ಮುಖ ಪುಟ > ವ್ಯಕ್ತಿ - ಜೀವನ > ಅನನ್ಯ ಕಲಾವಿದ ಶಂಭು ಹೆಗಡೆಯವರ ನಿರ್ಯಾಣ

ಅನನ್ಯ ಕಲಾವಿದ ಶಂಭು ಹೆಗಡೆಯವರ ನಿರ್ಯಾಣ

ಸಂಜೆ ಕಾಲೇಜಿನಿಂದ ಬಸವಳಿದು ಬಂದಿದ್ದೆ ನಾನು. ಎಂದಿನಂತೆ ಟಿವಿಯೊಳಗೆ ಹೊಸ ಸುದ್ದಿ ಏನಿದೆ ಎಂದು ನೋಡಲು ಇಣುಕಿದೆ ಅದರೊಳಗೆ. ಆ ಸುದ್ದಿ ಮತ್ತಷ್ಟು ಬಸವಳಿಯುವಂತೆ ಮಾಡಿತು – ಕುಣಿಯುತ್ತ ಕುಣಿಯುತ್ತಲೇ ಕೆರೆಮನೆ ಶಂಭು ಹೆಗಡೆ ಈ ಭವದ ಆಟ ಮುಗಿಸಿ ಮತ್ತೆ ಬರದ ಲೋಕದತ್ತ ನಡೆದಿದ್ದಾರೆಂದು ತಿಳಿದಾಗ  ಮನ ಕಲಕಿತು. ಸಾಗರದಲ್ಲಿ ತೆರೆಗಳು ಎದ್ದೆದ್ದು ಬರುವಂತೆ ನೆನಪುಗಳು ಒತ್ತೊತ್ತಿ ಬರತೊಡಗಿದುವು. ಅದನ್ನಿಲ್ಲಿ ಮೂಡಿಸುತ್ತಿದ್ದೇನೆ.

1975ರ ಸುಮಾರಿಗೆ ಪುತ್ತೂರಿಗೆ “ಮಹಾಗಣಪತಿ ಯಕ್ಷಗಾನ ಮಂಡಳಿ, ಇಡಗುಂಜಿ” ಎಂಬ ಬಡಗು ತಿಟ್ಟಿನ ಮೇಳ ಬರುತ್ತದೆಂಬ ಸುದ್ದಿ ಕೇಳಿದಾಗ ಅದಾಗಲೇ ಯಕ್ಷಗಾನದ ಹುಚ್ಚು ಹಿಡಿಸಿಕೊಂಡಿದ್ದ ಹುಡುಗ ಪ್ರಾಯದ ನಮಗೆಲ್ಲ ಕುತೂಹಲ. ಆ ಮೇಳದಲ್ಲಿ ಕೆರೆಮನೆ ಕುಟುಂಬದ ಘಟಾನುಘಟಿ ಕಲಾವಿದರಿದ್ದಾರಂತೆ, ಪಾತ್ರಧಾರಿಗಳು ಕೇದಗೆ ಮುಂಡಾಸು ತೊಡುತ್ತಾರಂತೆ, ನೆಲದಲ್ಲಿ ಮಂಡಿಯೂರಿ ಗರಗರನೆ ಸುತ್ತುತ್ತಾರಂತೆ. ನಮ್ಮ ಕುತೂಹಲಕ್ಕೆ ಗರಿಗಳು, ರೆಕ್ಕೆ ಪುಕ್ಕಗಳು ಮೂಡತೊಡಗಿದುವು.

ತೆಂಕು ತಿಟ್ಟಿನ ಯಕ್ಷಗಾನವಷ್ಟೆ ಅಂದು ನಮಗೆ ತಿಳಿದಿತ್ತು. ಪುತ್ತೂರಿನ ಜಾತ್ರೆ ಗದ್ದೆಯಲ್ಲಿ ಒಂದೇ ದಿನ ಐದಾರು ಡೇರೆಗಳ ತುಂಬ ತೆಂಕು ತಿಟ್ಟಿನ “ಪೌರಾಣಿಕ ಕಥಾನಕಗಳು ” ವಿಜೃಂಭಿಸುತ್ತಿದ್ದ ದಿನಗಳವು. ಬಡಗು ತಿಟ್ಟು ಅಂದರೆ ಏನೆಂದೇ ತಿಳಿದಿರಲಿಲ್ಲ ಈ ಕಡೆಯ ನಮಗೆ. ಬಿಡದೇ ನಾಲ್ಕೈದು ದಿನ ಯಕ್ಷಗಾನ ನೋಡುವ ಹುಚ್ಚು ನಮಗೆ.

ಸಂಜೆಯೇ ಡೇರೆಗೊಂದು ಸುತ್ತು ಬಂದು ಕೃತಾರ್ಥರಾಗಿ, ಅಂದು ರಾತ್ರೆ ಒಂಬತ್ತರ ಹೊತ್ತಿಗೆ ಮೇಳದ ಡೇರೆಯಲ್ಲಿ ಹಾಜರಿದ್ದೆವು ನಮ್ಮ ಮನೆ ಮಂದಿಯೊಂದಿಗೆ.. ಜನವೋ ಜನ. ಅದು ತನಕ ಚಚ್ಚೌಕದ ಚಿಕ್ಕ ವೇದಿಕೆ ನೋಡಿದ್ದ ನಮಗೆ ಅಲ್ಲಿದ್ದ ಅರ್ಧ ಚಂದ್ರಾಕೃತಿಯ ರಂಗಸ್ಥಳ ಬೆರಗು ಮಾಡಿತು.

ಅಂದಿನ ಯಕ್ಷಗಾನ ಪ್ರಸಂಗ ಈಗಲೂ – ತೀರ ನಿನ್ನೆ ನೋಡಿದಂತೆ – ನೆನಪಿದೆ. “ಪ್ರಚಂಡ ವಿಶ್ವಾಮಿತ್ರ ಮತ್ತು ಉತ್ತರನ ಪೌರುಷ”. ಶಿವರಾಮ ಹೆಗಡೆಯವರ ವಸಿಷ್ಠ, ಮಹಾಬಲ ಹೆಗಡೆಯವರ ವಿಶ್ವಾಮಿತ್ರ, ಗಜಾನನ ಹೆಗಡೆಯವರ ಮೇನಕೆ, ಗೋಡೆ ನಾರಾಯಣ ಹೆಗಡೆಯವರ ತ್ರಿಶಂಕು. ಎಂತೆಂಥ ಕಲಾವಿದರು. ಸಾಕ್ಷಾತ್ ಯಕ್ಷರೂಪದ ಗಂಧರ್ವಾಧಿಪತಿ ಬಂದಿರಬಹುದು ಅಂದಿನ ಆಟದ ಸೊಗಸು ಅನುವಿಸಲು. ಬೆಳಗ್ಗಿನ ಜಾವ ಮೂರರ ಹೊತ್ತಿಗೆ ಮೊದಲ ಪ್ರಸಂಗ ಮುಗಿತು. ಹೊಂತಕಾರೀ ಪಡೆಗಳಾದ ನಮ್ಮನ್ನು ಕರೆದೊಯ್ದ  ನಾಳಿನ ಕಾಯಕಕ್ಕೆ ತಯಾರಾಗಲು ನಮ್ಮ ಹಿರಿಯರು ಮುಂಚಿತವಾಗಿ ಹೊರಡಬೇಕೇ?

ನಮಗೋ ಎಲ್ಲ ನೋಡಬೇಕೆಂಬ ಮನಸ್ಸು. ಒಲ್ಲದ ಮನದೊಂದಿಗೆ ನಮ್ಮ ಪಟಾಲಮ್ಮು ಹೊರಟಿತು. ಆದರೇನು ಆಶ್ಚರ್ಯ,  ಓಹ್, ಅಲ್ಲಿ ನೋಡಿ – ಉತ್ತರನ ಪ್ರವೇಶವಾತು. ಅದೆಂಥ ಮೋಡಿ! ಅಗಲ ಮತ್ತು  ದುಂಡಗಿನ ಮುಖದ ಸ್ಪುರದ್ರೂಪೀ ತರುಣ ಮಿಂಚು ಕೋರೈಸಿದಂತೆ ಅರ್ಧಚಂದ್ರಾಕೃತಿಯ ರಂಗಸ್ಥಳವನ್ನು ತುಂಬಿದ ಆ ಬಗೆಯಿಂದ ಬೆಕ್ಕಸ ಬೆರಗಾದುವು. ಎದ್ದಲ್ಲೇ ಕುಳಿತೆವು. ಕುಳಿತಲ್ಲೇ ಬಿಡುಗಣ್ಣರಾದೆವು. ಮುಂದಿನ ಮೂರು ಗಂಟೆಗಳ ಕಾಲ ಉತ್ತರನ ನಿಜ ಪೌರುಷ ಅಲ್ಲಿ ವಿಜೃಂಭಿಸಿತು.

ಉತ್ತರ ಮಾತಿನ ಮಲ್ಲ. ಮಾತಿನ ಮಲ್ಲರಾದ ಶೇಣಿ, ರಾಮದಾಸ ಸಾಮಗ, ವಾಸುದೇವ ಸಾಮಗರ ಉತ್ತರನನ್ನು ಕಂಡಿದ್ದೇನೆ. ಆದರೆ ಶಂಭು ಹೆಗಡೆಯವರ ಉತ್ತರಕ್ಕೆ ಸರಿ ಸಾಟಿಯಾದದ್ದು ಬೇರೊಂದಿಲ್ಲ. ಅಲ್ಲಿ ಮಾತು ಇತ್ತು. ಅದಕ್ಕೆ ಕಿರೀಟವಾಗಿಯೋ ಎನ್ನುವಂತೆ ಉತ್ತರ ಭೂಪನ ಲಾಸ್ಯವಿತ್ತು. ಅದು ಮಾತು ಕುಣಿತಗಳ ಅನ್ಯಾದೃಶ ಉತ್ತರ.

ಮುಂದಿನ ದಿನಗಳಲ್ಲಿ ಕೆರೆಮನೆ ಶಂಭು ಹೆಗಡೆ ಮತ್ತು ಕೆರೆಮನೆ ಮೇಳ ಎಷ್ಟೊಂದು ಆವಾಹಿಸಿದುವೆಂದರೆ ಪುತ್ತೂರು ಮಾತ್ರವಲ್ಲ ಸುತ್ತಲಿನ ಹಲವೆಡೆ ಮೇಳದ ಡೇರೆ ತುಂಬಿ ತುಳುಕತೊಡಗಿದುವು. ಎದುರಿನ ಹಲವಾರು ಸಾಲುಗಳ ಕುರ್ಚಿಗಳಿಗೆಲ್ಲ ರುಮಾಲು, ಹಗ್ಗ ಕಟ್ಟಿ ಮೊದಲೇ ಕಾದಿರಿಸಿಬೇಕಾದ ಪರಿಸ್ಥಿತಿ ನಿರ್ಮಾಣವಾತು. ಶಂಭು ಹಗಡೆಯವರ ಕಾರ್ತವೀರ್ಯ, ಕೀಚಕ, ಮಾಗಧ, ಗದಾಯುಧ್ಧದ ಕೌರವ, ಕೃಷ್ಣ ಸಂಧಾನದ ಕೃಷ್ಣ, ಸುಧನ್ವ, ಕಂಸ .. ಪ್ರತಿಯೊಂದು ಪಾತ್ರವೂ ಅಪ್ರತಿಮ. ಎಂದೂ ಅವರು ಪಾತ್ರದ ಘನತೆಗೆ ಚ್ಯುತಿ ತರುತ್ತಿರಲಿಲ್ಲ. ಪ್ರಾಯಕ್ಕೆ ಸಹಜವಾಗಿ ನಂತರ ದಿನಗಳಲ್ಲಿ ಅವರು ಅಭಿನಯುಸಿದ ರಾಮ, ದಶರಥ, ವಾಲಿಯ ಪಾತ್ರಗಳು ಮಾತಿನ ಪ್ರೌಢಿಮೆಗೂ  ಸಾಕ್ಷಿಯಾದುವು.

ಒಂದು ಪ್ರಸಂಗ ನೆನಪಿಗೆ ಬರುತ್ತಿದೆ. ಧುರ್ಯೋಧನನ ಪಾತ್ರದಲ್ಲಿ ಅವರು ತಲ್ಲೀನರಾಗಿದ್ದರು. ಪ್ರೇಕ್ಷಕರ ನಡುವೆ ಏನೋ ಹರಟೆಯ ಮಾತುಗಳು ಹೆಚ್ಚಾದುವು.  ಧುರ್ಯೋಧನ ಮಾತು ನಿಲ್ಲಿಸಿ, ಗಲಾಟೆ ಮಾಡುವ ಮಂದಿಯನ್ನು ತರಾಟೆಗೆ ತೆಗೆದುಕೊಂಡು ಸುಮ್ಮನೆ ಇರಲು ಸಾಧ್ಯವಾಗದಿದ್ದರೆ ಡೇರೆ ಬಿಟ್ಟು ನಡೆಯಲು ಆಜ್ಞಾಪಿಸಿಯೇ ಬಿಡಬೇಕೇ? ಇಡೀ ಡೇರೆಯಲ್ಲಿ ಮೌನ ಆವರಿಸಿತು. ಅಪ್ಪಟ ಕಲಾವಿದನಿಗೆ ಬೇಕು ತಾದಾತ್ಮ್ಯ ಹೊಂದಿದ ಪ್ರೇಕ್ಷಕರು.

ಇನ್ನೊಂದು ಸಂದರ್ಭದಲ್ಲಿ ಒಂದು ರೂಪಾಯಿ ಟಿಕೇಟಿನ ನೆಲದಿಂದ ಹತ್ತು ರೂಪಾಯಿಯ ಇಸೀಚೆಯರಿನ ಪರಮ ಸುಖಕ್ಕಾಗಿ ಕೆಲವರು ಮೆತ್ತಗೆ ಹಗ್ಗದ ಕೆಳಗಿಂದ ತೂರತೊಡಗಿದರು ನಡು ರಾತ್ರೆ ಕಳೆದ ಬಳಿಕ. ರಾಜ ವೇಷದಲ್ಲಿದ್ದ ಮೇಳದ ರಾಜನೇ ಆದ ಯಜಮಾನ ಶಂಭು ಹೆಗಡೆ ಗಮನಿಸಿದರು. ಅಲ್ಲಿಂದಲೇ ಅವರನ್ನು ಗದರಿಸಿ ಹಿಂದೆ ಕಳುಸಿದರು.

ಪುತ್ತೂರು, ವಿಟ್ಲ ಮೊದಲಾದ ಭಾಗಗಳಲ್ಲಿ ಕೆರೆಮನೆ ಮೇಳದ ಬಗ್ಗೆ ಪ್ರೇಕ್ಷಕರು ಅನನ್ಯ ಅಭಿಮಾನ ಇಟ್ಟಿದ್ದರೆಂದು ಶಂಭು ಹೆಗಡೆ ಸ್ಮರಿಸುತ್ತಿದ್ದರು. ಇವರ ವಿಜಯ ಇತರ ಬಡಗು ಮೇಳಗಳಿಗೆ, ಕಲಾವಿದರಿಗೂ ತೆಂಕಿನ ಕಡೆಗೆ ಬರುವುದಕ್ಕೆ ಧೈರ್ಯ ಮೂಡಿಸಿದ್ದು ಸುಳ್ಳಲ್ಲ. ಮುಂದಿನ ದಿನಗಳಲ್ಲಿ ಈ ಕಡೆಗೆ ಸಾಲಿಗ್ರಾಮ ಮೇಳ ಬಂತು. ಪೆರ್ಡೂರು ಮೇಳ ಆಗಮಿಸಿತು. ಬಡಗು ತಿಟ್ಟಿನ ಇತರ ಕಲಾವಿದರ ಪರಿಚಯವಾತು. ಇದೊಂದು ತಿಟ್ಟೀಕರಣ (ಜಾಗತೀಕರಣದಂತೆ) ಪ್ರಕ್ರಿಯೆಯಾತು. ತೆಂಕು ತಿಟ್ಟಿನ ಬಗೆಯಲ್ಲೂ ಸಾಕಷ್ಟು ವ್ಯತ್ಯಾಸವಾತು.

ಯಕ್ಷಗಾನ ಶಂಭು ಹೆಗ್ದೆಯವರ ರಕ್ತದಲ್ಲಿ ಹರಿದು ಬಂದಿತ್ತು. ತಂದೆ ಶಿವರಾಮ ಹೆಗ್ಡೆ ರಾಷ್ತ್ರ ಪ್ರಶಸ್ತಿ ವಿಜೇತ ಅಗ್ರಗಣ್ಯ ಕಲಾವಿದರು. ಅವರ ಗರಡಿಯಲ್ಲಿ ಪ್ರಾರಂಭದ ನಡೆ ಕಲಿತ ಶಂಭು ಹೆಗ್ದೆಯವರು ಯಕ್ಷಗಾನದಲ್ಲಿ ಮಾತಿಗಿಂತಲೂ ಗಾನ ಮತ್ತು ನೃತ್ಯ ಮುಖ್ಯ ಎನ್ನುವುದನ್ನು ಪ್ರತಿಪಾದಿಸಿದರು ತಮ್ಮದೇ ಬಗೆಯಲ್ಲಿ.

ಆ ದಿನಗಳಲ್ಲಿ ನಮ್ಮ ಮನೆಗಳಲ್ಲಿಯೂ ಚರ್ಚೆ ನಡೆದಿದ್ದುಂಟು. ನಾವು ಹುಡುಗರು ಬಡಗಿನ ಕಡೆಗೆ ವಾಲಿದರೆ ಕೆಲವು ಹಿರಿಯರಿನ್ನೂ ತೆಂಕಿನ ಪಕ್ಷದಲ್ಲಿಯೇ ಇದ್ದರು. ಕುಣಿತ ಮತ್ತು ಮಾತು ಎಷ್ಟು ಇರಬೇಕೆಂದು ಹಿತವಾದ ಚರ್ಚೆ ನಡೆಯುತ್ತಿತ್ತು. ಇದೇ ವಿಷಯದ ಕುರಿತಂತೆ ಪತ್ರಿಕೆಯಲ್ಲಿಯೂ ಚರ್ಚೆ ಕಾವೇರಿದ್ದುಂಟು. ಗದಾಯುದ್ಧ ಪ್ರಸಂಗದಲ್ಲಿ “ನೋಡಲ್ಲಿ ಬಿದ್ದಿಹ ಭೀಮ” ಎನ್ನುತ್ತ ಅಷ್ಟೊಂದು ನೃತ್ಯ ಮಾಡುವುದಕ್ಕೆ ಯುಧ್ಧರಂಗದಲ್ಲಿ ಧುರ್ಯೋಧನನಿಗೆ ಪುರುಸೊತ್ತಿದೆಯೇ ಎಂಬ ಧಾಟಿಯಲ್ಲಿ ಹಿರಿಯ ಕಲಾವಿದರೊಬ್ಬರು ಪತ್ರಿಕೆಯಲ್ಲಿ ಆಕ್ಷೇಪಿಸಿದಾಗ, ‘ಮಾತಿನ ವರಸೆಯಲ್ಲೇ ಇರುವುದಕ್ಕೂ ಅವನಿಗೆ ಪುರುಸೊತ್ತಿರದು’ ಎಂಬ ಹಾಗೆ  ಶಂಭು ಹೆಗಡೆಯವರು ಮಾರುತ್ತರ ನೀಡಿದ್ದರು ಖಾರವಾಗಿ.

ನಮ್ಮ ಅಣ್ಣ ಒಮ್ಮೆ ಶಂಭು ಹೆಗ್ದೆಯವರಿಗೆ ಪತ್ರ ಬರೆದ. ಅವನಿಗೆ ಹುಡುಗ ಪ್ರಾಯ. “ನಿಮ್ಮ ಮೇಳದ ಭಾಗವತಿಕೆ ತೀರ ಕರ್ಕಶ – ದೊರಗು ನೆಲದಲ್ಲಿ ಮೇಜು ಏಳೆದಂತಾಗುತ್ತದೆ, ಬದಲಾಸಿದರೆ ಉತ್ತಮ” ಎಂಬ ಭಾವ ಅಲ್ಲಿತ್ತು. ಶಂಭು ಹೆಗ್ಡೆ ಪತ್ರವನ್ನು ನಿರ್ಲಕ್ಷಿಸದೇ ಸಮಜಾಯಿಷಿ  ಕೊಟ್ಟದ್ದು ಮಾತ್ರವಲ್ಲ, ಮುಂದೊಂದು ದಿನ ಮೇಳದ ಚೌಕಿಯಲ್ಲಿ ಅಣ್ಣ ಅವರನ್ನು ಭೇಟಿ ಮಾಡಿ ತನ್ನ ಪತ್ರದ ಬಗ್ಗೆ ಹೇಳಿದಾಗ ತೀರ ಆತ್ಮೀಯವಾಗಿ ಅವನನ್ನು ಮಾತನಾಡಿಸಿದ್ದು ಅವರ ಸೌಜನ್ಯಕ್ಕೊಂದು ನಿದರ್ಶನ.

ಯಕ್ಷಗಾನ ಕಲಾವಿದರಾಗಿ ಇವರದು ಹಿತ ಮಿತವಾದ ಹದವರಿತ  ಮಾತು – ಪದ್ಯಕ್ಕೆ  ಎಷ್ಟು ಬೇಕೋ ಅಷ್ಟು. ಆದರೆ ಯಕ್ಷಗಾನಕ್ಕೆ ಸಂಬಂಧಿಸಿದ ಗೋಷ್ಟಿಯಲ್ಲಿ ಇವರ ಮಾತಿನ ಪ್ರೌಢಿಮೆ, ಬೌದ್ಧಿಕ ಆಳ ಕಂಡು ಬೆರಗಾಗಿದ್ದೆ. ನಿಜ, ಬೌದ್ಧಿಕವಾಗಿ ಶಂಭು ಹೆಗ್ಡೆ ಉನ್ನತ ಸ್ತರದ ಕಲಾವಿದರು.

ಶಂಭುಹೆಗಡೆಯವರದು ಲೀಲಾಜಾಲವಾದ ಕುಣಿತ. ಭರತನಾಟ್ಯದ ಸೂಕ್ಷ್ಮಗಳನ್ನು, ಕಿರಿಯೋಗ್ರಫಿಯ ತಂತ್ರಗಳನ್ನು ಸ್ವಾಂಗೀಕರಿಸಿಕೊಂಡವರು ಇವರು.  ಇವರಂಥ ನವುರಾದ ಪದಗತಿಯ ಕಲಾವಿದ ಅತ್ಯಪರೂಪ. ನನಗನ್ನಿಸುವಂತೆ ಒಬ್ಬ ಯಕ್ಷಗಾನ ಕಲಾವಿದ  ಇಡೀ ವೇದಿಕೆಯನ್ನು ತುಂಬುವಂತೆ ಕುಣಿಯುವುದು ತೀರ ಪ್ರಯಾಸದ್ದು. ಆದರೆ ಅದು ಸಾಧ್ಯವಾಗುತ್ತಿತ್ತು ಶಂಭು ಹೆಗಡೆಯವರಿಗೆ. ಅವರಿದ್ದಷ್ಟು ಹೊತ್ತು ನಮಗೆ ರಸಕಾವ್ಯದ  ಅನುಭವ.

ನಿಧಾನವಾಗಿ ವರ್ತಮಾನ ಬದಲಾಗುತ್ತ ಧಾವಂತದ ಬದುಕು ಆವರಿಸತೊಡಗಿದಂತೇ ರಾತ್ರೆಯ ಜಾಗರಣೆ ಅಸಹನೀಯವಾಗಿ ಕಾಲಮಿತಿ ಯಕ್ಷಗಾನ ಬರತೊಡಗಿದಾಗ ಪ್ರಾಯಶ: ಯಕ್ಷಗಾನದ ಈ ಹೊಸ ವೇಷವನ್ನು ಇವರು ಒಪ್ಪಿಕೊಂಡಷ್ಟು ಬೇಗ ಬೇರೆ ಕಲಾವಿದರು ಒಪ್ಪಿಕೊಳ್ಳಲಿಲ್ಲ. ಸೀಮಿತ ಓವರುಗಳ ಕ್ರಿಕೇಟಿನಂತಿರುವ  ಕಾಲಮಿತಿ ಯಕ್ಷಗಾನದ  ಪರವಾಗಿ ಶಂಭು ಹೆಗಡೆ  ಒಲವು ತೋರಿದರು. ತೀರ ಇತ್ತೀಚೆಗೆನ ಕಾರ್ಯಕ್ರಮದಲ್ಲಿ

ಆದರೆ ಕಾಲ ಯಾರಿಗೂ ಕಾಯುವುದಿಲ್ಲ.  ಯಕ್ಷಗಾನದ ಈ ಅನರ್ಘ್ಯ ಕಲಾವಿದ ಇಡೀ ರಾತ್ರೆಯ ಯಕ್ಷಗಾನದಲ್ಲಿ ಭಾಗಿಯಾಗಿದ್ದರು. ಲವ, ಕುಶರ ಕಥೆಯ ಆ ಪ್ರಸಂಗದಲ್ಲಿ ಬಹುಶ: ಲವ ಅಥವಾ ಕುಶನಾಗಿ ಅವರ ಮಗ ಶಿವಾನಂದ ಹೆಗ್ಡೆಯವರಿದ್ದಿರಬಹುದೇನೋ, ತಿಳಿಯದು. ಬೆಳಗ್ಗಿನ ಜಾವ ರಾಮ ನಿರ್ಯಾಣವಾಗುವ ಹೊತ್ತಿನಲ್ಲಿ, ವೇಷ ಕಳಚದೇ ರಂಗಸ್ಥಳದಲ್ಲಿಯೇ ಯಕ್ಷಗಾನ ರಂಗದ ರಾಮ ಸದೃಶ ಶಂಭು ಹೆಗಡೆ ಹಟಾತ್ತನೆ ನಿರ್ಯಾಣ ಹೊಂದಿದ್ದು ಒಂದು ಬಗೆಯಲ್ಲಿ ಅರ್ಹವಾದ ಕೊನೆ. ಹಲವು ಬಿರುದು  ಬಾವಲಿಗಳಿಂದ ಸನ್ಮಾನಿಸಲ್ಪಟ್ಟ ಈ ಮೇರು ಕಲಾವಿದನಿಗೆ ಇದಕ್ಕಿಂತ ಅರ್ಹ ಸಮ್ಮಾನ ಬೇರೊಂದು ಇರದು.

  1. ಫೆಬ್ರವರಿ 4, 2009 ರಲ್ಲಿ 4:36 ಫೂರ್ವಾಹ್ನ

    nija…. arha nudi namana.

  2. ಅಶೋಕವರ್ಧನ
    ಫೆಬ್ರವರಿ 4, 2009 ರಲ್ಲಿ 3:55 ಅಪರಾಹ್ನ

    ನಮ್ಮ ಯಕ್ಷರಾತ್ರಿಗಳನ್ನು ಸಂಸ್ಕಾರಸಂಪನ್ನವಾಗಿಸಿದ ಮಹಾಕಲಾವಿದ ನಿನ್ನ ಬಸವಳಿದ ದಿನದ ಕೊನೆಯಲ್ಲೂ ನಿನ್ನಿಂದ ಅನುತಾಪದ ಅಲೆ ಹರಿಸಿದ್ದು ಆಶ್ಚರ್ಯವಲ್ಲ. ನಿನಗೆ ಅಭಿನಂದನೆ, ಆತನಿಗೆ ಅಭಿವಂದನೆ.
    ಅಶೋಕವರ್ಧನ

  3. ಫೆಬ್ರವರಿ 5, 2009 ರಲ್ಲಿ 7:15 ಫೂರ್ವಾಹ್ನ

    ನಿಜ… ಇದಕ್ಕಿಂತ ಅರ್ಹ ಸಮ್ಮಾನ ಬೇರೊಂದಿಲ್ಲ……

  4. minchulli
    ಫೆಬ್ರವರಿ 25, 2009 ರಲ್ಲಿ 5:19 ಫೂರ್ವಾಹ್ನ

    ಚೆಂದದ ನುಡಿ ನಮನ

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: