ಮುಖ ಪುಟ > ಸ್ವಗತಗಳು > ಗಣರಾಜ್ಯೋತ್ಸವಕ್ಕೆ ಗ್ರಹಣವೇ

ಗಣರಾಜ್ಯೋತ್ಸವಕ್ಕೆ ಗ್ರಹಣವೇ

ಮತ್ತೆ ಜನವರಿ 26  ಬಂದಿದೆ. ಗಣರಾಜ್ಯೋತ್ಸವ ಆಚರಿಸಿದ್ದೇವೆ – ತೀರ ಯಾಂತ್ರಿಕವಾಗಿ. ಯಾಂತ್ರಿಕತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ – ಸಿನಿಕತೆಯೂ ಹೆಚ್ಹುತ್ತಿರುವಂತೆ.

ಬಾಲ್ಯದ ದಿನಗಳು ನೆನಪಾಗುತ್ತಿವೆ ನನಗೆ. ನಾನು ಓದಿದ್ದು  ಮನೆಯ ಹತ್ತಿರದ ಸರಕಾರೀ ಹಳ್ಳಿ ಶಾಲೆಯಲ್ಲಿ. ಗಣರಾಜ್ಯೋತ್ಸವ, ಸ್ವಾಂತತ್ರ್ಯೋತ್ಸವ ದಿನಗಳಲ್ಲಿ ನಮ್ಮ ಮೆರವಣಿಗೆ ಹೊರಡುತ್ತಿತ್ತು. ಮುಂದೆ ನಮ್ಮ ಗುರುಗಳಾದ ಕಾರಂತ ಮಾಸ್ತರರು, ಹಿಂದೆ ದೊಗಳೆ ಚಡ್ಡಿಯನ್ನು ಏರಿಸಿಕೊಂಡ, ಲಂಗದಾವಣಿಯ ಚಿಣ್ಣರ ದಂಡು. ಶಾಲೆಯ ಅಂಗಳದಿಂದ ನೇರ ಹಾರಿದರೆ ಬೀಳುತ್ತದೆ ಆ ಹೆದ್ದಾರಿ. “ಬೋಲೋ ಭಾರತ್ ಮಾತಾಕೀ…” ಮಾಸ್ತರರು ಊರು ನಡುಗುವಂತೆ ಘೋಷಿಸಿದಾಗ  ಅದಕ್ಕೆ ನಾವೆಲ್ಲ ದನಿ ಸೇರಿಸುತ್ತಿದ್ದೆವು. ಓಹ್, ಅದೆಂಥ ಉತ್ಸಾಹ.  ಬಾವುಟ ಹಿಡಿದ ನಮ್ಮ ಮೆರವಣಿಗೆ ಸಾಗುತ್ತಿರುವಂತೆ ಕೆಲವು ಊರ ಹಿರಿಯರು, ಪಡ್ಡೆ ಹುಡುಗರು ಸೇರಿಕೊಳ್ಳುತ್ತಿದ್ದರು.  ಇಡೀ ಜಗತ್ತೇ ನಮ್ಮನ್ನು ನೋಡುತ್ತಿದೆಯೋ ಎಂಬ ಭಾವ ನಮ್ಮದಾಗಿರುತ್ತಿತ್ತು.

ಅಂದು ಶಾಲೆಯಲ್ಲಿ ಸಾಮಾನ್ಯವಾಗಿ ಇರುತ್ತಿತ್ತು ಊರ ಹಿರಿಯರೊಬ್ಬರ ಭಾಷಣ. ಬಂದವರು ಏನು ಹೇಳಿದ್ದರು ಅಂದು ಎಂದು ಇಂದು ನೆನಪಾಗದಿದ್ದರೂ,  ಅವರು ಏನು ಹೇಳಿರಬಹುದಂದು ಊಹಿಸಲು ಕಷ್ಟವಾಗದು. “ನಮ್ಮ ಹಿರಿಯರು ಎಷ್ಟು ಕಷ್ಟ ಪಟ್ಟಿದ್ದಾರೆ, ಯಾರೆಲ್ಲ ಜೈಲು ಸೇರಿದ್ದಾರೆ, ಹೇಗೆ ನಮಗೊದಗಿತು ಸ್ವಾತಂತ್ರ್ಯ ಏನೆಲ್ಲ ಗಳಿಸಿದ್ದೇವೆ, ಗಳಿಸಿದ್ದಕ್ಕಿಂತ ಎಷ್ಟು ಕಳೆದುಕೊಂಡಿದ್ದೇವೆ.. ಇತ್ಯಾದಿ .. ಇತ್ಯಾದಿ. ಮತ್ತೆ ಇರುತ್ತಿತ್ತು ಸಿಹಿ. ಊರಿನ ಕೆಲವು ಹಿರಿಯರು ನೀಡುತ್ತಿದ್ದ ಆ ತಿಂಡಿಗೆ ನಾವು  ಕಾತರದಿಂದ ಕಾಯುತ್ತಿದ್ದೆವು.

ಇಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ  ಬಂದಾಗ ನೆನಪಾಯಿತು ಇದೆಲ್ಲವೂ. ಕೆಲವೇ ಮಂದಿ ಸೇರಿದ ಇಂದಿನ ಕಾರ್ಯಕ್ರಮ ಒಂದೈದು ನಿಮಿಷಗಳಲ್ಲಿ ಮುಗಿದಿತ್ತು. ರಾಷ್ಟ್ರದ್ವಜ ಏರಿಸುವ ಹೊತ್ತಿನಲ್ಲಿ  “ಝಂಡಾ ಊಂಚ ರಹೇಹಮಾರಾ” ಎಂದು ಹಾಡಿದರು.  ಪ್ರಾಂಶುಪಾಲರು ಎನ್ ಸಿ ಸಿ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು. ಅತ್ಯಂತ ಚುಟುಕಾಗಿ ಶುಭಾಶಯ ಹೇಳುವುದರೊಂದಿಗೆ  ಕಾರ್ಯಕ್ರಮ ಮುಗಿದು, ಚಾಕ್ಲೇಟ್ ಬಾಯಿಗೇರಿಸಿದ ತಕ್ಷಣ ಹೊರಟೆವು ನಾವೆಲ್ಲ –  ಧಾವಂತದಿಂದ ಎನೋ ಅಗಾಧ ಕೆಲಸ ಇರುವಂತೆ. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹೇಳಿದೆವೇನೋ ನಿಜ, ಆದರೆ ಅಲ್ಲಿರಲಿಲ್ಲ ಉತ್ಸಾಹ.  ತೀರ ಯಾಂತ್ರಿಕವಾಗಿತ್ತು. ಎಷ್ಟೊಂದು ಹೃದಯದಾಳದಿಂದ ಬರಬೇಕಾಗಿತ್ತಲ್ಲ ಆ ಗೀತೆ. ಆದರೆ ಹಾಗಾಗಲಿಲ್ಲ. ಅಲ್ಲಲ್ಲಿ ಗಂಟಲಿನಾಳದಲ್ಲಿ ಸ್ವರವೇ ಹೂತು ಹೋದ ಹಾಗೆ. ನಮಗೆ ರಾಷ್ಟ್ರಗೀತೆಯೇ ಅಪರಿಚಿತವಾಗುತ್ತಿದೆಯೇ ಅಂದನ್ನಿಸಿತು.

ನನ್ನ ಹಳ್ಳಿ ಶಾಲೆಯಲ್ಲಿ ಮಕ್ಕಳು ಕಾಲೇಜಿಗಿಂತ ಉತ್ಸಾಹದಲ್ಲಿ ಸೇರಿದ್ದರು. ಎಲ್ಲ ಮಕ್ಕಳು ಸಾಲಿನಲ್ಲಿ ನಿಂತಿದ್ದರು. ದ್ವಜ ಹಾರುತ್ತಿತ್ತು ಗಾಳಿಗೆ. ಯಾರೋ ಮಾತನಾಡುತ್ತಿದ್ದರು. ಮಕ್ಕಳೆಲ್ಲ ಕೇಳುತ್ತಿದ್ದರು. ಮುಗ್ದತೆಯ ಆ ಲೋಕ ಇನ್ನೂ ಬೆಚ್ಚಗೆ ಉಳಿದಿದೆ ಎಂದನ್ನಿಸಿದರೂ, ಆ ಮೆರವಣಿಗೆಯ  ಸಂಭ್ರಮ ಇದ್ದರೆ ಮಕ್ಕಳು ಇನ್ನಷ್ಟು ಖುಷಿಪಡುತ್ತಿದ್ದರೆಂದು ಊಹಿಸಿ ಖುಷಿ ಪಟ್ಟೆ!

ಆದರೆ ನನಗೆ ಆಶ್ಚರ್ಯವಾದದ್ದು  ಒಂದು ಶಾಲೆಯಲ್ಲಿ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಆಚರಣೆಗಳು  ಸೂರ್ಯ ಗ್ರಹಣದ ಕಾರಣದಿಂದ ನಾಳೆ ನಡೆಯಲಿವೆ ಎಂದು ಕೇಳಿದಾಗ. ಇಂದು ಗ್ರಹಣದ ಪ್ರಯುಕ್ತ ಮಕ್ಕಳ ಮನೋರಂಜನೆಯ ಕಾರ್ಯಕ್ರಮಗಳನ್ನು  ನಿಲ್ಲಿಸಿದ್ದಾರಂತೆ. ಆ ಶಾಲೆಯ ಮಕ್ಕಳೆಲ್ಲ ಇಂದು ತಮ್ಮ ತಮ್ಮ ಮನೆಗಳಲ್ಲಿ ತಮಗಿಷ್ಟವಾದಂತೆ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಅದೂ ಸರಿಯೇ. ಮುಕ್ತ ಸ್ವಾತಂತ್ರ್ಯ. ಆದರೆ ಗಮನಿಸಬೇಕಾದದ್ದು ಪ್ರಜ್ಞೆಯ ಅರಿವಿನ ಕೇಂದ್ರದಲ್ಲಿಯೇ ಪ್ರಜ್ಞೆಗೆ ಬಡಿದ ಗ್ರಹಣದ ಬಗ್ಗೆ.

ಮಕ್ಕಳಿಗೆ ಗ್ರಹಣದ ಬಗ್ಗೆ ಅರಿವು ಮೂಡಿಸಬೇಕಾಗಿತ್ತು. ಗಣರಾಜ್ಯೋತ್ಸವದ ಬಗ್ಗೆ ವಿವರಣೆ ನೀಡಬೇಕಾಗಿತ್ತು.  ಆದರೆ ಎರಡೂ ಇರಲಿಲ್ಲ.  ಗಣರಾಜ್ಯೋತ್ಸವದ ಬಗ್ಗೆ ನಮ್ಮ ಎಳೆಯರಿಗೆ ಹೇಳುವ ಅಗತ್ಯವಿಲ್ಲವೇ? ನನಗೆ ಅರ್ಥವಾಗಲಿಲ್ಲ.

  1. ಜಿ.ಎನ್.ಅಶೋಕವರ್ಧನ
    ಜನವರಿ 31, 2009 ರಲ್ಲಿ 4:27 ಅಪರಾಹ್ನ

    ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಗಳೂ ಮತೀಯ ಆಚಾರಗಳಂತೆ `ಅವಧಿಮುಗಿದ’ ಸಂಭ್ರಮಗಳು. ಹೊಸಕಾಲದ ಸಂಭ್ರಮಕ್ಕೆ ವೈಚಾರಿಕ ಅನ್ವೇಷಣೆಗೆಳಸಲಿ ಮನ…………… ಎಲ್ಲಿ ಮನಕಳುಕಿರದೋ …. ಹಾರೈಸಿ.

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: