ಮುಖ ಪುಟ > ವ್ಯಕ್ತಿ - ಜೀವನ > ಕೃಷ್ಣ ವಿವರದೊಳಕ್ಕೆ ಮಾಯವಾದ ಖಭೌತ ವಿಜ್ಞಾನಿ ವ್ಹೀಲರ್

ಕೃಷ್ಣ ವಿವರದೊಳಕ್ಕೆ ಮಾಯವಾದ ಖಭೌತ ವಿಜ್ಞಾನಿ ವ್ಹೀಲರ್

John Wheeler

John Wheeler

ಜಾನ್‌ಅರ್ಚಿಬಾಲ್ಡ್ ವ್ಹೀಲರ್, ತೊಂಬತ್ತಾರರ ವಯೋವೃದ್ಧ ಭೌತ ವಿಜ್ಞಾನಿ, ಇತ್ತೀಚೆಗೆ (ಎಪ್ರಿಲ್ 13, 2008 ) ಈ ಭೌತ ಪ್ರಪಂಚಕ್ಕೆ ವಿದಾಯ ಹೇಳಿ ನಡೆದಿದ್ದಾರೆ ಅನೂಹ್ಯ ಲೋಕಕ್ಕೆ. ಆಲ್ಬರ್ಟ್‌ಐನ್‌ಸ್ಟೈನ್ (1879-1955), ನೀಲ್ಸ್‌ಬೋರ್(1885-1962), ವರ್ನೆರ್‌ಹೈಸೆನ್‌ಬರ್ಗ್ (1901-1976), ಇರ್ವಿನ್‌ಶ್ರೇಡಿಂಗರ್(1887-1961) ಮೊದಲಾದ  ಪ್ರಗಲ್ಭ ಭೌತವಿಜ್ಞಾನಿಗಳ ನಿಕಟವರ್ತಿಯಾಗಿ, ಆಧುನಿಕ ಭೌತ ವಿಜ್ಞಾನದ ಪ್ರವರ್ಧನೆಯಲ್ಲಿ ಸಕ್ರಿಯವಾಗಿ ಭಾಗಿಯಾದ ವ್ಹೀಲರ್, ಮೂರು ದಶಕಗಳ ಕಾಲ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ, ನಂತರ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸೈಧ್ಧಾಂತಿಕ ಭೌತವಿಜ್ಞಾನಿಯಾಗಿ, ಪ್ರಾಧ್ಯಾಪಕರಾಗಿ ಜ್ಞಾನ ಸೀಮೆಯ ಮೇರೆಯನ್ನು ವಿಸ್ತರಿಸಿದ ಧೀಮಂತರು. ರಿಚರ್ಡ್ ಫೈನ್‌ಮಾನ್ (1918-1988), ಕಿಪ್‌ಥಾರ್ನ್ (1940-),  ಜಾನ್ ಟೋಲ್ (1924 -), ಹ್ಯೂಗ್ ಎವೆರೆಟ್(1930-1982)  ಮೊದಲಾದ ಭೌತಶಾಸ್ತ್ರಜ್ಞರು ಇವರ ಶಿಷ್ಯಂದಿರು; ಗರಡಿಯಲ್ಲಿ ಪಳಗಿದವರು. 

ಆದರ್ಶ ಪ್ರಾಧ್ಯಾಪಕರಾಗಿದ್ದ ವ್ಹಿಲರ್ ಹೇಳುವುದಿತ್ತು”ಬೋಧಿಸುವುದರಿಂದ ನಾವು ಕಲಿಯುತ್ತೇವೆ. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿದ್ದಾರೆ ಪ್ರೊಫೆಸರುಗಳಿಗೆ ಕಲಿಸುವುದಕ್ಕೆ !

ಬದುಕಿನ  ತಿರುವು

ವ್ಹೀಲರ್ ಜನಿಸಿದ್ದು ಜುಲೈ 9, 1911ರಂದು, ಅಮೇರಿಕದ ಫ್ಲಾರಿಡಾ ಪ್ರಾಂತ್ಯದ ಜಾಕ್ಸನ್ವಿಲ್ಲೆ ಎಂಬಲ್ಲಿ. ಇವರ ತಂದೆ ಜೋಸೆಫ್‌ಲೆವಿಸ್‌ವ್ಹೀಲರ್ ಮತ್ತು ತಾಯಿ ಮಾಬೆಲ್‌ವ್ಹೀಲರ್ ಸಾರ್ವಜನಿಕ ಗ್ರಂಥಾಲಯದ ಅಧಿಕಾರಿಗಳಾಗಿದ್ದರು. ಯಂತ್ರೋಪಕರಣಗಳ ತಯಾರಿ ಮತ್ತು ದುರಸ್ತಿಯಲ್ಲಿ ಬಾಲ್ಯದಿಂದಲೇ ವ್ಹೀಲರ್ ಅವರಿಗೆ ಅಗಾಧವಾದ ಅಸಕ್ತಿ. ಹಾಗಾಗಿ ತಾನೊಬ್ಬ ಎಂಜನೀಯರ್ ಆಗಬೇಕೆಂದು ಇಚ್ಛಿಸಿದ್ದರು. ಅದರಂತೆ ಜಾನ್‌ಹಾಪ್ಕಿನ್ಸನ್ ವಿಶ್ವವಿದ್ಯಾಲಯದಲ್ಲಿ ಹದಿನಾರರ ವಯಸ್ಸಿನಲ್ಲಿಯೇ ಎಂಜನೀಯರಿಂಗ್ ಅಧ್ಯಯನಕ್ಕೆ ಸೇರಿದರು (1927). ಅಲ್ಲಿ ಗ್ರಂಥಾಲಯಕ್ಕೆ ಬರುತ್ತಿದ್ದ ಸಂಶೋಧನ ಪತ್ರಿಕೆಗಳಲ್ಲಿ  ಪರಮಾಣು ಭೌತವಿಜ್ಞಾನ ಮತ್ತು ವಿಶೇಷವಾಗಿ ಕ್ವಾಂಟಮ್ ವಿಜ್ಞಾನದ ಬಗೆಗಿನ ಲೇಖನಗಳು ವೀಲರ್ ಅವರಲ್ಲಿ ಎಷ್ಟು ಆಸಕ್ತಿಯನ್ನು ಸೃಜಿಸಿತೆಂದರೆ, ಎಂಜನೀಯರಿಂಗಿನ ಬದಲಿಗೆ ಭೌತ ವಿಜ್ಞಾನಿಯಾಗಲು ನಿರ್ಧರಿಸಿದರು.  ಮತ್ತೆ ಹಿಂದಿರುಗಿ ನೋಡಲಿಲ್ಲ. ಭೌತವಿಜ್ಞಾನ ಪ್ರಾಧ್ಯಾಪಕರಾಗಿದ್ದ ಕಾರ್ಲ್‌ಹೆರ್ಜ್‌ಫೆಲ್ಡ್ ಅವರ ಮಾರ್ಗದರ್ಶನದಲ್ಲಿ “ಹೀಲಿಯಮ್ ಪರಮಾಣುಗಳಿಂದ ಬೆಳಕಿನ ಹೀರುವಿಕೆ ಮತ್ತು ಚದರಿಕೆ” ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಾಗ ಇವರಿನ್ನೂ ಇಪ್ಪತ್ತೆರಡರ ತರುಣ!

ಬೋರ್ ಪ್ರಭಾವ

ಆ ದಿನಗಳಲ್ಲಿ ಡೆನ್ಮಾರ್ಕಿನ ಕೊಪೆನ್‌ಹೇಗನ್ ವಿಶ್ವವಿದ್ಯಾಲಯದ ಸಂಶೋಧನಕೇಂದ್ರ ಪ್ರತಿಭಾನ್ವಿತ ಭೌತ ವಿಜ್ಞಾನಿಗಳ ಕಾಶಿಯಾಗಿತ್ತು. ಇದಕ್ಕೆ ಮುಖ್ಯ ಕಾರಣ ನೀಲ್ಸ್‌ಬೋರ್. ಅಗೋಚರ ಪರಮಾಣುವಿನ ರಚನೆ ಹೀಗಿರಬಹುದೆನ್ನುವ ಸೈಧ್ಧಾಂತಿಕ ಪ್ರತಿರೂಪವನ್ನು (model) ಮಂಡಿಸಿದ ಬೋರ್ (1913), ಕ್ವಾಂಟಮ್ ಸಿಧ್ಧಾಂತದ ಬಗ್ಗೆ ನಡೆಸುತ್ತಿದ್ದ ಚಿಂತನೆಗಳು ಭೌತವಿಜ್ಞಾನಕ್ಕೆ ಹೊಸ ದಿಕ್ಕು ತೋರುತ್ತಿದ್ದುವು. ವ್ಹೀಲರ್ ಅಲ್ಲಿಗೆ ಪಯಣ ಬೆಳೆಸಿದರು.

ಬೋರ್ ಅವರಿಂದ ವ್ಹೀಲರ್ ಅದೆಷ್ಟು ಪ್ರಭಾವಿಸಲ್ಪಟ್ಟರೆಂದರೆ ನಡೆ ನುಡಿಯಲ್ಲಿ ಅವರನ್ನೇ  ಅನುಸರಿಸಿದರು – ಅನುಕರಿಸಲಿಲ್ಲ! ಬೋರ್ ಬಗ್ಗೆ ವ್ಹೀಲರ್ ಹೇಳುತ್ತಿದ್ದರು “ ಬುದ್ಧ, ಕನ್ಫೂಶಿಯಸ್, ಜೀಸಸ್, ಮೊಸೆಸ್ ಬಗ್ಗೆ ನೀವು ಮಾತನಾಡಬಹುದು. ಆದರೆ ಅವರೆಲ್ಲರೂ ಇದ್ದರೆಂದು ನನಗೆ ಬೋರ್ ಅವರೊಂದಿಗೆ ಮಾತನಾಡುತ್ತಿದ್ದಾಗ ಮನವರಿಕೆಯಾಯಿತು”. ವ್ಹೀಲರ್ ಬಗ್ಗೆ ಬೋರ್ ಹೇಳುತ್ತಿದ್ದರು “ಇಲ್ಲೊಬ್ಬ ಅಪ್ಪಟ ಪ್ರತಿಭೆಯ ಯುವ ವಿಜ್ಞಾನಿ ಇದ್ದಾನೆ”  

ನೀಲ್ಸ್‌ಬೋರ್ ಪರಮಾಣುಬೀಜದ (nucleus) ರಚನೆ ಹೀಗಿರಬಹುದೆನ್ನುವ ಸೈಧ್ಧಾಂತಿಕ ಪ್ರತಿರೂಪವನ್ನು ರೂಪಿಸಲು ಯತ್ನಿಸುತ್ತಿದ್ದರು. ಕೆಲವರು ಪರಮಾಣುಬೀಜ ಘನವಸ್ತುವಿನಂತಿದೆ ಎಂದು ಹೇಳಿದರೆ, ಇನ್ನು ಕೆಲವರು ಅದು ಅನಿಲರೂಪದಲ್ಲಿರಬಹುದೆಂದರು. ಅದು ದ್ರವದ ಬಿಂದುವಿನಂತೆ ಇರಬಹುದೆಂದು ಬೋರ್ ಊಹೆಯಾಗಿತ್ತು. ಈ ಊಹೆಯ ಆಧಾರದಲ್ಲಿ  ವ್ಹೀಲರ್ ಪರಮಾಣುಬೀಜದ ದ್ರವಬಿಂದು ಪ್ರತಿರೂಪವನ್ನು (liquid drop model)ರೂಪಿಸಿದರು.

ಕೊಪೆನ್‌ಹೇಗನ್ನಿನ ಸಮೃದ್ಧ ಅನುಭವದೊಂದಿಗೆ ಮರಳಿದ ವ್ಹೀಲರ್ ಅವರನ್ನು ಅಮರಿಕದ ಪ್ರತಿಷ್ಠಿತ ಪ್ರಿನ್ಸ್ಟನ್‌ವಿಶ್ವವಿದ್ಯಾಲಯ ತೆರೆದ ಬಾಹುಗಳಿಂದ ಸ್ವಾಗತಿಸಿತು. ಇಪ್ಪತ್ತೆಂಟರ ತರುಣ ಪ್ರೊಫೆಸರ್ ನೀಡುತ್ತಿದ್ದ ಉಪನ್ಯಾಸಗಳು ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ಕೆಲವೇ ತಿಂಗಳಿನಲ್ಲಿ ಪ್ರಿನ್ಸ್ಟನ್ನಿನ ಘಟಾನುಘಟಿ ವಿಜ್ಞಾನಿಗಳು ಕೂಡ ಇವರ ಉಪನ್ಯಾಸದ ತರಗತಿಯಲ್ಲಿ ಹಾಜರಿರುತ್ತಿದ್ದರಂತೆ. ವ್ಹೀಲರ್ ಎಡ ಮತ್ತು ಬಲ ಕೈಗಳೆರಡನ್ನೂ ಬಳಸಿಕೊಂಡು  ಕರಿ ಹಲಗೆಯಲ್ಲಿ ಮುತ್ತಿನಂತೆ ಬರೆಯುತ್ತಿದ್ದ ಸವ್ಯಸಾಚಿ!

ವ್ಹೀಲರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಲು ಪ್ರಿನ್ಸ್ಟನ್ನಿಗೆ ಕಾಲ್ಟೆಕ್ಕಿನಿಂದ ಉನ್ನತ ಸಂಶೋಧನೆಗೆ ರಿಚರ್ಡಫೈನ್‌ಮಾನ್ ಎಂಬ ತರುಣನ ಆಗಮನವಾಯಿತು (1939).  ಆ ಪ್ರಥಮ ಭೆಟ್ಟಿಯ ಬಗ್ಗೆ ಫೈನ್‌ಮಾನ್ ವಿವರಿಸುತ್ತಾರೆ “ಪ್ರೊ.ವ್ಹೀಲರ್ ನನ್ನ ಕೊಠಡಿಗೆ ಬಂದಾಗ ನನಗೆ ಅಚ್ಚರಿ. ಅವರು ತುಂಬ ಎಳಸಾಗಿದ್ದರು. ಪುರುಸೊತ್ತಿರಲಿಲ್ಲ. ಬಂದವರೇ ಒಂದು ಕೈಗಡಿಯಾರವನ್ನು ತಮ್ಮ ಅಂಗಿಯ ಕಿಸೆಯಿಂದ ತೆಗೆದು ಮೇಜಿನ ಮೇಲಿರಿಸಿ ಸಂವಾದ ಪ್ರಾರಂಭಿಸಿದರು. ತುಸು ಹೊತ್ತಿನಲ್ಲಿಯೇ ನನಗೆ ಅರಿವಾಯಿತು – ಎಲ್ಲರಂತಲ್ಲ ಇವರು. ಮತ್ತೆ ವಾರದ ನಂತರ ಭೆಟ್ಟಿಗೆ ದಿನ  ನಿಶ್ಚಯವಾಯಿತು. ಆ ದಿನ ವ್ಹೀಲರ್ ಆ ಹೊತ್ತಿಗೆ ಸರಿಯಾಗಿ ಬಂದರು; ಕೈಗಡಿಯಾರವನ್ನು ಮೇಜಿನ ಮೇಲಿರಿಸಿದರು. ಇನ್ನೇನು ಮಾತನಾಡಬೇಕೆನ್ನುವಷ್ಟರಲ್ಲಿ ನಾನು ನನ್ನ ಪ್ಯಾಂಟಿನ ಕಿಸೆಯೊಳಗಿಂದ ಅದಕ್ಕಿಂದ ದೊಡ್ದ ಗಡಿಯಾರವನ್ನು ಅವರ ಗಡಿಯಾರದೆದುರು ಇಟ್ಟೆ. ವ್ಹೀಲರ್ ಅದನ್ನೇ ನೋಡಿದರು. ಆ ಕ್ಷಣದಲ್ಲಿ ಕೋಣೆಯಲ್ಲಿ ಅವರದ್ದು ಮತ್ತೆ ನನ್ನ ನಗು ತುಂಬಿತು ಹುಚ್ಚು ಹೊಳೆಯಂತೆ. ನಾನು ಅವರಿಂದ ಸಂಶೋಧನೆಯ ಸೂಕ್ಷ್ಮಗಳನ್ನು ಕಲಿತೆ” ವಿದ್ಯುದಾವಿಷ್ಟ ಕಣಗಳ ನಡುವೆ ನಡೆಯುವ ಕ್ರಿಯೆಗಳನ್ನು ವಿವರಿಸುವ ಕ್ವಾಂಟಮ್‌ಎಲೆಕ್ಟ್ರೋ ಡೈನಾಮಿಕ್ಸ್ ಎಂಬ ಸಿಧ್ಧಾಂತವನ್ನು ವ್ಹೀಲರ್ ಮಾರ್ಗದರ್ಶನದಲ್ಲಿ ಫೈನ್‌ಮಾನ್ ರೂಪಿಸಿದರು. ಮುಂದೇ ಇದೇ ಸಿಧ್ಧಾಂತಕ್ಕೆ ಫೈನ್‌ಮಾನ್ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತರಾದರು (1965). 

ಬಿರಿದ ಗುಟ್ಟು

ಜನವರಿ16. 1938. ವ್ಹೀಲರ್ ಅವರಿಗೆ ಸಂಬ್ರಮೋಲ್ಲಾಸ. ನ್ಯೂಯಾರ್ಕಿನ ಹಡ್ಸನ್ ಬಂದರಿಗೆ ಡೆನ್ಮಾರ್ಕಿನಿಂದ ಆಗಮಿಸಲಿರುವ ತಮ್ಮ ಗುರು ನೀಲ್ಸ್‌ಬೋರ್ ಮತ್ತು ಅವರ ಶಿಷ್ಯ ರೊಸೆನ್‌ಫೆಲ್ಡ್ (1904-1974) ಅವರನ್ನು ಸ್ವಾಗತಿಸುವ ಹೊಣೆ ವ್ಹೀಲರ್ ಪಾಲಿಗೆ. ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿದ್ದ ಐನ್‌ಸ್ಟೈನರೊಂದಿಗೆ ಕ್ವಾಂಟಮ್ ಸಿಧ್ಧಾಂತದ ತತ್ವಶಾಸ್ತ್ರೀಯ ಸಮಸ್ಯೆಯ ಬಗ್ಗೆ ವಿಚಾರ ವಿಮರ್ಶೆ ನಡೆಸುವುದು ಬೋರ್ ಭೇಟ್ಟಿಯ ಉದ್ದೇಶವಾಗಿತ್ತು. ಬಂದಿಳಿದ ಬೋರ್ ಕಾರ್ಯ ನಿಮಿತ್ತ ನ್ಯೂಯಾರ್ಕಿನಲ್ಲೇ ಉಳಿದರೆ, ರೊಸೆನ್‌ಫೆಲ್ಡ್ ವ್ಹೀಲರ್ ಜತೆ ಪ್ರಿನ್ಸ್ಟನ್ನಿಗೆ ಪಯಣ ಬೆಳೆಸಿದರು. ವ್ಹೀಲರ್ ಸಾಮಾನ್ಯವಾಗಿ ಕೇಳುವ ಪ್ರಶ್ನೆ “ಹೊಸತೇನಾದರೂ ಇದೆಯೇ?” (Anything new?). ರೊಸೆನ್‌ಫೆಲ್ಡ್ ಹೇಳಿದರು “ಉಂಟು, ಜರ್ಮನಿಯಿಂದ ಹೊಸ ಸುದ್ದಿ ಬಂದಿದೆ!” 

ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನಿಗಳಾದ ಒಟ್ಟೊಹ್ಯಾನ್ (1879-1968 ) ಮತ್ತು ಫ್ರಿಟ್ಜ್‌ಸ್ಟ್ರಾಸ್‌ಮನ್ (1902-1980) ಯುರೇನಿಯಮ್ ರಾಸಾಯನಿಕದ ಮೇಲೆ ಕಡಿಮೆ ಶಕ್ತಿಯ ನ್ಯೂಟ್ರಾನುಗಳನ್ನು ತಾಡಿಸಿದಾಗ ಕಡಿಮೆ ತೂಕದ ಧಾತುಗಳ ಪರಮಾಣುಗಳು (ಬೇರಿಯಮ್, ಕ್ರಿಪ್ಟಾನ್) ಸೃಷ್ಟಿಯಾದುದನ್ನು ಗಮನಿಸಿದರು. ಈ ಪ್ರಯೋಗ ಫಲಿತಾಂಶ ವನ್ನು ತಮ್ಮ ಸಹಾಯಕಿಯಾಗಿದ್ದ ಲೈಸ್‌ಮೈಟ್ನರ್ (1878-1968 ) ಅವರಿಗೆ ಪತ್ರಮುಖೇನ ರವಾನಿಸಿದರು. ಎರಡನೇ ಮಹಾಯುದ್ದದ ಕಾರ್ಮೋಡ ಕವಿಯಲು ಪ್ರಾರಂಭವಾದ ಆ ದಿನಗಳಲ್ಲಿ ಜರ್ಮನಿಯಿಂದ ಸ್ವೀಡನ್ನಿಗೆ ಮೈಟ್ನರ್ ಪಲಾಯನ ಹೂಡಿದ್ದರು. ಹ್ಯಾನ್ ಕಳುಹಿಸಿದ ಪತ್ರ  ಮೈಟ್ನರ್ ಕೈ ಸೇರುವ ಹೊತ್ತಿನಲ್ಲಿ ಅವರೊಂದಿಗೆ ಅವರ ಸೋದರಳಿಯ ರಾಬರ್ಟ್‌ಫ್ರಿಶ್ (1904-1979) ಕೂಡ ಇದ್ದರು. ಫ್ರಿಶ್ ಕೊಪೆನ್‌ಹೇಗನ್ನಿನಲ್ಲಿ ಬೋರ್ ಅವರ ಸಂಶೋಧನಾ ಸಹಾಯಕ. 

ಯುರೇನಿಯಮ್ ಪರಾಮಾಣುಬೀಜ ನ್ಯೂಟ್ರಾನ್ ತಾಡನೆಯಿಂದ ವಿದಳನಗೊಂಡು ಕಡಿಮೆತೂಕದ  ಧಾತುಗಳು ಸೃಷ್ಟಿಯಾಗುತ್ತೆದೆಂದು ಮೈಟ್ನರ್ ಮತ್ತು ಫ್ರಿಶ್  ಅವರಿಗೆ ಸ್ಪಷ್ಟವಾಯಿತು. ಅಂದರೆ ಹ್ಯಾನ್ ಮತ್ತು ಸ್ಟ್ರಾಸ್‌ಮನ್ ಬೈಜಿಕವಿದಳನ ಎಂಬ ಹೊಸದೊಂದು ವಿದ್ಯಮಾನವನ್ನು ಆವಿಷ್ಕರಿಸಿದ್ದರು.

ಬರ್ಲಿನ್ ವಿಶ್ವವಿದ್ಯಾಲಯದ ಸುದ್ದಿಯನ್ನು ಬೋರ್ ಅವರಿಗೆ ತಿಳಿಸುವುದಕ್ಕಾಗಿ ಫ್ರಿಶ್ ಕೊಪೆನ್‌ಹೇಗನ್ನಿಗೆ ತಲುಪುವ ಹೊತ್ತಿಗೆ ಬೋರ್ ಅಮೇರಿಕಕ್ಕೆ ಹಡಗನ್ನೇರಲು ಸಜ್ಜಾಗಿದ್ದರು. ಇಡೀ ವಿದ್ಯಮಾನವನ್ನು ಕ್ಷಣ ಮಾತ್ರದಲ್ಲಿ ಅರ್ಥೈಸಿಕೊಂಡ ಬೋರ್ ಉದ್ಗರಿಸಿದರು “ ಓಹ್! ನಾವೆಲ್ಲ ಎಂಥ ಮುಟ್ಠಾಳರಾಗಿದ್ದೆವು. ಇದು ಪರಮಾದ್ಭುತ. ನಾನು ಹೇಗಿರಬೇಕೆಂದು ಆಲೋಚಿಸಿದ್ದೆನೋ ಹಾಗೆಯೇ ಇದೆ”. ಈ ವಿವರಗಳನ್ನೆಲ್ಲ ಒಂದು ಲೇಖನ ರೂಪದಲ್ಲಿ ಬರೆದು ಪ್ರಕಟಿಸುವ ತನಕ ಸುದ್ದಿ ಗುಟ್ಟಿನಲ್ಲಿರಲಿ ಎಂದು ಹೇಳಿದ ಬೋರ್ ಹಡಗೇರಿಬಿಟ್ಟರು – ಅಮೇರಿಕಕ್ಕೆ ಹೋಗುವುದಕ್ಕಾಗಿ.

ಹಡಗಿನಲ್ಲಿ ಬೋರ್ ಸುಮ್ಮನುಳಿಯಲಿಲ್ಲ. ರೊಸೆನ್‌ಫೆಲ್ಡ್ ಅವರೊಂದಿಗೆ ಈ ನೂತನ ಆವಿಷ್ಕಾರದ ಬಗ್ಗೆ ಚರ್ಚಿಸಿದರು. ಆದರೆ ಅವರು ಹೇಳಲು ಮರೆತದ್ದು – ಆವಿಷ್ಕಾರದ ಸುದ್ದಿ ಗುಟ್ಟಿನಲ್ಲಿಡಬೇಕೆನ್ನುವುದನ್ನು. ಹಾಗಾಗಿ ರೊಸೆನ್‌ಫೆಲ್ಡ್  ವ್ಹೀಲರ್ ಅವರಿಗೆ ವಿದಳನದ ಸುದ್ದಿಯನ್ನು ಉಸುರಿದರು. 

ಇಷ್ಟೊಂದು ಮುಖ್ಯ ವಿಷಯ  ಜಗಜ್ಜಾಹೀರಾಗಬೇಕಲ್ಲ. ಮರುದಿನವೇ ತುರ್ತು ಸಭೆಯೊಂದನ್ನು ವ್ಹೀಲರ್ ಕರೆದರು. ಆ ಸಭೆಯಲ್ಲಿ ನೂತನ ಆವಿಷ್ಕಾರ ಜಗತ್ತಿಗೆ ಪ್ರಕಟವಾಯಿತು. ವ್ಹೀಲರ್ ಮೂಲಕ ಗುಟ್ಟು ಬಿರಿದಿತ್ತು! ಮುಂದಿನ ದಿನಗಳಲ್ಲಿ ವ್ಹೀಲರ್ ಮತ್ತು ಬೋರ್  ಪರಮಾಣುಬೀಜದ ದ್ರವ ಪ್ರತಿರೂಪದ ಮಾದರಿಯನ್ನು ಬಳಸಿಕೊಂಡು ಬೀಜ ವಿದಳನ ಕ್ರಿಯೆ ಹೇಗಾಗುತ್ತದೆಂದು ಸಮರ್ಪಕವಾಗಿ ವಿವರಿಸಿದರು. ಇದು ಪರಮಾಣು ಬಾಂಬಿನ ನಿರ್ಮಾಣಕ್ಕೆ ನಾಂದಿ ಹಾಡಿತು. ಪರಮಾಣು ಬಾಂಬಿನ ನಿರ್ಮಾಣದ “ಮಾನ್‌ಹಟ್ಟನ್ ಯೋಜನೆ” ಯಲ್ಲಿ ವ್ಹೀಲರ್ ಸಕ್ರಿಯವಾಗಿ ಭಾಗವಹಿಸಿದರು.

ಬ್ಲ್ಯಾಕ್‌ಹೋಲ್

1950ರ ಸುಮಾರಿಗೆ ನಕ್ಷತ್ರದ ಹುಟ್ಟು ಮತ್ತು ವಿಕಾಸದ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗಿದ್ದುವು. ಬೃಹದ್ರಾಶಿಯ (ಸೌರ ರಾಶಿಯ ಹತ್ತು ಪಟ್ಟು ಅಥವಾ ಅದಕ್ಕಿಂತ ಹೆಚ್ಚಿನ ದ್ರವ್ಯರಾಶಿ) ನಕ್ಷತ್ರ ತನ್ನ ದ್ರವ್ಯರಾಶಿಯ ಕಾರಣದಿಂದ ಗುರುತ್ವ ಕುಸಿತಕ್ಕೊಳಗಾಗಿ ಕುಗ್ಗಿದಂತೆ ಗುರುತ್ವಾಕರ್ಷಣಾ ಬಲ ಹೆಚ್ಚುತ್ತದೆ. ಒಂದು ಹಂತದಲ್ಲಿ ಗುರುತ್ವಬಲ ಎಷ್ಟಾಗುತ್ತದೆಂದರೆ, ಬೆಳಕಿನ ಕಿರಣವೂ ನಕ್ಷತ್ರದಿಂದ ತಪ್ಪಿಸಿಕೊಂಡು ಬಾಹ್ಯಪ್ರಪಂಚಕ್ಕೆ ಹೋಗದಷ್ಟು.  ಇಂಥ ನಕ್ಷತವನ್ನು ಹೆಚ್ಚಿನ ಖಗೋಳವಿದರು ಕಪ್ಪುನಕ್ಷತ್ರ ಎಂದು ಕರೆಯುತ್ತಿದ್ದರು. ನಕ್ಷತ್ರ ವಿಕಾಸದ ಬಗ್ಗೆ ಸಂಶೋಧನೆಯಲ್ಲಿ ನಿರತರಾಗಿದ್ದ ವ್ಹೀಲರ್ ಅವರಿಗೆ ಇದಕ್ಕಿಂತ ಸಮರ್ಪಕವಾದ ಹೆಸರು ಬೇಕಾಗಿತ್ತು. ಆ ಹೆಸರು ದೊರೆತದ್ದು ಅನಿರೀಕ್ಷಿತವಾಗಿ.

1967 ರಲ್ಲಿ ನಾಸಾ ಸಂಸ್ಥೆಯ ವಿಚಾರ ಸಂಕಿರಣದಲ್ಲಿ ವ್ಹೀಲರ್ ಉಪನ್ಯಾಸ ನೀಡುತ್ತ ಗುರುತ್ವಕುಸಿತಕ್ಕೊಳಗಾಗಿ ವಿಕಾಸದ ಕೊನೆಯ ಹಂತದಲ್ಲಿರುವ ನಕ್ಷತ್ರದ ಗುಣಲಕ್ಷಣಗಳನ್ನು  ವಿವರಿಸುವ ಒಂದು ಹೆಸರು ಬೇಕಾಗಿದೆ ಎಂದು ಹೇಳಿದಾಗ, ಶ್ರೋತೃ ಒಬ್ಬರು “ಅದನ್ನು  black hole ಎಂದು ಕರೆದರೆ ಹೇಗೆ?” ಎಂದು ಕೇಳಿದರು. ವ್ಹೀಲರ್ ತಮ್ಮ ಆತ್ಮಚರಿತ್ರೆಯಲ್ಲಿ (Geons, Blackholes and Quantum Foam) ಬರೆಯುತ್ತಾರೆ “ನಾನು ಸಮಂಜಸವಾದ ಹೆಸರಿಗಾಗಿ ತಿಂಗಳುಗಳಿಂದ ಅರಸುತ್ತಿದ್ದೆ – ಹಾಸಿಗೆಯಲ್ಲಿ ಪವಡಿಸಿದಾಗ, ಸ್ನಾನದ ತೊಟ್ಟಿಯಲ್ಲಿ, ಕಾರಿನಲ್ಲಿ ಪಯಣಿಸುತ್ತಿದ್ದಾಗ, ಸುಮ್ಮನೆ ಕುಳಿತಿದ್ದಾಗ.. ಇದೀಗ ಸರಿಯಾದ ಹೆಸರು ಸಿಕ್ಕಿದಂತಾಯಿತು. ಅವಕಾಶ ಸಿಕ್ಕಿದಾಗಲೆಲ್ಲ  black hole ಎಂಬ ಹೆಸರನ್ನು ಬಳಸಿದೆ – ಹಲವು ವರ್ಷಗಳಿಂದ ಪರಿಚಯವಿರುವ ಸ್ನೇಹಿತನಂತೆ.  ಇದೀಗ ಶಾಲೆಯ ಮಗುವಿಗೂ ಈ ಹೆಸರು ಸುಪರಿಚಿತವಾಗಿದೆ.” 

ಖಗೋಳ ವಿಜ್ಞಾನಿ ಜಯಂತ ನಾರ್ಳೀಕರ್ (1938 – ) black hole ಎಂಬ ಪದವನ್ನು ಕೃಷ್ಣವಿವರವೆಂದು ತಮ್ಮ ಮಾತೃಭಾಷೆಯಾದ ಮರಾಠಿಗೆ ಭಾಷಾಂತರಿಸಿದರು. ರೂಪಕ ಶಕ್ತಿಯುಳ್ಳ ಈ ಹೆಸರು ಕಾಯದ ನಿಗೂಡತೆಯನ್ನು ಅತ್ಯಂತ ಸಮರ್ಥವಾಗಿ ಹೇಳುತ್ತದೆ. ಕೃಷ್ಣ ಅಂದರೆ ಕಪ್ಪು ಮತ್ತು ವಿವರ ಎಂದರೆ ತೂತು ಅಥವಾ ರಂದ್ರ.  ಇದು ತನ್ನ ಸನಿಹಕ್ಕೆ ಬರುವ ಎಲ್ಲ ದ್ರವ್ಯವನ್ನು ಚೂಷಿಸುವ, ಆದರೆ ಯಾವುದನ್ನೂ ತನ್ನೊಡಲಿಂದ ಹೊರ ಬಿಡದ ರಂದ್ರ. ಆಕಾಶದ ಅದ್ಭುತ.

“ಕೃಷ್ಣವಿವರಕ್ಕೆ ಕೇಶವಿಲ್ಲ” (blackholes have no hair”) ಎಂಬದು ವ್ಹೀಲರ್ ಅವರ ಇನೊಂದು ಸುಪ್ರಸಿಧ್ಧ ಉಕ್ತಿ – ಕೃಷ್ಣವಿವರದ ರಚನೆಯನ್ನು ಕೆಲವೇ ಪದಗಳಲ್ಲಿ ವಿವರಿಸುತ್ತದೆ. ವರ್ತಮಾನದ ವಿಶ್ವ ಮುಂದೊಂದು ದಿನ  ಕುಗ್ಗುತ್ತ ಕುಗ್ಗುತ್ತ “ಮಹಾನಿಪತನ”ಕ್ಕೆ (big crunch) ಒಳಗಾಗಿ ಅಲ್ಲಿ ಹೊಸದೊಂದು ವಿಶ್ವ ಸೃಷ್ಟಿಯಾಗುತ್ತದೆಂದು ವ್ಹೀಲರ್ ಹೇಳಿ  ಭೌತವಿಜ್ಞಾನಿಗಳಿಗೆ ದಿಗ್ಭ್ರಮೆಗೊಳಿಸಿದರು. ವಿಶ್ವ ಸೃಷ್ಟಿಯಾದ ಕ್ಷಣದಲ್ಲಿ ಎಲ್ಲವೂ ಸೂಕ್ಷ್ಮಾತಿಸೂಕ್ಷ್ಮ ಅಲೆಗಳ ರೂಪದಲ್ಲಿದ್ದಿರಬೇಕು ಎಂಬ ಊಹೆಯನ್ನು  ಮಂಡಿಸಿದ ಇವರು ಆದಿಮ ವಿಶ್ವದ ಈ ಕ್ವಾಂಟಮ್ ಅಲೆಗಳನ್ನು  “quantum foam” (ಕ್ವಾಂಟಮ್ ನೊರೆ) ಎಂದು ಕರೆದರು. ವ್ಹೀಲರ್ ಪ್ರಕಾರ ಸಮಾಂತರ ವಿಶ್ವ (parallele world) ಇರಬೇಕು. ಅಂದರೆ ಮಹಾವಿಶ್ವದಲ್ಲಿ ನಾವಿರುವ ವಿಶ್ವದಂಥ ಇನ್ನೂ ಹಲವು ವಿಶ್ವಗಳಿವೆ! ಒಂದು ವಿಶ್ವದಿಂದ ಇನ್ನೊಂದು ವಿಶ್ವಕ್ಕೆ ಆಕಾಶ – ಕಾಲದ ಸಾತತ್ಯದಲ್ಲಿ ಇರಬಹುದಾದ ಸುರಂಗರೂಪದ ರಂದ್ರಗಳ ಮೂಲಕ ಪಯಣಿಸಬಹುದೆಂದು ವ್ಹೀಲರ್ ಕಲ್ಪನೆ ಮಾಡಿದ್ದಾರೆ. ಇಂಥ  ಸುರಂಗಗಳಿಗೆ ವ್ಹೀಲರ್ ಇಟ್ಟ ಹೆಸರು wormholes.

ಇಂಥ ನೂರಾರು ನವನವೀನ ಸೃಜನಶೀಲ ಕಲ್ಪನೆಗಳನ್ನು ಬಿತ್ತಿ ಹೋಗಿರುವ ವ್ಹೀಲರ್ ಬಗ್ಗೆ ಕಿಪ್‌ಥಾರ್ನ್ ಹೇಳುತ್ತಾರೆ “ಜ್ಞಾನ ಸೀಮೆಯ ಸರಹದ್ದಿನ ನೂತನ ವಿಷಯಗಳ ಬಗ್ಗೆ ಜಾನಿ ವ್ಹೀಲರ್ ಆಳ ಚಿಂತನೆ ನಡೆಸಿದ್ದಾರೆ. ಮುಂದಿನ ತಲೆಮಾರಿನ ಭೌತವಿಜ್ಞಾನಿಗಳು ಗಮನಹರಿಸಿ ಪರಿಹರಿಸಬೇಕಾದ ಹಲವು  ಪ್ರಶ್ನೆಗಳನ್ನು ಅವರು ಎತ್ತಿದ್ದಾರೆ. ಎಳೆಯ ವಿಜ್ಞಾನಿಗಳನ್ನು ವ್ಹೀಲರ್ ಅವರಂತೆ ಪ್ರಭಾವಿಸಿದ ಇನ್ನೊಬ್ಬ ಮಾರ್ಗದರ್ಶಕನನ್ನು ನಾನು ನೋಡಿಲ್ಲ.”

  1. Vanamali C Shastry
    ಜುಲೈ 10, 2009 ರಲ್ಲಿ 10:36 ಫೂರ್ವಾಹ್ನ

    Sir, you might have noticed the recent news regarding the discovery of the supernova-like event. More information can be found at
    http://www.nsf.gov/discoveries/disc_summ.jsp?cntn_id=115097&govDel=USNSF_1

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: