ಸ್ಫೋಟಕ ವಿಜ್ಞಾನಿ – ಆಲ್ಫ್ರೆಡ್ ನೊಬೆಲ್
ವೀಲರ್ ಬಗ್ಗೆ “ಭೌತವಿದಾಯ” ಎಂಬ ನನ್ನ ಲೇಖನ ಉದಯವಾಣಿಯಲ್ಲಿ ಪ್ರಕಟವಾದ (ಮೇ೧೧, ೨೦೦೮) ಮರುದಿನ ಸಂಜೆಯ ಹೊತ್ತು ನನ್ನ ಮೊಬೈಲ್ ಕರೆಯಿತು ನನ್ನನ್ನು. ಆ ಕಡೆಯಿಂದ ಇಸ್ಮಾಯಿಲ್ ಮಾತನಾಡುತ್ತಿದ್ದರು. ನನಗೆ ಅವರ ಪರಿಚಯವಿರಲಿಲ್ಲ. ಆದರೆ ಅವರ ಸ್ವರದಲ್ಲಿ ಎಷ್ಟೋ ದಿನಗಳ ಪರಿಚಯವಿದ್ದಂತೆ ಅನಿಸುತ್ತಿತ್ತು. ಉದಯವಾಣಿಯ ಸಾಪ್ತಾಹಿಕ ಸಂಪದಕ್ಕೆ ಸರಣಿ ಲೇಖನ ಬರೆಯಲು ಕೇಳಿದಾಗ, ಅಂಜಿಕೆಯಿಂದಲೇ ಒಪ್ಪಿಕೊಂಡೆ. ಇಪ್ಪತ್ತನೇ ಶತಮಾನ ವಿಜ್ಞಾನದ ಸುವರ್ಣ ಕಾಲ. ಅಗೋಚರ ಮತ್ತು ಸೂಕ್ಷ್ಮಾತಿಸೂಕ್ಷ್ಮ ಪರಮಾಣು ಪ್ರಪಂಚದಿಂದ ತೊಡಗಿ ಬೃಹದತಿ ಬೃಹದ್ ವಿಶ್ವದ ಬಗ್ಗೆ ನಮಗೆ ಹೊಸ ದೃಷ್ಟಿ ಮೂಡಿದ್ದು ಈ ಕಾಲದಲ್ಲಿ. ಈ ಎಲ್ಲ ರೋಚಕ ವಿವರಗಳನ್ನು ಹೇಳುವ ಆಸೆಯಿಂದ ಈ ಸರಣಿ ಲೇಖನ ಮಾಲೆಯನ್ನು ಬರೆಯತೊಡಗಿದೆ. ಆ ಲೇಖನಗಳನ್ನು ಈ ನನ್ನ “ವರ್ಗ ಸ್ಥಳದಲ್ಲಿ” ಪ್ರಕಟಿಸುತ್ತಿದ್ದೇನೆ. ನೀವು ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ. ಕನ್ನಡದಲ್ಲಿ ವಿಜ್ಞಾನದ ವಿವರ ಹೇಳುವ ಈ ಪ್ರಯತ್ನದ ಮೂಲಕ ಒಂದಷ್ಟು ಭೌತ ವಿಜ್ಞಾನದ ವಿವರ ನಿಮಗೆ ತಲುಪಲಿ ಎಂಬ ಆಸೆ ನನಗೆ. ಈಗಾಗಲೇ ೧೭ ಲೇಖನಗಳು ಪ್ರಕಟವಾಗಿವೆ. ಪುರುಸೊತ್ತಾದಾಗಲೆಲ್ಲ ಇಲ್ಲಿ ಅವುಗಳನ್ನು ಒಂದೊಂದಾಗಿ ತೆರೆಯುತ್ತೇನೆ. ಪುರುಸೊತ್ತು ಮಾಡಿಕೊಂಡು ಓದಿ ಪ್ರತಿಕ್ರಿಯೆ ಬರೆಯಿರಿ. ಹಕ್ಕಿ ಹಾಡುತ್ತದೆ – ಯಾರು ಕೇಳದೇ ಇದ್ದರೂ ಅದಕ್ಕಾಗಿ- ಖುಷಿಗಾಗಿ!
ನೊಬೆಲ್‌ಪ್ರಶಸ್ತಿಯನ್ನು ಪ್ರಶಸ್ತಿಗಳ ರಾಜ ಎನ್ನುವುದುಂಟು. ಭೌತವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಪ್ರಕಾರಗಳಲ್ಲಿ ಪರಮೋತ್ಕೃಷ್ಟ ಸಾಧಕರನ್ನು ಗುರುತಿಸಿ ಪ್ರತಿವರ್ಷ ಅಕ್ಟೋಬರ್ ತಿಂಗಳಿನಲ್ಲಿ ನೊಬೆಲ್‌ಪ್ರಶಸ್ತಿಯ ಘೋಷಣೆಯಾಗಿ, ಡಿಸೆಂಬರ್ ಹತ್ತರಂದು ಸ್ವೀಡನ್ನಿನ ರಾಜಧಾನಿಯಾದ ಸ್ಟಾಕ್‌ಹೋಮಿನಲ್ಲಿ ಸ್ವೀಡನ್ ಚಕ್ರವರ್ತಿ ಮತ್ತು ಆಮಂತ್ರಿತ ವಿದ್ವಜ್ಜನರ ಸಮ್ಮುಖದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪ್ರದಾನಿಸುವ ಆ ಕ್ಷಣ ಅತ್ಯಂತ ಸಡಗರ ಮತ್ತು ಸಂಬ್ರಮದ್ದು.
ನೊಬೆಲ್ ಪ್ರಶಸ್ತಿ ಪ್ರದಾನ ವ್ಯವಸ್ಥೆ ಪ್ರಾರಂಭವಾಗಿ ನೂರು ವರ್ಷಗಳು ಸಂದಿವೆ. ೧೯೦೧ರಿಂದ ತೊಡಗಿ ೨೦೦೭ರ ತನಕ, ೧೮೧ ಭೌತವಿಜ್ಞಾನಿಗಳು, ೧೫೨ ರಸಾಯನ ವಿಜ್ಞಾನಿಗಳು, ೧೮೯ ವೈದ್ಯಕೀಯ ವಿಜ್ಞಾನಿಗಳು, ೧೦೪ ಸಾಹಿತಿಗಳು ಮತ್ತು ೬೧ ಅರ್ಥಶಾಸ್ತ್ರಜ್ಞರು ಮತ್ತು ಕೆಲವು ಸಂಘ-ಸಂಸ್ಥೆಗಳು ಸೇರಿದಂತೆ ೮೦೦ ಮಂದಿ ನೊಬೆಲ್ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ.
ನೊಬೆಲ್ ಪ್ರಶಸ್ತಿ ನಿಸ್ಸಂದೇಹವಾಗಿಯೂ ಅತ್ಯಂತ ಶ್ರೀಮಂತ ಪ್ರಶಸ್ತಿಗಳಲ್ಲೊಂದು ಪ್ರಶಸ್ತಿಯ ಮೊತ್ತ ಸುಮಾರು ೧೩ ಲಕ್ಷ ಡಾಲರುಗಳು (ಸುಮಾರು ಐದು ಕೋಟಿ ರೂಪಾಯಿಗಳು). ಇಷ್ಟೊಂದು ಹಣವನ್ನು ನೀಡಬೇಕಾದರೆ ಅದರ ಮೂಲ ಧನ ಎಷ್ಟಿರಬೇಡ! ಅಂಥ ಕುಬೇರ, ಮಹಾದಾನಿ ನೊಬೆಲ್ ಅಂದರೆ ಯಾರು?
ನೊಬೆಲ್ ಪ್ರಶಸ್ತಿ ಪ್ರತಿಷ್ಠಾನದ ಸ್ಥಾಪಕ ಆಲ್ಫ್ರೆಡ್‌ಬೆರ್ನಾರ್ಡ್ ನೊಬೆಲ್ ಸ್ವೀಡನ್ನಿನ ಸ್ಟಾಕ್‌ಹೋಮಿನಲ್ಲಿ ೧೮೩೩ ಅಕ್ಟೋಬರ್ ೨೧ರಂದು ಜನಿಸಿದ. ಇವನ ತಂದೆ ಇಮಾನ್ಯುಯಲ್‌ನೊಬೆಲ್ ತಂತ್ರವಿದ, ಕೈಗಾರಿಕೋದ್ಯಮಿ. ಮತ್ತು ಸ್ವತ: ಉಪಜ್ಞೆಕಾರ. ಸೇತುವೆ ಮತ್ತು ರಸ್ತೆ ನಿರ್ಮಾಣಗಳಲ್ಲಿ ವಿಶೇಷ ನೈಪುಣ್ಯತೆ ಹೊಂದಿದ್ದ ಇಮಾನ್ಯುಯಲ್ ಕಲ್ಲು ಬಂಡೆಗಳನ್ನು ಒಡೆಯುವ ಸ್ಫೋಟಕಗಳನ್ನು ಸಂಶೋಧಿಸಿ ಯಶಸ್ವಿಯಾಗಿ ಬಳಸುತ್ತಿದ್ದ. ಅಲ್ಫ್ರೆಡನಿಗೆ ಸ್ಫೋಟಕಗಳ ಬಗ್ಗೆ ಎಳವೆಯಿಂದಲೇ ಆಸಕ್ತಿ ಕುದುರಲು ಇದು ಕಾರಣವಾಯಿತು. ತನ್ನ ವ್ಯವಹಾರದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಇಮಾನ್ಯುಯಲ್ ೧೮೪೨ರಲ್ಲಿ ಸಂಸಾರ ಸಮೇತ ರಷ್ಯಾದ ಪಿಟ್ಸ್‌ಬರ್ಗಿಗೆ ವಲಸೆ ಹೋದ. ಅಲ್ಲಿ ಗಣಿ ಉಪಕರಣಗಳ ತಯಾರಿಕಯ ಘಟಕವನ್ನು ಪ್ರಾರಂಭಿಸಿದ್ದಲ್ಲದೇ, ರಷ್ಯನ್ ಸೇನೆಗೆ ಸ್ಪೋಟಕಗಳನ್ನು ಪೂರೈಕೆ ಮಾಡತೊಡಗಿದ.
ಆಲ್ಫ್ರೆಡ್ ಮತ್ತು ಅವನ ಮೂವರು ಸಹೋದರರು ಶಾಲೆಗೆ ಹೋಗಲಿಲ್ಲ. ಶಾಲೆಯೇ ಮನೆಗೆ ಬಂತು. ಖಾಸಗೀ ಉಪಾಧ್ಯಾಯರು ಮನೆಗೆ ಬಂದು ಪಾಠ ಹೇಳಿಕೊಡುತ್ತಿದ್ದರು. ಆಲ್ಪ್ರೆಡ್ ಹದಿಹರೆಯಕ್ಕೆ ಬರುವ ಹೊತ್ತಿಗೆ ಇಂಗ್ಲೀಷ್, ಜರ್ಮನ್, ಫ್ರೆಂಚ್, ಸ್ಪ್ಯಾನಿಷ್ ಮತ್ತು ರಷ್ಯನ್ ಭಾಷೆಗಳಲ್ಲಿ ಪರಿಣಿತಿ ಹೊಂದಿದ. ಮುಂದೆ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ತನ್ನ ಕೈಗಾರಿಕಾ ಸಾಮ್ರಾಜ್ಯದ ವಿಸ್ತರಣೆಗೆ ಇದು ಅನುಕೂಲವಾಯಿತು.
ತಂದೆಯ ಸೂಚನೆಯಂತೆ ಫ್ರಾನ್ಸಿನ ಸುಪ್ರಸಿದ್ಧ ರಸಾಯನ ವಿಜ್ಞಾನಿ ಪೆಲೋಜ್ (೧೮೦೭-೧೮೬೭)ಅವರ ಸಂಶೋಧನಾಲಯದಲ್ಲಿ ಒಂದು ವರ್ಷಗಳ ಅಧ್ಯಯನಕ್ಕೆಸೇರಿದ ಅಲ್ಫ್ರೆಡ್ದನಿಗೆ, ಇಟೆಲಿಯ ತರುಣ ರಸಾಯನ ವಿಜ್ಞಾನಿ ಸೆರೆಬೋವ್ (೧೮೧೨-೧೮೮೮) ಪರಿಚಯವಾಯಿತು. ಸೆರೆಬೋವ್ ಮೂರು ವರ್ಷಗಳ ಹಿಂದೆ (೧೮೪೭) ನೈಟ್ರೋಗ್ಲೀಸರಿನ್ ಎಂಬ ರಾಸಾಯನಿಕವನ್ನು ಉಪಜ್ಞಿಸಿದ್ದ. ಸಲ್ಫೂರಿಕ್ ಆಮ್ಲ ಮತ್ತು ನೈಟ್ರಿಕ್‌ಆಮ್ಲಗಳ ಮಿಶ್ರಣಕ್ಕೆ ಗ್ಲಿಸರಿನ್ನನ್ನು ಸೇರಿಸಿದ ನೈಟ್ರೋಗ್ಲೀಸರಿನ್ನಿಗೆ ತುಸು ಉಷ್ಣತೆ ಮತ್ತು ಒತ್ತಡ ಹೇರಿದರೂ ಸಾಕು – ಅದು ಭೀಕರವಾಗಿ ಆಸ್ಪೋಟಿಸುತ್ತಿತ್ತು. ಅಲ್ಪ್ರೆಡ್ಡನಿಗೆ ಈ ಸ್ಪೋಟಕದ ಬಗ್ಗೆ ತೀವ್ರ ಆಸಕ್ತಿ ಹುಟ್ಟಿತು.
ಫ್ರಾನ್ಸಿನಿಂದ ಅಮೇರಿಕಕ್ಕೆ ತೆರಳಿದ ಆಲ್ಫ್ರೆಡ್, ಅಲ್ಲಿ ಸ್ವೀಡನ್ ಸಂಜಾತ ಎರಿಕ್‌ಸನ್ (೧೮೦೩-೧೮೮೯) ಎಂಬ ವಿಜ್ಞಾನಿಯ ಜೊತೆ ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಿ ರಸಾಯನ ವಿಜ್ಞಾನದಲ್ಲಿ ಸಂಪೂರ್ಣ ಪರಿಣಿತಿಯೊಂದಿಗೆ ಸ್ವೀಡನ್ನಿಗೆ ಮರಳಿ ತನ್ನ ತಂದೆಯ ವ್ಯವಹಾರಗಳಲ್ಲಿ ತೊಡಗಿಕೊಂಡ.
ಆ ದಿನಗಳಲ್ಲಿ ಕಲ್ಲು ಬಂಡೆಗಳನ್ನು ಒಡೆಯಲು, ರಸ್ತೆ ನಿರ್ಮಾಣ ಕಾರ್ಯಗಳಲ್ಲಿ, ಯುಧ್ಧ ರಂಗದಲ್ಲಿ ಗಂಧಕ, ಕಲ್ಲಿದ್ದಲು ಮತ್ತು ಪೊಟ್ಯಾಸಿಯಮ್ ನೈಟ್ರೇಟಿನ ಮಿಶ್ರಣದ ಹುಡಿಯನ್ನು (ಗನ್ ಪೌಡರ್) ಸ್ಪೋಟಕವಾಗಿ ಬಳಸುತ್ತಿದ್ದರು. ಇದರ ಬದಲಿಗೆ ನೈಟ್ರೋಗ್ಲೀಸರಿನ್ನನ್ನು ಬಳಸುವ ಬಗ್ಗೆ ತರುಣ ಆಲ್ಪ್ರೆಡ್‌ನೊಬೆಲ್ ಸಂಶೋಧನೆಗೆ ತೊಡಗಿದ. ಆದರೆ ತೀವ್ರ ವಿಸ್ಪೋಟಕ ಗುಣ ಹೊಂದಿದ್ದ ನೈಟ್ರೋಗ್ಲಿಸರಿನ್ ಬಳಕೆ ಅತ್ಯಂತ ಪ್ರಯಾಸದ್ದಾಗಿತ್ತು.
ಆದರೆ ಆಲ್ಫ್ರೆಡ್ ಕಂಗೆಡಲಿಲ್ಲ. ತಂದೆಯ ಪ್ರೋತ್ಸಾಹವೂ ಇತ್ತು. ನೈಟ್ರೋಗ್ಲೀಸರಿನ್ನಿನ ತಯಾರಿಗೆಂದೇ ಕಾರ್ಖಾನೆಯನ್ನು ಸ್ಥಾಪಿಸಿದ (೧೮೫೯). ಅದೊಂದು ದಿನ ಇಡೀ ಕಾರ್ಖಾನೆಯೇ ಮಹಾ ಅಸ್ಫೋಟಕ್ಕೆ ಒಳಗಾಗಿ ಅಲ್ಫ್ರೆಡ್ಡನ ಸಹೋದರ ಎಮಿಲಿ ಮತ್ತು ಹಲವು ಮಂದಿ ಕಾರ್ಮಿಕರು ದಾರುಣವಾಗಿ ಮರಣ ಹೊಂದಿದರು. ಸ್ವೀಡನ್ ಸರಕಾರ ಮತ್ತು ಜನರ ಕೋಪ ಆಲ್ಫ್ರೆಡ್ ಮೇಲೆ. ಈತ ಒಬ್ಬ ತಲೆಹಿಡುಕ ವಿಜ್ಞಾನಿ ಎಂಬ ನಿರ್ಣಯಕ್ಕೆ ಬಂದಿದ್ದರು. ಆದರೆ ಇವ್ಯಾವುವೂ ಆಲ್ಫ್ರೆಡ್ಡನನ್ನು ಧೃತಿಗೆಡಿಸಲಿಲ್ಲ. ವಿಧ್ವಂಸಕ ಸ್ಪೋಟಕವೆಂಬ ಸಲಗನನ್ನು ಮಣಿಸುವುದೊಂದೇ ಅವನ ಗುರಿಯಾಗಿತ್ತು
ಅದೊಂದು ದಿನ. ಕಾರ್ಖಾನೆಯಲ್ಲಿ ಇರಿಸಿದ್ದ ನೈಟ್ರೋಗ್ಲೀಸರಿನ್ ತುಂಬಿದ ಪೀಪಾಯಿಯಿಂದ ರಾಸಾಯನಿಕ ದ್ರವ ಹೊರ ಹರಿದು ಅಲ್ಲೇ ಪಾಚಿಗಟ್ಟಿದ ಹೊಯಿಗೆ ಮಿಶ್ರಿತ ಕೆಂಪು ಮಣ್ಣಿನೊಂದಿಗೆ ಸೇರಿ ಮುದ್ದೆಯಾಗಿತ್ತು. ಆದರೆ ಏನಾಶ್ಚರ್ಯ! ಮಣ್ಣಿನ ಮುದ್ದೆ ಆಷ್ಟೇನೂ ಬೇಗ ಸ್ಫೋಟಗೊಳ್ಳುತ್ತಲಿರಲಿಲ್ಲ. ಅಂದರೆ ಇಂಥ ಹೊಯಿಗೆ ಮಣ್ಣನ್ನು ನೈಟ್ರೋಗ್ಲೀಸರಿನ್ನಿನೊಂದಿಗೆ ಮಿಶ್ರಣ ಮಾಡಿ, ಅದರಿಂದ ಸ್ಪೋಟಕ ಕಡ್ಡಿಗಳನ್ನು ತಯಾರಿ ಮಾಡಬಹುದೆಂದು ಆಲ್ಫ್ರೆಡ್ ನೊಬೆಲ್ಲನಿಗೆ ಸ್ಪಷ್ಟವಾಯಿತು. ಈ ಹೊಸ ಸ್ಪೋಟಕವನ್ನು ಡೈನಾಮೈಟ್ ಎಂದು ಹೆಸರಿಸಿದ. ಮುಂದಿನ ಪ್ರಯೋಗಗಳಿಂದ ಡೈನಾಮೈಟಿನ ಸುರಕ್ಷಿತ ಸಾಧನಗಳನ್ನು ತಯಾರಿಸಿದ. ಡೈನಾಮೈಟಿನ ಉಪಯುಕ್ತತೆಯನ್ನು ಮನಗಂಡ ಸ್ವೀಡಿಷ್ ಸೈನ್ಸ್ ಎಕಾಡೆಮಿ ಆಲ್ಫ್ರೆಡ್ದನಿಗೆ ಪ್ರಸಸ್ತಿ ನೀಡಿ ಗೌರವಿಸಿತು.
ಕೆಲವೇ ವರ್ಷಗಳಲ್ಲಿ ಹಲವೆಡೆಯಿಂದ ಡೈನಾಮೈಟಿಗಾಗಿ ಬೇಡಿಕೆ ಬರತೊಡಗಿದುವು. ಹೆಚ್ಚಿದ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಜರ್ಮನಿ, ಫ್ರಾನ್ಸ್, ಇಟೆಲಿ, ಆಫ್ರಿಕಾ ಮಾತ್ರವಲ್ಲ ದೂರದ ಅಮೇರಿಕದಲ್ಲಿ ಆಲ್ಫ್ರೆಡ್‌ನೊಬೆಲ್ಲನ ನೂರಾರು ಕಾರ್ಖಾನೆಗಳು ಪ್ರಾರಂಭವಾದುವು. ಕೇವಲ ಡೈನಾಮೈಟ್ ಮಾತ್ರವಲ್ಲ, ಗಣಿ ಹಾಗೂ ತೈಲ ಸಂಸ್ಕರಣೆಯ ಘಟಕಗಳನ್ನು ಪ್ರಾರಂಭಿಸಿದ. ಹಣದ ಹೊಳೆಯೇ ಹರಿದುಬರತೊಡಗಿತು. ತಲೆಹೋಕ ನೊಬೆಲ್ ಕೆಲವೇ ವರ್ಷಗಳಲ್ಲಿ ನಿಜ ಅರ್ಥದಲ್ಲಿ ಕುಬೇರನಾದ.
ಇಷ್ಟೆಲ್ಲ ಆದರೂ ನೊಬೆಲ್ ಮಾತ್ರ ಬದಲಾಗಲಿಲ್ಲ. ಆತ ಏಕಾಂಗಿಯಾಗಿದ್ದ. ಸಂಶೋಧನೆ ಅವನ ಜೀವಾಳವಾಗಿತ್ತು. ಸಾಹಿತ್ಯ ಮತ್ತು ತತ್ವಶಾಸ್ತ್ರಗಳಲ್ಲಿ ಆಂತರಂಗಿಕ ಶಾಂತಿಯನ್ನು ಅರಸುತ್ತಿದ್ದ. ಕಾಳಗರಂಗದಲ್ಲಿ ಡೈನಾಮೈಟಿನ ಯಥೇಚ್ಚ ಬಳಕೆಯಾಗುತ್ತಿದ್ದುದನ್ನು ಕಂಡ ವಿಹ್ವಲನಾಗಿ ಮರುಗಿದ. ಹಾಗಾಗಿಯೇ ತನ್ನೆಲ್ಲ ಸಂಪತ್ತನ್ನು ಮೂಲ ನಿಧಿಯಾಗಿರಿಸಿ ಅದರ ಬಡ್ಡಿಯ ಹಣವನ್ನು ಭೌತ, ರಸಾಯನ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ, ಸಾಹಿತ್ಯ ಮತ್ತು ಪ್ರಪಂಚದ ಶಾಂತಿಗಾಗಿ ಶ್ರಮಿಸಿದ ಪರಮೋನ್ನತ ಸಾಧಕರಿಗೆ ಪ್ರಶಸ್ತಿ ರೂಪದಲ್ಲಿ ನೀಡಬೇಕೆಂಬ ಉಯಿಲನ್ನು ಬರೆದಿಟ್ಟ. ೧೮೯೬, ಡಿಸೆಂಬರ್ ೧೦ರಂದು ಆಲ್ಫ್ರೆಡ್‌ನೊಬೆಲ್ ಈ ಭೌತ ಪ್ರಪಂಚದಿಂದ ನಿಷ್ಕ್ರಮಿಸಿದ.
ಭೌತ ವಿಜ್ಞಾನಕ್ಕೆ ಸಂಬಂಧಿಸಿದಂತೆ ರೊಂಟೆಜೆನ್, ಬೆಕೆರೆಲ್, ಮೇರಿ ಮತ್ತು ಪೀರಿ ಕ್ಯೂರಿ, ನೀಲ್ಸ್ ಬೋರ್, ರುದರ್ಫರ್ಡ್, ಜೆಜೆ ಥಾಮ್ಸ್‌ನ್, ಜಿ.ಪಿ.ಥಾಮ್ಸ್‌ನ್, ಐನ್‌ಸ್ಟೈನ್, ಮ್ಯಾಕ್ಸ್ ಪ್ಲಾಂಕ್, ಹೈಸೆನ್‌ಬರ್ಗ್, ಶ್ರೇಡಿಂಜರ್, ಫೈನ್‌ಮಾನ್, ರಾಮನ್, ಚಂದ್ರಶೇಖರ್ … ಹೀಗೆ ನೊಬೆಲ್ ವಿಜೇತರ ಬಲು ದೊಡ್ಡ ಪಟ್ಟಿಯೇ ಇದೆ. ಪ್ರತಿಯೊಬ್ಬರೂ ಅಪ್ರತಿಮರು; ಪ್ರಗಲ್ಭ ಭೌತ ವಿಜ್ಞಾನಿಗಳು. ನಿಸರ್ಗದ ಸತ್ಯಗಳನ್ನು ಅನಾವರಣಗೊಳಿಸಿದ ದೃಷ್ಟಾರರು. ಇಪ್ಪತ್ತನೇ ಶತಮಾನದ ಅಥವಾ ಆಧುನಿಕ ಭೌತ ವಿಜ್ಞಾನದ ನಿರ್ಮಾರ್ತೃಗಳು. ವರ್ತಮಾನದ ತಂತ್ರಜ್ಞಾನ ರೂಪುಗೊಳ್ಳಲು ಕಾರಣೀಭೂತರು.
ಈ ಎಲ್ಲ ನೊಬೆಲ್ ಭೌತ ವಿಜ್ಞಾನಿಗಳ ಜೀವನ ಮತ್ತು ಸಾಧನೆಯ ಕಥೆಯಾಗಿದೆ ಈ ಲೇಖನ ಮಾಲೆ. ಪ್ರತಿಯೊಬ್ಬ ನೊಬೆಲ್ ಭೌತ ವಿಜ್ಞಾನಿಯ ಸಾಧನೆ ವೃಷ್ಟಿಯಲ್ಲಿ ಯಾವುದೋ ಒಂದು ಆವಿಷ್ಕಾರಕ್ಕೆ ಅಥವಾ ಸಿಧ್ಧಾಂತಕ್ಕೆ ಸಂಬಂಧಿಸಿದ್ದೆಂದು ಕಂಡರೂ, ಸಮಷ್ಟಿಯಲ್ಲಿ ಪರಿಭಾವಿಸಿದಾಗ ಆಧುನಿಕ ಭೌತ ವಿಜ್ಞಾನದ ದರ್ಶನವಾಗುತ್ತದೆ.
ಇತ್ತೀಚೆಗಿನ ಪ್ರತಿಕ್ರಿಯೆಗಳು…