ಮುಖ ಪುಟ > ಸ್ವಗತಗಳು > ಗುಳೇ ಹೊರಟ ಬಿಸಿಸಿಐ – ಮಾನ ಹರಾಜಿಗೆ

ಗುಳೇ ಹೊರಟ ಬಿಸಿಸಿಐ – ಮಾನ ಹರಾಜಿಗೆ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೇಟ್  ಪಂದ್ಯಾಟ ನೂರಕ್ಕೆ ನೂರು ನಮ್ಮ ದೇಶದ ಉಸಾಬಾರಿ.  ಕಳೆದ ಬಾರಿ ಇದು ದೇಶದ ಉದ್ದಗಲಕ್ಕೆ ನಡೆದು ಅತ್ಯಂತ ಯಶಸ್ವಿಯಾಗಿ. ಹಣದ ಕೊಳ್ಳೆಯೇ ಹೊಡೆದುಕೊಂಡಿತು. ಆಟಗಾರರೆಲ್ಲರನ್ನು ಹರಾಜಿಗಿಡುವ ಹೊಸ ಬಗೆ ಆರಂಭವಾದದ್ದು ಎಲ್ಲರಿಗೂ ತಿಳಿದಿದೆ.

ಟೆಸ್ಟ್ ಕ್ರಿಕೇಟ್ ಮತ್ತು ಸೀಮಿತ ಓವರುಗಳ ಕ್ರಿಕೇಟಿನ ಹೊಸ ಅವತಾರವಾಗಿ ಉದಯಿಸಿದ ಈ ಇಪ್ಪತ್ತು ಓವರುಗಳ ಹೊಡಿ-ಬಡಿ ಹೋರಾಟದ ಕ್ರಿಕೇಟ್  ರೋಚಕವಾಗಿರುತ್ತವೆ  ಎನ್ನುವುದಕ್ಕೆ ಕಳೆದ ಬಾರಿಯ ಹಲವು ಪಂದ್ಯಗಳು ಸಾಕ್ಷಿಯಾದುವು. ಹಣದ ಬಲದ ಮಾಲಿಕತ್ವ,ಈಗಾಗಲೇ ಕ್ರಿಕೇಟಿನಲ್ಲಿ ಸ್ವಾಮ್ಯವನ್ನು ಸ್ಥಾಪಿಸಿದಂಥ ಅತಿರಥರು ಇರುವ ತಂಡ ಈ ಹೊಸ ಅವತರಣಿಕೆಯ ಕ್ರಿಕೇಟಿನಲ್ಲಿ ಗೆಲ್ಲಲೇಬೇಕೆನ್ನುವ ಖಾತರಿಯೇನೂ ಇಲ್ಲ – ಎನ್ನುವುದು ಪಂದ್ಯಗಳು ಸಾಗಿದಂತೇ ಸಾಬೀತಾಗುತ್ತ ಹೋದುವು.  ಇಂಥ ಇನ್ನಿಲ್ಲದಂಥ  ಅನಿಶ್ಚಿತತೆಯೇ ಪಂದ್ಯಾಟದ ಯಶಸ್ಸಿಗೆ ಕಾರಣವಾಯಿತು ಪ್ರಾಯಶ:!

ಇದರೊಡನೆ ಮದಿರೆ ಮತ್ತು ಮಾನಿನಿಯರ ಹುಚ್ಚು ಹಾರಾಟಗಳು ಕೂಡ ನಡೆದುವು.  ಅದರೊಡನೆ ತಳಕು ಹಾಕಿಕೊಂಡ ಜಾಹೀರಾತುಗಳ ಇನ್ನಿಲ್ಲದ ಭರಾಟೆ.    ಇವೆಲ್ಲ  – ಬೇಕೋ, ಬೇಡವೋ ಎನ್ನುವ ಆಯ್ಕೆ ನಮ್ಮ ನಿಮ್ಮದಲ್ಲ – ಅದೆಲ್ಲ ಈಗ ಬಿಸಿಸಿಐದ್ದು. ಅದು ಹೇಳುತ್ತದೆ ಪ್ರೇಕ್ಷಕರಿಗೆ ಇದು ಬೇಕೆಂದು – ಎಷ್ಟೋ ಬಾರಿ ಒಂದು ಪತ್ರಿಕೆ ಓದುಗರಿಗೆ ಇದುವೇ ಬೇಕೆಂದು ನಿರ್ಧರಿಸುವಂತೆ.

ಇನ್ನೇನು ಈ ಬಾರಿಯ ಪಂದ್ಯಾಟ ಪ್ರಾರಂಭವಾಗಬೇಕು ಎನ್ನುವಾಗ ಪಾಕಿಸ್ತಾನದಲ್ಲಿ ನಡೆದ ರಕ್ತಪಾತದ ಘಟನೆ ಎಚ್ಚರಿಕೆಯ  ಘಂಟೆ ಬಾರಿಸಿತು. ಲಂಕಾ ಆಟಗಾರರ ಮೇಲಣ ಆ ದಾಳಿಗೆ ಕ್ರಿಕೇಟ್ ಕಂಪಿಸಿತು. ಬಿಸಿಸಿಐ ಹಣದ ಸೂರೆ ಹೊಡೆಯುತ್ತ ದಿನೇ ದಿನೇ ಉಬ್ಬುತ್ತಿರುವಾಗ, ಎಲ್ಲವನ್ನು ಹದ್ದು ಬಸ್ತಿನಲ್ಲಿಡುವ ಅಂತಾರಾಷ್ತ್ರೀಯ ಕ್ರಿಕೇಟ್ ಮಂಡಳಿಗೆ ಕಣ್ಣು ಕೆಂಪಾದದ್ದು ಅಸಹಜವೇನೂ ಅಲ್ಲ. ಅದು ಸಮಯ ಕಾಯುತ್ತಿತ್ತು. ಅಂಥ ಸಮಯ ಇದೀಗ ಪ್ರಾಪ್ತವಾಯಿತು. ಅದು ಅಪಸ್ವರ ಪ್ರಾರಂಭಿಸಿತು. ಭಾರತದಲ್ಲಿ ಕ್ರಿಕೇಟ್ ಆಟ ನಡೆದರೆ ಕ್ರಿಕೇಟಿಗರಿಗೆ ರಕ್ಷಣೆ ನೀಡುವ ಬಗ್ಗೆ ಅದು ಧ್ವನಿ ಎತ್ತಿತು.

ಹಾಗೆ ನೋಡಿದರೆ ಇದು ಅಸಹಜವೇನೂ ಅಲ್ಲ. ಲಾಹೋರ್ ಘಟನೆಗಿಂತ ಮುಂಚೆ ಮುಂಬಯಿಯಲ್ಲಿ ನಡೆದ ಘಟನೆಯೂ ಭಾರತದಲ್ಲಿ ಕ್ರಿಕೇಟಿಗರಿಗೆ ಅಭಧ್ರತೆಯ ಭಾವ ಮೂಡಿಸುವುದಕ್ಕೆ ಕಾರಣವಾಗಿರಬಹುದು. ಆದರೆ ಪ್ರಶ್ನೆ ಇದಲ್ಲ. ಪ್ರಶ್ನೆ ಇರುವುದು ಬಿಸಿಸಿಐ ಭಾರತದಿಂದ ಹೊರಕ್ಕೆ ಈ ಪಂದ್ಯಗಳನ್ನು ಆಡುವುದಕ್ಕೆ ನಿಶ್ಚಯ ಮಾಡಿರುವುದು ಸರಿಯೇ ಎನ್ನುವುದು.

ಹೇಳಿ ಕೇಳಿ ಈ ಪಂದ್ಯಗಳು ಭಾರತದ್ದು. ಭಾರತದ ಕಂಪೆನಿಯ ಮಾಲಿಕರಾದ  ಮಲ್ಯ, ಅಂಬಂಬಾನಿಗಳು, ಬೆಳ್ಳಿ ತೆರೆಯ ನಟ ನಟಿಯರಾದ ಶಾರುಕ್ ಖಾನ್, ಪ್ರೀತಿ ಝಿಂಟಾ, ಶಿಲ್ಪಾಶೆಟ್ಟಿ ಮೊದಲಾದವರ ನೇತೃತ್ವ ವಹಿಸಿದ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸುತ್ತಿವೆ. ರಾಜ್ಯಗಳನ್ನು ಅಥವಾ ಪ್ರಾಂತ್ಯಗಳನ್ನು ಸೂಚಿಸುವ ತಂಡಗಳಲ್ಲಿ ನಮ್ಮ ದೇಶದ ಹರಾಜಿನಲ್ಲಿ ಆಯ್ಕೆಯಾದ  ಆಟಗಾರರು ಮತ್ತು  ಒಂದಷ್ಟು ವಿದೇಶೀಯರು. ಹೀಗಿರುವಾಗ ಈ ಪಂದ್ಯಾಟವನ್ನು ಭಧ್ರತೆಯ ಕಾರಣ ಕೊಟ್ಟು ದಕ್ಷಿಣ ಆಫ್ರೀಕಕ್ಕೆ ಅಥವಾ ಇಂಗ್ಲೆಂಡಿಗೆ ಸ್ಥಾನಾಂತರಿಸಲು ಬಿಸಿಸಿಐ ಆಲೋಚಿಸಿದ್ದು ಎಷ್ಟು ಸರಿ? ಇಂಗ್ಲೆಂಡ್ ಪ್ರಾರಂಭದಲ್ಲಿ ಈ ಆಟಕ್ಕೆ ಎದುರು ಹೇಳಿತ್ತು. ತನ್ನ ಆಟಗಾರರಿಗೆ ಪಂದ್ಯಾಟದಲ್ಲಿ ಆಡದಂತೆ ತಾಕೀತೂ ಮಾಡಿತ್ತು. ಆದರೆ ಬಿಸಿಸಿಐಗೆ ಇದ್ಯಾವುದೂ ಬೇಕಾಗಿಲ್ಲ. ಟಿವಿ ಪ್ರಸಾರದ ಮೂಲಕ ತನ್ನ ತಿಜೋರಿ ತುಂಬಿಸುವ ಬಗ್ಗೆ ಮಾತ್ರ ಅದರ ಚಿಂತೆ, ಚಿಂತನೆ.

ಯಾವಾಗ ಭಾರತದಲ್ಲಿ ಚುನಾವಣೆಯ ದಿನಗಳು ಘೋಷಣೆಯಾದುವೋ ಈ ವರ್ಷದ ಐಪಿಎಲ್ ಪಂದ್ಯಾಟಕ್ಕೆ ಕಂಟಕ ಎದುರಾಯಿತು. ಚುನಾವಣೆಯನ್ನೇ ಆಟ ಮುಗಿದ ಮೇಲೆ – ಮಳೆಗಾಲದಲ್ಲಿ ಆದರೂ ಚಿಂತಿಲ್ಲ – ನಡೆಸುವಂತೆ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಬಿಸಿಸಿಐ ಪ್ರಾರಂಭದಲ್ಲಿ ಒತ್ತಡ ತಂದಿತು. ಆದರೆ ಅದಾಗಲಿಲ್ಲ. ಬೇರೆ ಬೇರೆ ರಾಜ್ಯಗಳ ಸರಕಾರಗಳೊಡನೆ, ಅಧಿಕಾರ ವರ್ಗದೊಡನೆ ಭಧ್ರತೆಯ ಕುರಿತಂತೆ ಸಾಕಷ್ಟು ಚರ್ಚೆ ನಡೆದುವು. ಇಲ್ಲೆಲ್ಲ ಎಷ್ಟು ಹಣದ ವ್ಯವಹಾರದ ಕುರಿತು ಬಿಸಿಸಿಐ ಮತ್ತು ಇವುಗಳ ನಡುವೆ ಚರ್ಚೆ ನಡೆದು ತೀರ್ಮಾನಗಳು ಮುರಿದು  ಬಿದ್ದುವೋ  ತಿಳಿಯದು. ಅಂತೂ ರಾಜ್ಯಗಳು ಚುನಾವಣೆಯ ಕಾರಣ ಕೊಟ್ಟು ಸಾಕಷ್ಟು ಭಧ್ರತೆ ಕೊಡಲು ನಿರಾಕರಿಸಿವೆ. ಇದು ಒಂದು ಬಗೆಯಲ್ಲಿ ನ್ಯಾಯವಾದದ್ದೇ.  ಬಿಸಿಸಿಐ ಪಂದ್ಯಾಟವನ್ನು ಬೇರೆಯೇ ಬಗೆಯಲ್ಲಿ – ಕೆಲವೇ ಪಂದ್ಯಗಳ ಮೂಲಕ – ನಡೆಸಬಹುದಾಗಿತ್ತು. ಅದೂ ಆಗದಿದ್ದರೆ ಪಂದ್ಯವನ್ನು ಈ ಬಾರಿ ನಡೆಸದೇ ಹೋಗಬಹುದಾಗಿತ್ತು. ಚಿಟ್ಟು ಹಿಡಿಯುವಷ್ಟು ಕ್ರಿಕೇಟ್ ಆಟಗಳು ಆಟಗಾರರಿಗೆ ಮತ್ತು ಅದಕ್ಕಿಂತ ಹೆಚ್ಚಿಗೆ ಕ್ರೀಂಡಾಂಗಣದಲ್ಲಿ ಹಾಗೂ  ಮನೆಯಲ್ಲೇ ಕುಳಿತು ಬಿಡುಗಣ್ಣರಾಗಿ ಟಿವಿಯ ಒಳಗೆ ನಿಟ್ಟಿಸುವ ಪ್ರೇಕ್ಷಕರ ಆರೋಗ್ಯಕ್ಕೂ ಒಳ್ಲೆಯದಲ್ಲ.

ಆದರೆ  ಬಿಸಿಸಿಐ ಇಡೀ ಪಂದ್ಯಾಟವನ್ನೇ ಬೇರೆ ದೇಶಕ್ಕೆ ಸ್ಥಾನಾಂತರಿಸುವ, ಗುಳೇ ಹೋಗುವ ಮಾನಗೇಡಿ ನಿರ್ಧಾರಕ್ಕೆ ಬರುವ ಮೂಲಕ ಭಾರತದ  ಅಸಾಮರ್ಥ್ಯವನ್ನು  ಜಗಜ್ಜಾಹೀರು ಮಾಡಿದೆ. ಕಾಂಚನದ ಹಿಂದೆ ಬಿದ್ದಿರುವ ಬಿಸಿಸಿಐ ಕುರುಡಾಗಿದೆ. ಆಟಕ್ಕಿಂತ ದುಡ್ಡು ಮಾತ್ರ ಅದಕ್ಕೆ ಮುಖ್ಯವಾಗುತ್ತಿದೆ. ಈ  ದೋಷಕ್ಕೆ ಸರಕಾರ ಚಿಕಿತ್ಸೆ  ಮಾಡಬೇಕಾಗಿದೆ. ಆದರೆ  ಸರಕಾರವೇ ಇಲ್ಲ.  ಇದ್ದರೂ ಅದು ಇರುತ್ತದೆ ಹಣದಲ್ಲಿ ಕೊಬ್ಬಿದ ಬಿಸಿಸಿಐಯ ಮುಷ್ಟಿಯಲ್ಲಿ.
ಅಂದ ಹಾಗೆ ರಕ್ಷಣೆಯ ಕಾರಣಕ್ಕೆ ಚುನಾವಣೆಯನ್ನೂ ದಕ್ಷಿಣ ಆಫ್ರೀಕಾದಲ್ಲಿ ನಡೆಸಿದರೆ ಹೇಗೆ?

  1. harsha kedila
    ಮಾರ್ಚ್ 30, 2009 ರಲ್ಲಿ 7:58 ಫೂರ್ವಾಹ್ನ

    They would have conducted semi finals and final atleast. Politics prestige business ruined cricket.

  1. No trackbacks yet.

ನಿಮ್ಮ ಟಿಪ್ಪಣಿ ಬರೆಯಿರಿ