ಪುನರ್ಜನ್ಮದಂತರಾಳ
ಮೊನ್ನೆ ಮೊನ್ನೆ ನಮ್ಮೊಬ್ಬ ಸ್ನೇಹಿತರು ಪುನರ್ಜನ್ಮದ ಬಗ್ಗೆ ಮಾತನಾಡುತ್ತಿದ್ದರು. ಅವರಿಗೆ ಈ ಬಗ್ಗೆ ಆಸಕ್ತಿ, ನಂಬಿಕೆ. ಈ ಜನ್ಮದ ಕಷ್ಟ ಕಾರ್ಪಣ್ಯಗಳಿಗೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ಕಾರಣ. ಅಲ್ಲಿ ಕಟ್ಟಿದ ಬುತ್ತಿಯ ಊಟ ಇಲ್ಲಗೆ. ನಾವು ಏನಾಗಬಹುದು ಮುಂದಿನ ಜನ್ಮದಲ್ಲಿ? ಎಷ್ಟೊಂದು ಕುತೂಹಲ ಮತ್ತು ರೋಚಕವಾದದ್ದು.
ಆಗ ನನಗೆ ತುಂಬ ಹಿಂದಿನ ಘಟನೆಯೊಂದು ಆಯಾಚಿತವಾಗಿ ನೆನಪಾಯಿತು. ನಾನು ಬಿಎಸ್ಸಿ ಕೊನೆಯ ವರ್ಷದಲ್ಲಿದ್ದೆ. ನಾನು ಮತ್ತು ನನ್ನ ಅಮ್ಮ ಅಮ್ಮನ ಸ್ನೇಹಿತೆ ವೈದ್ಯೆಯೊಬ್ಬರ ಮನೆಗೆ ಹೋಗಿದ್ದೆವು – ಸ್ವಾಮೀಜಿಯವರ ಪ್ರವಚನಕ್ಕೆ. ಅದೇನೂ ಅಂಥ ಮಹಾ ಸಭೆಯಾಗಿರಲಿಲ್ಲ. ಹತ್ತಿಪ್ಪತ್ತು ಮಂದಿ. ಸ್ವಾಮೀಜಿಗಳು ಪುನರ್ಜನ್ಮದ ಬಗ್ಗೆ ಮಾತನಾಡುತ್ತ ಒಂದು ಉದಾಹರಣೆ ನೀಡಿದರು ’ ಮದ್ರಾಸಿನಲ್ಲೊಂದು ಕುಟುಂಬದಲ್ಲಿ ಅತ್ತೆಯಾದವಳು ಸೊಸೆಗೆ ಚಿತ್ರ ಹಿಂಸೆ ನೀಡುತ್ತಿದ್ದಾಳೆ. ಇದಕ್ಕೆ ಆ ಸೊಸೆ ಹಿಂದಿನ ಜನ್ಮದಲ್ಲಿ ವರ್ತಮಾನದ ಅತ್ತೆಗೆ ಕಾಟ ನೀಡಿದ್ದರ ಫಲವನ್ನು ಉಣ್ಣುತ್ತಿದ್ದಾಳೆ” ಹೀಗೆ ಬೇರೆ ಬೇರೆ ದೃಷ್ಟಾಂತಗಳ ಪ್ರವಚನ.
ನಡುವೆ ಪ್ರಶ್ನೆ ಕೇಳಬಹುದು ಎಂದಾಗ ನಾನು ಮೆತ್ತಗೆ ಕೇಳಿದೆ” ಗುರೂಜಿ, ನನಗೆ ತಿಳಿದಂತೆ ಈ ಪ್ರಕೃತಿಯಲ್ಲಿ ಮನುಷ್ಯನ ಹಾಗೆ ಕೋಟ್ಯಾಂತರ ಪ್ರಾಣಿ ಪಕ್ಷಿಗಳುಂಟು, ಕ್ರಿಮಿ ಕೀಟಗಳುಂಟು, ಅಗೋಚರ ಬ್ಯಾಕ್ಟೀರಿಯಾ ವೈರಸ್ ಗಳುಂಟು. ಬ್ಯಾಕ್ಟೀರಿಯಾ ಮನುಷ್ಯನಾಗುವುದು ಮತ್ತು ಮನುಷ್ಯ ಬ್ಯಾಕ್ಟೀರಿಯಾ ಅಗುವ ಸಾಧ್ಯತೆ ಇದೆಯೇ?”
ಸ್ವಾಮೀಜಿ ದುರುಗುಟ್ಟಿ ನೋಡಿದರು – ಎಂಥ ತಲೆಹರಟೆ ಎನ್ನುವ ಹಾಗೆ. “ಮತ್ತೆ ಹೇಳುತ್ತೇನೆ, ಉತ್ತರ ನಿನ್ನ ಪ್ರಶ್ನೆಗೆ” ಎಂದರು. ಸಾಗಿತು ಪ್ರವಚನ. ಒಂದೆರಡು ಗಂಟೆಗಳ ನಂತರ ಸ್ವಾಮಿಗಳು ಮುಗಿಸಿದರು. ಸಭೆ ಏರ್ಪಡಿಸಿದ ವೈದ್ಯೆಗೆ ಕುತೂಹಲ ” ಸ್ವಾಮೀಜಿ, ಆ ಹುಡುಗ ಎತ್ತಿದ ಪ್ರಶ್ನೆಗೆ ಉತ್ತರವೇನು? ”
ಸ್ವಾಮಿಗಳು ಕೇಳಿದರು ” ಹಾಂ, ನೀನು ಆಗ ಕೇಳಿದ್ದೇನು?”
ನನಗೆ ಹೆದರಿಕೆ, ಅಳುಕು. ನಾ ಮತ್ತೆ ಕೇಳಿದೆ ಅದೇ ಪ್ರಶ್ನೆಯನ್ನು ” ನನಗೆ ತಿಳಿದಂತೆ ಈ ಪ್ರಕೃತಿಯಲ್ಲಿ ಮನುಷ್ಯನ ಹಾಗೆ ಕೋಟ್ಯಾಂತರ ಪ್ರಾಣಿ ಪಕ್ಷಿಗಳುಂಟು, ಕ್ರಿಮಿ ಕೀಟಗಳುಂಟು, ಅಗೋಚರ ಬ್ಯಾಕ್ಟೀರಿಯಾ ವೈರಸ್ ಗಳುಂಟು. ಬ್ಯಾಕ್ಟೀರಿಯಾ ಮನುಷ್ಯನಾಗುವುದು ಮತ್ತು ಮನುಷ್ಯ ಬ್ಯಾಕ್ಟೀರಿಯಾ ಅಗುವ ಸಾಧ್ಯತೆ ಇದೆಯೇ?”
ಸ್ವಾಮಿಗಳು ಉತ್ತರಿಸುವ ಬದಲಿಗೆ ಹೊಸ ಜಾಡು ಹಿಡಿದರು ” ನೀನು ವಿಜ್ಞಾನದ ವಿದ್ಯಾರ್ಥಿ. ನಿನಗೆ ಸಾಪೇಕ್ಷತಾ ಸಿದ್ಧಾಂತ ಅಂದರೆ ಏನೆಂದು ಗೊತ್ತಿದೆಯೇ? ಕ್ವಾಂಟಮ್ ಮೆಕ್ಯಾನಿಕ್ಸ್ ತಿಳಿದಿದೆಯೇ?…..”
ನಾನು ಉತ್ತರಿಸದೇ ನಿಂತಿದ್ದೆ. ಉತ್ತರ ದೊರೆಯಲಿಲ್ಲ ಕೊನೆಗೂ.
ಇದೀಗ ಮತ್ತೆ ನೆನಪಾಯಿತು ನನ್ನ ಸ್ನೇಹಿತರು ಪುನರ್ಜನ್ಮದ ಕುರಿತಾಗಿ ಅತ್ಯುತ್ಸಾಹದಿಂದ ಹೇಳುವಾಗ.
ಈ ಬಾರಿ ನಾನು ಅವರಿಗೆ ಕೇಳಿದೆ “ನೀವೆಲ್ಲ ಹೇಳುವುದು ಸರಿ. ಮುಂದಿನ ಜನ್ಮದಲ್ಲಿ ನಾನು ಇಬ್ರಾಯಿಯಾಗುವುದು, ಅಥವಾ ಇಬ್ರಾಯಿ ರಾಧಾಕೃಷ್ಣನಾಗುವುದು, ಡಿಸೋಜಾ ನಾರಾಯಣ ಭಟ್ಟರಾಗುವುದು ಭಟ್ಟರು ಡಿಸೋಜ ಆಗುವುದು ಸಾಧ್ಯವೇ? ಆದು ಬೇಡ, ನಾರಾಯಣ ಭಟ್ಟರು ಹುಕ್ರನಾಗುವುದು, ಹುಕ್ರ ನಾರಾಯಣ ಭಟ್ಟರಾಗುವ ಸಾಧ್ಯತೆ ಉಂಟೇ?”
ಉತ್ತರ ಅವರಿಗೆ ತಿಳಿದಿಲ್ಲ. ನಿಮಗೇನಾದರೂ ತಿಳಿದಿದೆಯೇ?
ಹೀಗೆಲ್ಲ ಅಸಂಬದ್ಧ ಆಲೋಚನೆ ಮಾಡಿದರೆ ಅಷ್ಟರ ಮಟ್ಟಿಗೆ ನಾವು ಈ ಜಗದ ಸರ್ವ ಶ್ರೇಷ್ಠರೆನ್ನುವ ಭಾವದಿಂದ ಹೊರಬರುವುದಕ್ಕೆ ಸಾಧ್ಯವಾಗಬಹುದು.
ಉತ್ತರಿಸಲಾಗದ ಪ್ರಶ್ನೆಗಳಿಗೆ ವಿಷಯಾಂತರ ಮಾಡುವುದು, ಪ್ರಾಯದ ಹಿರಿತನ ಹೇರುವುದು, ತಲೆ ಇಲ್ಲದವರ ತಲೆಗಣನೆಯಲ್ಲಿ ಬಹುಮತ ಸಾರುವುದು ಗೊಡ್ಡು ಪ್ರವಚನಕಾರರ ಬಹಳ ಹಳೆಯ ತಂತ್ರ. ಪುನರ್ಜನ್ಮದ ಕಥಾನಕಗಳೆಲ್ಲ ಸೀಮಿತ ಜ್ಞಾನದ ಅತ್ಯುತ್ತಮ ಸೃಜನಶೀಲ ಸಾಹಿತ್ಯ, ಹೆಚ್ಚೆಂದರೆ ಕಾಕತಾಳೀಯ ನ್ಯಾಯಕ್ಕೆ ಹೆಚ್ಚಿನ ಉದಾಹರಣೆಗಳು!
ಅಶೋಕವರ್ಧನ