಳಿದವರು. ನಿತ್ಯ ಗಣಿತ, ಖಗೋಳ ವಿಜ್ಞಾನ, ಸಂಗೀತದ ಬಗ್ಗೆ ಚಿಂತಿಸಿದವರು, ತಮ್ಮ ಆಸಕ್ತಿಯನ್ನು ಇತರರಲ್ಲಿ ಉದ್ದೀಪಿಸಿದವರು. ಬೌದ್ದಿಕವಾಗಿ ನಿತ್ಯ ನೂತನವಾಗಿದ್ದವರು. ಕೊಡಗಿನ ಗಂಡು ನಾನು ಎನ್ನುತ್ತ ಪ್ರಾಯ ಸಂದರೂ ಮೈಸೂರಿನ ಶೀತ ಗಾಳಿಗೆ ಎದೆ ಒಡ್ಡಿ ಸೈಕಲ್ ಏರಿ ಸಾಗುತ್ತಿದ್ದವರು – ತುಸು ಹೆಚ್ಚೇ ಏನೋ ಎಂಬಂತೆ ತಮ್ಮ ದೈಹಿಕ ತ್ರಾಣವನ್ನು ಪರೀಕ್ಷೆಗೆ ಒಡ್ಡುತ್ತಿದ್ದವರು. ಇದರ ಪರಿಣಾಮವೋ ಎಂಬಂತೆ ಎಪ್ಪತ್ತೇಳರ ಇಳಿ ಹರೆಯದಲ್ಲಿ ಅವರು ತೀವ್ರ ಶೀತ -ಕಫದ ಬಾಧೆಗೊಳಗಾದರು. ಪ್ರಾರಂಭದ ವೈದ್ಯಕೀಯ ಚಿಕಿತ್ಸೆ ಸರಿಯಾಗದೇ ಪರಿಸ್ಥಿತಿ ಬಿಗಡಾಯಿಸಿತು.

ಮುಗಿಯದ ಪಯಣದ “ಯಮಸದನ ನೋಡಿ ಬಂದೆ” ಅಧ್ಯಾಯದಲ್ಲಿ (ಪು ೩೯೭-೩೯೯) ಬರೆಯುತ್ತಾರೆ

ಹೆಂಡತಿಗೆ (ಲಕ್ಷ್ಮಿ) ಶಿಕ್ಷೆ, ಸೊಸೆಗೆ (ರುಕ್ಮಿಣಿ) ಚಡಪಡಿಕೆ, ಮಗನಿಗೆ (ಅನಂತ) ಕಠಿಣ ಪರೀಕ್ಷೆ., ಮೊಮ್ಮಗಳಿಗೆ (ಅಕ್ಷರಿ) ಉದ್ವೇಗ, ಅಸಂಖ್ಯ ಬಂಧುಗಳಿಗೂ ಅಭಿಮಾನಿಗಳಿಗೂ ಚಿಂತೆ, ಚಿಂತೆ, ನನಗೋ? ಸ್ವಯಂಕೃತಾಪರಾಧ. ಆಗ ನನ್ನ ಬಾಯಿಯಿಂದ ಹೊಮ್ಮುತ್ತಿತ್ತಂತೆ ಒಂದು ಹಾಡು :”ಅನುಗಾಲವೂ ಚಿಂತೆ ಜೀವಕೆ… ಪೊಡವಿಯೊಳು ಸಿರಿ ಪುರಂದರವಿಠಲನ ಬಿಡದೆ ಚಿಂತಿಸಿದರೆ ಚಿಂತೆ ನಿಶ್ಚಿಂತೆ

ನನಗೆ ನೆನಪಿದೆ. ನಾವು ಆಸ್ಪತ್ರೆಗೆ ಬಂದಾಗ ಮಾವ ಒರಗಿದ್ದರು ಮಂಚದಲ್ಲಿ. ಮುಖ, ದೇಹ ಬಾತುಕೊಂಡು ಚೆಂಡಿನಂತಾಗಿತ್ತು. ಆವರು ಹೇಳಿದ್ದು “ಸೋರುತಿಹುದು ಮನೆಯ ಮಾಳಿಗೀ…” ನಮಗೋ ದು:ಖ ಉಮ್ಮಳಿಸಿ ಬಂದಿತ್ತು. ಆದರೆ ಮಾವ ಹೋರಾಟದಲ್ಲಿ ಜಯಿಸಿಯೇ ಬಿಟ್ಟರು.

ಮನೆಗೆ ಬಂದು ಚೇತರಿಸುಕೊಳ್ಳುತ್ತಿರುವಾಗ ನಾನು ಅವರಿಗೊಂದು ಮನದಾಳದ ಪತ್ರ ಬರೆದೆ

ಪ್ರಿಯ ಮಾವ,

ನೀವು ನಲ್ಮೆಯ ಗೂಡಿಗೆ ಮತ್ತೆ ಮರಳಿದ ಸಿಹಿ ಸುದ್ದಿ ಕೇಳಿ ನಿರಾಳವಾಯಿತು. ಕಳೆದೊಂದು ತಿಂಗಳು. ತಳಮಳ, ಸಂಕಟ.  ಎಷ್ಟು ಬಾರಿ ಮೈಸೂರಿಗೆ ಫೋನಿಸಿದೆನೋ ತಿಳಿಯದು. ಆದರೆ ನಿರಾಸೆಯ ಸುದ್ದಿ ಬರುತ್ತಿರುವಂತೆ ಹತಾಶ ಭಾವ. ಶೂನ್ಯವಾದ ಅನುಭವ. ಈ ನಡುವೆ ಬೇರೆ ಆಸ್ಪತ್ರೆಗೆ ನಿಮ್ಮನ್ನು ಸೇರಿಸಿದ್ದು,  ಚಿಕಿತ್ಸೆ ಸರಿ ದಾರಿಯಲ್ಲಿ ಸಾಗುತ್ತ ನೀವು ಚೇತರಿಸಿಕೊಳ್ಳುತ್ತಿರುವ ಸುದ್ದಿ ಬಂದಾಗ ಎಲ್ಲ ಸರಿಯಾಗುವ ಭರವಸೆ ಮೂಡಿತು.

ನೀವನ್ನಬಹುದು “ಚಿತೆ ಎಲ್ಲರಿಗೂ ಇರುವುದೇ. ಚಿಂತೆ ಏತಕೆ ” ಆದರೆ  ನಿಮ್ಮನ್ನು ಬಿಟ್ಟು ನಮ್ಮ ಕುಟುಂಬವನ್ನು ಊಹಿಸಿಕೊಳ್ಳುವುದಕ್ಕೂ ನಮಗಾಗದು. ಏಕೆಂದರೆ ನಿಮ್ಮಿಂದ ನಾವು – ಮರಿಕೆಯ ಮಕ್ಕಳು – ಎಷ್ಟೆಲ್ಲ ಪಡೆದಿಲ್ಲ.  ಜೀವನ ಪಥದಲ್ಲಿ ಸರಿ ದಾರಿ ಯಾವುದೆಂದು ನಮಗೆ ತೋರಿಸಿಕೊಟ್ಟವರು ನೀವು. ಪ್ರಪಂಚವನ್ನು ನೋಡುವ ಬಗೆಯಲ್ಲಿ, ಜೀವನದ ಸಮಸ್ಯೆಗಳನ್ನು ಅರ್ಥೈಸುವ ರೀತಿಯಲ್ಲಿ ಒಂದಿಷ್ಟು ವೈಚಾರಿಕ ಪ್ರಜ್ಞೆ ನಮಗೆ ಮೂಡಿರುವುದಾದರೆ ಅದರಲ್ಲಿ ಸಿಂಹಪಾಲು ನಿಮ್ಮದಿದೆ. ನಾವಷ್ಟೇ ಅಲ್ಲ – ನಮ್ಮ ಅಪ್ಪ – ಅಮ್ಮಂದಿರು ಕೂಡ ನಿಮ್ಮ ಒಡನಾಟದಲ್ಲಿ ಕಲಿತದ್ದು ಬಹಳಷ್ಟಿವೆ. ಒಟ್ಟು ಸಾರವೆಂದರೆ “ನೀವಿರುವುದು ನಮ್ಮ ಕುಟುಂಬದ ಭಾಗ್ಯ. ಇಂಥ ಬಾಗ್ಯ ಎಲ್ಲರಿಗೂ ಇರದು; ಬರದು”. ನಿಮ್ಮದೇ ವಾಕ್ಯದಲ್ಲಿ ಹೇಳುವುದಾದರೆ

ಹಸನುಗೊಳಿಸಿದಿರಯ್ಯ ನೀವು ಹೊಸ ನೆಲವ
ನಾವು? ಹೆಕ್ಕಿದವಷ್ಟೇ ತೋಟದಿಂ ಕೆಲಹೂವ.

ಇನ್ನು ಹೆಚ್ಚು ನಾನು ಹೇಳಲಾರೆ- ನಾವೆಲ್ಲ ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದೇವೆಂದು. ಎಂದೇ  ನಿಮಗೊದಗಿ ಬಂದ ತೀವ್ರ ಅನಾರೋಗ್ಯ ಮರಿಕೆಯ ನಮ್ಮೆಲ್ಲರಿಗೂ ಅತಿಶಯ ಆಘಾತ ಒಡ್ಡಿತು. ಕೇವಲ ಚಿಕ್ಕ ಜ್ವರ ನಿಮ್ಮನ್ನು ಹಾಸಿಗೆಗಂಟಿಸಿ ಜವರಾಯನಿಗೆ ರತ್ನಗಂಬಳಿ ಹಾಸಿದ ಕರೆಯಾದರೆ ಸಹಿಸಲು ಸಾಧ್ಯವಾದಿತೇ? ನೀವು ಇನ್ನೂ ಎಪ್ಪತ್ತರ ತರುಣ – ಇ೦ಥ ತರುಣನನ್ನು ನಾವು ಬಿಟ್ಟುಕೊಡಲು ಸಾಧ್ಯವೇ ?

ಅವರರವ ಭಾವಕ್ಕೆ ಸರಿಯಾಗಿ ಮೂಡಿದ ಹಾರೈಕೆಗಳ ಒಟ್ಟು ಫಲವೋ ಎನ್ನುವಂತೆ ನೀವು ಚೇತರಿಸುತ್ತಿದ್ದೀರಲ್ಲ – ಅದು ಮುಖ್ಯ. ಸಂಪೂರ್ಣ ಚೇತರಿಸಿಕೊಂಡ ಎಂದಿನ ನಾರಾಯಣ ಮಾವನನ್ನು ನೋಡಲು ನಾವೆಲ್ಲ ಇಲ್ಲಿ ಕಾತರದಿಂದ ಕಾಯುತ್ತಿದ್ದೇವೆ; ಹಾರೈಸುತ್ತಿದ್ದೇವೆ.

ರಾಧಾಕೃಷ್ಣ.

ಒಂದೆರಡು ತಿಂಗಳ ನಂತರ ಅವರು ನನ್ನನ್ನೂ ಸೇರಿದಂತೆ  ತಮ್ಮೆಲ್ಲ ಹಿತೈಷಿಗಳಿಗೆ, ಬಂಧುಗಳಿಗೆ ಪತ್ರ ಬರೆದರು

August 30, 2003.
GTN at Mysore greets all his wellwishers, friends, relatives, children and Star of Mysore who have extended their spontaneous love and warmth when he was confined the hospital, July 11 to August 24. The Doctors and the nurses at Basappa Memorial Hospital Mysore, especially Dr C.M.Kudari, have showered their best expertise on him to rescue him at age 78 from the sure clutches of death. He is now ‘imprisoned’ within the four lovable walls of his home comprising his wife Lakhmi, daughterinlaw Rukmini, son Ananta, granddaughter Akshari and brother Eashwara. What more can one aspire to get! He’s physically very weak. He hopes by September 24 he should be normal and by October 24 kicking! He extends his warmest thanks and good wishes to you all. GTN

ಹೀಗೆ ಹೇಳಿದ ಅವರು   ೨೬.೬.೨೦೦೮ ಸಂಜೆ ತಮ್ಮ ಸ್ನೇಹಿತರ ಮನೆಯಲ್ಲಿ  ಕಂಪ್ಯೂಟರ್ ಪರದೆ ಮೇಲೆ ಸಂಗೀತಕ್ಕೆ ಸಂಬಂಧಿಸಿದ ದ ಲೇಖನ ಓದುತ್ತ ಇದ್ದಂತೆ ಕಣ್ಣು ಮಂಜಾಗುತ್ತಿದೆ ಅನ್ನುತ್ತ ಮೆಲ್ಲನೆ ಒರಗಿದವರು ಮತ್ತೆ ಶಾಶ್ವತ ನಿದ್ದೆಯ ಕಡೆಗೆ ಜಾರಿದರು. ಮರು ದಿನ ಮುಂಜಾವಿನ ಹೊತ್ತಿಗೆ ತಾರೆಗಳ ಅನೂಹ್ಯ ಲೋಕದಾಚೆಗೆ ನಡೆದೇ ಬಿಟ್ಟರು.   ಯಾತನೆ ಇಲ್ಲದ ಕೊನೆಯನ್ನು ಅಪ್ಪಿದ ಬಗೆ ಅವರು ಇಚ್ಛಿಸಿದಂತಿತ್ತು.

ಮಾವ ಇಲ್ಲದೇ ರ್ಷವೊಂದು ತಣ್ಣಗೆ ಸಂದಿದೆ.ಅವರಿಲ್ಲದೇ ಹೋದರೂ   ಅವರ ನೆನಪು ಮತ್ತೆ ಮತ್ತೆ ಆಗುತ್ತದೆ – ಇರುಳ ಬಾನು ಕಂಡಾಗ, ಉತ್ತಮ ಸಂಗೀತ ಆಲಿಸಿದಾಗ, ಲೇಖನ ಪ್ರಕಟವಾದಾಗ.. ಹೀಗೆ ಆಗಾಗ. ಅವರಿಗೊಂದು ನುಡಿನಮನ ಸಲ್ಲಿಸಿದ್ದೇನೆ ಕೆಂಡ ಸಂಪಿಗೆಯಲ್ಲಿದೆ. ನೀವು ನೋಡಬಹುದು.

 1. ಆನ೦ದ ಭಾವ
  ಜುಲೈ 8, 2009 ರಲ್ಲಿ 4:51 ಫೂರ್ವಾಹ್ನ

  ವೈಚಾರಿಕವಾಗಿ ನಿನ್ನ ಈ ಲೇಖನ ಲಾಯಕಿದ್ದು ಭಾವ ಆದರೆ ನಿನಗೆ ಬೇಜಾರ ಆಗದಿದ್ದರೆ ನಿನ್ನ ಅಕ್ಕನದ್ದು ಈ ಭಾವನ ಬಾವನೆಯನ್ನು ಕಲುಕಿತ್ತು. ನಾನು ಮೀಸೆ ಮುಚ್ಚಿ ಕನ್ನಡಿ ನೋಡಿದರೆ ಸಾಕು ಅಪ್ಪನ ಜ್ನಾಪಕವಾಗುಲೆ, ಬೇರೆ ಚಾಯಾ ಚಿತ್ರ ಬೇಡ. ಆ೦ಗೈ ಹುಣ್ಣಿಗೆ ಕನ್ನಡಿ ಯೇಕೆ ಬಾವ ಆಲ್ಲದ? ಹರಿಹರಾದಿ ರಾಘವಾ೦ಕ ದಿಗ್ಗಜರು ನನ್ನ ಉಪಮೆಗೆ ಸೋತು ಹೋದಾರು. ಜಾಗ್ರತೆ!!
  ಅ೦ಬಗ ಕಾ೦ಬ
  ಆನ೦ದ ಭಾವ

 2. ಜುಲೈ 24, 2015 ರಲ್ಲಿ 11:21 ಫೂರ್ವಾಹ್ನ

  ಜಿಟಿಎನ್ ಅ೦ದ ತಕ್ಷಣ ನನಗೆ ನನ್ನ ಶಾಲೆಯ ದಿನಗಳ ನೆನಪಾಗುತ್ತದೆ. ಅವರ ಪುಸ್ತಕಗಳನ್ನೆಲ್ಲಾ ಶ್ರದ್ದೆಯಿ೦ದ ಓದಿದ್ದೆ. ಬಾಹ್ಯಾಕಾಶದ ಬಗ್ಗೆ, ಅ೦ತರಿಕ್ಷದ ಬಗ್ಗೆ ಅಷ್ಟು ಚೆನ್ನಾಗಿ ಬರೆಯುವವರು ಇ೦ದು ಕನ್ನಡದಲ್ಲಿ ಇದ್ದಾರೆಯೇ ಅನ್ನುವುದು ಸ೦ಶಯದ ಮಾತು. ಸುಪರ್ನೋವಾ, ಕೃಷ್ಣವಿವರಗಳು, ಧೂಮಕೇತು, ಗ್ರಹಣ ಇತ್ಯಾದಿ ಪುಸ್ತಕಗಳು ಇ೦ದಿಗೂ ನನ್ನ ಮನೆಯ ಕಪಾಟಿನಲ್ಲಿ ಕುಳಿತು ನನಗೆ ನನ್ನ ವಿದ್ಯಾರ್ಥಿಜೀವನದ ನೆನಪು ಮಾಡಿಸುತ್ತಿವೆ.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: