ರಾಮನ ಲೆಕ್ಕ ಕೃಷ್ಣನ ಲೆಕ್ಕ .. ಕಂಪೆನಿ ಪುಸ್ಕ
ತೀರ ಇತ್ತೀಚೆಗಿನ ತನಕ ನಮ್ಮ ಕಂಪ್ಯೂಟರ್ ತಂತ್ರಜ್ಞಾನದ ಮುಂಚೂಣಿಯಲ್ಲಿದ್ದ ಸತ್ಯಂ ಕಂಪ್ಯೂಟರ್ ಗುಳೇ ಎದ್ದಿದೆ – ಲಕ್ಷಾಂತರ ಹೂಡಿಕೆದಾರರು ತಲೆ ಮೇಲೆ ಕೈ ಹೊತ್ತಿದ್ದಾರೆ. ಮಾಲಿಕ ರಾಮಲಿಂಗಂ ರಾಜು ಸಲೀಸಾಗಿ ಕೈ ಎತ್ತಿದ್ದಾರೆ!
ಪ್ರಾಮಾಣಿಕತೆಯ ಅಭೂತಪೂರ್ವ ಅಧ:ಪತನಕ್ಕೆ ಸಾಕ್ಷಿಯಾದ ಈ ಘಟನೆ ಕೇವಲ ಶೇರು ಮಾರುಕಟ್ಟೆಯನ್ನಷ್ಟೇ ಅಲ್ಲ – ಎಲ್ಲರನ್ನು ಧೃತಿಗೆಡಿಸಿದೆ. ವರ್ಷಗಳ ಹಿಂದೆ ಶೇರು ಪೇಟೆಯಲ್ಲಿ ಎಲ್ಲ ಸರಿ ಇತ್ತು. ಎಂಥ ಉತ್ಸಾಹ ಆ ಪೇಟೆಯಲ್ಲಿ. ಸತ್ಯಂ ಶೇರು ಕೂಡ ಹಾರಾಡುತ್ತಿತ್ತು ಗಗನದಲ್ಲಿ – ಆರುನೂರರ ಆಸುಪಾಸಿನಲ್ಲಿ.
ಕಾಲೇಜಿನಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸತ್ಯಂ ಕಂಪೆನಿಗೆ ಸಬಂಧಿಸಿದ ಬಿಪಿಒದಲ್ಲಿ ಕೆಲಸ ಸಿಕ್ಕಾಗ ಅವರೊಂದಿಗೆ ಖುಷಿ ಪಟ್ಟೆವು ನಾವು ಕೂಡ. ಬದುಕಿನ ಭಾಗ್ಯದ ಬಾಗಿಲು ತೆರೆದು ಭದ್ರತೆ ಮೊಳೆತ ಭಾವ ಅವರಿಗೆ. ಒಬ್ಬಾಕೆ ಮಾತ್ರ “ಸತ್ಯಂ ಬೇಡ – ನಾನು ಇನ್ನಷ್ಟು ಕಲಿಯುತ್ತೇನೆ” ಎಂದು ಸ್ನಾತಕೋತ್ತರ ವಿಧ್ಯಾಭ್ಯಾಸಕ್ಕೆ ಹೊರಟಳು. ಅವಳಿಗೂ ಗೊತ್ತಿರಲಾರದು ಅಂದು ತನ್ನ ಈ ನಿರ್ಣಯ ಇಷ್ಟೊಂದು ನಿರ್ಣಾಯಕವಾಗುತ್ತದೆಂದು.
ಪ್ರಪಂಚದ ದೊಡ್ಡಣ್ಣ ಅಮೇರಿಕ ಶೀನಿದರೆ ಸಾಕಂತೆ – ಅಂಟಾರ್ಟಿಕದ ಮಂದಿಗೂ ಶೀತವಾಗುತ್ತದಂತೆ. ಆದರೆ ಈ ಬಾರಿ ದೊಡ್ದಣ್ಣನಿಗೆ ಆಗಿರುವುದು ಶೀತವಲ್ಲ , ಚಿಕನ್ ಗುನ್ಯಾದಂಥ ಆರ್ಥಿಕ ಜ್ವರ. ಈ ತಾಪ ತಟ್ಟತೊಡಗುತ್ತ ನಮ್ಮೆಲ್ಲ ಕಂಪೆನಿಗಳ ಗಗನಕ್ಕೇರಿದ ಶೇರು ಬೆಲೆ ರಸಾತಳಕ್ಕೆ ಜಾರುತ್ತಿರುವಾಗಲೇ, ಸತ್ಯಂ ಪತನ ಗಾಬರಿ ಹುಟ್ಟಿಸಿದೆ. ನೋಡುತ್ತಿರುವಂತೆಯೇ ಶೇರು ಪೇಟೆಯಿಂದಲೇ ಸತ್ಯಂ ನಿರ್ಗಮಿಸಿದೆ. ಹಣ ಕಳೆದುಕೊಂಡು ಹಳಹಳಿಸುತ್ತಿರುವವರು ಅದೆಷ್ಟು ಮಂದಿಯೋ. ಶೇರು ಆಟ – ಅತ್ಯಾಧುನಿಕ ಜೂಜು ಎನ್ನುವುದು ಇದೀಗ ಇನ್ನಷ್ಟು ಸ್ಪಷ್ಟವಾಗಿದೆ.
“ಶೇರು ಪೇಟೆಯ ಉಸಾಬಾರಿ ನಮಗಿಲ್ಲ – ಹಾಗಾಗಿ ನಾವು ಇಂಥದ್ದೆಲ್ಲದರಿಂದ ದೂರ ಮಾರಯ್ರೇ” ಎನ್ನಬಹುದು ಶೇರು ಅಂದರೆ ಮಾರು ದೂರ ಇರುವಂಥವರು. ಆದರೆ ಅದೂ ಕೂಡ ವಾಸ್ತವವಲ್ಲ. ಏಕೆಂದರೆ ನಮ್ಮ ಬ್ಯಾಂಕುಗಳು, ಮ್ಯೂಚುವಲ್ ಫಂಡುಗಳು, ಜೀವವಿಮಾ ಕಂಪೆನಿಗಳಲ್ಲಿ ನಮ್ಮ ಭವಿಷ್ಯಕ್ಕೆಂದು ಕಾಪಿಟ್ಟ ಹಣವನ್ನು “ಆರ್ಥಿಕ ತಜ್ಞರೆನಿಸಿದವರು” ತೊಡಗಿಸುತ್ತಾರೆ ಕಂಪೆನಿಗಳಲ್ಲಿ. ಅವರೇನೂ ತೊಡಗಿಸುವುದು ಬ್ಲೇಡ್ ಕಂಪೆನಿಗಳಲ್ಲಿ ಅಲ್ಲ. ಅತ್ಯಂತ ನಂಬಿಕೆಗೆ ಅರ್ಹವಾದ ಕಂಪೆನಿಗಳಲ್ಲಿ. “ಟ್ರಿಪಲ್ A ” ಕಂಪೆನಿಗಳಲ್ಲಿ, ಕ್ರಿಸಲ್ ರೇಟಿಂಗ್ ದೊರೆತ ವಿಶ್ವಾಸಾರ್ಹ ಕಂಪೆನಿಗಳಲ್ಲಿ. ವರ್ಷದ ಹಿಂದೆ ಸತ್ಯಂ ಅತ್ಯಂತ ವಿಶ್ವಾಸಾರ್ಹ ಕಂಪೆನಿಯಾಗಿತ್ತು. ಆದರೆ ಇಂದು. ಎಲ್ಲ ಕಂಪೆನಿಗಳ, ಬ್ಯಾಂಕು ಸೇರಿದಂತೆ ಆರ್ಥಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನೇ ಸತ್ಯಂ ವಿದ್ಯಮಾನ ಪ್ರಶ್ನಿಸುತ್ತಿದೆ. ನನಗೆ ಬ್ಯಾಂಕಿನ ವ್ಯವಹಾರವೇ ಇಲ್ಲ ಎನ್ನುವವರು ವರ್ತಮಾನ ಲೋಕದಲ್ಲಿ ಯಾರೂ ಇರಲಾರರು ತಾನೇ.
ಕಂಪೆನಿಗಳು ಈ ಬಗೆಯಲ್ಲಿ ದಗಲ್ಬಾಜಿಗಳಾಗಬಾರದು. ಒಂದು ಕಡೆ ಕೃಷ್ಣನ ಲೆಕ್ಕ. ಮತ್ತೊಂದೆಡೆ ರಾಮನ ಲೆಕ್ಕ. ಈ ಲೆಕ್ಕಗಳ ಮಧ್ಯೆ ಕಂಪೆನಿ ಪುಸ್ಕ ! ಸತ್ಯಂ ಆದದ್ದು ಹೀಗೆಯೇ. ಒಂದೆರಡಲ್ಲ, ಏಳು ವರ್ಷಗಳ ಕಾಲ ಸುಳ್ಳು ಲೆಕ್ಕ ಕೊಟ್ಟು ತಮ್ಮ ಆದಾಯವನ್ನು ಬುಗ್ಗೆ ಊದಿದದಂತೆ ತಾವು ಊದಿಸಿದ್ದೇವೆಂದು ಸತ್ಯಂ ಮಾಲಿಕರು ಸತ್ಯ ಹೇಳಿದ್ದಾರೆ! ಅಲ್ಲಿಗೆ ಬುಗ್ಗೆ ಒಡೆಯಿತು. ನೀರ ಮೇಲಣ ಗುಳ್ಳೆ – ನಿಜವಲ್ಲೋ ಹರಿಯೇ? ಎನ್ನುವುದು ಸತ್ಯವಾಯಿತು. ಖೋತಾ ಬಜೆಟ್ ಇದ್ದರೂ ಆದಾಯವಿದೆ ಎನ್ನುತ್ತ ಬಂದ ಸತ್ಯಂನಂಥೆ ಎಷ್ಟೊಂದು ಕಂಪೆನಿಗಳು ಇರಬಹುದಲ್ಲಾ! ವಿಶ್ವಾಸಕ್ಕೆ ಪಾತ್ರವಾದ ಬ್ಯಾಂಕುಗಳ ನಿಜ ಲೆಕ್ಕಪತ್ರ ಗುಪ್ತವಾಗಿದ್ದು – ರಂಗುರಂಗಿನ ಭರಪೂರ ಲಾಭದ ಲೆಕ್ಕ ಪತ್ರಗಳು ಮಂಡನೆಯಾಗುತ್ತಿರಬಹುದೇ? ಇಲ್ಲ ಎನ್ನುವ ಧೈರ್ಯ ಇಂದು ನಮಗಿಲ್ಲ. ಎಲ್ಲದರ ಬಗ್ಗೆ ಗುಮಾನಿ ಹೆಚ್ಚತೊಡಗಿದೆ.
ಸತ್ಯಂ ಆಟದಲ್ಲಿ ಕಂಪೆನಿಗಳ ಆಯ ವ್ಯಯವನ್ನು ನೋಡುವ ಪರಿಣಿತ ತಜ್ಞರು ಸಿಎಗಳು ಪಾಲುದಾರರಾಗಿದ್ದಾರಂತೆ. ಇದು ಬೇಲಿಯೇ ಎದ್ದು ಹೊಲ ಮೇದಂತೆ. ಪ್ರತಿಯೊಬ್ಬನೂ ಆರ್ಥಿಕ ತಜ್ಞನಾಗುವುದು ಅಥವಾ ತಜ್ಞನೆನಿಸಿಕೊಂಡವರ ಮೊರೆ ಹೋಗುವುದು ಸಾಧ್ಯವಾಗದು. “ಅವರಿವರ ನಂಬುಗೆಯ ಮೇಲೆ ಬಾಳ ನೌಕೆ ಕಟ್ಟಬೇಡ” ಎಂದರೂ ಎಲ್ಲೋ ಒಂದು ಕಡೆ ನಂಬಿಕೆ ಇಡಬೇಕಾಗುತ್ತದೆ. ಬದುಕಿನ ನೆಲೆಗಟ್ಟು ಇರುವುದು ಇಂಥ ನಂಬಿಕೆಯಲ್ಲಿಯೇ. ಆದರೆ ಕಪಟಿಗಳು ಇದ್ದಾರೆ ಮತ್ತು ಗಾಳ ಬೀಸುತ್ತಿರುತ್ತಾರೆಂಬ ಎಚ್ಚರಿಕೆಯೂ ನಮಗಿರಬೇಕಾಗುತ್ತದೆ. ಸತ್ಯಂ ವಿದ್ಯಮಾನ ಎಂದಿನಂತೆ ತಾತ್ಕಾಲಿಕವಾಗಿ ನಮ್ಮ ಕಣ್ಣು ತೆರೆಸಿದೆ.
nimmellaa barahagaLu chennagive
http://minchulli.wordpress.com