ಒಂದು ಪಯಣದ ಕಥೆ
ಮೊನ್ನೆ ಮೊನ್ನೆ ದೀಪಾವಳಿಯಂದು ನಾವೆಲ್ಲ ಮನೆಯವರು ಮೈಸೂರಿಗೆ ಹೋದೆವು ನಮ್ಮದೇ ಮಾರುತೀ ವ್ಯಾನಿನಲ್ಲಿ ಪುತ್ತೂರಿಂದ. ಮಡಿಕೇರಿ ತನಕ ಸಾಕೋ ಸಾಕು. ಚಂದ್ರನ ಕಡೆಗೆ ಸಾಗಿದ್ದೇವೆ. ಆ ಇಂದು ಮುಖದ ಮೇಲಿನ ಗುಂಡಿಗಳನ್ನೇ ನೆನಪಿಗೆ ತರುವ ಗುಂಡಿಗಳೋ ಗುಂಡಿಗಳು. ಒಂದು ಗುಂಡಿ ತಪ್ಪಿಸಿದರೆ ಇನ್ನೊಂದು ಅಲ್ಲಿ,, ಮತ್ತೊಂದು .. ಮಗದೊಂದು. ಯಾಕೆ ನಮ್ಮ ಜನಪ್ರತಿನಿಧಿಗಳಿಗೆ ಕಾಣುವುದಿಲ್ಲ? ವರ್ಷಗಳ ಕೆಳಗೆ ಸಂಪಾಝೆಯ ದಾರಿ ಬದಿಯ ನೂರಾರು ವರ್ಷಗಳಿಂದ ತಣ್ಣಗೆ ನೆರಳು ಕೊಡುತ್ತ ಸೊಂಪಾಗಿ ಬೆಳೆದ ಮರಗಳನ್ನೆಲ್ಲ ಕಡಿದ, ಕಡಿಯುತ್ತಿದ್ದ ರಭಸ ನೋಡಿದಾಗ ದಾರಿ ಸರಿಯಾಗಿ ಚತುಶ್ಪಥವೋ ಏನೋ ಎಲ್ಲ ಆಗುತ್ತದೆಂದು ತಿಳಿದಿದ್ದರೆ .. ಏನೂ ಆಗಿಲ್ಲ. ಆ ಮರ ಎಷ್ಟು ಜನರ ಮನೆಯ ಮಂಚವೋ, ಬಾಗಿಲು ದಾರಂದವೋ ಆಗಿ ಹೋಗಿರಬಹುದಲ್ಲ.. ಎನ್ನುವ ಆಲೋಚನೆ ಬಂದಾಗ ಮನಸ್ಸು ಭಾರವಾಯಿತು. ಮಡಿಕೇರಿ ದಾಟಿ ಕುಶಾಲನಗರದ ಬಳಿಕ ರಾಜ ಮಾರ್ಗ- ಇದ್ದರೆ ಹೀಗಿರಬೇಕು ಅನ್ನುವಂತ್ಯಿತ್ತು. ಪಟ್ಟ ಕಷ್ಟ ಮರೆಯಾಗಿ, ಎಲ್ಲ ಸರಿ ಇದೆ, ಎಂಥ ಸುಭಿಕ್ಷ ಎನ್ನುವ ಭಾವ.
ದೀಪಾವಳಿಯ ಸಂಬ್ರಮಗಳೆಲ್ಲ ಮುಗಿದು ಬೆಳ್ಲಂಬೆಳಗ್ಗೆ ಮೈಸೂರು ಬಿಟ್ಟು ಮನೆಯ ಕಡೆ ಹೊರಟೆವು. ಕಥೆ ಪ್ರಾರಂಭವಾಗುವುದೇ ಈಗ. ಅದೇನು?
ನೇರ ದಾರಿ. ಅಗಲ ರಸ್ತೆ. ವಾಹನ ದಟ್ಟಣೆ ಇಲ್ಲ. ಖುಷಿಯೋ ಖುಷಿ. ಅರುವತ್ತರ ಗಡಿ ದಾಟದ .. ಅಲ್ಲಲ್ಲ .. ದಾಟುವುದಕ್ಕೇ ಮರೆತು ಹೋದ ನನ್ನ ಕಾರು ನೂರರ ಗಡಿ ದಾಟಿ ಓಡುತ್ತಿತ್ತು. ಮನೆಯ ಕಡೆಗೆ. ಹಣಸೂರು ದಾಟಿ ಹತ್ತು ಕಿಮೀ ಬಂದಿದ್ದೆವು. ಒಂದು ದೊಡ್ದ ಉಬ್ಬು. ವ್ಯಾನ್ ಹಾರಿತು. ಬೀಳಲಿಲ್ಲ. ಎಂಜಿನ್ ನಿಂತಿತು, ಮತ್ತೆ ಎಂಜಿನ್ ಜೀವ ತಳೆಯಲೇ ಇಲ್ಲ .. ಏನು ಮಾಡಿದರೂ. ನನ್ನಾಕೆ. ಮಕ್ಕಳಿಗೆ ಆತಂಕ. ನನಗೋ ಇದನ್ನು, ಇವರನ್ನು ಏನು ಮಾಡಲಿ ಎಂಬ ಚಿಂತೆ !
ಆಗ ಬಂತು ಆ ಕಡೆಯಿಂದ ಕೆಂಪು ಮಾರುತಿ ವ್ಯಾನ್. ಧಡಿಯ ತಲೆ ಹೊರಗೆ ಚಾಚಿದ. ನಾನು ತೊಂದರೆ ಹೇಳಿದಾಗ ರಪ್ ಅಂತ ಬಂದ .. ಕೀ ಚಲಾಯಿಸಿದ “ಸರ್, ಟೈಮಿಂಗ್ ಬೆಲ್ಟ್ ಕಟ್ ಆಗಿದೆ. ನೀವೇನು ತಿಪ್ಪರ್ಲಾಗ ಹಾಕಿದರೂ ಹೊರಡದು. ನಾನು ಇವರನ್ನೆಲ್ಲ ಹುಣ್ಸೂರಿಗೆ ಬಿಟ್ಟು ಬರುತ್ತೇನೆ” ಅಂದ ಹೊರಟೇ ಬಿಟ್ಟ. ಹತ್ತು ನಿಮಿಷಗಳು ಯುಗವಾಗಿ ಕಳೆಯಿತು.
ಧಡಿಯ ಬಂದ. ತನ್ನೊಡನೆ ಐದಾರು ಸೈಕಲ್ ಟಯರುಗಳನ್ನೂ ತಂದಿದ್ದ. ನೋಡುವುದರೊಳಗೆ ಟಯರುಗಳನ್ನು ಒಂದರೊಳಗೊಂದರಂತೆ ಸಿಕ್ಕಿಸುತ್ತ ಜೋಡಿಸುತ್ತ ಸರಪಳಿ ಮಾಡಿ ನನ್ನ ವ್ಯಾನನ್ನು ಅವನದರ ಹಿಂಬಾಗಕ್ಕೆ ಸಿಕ್ಕಿಸಿದಾಗ ನನಗೆ ಆಶ್ಚರ್ಯ- ಥೇಟ್ ಎಡಿಸನ್, ಫ್ಯಾರಡೆಯಂತೆ ಆ ಕ್ಷಣ ನನಗೆ ಕಂಡ ಆ ಧಡಿಯ.
ಮತ್ತೆ ಹೊರಟಿತು – ಅಲ್ಲಿಂದ ನಿಧಾನಕ್ಕೆ ನಮ್ಮ ಮೆರವಣಿಗೆ ೧೫ಕಿಮೀ ದೂರದ ಪೆರಿಯಾ ಪಟ್ಣದೆಡೆಗೆ.
ಅಲ್ಲಿ ಪೇಟೆಯ ಹೊರವಲಯದಲ್ಲಿ ನಮ್ಮ ವಾಹನಗಳು ನಿಂತುವು. ನನ್ನಾಕೆಗೆ ಆತಂಕ. ನನಗೆ ಕತ್ತಲಾಗದೇ ಇದ್ದುದರಿಂದ ಜಗ ಗೆಲ್ಲಬಲ್ಲ ಧೈರ್ಯ! ಧಡಿಯ ಆ ಕಡೆ ಓಡಿದ. ಅಲ್ಲಿ ಚಿಕ್ಕ ಗ್ಯಾರೇಜೊಳಗಿಂದ ಒಂದಿಬ್ಬರು ತರುಣರು ಬಂದರು. ಉರ್ದು ಮಾತನಾಡತೊಡಗಿದಾಗ ಗೊತ್ತಾಯಿತು ಇವರು ನಮ್ಮ ಜನ ಅಲ್ಲ ಅಂತ! ಸರಿ, ಎಲ್ಲ ಪರೀಕ್ಷೆ ಮಾಡಿ, ಧಡಿಯ ಹೇಳಿದ ” ಸರ್, ಇವರಿಲ್ಲೇ ಇರಲಿ, ನಾವು ಪಟ್ತಣಕ್ಕೆ ಹೋಗಿ ಬೆಲ್ಟ್ ತರುವ” ನಾನು ನೋಡಿದೆ ನನ್ನಾಕೆಯ ಮುಖವನ್ನು. ಸರಿ, ಅವಳಲ್ಲೂ ಮೊಬೈಲ್ ಉಂಟಲ್ಲ. ಅಷ್ಟಕ್ಕೂ ಬೆಳಗ್ಗೆ ಹನ್ನೊಂದಾಗಿತ್ತು ಅಷ್ಟೇ. ಧಾವಿಸಿದೆವು ನಾವಿಬ್ಬರು ಪೆರಿಯಾಪಟ್ತಣಕ್ಕೆ. ದಾರಿಯುದ್ದಕ್ಕೂ ಧಡಿಯ ಅವನ ಜೀವನದ ಕಷ್ಟ ಹೇಳುತ್ತ ಹೋದ .. ಪೆರಿಯಾಪಟ್ಣ ಮತ್ತು ಹುಣಸೂರು ಮಧ್ಯೆ ಅವನ ವ್ಯಾನ್ ಸಾಗಾಟ ಜೀವನದ ಜೋಕಾಲಿಯಾಟಕ್ಕೆ.
ಅಲ್ಲಿ ಬೆಲ್ಟ ಇಲ್ಲ ಅಂದಾಗ ಹಾಗಾದರೆ ಹುಣಸೂರಿಗೆ ಹೋಗಬೇಕಷ್ಟೇ ಅಂದಾಗ ನನಗೋ ಸುಸ್ತು. ಅಲ್ಲಿಂದ ಬಂದ ದಾರಿಯಲ್ಲೇ ಇಪ್ಪತ್ತೈದು ಕಿಮೀ ಪುನ: ಹೋಗಿ ಬರಬೇಕು. ನಿರ್ವಾಹವಿರಲಿಲ್ಲ. ಸರಿ ಎಂದೆ.
ಪುನ: ಹಾಳಾದ ವ್ಯಾನ್ ಬಳಿ ಬಂದು, ನನ್ನಾಕೆಗೆ ಎಲ್ಲ ವಿಷ್ಯ ಹೇಳಿ ಹುಣಸೂರಿಗೆ ಹೋಗಬೇಕೆನ್ನುವಾಗ, ಆ ಕಡೆಯಿಂದ ಒಬ್ಬ ತರುಣ ಓಡೋಡಿ ಬಂದ “ಅಕ್ರಮ್, ಒಂದು ಹಳೆ ಬೆಳ್ಟು ಸಿಕ್ತು” ಅವನಿಗೆ ಖುಷಿ ನನಗೋ ಸಂಬ್ರಮ. ಮಗ ತೆಂಡುಲ್ಕರ್ ಶತಕ ಹೊಡೆದಾಗ ಆಗಸವನ್ನು ನಿಟ್ಟಿಸುವಂತೆ ನೋಡಿದ. ಆದರೆ ಇಲ್ಲಿ ಅಪ್ಪ ಬಳಿಯೇ ಇದ್ದ!
ಮತ್ತೊಂದು ಗಂಟೆಯೊಳಗೆ ವ್ಯಾನ್ ಸುಸ್ಥಿತಿಗೆ ಬಂತು. ಇನ್ನು ಹೊರಡುವ ಹೊತ್ತು. ಕೇಳಿದೆ ಧಡಿಯನನ್ನು”ಎಷ್ಟು ಕೊಡಬೇಕು” ಮುನ್ನೂರೈವತ್ತು ಅಂದ – ಗಾಡಿ ಎಳೆದದ್ದಕ್ಕೆ, ಬೆಲ್ಟ್ ಸಿಕ್ಕಿಸಿ ರಿಪೇರಿ ಮಾಡಿದ್ದಕ್ಕೆ ಎಲ್ಲ ಸೇರಿ. ನಾನು ಐನೂರರ ನೋಟು ಇಟ್ಟೆ. ಅಂದೆ “ನೀವು ಸರಿಯಾದ ಸಮಯಕ್ಕೆ ಬಂದು ಇಷ್ಟೆಲ್ಲ ಸಹಾಯ ಮಾಡಿದ್ದಕ್ಕೆ ಇದು ಕಡಿಮೆಯಾಯಿತು. ನಿಮ್ಮ ವಿಶ್ವಾಸಕ್ಕೆ, ಸಹಾಯ ಪ್ರವೃತ್ತಿ ಇದಕ್ಕಿಂತ ದೊಡ್ದದು” … ಇನ್ನೇನೇನೋ. ಧಡಿಯ ಅಂದ “ನಾವು ಮನುಷ್ಯರಿಗೆ ಸಹಾಯ ಮಾಡದೇ ಬೇರಾರಿಗೆ ಮಾಡಬೇಕು”
ನಾವು ಹಾರ್ದಿಕವಾಗಿ ನಕ್ಕು ಪಯಣ ಮುಂದುವರಿಸಿದೆವು .. ಮತ್ತೆ ಗುಂಡಿ ಹಾರಿಸಿಕೊಂಡು… ಶಾಪ ಹಾಕಿಕೊಂಡು.. ಎಲ್ಲ ಜಗದ ಸಮಸ್ಯೆಗಳು ನಮ್ಮೆದುರು ವಕ್ರಿಸಿ ಪ್ರಪಂಚ ಹಾಳಾಗಿವೆ, ಮನುಷ್ಯತ್ವ ಹೋಗಿದೆ ಎನ್ನುವಂತೆ…
ಅನೂಹ್ಯ ಲೋಕದ ವಿಜ್ಞಾನಿಗಳ ಬೆಂಬತ್ತಿದ ರಾಧಾನಿಗೆ ಅಯಾಚಿತವಾಗಿ ಅಪ್ಪಟ ಮನುಷ್ಯ ಸಿಕ್ಕಿದ `ವಾರ್ತೆ’ ತುಂಬಾ ಕುಶಿಕೊಟ್ಟಿತು. ಬ್ಲಾಗನ್ನು ಕಸದಬುಟ್ಟಿ ಮಾಡಿದ್ದಿಯಾ ಹೊಸತೇನೂ ಹಾಕುತ್ತಿಲ್ಲಾ ಎಂದು ದೂರಿ, ಉದಾಸೀನ ಮಾಡಿದ್ದೆ. ಇಂದು ಹೀಗೇ ನೋದುವಾಗ ಇದು ಸಿಕ್ಕಿದ್ದು ಮುಂಬೈ ಉರಿ ಆರದ ಕಾಲದಲ್ಲಿ ಆಹ್ಲಾದಕರ ತಂಗಾಳಿ ಸಿಕ್ಕ ಹಾಗಾಯ್ತು. ಪ್ರೊ| ಚಿದಾನಂದ ಮೂರ್ತಿ ಎಂಬ ಮಾಜೀ ಸಂಶೋಧಕ, ಹಾಜೀ ಗೊಡ್ದು ಸನಾತನವಾದಿ ನಿನ್ನೆ ಬಾಬಾ ಬುಡನ್ ಗಿರಿ ಬಗ್ಗೆ ಏನೋ ಹೊಸತು ಹೇಳುವ ಪೋಸು ಹೊಡೆದಿದ್ದಾರೆ. ಹಿಂದೂ ಕಂಬವಂತೆ, ತೆಂಗಿನಕಾಯಿ ಚಚ್ಚುವ ಕಲ್ಲಂತೆ, ಅತ್ತಿ ಮರವಂತೆ, ಕಂತೆ ಕಂತೆ. ಅಲ್ಲಾ ಸ್ವಾಮೀ ನೀವು ಹೇಳಿದ್ದೆ ನಿಜಾನ್ನೋಣ ಆದರೆ ಅಲ್ಲಿಗೇ ನಿಲ್ಲುವುದು ಬೇಡ. ಇನ್ನೂ ಸ್ವಲ್ಪ ಹಿಂದೆ ಹೋಗೋಣ ಅಲ್ಲಿದ್ದ ಬಾವಲಿ ಹಿಂಡು, ಕತ್ತಲಿಗೆ ಹೊಂದಿದ ನೂರೆಂಟು ಜೀವಗಳ claimsಗೆ ಧ್ವನಿಯಾಗುವ ಧೈರ್ಯ ಮಾಡೋಣ. ಇತಿಹಾಸವನ್ನು `ಸರಿ ಮಾಡಲು’ ಹೊರಡುವ ಬುದ್ಧಿವಂತರೂ ಅನುಕೂಲಸಿಂಧುಗಳೇ. ಇರುವುದೊಂದೇ ಭೂಮಿ ಎನ್ನುವುದನ್ನು ಮತ್ತೆ ಮತ್ತೆ ಜಪಿಸಿ, ಮನುಷ್ಯತ್ವ ಕಾಪಿಡಲು ಹಪಹಪಿಸುವವರಿಗೆ ಪಿರಿಯಾಪಟ್ಣದ `ಧಡಿಯ’ನ ಈ ಲೇಖನ ನಿಜಕ್ಕೂ ಚೇತೋಹಾರಿ. ಇಂಥವನ್ನು ಗುರುತಿಸಲು, ಗುರುತಿಸಿದ್ದನ್ನು ಗಟ್ಟಿಯಾಗಿ ಹೇಳಲು (ಹಿಂದು ಅಲ್ಲ!) ಮುಂದೂ ನೀನು ತತ್ಪರನಾಗಿರು ಎಂದು ಹಾರೈಸುತ್ತೇನೆ.
ಅಶೋಕವರ್ಧನ
ಚೆನ್ನಾಗಿ ಬರೆಯುತ್ತೀರಿ, ಓದಿ ನಿಮ್ಮ ಜೊತೆ ಅಷ್ಟು ದೂರ ಪಯಣಿಸಿದ ಹಾಗೂ ಅನಿಸಿತು. ನಮ್ಮ ರಸ್ತೆಗಳು ಕೆಟ್ಟು ಹೋಗಿರುವಷ್ಟು ಜನ ಕೆಟ್ಟಿಲ್ಲ…ತಮ್ಮದೇ ನೂರಾರು ತಾಪತ್ರಯದ ಅಡಿ ಸಿಲುಕಿ ಸಮಯಕ್ಕೊದಗುವ ಧಡಿಯರಂಥವರು, ಮುನ್ನೂರೈವತ್ತಕ್ಕೆ ಐನೂರು ಕೊಡುವ ನಿಮ್ಮಂಥವರು…..