ತಾಲೀಬಾನ್ ಎಂಬ ಪುರಾತನ ಹೆಮ್ಮಾರಿ
ಪಾಕಿಸ್ತಾನದಲ್ಲಿ ಮತ್ತೊಂದು ಬರ್ಬರ ತಾಲೀಬಾನೀ ಕಾನೂನು ಜಾರಿಗೆ ಬಂದ ಕಳವಳಕಾರೀ ವರದಿ ವಾರಗಳ ಹಿಂದೆ ಆಂಗ್ಲ ದೈನಿಕ ದಿ.ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಹುಡುಗಿಯೊಬ್ಬಳಿಗೆ ಅನೈತಿಕ ಸಂಬಂಧವಿದೆ ಎಂಬ ಗುಮಾನಿ. ಎಂಥ ಘೋರ ಅಪರಾಧವಿದು!. ಉಗ್ರ ತಾಲೀಬಾನೀಗಳ ಮುಖಂಡರು ಶಿಕ್ಷೆ ಘೋಷಿಸಿದರು – ಸಾರ್ವಜನಿಕವಾಗಿ ಮರಣ ದಂಡನೆ. ಬೇರಾರೂ ಇನ್ನು ಮುಂದೆ ಅಂಥ ತಪ್ಪು ಮಾಡಬಾರದಲ್ಲ ಅದಕ್ಕೆ. ಅವರಿಬ್ಬರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಹುಡುಗಿ ಗೋಗರೆಯುತ್ತಿದ್ದಳಂತೆ – “ದಯವಿಟ್ಟು ಕ್ಷಮಿಸಿ, ನಾನು ಯಾವ ತಪ್ಪೂ ಮಾಡಿಲ್ಲ.“ ಆದರೆ ಧರ್ಮದ ಹೆಸರಿನಲ್ಲಿ ಅಂಧರಾದ ಕ್ರೂರಿಗಳು ಬಿಡಲಿಲ್ಲ. ಒಂದರ ಮೇಲೊಂದರಂತೆ ಎದೆಗೆ ಗುಂಡಿಕ್ಕಿದರು. ಧರೆಗೆ ಒರಗಿದ ಅವಳಲ್ಲಿನ್ನೂ ಕುಟುಕು ಜೀವ ತುಡಿಯುತ್ತಿತ್ತಂತೆ. ಅಲ್ಲಿದ್ದ ನ್ಯಾಯಪರುರು ಹೇಳಿದರಂತೆ “ಜೀವ ಉಂಟು, ಗುಂಡಿಕ್ಕಿ” ಮತ್ತೆ ಕೆಲವು ನುಗ್ಗಿದುವು ದೇಹಕ್ಕೆ. ಆಮೇಲೆ ಹುಡುಗನನ್ನು ಬಿಡಲಿಲ್ಲ, ನಿರ್ದಯಿಗಳು ಹತ್ಯೆ ಮಾಡಿದರು. ಸಾರ್ವಜನಿಕವಾಗಿ ಹುಡುಗಿಗೆ ಛಡಿ ಏಟು ಕೊಟ್ಟ ಶಿಕ್ಷೆಯ ಸುದ್ದಿ ತಣ್ಣಗಾಗುವುದರೊಳಗೆ ಬಂದ ಈ ವರದಿ ಮುಂಬರುವ ದಿನಗಳಲ್ಲಿ ಪಾಕಿಸ್ಥಾನ ಯಾವ ಹಾದಿ ಹಿಡಿಯಲಿದೆ ಎನ್ನುವುದರ ಸ್ಪಷ್ಟ ಸೂಚೆನೆಯಾಗಿದೆ. ಈಗಾಗಲೇ ಹಲವು ಉಗ್ರಗಾಮಿ ಸಂಘಟನೆಗಳ ತಾಣವಾದ ಪಾಕಿಸ್ಥಾನದ ಎಲ್ಲ ಉಗ್ರರನ್ನು ಒಟ್ಟು ಮಾಡಿದ ಪ್ರತೀಕವೋ ಎನ್ನುವಂಥ ತಾಲಿಬಾನಿಗಳ ಕೈ ಮೇಲಾಗುತ್ತಿರುವದನ್ನು ಕಂಡ ಅಮೇರಿಕ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳು ತಮ್ಮ ಕಳವಳ ವ್ಯಕ್ತಪಡಿಸತೊಡಗಿವೆ.
ತಾಲೀಬಾನೀ ವ್ಯವಸ್ಥೆಯ ಕಬಂಧ ಬಾಹುಗಳು ಪಾಕಿಸ್ಥಾನವನ್ನು ಬಹು ವೇಗದಲ್ಲಿ ಆವರಿಸತೊಡಗಿವೆ. ಇದು ಕ್ಯಾನ್ಸರ್ ರೋಗದಂತೆ. ಕ್ಯಾನ್ಸರ್ ಪ್ರಾರಂಭ ಹಂತದಲ್ಲಿ ಅಪಾಯಕಾರೀ ಎಂದನಿಸುವುದೆ ಇಲ್ಲ. ನಿಧಾನವಾಗಿ ಅದು ಹಬ್ಬತೊಡಗುತ್ತದೆ. ರೋಗಿ ಕುಸಿಯತೊಡಗಿದಂತೆ ಮತ್ತೆ ಅದು ವ್ಯಾಪಿಸುವ ವೇಗ, ಉಂಟುಮಾಡುವ ನೋವು ಅಸಹನೀಯ – ರೋಗಿಗಷ್ಟೇ ಅಲ್ಲ ಅವನನ್ನು ನೋಡುವ ಇತರರಿಗೂ. ಪಾಕಿಸ್ತಾನ ಇಂದು ಇಂಥ ಅಪಾಯದಲ್ಲಿದೆ.
ಸುಂದರವಾದ ಸ್ವಾತ್ ಕಣಿವೆ ಈಗಾಗಲೇ ತಾಲೀಬಾನಿಗಳ ಪಾಲಾಗಿದೆ. ಈ ಕಣಿವೆ ಇಸ್ಲಾಮಾಬಾದಿನಿಂದ ಅಷ್ಟೇನೂ ದೂರವಿಲ್ಲ – ಕೇವಲ ನೂರೈವತ್ತು ಕಿಮೀ. ಹಾಗೆ ನೋಡಿದರೆ ಶ್ರೀನಗರದಿಂದ ಅಥವಾ ದಿಲ್ಲಿಯಿಂದಲೂ ಕೂಡ ಬಹು ದೂರದಲ್ಲೇನೂ ಇಲ್ಲ. ಪಾಕಿಸ್ತಾನ ಸರಕಾರ ತಾಲೀಬಾನಿಗಳ ಆಡಳಿತಕ್ಕೆ ಮನ್ನಣೆ ಕೊಟ್ಟಿರುವುದು ಅವರಿಗೆ ಸಂದ ಜಯ. ಅವರೇನು ಮಾಡಲಿದ್ದಾರೆ ಇನ್ನು ಅಲ್ಲಿ ಅನ್ನುವುದಕ್ಕೆ ಅಫಘಾನಿಸ್ತಾನದಲ್ಲಿ ಈ ಹಿಂದೆ ಮಾಡಿದ ಭೀಕರ ವ್ಯವಸ್ಥೆಗಳೇ ಸಾಕ್ಷಿಯಾಗಿವೆ.
ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಒಳಗಿಟ್ಟರು. ಮುಕ್ತ ಜಗತ್ತನ್ನು ನಿರ್ಬಂಧಿಸಿದರು. ಮನುಷ್ಯತ್ವಕ್ಕೆ ತಮ್ಮದೇ ಆದ ಭಾಷ್ಯವನ್ನು ಕೊಟ್ಟರು. ಕ್ರೂರಿಗಳೂ ಅನಾಗರೀಕರೂ ಆದ ತಾಲಿಬಾನಿಗಳ ಹೇಯ ಕೃತ್ಯಗಳಲ್ಲಿ ಅಲ್ಲಿನ ಜನಸಾಮಾನ್ಯ ಹಲವು ವರ್ಷಗಳ ಕಾಲ ನಲುಗಿದ. ಸಂಗೀತ, ನೃತ್ಯ ನೇಪಥ್ಯಕ್ಕೆ ಸರಿದುವು. ಅಫಘನ್ನರ ಅತ್ಯಂತ ಪ್ರಿಯ ಆಟವಾದ
ಫುಟ್ಬಾಲ್ ವಿದೇಶೀಯ ಎನ್ನುವ ಕಾರಣಕ್ಕೆ ನಿಷೇಧಕ್ಕೊಳಗಾಯಿತು. ಶಾಂತಿಯ ದೂತನಾದ ಬುದ್ಧ ಇವೆಲ್ಲವನ್ನು ಬೃಹತ್ ಕಲ್ಲಿನ ಮೂರ್ತಿಯಾಗಿ ನೋಡುತ್ತಿದ್ದರೆ ಅವನನ್ನೂ ಬಿಡಲಿಲ್ಲ. ಬುದ್ಧನ ಮೂರ್ತಿಯನ್ನೇ ಕೊನೆಯಲ್ಲಿ ಪುಡಿಗಟ್ಟಿದರು. ಅಂಥ ತಾಲೀಬಾನಿಗಳು ಇಂದು ಸ್ವಾತ್ ಕಣಿವೆಯ ಮುಗ್ದ ಜನರನ್ನು ಧರ್ಮದ ಚೌಕಟ್ಟಿನಲ್ಲಿ ಅಮಾನವೀಯ ಕಾನೂನುಗಳಿಂದ ಹಿಂಡಿ ಹಿಪ್ಪೆ ಮಾಡಲು ತೊಡಗಿದ್ದಾರೆ.
ಕಾರಣಗಳು ಏನೇ ಇರಲಿ, ಅಫಘಾನಿಸ್ತಾನವನ್ನು ತಾಲೀಬಾನಿಗಳಿಂದ ಬಿಡಿಸುವುದಕ್ಕೆ ಅಮೇರಿಕ ಬರಬೇಕಾಯಿತು. ಆದರೆ ಎಷ್ಟೊಂದು ರಕ್ತಪಾತ ನಡೆದುಹೋಯಿತು. ಈಗ ಆಧುನಿಕ ಜಗತ್ತಿನ ಈ ಪುರಾತನ ಹೆಮ್ಮಾರಿಯ ಕಣ್ಣು ಪಾಕಿಸ್ಥಾನನದ ಮೇಲೆ ಬಿದ್ದಿದೆ. ಸರಕಾರ ಮತ್ತು ಉಗ್ರರ ನಡುವೆ ಒಡಂಬಡಿಕೆಯಾಯಿತು. ಅದರ ಪ್ರಕಾರ ಉಗ್ರರು ಸ್ವಾತಿನಲ್ಲಿ ಮಾತ್ರ ಇರತಕ್ಕದ್ದು ಮತ್ತು ಶಸ್ತ್ರ ಹಿಡಿಯಬಾರದು. ಆದರೆ ತಾಲಿಬಾನಿಗಳು ಅದೆಲ್ಲವನ್ನು ತೂರಿ ಬಿಟ್ಟಿದ್ದಾರೆ. ಇಸ್ಲಾಮಿನಲ್ಲಿ ಪ್ರಜಾತಂತ್ರ ವ್ಯವಸ್ಥೆಗೆ ಅವಕಾಶವಿಲ್ಲ ಎನ್ನುವ ಹೇಳಿಕೆಯೊಂದಿಗೆ ಶಸ್ತ್ರ ಸನ್ಯಾಸದ ಮಾತುಕತೆಯನ್ನು ತ್ಯಜಿಸಿರುವ ಅವರು ಇಡೀ ಪಾಕಿಸ್ಥಾನಕ್ಕೆ ತಮ್ಮ ಕಾನೂನನ್ನು ಅನ್ವಯಿಸುವ ಗುರಿ ಹೊಂದಿದ್ದೇವೆಂದು ಈಗಾಗಲೇ ಘೋಷಿಸಿದ್ದಾರೆ. ಇಸ್ಲಾಮಾಬಾದಿನ ತೀರ ಹತ್ತಿರದ ಬುನೇರ್ ನಗರದಲ್ಲಿ ಬೀಡು ಬಿಟ್ಟ ಅವರನ್ನು ಅಲ್ಲಿಂದ ದೂರ ಕಳಿಸುವುದಕ್ಕೆ ಸಾಕೋ ಸಾಕಾಯಿತು ಪಾಕಿಸ್ತಾನದ ಆಡಳಿತಕ್ಕೆ. ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ನೆಲಕಚ್ಚಿರುವ ಪಾಕಿಸ್ತಾನದ ದುರ್ಬಲತೆ ಈ ಸಂದರ್ಭ ತಾಲೀಬಾನಿಗಳಿಗೆ ತಮ್ಮನ್ನು ವಿಸ್ತರಿಸಿಕೊಳ್ಳಲು ಪ್ರೋತ್ಸಾಹವಾಗಿದೆ. ಪಾಕಿಸ್ತಾನದ ಸೇನೆ ಮತ್ತು ತಾಲೀಬಾನ್ ಉಗ್ರರ ನಡುವೆ ಈಗಾಗಲೇ ಹೋರಾಟ ಪ್ರಾರಂಭವಾಗಿದೆ. ಮುಂಬರುವ ದಿನಗಳಲ್ಲಿ ಅದು ಇನ್ನಷ್ಟು ತೀವ್ರಗೊಳ್ಳಬಹುದು.
ಇರಾಕಿನ ಮೇಲೆ, ಅಫಘಾನಿಸ್ತಾನದ ಮೇಲೆ ಸೇನೆ ಕಳುಹಿಸಿ ತನ್ನ ಮತ್ತು ಅಲ್ಲಿನ ಅಮಾಯಕರನ್ನು ಬಲಿ ಕೊಟ್ಟ ಅಮೇರಿಕಕ್ಕೆ ಪಾಕಿಸ್ತಾನದ ರಕ್ಷಣೆಗೂ ಹೋಗಬೇಕಾದ ದಿನಕ್ಕೆ ಇನ್ನು ಬಲು ದೂರವಿಲ್ಲ. ಎಷ್ಟೆಂದರೂ ಅಮೇರಿಕಕ್ಕೆ ಪಾಕಿಸ್ಥಾನದೊಂದಿಗೆ ಬೇರೆ ಬೇರೆ ರಾಜಕೀಯ ಕಾರಣಕ್ಕಾಗಿ ಹೆಚ್ಚು ಅಪ್ಯಾಯಮಾನವಾದ ನಂಟಿದೆ. ಪಾಕಿಸ್ತಾನದಲ್ಲಿ ಇದು ತನಕ ಸಾಕಷ್ಟು ಮುಕ್ತ ಜಗತ್ತಿತ್ತು. ಸೇನೆಯ ಆಡಳಿತವಿದ್ದರೂ ಜಿಯಾ, ಮುಷ್ರಫ್ ಮೊದಲಾದ ಸೇನಾ ನಾಯಕರು ಆಧುನಿಕ ಜಗತ್ತಿನ ಮನೋಭಾವದ ಮಂದಿಗಳು. ಇಂಥ ಪಾಕಿಸ್ತಾನ ತಾಲಿಬಾನೀಗಳ ಕೈಯಲ್ಲಿ ನಲುಗಿ ನಶಿಸಿ ಹೋದರೆ ಅದೊಂದು ದುರಂತ. ನೆರೆಯ ನಮಗೆ ಇದಕ್ಕಿಂತ ಗಂಭೀರ ಸಮಸ್ಯೆ ಬೇರೊಂದು ಇರಲಾರದು.
ಹಾಗೆ ನೋಡಿದರೆ ತಾಲೀಬಾನಿಗಳು ದೇವಲೋಕದಿಂದ ಅಥವಾ ನರಕಲೋಕದಿಂದ ಬಂದವರಲ್ಲ. ಅವರು ಎಲ್ಲರಂತೆ ಮನುಷ್ಯರೇ. ಧರ್ಮಾಂಧತೆ ಮಾತ್ರ ಇವರ ಕಣ್ಣು ಕಟ್ಟಿದೆ, ಮನವನ್ನು ನಿರ್ಧಯಿಯಾಗಿಸಿದೆ. ಧರ್ಮದ ಬಗೆಗಿನ ನಂಬುಗೆಯನ್ನು ಅಂಧರಾಗಿ ಒಪ್ಪುವ ಮತ್ತು ಅಪ್ಪುವ ಮಂದಿಗಳಲ್ಲಿ “ತಮ್ಮ ನಂಬುಗೆಗಳನ್ನು” ನಿಧಾನವಾಗಿ ಪ್ರಸರಿಸುತ್ತ ಇವರು ಗಟ್ಟಿಯಾಗುತ್ತ ಹೋಗುತ್ತಾರೆ. ಹಾಗಾಗಿಯೇ ಇಂಥವರ ಬಗ್ಗೆ ಎಚ್ಚರಿಕೆ ಅಗತ್ಯ. ಈ ನಡುವೆ ಪಾಕಿಸ್ತಾನದಾದ್ಯಂತ ತಾಲೀಬಾನಿಗಳ ಅಂಧ ಆಚರಣೆಯನ್ನು ಖಂಡಿಸುವ ದನಿ ಎದ್ದಿರುವುದು ಆಶಾವಾದದ ಲಕ್ಷಣ. ಅಂತರ್ಜಾಲದಲ್ಲಿ ಅವರ ವಿರೋಧ ವ್ಯಕ್ತವಾಗತೊಡಗಿದೆ. ಇಂಥ ಮಾನವೀಯ ಒಳದನಿ ಬಲವಾಗುತ್ತ ಹೋದ ಹಾಗೇ ತಾಲೀಬಾನಿಗಳ ಹಿಡಿತ ಸಡಿಲವಾಗಬಹುದು. ಪಾಕಿಸ್ಥಾನಕ್ಕ ಬಡಿದ ಈ ಕ್ಯಾನ್ಸರ್ ಗಡ್ಡೆ ಕರಗಬಹುದು.
ಮತ ಧರ್ಮಗಳ ಆಚೆಗೆ ನಮ್ಮ ದೃಷ್ಟಿಯನ್ನು ಹರಿಸುವ ವೈಚಾರಿಕತೆಯನ್ನು “ಪ್ರಜ್ಞಾಪೂರ್ವಕ” ಬೆಳೆಸಿಕೊಳ್ಳುವುದೊಂದೇ ಪಾಕಿಸ್ಥಾನದಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲೇ ಆದರೂ ಮಾನವೀಯತೆಯನ್ನೇ ಹೊಸಕಿ ಹಾಕುವ ಪೈಶಾಚಿಕ “ತಾಲೀಬಾನ್ ವ್ಯವಸ್ಥೆ“ಯನ್ನು ಧಿಕ್ಕರಿಸಲು ಅಗತ್ಯವಾದ ಆಯುಧ. ಯಾವಾಗ ವೈಚಾರಿಕ ಪ್ರಜ್ಞೆಯನ್ನು ಕಳೆದುಕೊಂಡವರ ಸಂಖ್ಯೆ ಹೆಚ್ಚುತ್ತ ಹೋಗುತ್ತದೋ ಆಗ ತಾಲೀಬಾನಿಗಳ ಕೈ ಮೇಲಾಗುತ್ತದೆ. ಹಾಗಾಗದಂತೆ ನಾವು ಎಚ್ಚರಿಕೆ ವಹಿಸಬೇಕು.
ಬರಹ ಚೆನ್ನಾಗಿದೆ ರಾಧ ಮಾವ.
ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಅನೇಕ ಚಿತ್ರಗಳನ್ನು ನೋಡಿದರೆ ಅನೇಕ ಬಾರಿ ಅಲ್ಲಿನ ಹಿಂಸೆಯ ಪ್ರಮಾಣಕ್ಕೆ ಕಣ್ಣು ಕತ್ತಲೆ ಹೋದಂತೆನಿಸುತ್ತದೆ.
ಭಾರೀ ಲಾಯಕಿದ್ದು ಭಾವ. ನೀನು, ಆಶೋಕ, ಚ೦ದ್ರ ಎಲ್ಲ ಎಷ್ಟು ಚೆನ್ನಾಗೆ ಕನ್ನಡ ಬರೆಯುತ್ತೀರಿ ಅಲ್ಲದ? ಕಬ೦ಧ ಬಾಹುಗಳಿ೦ದ ಬ೦ದಿತವಾದ … ಆ ಉಪಮೆ ಅಪ್ಯಾಯಮಾನವಾಗಿದ್ದು. ಹೇಳುವುದಾದರೆ ೧೦ ಪುಟ ಬರೆಯಬಹುದು. ಪುರುಸೋತ್ತಿಲ್ಲ ಭಾವ ಪುರುಸೋತ ಇಲ್ಲೆ. ನೀವೆಲ್ಲ ಮಕ್ಕೊ ಹೀಗೆ ಬರೆಯುತ್ತಾ ಇರಿ ಎ೦ದು ಆಶಿಸು ತ್ತೇನೆ
ಕಾ೦ಬ
ಆನ೦ದ ಭಾವ
ಸೌಮ್ಯ ಜಿಂಕೆಗಳು ಇನ್ನೂ ನೆಮ್ಮದಿಯಿಂದ ಕಾಡಿನ ಕೆರೆಗಳಿಂದ ನೀರು ಕುಡಿಯುತ್ತಿವೆ, ಆದರೆ ಕ್ರೂರ ಹುಲಿಗಳು ನಶಿಸಿವೆ. ಕಟ್ಟು ನಿಟ್ಟಿನ ಹುಸಿ ಧರ್ಮ ತಾಲಿಬಾನಿಗಳು ಅಂತ್ಯ ಕಾಲದ ಗಣನೆಯಲ್ಲಿ ಇರುವಂತೆ ಕಾಣುತ್ತಿದೆ.
“A great civilization is not conquered from without until it has destroyed itself from within” -Will Durant